Tuesday, April 23, 2024

“ನಿಮ್ಮ ಪ್ರಾಣ ಹೇಗೆ ಹೋಗಬೇಕೆಂದು ಇಷ್ಟಪಡುತ್ತೀರಿ” – ವಿಶ್ವಪುಸ್ತಕ ದಿನದ ಟಿಪ್ಪಣಿ

 


ಇಂದು ವಿಶ್ವಪುಸ್ತಕ ದಿನ. ಸಾಹಿತ್ಯದ ಗಂಧಗಾಳಿಯೂ ಇಲ್ಲದಂತಹ ಕೌಟಂಬಿಕ ಮತ್ತು ಪರಿಸರದ ವಾತಾವರಣದಲ್ಲಿ ಹುಟ್ಟಿ ಬೆಳೆದ ನನ್ನ ವ್ಯಕ್ತಿತ್ವವನ್ನು ರೂಪಿಸಿದಂಥವು ಪುಸ್ತಕಗಳೇ. ಇವತ್ತು ನಾನೇನಾದರೂ ನಾಲ್ಕುಜನರ ಕಣ್ಣಿಗೆ ಲೇಖಕನಾಗಿಯೋ, ಭಾಷಣಕಾರನಾಗಿಯೋ ಕಂಡಿದ್ದರೆ ಅದಕ್ಕೆ ಕಾರಣ ಪುಸ್ತಕಗಳೇ. ಯಾರೋ ನಿಮ್ಮ ಮುಖ್ಯವಾದ ಮೂರು ಹವ್ಯಾಸಗಳನ್ನು ಹೇಳಿ ಎಂದು ಬಹಳ ವರ್ಷಗಳ ಹಿಂದೆ ಕೇಳಿದ್ದರು. ಆಗ ನಾನು ಹೇಳಿದ ಉತ್ತರ: ‘ ಓದುವುದು, ಓದುವುದು ಮತ್ತು ಓದುವುದು’. ವಿದ್ಯಾರ್ಥಿ ದೆಸೆಯಲ್ಲಿಯೇ ಹುಟ್ಟಿಕೊಂಡ ಪುಸ್ತಕ ಓದಿನ ಗೀಳು ನನ್ನ ಹರೆಯದ ದಿನಗಳಲ್ಲಿ ನಾನು ಮಲೆನಾಡಿನ ಹಳ್ಳಿಯೊಂದಕ್ಕೆ ಶಿಕ್ಷಕನಾಗಿ ಹೋದಾಗ ವಿಪರೀತವೆನ್ನುವಂತೆ ಆಯಿತು. ಪೇಟೆಯಲ್ಲಿ ಮನೆಮಾಡಿಕೊಂಡರೆ ಗೆಳೆಯರ ಕೂಡ ಸುಮ್ಮಸುಮ್ಮನೆ ಹರಟೆಹೊಡೆದು ಕಾಲಹರಣವಾಗುತ್ತದೆ ಅನ್ನಿಸಿ ಯಾರ ಕೈಗೂ ಸಿಗದ, ಬಸ್ಸು ಬರುವ ದಾರಿ ನೋಡಲು ಸುತ್ತಲೂ ಕನಿಷ್ಠ 10 ಕಿ.ಮೀ. ದೂರ ನಡೆಯಬೇಕಾದ ಮತ್ತು ಕರೆಂಟು ಹೋದರೆ ಬರುವುದು ಎಂಟು-ಹತ್ತು ದಿನಗಳಾಗುವುದು ತೀರಾ ಸಾಮಾನ್ಯ ಸಂಗತಿಯಾಗಿದ್ದ ಊರಲ್ಲಿ ಮನೆ ಮಾಡಿಕೊಂಡಿದ್ದೆ. ವರ್ಷಕ್ಕೊಮ್ಮೆ ದೊಡ್ಡ ಪೇಟೆಕಡೆಗೋ ಸಾಹಿತ್ಯ ಸಮ್ಮೇಳನದ ಕಡೆಗೋ ಹೋದಾಗ ಮೂಟೆಗಟ್ಟಲೆ ಪುಸ್ತಕ ತಂದು ವರ್ಷಪೂರ್ತಿ ಅವನ್ನು ಓದುವುದು ನನ್ನ ಆಗಿನ ಕೆಲಸವಾಗಿತ್ತು. ಗಂಟೆಗೆ ಮೂವತ್ತು ಪುಟಗಳಓದುವೇಗ’ ಹೊಂದಿದ್ದ ನಾನು ದಿನಕ್ಕೆ ಏನಿಲ್ಲವೆಂದರೂ ನಾಲ್ಕರಿಂದ ಐದು ಗಂಟೆಗಳಾದರೂ ಓದುತ್ತಿದ್ದೆ. ಅಂದರೆ ನೂರಿಪ್ಪತ್ತರಿಂದ ನೂರೈವತ್ತು ಪುಟಗಳ ಓದು ದಿನಕ್ಕೆ ಆಗೇ ಆಗುತ್ತಿತ್ತು! ಈ ಚಟ ಈಗಲೂ ಮುಂದುವರೆದಿದೆ.  ಈಗಲೂ ದಿನಕ್ಕೆ ಏನಿಲ್ಲವೆಂದರೂ ಒಂದು ಲೇಖನ, ಕಥೆ ಕೊನೆಯಪಕ್ಷ ಒಂದು ಕವಿತೆಯನ್ನಾದರೂ ಓದದಿದ್ದರೆ ನನಗೆ ತಿಂದ ಕೂಳು ಕರಗುವುದಿಲ್ಲ!

