Wednesday, April 24, 2024

ರಾಜಕುಮಾರ್ ಸಾವು ಮತ್ತು ಕಲಾವಿದನ ಜವಾಬ್ದಾರಿ

 


ಡಾ. ರಾಜಕುಮಾರ್ ನಿಧನದ ನಂತರ `ಹೊಸತು ಬಗ್ಗೆ ಎರೆಡು ಮುಖ್ಯ ಲೇಖನಗಳನ್ನು ಪ್ರಕಟಿಸಿತು. ಒಂದನ್ನು ಪ್ರೊ. ಬರಗೂರು ರಾಮಚಂದ್ರಪ್ಪ ಬರೆದರೆ (ಮೇ ೨೦೦೬) ಇನ್ನೊಂದನ್ನು ಡಾ. ರಹಮತ್ ತರೀಕೆರೆ (ಜುಲೈ ೨೦೦೬) ಬರೆದಿದ್ದಾರೆ. ಬರಗೂರರ ಲೇಖನ ರಾಜಕುಮಾರ್ ಅವರ ಸಾಧನೆಯನ್ನು ದಾಖಲಿಸುವ ಮೂಲಕ ಮಹತ್ವದ್ದೆನಿಸಿದರೆ ರಹಮತ್ ಅವರ ಲೇಖನ ರಾಜಕುಮಾರ್ ಅವರಂಥ ಜನಪ್ರಿಯ ಕಲಾವಿದರ ಬದುಕು-ಸಾವುಗಳು ಜನಜೀವನದ ಮೇಲೆ ಉಂಟುಮಾಡುವ ತವಕ-ತಲ್ಲಣಗಳನ್ನು ದಾಖಲಿಸುವ ಮೂಲಕ ಮಹತ್ವದ್ದೆನಿಸುತ್ತದೆ.

ಕಲಾವಿದನೊಬ್ಬನಿಗೆ ತನ್ನ ಅಭಿಮಾನಿಗಳ ಕಲೆಯ ಅಭಿರುಚಿಯನ್ನು ತಣಿಸುವ ಜವಾಬ್ದಾರಿಯ ಜೊತೆ ಅವರ ಅಭಿರುಚಿಯನ್ನು ಸಂಸ್ಕರಿಸುವ ಜವಾಬ್ದಾರಿಯೂ ಕೂಡ ಇರುತ್ತದೆ, ಇರಬೇಕು ಕೂಡ. ಮೊದಲನೆಯ ಜವಾಬ್ದಾರಿಯನ್ನು ಎಲ್ಲರೂ ನಿರ್ವಹಿಸುತ್ತಾರೆ. ಆದರೆ ಎರಡನೆಯ ಜವಾಬ್ದಾರಿಯನ್ನು ನಿರ್ವಹಿಸುವ ಕಲಾವಿದ ಸಹಜವಾಗಿಯೇ ಇತರರಿಗಿಂತ ಭಿನ್ನವಾಗಿ ಸಾಂಸ್ಕೃತಿಕ ಮಹತ್ವವನ್ನು ಪಡೆದುಕೊಳ್ಳುತ್ತಾನೆ. ಡಾ. ರಾಜಕುಮಾರ್ ತಮ್ಮ ನಾಲ್ಕು ದಶಕಗಳ ಸುಧೀರ್ಘ ಕಲಾಜೀವನದಲ್ಲಿ ಎರಡನೆಯ ಜವಾಬ್ದಾರಿಯನ್ನು ಎಷ್ಟರ ಮಟ್ಟಿಗೆ ನಿರ್ವಹಿಸಿದರು ಎಂಬುದನ್ನು ನಾವಿಂದು ಅವಲೋಕನ ಮಾಡಬೇಕಾಗಿದೆ.

