Sunday, November 17, 2024

ಒತ್ತಿಮಾಡುವ ಹಣ್ಣು ಮತ್ತು ದೇವರ ಅಂಕಿ ದರ್ಬಾರು

ಒತ್ತಿಮಾಡುವ ಹಣ್ಣು ಮತ್ತು  ದೇವರ ಅಂಕಿ ದರ್ಬಾರು

(ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಗಳ ಫಲಿತಾಂಶ ವಿಶ್ಲೇಷಣೆ ಕುರಿತ ಲೇಖನ)


ಆ ದಿನ ದೀಪಾವಳಿ ಹಬ್ಬ. ಗೆಳೆಯನೊಬ್ಬನ ಮನೆಗೆ ಊಟಕ್ಕೆ ಕರೆದಿದ್ದರು. ಮಧ್ಯಾಹ್ನ ಊಟಕ್ಕೆಂದು ಅವರ ಮೆನಗೆ ಹೋದೆ.  ನಾನು ಹೋದಾಗ ಗೆಳೆಯನ ಹೆಂಡತಿ ಅವಸರ ಅವಸರವಾಗಿ ಅಡುಗೆ ಮಾಡುತ್ತಿದ್ದಳು. ಹಾಗೇ ಹಾಲಿನಲ್ಲಿ ನಾನು ಕುಳಿತುಕೊಳ್ಳಲು ಹೊರಡುವಾಗ ಬಾಗಿಲು ತೆರೆದಿದ್ದ ಅವರ ಬೆಡ್‌ ರೂಮಿನ ಕಾಟಿನ ಮೇಲೆಲ್ಲ ಮಕ್ಕಳ ಉತ್ತರ ಪತ್ರಿಕೆಗಳು ಎಂಥೆಂಥದೋ ಅಡ್ಡ ಉದ್ದ ಗೆರೆಹಾಕಿದ ಹಾಳೆಗಳು ರಫ್ಪಾಗಿ ಲೆಕ್ಕ ಮಾಡಿದ್ದ ಹಾಳೆಗಳು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದದ್ದು ಕಣ್ಣಿಗೆ ಬಿತ್ತು. ಗೆಳೆಯನ ಜೊತೆಗೆ ಆತನ ಹೆಂಡತಿಯೂ ನನಗೆ ಪರಿಚಯಸ್ಥಳೆ. ಆಕೆ ಅಲ್ಲಿ  ಯಾವುದೋ ಹೈಸ್ಕೂಲಿನಲ್ಲಿ ಶಿಕ್ಷಕಿಯಾಗಿದ್ದಳು. ಇದುವರೆಗೂ  ಮಕ್ಕಳ ಉತ್ತರ ಪತ್ರಿಕೆಗಳನ್ನು ವ್ಯಾಲ್ಯುವೇಶನ್‌ ಮಾಡುತ್ತಾ ಕೂತು ಗಂಡ ಜೋರು ಮಾಡಿದ ಮೇಲೆ ಈಗ ಅಡುಗೆ ಮನೆಗೆ ಹೋಗಿ ಅವಸರದಿಂದ ಅಡುಗೆ ಮಾಡುತ್ತಿರುವುದರಿಂದ ಪಾತ್ರೆಗಳ ಸಪ್ಪಳ ಒಂದಿಷ್ಟು ಹೆಚ್ಚೇ ಇದೆ ಎಂದು ಅರ್ಥಮಾಡಿಕೊಳ್ಳಲು ನನಗೆ ಬಹಳ ಸಮಯ ಬೇಕಾಗಲಿಲ್ಲ.

ಊಟ ಮಾಡುವಾಗ  ನಾನು ಸುಮ್ಮನೆ ʼಏಕೆ ಶಾಲೆಯಲ್ಲಿ ಟೈಮು ಸಿಗಲ್ವೆ? ರೂಮಿನ ತುಂಬಾ ಪೇಪರ್‌ ಬಿದ್ದಿವೆಯಲ್ಲ. ಎಂದು ಕೇಳಿದೆ. ನಾನು ಕೇಳಿದ್ದು ಅವಳಿಗಾದರೂ ಅವಳ ಗಂಡನೇ ಮುಂದಾಗಿ “ಇವಳುದ್ದು ಏನು ಶಾಲೆಯೋ, ಏನು ಡಿಪಾರ್ಮೆಂಟೋ ಯಾವಾಗ ನೋಡಿದ್ರೂ ಶಾಲೆಯಿಂದ  ಮೂಟೆ ಹೊತ್ತಕೊಂಡು ಬಂದು ಬರೀತಿರ್ತಾಳೆ.  ಪರೀಕ್ಷೆ ಇವಳ ಮಕ್ಕಳು ಬರೆಯೋದೋ ಅಥವಾ ಇವಳೇ  ಬರೆಯೋದ ಗೊತ್ತಿಲ್ಲ ನೋಡುʼ ಎಂದು  ಗೊಣಗಿಕೊಂಡ.ʼ ಅದಕ್ಕೆ ಮಾತು ಕೂಡಿಸಿದ ಆಕೆ, ʼಮೊದಮೊದಲು ಹಿಂಗೆಲ್ಲ ಇರ್ಲಿಲ್ಲ ಸರ್.‌ ಈಗ ಅದೇನು ಜೀವ ತಿಂತಾರ ಅಂತ ಹೇಳ್ಲಿಕ್ಕೆ ಆಗಲ್ಲ ನೋಡಿ. ದಿನ ಬೆಳಗಾದರೆ ಅದನ್ನ ಮಾಡಿ ಇದನ್ನ ಮಾಡಿ, ಹಂಗ ಮಾಡಿ ಹಿಂಗ ಮಾಡಿ ಅಂತ ಹೇಳ್ತಾನೆ ಇರ್ತಾರೆ. ನಮ್ಮನ್ನ ಕೆಲಸ ಮಾಡಕ್ಕೆ ಬಿಡಲ್ಲ. ಈಗಿನ್ನು ಎಕ್ಸಾಮ್‌ ಮುಗ್ದು ಎರಡು ದಿನಾನು ಆಗಿಲ್ಲ. ಆಗ್ಲೆ ಆ ವಿ‍ಶ್ಲೇಷಣೆ ಮಾಡಿಕೊಡಿ ಈ ವಿಶ್ಲೇಷಣೆ ಮಾಡಿಕೊಡಿ ಎಂದು ನಿನ್ನೆಯಿಂದಲೇ ತಲೆ ತಿಂತಿದಾರೆ. ಅದಕ್ಕೆ ಪೇಪರ್‌ ಮನೀಗೆ ಹೊತ್ಕಂಡ್‌ ಬಂದು ವ್ಯಾಲುವೇಶನ್‌ ಮಾಡ್ತಿದ್ದೆ. ಅವಕ್ಕೇನು ಹೆಂಡ್ರು ಮಕ್ಳು ಮನಿ ಮಠ ಇದವೋ ಇಲ್ಲವೋ, ವರ್ಷಕ್ಕೊಂದು ಸಲಿ ಬರೋ ದೀಪಾವಳಿ ಹಬ್ಬದಲ್ಲಿ ಒಂದು ಸ್ನಾನಮಾಡಿ ದೇವರಿಗೆ ದೀಪ ಹಚ್ಚಿ ನೆಮ್ಮದಿಯಿಂದ ಒಂದು ಊಟ ಮಾಡ್ಲಿಕ್ಕೂ ಬಿಡಲ್ಲ ಹಾಳಾದೋವು” ಎಂದು ನಮಗೆ ಪಾಯಸ ಹಾಕುತ್ತಾ ಯಾರು ಯಾರಿಗೋ ಹಿಡಿ ಶಾಪವನ್ನೂ ಹಾಕಿದಳು.

ಊಟದ ನಂತರ ನಾನು ಆಕೆ ಮಾಡುತ್ತಿದ್ದ ವಿಶ್ಲೇಷಣೆಯನ್ನೂ ಪ್ರಶ್ನೆಪತ್ರಿಕೆ ಹಾಗೂ ಕೆಲವು ಉತ್ತರ ಪತ್ರಿಕೆಗಳನ್ನೂ ತರಿಸಿಕೊಂಡು ನೋಡಿದೆ. ಮೂಲತಃ ಸಂಶೋಧಕನಾದ ನನಗೆ ವಿಶ್ಲೇಷಣೆಗೆ ಮೂಲವಾದ ದತ್ತಾಂಶ ಶೇಖರಿಸುವ ವಿಧಾನವನ್ನು ನೋಡಿದ ಕೂಡಲೆ ಈ ವಿಶ್ಲೇಷಣೆ ಉಪಯೋಗಕ್ಕೆ ಬರುತ್ತದೆಯೋ ಇಲ್ಲವೋ ಎಂಬುದು ತಿಳಿದುಬಿಡುತ್ತದೆ. ಆಕೆಯ ವಿಶ್ಲೇಷಣೆ ನೋಡಿದ ಕೂಡಲೆ ನನಗೆ ಅದು ಯಾತಕ್ಕೂ ಬರದ ವಿಶ್ಲೇಷಣೆ ಎಂದು ಅನ್ನಿಸಿತು. ಸುಮ್ಮನೆ ಕೇಳಿದೆ, “ಈ ವಿಶ್ಲೇಷಣೆ ನಿಮಗೆ ಹೇಗೆ ಉಪಯೋಗಕ್ಕೆ ಬರುತ್ತದೆ? ಅದನ್ನು ಏಕೆ ಮಾಡಿಕೊಳ್ಳುತ್ತೀರಿ?ʼ .