ಯಾವ ಊರಿಗೆ ಹೊರಟರೂ ಪ್ರಯಾಣದಲ್ಲಿ ಮತ್ತು ಬಸ್ಸು ಕಾಯುವಾಗ ಓದಲಿಕ್ಕೆಂದು ಒಂದೆರಡು ಪುಸ್ತಕಗಳು ಎಂದೆಂದಿಗೂ ನನ್ನ ಬ್ಯಾಗಿನಲ್ಲಿ ಇರುತ್ತಿದ್ದವು. ಚಾಳಿ ಇವತ್ತಿಗೂ ಇದೆ. ಎಂತಹ ಮೊಬೈಲುಗಳು ಬಂದರೂ ಅವಕ್ಕೆ ನನ್ನನ್ನು ಪುಸ್ತಕದಿಂದ ಕಸಿದುಕೊಳ್ಳಲು ಇದುವರೆಗೂ ಆಗಿಲ್ಲ. ಓದು ನನ್ನನ್ನು ಎಷ್ಟು ಬೆಳೆಸಿತೋ ಆದರೆ ನಾನು ಕೆಟ್ಟದಾರಿ ಹಿಡಿಯದಂತೆ ಕಾಪಾಡುವ ಕೆಲಸವನ್ನಂತೂ ಮಾಡಿತು. ಯಾರಾದರೂ ನಿಮ್ಮ ಜೀವನದ ಅತ್ಯಂತ ಸಂತೋಷದ ಕ್ಷಣ ಯಾವುದು ಎಂದು ಅಕಸ್ಮಾತ್ ಕೇಳಿದರೆ, “ನನ್ನ ಗ್ರಂಥಾಲಯದಲ್ಲಿ ನನಗೆ ಇಷ್ಟವಾದ ಪುಸ್ತಕವನ್ನು ಓದುತ್ತಾ ಅದರಲ್ಲಿ ಮೈಮರೆಯುವುದುಎಂಬುದೇ ನನ್ನ ಉತ್ತರ.