ಭಾರತದಂತಹ ಸಾಮಾಜಿಕ ಸಂದರ್ಭದಲ್ಲಿ ಒಬ್ಬ ಕಲಾವಿದನ ಅದರಲ್ಲೂ ಸಿನೇಮಾ ಕಲಾವಿದನ ಜವಾಬ್ದಾರಿ ಒಬ್ಬ ಪುಸ್ತಕ ಬರೆಯುವ ಲೇಖಕನಿಗಿಂತ ಹೆಚ್ಚು ಎಂದೇ ನನ್ನ ಭಾವನೆ. ಒಬ್ಬ ಲೇಖಕ ತನ್ನ ಪುಸ್ತಕದಲ್ಲಿ ಒಂದು ಮೂಢನಂಬಿಕೆಯನ್ನೋ, ಅವೈಜ್ಞಾನಿಕ ವಿಚಾರಧಾರೆಯನ್ನೋ ಪ್ರತಿಪಾದಿಸಿದರೆ ಅವನ ಓದುಗರು ಅದನ್ನು ಪ್ರಶ್ನಿಸಿ ತಿರಸ್ಕರಿಸುವ ಸಾಧ್ಯತೆಗಳು ಸಾಕಷ್ಟು ಇವೆ. ಆದರೆ ಒಬ್ಬ ನಾಯಕನಟ ಅಂಥದೊAದು ವಿಚಾರಧಾರೆಯನ್ನು ತನ್ನ ಪಾತ್ರದ ಮೂಲಕ ಪ್ರತಿಪಾದಿಸಿದಾಗ ಪ್ರಶ್ನಿಸಿ ತಿರಸ್ಕರಿಸುವ ಸಾಧ್ಯತೆಗಳು ಎಷ್ಟರಮಟ್ಟಿಗೆ ಇರುತ್ತವೆ? ಇಲ್ಲ ಎನ್ನುವಷ್ಟು ಕಡಿಮೆ ಮಟ್ಟದಲ್ಲಿ ಇರುತ್ತವೆ. ತನ್ನ ನಾಯಕ ಮಾಡಿದ್ದನ್ನು ಯಥಾವತ್ತಾಗಿ ಅನುಕರಿಸುವ ಸಾವಿರ ಸಾವಿರ ಸಮಖ್ಯೆಯ ಜನ ನಮ್ಮಲ್ಲಿದ್ದಾರೆ. ಇಂತಹ ಜನಜೀವನದ ಮೇಲೆ ರಾಜ್ ಮಾಡಿದ ಪರಿಣಾಮ ಎಂಥದು ಎಂಬುದನ್ನು ಶೋಧಿಸಿಕೊಳ್ಳುವುದು ಸಾಂಸ್ಕೃತಿಕವಾಗಿ ಮುಖ್ಯವಾದ ಸಂಗತಿಯಾಗುತ್ತದೆ.

