Tuesday, October 8, 2024

ಪ್ರತಿಷ್ಠಿತ ಕವಿಗೋಷ್ಠಿಗಳು: ಕವಿಯುತ್ತಿರುವ ಕಾರ್ಮೋಡಗಳು ಮತ್ತು ಸುಳಿಯುತ್ತಿರುವ ರವಿಕಿರಣಗಳು

 

ಈ ವರ್ಷದ ಮೈಸೂರು ದಸರಾ ಕವಿಗೋಷ್ಠಿ ಒಂದಿಷ್ಟು ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಿದೆ. ಹಿರಿಯ ಲೇಖಕಿ ಬಾನು ಮುಸ್ತಾಕ್‌, ಕವಿ ಆರಿಫ್‌ ರಾಜಾ ನಿಯೋಜಿತ ಕವಿಗೋಷ್ಠಿಯಿಂದ ದೂರ ಉಳಿಯುವ ನಿರ್ಧಾರವನ್ನು ಸಾರ್ವಜನಿಕಗೊಳಿಸಿದ್ದಾರೆ. ಬಹುಶಃ ಈ ಚರ್ಚೆ ಆರಂಭವಾಗಿದ್ದು ಕಿರಿಯ ಮಿತ್ರ ವೀರಣ್ಣ ಮಡಿವಾಳರ ತನ್ನ ಅಸಮಾಧಾನವನ್ನು ಫೇಸ್‌ ಬುಕ್‌ನಲ್ಲಿ ವ್ಯಕ್ತಪಡಿಸಿದಾಗ ಮತ್ತು ಅದಕ್ಕೆ ಅನೇಕ ಮಿತ್ರರು ಪ್ರತಿಕ್ರಿಯೆ ವ್ಯಕ್ತಪಡಿಸಿದಾಗ. ಪ್ರಜಾವಾಣಿ ಸೇರಿದಂತೆ ಕೆಲವು ಪತ್ರಿಕೆಗಳು ಇದನ್ನು ಸುದ್ಧಿಮಾಡಿದ್ದರಿಂದ ಇದು ತುಸು ವಿಸ್ತಾರವಾಯಿತು.

ಮೈಸೂರು ದಸರಾ ಮಾತ್ರವಲ್ಲ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕೂಡ ಎಲ್ಲ ಗೋಷ್ಠಿಗಳಿಗಿಂತ ಹೆಚ್ಚು ಟೀಕೆಗೆ ಒಳಗಾಗುವ ಗೋಷ್ಠಿ ಎಂದರೆ ಅದು ಕವಿಗೋಷ್ಠಿಯೇ. ಇದಕ್ಕೆ ಎರಡು ಮುಖ್ಯಕಾರಣಗಳನ್ನು ಗುರುತಿಸಬಹುದು. ಒಂದು ಆಯೋಜಕರು ಕವಿಗೋಷ್ಠಿಗೆ ಕವಿಗಳನ್ನು ಅಥವಾ ಕವಿಗಳ ಕವನಗಳನ್ನು ಆಯ್ಕೆಮಾಡುವಲ್ಲಿ ಒಂದಿಷ್ಟು ಶಿಸ್ತುಬದ್ಧವಾದ ಕ್ರಮವನ್ನು ಅನುಸರಿಸದಿರುವದು.  ಎರಡನೆಯದು ಕವಿಗೋಷ್ಠಿಗೆ ಭಾಗವಹಿಸಬೇಕು ಎಂದು ಅಪೇಕ್ಷೆ ಪಡುವವರ ಸಂಖ್ಯೆ ವಿಚಾರಗೋಷ್ಠಿಗಳಂತಹ ಉಳಿದ ಗೋಷ್ಠಿಗಳಿಗೆ ಭಾಗವಹಿಸಬೇಕು ಎಂದು ಅಪೇಕ್ಷೆ ಪಡುವವರ ಸಂಖ್ಯೆಗಿಂತ ಹೆಚ್ಚಾಗಿರುವುದು. ಎರಡನೆಯದು ತಪ್ಪಲ್ಲ; ಆದರೆ ಮೊದಲನೆಯದು ಅಲಕ್ಷ ಮಾಡುವಂಥದ್ದಲ್ಲ.