ʻಅದರಿಂದ ನಮಗೆ ಏನೂ ಉಪಯೋಗವಿಲ್ಲ. ಅದನ್ನು ಮಾಡಿದ ಮೇಲೆ ಕೊಡಬೇಕಾದವರಿಗೆ ಕೊಟ್ಟು ಕೈತೊಳೆದುಕೊಳ್ಳುತ್ತೇವೆ. ನಂತರ ಅದನ್ನು ನಾವು ಮುಟ್ಟುವುದೇ ಇಲ್ಲ.' ಎಂದಳು. ʻಹಾಗಾದರೆ ಮೇಲಿನವರು ಯಾವುದಕ್ಕಾದರೂ ಬಳಸಿಕೊಂಡು ನಿಮಗೆ ಏನಾದರೂ ಹೇಳಿದ್ದಾರೆಯೇ?ʼ ಎಂದು ಕೇಳಿದೆ. ʻಯಾವಳಿಗೆ ಗೊತ್ತು ಸಾರ್? ಇದುವರೆಗೂ ನಾವು ಕಳಿಸಿದ ವಿಶ್ಲೇಷಣೆ ಬಗ್ಗೆ ಯಾರೂ ಏನೂ ಹೇಳಿಲ್ಲ. ತರ್ಸಿಕೊಂಡು ಏನು ಉಪ್ಪಿನಕಾಯಿ ಹಾಕಿಕೊಳ್ತಾವ ಗೊತ್ತಿಲ್ಲʼ ಎಂದಳು. ನಂತರ ಆಕೆ ನಮ್ಮಿಬ್ಬರಿಗೂ ಊಟ ಹಾಕಿ ತಾನೂ ಊಟಮಾಡಿ ಮತ್ತೆ ರೂಮಿನಲ್ಲಿ ಹೋಗಿ ಬರೆಯುವುದು ಕೆರೆಯುವುದು ಮಾಡತೊಡಗಿದಳು. ಅವಳ ಗಂಡನ ಜೊತೆ ಒಂದಿಷ್ಟು ಮಾತಾಡಿ ನಾನು ಮನೆಗೆ ಬಂದೆ.

ಇನ್ನೊಂದು ದಿನ ನಾನು ಟ್ರೈನಿಂಗ್‌ ಒಂದಕ್ಕೆ ಹೋಗಿದ್ದೆ. ಅಂದು ಹಿಂದೆ ನನ್ನ ಪಕ್ಕದ ಕುರ್ಚಿಯಲ್ಲಿ ಕುಳಿತ ಒಬ್ಬ ಶಿಕ್ಷಕ ಒಂದಿಷ್ಟು ಟ್ರೈನಿಂಗ್‌ ಕೇಳುವುದು, ಮಧ್ಯೆಮಧ್ಯೆ ಡೆಸ್ಕಿನ ಕೆಳಗೆ ಕದ್ದುಮುಚ್ಚಿ ಎನೋ ನೋಡುವುದು ಮಾಡುತ್ತಿದ್ದ. ಸಾಮಾನ್ಯವಾಗಿ ಮೊಬೈಲಲ್ಲಿ ಸೆಕ್ಸ್‌ ವಿಡಿಯೋ ನೋಡುವವವರು ಈ ರೀತಿ ಮಾಡುತ್ತಿರುತ್ತಾರೆ. ನಾನು ಕುತೂಹಲಕ್ಕೆ ಅವನೇನು ಮಾಡುತ್ತಿದ್ದಾನೆ ಎಂದು ನೋಡಿದೆ. ಆತ ಅಂಥದ್ದೇನನ್ನೂ ನೋಡುತ್ತಿರಲಿಲ್ಲ. ಬದಲಾಗಿ ಯಾವುದೋ ಉತ್ತರ ಪತ್ರಿಕೆ ಮೇಲೆ ಕೆಂಪು ಪೆನ್ನಿನಿಂದ ಅತ್ತ ಇತ್ತ ಮಾರ್ಕ್‌ ಹಾಕುತ್ತಿದ್ದ.  ಆತನೂ ಕದ್ದುಮುಚ್ಚಿ ʻಮೌಲ್ಶಮಾಪನ ಶಾಸ್ತ್ರʼ ಮಾಡುತ್ತಿದ್ದಾನೆ ಎಂದು ತಿಳಿಯಿತು. “ಯಾಕೆ ಇಲ್ಲಿ ವ್ಯಾಲುವೇಶನ್‌ ಮಾಡ್ತಿದ್ದೀರಿ. ಬಹಳ ಮುಖ್ಯವಾದ ಟ್ರೈನಿಂಗಿಗೆ ಬಂದಿದ್ದೀರಿ. ಇದೆಲ್ಲ ಮಾಡ್ತಾ ಇದ್ರೆ ನಿಮ್ಮ ಟ್ರೈನಿಂಗಿಗೆ ಡಿಸ್ಟರ್ಬ್‌ ಆಗಲ್ವೆ?” ಎಂದು ನಾನು ಸಹಜವಾಗಿ ಕೇಳಿದೆ. ಅದಕ್ಕೆ ಆತ “ಎಂಥ ಮಾಡೋದು ಸಾರ್.‌ ನಮ್ಮ ಹೆಚ್ಚೆಮ್ಮು ನಿನ್ನೆ ರಾತ್ರಿಯಿಂದಲೇ ಫೋನಿನ ಮೇಲೆ ಫೋನ್‌ ಮಾಡಿ ಬೇಗ ವ್ಯಾಲುವೇಶನ್‌ ಮಾಡಿಕೊಡಿ ಅಂತ ತಲೆ ತಿಂತಿದಾನೆ. ಟ್ರೈನಿಂಗಲ್ಲಿ ಇದೀನಿ ಅಂದ್ರೂ ಕೇಳ್ತಿಲ್ಲ. ನೀ ಏನರ ಮಾಡು ನಂಗೊತ್ತಿಲ್ಲ ನಾಳೆ ಒಟ್ಟು ನಂಗೆ ಮಾರ್ಕ್ಸು ಬೇಕೇ ಬೇಕು ಅಂತ ಗಂಡು ಬಿದ್ದಾನ” ಎಂದು ತನ್ನ ಸಮಸ್ಯೆಯನ್ನು ತೋಡಿಕೊಂಡ. ಅವನೂ ಮೌಲ್ಯಮಾಪನ ಮಾಡುತ್ತಿದ್ದುದು ಇದೇ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು!

****

ಎಸ್‌ ಎಸ್‌ ಎಲ್‌ ಸಿ ಇರಲಿ ಅಥವಾ ಇನ್ನಾವುದೋ ತರಗತಿ ಇರಲಿ ಅದರ ಪರೀಕ್ಷೆ, ಅದರ ಮೌಲ್ಯಮಾಪನ ಫಲಿತಾಂಶ ವಿಶ್ಲೇಷಣೆ ಇಷ್ಟೊಂದು ಅರ್ಜೆಂಟಿನಲ್ಲಿ ಮಾಡುವ ಅವಶ್ಯಕತೆ ಏನು? ಒಲೆಯ ಮೇಲೆ ಕೂಸು ಹಾಕಿಬಂದವರ ಹಾಗೆ ಇವರೆಲ್ಲ ಯಾಕೆ ಹೀಗೆ ಅರ್ಜೆಂಟ್‌ ಅರ್ಜೆಂಟ್‌ ಅಂತ ಬಡಬಡಿಸುತ್ತಾರೆ ಇಂತಹ ಮೌಲ್ಯಮಾಪನ ಮತ್ತು ವಿಶ್ಲೇಷಣೆಗಳು ಎಷ್ಟರ ಮಟ್ಟಿಗೆ ಸರಿಯಾಗುತ್ತವೆ ಮತ್ತು ಇವುಗಳ ಫಲಿತಾಂಶ ಎಷ್ಟರಮಟ್ಟಿಗೆ ಒಟ್ಟಾರೆ ವ್ಯವಸ್ಥೆಗೆ ಉಪಯೋಗಕ್ಕೆ ಬರುತ್ತದೆ ಎಂಬುದನ್ನು ಯಾರೂ ಗಂಭೀರವಾಗಿ ಯೋಚಿಸಿದಂತೆ ಕಾಣುವುದಿಲ್ಲ. ಈ ವಿಶ್ಲೇಷಣೆಗೆ ಸಂಬಂಧಪಟ್ಟಂತೆ ನನಗೆ ಎರಡು ಪ್ರಧಾನ ದೋಷಗಳು ಕಂಡುಬಂದವು. ಅವುಗಳನ್ನು ವಿಶ್ಲೇಷಿಸುವುದು ಮತ್ತು ಅವುಗಳಿಗೆ ಏನು ಪರಿಹಾರವಾಗಬಹುದು ಎಂಬುದನ್ನು ಚರ್ಚಿಸುವುದು ಈ ಲೇಖನದ ಉದ್ದೇಶ. ಹೀಗೆ ವಿಶ್ಲೇಷಣೆ ಮಾಡುವ ಈ ಲೇಖನ ವಿಷಯಾಧಾರಿತ ಚರ್ಚೆಗೆ ಒತ್ತು ನೀಡುತ್ತದೆಯಾದರೂ ಮನಮುಟ್ಟುವಂತೆ ಹೇಳಲು ಕೆಲವು ವ್ಯಕ್ತಿ ಉದಾಹರಣೆಗಳನ್ನು ಬಳಸಿಕೊಂಡಿರುವುದು ನಿಜವಾದರೂ ಯಾರನ್ನೇ ಆಗಲಿ ಯಾವುದನ್ನೇ ಆಗಲಿ  ನಿಂದಿಸುವ, ಟೀಕಿಸುವ, ಯಾವ ಉದ್ದೇಶವನ್ನೂ ಹೊಂದಿಲ್ಲವೆಂದೂ, ಆಕಸ್ಮಿಕವಾಗಿ ಇಲ್ಲಿಯ ಯಾರಿಗಾದರೂ ಯಾವುದಕ್ಕಾದರೂ ಹೋಲಿಕೆಯಾದರೆ  ಅದು ಕಾಕತಾಳೀಯವಷ್ಟೇ ಎಂಬುದನ್ನು ಓದುಗರ ಮಮನಕ್ಕೆ ಆರಂಭದಲ್ಲಿಯೇ ತರಬಯಸುತ್ತೇನೆ.

*****

ದೋಷವಿರುವುದು ಎಲ್ಲಿ?

ಈಗ ವಿಷಯಕ್ಕೆ ಬರೋಣ. ನಾನು ಈ ಮೊದಲೇ ತಿಳಿಸಿದಂತೆ ಈ ವಿಶ್ಲೇಷಣೆಯು ಎರಡು ಮುಖ್ಯವಾದ ದೋಷಗಳನ್ನು ಒಳಗೊಂಡಿದೆ ಎಂದೆ. ಅವುಗಳೆಂದರೆ ಒಂದು ವಿಶ್ಲೇಷಣೆಯ ವಿಧಾನದ ಆಯ್ಕೆಯ ದೋಷ. ಎರಡನೆಯದು ಅನವಶ್ಯಕ ಅವಸರ. ಇವೆರಡೂ ಹೇಗೆ ನಿರರ್ಥಕವಾದ ಪ್ರತಿಫಲವನ್ನು ನೀಡುತ್ತವೆ ಎಂಬುದನ್ನು ಈಗ ಒಂದೊಂದಾಗಿ ನೋಡೋಣ.

