Sunday, November 10, 2024

ಶಾಲಾ ಶಿಕ್ಷಕರ ರಜಾ ನಿರಾಕರಣೆಯ ಸಾಧಕ ಬಾಧಕಗಳು

ಶಾಲಾ ಶಿಕ್ಷಕರ ರಜಾ ನಿರಾಕರಣೆಯ ಸಾಧಕ ಬಾಧಕಗಳು

ಎಸ್‌ ಎಸ್‌ ಎಲ್‌ ಸಿ ಫಲಿತಾಂಶ ಸುಧಾರಣೆಗಾಗಿ ರಾಜ್ಯಾದ್ಯಂತ ಅನೇಕ ಉಪಕ್ರಮಗಳು ಜಾರಿಯಾಗುತ್ತಿದ್ದು ಅವುಗಳಲ್ಲಿ ಅನೇಕ ಕ್ರಮಗಳು ಯಾವುದೇ ವೈಜ್ಞಾನಿಕ ಹಿನ್ನಲೆ ಇಲ್ಲದ, ಮಕ್ಕಳ ಮತ್ತು ಶಿಕ್ಷಕರ ಮೇಲೆ ಅನಗತ್ಯ ಒತ್ತಡಗಳನ್ನು ಸೃಷ್ಟಿಸಿ ಬೋಧನಾ-ಕಲಿಕಾ ಪ್ರಕ್ರಿಯೆಯ ಮೇಲೆ ನೇರವಾಗಿ ಕೆಟ್ಟ ಪರಿಣಾಮವನ್ನು ಬೀರುವ ಮೂಲಕ ಫಲಿತಾಂಶ ಹಿನ್ನಡೆಗೂ ಕಾರಣವಾಗಬಹುದಾದ ನಡೆಯಡೆಗೆ ಸಾಗುತ್ತಿರುವುದನ್ನು ಅನೇಕ ವರ್ಷಗಳ ಕಾಲ ಬೋಧನಾ ಕಾರ್ಯದಲ್ಲಿ ತೊಡಗಿರುವ ಅನೇಕರು ಗುರುತಿಸಿರಬಹುದೆಂದು ಭಾವಿಸುವೆ. ಈ ಬಗ್ಗೆ ರಾಜ್ಯ ಮಟ್ಟದಲ್ಲಿ ಪ್ರೌಢಶಾಲಾ ಸಹಶಿಕ್ಷಕರ ಸಂಘ, ಮುಖ್ಯೋಪಾಧ್ಯಾಯರ ಸಂಘಗಳು ಏನು ಮಾಡುತ್ತಿವೆಯೋ ಗೊತ್ತಿಲ್ಲ. ಆ ಬಗ್ಗೆ ಈ ಸಂಘಗಳು ಏನು ಮಾಡಬಹುದು ಮತ್ತು ಏನು ಮಾಡಬೇಕು ಎಂಬುದರ ಬಗ್ಗೆ ವಿವರವಾಗಿ ಆ ಸಂಘಗಳ ಮುಖ್ಯಸ್ಥರಿಗೆ ಸಧ್ಯದಲ್ಲಿಯೇ ಒಂದು ದೀರ್ಘ ವರದಿಯನ್ನು ತಯಾರಿಸಿ ಕೊಡುವ ಯೋಚನೆ ಇದೆ.  ಆ ವರದಿಯಲ್ಲಿ ಇರುವ ಬಹಳ ಮುಖ್ಯವಾದ ಒಂದು ಅಂಶವು ನೇರವಾಗಿ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಸಂಬಂಧಿಸಿದ್ದು ಅದನ್ನು ಮಾತ್ರ ಇಲ್ಲಿ ಚರ್ಚೆಗೆ ಒಳಪಡಿಸಲಾಗಿದೆ.

******

ಶಿಕ್ಷಕರಿಗೆ ರಜೆ ಮಂಜೂರಿ ಮತ್ತು ನಿರಾಕರಣೆ ವಿಷಯ:

ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ಕೈಗೊಳ್ಳುತ್ತಿರುವ ಅವೈಜ್ಞಾನಿಕ ಮತ್ತು ಅರ್ಥವಿಲ್ಲದ ಕ್ರಮಗಳಲ್ಲಿ ಮೇಲಧಿಕಾರಿಗಳು ಮುಖ್ಯಶಿಕ್ಷಕರನ್ನು ಕುರಿತು ಮಾತನಾಡುವಾಗ, “ಯಾವ ಶಿಕ್ಷಕರಿಗೂ ರಜೆ ಕೊಡಬೇಡಿ, ಕೊಟ್ಟರೆ ನಿಮ್ಮ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇನೆ” “ಒಬ್ಬ ಶಿಕ್ಷಕರಿಗೆ ಒಂದು ರಜೆ ಮಾತ್ರ ಕೊಡಿ” ಎರಡು ರಜೆ ಮಾತ್ರ ಕೊಡಿʼ ಇತ್ಯಾದಿಯಾಗಿ ಹೇಳುವುದು ಮುಖ್ಯವಾದದ್ದು. ಇತ್ತೀಚೆಗೆ ಅನೇಕ ಜಿಲ್ಲೆಗಳಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಪ್ರೌಢಶಾಲಾ ಮುಖ್ಯಶಿಕ್ಷಕರನ್ನು ಕುರಿತು ತಮಗೆ ತೋಚಿದಂತೆ, ಹೀಗೆ ಹೇಳುತ್ತಿರುವುದು ಎಲ್ಲಕಡೆ ಕೇಳಿಬರುತ್ತಿದೆ.