ಯಾವುದೇ ಸಾಹಿತ್ಯ ಸಮ್ಮೇಳನವನ್ನು ಗಮನಿಸಿ. ಕೆಲವು ವಿಚಾರಗೋಷ್ಠಿಗಳಿಗೆ ಹೇಳಿಕೊಳ್ಳುವಂತೆ ಜನ ಇರುವುದಿಲ್ಲ. ಕೆಲವು ವೇಳೆ ವೇದಿಕೆ ಮೇಲಿರುವವರಿಗಿಂತ ಮುಂದಿರುವವರ ಸಂಖ್ಯೆ ಕಡಿಮೆ ಇರುವುದೂ ಇದೆ. ಆದರೆ ಕವಿಗೋಷ್ಠಿಗೆ ಮಾತ್ರ ಈ ಸಮಸ್ಯೆ ಇರುವುದಿಲ್ಲ. ನೂರು ಜನ ಪ್ರೇಕ್ಷಕರಿಗೇನೂ ತೊಂದರೆ ಇರುವುದೇ ಇಲ್ಲ. ಕಾರಣ ಒಂದು ಕವಿಗೋಷ್ಠಿಗೆ ಇಪ್ಪತ್ತೈದರಿಂದ ಮೂವತ್ತು ಜನ ಕವಿಗಳಿರುತ್ತಾರೆ! ಅವರು ಏನಿಲ್ಲ ಎಂದರೂ ಇಬ್ಬಿಬ್ಬರನ್ನಾದರೂ ಕರೆತಂದಿರುತ್ತಾರೆ. ಅವರು ಕಾವ್ಯಾಪೇಕ್ಷೆಯಿಂದ ಬರುವುದಕ್ಕಿಂತ ʻನಮ್ಮ ಹುಡುಗʼ ಅಥವಾ ʻನಮ್ಮ ಹುಡುಗಿʼ ಕವಿತೆ ಓದುತ್ತಾನೆ/ ಓದುತ್ತಾಳೆ ಅನ್ನುವ ಅಭಿಮಾನದಿಂದ ಬಂದವರೇ ಆಗಿರುತ್ತಾರೆ. ಮೂವತ್ತು ಜನ ಕವಿಗಳು, ಅವರು ಕರೆತಂದವರು ಅರವತ್ತು, ಸಂಘಟಕರು ಅವರೂ ಇವರೂ ಸೇರಿ ಹತ್ತು. ಹೀಗೆ ನೂರಕ್ಕಂತೂ ದೋಕಾ ಇರಲ್ಲ. ಹೀಗಾಗಿ ಕವಿಗೋಷ್ಠಿ ಉಳಿದ ಗೋಷ್ಠಿಗಳಿಗಿಂತ ತುಸು ಜನಪ್ರಿಯ ಗೋಷ್ಠಿ. ಇಂತಹ ಜನಪ್ರಿಯ ಕವಿಗೋಷ್ಠಿಗಳನ್ನು ಸಂಘಟಿಸುವಾಗ ಸಂಘಟಕರು ಒಂದಿಷ್ಟು ತಮ್ಮದೇ ಆದ ಶಿಸ್ತನ್ನು ಅಳವಡಿಸಿಕೊಂಡರೆ ದೂರು ಅಥವಾ ಟೀಕೆಗಳನ್ನು ಇಲ್ಲ ಎನ್ನುವಂತೆ ಮಾಡಲಾಗದಿದ್ದರೂ ಗಣನೀಯವಾಗಿ ಕಡಿಮೆ ಮಾಡಬಹುದು. ಆದರೆ ಈ ಕೆಲಸ ಆಗದೇ ಇರುವ ಕಾರಣ ಕವಿಗೋಷ್ಠಿಗಳಿಗೆ ಕಾರ್ಮೋಡ ಕವಿಯುವುದು ಇತ್ತೀಚೆಗೆ ಹೆಚ್ಚಾಗುತ್ತಲೇ ಇದೆ.

ಬಹಳ ದೊಡ್ಡ ವೇದಿಕೆಗಳ ಮೇಲೆ ನಡೆಯುವ ಕವಿಗೋಷ್ಠಿಗಳೂ ಕೂಡ ಒಂದೊಂದು ಸಲ ಎಷ್ಟು ಅಧ್ವಾನದಿಂದ ಕೂಡಿರುತ್ತವೆ ಎಂಬುದಕ್ಕೆ ಒಂದೆರಡು ಉದಾಹರಣೆ ಕೊಡಬೇಕು ಅನ್ನಿಸುತ್ತಿದೆ. ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನಮಾತು. ಮಂಗಳೂರಿನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿತ್ತು. ಕಯ್ಯಾರರು ಸಮ್ಮೇಳನಾಧ್ಯಕ್ಷರು. ಅದು ಭಾರತಕ್ಕೆ ಸ್ವಾತಂತ್ರ್ಯ ದೊರೆತು ೫೦ ವರ್ಷ ತುಂಬಿದ ವರ್ಷ.  ಹಾಗಾಗಿ ಅಪರೂಪ ಎನ್ನುವಂತೆ ಭಾರತದ ಬೇರೆ ಬೇರೆ ರಾಜ್ಯಗಳಿಂದ ಬೇರೆ ಬೇರೆ ಭಾಷೆಗಳ ಕವಿಗಳು ಭಾಗವಹಿಸಿದ ಒಂದು ʼಬಹುಭಾಷಾ ಕವಿಗೋಷ್ಠಿʼಕೂಡ ಆಗಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಕನ್ನಡಿಗ ಡಾ ಯು ಆರ್‌ ಅನಂತಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಚೆನ್ನಾಗಿ ನಡೆದು ಮೆರಗು ತಂದಿತು.