ಮೊದಲನೆಯದು ವಿಶ್ಲೇಷಣೆಯ ವಿಧಾನದ ದೋಷ. ಈಗಿನ ಎಸ್‌ ಎಸ್‌ ಎಲ್‌ ಸಿ ಪ್ರಶ್ನೆಪತ್ರಿಕೆಯು ಥೀಮ್‌ ಆಧಾರಿತ (Theam Based) ಇದೆ. ಆದರೆ ಶಿಕ್ಷಕರು ಮಾಡುತ್ತಿರುವ ಫಲಿತಾಂಶ ವಿಶ್ಲೇಷಣೆಯು ಪ್ರಶ್ನಾಧಾರಿತ (Question Based) ಇದೆ! ನಾವು ಯಾವ ಆಧಾರದಲ್ಲಿ ಪ್ರಶ್ನೆಪತ್ರಿಕೆ ರಚಿಸುತ್ತೇವೆಯೋ ಅದೇ ಆಧಾರದಲ್ಲಿ ಫಲಿತಾಂಶ ವಿಶ್ಲೇಷಣೆ ಮಾಡುವುದು ಸರಿಯಾದ ಕ್ರಮ. ಆಗ ಮಾತ್ರ ವಿಶ್ಲೇಷಣೆ ಸರಿಯಾಗಿ ಆಗುತ್ತದೆ. ಅದರಿಂದ ದೊರೆಯುವ ಫಲಿತಾಂಶವು ಕೆಲವು ಉಪಯುಕ್ತ ಸಂಗತಿಗಳನ್ನು ಹೊರಹಾಕಿ ಮುಂದಿನ ಬೋಧನಾ ಮತ್ತು ಕಲಿಕಾ ಪ್ರಕ್ರಿಯೆಗೆ ಸಹಾಯ ಮಾಡುತ್ತವೆ. ಇವೆರಡಕ್ಕೂ ಸಂಬಂಧವಿಲ್ಲದಿದ್ದರೆ ಅಂತಹ ಫಲಿತಾಂಶ ವಿಶ್ಲೇಷಣೆಯಿಂದ ಯಾವ ಸಹಾಯವೂ ದೊರೆಯುವುದಿಲ್ಲ. ಬದಲಾಗಿ ಅದು ವಿಶ್ಲೇಷಣೆ ಮಾಡುವವರ, ಮಾಡಿಸುವವರ ಸಮಯ ಮತ್ತು ಶ್ರಮ ಪೋಲಾಗಲು ಕಾರಣವಾಗುತ್ತದೆ. ನನಗೆ ತಿಳಿದಂತೆ ಈಗಿನ ವಿಶ್ಲೇಷಣೆಯೂ ಹೀಗೆಯೇ ಆಗಿದೆ ಎಂದು ಅನ್ನಿಸುತ್ತದೆ. ಇದು ಹೇಗೆ ಎಂಬುದನ್ನು ಒಂದೆರಡು ಉದಾಹರಣೆಗಳ ಮೂಲಕ ನೋಡೋಣ:

ಈಗ ಮಾಡುತ್ತಿರುವ ಪ್ರ‍ಶ್ನಾಧಾರಿತ ವಿಶ್ಲೇಷಣೆಯಿಂದ ಕೆಲವು ದತ್ತಾಂಶಗಳು ದೊರೆಯುವುದು ನಿಜ. ಉದಾಹರಣೆಗೆ ಒಂದು ತರಗತಿಯ ಒಂದು ವಿಷಯದ, ೪೫ ಪ್ರಶ್ನೆಗಳ ಪ್ರಶ್ನೆಪತ್ರಿಕೆಯಲ್ಲಿ ʼ೧೨ನೆಯ ಪ್ರಶ್ನೆಯನ್ನು ತರಗತಿಯ ಯಾವ ಮಕ್ಕಳೂ ಉತ್ತರಿಸಿಲ್ಲʼ ಎಂಬ ಮಾಹಿತಿ ಸಿಗುತ್ತದೆ ಎಂದು ಇಟ್ಟುಕೊಳ್ಳೋಣ. ಈ ಮಾಹಿತಿಯನ್ನು ತೆಗೆದುಕೊಂಡು ಆ ಶಿಕ್ಷಕ ಅಥವಾ ಶಿಕ್ಷಕಿ  ಏನು ಮಾಡಬೇಕು? ಇನ್ನು ಮುಂದೆ ತರಗತಿಗೆ ಹೋದಾಗ ಆ ಹನ್ನೆರಡನೆಯ ಪ್ರಶ್ನೆಗೆ ಸಂಬಂಧಿಸಿ ಪಠ್ಯವನ್ನೇ ಒತ್ತುಕೊಟ್ಟು ತನ್ನ ಬೋಧನೆ ಮಾಡಬೇಕೆ? ಹಾಗೆ ಮಾಡಲು ಬರುವುದಿಲ್ಲ. ಏಕೆಂದರೆ ಆ ಪ್ರಶ್ನೆಯು ಮುಂದಿನ ಪರೀಕ್ಷೆಯಲ್ಲಿ ಬರುವ ವಾರಂಟಿ ಮತ್ತು ಗ್ಯಾರಂಟಿ ಎರಡೂ ಇರುವುದಿಲ್ಲ. ಹಾಗೆ ಏನಾದರೂ ಆ ಶಿಕ್ಷಕ ಅಥವಾ ಶಿಕ್ಷಕಿ ಮಾಡತೊಡಗಿದರೆ ಅದು ಮುಂದಿನ ಫಲಿತಾಂಶದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುವ ಸಾಧ್ಯತೆಯೇ ಹೆಚ್ಚು. ಅವರು ಆ ಪ್ರಶ್ನೆಗೆ ಮಕ್ಕಳನ್ನು ರೆಡಿಮಾಡಿದರೆ ಮುಂದಿನ ಪರೀಕ್ಷೆಯಲ್ಲಿ ಆ ಪ್ರಶ್ನೆ ಬರದಿರುವ ಸಾಧ್ಯತಗಳೇ ಹೆಚ್ಚು. ಏಕೆಂದರೆ ಪ್ರಶ್ನೆಪತ್ರಿಕೆಯು ಪ್ರಶ್ನಾಧಾರಿತವಾಗಿರದೇ ಥೀಮ್‌ ಬೇಸ್ಡ್‌ ಆಗಿರುವುದರಿಂದ ಅಲ್ಲಿ ಪ್ರಶ್ನೆಗಳನ್ನು ಬದಲಿಸುವುದು ತೀರಾ ಸಾಮಾನ್ಯ ಸಂಗತಿಯಾಗಿರುತ್ತದೆ.

 ಇದೇ ರೀತಿ ಈಗಿನ ವಿ‍ಶ್ಲೇಷಣೆಯಿಂದ ರಾಜ್ಯಮಟ್ಟದಲ್ಲಿಯೂ ಕೆಲವು ಅಂಶಗಳು ಸಿಗುತ್ತವೆ. ಉದಾರಣೆಗೆ ಇಲ್ಲಿಯಂತೆಯೇ ಅಲ್ಲಿ ವಿಜ್ಞಾನ ಪ್ರಶ್ನೆಪತ್ರಿಕೆಯಲ್ಲಿ ೧೮ ಮತ್ತು ೩೨ನೆಯ ಪ್ರಶ್ನೆಗಳನ್ನು ರಾಜ್ಯದ ಯಾವ ಮಕ್ಕಳೂ ಸರಿಯಾಗಿ ಬರೆದಿಲ್ಲ ಎಂಬ ಮಾಹಿತಿ ದೊರೆಯಬಹುದು. ಇದರಿಂದ ಏನು ಪ್ರಯೋಜನ? ಪ್ರಶ್ನೆಪತ್ರಿಕೆ ತೆಗೆಯುವವರು ಈ ಪ್ರಶ್ನೆಗಳನ್ನು ಮುಂದೆ ಬಿಟ್ಟು ಪ್ರಶ್ನೆಪತ್ರಿಕೆ ತಯಾರಿಸುವರೇ? ಅದಕ್ಕೂ ವ್ಯಾರಂಟಿ ಮತ್ತು ಗ್ಯಾರಂಟಿ ಎರಡೂ ಇಲ್ಲ.  ಹಾಗಾಗಿ ಈ ಮಾದರಿಯ ವಿಶ್ಲೇಷಣೆ ಕೆಲಸಕ್ಕೆ ಬಾರದ ಕೆಲಸವಾಗುತ್ತದೆ.

***

ದೇವರ ಅಂಕಿಗಳು ಮತ್ತು ದಾರಿತಪ್ಪುವ ವಿಶ್ಲೇಷಣೆಗಳು

ಇನ್ನು ಎರಡನೆಯ ದೋಷವೆಂದರೆ ಅನಗತ್ಯವಾದ ಅವಸರ ಮತ್ತು ಒತ್ತಡ. ಈ ಅನಗತ್ಯ ಅವಸರ ಮತ್ತು ಒತ್ತಡಗಳು ಹೇಗೆ ವ್ಯವಸ್ಥೆಯನ್ನು ಹಾಳುಮಾಡುತ್ತವೆ ಎಂಬುದಕ್ಕೆ ಮೇಲ್ಕಂಡ ಉದಾಹರಣೆಗಳೊಂದಿಗೆ ಇನ್ನೊಂದು ಉದಾಹರಣೆಯನ್ನು ಗಮನಿಸಿ.