`ಭಕ್ತ ಸಿರಿಯಾಳ’ (ಇದು ರಾಜ್ ಅಭಿನಯದ್ದಲ್ಲ) ಸಿನೇಮಾ ನೋಡಿಬಂದ ಯಾವುದೋ ಒಂದು ಹಳ್ಳಿಯ ದನಕಾಯುವ ಹುಡುಗರು ಮರುದಿನ ಕನ ಮೇಯಿಸುವಾಗ ಒಬ್ಬ ಸಿರಿಯಾಳನಾಗಿ ಮತ್ತೊಬ್ಬ ಶಿವನಾಗಿ ಇನ್ನೊಬ್ಬ ಸಿರಿಯಾಳನ ಮಗನಾಗಿ ಅಭಿನಯ ಮಾಡಲು ಹೋಗಿ ಸಿರಿಯಾಳನ ಪಾತ್ರದಾರಿ ಸಿನೇಮಾದಂತೆ ಮಗನ ತಲೆ ಕತ್ತರಿಸಿದನಂತೆ ಎಂಬ ಸುದ್ಧಿ ಕಾಲದಲ್ಲಿ ಹಬ್ಬಿತ್ತು. ಘಟನೆ ನಡೆದದ್ದು ಸುಳ್ಳೂ ಇರಬಹುದು. ಆದರೆ  ಸಾಧ್ಯತೆಗಳು ಇಲ್ಲ ಎನ್ನಲು ಸಾಧ್ಯವೇ? ಅದರಂತೆ ಯಾವುದೋ ಸಿನೇಮಾದಲ್ಲಿ (ಹೆಸರು ನೆನಪಾಗುತ್ತಿಲ್ಲ) ಭಕ್ತನಾದ ಹುಡುಗನೊಬ್ಬ ದೇವಾಲಯದ ಕಂಬಕ್ಕೆ ತಲೆ ಹೊಡೆದುಕೊಳ್ಳುವ ದೃಶ್ಯವಿದೆ. ಅವನು ತಲೆ ಹೊಡೆದುಕೊಳ್ಳುವಾಗ ಗರ್ಭಗುಡಿಯಲ್ಲಿನ ಮೂರ್ತಿಯಿಂದ ದೇವರು ಪ್ರತ್ಯಕ್ಷವಾಗಿ ಬಂದು ಅವನನ್ನು ಮೆಚ್ಚಿ ಆಶೀರ್ವದಿಸುತ್ತಾನೆ. ದೃಶ್ಯ ನಾನು ಚಿಕ್ಕವನಿದ್ದಾಗ ಎಷ್ಟು ಪ್ರಭಾವ ಉಂಟುಮಾಡಿತ್ತು ಎಂದರೆ ಯಾರೂ ಸುಳಿಯದ ನಮ್ಮೂರಿನ ಹೊರಭಾಗದಲ್ಲಿರುವ ದೇವಾಲಯಕ್ಕೆ ಹೋಗಿ ಒಂದು ದಿನ ನಾನೂ ಕೂಡ ತಲೆ ಹೊಡೆದುಕೊಳ್ಳತೊಡಗಿದ್ದೆ! ದೇವರು ಬಂದೇ ಬರುತ್ತಾನೆ, ನನ್ನ ಭಕ್ತಿಯನ್ನು ಮೆಚ್ಚುತ್ತಾನೆ ಎಂದು ನಾನು ತಿಳಿದುಕೊಂಡಿದ್ದೆ. ದೇವರು ಬರುತ್ತಿದ್ದನೋ ಅಥವಾ ನನ್ನ ತಲೆ ಒಡೆದು ನಾನು ಸಾಯುತ್ತಿದ್ದೆನೋಎರಡೂ ಆಗಲಿಲ್ಲ. ಅಷ್ಟರಲ್ಲಿ ಯಾರೋ ಊರ ಹಿರಿಯರು ಅಲ್ಲಿಗೆ ಬಂದರು. ನಾನು ಎದ್ದುಹೋದೆ.

ಇಂತಹ ಪ್ರಭಾವ ತಮ್ಮ ನಟನೆಯಿಂದ ಆಗುತ್ತದೆ ಎಂಬುದನ್ನು ಬಹಳಷ್ಟು ಕಲಾವಿದರು ಗಮನಿಸುವುದಿಲ್ಲ. ರಾಜ್ ಇದನ್ನು ಗಮನಿಸಿದರೆ? ೮೦ರ ದಶಕದ ಜನಪ್ರಿಯ ದೇವರಾದ, ಪಕ್ಕದ ಆಂಧ್ರಪ್ರದೇಶದ ಮಂತ್ರಾಲಯದ ರಾಘವೇಂದ್ರ ಸ್ವಾಮಿಯ ಸಾವಿರಾರು ಭಕ್ತರು ಕರ್ನಾಟಕದಲ್ಲಿ ನಿರ್ಮಾಣವಾದದ್ದರ ಹಿಂದೆ ಮತ್ತು ೯೦ರ ದಶಕದಲ್ಲಿ ದೇವರನ್ನು ಹಿಂದೆಹಾಕಿ ಅತ್ಯಂತ ಜನಪ್ರಿಯತೆ ಗಳಿಸಿದ ನಮ್ಮ ಇನ್ನೊಂದು ಪಕ್ಕದ ರಾಜ್ಯಮೂಲಕ ಬ್ಯಾಚುಲರ್ ದೇವರಾದ ಅಯ್ಯಪ್ಪಸ್ವಾಮಿಯ ಭಕ್ತ ಪಡೆಗಳೇ ಕರ್ನಾಟಕದಲ್ಲಿ ನಿರ್ಮಾಣವಾದ್ದರ ಹಿಂದೆ ರಾಜ್ ಅವರ ಚಿತ್ರಗಳ ಪ್ರಭಾವ ಇದ್ದಿರಲಾರದೇ?