ನಮ್ಮ ಮುಖ್ಯಶಿಕ್ಷಕರಲ್ಲಿ ಅನೇಕರು ಕೆಇಎಸ್ ಎಂದು ಕರೆಯಲಾಗುವ ಪ್ರೌಢಶಾಲಾ ಮುಖ್ಯಶಿಕ್ಷಕರ ಪರೀಕ್ಷೆ ಪಾಸುಮಾಡಿ ಬಂದಂಥವರು. ಆದರೆ ಅವರಲ್ಲಿ ಕೆಲವರು ತಮ್ಮ ತಿಳಿವಳಿಕೆಯನ್ನು ತಮ್ಮ ಕೈ ಕೆಳಗೆ (ಹಾಗನ್ನುವುದಕ್ಕಿಂತ ತಮ್ಮಜೊತೆ) ಕೆಲಸಮಾಡುವ ಶಿಕ್ಷಕರಿಗೆ ಅವಾಜ್‌ ಹಾಕಲು ಬಳಸುತ್ತಾರೆಯೇ ಹೊರತು ತಮ್ಮ ಮೇಲಧಿಕಾರಿಗಳಿಗೆ ಸಮಸ್ಯೆಯ ಸೂಕ್ಷ್ಮತೆಯನ್ನು ಮನವರಿಕೆ ಮಾಡಿಕೊಡಲು ಬಳಸುವುದಿಲ್ಲ.  ಇಲ್ಲಿ ಅಷ್ಟು ಜೋರು ಮಾಡುವವರು ಅಲ್ಲಿ ಸುಮ್ಮನೆ ಇದ್ದರೆ ಹೇಗೆ?

ಸುಮಾರು ಮೂವತ್ತು ವರ್ಷಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಕೆಲಸಮಾಡಿದ, ಮತ್ತು ಸುಮಾರು ಇಪ್ಪತ್ತು ವರ್ಷಗಳ ಕಾಲ ಶಾಲೆಯ ಮುಖ್ಯೋಪಾಧ್ಯಾಯರ ಖುರ್ಚಿಯಲ್ಲಿ ಕುಳಿತು ಶಾಲಾ ಆಡಳಿತ ನಡೆಸಿರುವ ನಾನು ನನ್ನ ಅನುಭವದ ಮೇಲೆ ಹೇಳುವುದಾದರೆ ನಮ್ಮ ಮೇಲಧಿಕಾರಿಗಳು ಕೊಡುವ ಸೂಚನೆಗಳು ಕಾನುನುಬದ್ಧ ಮತ್ತು ನಿಯಮಾನುಸಾರ ಇದ್ದಾಗ ಮಾತ್ರ ನಾವು ಅವುಗಳನ್ನು ಪಾಲಿಸಬೇಕು ಇಲ್ಲದಿದ್ದರೆ ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಡುವುದೇ ಹೆಚ್ಚು ಸೂಕ್ತ. ಇದರರ್ಥ ಮೇಲಧಿಕಾರಿಗಳ ನಿರ್ದೇಶನಗಳೆಲ್ಲವನ್ನೂ ಅಲಕ್ಷಿಸಬೇಕೆಂದಲ್ಲ ಎಂಬುದನ್ನು ಇಲ್ಲಿಯೇ ಸ್ಪಷ್ಟಪಡಿಸುತ್ತೇನೆ.  ಒಬ್ಬ ಮುಖ್ಯ ಶಿಕ್ಷಕ ಮೇಲಧಿಕಾರಿಗಳು, ತನ್ನ ಜೊತೆಗೆ ಕೆಲಸಮಾಡುವ ಸಹಶಿಕ್ಷಕರು ಸೇರಿದಂತೆ ಎಲ್ಲರೊಂದಿಗೆ ಸ್ನೇಹಸಂಬಂಧವನ್ನು ಇಟ್ಟುಕೊಂಡೇ ಶಾಲಾ ಆಡಳಿತ ನಡೆಸಬೇಕಾದದ್ದು ಅಪೇಕ್ಷಣೀಯ. ಆದರೆ ಇವರಲ್ಲಿ ಒಂದುಕಡೆಯ ವಿರೋಧವನ್ನು ಕಟ್ಟಿಕೊಳ್ಳಲೇಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾದಾಗ ಅವರು ತಮ್ಮ ಜೊತೆ ಕೆಲಸ ಮಾಡುವವರ ವಿರೋಧ ಕಟ್ಟಿಕೊಳ್ಳುವುದಕ್ಕಿಂತ ಮೇಲಧಿಕಾರಿಗಳ ವಿರೋಧಕಟ್ಟಿಕೊಳ್ಳುವುದೇ ಸೂಕ್ತ. ಏಕೆಂದರೆ ಮೇಲಧಿಕಾರಿಗಳ ವಿರೋಧ ಕಟ್ಟಿಕೊಂಡಾಗ ಅದು ಶಾಲಾ ಪರಿಸರದ ಮೇಲೆ ಉಂಟುಮಾಡುವ ಕೆಟ್ಟಪರಿಣಾಮ ಬಹಳ ಕಡಿಮೆ. ಆದರೆ ತನ್ನ ಸಹೋದ್ಯೋಗಿಗಳ ವಿರೋಧ ಕಟ್ಟಿಕೊಂಡು ಶಾಲೆ ನಡೆಸುವುದು ಬಹಳ ಕಷ್ಟ. ಇದು ಶಾಲಾ ಪರಿಸರದಲ್ಲಿ ಸಂಬಂಧಗಳು ಹಾಳಾಗಲು ಮತ್ತು ಅದರ ದುಷ್ಪರಿಣಾಮ ಕಲಿಯುವ ಮಕ್ಕಳ ಮೇಲಾಗಲು ಕಾರಣವಾಗುತ್ತದೆ. ಇದನ್ನು ಎಲ್ಲ ಮುಖ್ಯಶಿಕ್ಷಕರು ಅಗತ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕು.