ಕಂಬಾರರಚಕೋರಿಯಲ್ಲಿ ಒಂದು ಚರ್ಚೆ ಬರುತ್ತದೆ. ಮನುಷ್ಯನಿಗೆ ಜೀವನದಲ್ಲಿ ಒಂದು ಹಂತದವರೆಗೆಹೇಗೆ ಬದುಕಬೇಕುಎಂಬ ಆಸೆಯಿರುತ್ತದೆಯಂತೆ. ಹಂತದ ನಂತರಹೇಗೆ ಸಾಯಬೇಕುಎಂಬ ಆಸೆ ಹುಟ್ಟಿಕೊಳ್ಳುತ್ತದೆಯಂತೆ! ಬಹಳಷ್ಟು ವ್ಯಕ್ತಿಗಳು ಹಂತದಲ್ಲಿ ತಾವು ಇಷ್ಟಪಡುವ ಕೆಲಸದಲ್ಲಿ ನಿರತರಾಗಿದ್ದಾಗಲೇ ತಮ್ಮ ಪ್ರಾಣಪಕ್ಷಿ ಹಾರಿಹೋಗಬೇಕು ಎಂದು ಆಸೆಪಡುತ್ತಾರಂತೆ. ಅಂದರೆ ಒಬ್ಬ ಹಾಡುಗಾರ್ತಿ ತಾನು ಹಾಡುತ್ತಿರುವಾಗಲೇ ತನ್ನ ಪ್ರಾಣಹೋಗಬೇಕು ಎಂದು ಇಷ್ಟಪಟ್ಟರೆ ಒಬ್ಬ ಕೊಳಲನೂದುವ ಕಲಾವಿದ ಕೊಳಲನೂದುತ್ತಲೇ ದೇಹತ್ಯಜಿಸಲು ಇಷ್ಟಪಡುತ್ತಾನಂತೆ. ಹಾಗೇ ವೈದ್ಯ ರೋಗಿಯನ್ನು ನೋಡುತ್ತಿರುವಾಗಲೇ, ಉಪನ್ಯಾಸಕನೊಬ್ಬನು ಪಾಠಮಾಡುತ್ತಲೇ ಇರುವಾಗಲೇ, ನೃತ್ಯಗಾರ್ತಿಯೊಬ್ಬಳು ರಂಗದಮೇಲೆ ನೃತ್ಯಮಾಡುತ್ತಿರುವಾಗಲೇ…..

ಆದರೆ ಅವಕಾಶಗಳು ಅಥವಾ ಪುಣ್ಯ ಅಂಥಾರಲ್ಲ ಅದು ಎಲ್ಲರಿಗೂ ಸಿಗುವುದಿಲ್ಲ ಅನ್ನುವುದೂ ಅಷ್ಟೇ ಸತ್ಯ! ಇದಕ್ಕೆ ನಾನೇನೂ ಹೊರತಲ್ಲ. ನನ್ನನ್ನು ಯಾರಾದರೂ ಹೀಗೆನಿಮ್ಮ ಪ್ರಾಣ ಹೇಗೆ ಹೋಗಬೇಕೆಂದು ನೀವು ಇಷ್ಟಪಡುತ್ತೀರಿ?” ಎಂದು ಕೇಳಿದರೆ ನಾನು ಹೇಳುವ ಉತ್ತರ ಈಗಾಗಲೇ ರೆಡಿಯಿದೆ, “ನನ್ನ ಇಷ್ಟದ ಯಾವುದಾದರೂ ಒಂದು ಪುಸ್ತಕ ಓದುತ್ತಿರುವಾಗಲೇ.” ಎಲ್ಲವೂ ನಾವು ಅಂದುಕೊಂಡಂತೆ ಆಗುವುದಿಲ್ಲ ಎನ್ನುವುದು ಗೊತ್ತಿದ್ದರೂ ಆಸೆಪಡುವುದಕ್ಕೇನು ಕಷ್ಟ ಅಲ್ಲವೇ

ರಾಬು

23-04-2024

(ವಿಶ್ವ ಪುಸ್ತಕ ದಿನ

No comments:

Post a Comment