ಈ ಗೋಷ್ಠಿಯೇನೋ ಚೆನ್ನಾಗಿ ನಡೆಯಿತು. ಆದರೆ ಅದಲ್ಲದೆ ನಮ್ಮ ಕನ್ನಡದ ಕವಿಗಳೇ ಭಾಗವಹಿದ್ದ ಎಲ್ಲ ಅಖಿಲ ಭಾರತ ಸಮ್ಮೇಳನಗಳಲ್ಲಿ ಇರುವಂಥ ಒಂದು ಕವಿಗೋಷ್ಠಿ ಕೂಡ ನಡೆಯಿತು. ಆ ಕವಿಗೋಷ್ಠಿಯಲ್ಲಿ ಕವಿತೆ ಓದಲೆಂದು ನುಡಿಪೀಠಕ್ಕೆ ಬಂದ ಶಿವಮೊಗ್ಗದಿಂದ ಬಂದಿದ್ದ ಕವಿಯೊಬ್ಬರು ತಮ್ಮ ಕವಿತೆಗೆ ಪೂರ್ವಪೀಠಿಕೆ ಅನ್ನುವಂತೆ ʼನಾನು ಇದೀಗ ದಾರಿಯಲ್ಲಿ ಬರುವಾಗ ಈ ಕವಿತೆಯನ್ನು ಬರೆದುಕೊಂಡು ಬಂದೆʼ ಎಂದು ಹೇಳಿ ಅದು ಎಷ್ಟು ಮಹತ್ವದ್ದು ಎಂದು ಅವರೇ ಹೊಗಳಿಕೆಯ ಮಾತುಗಳನ್ನು ಆಡಿ, ಯಾತಕ್ಕೂ ಬಾರದ ಒಂದು ಕವಿತೆಯನ್ನು ಓದಿದರು. ಬಹುಶಃ ತನ್ನನ್ನು ಅತ್ಯಂತ ಪ್ರತಿಭಾಶಾಲಿ ಕವಿ ಎಂದು ಸಭಿಕರು ಗುರುತಿಸಲಿ ಎಂಬುದು ಆ ಕವಿಯ ಉದ್ದೇಶ ಇದ್ದರೂ ಇದ್ದೀತು. ಆದರೆ ಆದದ್ದೇ ಬೇರೆ. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಕೊನೆಯಲ್ಲಿ ತಮ್ಮ ಅಧ್ಯಕ್ಷೀಯ ಮಾತುಗಳನ್ನಾಡುವಾಗ ಇದನ್ನು ಪ್ರಸ್ತಾಪಿಸಿ ಸಂಘಟಕರಿಗೆ ಸರಿಯಾಗಿ ಝಾಡಿಸಿ, “ಒಂದು ತಾಲ್ಲೂಕು ಮಟ್ಟದ ಕವಿಗೋಷ್ಠಿಯನ್ನು ನಡೆಸುವಾಗ ಕೂಡ ಸಂಘಟಕರು ಕವಿಯನ್ನು ಆಯ್ಕೆಮಾಡುವಾಗ ಮತ್ತು ಕವಿಯು ತನ್ನ ಕವಿತೆಯನ್ನು ಆಯ್ಕೆ ಮಾಡುವಾಗ ಸಾಕಷ್ಟು ಜವಾಬ್ದಾರಿ ವಹಿಸಬೇಕಾಗುತ್ತದೆ. ಆದರೆ ಅಖಿಲ ಭಾರತ ಮಟ್ಟದ ಕವಿಗೋಷ್ಠಿಯನ್ನು ಸಂಘಟಿಸುವಾಗ ಇಂತಹ ಜವಾಬ್ದಾರಿ ವಹಿಸದಿದ್ದರೆ ಹೇಗೆ?” ಎಂದು ಆಕವಿಯನ್ನೂ ಕವಿಗೋಷ್ಠಿಯ ಸಂಘಟಕರನ್ನೂ ಕಿವಿ ಹಿಂಡಿದರು.