ಈ ಮಾತು ಏಕೆಂದರೆ ಕೆಲವು ಮುಖ್ಯಶಿಕ್ಷಕರು ತಮ್ಮ ಮೇಲಧಿಕಾರಿಗಳು ಹೇಳಿದ್ದಾರೆಂದು ತಮ್ಮ ಶಾಲೆಯ ಸಹಶಿಕ್ಷಕರಿಗೆ ರಜೆಗಳನ್ನು ವಿಶೇಷವಾಗಿ ಸಾಂದರ್ಭಿಕ ರಜೆಗಳನ್ನು ಮಂಜೂರು ಮಾಡುವಾಗ ಮೀನಮೇಷ ಎಣಿಸುತ್ತಿರುವುದು ವರದಿಯಾಗುತ್ತಿದೆ. ಕೆಲವು ಮುಖ್ಯಶಿಕ್ಷಕರು, ಈ ಬಗ್ಗೆ ಅಧಿಕೃತವಾಗಿ ಮೆಮೊ ಹಾಕಿ ʻರಜೆಗಳನ್ನು ಬೇಗಬೇಗ ಹಾಕಿಕೊಳ್ಳಿ. ನವೆಂಬರ್‌ ಡಿಸೆಂಬರ್‌ ತಿಂಗಳಿಗೆ ಬಹಳ ರಜೆಗಳನ್ನು ಉಳಿಸಿಕೊಳ್ಳಬೇಡಿʼ ʼಡಿಸೆಂಬರ್‌ ನಲ್ಲಿ ಒಂದೇ ರಜೆ ಕೊಡಲಾಗುವುದು, ಎರಡೇ ರಜೆ ಕೊಡಲಾಗುವುದುʼ ಅಥವಾ ʼರಜೆಯನ್ನೇ ನೀಡುವುದಿಲ್ಲʼ ʻರಜೆ ಬೇಕಾದರೆ ಮೇಲಧಿಕಾರಿಗಳ ಅನುಮತಿ ಪಡೆದುಕೊಳ್ಳಬೇಕುʼ ʻವಿಶೇಷ ಕಾರಣಗಳಿಗೆ ಮಾತ್ರ ರಜೆ ನೀಡಲಾಗುವುದುʼ ಇತ್ಯಾದಿಯಾಗಿ ಸೂಚಿಸುತ್ತಿರುವುದನ್ನು ಅನೇಕ ಶಿಕ್ಷಕರಿಂದ ತಿಳಿದು ಬಂದಿದೆ.  ಇಂತಹ ಮೆಮೊಗಳನ್ನು ಹಾಕುವಾಗ ಮುಖ್ಯೋಪಾಧ್ಯಾಯರ ಸ್ಥಾನದಲ್ಲಿರುವವರು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಏಕೆಂದರೆ ಹೀಗೆ ಅವರು ಹಾಕುವ ಮೆಮೊಗಳೇ ಒಂದೊಂದು ಸಂದರ್ಭದಲ್ಲಿ ಹಗ್ಗಗಳಾಗಿ ಅವರ ಕುತ್ತಿಗೆಗೆ ಬಂದು ಸುತ್ತಿಕೊಳ್ಳಬಹುದು!

ರಜೆ ನೀಡುವ ಬಗ್ಗೆ ಮುಖ್ಯಶಿಕ್ಷಕರು ನಿಯಮಗಳನ್ನು ಸ್ಪಷ್ಟವಾಗಿ ತಿಳಿದುಕೊಂಡು ಅದರಂತೆ ನಡೆದುಕೊಳ್ಳುವುದು ಮಾತ್ರ ಅವರನ್ನು ʼಸುರಕ್ಷಿತಸ್ಥಾನʼದಲ್ಲಿರುವಂತೆ ನೋಡಿಕೊಳ್ಳುತ್ತದೆ. ಮುಖ್ಯಶಿಕ್ಷಕರು ಮೊಮೊದಲ್ಲಿ ತಿಳಿಸುವ ಮೇಲೆ ಹೇಳಿದ ಯಾವ ಸೂಚನೆಗಳಿಗೂ ಕಾನೂನಿನ ಅಡಿ ಕವಡೆಕಾಸಿನ ಕಿಮ್ಮತ್ತೂ ದೊರೆಯುವುದು ಕಷ್ಟ. ಅವನ್ನು ಹೇಳಲು ಅವರಿಗೆ ಅಧಿಕಾರವೂ ಇರುವುದಿಲ್ಲ. ಆದರೆ ಇಂತಹ ಮುಖ್ಯಶಿಕ್ಷಕರ ಬಾಯಿಯಿಂದ ಪದೇ ಪದೇ ಬರುವ, ಬಳಸಿ ಬಳಸಿ ಸವೆದುಹೋದ ಒಂದು ಮಾತೆಂದರೆ, ʼರಜೆ ನೌಕರನ ಹಕ್ಕಲ್ಲ. ಅದನ್ನು ಮಂಜೂರು ಮಾಡದೇ ನಿರಾಕರಿಸಬಹುದು. ಮತ್ತು ಮಂಜೂರು ಮಾಡಿದ್ದರೂ ಮಂಜೂರಾತಿಯನ್ನು ರದ್ದುಮಾಡಬಹುದುʼ ಎಂಬುದು. ಆದರೆ ಈ ಕಾನೂನಿನ ಅಂಶ ಇವರನ್ನು ಕಷ್ಟಕಾಲದಲ್ಲಿ ಕಾಪಾಡುವುದು ಕಷ್ಟ. ಏಕೆಂದರೆ ರಜೆಯನ್ನು ಹೇಗೆಬೇಕೋ ಹಾಗೆ ಮಂಜೂರು ಮಾಡಲು ಹೇಗೆ ಬರುವುದಿಲ್ಲವೋ ಹಾಗೆಯೇ ರಜೆಯನ್ನು ನಿರಾಕರಿಸುವುದನ್ನೂ ಹೇಗೆಬೇಕೋ ಹಾಗೆ ಮಾಡಲು ಬರುವುದಿಲ್ಲ.