ಯಾವುದೋ ಒಬ್ಬ ಮುಖ್ಯ ಕಲಾವಿದ ಅಥವಾ ಸಾಹಿತಿ ತನ್ನ ಕಾಲದ ಸಮಾಜವನ್ನು (ಅದು ಎಷ್ಟೇ ಚೆನ್ನಾಗಿದ್ದರೂ) ಅದು ಹೇಗಿರಬೇಕಿತ್ತೋ ಹಾಗೆ ಇಲ್ಲ ಎಂದು ಭಾವಿಸುತ್ತಾನೆ. ಹೀಗೆ ಭಾವಿಸುವುದು ಅವನಿಗೆ ತನ್ನ ಜವಾಬ್ದಾರಿ ಏನು ಎಂಬುದನ್ನು ಆಲೋಚಿಸಲು ತಕ್ಕ ಅಡಿಪಾಯ ಹಾಕಿಕೊಡುತ್ತದೆ. ತಮ್ಮ ಕೈಲಾದಮಟ್ಟಿಗೆ ತಾವಿರುವ ಸಮಾಜವನ್ನು ಒಂದಿಷ್ಟು ಚಲಿಸುವಂತೆ ಮಾಡುವ ಆಶಯವನ್ನು ಅವರೆಲ್ಲ ಹೊಂದಿರುತ್ತಾರೆ. ಹಾಗಾಗಿ ತಮ್ಮ ಸಾಧನೆಯ ಮೂಲಕ ಸಮಾಜವನ್ನು ಒಂದಿಷ್ಟು ಎಳೆಯುವ ಪ್ರಯತ್ನ ಮಾಡುತ್ತಾರೆ. ಇವರಲ್ಲಿ ಕೆಲವರು ಮುಂದಕ್ಕೆ ಎಳೆದರೆ ಮತ್ತೆ ಕೆಲವರು ಹಿಂದಕ್ಕೆ ಎಳೆಯುತ್ತಾರೆ. ಸಮಾಜ ಸಹಜವಾಗಿ ಬಲ ಯಾವ ಕಡೆ ಹೆಚ್ಚಿರುತ್ತದೆಯೋ ಕಡೆ ಸ್ವಲ್ಪ ಚಲಿಸುತ್ತದೆ. ಚಲನೆ ಎಳೆಯುವವರ ಬಲ ಮಾತ್ರವಲ್ಲದೆ ಎಳೆಸಿಕೊಳ್ಳುವ ಸಮಾಜದÀ `ತೂಕವನ್ನೂ ಅವಲಂಬಿಸಿರುತ್ತದೆ. ಎರಡೂ ಕಡೆಯ ಎಳೆತ ಸಮಬಲದಿಂದ ಕೂಡಿದಾಗ ಸಮಾಜ ಆಕಡೆಯೂ ಚಲಿಸದೆ ಕಡೆಯೂ ಚಲಿಸದೆ ಬರಿ ಒಂದಿಷ್ಟು ಗೊಂದಲ ಅಥವಾ ಗದ್ದಲಕ್ಕೆ ಆಸ್ಪದ ಆಗುವುದೂ ಉಂಟು!