ಪಟ್ಟಣಶೆಟ್ಟಿ ಅವರು ಹೇಳಿದ ಆ ಬೆಲೆಯುಳ್ಳ ಮಾತುಗಳನ್ನು ಇವತ್ತಿಗೂ ದೊಡ್ಡ ದೊಡ್ಡ ಕವಿಗೋಷ್ಠಿ ನಡೆಸುವ ಸಂಘಟಕರು ಅಳವಡಿಸಿಕೊಂಡಂತೆ ಕಾಣುತ್ತಿಲ್ಲ. ಅಳವಡಿಸಿಕೊಂಡಿದ್ದರೆ ಕವಿಗೋಷ್ಠಿಗಳು ಹೀಗೆ ಅಧ್ವಾನ ಆಗುತ್ತಿರಲಿಲ್ಲ. ಕವಿಗೋಷ್ಠಿಗೆ ಕವಿಗಳನ್ನು ಆರಿಸುವಾಗ ಸಂಘಟಕರು ವಹಿಸಬೇಕಾದ  ಜವಾಬ್ದಾರಿ ಒಂದು ಕಡೆಯಾದರೆ ಕವಿಯು ತನ್ನಕವಿತೆಯನ್ನು ಆರಿಸುವಾಗಲೂ ಜವಾಬ್ದಾರಿ ಇರಲೇಬೇಕಾಗುತ್ತದೆ. ಒಂದು ಕಾಲದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕೊಂದರ ಅಧ್ಯಕ್ಷನಾಗಿದ್ದ ನಾನು ವರ್ಷಕ್ಕೊಂದು ಕವಿಗೋಷ್ಠಿ ನಡೆಸುತ್ತಿದ್ದೆ. ಈ ಕವಿಗೋಷ್ಠಿ ತಾಲ್ಲೂಕು ಮಟ್ಟದ್ದಾದರೂ ನಾನು ನೇರವಾಗಿ ಯಾವ ಕವಿಯನ್ನೂ ವೇದಿಕೆಗೆ ಬಿಡುತ್ತಿರಲಿಲ್ಲ. ಸಾಕಷ್ಟು ಮೊದಲೇ ಮೂರು ಕವನಗಳನ್ನು ತರಿಸಿಕೊಂಡು ಅದರಲ್ಲಿ ಒಂದನ್ನು ತಜ್ಞರಿಂದ ಚುನಾಯಿಸಿ ಅದನ್ನು ಓದಲು ಅವರಿಗೆ ಬಿಡುತ್ತಿದ್ದೆ. ಅಂದರೆ ಕವಿಗೋಷ್ಠಿಯ ಸಂಘಟಕನಾಗಿ ನನಗೆ ಯಾವ ಕವಿ ಯಾವ ಕವಿತೆಯನ್ನು ಓದುತ್ತಾನೆ. ಅದರ ಸಾಮಾಜಿಕ ಮಹತ್ವ ಅಥವಾ ಪ್ರಭಾವ ಏನು ಎಂಬುದು ಸಂಘಟಕನಾಗಿ ನನಗೆ ಮೊದಲೇ ತಿಳಿದಿರಬೇಕು ಎಂಬುದು ನನ್ನ ಆಲೋಚನೆ ಆಗಿತ್ತು. ತಮಾಸೆಯ ಸಂಗತಿ ಎಂದರೆ ಆ ಕವಿಗೋಷ್ಠಿ ಬಿಟ್ಟರೆ ಆ ತಾಲ್ಲೂಕಿನಲ್ಲಿ ಮತ್ತೆ ಯಾವ ಕವಿಗೋಷ್ಠಿಗಳೂ ನಡೆಯುತ್ತಿರಲಿಲ್ಲ. ಕೆಲವರು ವರ್ಷಕ್ಕೊಮ್ಮೆ ನಾನು ಕವಿಗೋಷ್ಠಿಗೆ ಕವಿತೆ ಆಮಂತ್ರಿಸಿದಾಗ ಮಾತ್ರ ಮೂರು ಕವಿತೆ ಬರೆದು ಕಳಿಸುತ್ತಿದ್ದರು. ಮತ್ತು ಅವರು ಕವಿತೆ ಬರೆಯಲು ತೊಡಗುವುದು ಮುಂದಿನ ವರ್ಷ ನಾನು ಕವಿತೆಗಳನ್ನು ಆಮಂತ್ರಿಸಿದಾಗ ಮಾತ್ರ!

ಒಂದು ತಾಲ್ಲೂಕು ಮಟ್ಟದ ಕವಿಗೋಷ್ಠಿಯನ್ನೇ ನಾವು ಅಷ್ಟು ಕಾಳಜಿವಹಿಸಿ ಮಾಡುವಾಗ ಇಡೀ ರಾಜ್ಯವನ್ನು ಪ್ರತಿನಿಧಿಸುವ ಮೈಸೂರು ದಸರಾ ಕವಿಗೋಷ್ಠಿ ಅಥವಾ ಕನ್ನಡ ಭಾಷಿಕರನ್ನೆಲ್ಲ ಪ್ರತಿನಿಧಿಸುವ ಕನ್ನಡ ಸಾಹಿತ್ಯ ಪರಿಷತ್ತಿನ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗೆ ಕವಿಯನ್ನು ಆಯ್ಕೆ ಮಾಡುವಾಗ ಮತ್ತು ಕವಿ ತನ್ನ ಕವಿತೆಯನ್ನು ಆಯ್ಕೆ ಮಾಡುವಾಗ ಜವಾಬ್ದಾರಿಯುತವಾಗಿ ವರ್ತಿಸದಿದ್ದರೆ ಹೇಗೆ? ನನಗೆ ಗೊತ್ತಿರುವಂತೆ (ಇದು ತಪ್ಪಿದ್ದರೂ ಇದ್ದೀತು) ಅಖಿಲ ಭಾರತ ಕವಿಗೋಷ್ಠಿಗಾಗಲೀ ದಸರಾ ಕವಿಗೋಷ್ಠಿಗಾಗಲೀ ಕವಿಗಳನ್ನು ಆಯ್ಕೆ ಮಾಡುವಾಗ ಒಂದು ಶಿಸ್ತನ್ನು ಸಂಘಟಕರು ಅಳವಡಿಸಿಕೊಂಡಂತಿಲ್ಲ. ಅನೇಕ ಸಂದರ್ಭಗಳಲ್ಲಿ ಸಂಘಟಕರಿಗೆ ಯಾರು ಯಾರು ಕವಿಗಳಾಗಿ ಬರುತ್ತಾರೆ ಮತ್ತು ಅವರು ಯಾವ ಯಾವ ಕವಿತೆ ಓದುತ್ತಾರೆ ಎಂಬುದೂ ಅವರು ವೇದಿಕೆಗೆ ಬಂದು ಓದುವವರೆಗೂ ಗೊತ್ತಿರುವುದಿಲ್ಲ! ಹೀಗಿರುವಾಗ ಕವಿಗೋಷ್ಠಿಗಳು ಅಧ್ವಾನಕ್ಕೆ ಆಗರವಾಗದೇ ಇನ್ನೇನಾಗಲು ಸಾಧ್ಯ?