ಅದೊಂದು ಶಾಲೆ. ಎಸ್‌. ಎಸ್.ಎಸ್.ಸಿ ಯ ಪೂರಕ ಪರೀಕ್ಷೆಯೊಂದು ನಡೆಯಿತು. ಇಡೀ ವಾರ ನಡೆದ ಆ ಪರೀಕ್ಷೆಯಲ್ಲಿ ಸಮಾಜ ವಿಜ್ಞಾನ ಕೊನೆಯ ಪತ್ರಿಕೆ. ಶುಕ್ರವಾರ ಆ ಪತ್ರಿಕೆ ಮುಗಿಯಿತು. ಶನಿವಾರ ಬೆಳಿಗ್ಗೆ ಹೆಡ್‌ ಮಾಸ್ಟರ್ರು , “ ವ್ಯಾಲುವೇಶನ್‌ ಆಯಿತಾ ? ಬೇಗ ಬೇಗ ಮಾಡಿ ಮಾರ್ಕ್ಸು ಕೊಡಿ. ನಾಡಿದ್ದು ಸೊಮವಾರ ಬೆಳಿಗ್ಗೆ ಹತ್ತು ಗಂಟೆಗೆ ಇಡೀ ಜಿಲ್ಲೆಯ ವಿಶ್ಲೇಷಣೆಯ ವರದಿ ಡಿಸಿ ಟೇಬಲ್‌ ಮೇಲೆ ಇರ್ಬೇಕಂತೆ. ಆಫಿಸಿಗೆ ಇವತ್ತು ಸಂಜೆಯ ಒಳಗೇ ನಾನು ಶಾಲೆಯ ವರದಿ ಕಳಿಸಬೇಕು” ಎಂದು ಒತ್ತಾಯ ಮಾಡತೊಡಗಿದರು. ಆಗ ಈ ಸಮಾಜದ ಮೇಷ್ಟ್ರು, “ಮಾರ್ಕಸ್‌ ಹೇಳ್ತೀನಿ ಎಂಟ್ರಿ ಹಾಕ್ಕೊಳ್ಳಿ ಸರ್‌” ಎಂದು ಮಕ್ಕಳ ಹೆಸರನ್ನೂ ಅಂಕಗಳನ್ನೂ ಹೇಳುತ್ತಾ ಹೋದರು.  ಹೆಡ್ಮಾಸ್ಟರ್ರು  ತಮ್ಮ ಕಂಪ್ಯೂಟರಿನಲ್ಲಿ ಎಂಟ್ರಿ ಹಾಕುತ್ತಾ ಹೋದರು. ಆ ಶಾಲೆಯಲ್ಲಿ ಇದ್ದದ್ದು ಸುಮಾರು ಇನ್ನೂರು ಮಕ್ಕಳು. ಇರುವುದು ಒಬ್ಬನೇ ಸಮಾಜ ಮೇಷ್ಟ್ರು. ಯಾರಿಗಾದರೂ ಅರ್ಥವಾಗುವ ಸಂಗತಿ ಎಂದರೆ ಪರೀಕ್ಷೆ ಮುಗಿದ ದಿನವೇ  ಆ ಮೇಷ್ಟ್ರು ಮಾತ್ರವಲ್ಲ. ದೇವಲೋಕದಿಂದ ಬ್ರಹ್ಮ, ವಿಷ್ಣು, ಮಹೇಶ್ವರ ಮೂವರೂ ಅವರ ಹೆಂಡತಿಯರಾದ ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿಯರನ್ನು ಕರೆದುಕೊಂಡು ಬಂದು ಜೊತೆಗೆ ಈ ಮೇಷ್ಟರ ಹೆಂಡತಿಯನ್ನೂ ಸೇರಿಸಿಕೊಂಡು ಒಟ್ಟು ಎಂಟು ಜನ ಸೇರಿಕೊಂಡು ವ್ಯಾಲ್ಯೂವೇಶನ್‌ ಮಾಡಿದರೂ ಅಷ್ಟೊಂದು ಪತ್ರಿಕೆಗಳನ್ನು ವ್ಯಾಲುವೇಶನ್‌ ಮಾಡ್ಲಿಕ್ಕೆ ಆಗಲ್ಲ ಎಂಬುದು!

ಆ ಹೆಡ್ಮಾಷ್ಟ್ರಿಗೆ ಇಷ್ಟೊಂದು ಪತ್ರಿಕೆಗಳನ್ನು ಒಂದೇ ರಾತ್ರಿಯೊಳಗೆ ಈ ಮನುಷ್ಯ ಹೇಗೆ ಮಾಡಿದ ಎಂಬ ಪ್ರಶ್ನೆ ಹುಟ್ಟಬೇಕಿತ್ತು. ಆ ಪ್ರಶ್ನೆಯೇ ಅವರಿಗೆ ಹುಟ್ಟಲಿಲ್ಲವೋ ಅಥವಾ ಹುಟ್ಟಿಯೂ ಕೇಳಲಿಲ್ಲವೋ ಗೊತ್ತಿಲ್ಲ. ಅವರು ಏನೂ ಕೇಳಲಿಲ್ಲ.  ಇನ್ನೂ ತಮಾಸೆಯ ಸಂಗತಿ ಎಂದರೆ, “ನಿನ್ನೆ ಪರೀಕ್ಷೆ ಆದ ಸಮಾಜದವರೇ ಮಾರ್ಕ್ಸು ಕೊಟ್ರು ನೀವು ಮೊನ್ನೆ ಅಚ್ಚೆ ಮೊನ್ನೆನೇ ಪರೀಕ್ಷೆ ಆದೋರು ಇನ್ನು ಏನ್‌ ಮಾಡ್ತಿದಿರಿ” ಎಂದು ಉಳಿದವರಿಗೆ ಅವರು ಜೋರು ಮಾಡಿದ್ದು! ಮುಖ್ಯೋಪಾಧ್ಯಾಯರ ಆವಾಜ್‌ ಕೇಳಿ ಸ್ಟಾಫ್‌ ರೂಮಿನಿಂದ ಎದ್ದೆವೋ ಬಿದ್ದೆವೋ ಎಂದು ಎಲ್ಲ ಶಿಕ್ಷಕರೂ ಬಂದು ತಮ್ಮ ತಮ್ಮ ವಿಷಯಗಳ ಅಂಕಗಳನ್ನು ಹೇಳಿ ಅವರ ಕಂಪ್ಯೂಟರಿಗೆ ತುಂಬಿಸಿದರು. ಎಲ್ಲವನ್ನೂ ಕೂಡಿಸಿ ಅಂಕಿಅಂಶ ತಯಾರು ಮಾಡಿಕೊಂಡು ಮುಖ್ಯೋಪಾಧ್ಯಾಯರು ಆಫೀಸಿಗೆ ಕೊಡಲು ಹೊರಟುಹೋದರು. ಹೀಗೆ ತಮ್ಮ ಮುಖ್ಯೋಪಾಧ್ಯಾಯರನ್ನು ಕಳಿಸಿದ ನಂತರ ಒಬ್ಬ ಮೇಡಂ ಸ್ಟಾಪ್‌ ರೂಮಿಗೆ ಬಂದು ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಲು ಕೂತರು. ಇನ್ನೊಬ್ಬರು `ಮಾರ್ಕ್ಸು ಕೊಟ್ಟಾದ್ಮೇಲೆ ಮತ್ಯಾತಿಗೆ ವ್ಯಾಲುವೇಶನ್ನು? ಮಾಡಿದ್ರೆ ಒಂದ್‌ ಪಾಟನರ ಅಕತಿʼ ಎಂದು ಮೌಲ್ಯಮಾಪನ ಮಾಡಿದ ಮತ್ತು ಮಾಡದ ಎಲ್ಲ ಉತ್ತರ ಪತ್ರಿಕೆಗಳನ್ನು ಬೀರಿನೊಳಗೆ ತುರುಕಿ ಕ್ಲಾಸಿಗೆ ಹೋದರು!

ಇವರೆಲ್ಲರೂ ಅದರಲ್ಲಿಯೂ ಮುಖ್ಯವಾಗಿ ಸಮಾಜ ಮೇಷ್ಟ್ರು ಹೇಗೆ ಅಷ್ಟುಬೇಗ ಅಂಕಗಳನ್ನು ಕೊಡಲು ಸಾಧ್ಯವಾಯಿತು? ಇದು ಸಾಧ್ಯವಾಗುವುದು ʻದೇವರ ಅಂಕಿʼ ಕೊಡುವ ಕ್ರಮದಿಂದ. ʻದೇವರ ಅಂಕಿʼ ಎಂದರೆ ಒಬ್ಬ ಶಿಕ್ಷಕ ಅಥವಾ ಶಿಕ್ಷಕಿ ತಾನು ಪಾಠಮಾಡುವ ಮಕ್ಕಳಿಗೆ ಸರಿಯಾಗಿ ಪರೀಕ್ಷೆ ಮಾಡದೆ ಅಥವಾ ಪರೀಕ್ಷೆ ಮಾಡಿದರೂ ಸರಿಯಾಗಿ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡದೇ, ಒಂದು ವೇಳೆ ಮಾಡಿದರೂ ಆ ಅಂಕಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ, ತಮ್ಮ ಪೂರ್ವಜ್ಞಾನದ ಆಧಾರದ ಮೇಲೆ ಸುಮ್ಮನೆ ಒಬ್ಬೊಬ್ಬ ವಿದ್ಯಾರ್ಥಿಯ ಮುಖವನ್ನೂ ನೆನಪಿಗೆ ತಂದುಕೊಂಡು ಅವರ ಹೆಸರಿನ ಮುಂದೆ ಅಂಕಗಳನ್ನು ಹಾಕುತ್ತಾ ಹೋಗುವುದು! ಈ ದೇವರ ಅಂಕಿಕೊಡುವ ಕಲೆಯನ್ನು ಬಹುತೇಕ ಎಲ್ಲ ಶಿಕ್ಷಕ ಶಿಕ್ಷಕಿಯರೂ ಆಪತ್ಕಾಲಕ್ಕೆ ಉಪಯೋಗಕ್ಕೆ ಬರುತ್ತದೆ ಎಂದು ಕಲಿತೇ ಇರುತ್ತಾರೆ. ಕೆಲವರು ಇದನ್ನು ಅನಗತ್ಯ ಅವಸರ ಮತ್ತು ಒತ್ತಡಗಳು ತಮ್ಮ ಮೇಲೆ ಬಿದ್ದಾಗ ಬಳಸುತ್ತಾರೆ. ಇನ್ನು ಕೆಲವರು ತಮ್ಮ ಮೇಲೆ ಒತ್ತಡ ಇರಲಿ ಬಿಡಲಿ, ಸಮಯ ಇರಲಿ ಬಿಡಲಿ ಇದನ್ನೇ ಯಾವಾಗಲೂ ಅನುಸರಿಸುತ್ತಾರೆ. ಈ `ದೇವರಅಂಕಿʼ ಕ್ರಮವನ್ನು ಸದಾ ಅನುಸರಿಸುವವರು ಇದನ್ನು ಸರಿಯೆಂದು ಸಮರ್ಥಿಸಿಕೊಳ್ಳುವುದೂ ಉಂಟು. ಸ್ವತಃ ದೇವರೇ ಬಂದು ನಮ್ಮ ಕೈಯಿಂದ  ಈ ಮಗುವಿಗೆ ಇಷ್ಟೇ ಅಂಕಕೊಡು ಎಂದು ನಿರ್ದೇಶನ ನೀಡುತ್ತಾನೆಂದೂ ನಮ್ಮ ಅನುಭವ ಮತ್ತು ದೇವರ ನಿರ್ದೇಶನ ಎರಡೂ ಇಲ್ಲಿ ಇರುವುದರಿಂದ  ಇದು ನೈಜ ಮೌಲ್ಯಮಾಪನಕ್ಕಿಂತಲೂ ಹೆಚ್ಚು ಅಧಿಕೃತ ಎಂಬುದು ಇವರ ವಾದ!