ಇವರು ಹೇಳುವಂತೆ ಒಬ್ಬ ಶಿಕ್ಷಕ ಅಗತ್ಯವಿಲ್ಲದಿದ್ದರೂ ಬೇಗಬೇಗ ಏಕೆ ರಜೆ ಹಾಕಬೇಕು? ತನಗೇನೂ ಕೆಲಸವಿಲ್ಲದಿದ್ದರೂ ಶಾಲೆಯ ಮಕ್ಕಳಿಗೆ ಪಾಠಮಾಡುವ ಕೆಲಸವನ್ನು ಬಿಟ್ಟು ರಜೆಹಾಕಿ ಬೀದಿನಾಯಿಯಂತೆ ಸುಮ್ಮನೆ ತಿರುಗಾಡಲು ಹೋಗಬೇಕೆ? ಒಬ್ಬ ಶಿಕ್ಷಕನಿಗೋ ಶಿಕ್ಷಕಿಗೋ ಅಕ್ಟೋಬರ್‌ ತಿಂಗಳವರೆಗೂ ಯಾವುದೇ ರಜೆ ಅಗತ್ಯ ಬೀಳದಿರಬಹುದು. ಅವರು ನವೆಂಬರ್‌ ಡಿಸೆಂಬರ್‌ ನಲ್ಲಿ ಅಗತ್ಯಾನುಸಾರ ನಾಲ್ಕೈದು ದಿನ ರಜೆ ಕೇಳಿದರೆ ತಪ್ಪಾಗುತ್ತದೆಯೇ? ಆಗುವುದಿಲ್ಲ. ರಜೆ ಶಿಕ್ಷಕರ ಹಕ್ಕಲ್ಲದಿರಬಹುದು. ಆದರೆ ಅದು ಒಂದು ಸೌಲಭ್ಯ. ಅರ್ಹ ವ್ಯಕ್ತಿಯು ನಿಯಮಾನುಸಾರ ಕೇಳುವ ಸೌಲಭ್ಯವನ್ನು ನಿರಾಕರಿಸುವುದೂ ಕೂಡ ಅನೇಕ ಸಂದರ್ಭಗಳಲ್ಲಿ ಅಪರಾಧವಗುತ್ತದೆ.  ಈ ತಿಳಿವಳಿಕೆ ಎಲ್ಲ ಮುಖ್ಯಶಿಕ್ಷಕರಿಗೆ ಇರುವುದು ಸೂಕ್ತ.

ಹೀಗೊಂದು ಪ್ರಕರಣ.....

ನಮ್ಮ ರಜೆ ನೀಡಿಕೆಯಲ್ಲಿ ಅನೇಕ ಲೋಪಗಳಿವೆ.  (ಈ ಬಗ್ಗೆ ವಿವರವಾಗಿ ಬೇರೆಕಡೆ ಬರೆಯಲಾಗುವುದು) ಉದಾಹರಣೆಗೆಂದು ಇಲ್ಲಿ ಒಂದು ಪ್ರಕರಣವನ್ನು ಮಾತ್ರ ನೀಡುತ್ತಿರುವೆ. ಪ್ರೌಢಶಾಲೆಯೊಂದರಲ್ಲಿ ಏಳು ಜನ ಶಿಕ್ಷಕರಿದ್ದಾರೆ. ಅವರಲ್ಲಿ ಒಬ್ಬ ಶಿಕ್ಷಕಿಗೆ ಹದಿನಾರು ವರ್ಷದ ಮಗುವೊಂದಿದೆ. ಆ ಮಗು ಬೆಂಗಳೂರಿನಲ್ಲಿಯೋ ಮೈಸೂರಿನಲ್ಲಿಯೋ ಒಂದು ರೆಸಿಡೆನ್ಸಿಯಲ್‌ ಸ್ಕೂಲಿನಲ್ಲಿದ್ದು ಶಾಲೆಗೆ ಹೋಗುತ್ತಿದೆ. ಮಗು ಆರೋಗ್ಯವಾಗಿದ್ದು ಎಂದಿನಂತೆ ಶಾಲೆಗೆ ಹೋಗಿಬರುತ್ತಿದೆ.  ಆ ಮಗುವಿಗೆ ಯಾವುದೇ ಆರೈಕೆಯ ಅಗತ್ಯವಿಲ್ಲದಿದ್ದರೂ, ರಾಜ್ಯದ ಇನ್ಯಾವುದೋ ಊರಲ್ಲಿ ವಾಸವಿರುವ ಆ ಮಗುವಿನ ತಾಯಿಯಾಗಿರುವ ಈ ಶಿಕ್ಷಕಿ ಹದಿನೈದು ದಿನ ʼಶಿಶುಪಾಲನಾ ರಜೆ ಪಡೆದುʼ ಆ ಮಗುವಿನ ಆರೈಕೆ ಮಾಡುವುದಿರಲಿ, ಮುಖವನ್ನೂ ನೋಡದೆ , ಬಂಧು ಬಳಗದವರ ಮದುವೆ ಮನೆ, ಗೃಹಪ್ರವೇಶ, ಇತ್ಯಾದಿ ತಿರುಗಾಡಿ ಹದಿನೈದು ದಿನದ ನಂತರ ಶಾಲೆಗೆ ಮರಳಿ ಬಂದಿದ್ದಾಳೆ. ಮುಖ್ಯಶಿಕ್ಷಕರಿಗೆ ಇದೂ ಗೊತ್ತಿದ್ದರೂ ಏನೂ ಚಕಾರವೆತ್ತದೆ ಆಕೆಗೆ ರಜೆ ದೊರೆಯುವಂತೆ ಮಾಡಿದ್ದಾರೆ. ಅದೇ ಶಾಲೆಯ ಇನ್ನೊಬ್ಬ ಶಿಕ್ಷಕ ತನ್ನ ತಂದೆಗೆ ಆಪರೇಷನ್‌ ಮಾಡಿಸಿದ್ದಾನೆ. ಆತನ ತಂದೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ʼಆಸ್ಪತ್ರೆಯಲ್ಲಿ ಇರುವವರು ಯಾರೂ ಇಲ್ಲ ನನ್ನ ತಂದೆಯ ಆರೈಕೆ ಮಾಡಬೇಕು ನಾಲ್ಕುದಿನ ಸಾಂದರ್ಭಿಕ ರಜೆ ಕೊಡಿʼ ಎಂದು ಆ ಶಿಕ್ಷಕ ಮನವಿ ಸಲ್ಲಿಸಿದರೆ ಆ ಶಿಕ್ಷಕನ ಖಾತೆಯಲ್ಲಿ ಸಾಕಷ್ಟು ರಜೆಗಳಿದ್ದರೂ, ಶಾಲೆ ನಡೆಸಲು ಬೇಕಾದ ಕನಿಷ್ಠ ಸಿಬ್ಬಂದಿ ಇದ್ದರೂ, ಮುಖ್ಯಶಿಕ್ಷಕ ʼಮೇಲಧಿಕಾರಿಗಳು ಒಂದು ಅಥವಾ ಎರಡು ರಜೆ ಮಾತ್ರ ಕೊಡಿ ಎಂದು ಹೇಳಿದ್ದಾರೆʼ ಎಂದು ರಜೆ ಕೊಡಲು ನಿರಾಕರಿಸಿದ್ದಾರೆ!