ಒಬ್ಬ ಪ್ರಮುಖ ಕಲಾವಿದನಾಗಿ ಡಾ. ರಾಜಕುಮಾರ್ ನಮ್ಮ ಸಮಾಜವನ್ನು ಯಾವಕಡೆ ಎಳೆದರು? ಅವರ ಅನೇಕ ಚಿತ್ರಗಳನ್ನು ನೋಡಿದ ಯಾರಾದರೂ ಒಂದಿಷ್ಟು ಯೋಚಿಸಿ ಕೊಡಬಹುದಾದ ಉತ್ತರಅವರು ಎರೆಡೂ ಕಡೆ ಎಳೆದಿದ್ದಾರೆಎಂಬುದು ಆಗಿರುವ ಸಾಧ್ಯತೆ ಹೆಚ್ಚು. ಅವರ ಎಳೆತ ಅವರು ಪ್ರಜ್ಞಾಪೂರ್ವಕವಾಗಿಯೇ ಮಾಡಿದ್ದು ಎಂದು ನಾವ್ಯಾರೂ ಭಾವಿಸುವ ಅಗತ್ಯವಿಲ್ಲ ಎಂಬುದು ಕೂಡ ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶ. ಹೀಗೆ ಡಾ. ರಾಜಕುಮಾರ್ ತಮ್ಮ ಅಭಿನಯದ ಮೂಲಕ ನಮ್ಮ ಸಮಾಜವನ್ನು ಎರಡೂ ಕಡೆ, ಅಂದರೆ ಹಿಂದಕ್ಕೆ ಮತ್ತು ಮುಂದಕ್ಕೆ, ಎಳೆದರು ಎಂಬುದನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಾದರೆ ತಕ್ಷಣ ಒಂದು ಪ್ರಶ್ನೆ ಬರುತ್ತೆ. ಯಾವಕಡೆ ಎಳೆದದ್ದು ಹೆಚ್ಚು? ಇದನ್ನು ಖಚಿತವಾಗಿ ಹೇಳಬೇಕಾದರೆ ಅವರೆಲ್ಲ ಚಿತ್ರಗಳನ್ನು ಯಾರಾದರೊಬ್ಬರು ಅಧ್ಯಯನಕ್ಕೆ ಒಳಪಡಿಸಿ ಅವರ ಅಭಿನಯ ಉಂಟುಮಾಡಿದ ಸಾಮಾಜಿಕ ಪ್ರಭಾವವನ್ನು ದಾಖಲಿಸುವ ಪ್ರಯತ್ನವಾಗಬೇಕು. ಆಗ ಮಾತ್ರ ನಾವು ರಾಜಕುಮಾರ್ ಅಂಥವರನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

(ಗಮನಿಸಿ: ಇದು ಡಾ. ರಾಜಕುಮಾರ್ ಅವರು ತೀರಿಕೊಂಡ ಸಂದರ್ಭದಲ್ಲಿ ನಾನು ಬರೆದ ಮತ್ತು ನನ್ನ ವೈಚಾರಿಕ ಕೃತಿಕಪ್ಪೂ ಬೂರ್ಖಾ ಮತ್ತು ಕೇಸರಿ ಶಾಲ್ಕೃತಿಯಲ್ಲಿರುವ ಲೇಖನ. ಇಂತಹ ಇತರೆ ವೈಚಾರಿಕ ಕೃತಿಗಳ ಬಗ್ಗೆ ಆಸಕ್ತಿ ಇರುವವರು ಕೃತಿಯನ್ನು ಗಮನಿಸಬಹುದು) 

ರಾಬು

೨೪-೦೪-೨೦೨೪


1 comment:

  1. ತಮ್ಮ ಕಲಾಜೀವನದ ಮುಖಾಂತರ ಶ್ರೇಷ್ಠ ಸಂದೇಶ ನೀಡಿದ ಡಾ.ರಾಜ್ ಕುಮಾರ್ ಅವರ ಶ್ರೇಷ್ಠ ವ್ಯಕ್ತಿತ್ವ ಮತ್ತು ಸಾಮಾಜಿಕ ಹೊಣೆಗಾರಿಕೆ ಅನನ್ಯವಾದುದು..ಉಪಯುಕ್ತ ಲೇಖನ..ಧನ್ಯವಾದಗಳು ರಾ.ಬು. ಸರ್

    ReplyDelete