ಹೀಗೆ ಯಾವಾಗಲೂ ದೇವರ ಅಂಕಿ ಕೊಡುತ್ತಿದ್ದ ಶಿಕ್ಷಕರೊಬ್ಬರನ್ನು ಹೀಗೆ ಸರಿಯಾಗಿ ಮೌಲ್ಯಮಾಪನ ಮಾಡದೆ ಅಂಕಗಳನ್ನು ನೀಡಿ ಆ ಅಂಕಗಳ ಆಧಾರದ ಮೇಲೆ ವಿ‍ಶ್ಲೇಷಣೆ ಮಾಡಿ ಕಳಿಸಿದರೆ ತಪ್ಪಾಗುವುದಿಲ್ಲವೇ? ಮೇಲಿನಿಂದ ತಪ್ಪಾಗಿದೆ ಎಂದು ಅವರು ವಾಪಸ್ಸು ಕಳಿಸಿದರೆ ನಿಮಗೆ ಅವಮಾನ ಆಗಲ್ವೇʼ ಎಂದು ಕೇಳಿದೆ. ಆಗ ಅವರು ನಗಾಡುತ್ತಾ, ಅಂಥದ್ದೇನೂ ಆಗಲ್ಲ ಸರ್‌, ನಾನು ಕೆಲಸಕ್ಕೆ ಸೇರಿದಾಗಿನಿಂದಲೂ (ಅವರು ಕೆಲಸಕ್ಕೆ ಸೇರಿ ಎಂಟು ಹತ್ತು ವರ್ಷ ಆಗಿರಬಹುದು) ಹೀಗೇ ಕಳಿಸಾದು. ಎಂದೆಂದಿಗೂ ಅದು ವಾಪಸ್ಸು ಬಂದಿದ್ದೇ ಇಲ್ಲ. ಇಷ್ಟು ದಿನ ಬರದೇ ಇದ್ದದ್ದು ಇನ್ನು ಮುಂದೆ ಹ್ಯಂಗೆ ಬರುತ್ತೆ ಸರ್?ʼ ಎಂದು ಲಾಜಿಕ್ಕಿನ ಪ್ರಶ್ನೆಯನ್ನು ಆ ವ್ಯಕ್ತಿ ನನಗೇ ಹಾಕಿ ಬಾಯಿ ಮುಚ್ಚಿಸಿದ. ಇಂತಹ ಮೌಲ್ಯಮಾಪನ ಮತ್ತು ಇಂತಹ ಮೌಲ್ಯಮಾಪನಗಳಿಂದ ದೊರಕುವ ಅಂಕಗಳು, ಅವಗಳ ಆಧಾರದ ಮೇಲೆ ನಡೆಯುವ ಅರ್ಥರಹಿತ ವಿಶ್ಲೇಷಣೆಗಳು ಏನನ್ನು ತಾನೆ ನೀಡಬಲ್ಲವು?

***

ವಿಷಯಾಧಾರಿತ ವಿಶ್ಲೇಷಣೆ (Theam Based Analysis)

ಮೇಲ್ಕಂಡ ವಿಶ್ಲೇಷಣೆಯು ಮುಖ್ಯವಾಗಿ ಈಗಿನ ಫಲಿತಾಂಶ ವಿಶ್ಲೇಷಣೆಗೆ ಸಂಬಂಧಿಸಿದ ಮುಖ್ಯವಾದ ಎರಡು ರೀತಿಯ ದೋಷಗಳನ್ನು ಚರ್ಚಿಸಿತು.  ಅವೆಂದರೆ ಈಗಾಗಲೇ ಹೇಳಿದಂತೆ ಒಂದು ವಿ‍ಶ್ಲಷಣೆಯ ಮಾದರಿಯ ತಪ್ಪು ಆಯ್ಕೆ. ಇನ್ನೊಂದು ಅನಗತ್ಯ ಅವಸರ ಮತ್ತು ಒತ್ತಡ.  ಹಾಗಾದರೆ ಈಗ ಈ ದೋಷಗಳನ್ನು ಸರಿಪಡಿಸಿಕೊಳ್ಳುವುದು ಹೇಗೆ ಎಂಬುದನ್ನು ನೋಡೋಣ:

ಮೊದಲನೆಯ ದೋಷಕ್ಕೆ ಪರಿಹಾರವೆಂದರೆ ಪ್ರಶ್ನೆಪತ್ರಿಕೆಯ ರಚನೆ ಮತ್ತು ಫಲಿತಾಂಶ ವಿಶ್ಲೇಷಣೆ ಇವುಗಳ ನಡುವೆ ಸಾಮ್ಯತೆಯನ್ನು ತರುವುದು. ಅಂದರೆ  ಪ್ರಶ್ನೆಪತ್ರಿಕೆ ಯಾವ ಅಂಶಗಳ ಮೇಲೆ ರಚಿಸಲ್ಪಟ್ಟಿರುತ್ತದೆಯೋ ಅದೇ ಅಂಶಗಳನ್ನು ಆದರಿಸಿ ಫಲಿತಾಂಶ ವಿಶ್ಲೇಷಣೆ ಮಾಡುವುದು. ಎಸ್‌ ಎಸ್‌ ಎಲ್‌ ಸಿ ಪ್ರಶ್ನೆಪತ್ರಿಕೆಯು ಥೀಮ್‌ ಆದರಿಸಿ ರಚಿಸಲ್ಪಡುವುದರಿಂದ  ಫಲಿತಾಂಶ ವಿಶ್ಲೇಷಣೆಯನ್ನೂ ಪ್ರಶ್ನೆ ಆಧಾರಿತವಾಗಿ ಮಾಡದೇ  ಥೀಮ್‌ ಆದರಿಸಿ ಮಾಡುವುದು. ಅದನ್ನು ಹೇಗೆ ಮಾಡಬಹುದು ಎಂಬುದನ್ನು ಕನ್ನಡ ಅಧ್ಯಾಪಕರೊಬ್ಬರು ತಮ್ಮ ವಿಷಯವನ್ನು ಕುರಿತು ತಮ್ಮ ವೈಯಕ್ತಿಕ ಬಳಕೆಗೆ ಮಾಡಿಕೊಂಡಿರುವ ʻಥೀಮ್‌ ಬೇಸ್ಡ್‌ ಅನಾಲಿಸಿಸ್‌ʼ ನ ಮಾದರಿಟ್ಟುಕೊಂಡು ಇದನ್ನು ವಿವರಿಸಬಹುದು. ಇದು ಕನ್ನಡ ಭಾಷಾ ವಿಷಯದ ವಿಶ್ಲೇಷಣೆಯಾಗಿದ್ದರೂ ಬೇರೆ ಶಿಕ್ಷಕರು ತಮ್ಮ ತಮ್ಮ ವಿಷಯಗಳನ್ನೂ ಹೀಗೆ ಮಾಡಿಕೊಳ್ಳಬಹುದೆಂಬುದು ಎಲ್ಲರಿಗೂ ಅರ್ಥವಾಗುವ ವಿಷಯ.


ಈ ಶಿಕ್ಷಕರು ಮೊದಲ ಹಂತದಲ್ಲಿ ಏನು ಮಾಡಿಕೊಂಡಿದ್ದಾರೆ ನೋಡಿ. (ಚಿತ್ರ ಗಮನಿಸಿ). ಮೌಲ್ಯಮಾಪನದ ನಂತರ ಅವರು ಪ್ರತೀಪ್ರಶ್ನೆಗೂ ಯಾವ ಮಗು ಬರೆದಿದೆ ಯಾವ ಮಗು ಬರೆದಿಲ್ಲ ಎಂಬ ಅರ್ಥರಹಿತ ಕೂದಲು ಸೀಳುವ ಕೆಲಸಕ್ಕೆ ತೊಡಗದೇ ಯಾವ ಯಾವ ಥೀಮಿನಲ್ಲಿ ಮಕ್ಕಳು ಎಷ್ಟು ಗರಿಷ್ಠ ಅಂಕಗಳನ್ನು ಗಳಿಸಲು ಸಾಧ್ಯವಿತ್ತು. ಮತ್ತು ಮಕ್ಕಳು ಯಾರು ಯಾರು ಯಾವ ಯಾವ ಥೀಮಿನಲ್ಲಿ ಎಷ್ಟು ಎಷ್ಟು ಅಂಕಗಳನ್ನು ಗಳಿಸಿದ್ದಾರೆ ಎಂಬುದನ್ನು ದಾಖಲಿಸಿಕೊಂಡಿದ್ದಾರೆ. ಎಸ್‌ ಎಸ್‌ ಎಲ್‌ ಸಿ ಕನ್ನಡ ಪ್ರಶ್ನೆಪತ್ರಿಕೆಯು  ಒಟ್ಟು ೪೫ ಪ್ರಶ್ನೆಗಳನ್ನು ಒಳಗೊಂಡಿದ್ದರೂ ಆ ಎಲ್ಲ ಪ್ರಶ್ನೆಗಳು ಕೇವಲ ೧೫ ಥೀಮ್‌ ಗಳಲ್ಲಿ ಹಂಚಿಕೆಯಾಗಿವೆ ಎಂಬುದನ್ನು ಗಮನಿಸಿ.

ಹೀಗೆ ಥೀಮ್‌ ಆದರಿಸಿ ನಮೂದಿಸಿಕೊಳ್ಳುವ ಮೂಲ ಅಂಕಗಳ ವಿಶ್ಲೇಷಣೆಯಿಂದ ಶಿಕ್ಷಕರಿಗೆ ಅಷ್ಟೇ ಏಕೆ ಅವರನ್ನು ಮಾರ್ಗದರ್ಶನ ಮಾಡಬೇಕಾದವರಿಗೆ ಕೆಲವು ಅದ್ಭುತ ಮಾಹಿತಿಗಳು ದೊರಕಿ ಬೋಧನಾ ಮತ್ತು ಕಲಿಕಾ ಪ್ರಕ್ರಿಯೆ ಬಲಿಷ್ಠವಾಗಲು  ಸಹಾಯವಾಗುತ್ತದೆ. ಈ ಥೀಮ್‌ ಬೇಸ್ಡ್‌ ವಿಶ್ಲೇಷಣೆಯು ಈ ಕೆಳಗಿನ ಬಹುಮುಖ್ಯವಾದ ಮೂರು ಮಾಹಿತಿಗಳನ್ನು ನೀಡುತ್ತದೆ.