ಈ ಪ್ರಕರಣವನ್ನು ತುಸು ವಿಸ್ತರಿಸಿಕೊಳ್ಳೋಣ.  ಅಕಸ್ಮಾತ್‌ ಆ ಶಿಕ್ಷಕನ ತಂದೆ ಸರಿಯಾದ ಆರೈಕೆಯಿಲ್ಲದೆ ಮರಣವನ್ನಪ್ಪಿದ್ದರೆ, ಮತ್ತು ಆ ಶಿಕ್ಷಕ ಇದನ್ನು ಗಂಭೀರವಾಗಿ ತೆಗೆದುಕೊಂಡು ಮುಂದುವರೆದಿದ್ದರೆ ಏನಾಗುತ್ತಿತ್ತು? ಆ ಶಿಕ್ಷಕ, “ಮುಖ್ಯಶಿಕ್ಷಕರು ಉದ್ದೇಶಪೂರ್ವಕವಾಗಿ ನನಗೆ ರಜೆ ನಿರಾಕರಣೆಮಾಡಿದ್ದರಿಂದಲೇ ನಾನು ನನ್ನ ತಂದೆಯನ್ನು ಕಳೆದುಕೊಳ್ಳಬೇಕಾಯಿತು. ಇದರಿಂದ ನನ್ನ ಕುಟುಂಬಕ್ಕೆ ಅತ್ಯಂತ ದೊಡ್ಡ ನಷ್ಟವಾಗಿದೆ ಇದಕ್ಕೆ ನನಗೆ ನ್ಯಾಯಯುತ ಪರಿಹಾರ ಬೇಕು” ಎಂದು ಸಂಬಂಧಪಟ್ಟ ಪ್ರಾಧಿಕಾರಕ್ಕೆ ದೂರಸಲ್ಲಿಸಿ ಮುಖ್ಯಶಿಕ್ಷಕರನ್ನು ಆರೋಪಿಯನ್ನಾಗಿಸಿ ಕಟಕಟೆಗೆ ಎಳೆಯಬಹುದಿತ್ತು. ಆಗ ಮುಖ್ಯಶಿಕ್ಷಕರು ಕೋರ್ಟಿಗೆ ಹೋಗಿ ಆತನಿಗೆ ರಜೆ ನಿರಾಕರಿಸಲು ಶಾಲೆಯಲ್ಲಿದ್ದ ʻಗಂಭೀರʼ ಕಾರಣಗಳನ್ನು ನೀಡಬೇಕಾಗುತ್ತಿತ್ತು. ಮೇಲಧಿಕಾರಿಗಳು ಸೂಚನೆ ನೀಡಿದ್ದು, ಶಾಲೆಯಲ್ಲಿ ಪಾಠಗಳು ಹಿಂದುಳಿದದ್ದು, ಮಕ್ಕಳು ಕಲಿಕೆಯಲ್ಲಿ ಹಿಂದಿರುವುದು, ಇವು ಯಾವೂ ʻಗಂಭೀರʼ ಕಾರಣಗಳ ವ್ಯಾಪ್ತಿಯಲ್ಲಿ ಬಂದು ಮುಖ್ಯಶಿಕ್ಷಕರನ್ನು ಉಳಿಸಲಾರವು. ಅಂತಹ ಸಂದರ್ಭದಲ್ಲಿ ರಜೆಕೊಡಬೇಡಿ ಎಂದು ಸೂಚಿಸಿದವರು ಇವರ ನೆರವಿಗೆ ಬರಲಾರರು. ಏಕೆಂದರೆ ಮುಳುಗುವವರನ್ನು ಉಳಿಸಲು ಹೋಗಿ ನಾವೂ ಮುಳುಗಬಹುದು ಎಂಬುದು ಅಂಥವರಿಗೆ ಸರಿಯಾಗಿಯೇ ತಿಳಿದಿರುತ್ತದೆ. ಆಗ ಮುಖ್ಯಶಿಕ್ಷಕರು ಕಾನೂನಿನ ಪ್ರಕಾರ ಅಪರಾಧಿಯಾಗುವ ಮತ್ತು ಅದಕ್ಕೆ ಅನುಗುಣವಾದ ಶಿಕ್ಷೆಯನ್ನು ಅನುಭವಿಸುವ ಸ್ಥಿತಿಯನ್ನು ತಂದುಕೊಳ್ಳಬಹುದು.