ಈ ಅಧ್ವಾನಗಳು ಇನ್ನೂ ಒಂದು ರೀತಿಯಲ್ಲಿ ಆಗುವುದುಂಟು. ಹೀಗೆಯೇ ಒಂದು ಅಖಿಲ ಭಾರತ  ಸಾಹಿತ್ಯ ಸಮ್ಮೇಳನದಲ್ಲಿ ಡುಂಡಿರಾಜ್‌ ಅಧ್ಯಕ್ಷತೆ ವಹಿಸಿದ್ದ ಸಮ್ಮೇಳನದ ಕವಿಗೋಷ್ಠಿಗೆ ಧೀಡೀರನೆ ಹತ್ತಿದ ವ್ಯಕ್ತಿಯೊಬ್ಬ ಕವಿಗೋಷ್ಠಿಯ ಕವಿಗಳ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಅಧ್ಯಕ್ಷರು ನೀಡಿದ್ದಾರೆ ಎನ್ನಲಾದ ಶಿಫಾರಸ್ಸು ಪತ್ರವನ್ನು ತೋರಿಸಿ ನನಗೆ ಕವಿತೆ ಓದಲು ಅವಕಾಶ ಕೊಡಬೇಕೆಂದು ತರಲೆ ಮಾಡಿದ! ಇನ್ನೊಂದು ವರ್ಷ ಅದೇ ಅಖಿಲಭಾರತ ಸಾಹಿತ್ಯ ಸಮ್ಮೇಳದ ಕವಿಗೋಷ್ಠಿಯಲ್ಲಿ( ಬಹುಶಃ ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಗೋಷ್ಠಿ ಎಂದು ನೆನಪು)  ಕವಿತೆ ಓದಿದ ಒಬ್ಬ ಕವಿ ಕವಿಗೋಷ್ಠಿಯ ಕವಿಗಳ ಹೆಸರಿನ ಪಟ್ಟಿಯಲ್ಲಿ ಹೆಸರಾಂತ ಮಕ್ಕಳ ಸಾಹಿತಿ ಕಂಚ್ಯಾಣಿ ಶರಣಪ್ಪ ಅವರ ಹೆಸರು ಇಲ್ಲದಿದ್ದರಿಂದ ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಅವರನ್ನು ʼನಿಮ್ಮಂಥವರು ವೇದಿಕೆಮೇಲೆ ಇರಬೇಕು ದಯವಿಟ್ಟು ಬನ್ನಿʼ ಎಂದು ಆಮಂತ್ರಿಸಿಬಿಟ್ಟ! ಶರಣಪ್ಪ ಅವರೇನೂ ಎದ್ದು ವೇದಿಕೆಗೆ ಹೋಗಲಿಲ್ಲ ಆ ಮಾತು ಬೇರೆ. ಆದರೆ ಮತ್ತೆ ಮುಂದೆ ಇನ್ನೂ ಯಾರು ಯಾರು ಬಂದು ವೇದಿಕೆಗೆ ಯಾರು ಯಾರನ್ನು ಕರೆಯುತ್ತಾರೋ ಏನೋ ಎಂದು ಗಾಬರಿಗೊಂಡು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ನಾಗತಿಹಳ್ಳಿ ಚಂದ್ರಶೇಖರ್‌ ಮಧ್ಯೆಯೇ ಎದ್ದು ಬಂದು ಮೈಕ್‌ ತೆಗೆದುಕೊಂಡು, ʼ “ಒಂದು ಗೋಷ್ಠಿ ಅಂದರೆ ಅದಕ್ಕೆ ಒಂದು ಶಿಸ್ತು ಇರುತ್ತದೆ. ಅದನ್ನು ನಾವು ಉಲ್ಲಂಘಿಸುವುದು ಬೇಡ” ಎಂದು ಹೇಳಿ ಆಗಬಹುದಾದ ಅಧ್ವಾನವನ್ನು ತಡೆದರು.