ಮೊದಲನೆಯದು ಒಬ್ಬ ಶಿಕ್ಷಕ ಅತ್ಯಂತ ಕಡಿಮೆ ಅವಧಿ ಇರುವಾಗ ಸಾಮೂಹಿಕ ಬೋಧನೆ ಮಾಡುವಾಗ ಯಾವ ವಿಷಯವನ್ನು ಒತ್ತುಕೊಟ್ಟು ಕಲಿಸಬೇಕು ಎಂಬುದು. ಎರಡನೆಯದು ಇಡೀ ವಿದ್ಯಾರ್ಥಿ ಸಮೂಹದಲ್ಲಿ ಯಾವ ವಿದ್ಯಾರ್ಥಿಗೆ ಹೆಚ್ಚು ಗಮನ ಕೊಡಬೇಕು ಎಂಬುದು. (ಈ ಅಂಶಕ್ಕೇನೂ ಇದೇ ವಿಶ್ಲೇಷಣ ಬೇಕಿಲ್ಲ. ಒಟ್ಟು ಅಂಕಗಳಲ್ಲಿಯೇ ಇದಕ್ಕೆ ಉತ್ತರ ಸಿಗುತ್ತದೆ). ಮೂರನೆಯದು ಮತ್ತು ಅತ್ಯಂತ ಮಹತ್ವದ್ದು ಪ್ರತಿಯೊಬ್ಬ ವಿದ್ಯಾರ್ಥಿಯೂ ತಾನು ಯಾವ ಥೀಮಿನಲ್ಲಿ ಹಿಂದಿದ್ದೇನೆ ಮತ್ತು ಯಾವ ಥೀಮಿನಲ್ಲಿ ಮುಂದಿದ್ದೇನೆ ಎಂದು ತಿಳಿದುಕೊಳ್ಳಲು ಸಹಾಯ ಮಾಡುವುದು. ಮೊದಲನೆಯದು ಶಿಕ್ಷಕನಿಗೆ ಯಾವ ವಿಷಯಕ್ಕೆ ಒತ್ತುಕೊಡಬೇಕು ಎಂಬುದನ್ನು ತಿಳಿಸಿಕೊಟ್ಟರೆ ಎರಡನೆಯದು ಯಾವ ಮಗುವಿಗೆ ಒತ್ತುಕೊಡಬೇಕು ಎಂಬುದನ್ನು ತಿಳಿಸುತ್ತದೆ. ಮೂರನೆಯದು ಪ್ರತಿಮಗುವಿಗೂ ತಾನು ಯಾವುದನ್ನು ಒತ್ತುಕೊಟ್ಟು ಅಭ್ಯಾಸಮಾಡಬೇಕು ಎಂಬುದನ್ನು ತಿಳಿಸುತ್ತದೆ.


ಈಗ ಈ ಶಿಕ್ಷಕರ ವಿಶ್ಲೇಷಣೆಯ ಫಲಿತಾಂಶಗಳನ್ನು ನೋಡೋಣ.  (ಚಿತ್ರವನ್ನು ಗಮನಿಸಿ).  ಇದು ಥೀಮ್‌ ಬೇಸ್ಡ್‌ ವಿಶ್ಲೇಷಣೆಯ ಅತ್ಯಂತ ಮಹತ್ವದ ಫಲಿತಾಂಶ. ಈ ಚಿತ್ರದಲ್ಲಿ ಇಡೀ ಶಾಲೆಯಲ್ಲಿ ವಿಷಯ ಬೋಧಕರಿಗೆ ತನ್ನ ವಿಷಯದಲ್ಲಿ ಒಟ್ಟಾರೆ  ಮಕ್ಕಳು ಯಾವ ಥೀಮಿನಲ್ಲಿ ಹಿಂದಿದ್ದಾರೆ ಮತ್ತು ಯಾವ ಥೀಮಿನಲ್ಲಿ ಮುಂದಿದ್ದಾರೆ ಎಂಬ ಮಹತ್ವದ ಮಾಹಿತಿ ಸಿಗುತ್ತದೆ.  ಅದನ್ನು ಈ ಶಿಕ್ಷಕ ಬೋಧನಾ ಆಧ್ಯತೆಯ ಶ್ರೇಯಾಂಕವಾಗಿ ಗುರುತಿಸಿಕೊಂಡಿದ್ದಾರೆ. ಹದಿನೈದು ಥೀಮ್‌ ಗಳಲ್ಲಿ ಮೊದಲ ಶ್ರೇಯಾಂಕ ಪಡೆದಿರುವ ʼಸಂದರ್ಭದ೦ಡನೆ ಸ್ವಾರಸ್ಯ ಬರೆಯುವʼ ಥೀಮಿನಲ್ಲಿ ಇಡೀ ತರಗತಿಯ ಮಕ್ಕಳು ಹಿಂದಿದ್ದಾರೆ ಎಂದು ಇಲ್ಲಿ ಗೊತ್ತಾಗುವುದರಿಂದ  ತರಗತಿಯ ಬೋಧನೆಯಲ್ಲಿ ಆ ಥೀಮಿಗೆ ಒತ್ತುಕೊಟ್ಟು ಬೋಧಿಸಬೇಕು ಮತ್ತು ಸಂದರ್ಭದೊಡನೆ ಸ್ಪಷ್ಟೀಕರಣ ಪ್ರಶ್ನೆಗಳನ್ನು ಹೇಗೆ ಬರೆಯಬೇಕು ಎಂಬುದನ್ನು ಆ ಶಿಕ್ಷಕ ಕಲಿಸಲು ಸಾಧ್ಯವಾಗುತ್ತದೆ.  ಅದರಂತೆ ಇಡೀ ಹದಿನೈದು ಬೋಧನಾ ಆದ್ಯತೆಯ ಶ್ರೇಯಾಂಕಗಳಲ್ಲಿ  ಕೊನೆಯ ಶ್ರೇಯಾಂಕ ಪಡೆದಿರುವ ʼಪದ್ಯ ಬರೆಯುವ ಥೀಮನ್ನುʼ ಶಿಕ್ಷಕ ಕೊನೆಯ ಆದ್ಯತೆಯಾಗಿ ಇಟ್ಟುಕೊಳ್ಳಬಹುದು ಎಂಬುದನ್ನು ಇದು ಹೇಳುತ್ತದೆ. ಏಕೆಂದರೆ ಆ ಥೀಮಿನಲ್ಲಿ ತರಗತಿಯ ಎಲ್ಲ ಮಕ್ಕಳೂ ಸರಿಯಾಗಿ ಉತ್ತರಿಸಿದ್ದಾರೆ.

ಇನ್ನು ಈ ಚಿತ್ರವನ್ನು ಗಮನಿಸಿ. ಇದು ವಿದ್ಯಾರ್ಥಿವಾರು ವಿಶ್ಲೇಷಣೆ.  ಮೊದಲನೆಯದು ಶಿಕ್ಷಕ ಯಾವ ಕಾಂಟೆಂಟಿಗೆ ಆದ್ಯತೆ ನೀಡಬೇಕು ಎಂಬುದನ್ನು ತಿಳಿದಿದರೆ ಇಲ್ಲಿ ಯಾವ ವಿದ್ಯಾರ್ಥಿಗೆ ಆದ್ಯತೆ ನೀಡಬೇಕು ಎಂಬುದನ್ನು ತಿಳಿಸುತ್ತದೆ. 

ಇನ್ನು ಕೆಳಗಿನ ಚಿತ್ರವನ್ನು ನೋಡಿ. ಇದು ಮಗುವಿನ ವೈಯಕ್ತಿಕ ವಿಶ್ಲೇಷಣೆ!  ಇದು ಅತ್ಯಂತ ಮಹತ್ವದ್ದು. ಇದನ್ನು ತನ್ನ ತರಗತಿಯ ಪ್ರತಿಯೊಂದು ಮಗುವಿಗೂ ಈ ಶಿಕ್ಷಕರು ಮಾಡಿಕೊಂಡಿದ್ದಾರೆ! ಇಲ್ಲಿ ಕೊಟ್ಟಿರುವ ಪ್ರೀತಮ್‌ ಎಂಬ ವಿದ್ಯಾರ್ಥಿಯ ವಿಶ್ಲೇಷಣೆ ಗಮನಿಸಿ.  ಆತನಿಗೆ ತಾನು ಯಾವ ವಿಷಯ ಅಂದರೆ ಥೀಮನ್ನು ಒತ್ತುಕೊಟ್ಟು ಓದಿಕೊಳ್ಳಬೇಕು ಎಂಬುದಕ್ಕೆ ಇದು ಮಾರ್ಗದರ್ಶನವನ್ನು ನೀಡುತ್ತದೆ. ಕೆಂಪು ಅಂಕಿಯಲ್ಲಿ ತೋರಿಸಿದ ಥೀಮಿನಲ್ಲಿ ಅತ್ಯಂತ ಕಡಿಮೆ ಅಂಕಗಳು ಬಂದಿರುವುದರಿಂದ ಅವನು ಆ ಥೀಮ್‌ ಗಳಿಗೆ ಸಂಬಂಧಿಸಿದ ಪಠ್ಯಗಳನ್ನು ಒತ್ತುಕೊಟ್ಟು ಓದಿಕೊಳ್ಳಲು ಈ ವಿಶ್ಲೇಷಣೆ ಮಾರ್ಗದರ್ಶನ ಮಾಡುತ್ತದೆ. ಹೀಗೆಯೇ ಪ್ರತಿಯೊಬ್ಬ ಮಗುವಿಗೂ ಪ್ರತ್ಯೇಕವಾಗಿ ವಿ‍ಶ್ಲೇಷಣೆಯನ್ನು ತಂತ್ರಜ್ಞಾನದ ಸಹಾಯದಿಂದ  ಅತ್ಯಂತ ತ್ವರಿತವಾಗಿ ಈಗ ಮಾಡಿಕೊಳ್ಳಲು ಶಿಕ್ಷಕರಿಗೆ ಸಾಧ್ಯವಿದೆ. ಥೀಮ್‌ ಬೇಸ್ಡ್‌ ಅನಾಲಿಶಿಸ್‌ ಕೊಟ್ಟ ಸಾಮೂಹಿಕ ವರದಿಯಲ್ಲಿ ಶಿಕ್ಷಕರು ತಮ್ಮ ಇಡೀ ತರಗತಿಯಲ್ಲಿ ಬಹಳಷ್ಟು ಮಕ್ಕಳು ಸಂದರ್ಭದೊಡನೆ ಸ್ಪಷ್ಟೀಕರಿಸುವ ಥೀಮಿನಲ್ಲಿ ಹಿಂದಿದ್ದಾರೆ ಎಂಬ ಅಂಶವನ್ನು ಕಂಡುಕೊಂಡದ್ದು ನಿಜ. ಆದರೆ ಒಬ್ಬೊಬ್ಬ ವಿದ್ಯಾರ್ಥಿಯ ವಿಷಯದಲ್ಲಿ ಈ ಆದ್ಯತೆಗಳು ಬೇರೆಯವೇ ಇರುತ್ತವೆ. ಒಬ್ಬ ವಿದ್ಯಾರ್ಥಿ ಬಂದು ನಾನು ಯಾವ ವಿಷಯವನ್ನು (ಥೀಮನ್ನು) ಹೆಚ್ಚು ಒತ್ತುಕೊಟ್ಟು ಓದಬೇಕು ಸರ್‌ ಎಂದು ಕೇಳಿದರೆ ಇದನ್ನು ನೋಡಿ ಆ ಶಿಕ್ಷಕ ಆ ಮಗುವಿಗೆ ಮಾರ್ಗದರ್ಶನ ಮಾಡಬಹುದು. ಇದೆಲ್ಲವೂ ಮೊದಲನೆಯ ದೋಷಕ್ಕೆ ನಾವು ಕಂಡುಕೊಳ್ಳಬಹುದಾದ ಪರಿಹಾರ.