ರಜೆ ನೀಡಿಕೆ ಮತ್ತು ನಿರಾಕರಣೆ....

ಈ ಹಿನ್ನಲೆಯಲ್ಲಿ ನಮ್ಮ ಮುಖ್ಯಶಿಕ್ಷಕರು ತಮ್ಮ ವಿವೇಚನೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಎಲ್ಲ ಇಲಾಖೆಗಳಲ್ಲಿಯೂ ಕೆಲಸದ ಒತ್ತಡಗಳು, ಸಮಸ್ಯೆಗಳು ಇದ್ದೇ ಇರುತ್ತವೆ. ಅವೆಲ್ಲವನ್ನು ಹೇಳುತ್ತಾ ಕುಳಿತರೆ ಯಾವ ನೌಕರನಿಗೂ ರಜೆ ಕೊಡಲು ಆಗುವುದೇ ಇಲ್ಲ! ಇವುಗಳ ಮಧ್ಯೆಯೇ ನೌಕರರ ವೈಯಕ್ತಿಕ ಸಮಸ್ಯೆಗಳಿಗೂ ಗಮನಕೊಡಲೆಂದೇ ಈ ರಜೆಗಳ ಸೌಲಭ್ಯವನ್ನು ಮಾಡಲಾಗಿರುತ್ತದೆ. ಅದರಂತೆ ಶಾಲೆ ಕಾಲೇಜುಗಳಲ್ಲಿಯೂ ಅನೇಕ ಸಮಸ್ಯೆಗಳಿದ್ದು ಅವುಗಳ ಮಧ್ಯೆಯೇ ಶಿಕ್ಷಕರ ಸಮಸ್ಯೆಗಳಿಗೂ ಕಾನೂನಿನ ವ್ಯಾಪ್ತಿಯಲ್ಲಿ ಸಹಾಯಮಾಡುವ ಜವಾಬ್ದಾರಿ ಮುಖ್ಯಶಿಕ್ಷಕರದ್ದಾಗಿರುತ್ತದೆ. ಈ ವಿಷಯದಲ್ಲಿ ರಜೆ ನೀಡುವ ಅಥವಾ ನಿರಾಕರಿಸುವ ಸಂಪೂರ್ಣ ಅಧಿಕಾರ ತಮ್ಮದೇ ಆಗಿರುತ್ತದೆ. ಮತ್ತು ಅದರ ಉತ್ತರದಾಯಿತ್ವ ಕೂಡ ತಮ್ಮದೇ ಆಗಿರುತ್ತದೆ ಎಂಬುದನ್ನು ಮುಖ್ಯಶಿಕ್ಷಕರು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳದಿದ್ದರೆ ಅದು ಅವರಿಗೇ ನಷ್ಟವನ್ನುಂಟುಮಾಡುತ್ತದೆ.

ಈ ಬಗ್ಗೆ ಮೇಲಧಿಕಾರಿಗಳು ಹೇಳುವುದಾಗಲೀ ಇವರು ಕೇಳುವುದಾಗಲೀ ಏನೂ ಇರುವುದಿಲ್ಲ. ರಜೆಯನ್ನು ಮಂಜೂರು ಮಾಡುವ ಮೊದಲು ಏನನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬ ಬಗ್ಗೆ ಅವರಿಗೆ ಗೊತ್ತಿರಬೇಕು ಮತ್ತು ಅದರಂತೆಯೇ ಅವರು ನಡೆದುಕೊಳ್ಳಬೇಕು. ರಜೆಯನ್ನುಎಂತಹ ಸಂದರ್ಭದಲ್ಲಿ ಅವರು ನಿರಾಕರಿಸಬಹುದು? ಮುಖ್ಯವಾಗಿ ಎರಡು ಕಾರಣಗಳಿಗೆ ಅವರು ರಜೆಯನ್ನು ನಿರಾಕರಿಸಬಹುದೆಂದು ತೋರುತ್ತದೆ. ಒಂದು: ರಜೆಯನ್ನು ಕೇಳಿದ ಕಾರಣವು ಕಾನೂನಿಗೆ ವಿರುದ್ಧವಾಗಿದ್ದಾಗ. ಅಂದರೆ ಒಬ್ಬ ಶಿಕ್ಷಕ, ʻನನಗೆ ಇಂತಹ ಅಧಿಕಾರಿ ಎಸ್‌ ಎಸ್‌ ಎಲ್‌ ಸಿ ಫಲಿತಾಂಶ ಹೆಚ್ಚು ಬರಲೇ ಬೇಕೆಂದು ಪದೇ ಪದೇ ತಲೆತಿನ್ನುವ ಮೂಲಕ ಬಹಳ ಕಿರುಕುಳ ಕೊಡುತ್ತಿದ್ದಾರೆ. ನಾನು ಅವರನ್ನು ಕೊಂದು ಬರಬೇಕಾಗಿದೆ ಅಥವಾ ಅವರ ಕಛೇರಿಗೆ ಬೆಂಕಿಹಚ್ಚಿಬರಬೇಕಾಗಿದೆ. ಅದಕ್ಕಾಗಿ ಶಾಲೆಗೆ ಬರಲು ಸಾ‍‍ಧ್ಯವಾಗುತ್ತಿಲ್ಲ. ದಯವಿಟ್ಟು ಅದಕ್ಕಾಗಿ ಒಂದು ದಿನ ಸಾಂದರ್ಭಿಕ ರಜೆ ಮಂಜೂರು ಮಾಡಬೇಕಾಗಿ ವಿನಂತಿʼ ಎಂದು ಕೇಳಿಕೊಂಡಾಗ ಆ ರಜಾ ಅರ್ಜಿಯನ್ನು ಮುಖ್ಯಶಿಕ್ಷಕರು ತಿರಸ್ಕರಿಸಬೇಕಾಗುತ್ತದೆ. ಏಕೆಂದರೆ ಕೊಲೆಮಾಡುವುದು ಅಥವಾ ಬೆಂಕಿಹಚ್ಚುವುದು ಅಪರಾಧಿ ಚಟುವಟಿಕೆಗಳಾಗುತ್ತದೆ ಮತ್ತು ಅಂತಹ ಕಾರಣಕ್ಕೆ. ರಜೆ ನೀಡಿದರೆ ಮುಖ್ಯಶಿಕ್ಷಕರು ಅಪರಾಧಕ್ಕೆ ಸಹಾಯ ಮಾಡಿದಂತಾಗಿ ಅವರೂ ಅಪರಾಧಿಯಾಗುವ ಸಾಧ್ಯತೆ ಇದ್ದೇ ಇರುತ್ತದೆ.

ಇನ್ನೊಂದು ಆಡಳಿತಾತ್ಮಕ ಕಾರಣ: ಅದು ಶಾಲೆ ʼಕೆಲಸದ ದಿನʼವೆಂದು ಪರಿಗಣಿಸಲು ಬೇಕಾದ ಕನಿಷ್ಟ ಸಿಬ್ಬಂದಿಯ ಕೊರತೆ ಉಂಟಾದಾಗ. ಅಂದರೆ ಏಕ ಕಾಲಕ್ಕೆ ಅನೇಕರು ರಜೆ ಕೇಳಿದಾಗ ಅವರಲ್ಲಿ ಕೆಲವರಿಗೆ ರಜೆಯನ್ನು ಮುಖ್ಯಶಿಕ್ಷಕರು ನಿರಾಕರಿಸಬೇಕಾಗುತ್ತದೆ.  ಅಂತಹ ಸಂದರ್ಭದಲ್ಲಿ ಯಾರಿಗೆ ಮಂಜೂರು ಮಾಡಬೇಕು ಏಕೆ ಮಂಜೂರು ಮಾಡಬೇಕು, ಯಾರಿಗೆ ನಿರಾಕರಿಸಬೇಕು ಮತ್ತು ಏಕೆ ನಿರಾಕರಿಸಬೇಕು ಎಂಬುದನ್ನು ತಮ್ಮ ಹಂತದಲ್ಲಿಯೇ ಅವರು ವಿವೇಚನಾಯುಕ್ತವಾಗಿ ನಿರ್ಧರಿಸಬೇಕಾಗುತ್ತದೆ. ಈ ಕೆಲಸವನ್ನು ಬಹುತೇಕ ಎಲ್ಲ ಮುಖ್ಯಶಿಕ್ಷಕರೂ ಮಾಡುತ್ತಲೇ ಬಂದಿದ್ದಾರೆ.

ಗಂಭೀರ ಕಾರಣ ಮತ್ತು ಗಂಭೀರ ಪರಿಣಾಮ

ಮೇಲೆ ತಿಳಿಸಲಾದ ಎರಡೂ ನಿರಾಕರಣೆಗಳು ನಿಯಮಬದ್ಧ ನಿರಾಕರಣೆಗಳೇ ಆಗುತ್ತವೆ.  ಇವೆರಡೂ ಕಾರಣಗಳಿಲ್ಲದೆ ಬೇರೆ ಯಾವುದೋ ಸಣ್ಣಪುಟ್ಟ ಕಾರಣಗಳನ್ನು ನೀಡಿ ಶಿಕ್ಷಕರಿಗೆ ರಜೆಯನ್ನು  ನಿರಾಕರಿಸುವಾಗ ಮುಖ್ಯಶಿಕ್ಷಕರು ಹತ್ತುಬಾರಿ ವಿಚಾರಿಸಿ ಹೆಜ್ಜೆಯಿಡಬೇಕಾಗುತ್ತದೆ.  ಈ ಹಿನ್ನಲೆಯಲ್ಲಿ ಯಾರೂ ಏನೇ ಹೇಳಲಿ ಎಸ್‌ ಎಸ್‌ ಎಲ್‌ ಸಿ ಫಲಿತಾಂಶಕ್ಕೂ ಶಿಕ್ಷಕರು ನಿಯಮಬದ್ಧವಾಗಿ ಪಡೆಯುವ ಸೌಲಭ್ಯಕ್ಕೂ ತಳುಕುಹಾಕುವುದನ್ನು ಮೊದಲು ಮುಖ್ಯಶಿಕ್ಷಕರು ಬಿಡಬೇಕು. ಒಬ್ಬ ಶಿಕ್ಷಕ ಅಥವಾ ಶಿಕ್ಷಕಿಯ ಬೋಧನಾ ವಿಷಯದಲ್ಲಿ ಅತ್ಯಂತ ಕಳಪೆ ಫಲಿತಾಂಶ ಬಂದಾಗ, ಆ ಬಗ್ಗೆ ಪರಿಶೀಲನೆ ನಡೆಸಬೇಕು. ಆ ಕಳಪೆ ಫಲಿತಾಂಶಕ್ಕೆ ಆ ಶಿಕ್ಷಕ ಅಥವಾ ಆ ಶಿಕ್ಷಕಿಯ ಬೊಧನೆಯೇ ಕಾರಣ ಎಂಬುದು ಸಾಬೀತಾದರೆ (ಇದನ್ನು ಸಾಬೀತು ಮಾಡುವುದು ಅಷ್ಟು ಸುಲಭವಲ್ಲ!) ಅವರ ಮೇಲೆ ಅಗತ್ಯ ಕಾನೂನು ಕ್ರಮ, ಶಿಸ್ತುಕ್ರಮ ಜರುಗಿಸಬಹುದಾಗಿದೆ. ಆದರೆ ಅದಕ್ಕಾಗಿ ಅವರ ನಿಯಮಬದ್ಧ ರಜೆಯನ್ನು ನಿರಾಕರಿಸುವುದು ಶಾಲಾಪರಿಸರವನ್ನು ಹಾಳುಮಾಡುವ ಮತ್ತು ಅನಗತ್ಯವಾಗಿ ಸಿಬ್ಬಂದಿ ಸಂಬಂಧವನ್ನು ಕೆಡಿಸುವ ಕ್ರಮವಾಗಿ ಮಕ್ಕಳ ಕಲಿಕೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಎಲ್ಲ ಮುಖ್ಯಶಿಕ್ಷಕರು ಅರ್ಥಮಾಡಿಕೊಳ್ಳಬೇಕು.  



ನನಗೆ ಇರುವ ಅಲ್ಪ ತಿಳಿವಳಿಕೆ ಮೇರೆಗೆ ಹೇಳುವುದಾದರೆ ಒಬ್ಬ ಶಿಕ್ಷಕ ಅಥವಾ ಶಿಕ್ಷಕಿಗೆ ನಿರಂತರವಾಗಿ ಏಳು ದಿನ ಸಾಂದರ್ಭಿಕ ರಜೆ (ಮಧ್ಯೆ ಮಧ್ಯೆ ಸರ್ಕಾರಿ ರಜೆ ಬಂದರೆ ಒಟ್ಟಾರೆ ರಜೆಗಳ ದಿನ ಹತ್ತನ್ನು ಮೀರದಂತೆ) ನೀಡಬಹುದು ಎಂದು ಕಾಣುತ್ತದೆ!  ಅವರು ಕೇಳಿದಷ್ಟು ರಜೆಯನ್ನು ನಿಯಮಾನುಸಾರ ಮಂಜೂರು ಮಾಡಲು ಅವಕಾಶವಿದ್ದರೆ ಅವರಿಗೆ ನೀಡುವುದೇ ಸಕ್ರಮ. ಉಳಿದೆಲ್ಲವೂ ಅಕ್ರಮ!  ಒತ್ತಡಗಳು ಒಂದು ಹಂತದವರೆಗೆ ಒಳ್ಳೆಯ ಪರಿಣಾಮವನ್ನು ಬೀರಬಹುದು. ಆದರೆ ಆ ಹಂತ ಮೀರಿದ ಒತ್ತಡಗಳು ನಕಾರಾತ್ಮಕ ಪರಿಣಾಮವನ್ನು ಬೀರತೊಡಗುತ್ತವೆ. ಮೇಲಧಿಕಾರಿಗಳು ಮತ್ತು ಮುಖ್ಯಶಿಕ್ಷಕರ ಒತ್ತಡ ತಾಳಿಕೊಳ್ಳಲು ಆಗದಷ್ಟು ಮಿತಿಮೀರಿದಾಗ ನಮ್ಮ ಶಿಕ್ಷಕರ ಮುಂದೆ ಎರಡೇ ಆಯ್ಕೆಗಳು ಉಳಿಯುತ್ತವೆ. ಒಂದು ಆತ್ಮಹತ್ಯೆ ಮಾಡಿಕೊಳ್ಳುವುದು. ಇನ್ನೊಂದು ವ್ಯವಸ್ಥೆಯ ವಿರುದ್ಧ ಸಾಮೂಹಿಕವಾಗಿ ಬಂಡೆದ್ದು ಪ್ರತಿಭಟಿಸುವುದು. ಯಾವ ಶಿಕ್ಷಕರು ಯಾವ ಸಂದರ್ಭದಲ್ಲಿ ಯಾವ ಆಯ್ಕೆಯನ್ನು ಮಾಡಿಕೊಳ್ಳುತ್ತಾರೆ ಎಂದು ಹೇಳುವುದು ಕಷ್ಟ. ಆದರೆ ಅವರು ಯಾವುದನ್ನು ಆಯ್ಕೆಮಾಡಿಕೊಂಡರೂ ಅದು ಒಳ್ಳೆಯ ವ್ಯವಸ್ಥೆಗೆ ಒಂದು ಕಪ್ಪುಚುಕ್ಕೆಯೇ ಎಂಬುದಂಥೂ ನಿಜ. ಗಂಭೀರ ಕಾರಣಗಳಿಲ್ಲದೆ ರಜಾ ನಿರಾಕರಣೆ ಮುಖ್ಯಶಿಕ್ಷಕರಿಗೆ ಮಾತ್ರವಲ್ಲ ಇಡೀ ವ್ಯವಸ್ಥೆಗೆ ಗಂಭೀರ  ಸಮಸ್ಯೆಯನ್ನೇ ತರಬಹುದು ಎಂಬ ಎಚ್ಚರಿಗೆ  ಸಂಬಂಧಪಟ್ಟ ಎಲ್ಲರಿಗೂ ಇರುವುದು ಎಲ್ಲರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಹಾಗಾಗಲಿ ಎಂದು ಆಶಿಸೋಣ.

*******

ಡಾ. ರಾಜೇಂದ್ರ ಬುರಡಿಕಟ್ಟಿ

buradikatti@gmail.com

೧೦-೧೧-೨೦೨೪

No comments:

Post a Comment