ಹಾಗಾದರೆ ಈ ಕವಿಗೋಷ್ಠಿಗಳ ಗುಣಮಟ್ಟವನ್ನು ಸುಧಾರಿಸಲು ಸಾಧ್ಯವಿಲ್ಲವೇ? ಖಂಡಿತಾ ಸಾಧ್ಯವಿದೆ. ಆದರೆ ಸಂಬಂಧಪಟ್ಟವರು ಪ್ರಯತ್ನಶೀಲರಾಗಬೇಕು. ಮೊದಲನೆಯದಾಗಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಥವಾ ಮೈಸೂರು ದಸರಾದ ಕವಿಗೋಷ್ಠಿಯಂತಹ ಕವಿಗೋಷ್ಠಿಗಳನ್ನು ಆಯೋಜಿಸುವಾಗ ಅವು ಅತ್ಯಂತ ಉತ್ಕೃಷ್ಟವಾಗಿರುವಂತೆ ನೋಡಿಕೊಳ್ಳಬೇಕು. ಇದನ್ನು ಸಾಧಿಸಲು ಮೊದಲು ಮಾಡಬೇಕಾದ್ದು ಕವಿಗಳನ್ನು ಆಯ್ಕೆಮಾಡುವ ವಿಧಾನದ ಸುಧಾರಣೆ. ಈಗ ಸಾಮಾನ್ಯವಾಗಿ ಈ ಕವಿಗೋಷ್ಠಿಗಳಿಗೆ ಕವಿಗಳನ್ನು ಹೇಗೆ ಆಯ್ಕೆಮಾಡಲಾಗುತ್ತದೆ? ಜಿಲ್ಲಾ ಮಟ್ಟದ ಕನ್ನಡ ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೋ ಅಲ್ಲಿನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೋ ಕವಿಗಳ ಹೆಸರನ್ನು ಕಳಿಸಿಕೊಡಲು ಕೇಳಿಕೊಳ್ಳಲಾಗುತ್ತದೆ. ಅವರು ತಮ್ಮ ಸಂಪರ್ಕದಲ್ಲಿರುವ ಯಾರೋ ಒಬ್ಬಿಬ್ಬರ ಹೆಸರನ್ನು ಕಳಿಸಕೊಡುತ್ತಾರೆ. ಅವರ ಜೊತೆಗೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೋ ಅಥವಾ ದಸರಾ ಸಮಿತಿಯ ಯಾವುದೋ ದೊಡ್ಡ ಹುದ್ದೆಯಲ್ಲಿರುವರೋ ನೀಡುವ  ಶಿಫಾರಸ್ಸು ಪತ್ರವನ್ನು ಹಿಡಿದುಕೊಂಡು ಬಂದು ಕೆಲವರು ಕವಿತೆ ಓದುವುದೂ ಇದೆ. ಆದರೆ ಇದು ಸರಿಯಾದ ಕ್ರಮವಲ್ಲ. ಇಂತಹ ದೊಡ್ಡ ಮಟ್ಟದ ಕವಿಗೋಷ್ಠಿಗೆ ಕವಿಗಳನ್ನು ಆಯ್ಕೆಮಾಡಲು ರಾಜ್ಯಮಟ್ಟದಲ್ಲಿ ಪರಿಣಿತ ಕವಿಗಳನ್ನೊಳಗೊಂಡ ಒಂದು ಉನ್ನತ ಮಟ್ಟದ ಸಮಿತಿ ಇರಬೇಕು. ಅದು ನೇರವಾಗಿ ಅಥವಾ ಜಿಲ್ಲಾ ಘಟಕಗಳಿಂದ ಚುನಾಯಿತವಾಗಿ ಬರುವ ಕವಿಗಳ ಸಾಧನೆಯನ್ನು ಪರಿಶೀಲಿಸಿ ಅವಕಾಶ ಕಲ್ಪಿಸಬೇಕು.

ಅಖಿಲಭಾರತಮಟ್ಟದ ಸಾಹಿತ್ಯ ಸಮ್ಮೇಳನ ಅಥವಾ ಮೈಸೂರು ದಸರಾ ಕವಿಗೋಷ್ಠಿಗಳನ್ನು ರೂಪಿಸುವಾಗ ಅಲ್ಲಿಗೆ ಕವಿಗಳಿಗೆ ಅವಕಾಶ ಕೊಡುವಾಗ ಪ್ರಧಾನವಾಗಿ ಅವು ʻಹೊಸಬರಿಗೆ ಅವಕಾಶ ಕೊಡುವ ವೇದಿಕೆಗಳಾಗದಂತೆ ಎಚ್ಚರವಹಿಸಬೇಕು. ಇದರರ್ಥ ಅವಕಾಶ ಕೊಟ್ಟವರಿಗೇ ಕೊಡಬೇಕು ಎಂದೂ ಅಲ್ಲ. ಕವಿಗಳಿಗೆ ಅವಕಾಶ ಕೊಡುವುದು ಮೊದಲ ಆದ್ಯತೆ ಆಗಬಾರದು. ಮುಂದೆ ಕುಳಿತ ಉದಯೋನ್ಮುಖ ಕವಿಗಳನೇಕರು ಮುಂದೆ ನಾಡಿನ ಬೆಲೆಯುಳ್ಳ ಕವಿಗಳಾಗಿ ಬೆಳೆಯಲು ಕವಿಗೋಷ್ಠಿ ಪ್ರಭಾವ ಬೀರುವುದರ ಕಡೆ ಮೊದಲ ಆದ್ಯತೆ ಇರಬೇಕು. ಏಕೆಂದರೆ ʻಕವಿಗೋಷ್ಠಿಯಲ್ಲಿ ಕವಿತೆ ಓದಿದ್ದರಿಂದ ನಾನು ಮುಂದೆ ಒಬ್ಬ ಕವಿಯಾಗಿ ಬೆಳೆದೆʼ ಎಂದು ಹೇಳುವಂಥ ಸಂದರ್ಭಗಳು ಕಡಿಮೆ. ʻದಸರಾ ಕವಿಗೋಷ್ಠಿಯಲ್ಲಿ ಇಂಥವರು ಓದಿದ ಕವಿತೆ ನನ್ನ ಮೇಲೆ ಬಹಳ ಪ್ರಭಾವ ಬೀರಿತು. ಇದರಿಂದ ನಾನು ಕವಿಯಾಗಿ ಬೆಳೆಯುವಲ್ಲಿ ಬಹಳ ಸಹಾಯವಾಯಿತುʼ ಎಂದು ಮುಂದೆ ಕುಳಿತು ಕವಿತೆ ಕೇಳಿದ ಉದಯೋನ್ಮುಖರು ಹೇಳುವ ಸಾಧ್ಯತೆ ಹೆಚ್ಚು. ಹೀಗಾಗಿ ಈಗಾಗಲೇ ಕಾವ್ಯಕ್ಷೇತ್ರೆಲ್ಲಿ ಒಂದಿಷ್ಟು ಕೆಲಸ ಮಾಡಿ ನುರಿತವರನ್ನೇ ಅಂದರೆ ಒಂದೆರಡಾದರೂ ಕವನ ಸಂಕಲನ ಪ್ರಕಟಿಸಿದವರು ಅಥವಾ ಮಾಧ್ಯಮಗಳ ಮೂಲಕ ಒಂದಿಷ್ಟು ಕವಿಯಾಗಿ ರೂಪಗೊಂಡವರನ್ನೇ ಈ ಕವಿಗೋಷ್ಠಿಗಳಿಗೆ ಆಯ್ಕೆಮಾಡಬೇಕು. ಹಾಗೆ ನೋಡಿದರೆ ದೊಡ್ಡ ದೊಡ್ಡ ಕವಿಗಳು ಇಂತಹ ಕವಿಗೋಷ್ಠಿಗಳಲ್ಲಿ ಕವಿತೆ ಓದಿ ಮುಂದೆ ಕುಳಿತ ಚಿಕ್ಕವರನ್ನು ಪ್ರಭಾವಿಸಬೇಕು.  ಹೊಸಬರಿಗೆ ಅವಕಾಶ ಕೊಡಲು ತಾಲ್ಲೂಕು ಮಟ್ಟದಲ್ಲಿ ಜಿಲ್ಲಾಮಟ್ಟದಲ್ಲಿ ಸಾಕಷ್ಟು ವೇದಿಕೆಗಳಿವೆ. ಅಲ್ಲಿ ಅವಕಾಶಕೊಡುವ ಕೆಲಸ ಆಗಲಿ. ಇಲ್ಲಿ ಅದು ಬೇಡ!

ಕವಿಗಳನ್ನು ಹೀಗೆ ಆಯ್ಕೆ ಮಾಡಿದ ಮೇಲೆ ಅವರ ಕವಿತೆಗಳನ್ನು ಅವರು ಎಷ್ಟೇ ದೊಡ್ಡವರಾದರೂ ಸಂಘಟಕರು ತರಿಸಿಕೊಂಡು ಒಂದು ಸಲ ಪರಿಶೀಲಿಸಿದ ನಂತರವೇ ಕವಿ ಆ ಕವಿತೆಯನ್ನು ಓದುವಂತಾಗಬೇಕು. ಇದು ಕವಿಗಳ ಮೇಲೆ ಸಂಘಟನೆಯ ʻನಿಯಂತ್ರಣʼ ಅಥವಾ ʼಕಡಿವಾಣʼ ಇತ್ಯಾದಿಯಾಗಿ ಭಾವಿಸಲೇಬಾರದು.

ಒಂದು ನೆನಪಿನೊಂದಿಗೆ ಈ ಲೇಖನ ಮುಗಿಸುತ್ತೇನೆ. ಇಪ್ಪತ್ತು ವರ್ಷಗಳ ಹಿಂದೆ ನಾನೂ ಈ ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಿ ಎರೆಡು ಕವಿತೆ ಓದಿದ್ದೆ.  ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲು ಧಾರವಾಡದಿಂದ ಬಂದಿದ್ದ ಹಿರಿಯ ಕವಿ ಚೆನ್ನವೀರ ಕಣವಿ, ಹಾವೇರಿಯ ಕವಿ ಗಂಗಾಧರ ನಂದಿ, ಮತ್ತು ನಾನು ಅಕ್ಕಪಕ್ಕದ ರೂಮುಗಳಲ್ಲಿಯೇ ಉಳಿದಿದ್ದೆವು. ಬೆಳಿಗ್ಗೆ ತಿಂಡಿ ತಿನ್ನುವಾಗ ಆಗಲೇ ಹಲ್ಲುಗಳೆಲ್ಲವನ್ನೂ ಕಳೆದುಕೊಂಡಿದ್ದ ಕಣವಿಯವರು ತಿಂಡಿಯನ್ನು ಜಗಿಯಲು ಒದ್ದಾಡುತ್ತಿರುವಾಗ ಅದನ್ನು ನೋಡಿ ನನಗೆ ಸಂಕಟವಾಗುತ್ತಿತ್ತು.  ಅವರ ಎದುರು ಅರಾಮಾಗಿ ತಿಂಡಿತಿನ್ನಲು ಮುಜುಗರವಾಗುತ್ತಿತ್ತು. ಆದರೆ ಕೆಲವು ಔಪಚಾರಿಕ ಮಾತುಗಳನ್ನಾಡುವುದನ್ನು ಬಿಟ್ಟರೆ ಅವರಿಗೆ ಸಹಾಯ ಮಾಡಲಾರದ ಅಸಹಾಯಕ ಸ್ಥಿತಿಯಲ್ಲಿದ್ದೆವು. ಇಳಿಹೊತ್ತಿನಲ್ಲಿ ನಮ್ಮನ್ನು ಕುದುರೆ ಸರೋಟಿನಲ್ಲಿ ಕವಿಗೋಷ್ಠಿ ಯಾವಾಗಲೂ ನಡೆಯುವ ಜಗನ್ಮೋಹನ ಅರಮೆಗೆ ಕರೆದೊಯ್ಯಲಾಯಿತು. ಕವಿಗೋಷ್ಠಿಯನ್ನು ಉದ್ಘಾಟಿಸಿದ ಅರವಿಂದ ಮಾಲಗತ್ತಿ ಅದಕ್ಕೂ ಎಷ್ಟೋ ವರ್ಷಗಳ ಹಿಂದೆ ತಾವು ಬಾಲಕರಾಗಿದ್ದಾಗ ಮೈಸೂರು ದಸರಾದಿಂದ ಆಕರ್ಷಿತರಾಗಿ ದೂರದ ಜಮಖಂಡಿಯಿಂದ ಅವರ ದೊಡ್ಡಪ್ಪನೋ ಅಥವಾ ಚಿಕ್ಕಪ್ಪನೋ ಅವರ ಜೊತೆ ಮೈಸೂರು ದಸರಾ ನೋಡಲು ಬಂದದ್ದನ್ನು ಭಾವುಕರಾಗಿ ನೆನಪಿಸಿಕೊಂಡರು. ಅಧ್ಯಕ್ಷೀಯ ನುಡಿಗಳನ್ನಾಡಿದ ಕಣವಿಯವರು ʻನನಗೆ ಅರಮನೆಯೊಂದಿಗೆ ಗುರುತಿಸಿಕೊಳ್ಳುವುದಕ್ಕಿಂತ ಕುದುರೆ ಸಾರೋಟಿನೊಂದಿಗೆ ಗುರುತಿಸಿಕೊಳ್ಳುವುದು ಹೆಚ್ಚು ಇಷ್ಟವಾಗುತ್ತದೆʼ ಎಂದು ಹೇಳಿ ಕವಿಯೊಬ್ಬನ ಮನೋಧರ್ಮ ಹೇಗಿರಬೇಕು ಎಂಬುದನ್ನು ಪರೋಕ್ಷವಾಗಿ ತಿಳಿಸಿಕೊಟ್ಟರು.

ಮೈಸೂರು ದಸರಾ ಹೀಗೆ ಒಬ್ಬೊಬ್ಬರ ಭಾವಕೋಶಗಳನ್ನು ಒನ್ನೊಂದು ರೀತಿಯಲ್ಲಿ ತುಂಬಬಲ್ಲ ಶಕ್ತಿ ಇರುವಂಥದ್ದು. ಅದು ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ಹೊರಳಿಕೊಂಡ ವ್ಯವಸ್ಥೆಯೊಂದರಲ್ಲಿ ನಡೆಯುತ್ತಿರುವಾಗ ಅದಕ್ಕೆ ತಕ್ಕ ಸಾಕಷ್ಟು ಪರಿವರ್ತನೆಗಳನ್ನು ಮಾಡಿಕೊಳ್ಳಬೇಕು. ವೀರಣ್ಣಗೋ ಇನ್ನಾರಿಗೋ ಅವಕಾಶ ಸಿಗಲಿಲ್ಲ ಎಂಬುದು ಇಲ್ಲಿ ಮುಖ್ಯವಲ್ಲವಾದರೂ ಸಕಾರಣಯುಕ್ತ ಟೀಕೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಕಾರ್ಯೋನ್ಮಖರಾಗಬೇಕಾದದ್ದು ಸಂಘಟಕರ ಜವಾಬ್ದಾರಿ. ಈ ಹಿನ್ನಲೆಯಲ್ಲಿ ಅಸಮಾಧಾನವನ್ನು ಅನುಮಾನಿಸುವ ಅಥವಾ ಅವಮಾನಿಸುವ ಮನಸ್ಥಿತಿಯಿಂದ ಹೊರಬಂದು, ಅಸಮಾಧಾನಿಗಳ ಸಾತ್ವಿಕ ಕೋಪವನ್ನು ಸರಿಯಾಗಿ ಅರ್ಥೈಸಿಕೊಂಡು ಆಗಿರುವ ಟೀಕೆಗಳನ್ನುಎಂದು ಮಾತ್ರವಲ್ಲ; ಅಂಥವರ ಸಾತ್ವಿಕ ಕೋಪವನ್ನು ಸರಿಯಾಗಿ ಗ್ರಹಿಸಿ ಆಗಿರುವ ತಪ್ಪುಗಳನ್ನುಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುವತ್ತ ಸಂಘಟಕರು ಮುಂದಡಿಯಿಡಬೇಕು. ಆಗ ಮಾತ್ರ ಈ ಪ್ರಿತಿಷ್ಠಿತ ಕವಿಗೋಷ್ಠಿಗಳಿಗೆ ಕವಿಯುತ್ತಿರುವ ಕಾರ್ಮೋಡಗಳು ದೂರಸರಿದು ರವಿಕಿರಣಗಳು ನಮ್ಮ ಸಾಹಿತ್ಯ ಸಂಕೃತಿಗಳನ್ನು ಬೆಳಗಬಲ್ಲವು. ಹಾಗಾಗಲೆಂದು ಆಶಿಸೋಣ.

 

ರಾಜೇಂದ್ರ ಬುರಡಿಕಟ್ಟಿ

೦೮-೧೦-೨೦೨೪

 

No comments:

Post a Comment