ಒತ್ತಿ ಮಾಡುವ ಹಣ್ಣು ಮೆತ್ತಗಾಗಬಹುದಲ್ಲದೆ ..

ಇನ್ನು ಎರಡನೆಯ ದೋಷ, ಅಂದರೆ ಅನಗತ್ಯ ಅವಸರ ಮತ್ತು ಒತ್ತಡ ಇದನ್ನು ಹೇಗೆ ಬಗೆಹರಿಸಿಕೊಳ್ಳಬಹುದು ಎಂಬುದನ್ನು ಈಗ ನೋಡೋಣ. ಇದು ಮುಖ್ಯವಾಗಿ ಶಿಕ್ಷಕರ ಕೈಯಲ್ಲಿ ಇಲ್ಲ. ಬದಲಾಗಿ ಅವರ ಮೇಲಿನವರ ಕೈಯಲ್ಲಿ ಇದೆ.  ಅವರು ಮನಸ್ಸು ಮಾಡಿ ಕಾರ್ಯಪ್ರವೃತ್ತರಾದರೆ ಮಾತ್ರ ಈ ದೋಷದ ನಿವಾರಣೆ ಸಾಧ್ಯ. ಇಲ್ಲದಿದ್ದರೆ ಇಲ್ಲ. ಮೌಲ್ಯಮಾಪನ ವಿಶ್ಲೇಷಣೆ ಎಂಬುದು ಒಂದು ರೀತಿಯ ಸಣ್ಣಪ್ರಮಾಣದ ಸಂಶೋಧನೆಯೇ ಆಗಿದೆ. ಯಾವುದೇ  ಸಂಶೋಧನೆ ಇರಲಿ ಅದು ಅವಸರದಲ್ಲಿ ಮಾಡುವ ಕೆಲಸವೇ ಅಲ್ಲ. ಅದು ಅತ್ಯಂತ ಸಾವಧಾನದಿಂದ ಮಾಡಬೇಕಾದ ಕಾರ್ಯ. ಇಲ್ಲಿ ನಾವು ಅವಸರ ಮತ್ತು ಅನಗತ್ಯ ಒತ್ತಡಗಳನ್ನು ಸೃಷ್ಟಿಸಿದರೆ ಆ ಕಾರ್ಯವನ್ನು ಕೆಡಿಸಿದೆವು ಎಂದೇ ಅರ್ಥ. ಈ ಹಿನ್ನಲೆಯಲ್ಲಿ ನಾವು ಶಿಕ್ಷಕರಿಂದ ಯಾವ ರೀತಿಯಿಂದ ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣೆ ಮಾಡಿಸಬೇಕು ಎಂಬ ಸ್ಪಷ್ಟ ತಿಳಿವಳಿಕೆ ನಮಗೆ ಇರಬೇಕಾಗುತ್ತದೆ.  

ಮೊಟ್ಟ ಮೊದಲು ಮೌಲ್ಯಮಾಪನವನ್ನು ಸರಿಯಾಗಿ ಮಾಡಿಸಬೇಕು. ಮೌಲ್ಯಮಾಪನ ಸರಿಯಾಗಬೇಕಾದರೆ ಆ ಶಿಕ್ಷಕರಿಗೆ ಅದಕ್ಕೆ ಸಾಕಾಗುವಷ್ಟು ಸಮಯವನ್ನು ನೀಡುವುದು ಬಹಳ ಮುಖ್ಯ ಸಂಗತಿ.  ಯಾರಿಗೆ ಎಷ್ಟು ಸಮಯವನ್ನು ನೀಡಬೇಕು ಎಂಬುದನ್ನು ಸರಿಯಾಗಿ ನಾವು ಅರ್ಥಮಾಡಿಕೊಳ್ಳಬೇಕು. ಇದಕ್ಕಾಗಿ ಎಸ್‌ ಎಸ್‌ ಎಲ್‌ ಸಿ ವಾರ್ಷಿಕ ಪರೀಕ್ಷೆಯ ಮೌಲ್ಯಮಾಪನ ಕ್ರಮವನ್ನು ಶಾಲಾಹಂತದಲ್ಲಿಯೂ ಅನುಸರಿಸಬೇಕು. ಅಲ್ಲಿ ಮಂಡಳಿಯವರು ಒಬ್ಬ ಶಿಕ್ಷಕರಿಂದ ಒಂದು ದಿನಕ್ಕೆ ೧೬೦೦ ರಿಂದ ೨೦೦೦ ಅಂಕಗಳ ಮೌಲ್ಯಮಾಪನವನ್ನು ಅಂದರೆ ಒಬ್ಬ ಶಿಕ್ಷಕರಿಂದ ದಿನಕ್ಕೆ ಇಪ್ಪತ್ತು ಪತ್ರಿಕೆಗಳನ್ನು ಮಾತ್ರ ಮೌಲ್ಯಮಾಪನ ಮಾಡಿಸುತ್ತಾರೆ. ಇದೂ ಒಂದಿಷ್ಟು ಹೆಚ್ಚಾಯಿತು ಎನ್ನಬಹುದಾದರೂ ಅನೇಕ ಕಾರಣಗಳಿಂದ ಒಪ್ಪಿಕೊಳ್ಳಬಹುದಾದ ಒಂದು ಮಾದರಿಯಾಗಿದೆ.

ಮಂಡಳಿಯವರು ಪೂರ್ಣಪ್ರಮಾಣದಲ್ಲಿ ಮೌಲ್ಯಮಾಪನ ಮಾಡಿಸುವಾಗಲೇ ಶಿಕ್ಷಕರು ದಿನಕ್ಕೆ ೨೦ ಪತ್ರಿಕೆ ಮೌಲ್ಯಮಾಪನ ಮಾಡುತ್ತಾರೆ ಎನ್ನುವುದಾದರೆ ಶಾಲೆಯ ದೈನಂದಿನ ಪಾಠಪ್ರವಚನಗಳ ಕೆಲಸಗಳ ಜೊತೆಗೆ ಶಾಲೆಯಲ್ಲಿ ಮೌಲ್ಯಮಾಪನ ಮಾಡುವಾಗ ಅಷ್ಟೇ ಅಂಕದ ಪತ್ರಿಕೆಗಳಾದರೆ ಅದರ ಅರ್ಧದಷ್ಟು ಅಂದರೆ ದಿನಕ್ಕೆ ೧೦ ಪತ್ರಿಕೆಗಳನ್ನು ಮಾತ್ರ ಅವರಿಂದ ಮೌಲ್ಯಮಾಪನ ಮಾಡಿಸಬೇಕು. ಅಂದರೆ ಸುಮಾರು ೫೦ ವಿದ್ಯಾರ್ಥಿಗಳಿರುವ  ತರಗತಿಯ ಪತ್ರಿಕೆಗೆ ಶಿಕ್ಷಕರಿಗೆ ಕನಿಷ್ಠ ೫ ಕೆಲಸದ ದಿನಗಳು ಮೌಲ್ಯಮಾಪನಕ್ಕೆ ಸಿಗುವಂತೆ ನೋಡಿಕೊಳ್ಳಬೇಕು. ಆನಂತರ ದೊರೆತ ಅಂಕಗಳನ್ನು ಸರಿಯಾಗಿ ವಿಶ್ಲೇಷಣೆ ಮಾಡಲು ಏನಿಲ್ಲವೆಂದರೂ ಮೂರು ನಾಲ್ಕು ಕೆಲಸದ ದಿನ ಕೊಡಬೇಕು. ಅಂದರೆ ಒಟ್ಟಿನಲ್ಲಿ ಪರೀಕ್ಷೆ ಮುಗಿದ ಕನಿಷ್ಠ ಹತ್ತು ದಿನಗಳ ಒಳಗೆ ಅವರಿಂದ ಯಾವುದೇ ಅಂಕಗಳನ್ನಾಗಲಿ ವಿಶ್ಲೇಷಣೆಯ ಅಂಕಿಅಂಶಗಳನ್ನಾಗಲಿ ನಿರೀಕ್ಷೆ ಮಾಡಲೇಬಾರದು. ಆಗಮಾತ್ರ ಸರಿಯಾದ ಮೌಲ್ಯಮಾಪನ ಮತ್ತು ಸರಿಯಾದ ವಿಶ್ಲೇಷಣೆಯನ್ನು ನಾವು ನಿರೀಕ್ಷಿಸಬಹುದು.

ನಾವು ಹೀಗೆ ಮಾಡದೆ ಪರೀಕ್ಷೆ ಮುಗಿಯುತ್ತಿದ್ದಂತೆಯೇ ಅವಸರ ಮಾಡತೊಡಗಿದರೆ ಏನಾಗುತ್ತದೆ ಎಂಬುದನ್ನು ಮೊದಲೇ ನೋಡಿದ್ದೇವೆ. ಅತೀ ವಿಳಂಬ ಹೇಗೆ ಒಳ್ಳೆಯದಲ್ಲವೋ ಅತೀ ಅವಸರವೂ ಹಾಗೇ ಒಳ್ಳೆಯದಲ್ಲ. ಅಷ್ಟಕ್ಕೂ ಅಷ್ಟು ಅವಸರ ಮಾಡಿ ನಾವು ಮಾಡುವುದಾದರೂ ಏನಿರುತ್ತದೆ? ಐಸಿಯುನಲ್ಲಿ ಪೇಸೆಂಟನ್ನು ಹಾಕಿದಾಗ ಡಾಕ್ಟರ್‌,  ʻಬೇಗ ಬ್ಲಡ್‌ ಗೆ ವ್ಯವಸ್ಥೆಮಾಡಿ ಅರ್ಜೆಂಟ್‌ ಅರ್ಜೆಂಟ್‌ʼ ಎಂದು ಒತ್ತಾಯಿಸುವಂತೆ ಒತ್ತಾಯಿಸುವ ಅವಸರ ಇಲ್ಲಿ ಏನೂ ಇರುವುದಿಲ್ಲ. ಅಷ್ಟಕ್ಕೂ ಈ ವಿಶ್ಲೇಷಣೆಗಳನ್ನು ನಾವು ಮಾಡುವುದೇ ಅವುಗಳು ನೀಡುವ ಮಾಹಿತಿಯನ್ನು ಮುಂದಿನ ಕಲಿಕಾಬೋಧನಾ ಕಾರ್ಯಗಳಲ್ಲಿ ಮಾರ್ಗದರ್ಶಿಯಾಗಿ ಬಳಸಿಕೊಳ್ಳಲು. ಅದಕ್ಕೆ ಉಪಯೋಗಕ್ಕೆ ಬರದಿದ್ದರೆ ಅವು ಇದ್ದರೂ ಅಷ್ಟೇ ಇರದಿದ್ದರೂ ಅಷ್ಟೆ.

ವರ್ಷಪೂರ್ತಿ ಕಷ್ಟಪಟ್ಟು ಮಕ್ಕಳನ್ನು ಓದಿಸಿ ಬರೆಸಿ ಪರೀಕ್ಷೆಗೆ ತಯಾರು ಮಾಡುವ ಒಬ್ಬ ಶಿಕ್ಷಕಿಗೆ ಹಬ್ಬದ ದಿನ ತನ್ನ ಮನೆಯ ಮಕ್ಕಳಿಗೆ ಒಂದು ಸ್ನಾನಮಾಡಿಸಿ ನೆಮ್ಮದಿಯಿಂದ ಅಡಿಗೆಮಾಡಿ ಊಟ ಹಾಕಲು ಆಗದಂತೆ ಒತ್ತಡ ಮಾಡಿದಾಗ ಆಕೆ ಎಷ್ಟರಮಟ್ಟಿಗೆ ತನ್ನ ಮುಂದಿನ ಬೋಧನಾ ಕಾರ್ಯದಲ್ಲಿ ಪ್ರೀತಿಯಿಂದ ತೊಡಗಿಕೊಳ್ಳಬಹುದು? ಯಾವುದೋ ತರಬೇತಿ ಪಡೆಯಲು ಹೋದ ಶಿಕ್ಷಕ ತಾನು ಪಡೆಯುವ ಮುಖ್ಯವಾದ ತರಬೇತಿಯನ್ನು ಬಿಟ್ಟು ಮೌಲ್ಯಮಾಪನ ಮಾಡಲು ತೊಡಗಿದರೆ ಆ ತರಬೇತಿಯಿಂದ ಆತ ಪಡೆದ ಅಥವಾ ಪಡೆಯದ ಜ್ಞಾನ ವ್ಯವಸ್ಥೆಗೆ ನಷ್ಟವಲ್ಲವೇ? ಅನಗತ್ಯವಾಗಿ ಒತ್ತಡ ಹೇರಿ ಅವಸರ ಅವಸರ ಮಾಡಿ ಪಡೆಯುವ ʻದೇವರ ಅಂಕಿʼ ಅಂಕಗಳು, ಅವುಗಳನ್ನು ಆದರಿಸಿದ ವಿಶ್ಲೇಷಣೆಗಳು, ಮತ್ತು ಈ ಅಸಂಬದ್ಧ ವಿಶ್ಲೇಷಣೆಗಳನ್ನು ಇಟ್ಟುಕೊಂಡು ಮಾಡುವ ದೊಡ್ಡ ದೊಡ್ಡ ಮಟ್ಟದ ಸಭೆಗಳು, ಅವು ಸ್ವತಃ ದೇವಲೋಕದಲ್ಲಿ ದೇವೇಂದ್ರನ ಅಧ್ಯಕ್ಷತೆಯಲ್ಲಿ ನಡೆದರೂ, ಅವು ಯಾವೂ ಶಿಕ್ಷಣವನ್ನು ಸುಧಾರಿಸಲಾರವು. ಏಕೆಂದರೆ ಅಡಿಪಾಯದ ಅಂಕಿಅಂಶಗಳೇ ತಪ್ಪಿರುವುದರಿಂದ ಮೇಲಿನ ಕಟ್ಟಡ ಭದ್ರವಾಗುವುದು ಸಾಧ್ಯವೇ ಇಲ್ಲ. ಇವೆಲ್ಲವೂ ಒಟ್ಟಾರೆ ಅನಗತ್ಯ ಗೊಂದಲ ಸೃಷ್ಟಿಸಿ ವರ್ಷವರ್ಷಕ್ಕೂ ಮಕ್ಕಳಿಗೆ ಕೃಪಾಂಗಳನ್ನು ಹೆಚ್ಚು ಹೆಚ್ಚು ಕೊಡುತ್ತಾ ಅವರನ್ನು ಪಾಸು ಮಾಡಬೇಕಾದ ಹೀನ ಸ್ಥಿತಿಗೆ ವ್ಯವಸ್ಥೆಯನ್ನು ಒಯ್ಯುವುದೇ ಹೆಚ್ಚು.

ಶಿಕ್ಷಕರು ಮನೆಯಲ್ಲಿ ಒಂದಿಷ್ಟು ಶಾಲೆಯ ಕೆಲಸ ಮಾಡಿದರೆ ಏನು ತಪ್ಪು ಮಾಡಲಿ ಬಿಡಿ  ಎಂದು ಕೆಲವರು ಹೇಳಬಹುದು. ಹೌದು ಯಾರಿಗಾದರೂ ಮನೆಯಲ್ಲಿ ಸಮಯ ಸಿಗುವುದಾದರೆ ಅದನ್ನು ಮಾಡಿಕೊಂಡರೆ ತಪ್ಪಲ್ಲ. ಆದರೆ ಅದನ್ನು ಅವರ ಆಯ್ಕೆಗೆ ಬಿಡಬೇಕೆ ಹೊರತು ವ್ಯವಸ್ಥೆ ಅದನ್ನು ನಿರೀಕ್ಷಿಸಬಾರದು. ಪ್ರತಿಯೊಬ್ಬರಿಗೂ ಒಂದೊಂದು ವೈಯಕ್ತಿಕ ಬದುಕು ಎನ್ನುವುದು ಇರುತ್ತದೆ ಎನ್ನುವುದನ್ನು ನಾವು ಮರೆಯಬಾರದು. ನನ್ನ ಪ್ರಕಾರ ಮನೆಯ ಬೆಡ್‌ ರೂಮಿನಲ್ಲಿ ಮಾಡುವ ಕೆಲಸವನ್ನು ಕ್ಲಾಸ್‌ ರೂಮಿನಲ್ಲಿ ಮಾಡಬಾರದು ಎನ್ನುವುದಾದರೆ ಕ್ಲಾಸ್‌ ರೂಮಿನಲ್ಲಿ ಮಾಡುವ ಕೆಲಸಗಳನ್ನು ಬೆಡ್‌ ರೂಮಿನಲ್ಲೂ ಮಾಡಬಾರದು. ಅದೇ ಶಿಸ್ತು.

ಕೊನೆಯ ಮಾತು: ಯಾವುದೇ ಕೆಲಸವಿರಲಿ ಅದನ್ನು ಪ್ರೀತಿಯಿಂದ ಮಾಡಿದಾಗ ಬರುವ ಯಶಸ್ಸನ್ನು ಅದನ್ನು ಒತ್ತಾಯದಿಂದ ಮಾಡಿದಾಗ ಬರಲು ಸಾಧ್ಯವೇ ಇಲ್ಲ. ಒತ್ತಾಯದಿಂದ ಮಾಡಿದ ಕೆಲಸ ಒತ್ತಿಮಾಡಿದ ಹಣ್ಣಿನಂತೆಯೇ ಆಗುತ್ತದೆ. ಅದು ಮೆತ್ತಗಾಗಬಹುದೇ ಹೊರತು ರುಚಿಕೊಡಲಾರದು. ಜೊತೆಗೆ ನಮ್ಮ ಶಿಕ್ಷಕರು ʼAlways busy in unnecessary thingś  ಎಂಬ ಹೇಳಿಕೆಯಂತೆ ಸದಾ ಕೆಲಸಕ್ಕೆ ಬಾರದ ಕೆಲಸದಲ್ಲಿ ತೊಡಗಿಕೊಳ್ಳದಂತೆ ನೋಡಿಕೊಳ್ಳಬೇಕಾದದ್ದು ಸಂಬಂಧಪಟ್ಟವರೆಲ್ಲರ ಜವಾಬ್ದಾರಿ. ಈ ದೃಷ್ಟಿಯಿಂದ ವಿಶ್ಲೇಷಣೆಯಲ್ಲಿ ಎರಡು ವಿಧಗಳನ್ನು ಗುರುತಿಸಬಹುದು. ಒಂದು ‌ʻಟಾರ್ಚ್‌ ಅನಾಲಿಸಿಸ್ʼ ಇನ್ನೊಂದು ʻಟಾರ್ಚರ್‌ʼ ಅನಾಲಿಸಿಸ್‌ʼ. ‌ʼಟಾರ್ಚ್‌ ಅನಾಲಿಸಿಸ್ʼ ಬೆಳಕನ್ನು ನೀಡಿ ನಮ್ಮನ್ನು ಮುನ್ನಡೆಸುತ್ತದೆ. ʻಟಾರ್ಚರ್‌ ಅನಾಲಿಸಿಸ್‌ʼ ಹಿಂಸೆಯನ್ನು ನೀಡಿ ಹಿನ್ನಡೆಸುತ್ತದೆ. ನಮ್ಮೆಲ್ಲರ ಆಯ್ಕೆ ಯಾವಾಗಲೂ ಮೊದಲನೆಯದೇ ಆಗಿರಲಿ.

 ***

ಡಾ . ರಾಜೇಂದ್ರ ಬುರಡಿಕಟ್ಟಿ

buradikatti@gmail̤̤com

೧೮-೧೧-೨೦೨೪

 

1 comment: