Saturday, November 30, 2024

ಹಿಂದೆಲೆ ಹಿಂಬಾಗಿಲು ಒಂದೇ ಅಲ್ಲ

ಹಿಂದೆಲೆ, ಹಿಂಬಾಗಿಲು ಒಂದೇ ಅಲ್ಲ! 

ಕನ್ನಡ ಅಧ್ಯಾಪಕರಾಗಿರುವ ಗೆಳೆಯರೊಬ್ಬರು ಅಂಶೀಸಮಾಸವನ್ನು ಕುರಿತು ವಿವರಣೆ ಕೇಳಿದ್ದಾರೆ. ಅಂಶೀಸಮಾಸ ʻಕನ್ನಡ ವ್ಯಾಕರಣʼವೆಂದು ಈಗ ನಾವು ಕಲಿಯುತ್ತಿರುವ ಮತ್ತು ಕಲಿಸುತ್ತಿರುವ ಸಂಸ್ಕೃತ ವ್ಯಾಕರಣದಲ್ಲಿ ಬರುವ ಒಂದು ಸಮಾಸ ಎಂಬುದು ಬಹುತೇಕ ಎಲ್ಲ ಶಿಕ್ಷಕರಿಗೆ ತಿಳಿದ ಸಂಗತಿ. ಆದರೆ ಇದಕ್ಕೆ ಉದಾಹರಣೆಗಳನ್ನು ಕೊಡುವಾಗ ಬಹಳಷ್ಟು ಜನ ಎಡೆವಿ ಬೀಳುವುದನ್ನು ನಾವು ನೋಡುತ್ತೇವೆ. ಹೀಗೆ ಎಡವಿ ಬೀಳುವವವರು ಕೇವಲ ವಿದ್ಯಾರ್ಥಿಗಳಾಗಿರದೇ ಅಷ್ಟೇ ಏಕೆ ಅಧ್ಯಾಪಕರಾಗಿರದೆ ಈ ವಿಷಯದಲ್ಲಿ ವಿದ್ವಾಂಸರೂ ಇರುವುದು ನಿಜ. ಇದಕ್ಕೆ ಕಾರಣವೇನು ಎಂಬುದನ್ನು ಈಗ ನೋಡೋಣ.

ಅಂಶೀಸಮಾಸ ಎಂದರೇನು ಎಂಬ ಪ್ರಶ್ನೆಯಿಂದಲೇ ಶುರುವುಮಾಡಬಹುದೇನೋ.  ಪೂರ್ವೋತ್ತರ ಪದಗಳು ಅಂಶ-ಅಂಶೀ ಭಾವದಿಂದ ಸೇರಿ ಆಗುವ ಸಮಾಸವೇ ಅಂಶೀಸಮಾಸ ಎಂಬುದು ಬಹುತೇಕ ವೈಯಾಕರಣಿಗಳ ಅಭಿಪ್ರಾಯ. ಇದನ್ನು ʼಅವ್ಯಯೀಭಾವʼ ಎಂದೂ ಕರೆಯಲಾಗುತ್ತದೆ. ಈ ಹೆಸರುಗಳ ಔಚಿತ್ಯವನ್ನು ಕುರಿತು ಎರಡು ಮಾತು ಹೇಳಬಹುದು.  ಮೊದಲನೆಯದು ಇದನ್ನು ಅಂಶೀಸಮಾಸ ಎಂದು ಕರೆಯಲು ಕಾರಣ ಇದು ಅಂಶಾಂಶಭಾವದಿಂದ ಕೂಡಿರುತ್ತದೆ ಎಂಬುದು. ಅವ್ಯಯೀಭಾವ ಸಮಾಸ ಎನ್ನಲು ಕಾರಣ ಇದು ಅಂಶವು ʻವ್ಯಯವಾಗುವುದಿಲ್ಲʼ ಎಂಬುದು ಕಾರಣ. ಅವ್ಯಯೀಭಾವ ಎಂಬ ಹೆಸರು ಸಂಸ್ಕೃತದ ʼವ್ಯಯʼ ಮತ್ತದರ ಎದುರುಪದವಾದ ʼಅವ್ಯಯʼ ಎಂಬ ಪದಗಳ ಕಾರಣಕ್ಕಾಗಿ ಬಂದುದು. ಇಲ್ಲಿ ಪೂರ್ವಪದವಾದ ಅಂಶವು ʼಬದಲಾಗುವುದಿಲ್ಲʼ ಅಥವಾ ʼನಾಶವಾಗುವುದಿಲ್ಲʼವಾದ ಕಾರಣ ಇದು ಅವ್ಯಯೀಭಾವ ಸಮಾಸ. 

ʻಅವ್ಯಯʼ ಪದವು ಸಂಸ್ಕೃತ ವಾಙ್ಮಯದಲ್ಲಿ ಯಥೇಚ್ಚವಾಗಿ ಬಳಕೆಯಾಗಿದೆಯಾದರೂ ಅದನ್ನು ಒಂದು ʼಪಾರಿಭಾಷಿಕ ಪದವಾಗಿ ಮೊದಲು ಬಳಸಿದವನು ಪಾಣಿನಿ ಅನ್ನಿಸುತ್ತದೆ. ಅವನು ತನ್ನ ʼಅಷ್ಟಾಧ್ಯಾಯಿʼಯಲ್ಲಿ ಇದನ್ನು ಹೀಗೆ ಶಿಸ್ತುಬದ್ಧಗೊಳಿಸಿರುವುದನ್ನು ನಾವು ಕಾಣುತ್ತೇವೆ. ಕೇಶಿರಾಜ ತನ್ನ ʼಶಬ್ದಮಣಿದರ್ಪಣಂʼನಲ್ಲಿ ಹೇಳುವ ಆರು ಸಮಾಸಗಳಲ್ಲಿ ಕೊನೆಯ ಸಮಾಸವೇ ಈ ʻಅವ್ಯಯೀಭಾವ ಸಮಾಸʼ. ಇದನ್ನು ಕುರಿತು ಅವನು ಹೇಳುವುದು ಹೀಗೆ: ʼಅವ್ಯಯೀಭಾವಮಾದಿಪದಮುಖ್ಯತೆಯಿಂʼ. ಅಂದರೆ ಇಲ್ಲಿ ಆದಿಪದವೇ ಮುಖ್ಯ. ಅಂದರೆ ಅಂಶೀ ಸಮಾಸದಲ್ಲಿ ಅಂಶ ಮುಖ್ಯವೇ ಹೊರತು ಅಂಶಿ ಅಲ್ಲ. ಅಂಶಕ್ಕೆ ಸ್ವತಂತ್ರ ಅಸ್ತಿತ್ವ ಇದ್ದಂತೆ ಅಂಶಿಗೆ ಇರುವುದಿಲ್ಲ. ಅಂಶಿಯು ಅಂಶದ ಭಾಗವಾಗಿಯೇ ಇರುವಂಥದ್ದು. 

ಕೇಶಿರಾಜ ಅದರ ಲಕ್ಷಣಗಳನ್ನು ಹೇಳುವಾಗ ಬಳಸುವ ಮಾತುಗಳು ಹೀಗಿವೆ: ಅಡಿಮೇಗುಗಳಂತ್ಯಾಕ್ಷರ/ ದೆಡೆಗಕ್ಕುಂ ಬಿಂದು ಮುಂದುಪಿಂದುಗಳಂತ್ಯ/ ಕೊಡರಿಸುಗುಂ ಲೋಪಂ ನೋ/  ಳ್ಪೊಡವ್ಯಯೀಭಾವದೊಳ್‌ ಕೆಳಗುಕಿಳೆನಿಕ್ಕುಂ. ಅಂದರೆ ʼಅಡಿʼ ಪದ ಬಂದರೆ ಅದರ ಡಿ ಬದಲು ಬಿಂದು ಬರುತ್ತದೆ. ಉದಾ: ಅಡಿ + ಕಾಲ್‌ = ಅಂಗಾಲ್, ʼʼಮುಂದುʼ ʼಹಿಂದುʼ ಪದಗಳು ಇರುವಾಗ ಕೂಡಿಸಿದಾಗ ದು ಲೋಪವಾಗುತ್ತದೆ. ಉದಾ: ಮುಂದು + ತೆಲೆ = ಮುಂದೆಲೆ. ʼಕೆಳಗೆʼ ಇರುವಾಗ ಕಿಳ್‌ ಆಗುತ್ತದೆ.... ಹೀಗೆ ಮುಂದುವರೆಯುತ್ತದೆ ಅವನ ವಿವರಣೆ.

ಆಧನಿಕ ಸಂದರ್ಭದಲ್ಲಿ ಹಿಂದಿನ ವೈಯಾಕರಣಿಗಳ ಆಲೋಚನೆಗಳೆಲ್ಲವನ್ನೂ ಒಟ್ಟಾಗಿಸಿ, ಒಂದಿಷ್ಟು ಪರಿಷ್ಕರಿಸಿಕೊಂಡು ಅಂಶೀಸಮಾಸವನ್ನು ನಾವು ಬೋಧಿಸುತ್ತಿದ್ದೇವೆ. ಹೀಗೆ ಬೋಧಿಸುವಾಗ ಒಂದಿಷ್ಟು ಮಾರ್ಪಾಡು ಮಾಡಿಕೊಂಡಿರುವುದಾದರೂ ಅದರ ತಿರುಳನ್ನು ಬಿಟ್ಟಿಲ್ಲ ಎಂಬುದು ಬಹಳ ಮುಖ್ಯ. ಅಂದರೆ ಪದಗಳ ವಿಗ್ರಹವಾಕ್ಯ ಮಾಡುವಾಗ ಸ್ಥಾನಪಲ್ಲಟ ಮಾಡಿಕೊಂಡಿದ್ದೇವೆ. ಆದರೆ ಅದರ ಮುಖ್ಯ ತಿರುಳಾದ ʼಅಂಶಾಂಶಿಭಾವʼ ಮತ್ತು ʼಅವ್ಯಯೀಭಾವʼ (ಪಾಣಿನಿ ಹೇಳುವ ಬದಲಾಗದ ಸ್ಥಿತಿ ಅಂದರೆ ʼUnchangable stateʼ ಇವೆರಡನ್ನೂ ಬಿಟ್ಟುಕೊಟ್ಟಿಲ್ಲ.

ಈಗ ಚರ್ಚೆಯ ಆರಂಭಿಕ ಪ್ರಶ್ನೆಗೆ ಬರೋಣ. ಅಂದರೆ ಈ ಸಮಾಸದ ಉದಾಹರಣೆಗಳನ್ನು ಕೊಡುವಾಗ ನಾವು ಎಡವಿಬೀಳುವುದು: ಸಾಮಾನ್ಯವಾಗಿ ಈ ಸಮಾಸಕ್ಕೆ ಕೊಡುವ ಉದಾಹರಣೆಗಳು ಇಂತಿವೆ: ಮುಂದೆಲೆ, ಅಂಗೈ, ನಟ್ಟಿರುಳು, ಅಂಗಾಲು, ತುದಿನಾಲಿಗೆ, ಮುಂಗಾರು, ಹಿಂಬಾಗಿಲು, ನಡುಮನೆ, ಹೊರಗೋಡೆ, ತುದಿಬೆರಳು ಇತ್ಯಾದಿ. ಇವುಗಳಲ್ಲಿ ಕೆಲವು ಪದಗಳನ್ನು ಮಾತ್ರ ಇಲ್ಲಿ ಬಿಡಿಸಿ ಬರೆಯೋಣ. ಉದಾಹರಣೆಗೆ ʼಮುಂದೆಲೆʼ ಪದವನ್ನು ನೋಡೋಣ. ಇದನ್ನು ಎರಡು ರೀತಿಯಲ್ಲಿ ಬರೆಯಲು ಸಾಧ್ಯವಿದೆ. ಒಂದು: ಮುಂದಿನ + ತಲೆ. ಇನ್ನೊಂದು: ತಲೆಯ + ಮುಂದು (ಮುಂದಿನಭಾಗ). ಇವು ಎರಡಕ್ಕೂ ಅರ್ಥವಿದೆ ಎಂಬುದನ್ನೂ ಮತ್ತು ಈ ಅರ್ಥವು ಭಿನ್ನವಾಗಿದೆ ಎಂಬುದನ್ನು ನಾವು ತಿಳಿಯಬೇಕು. ʻಮುಂದಿನ + ತಲೆʼ ಎಂದರೆ ತಲೆಗಳು ಹಲವಾರು ಇವೆ ಅವುಗಳಲ್ಲಿ ಮುಂದೆ ಇರುವಂತಹ ತಲೆ ಎಂದು ಅರ್ಥ. ʻತಲೆಯ + ಮುಂದುʼ ಎಂದರೆ ಇರುವುದು ಒಂದೇ ತಲೆ. ಅದರ ಮುಂದಿನ ಭಾಗ ಎಂದು ಅರ್ಥ. ಇಲ್ಲಿ ಎರಡಕ್ಕೂ ಅರ್ಥವಿರುವುದಾದರೂ ಅಂಶೀಸಮಾಸದ ನಿಯಮವು ಅಂಶಾಂಶಿ ಭಾವವನ್ನೂ, ಅವ್ಯಯೀಭಾವವನ್ನೂ ಹೇಳುವುದರಿಂದ, ಮತ್ತು ಸಾಮಾನ್ಯವಾಗಿ ತಲೆ ಎಂಬುದು ಒಂದೇ ಇರುತ್ತದೆಯಾದ್ದರಿಂದ (ರಾವಣನ ಉದಾಹರಣೆಯನ್ನು ಯಾರೂ ಅಡ್ಡ ತರಬೇಡಿ)  ನಾವು ಎರಡನೆಯ ರಚನೆಯನ್ನು ಮಾನ್ಯಮಾಡುತ್ತೇವೆ. ಏಕೆಂದರೆ ಎರಡನೆಯ ರಚನೆಯನ್ನು ಇಟ್ಟುಕೊಂಡಾಗ ಅದು ಅರ್ಥಪೂರ್ಣವಾಗುತ್ತದೆ. 

ಇದೇ ರೀತಿಯಲ್ಲಿ ಮೇಲಿನ ಅಂಗೈ, ತುದಿನಾಲಿಗೆ, ತುದಿಬೆರಳು, ಮುಂತಾದವುಗಳನ್ನು ಬಿಡಿಸಿಕೊಳ್ಳಲು ಸಮಸ್ಯೆಯೇನಿಲ್ಲ. ಆದರೆ ಇಲ್ಲಿರುವ ʼಹೊರಗೋಡೆʼ  ಪದವನ್ನು ಗಮನಿಸಿ. ಈ ಪದವನ್ನು ನಾವು ಮುಂದೆಲೆ ಪದದಂತೆಯೇ ಎರಡೂ ರೀತಿ ಬಿಡಿಸಬಹುದು. ಇಲ್ಲಿ ಭಾಷಾರಚನೆಯ ಜೊತೆಜೊತೆಗೆ ವಾಸ್ತವಾಂಶವನ್ನೂ ಗಮನಿಸಬೇಕು. ಹೊರಗೋಡೆಯನ್ನು ನಾವು ಎರಡು ಅರ್ಥದಲ್ಲಿ ಬಳಸುತ್ತೇವೆ. ಒಂದು ʼಗೋಡೆಯ ಹೊರಗಿನ ಭಾಗʼ ಎಂಬರ್ಥದಲ್ಲಿ ಮತ್ತು ʼಹೊರಗಿನ ಗೋಡೆʼ ಎಂಬರ್ಥದಲ್ಲಿ. ಇವುಗಳಲ್ಲಿ ಯಾವುದು ಹೆಚ್ಚು ಬಳಕೆಯಾಗುತ್ತದೆ? ಕೊನೆಯದೆ. ಮನೆಯಲ್ಲಿರುವ ಬಹಳಷ್ಟು ಗೋಡೆಗಳಲ್ಲಿ ಹೊರಗಿರುವ ಗೋಡೆಯನ್ನು ನಿರ್ದೇಶಿಸುವಾಗ ನಾವು ʼಹೊರಗೋಡೆʼ ಪದವನ್ನು ಹೆಚ್ಚು ಬಳಸುತ್ತೇವೆಯೇ ಹೊರತು ʼಗೋಡೆಯ ಹೊರಭಾಗʼ ಎಂದು ಹೇಳಲು ಅಲ್ಲ. ಆಗೆಲ್ಲ ʼಗೋಡೆ ಹೊರಭಾಗʼ ಎಂದೇ ಹೇಳುತ್ತೇವೆ. ಹೀಗಿರುವಾಗ ಇದು ಅಂಶೀ ಸಮಾಸಕ್ಕೆ ಸರಿಯಾದ ಉದಾಹರಣೆ ಆಗುತ್ತದೆಯೇ ಎಂಬುದು ಪ್ರಶ್ನೆ. ಅದು ಅಂಶೀಸಮಾಸವಾಗಬೇಕಾದರೆ ಅದನ್ನು ʻಗೋಡೆಯ + ಹೊರಗುʼ ಎಂಬ ಅತ್ಯಂತ ಕಡಿಮೆ ಬಳಕೆಯ ರಚನೆಯನ್ನೇ ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಹಾಗಾಗಿ ಇದು ಅರ್ಧಂಬರ್ಧ ಸರಿಯಾಗಬಹುದಾದ ಉದಾಹರಣೆ.

ಇಲ್ಲಿರುವ ಇನ್ನೂ ಒಂದು ಉದಾಹರಣೆಯನ್ನು ನೋಡಿ. ಅದು ʼಹಿಂಬಾಗಿಲುʼ ಪದ. ಇದೇ ರೀತಿ ʻಮುಂಬಾಗಿಲುʼ ʼಕೆಳಗೇರಿʼ ಪದಗಳನ್ನೂ ಈ ಸಮಾಸಕ್ಕೆ ಉದಾಹರಣೆಯಾಗಿ ಕೊಡುವುದುಂಟು. (ಇವು ಪಠ್ಯಪುಸ್ತಕದಲ್ಲಿಯೂ ಇವೆ). ಇವನ್ನು ವಿಗ್ರಹವಾಕ್ಯಮಾಡಿ ಸಮಾಸವನ್ನು ಹೆಸರಿಸಿ ಎಂದು ಕೇಳುವವರ ನಿರೀಕ್ಷೆ ಏನಿರುತ್ತದೆ? ಅವರು ಉತ್ತರವಾಗಿ ʻಬಾಗಿಲಿನ + ಮುಂದುʼ, ʼಬಾಗಿಲಿನ + ಹಿಂದುʼ, ʼಕೇರಿಯ + ಕೆಳಗುʼ ಇತ್ಯಾದಿಯಾಗಿ ಬರೆದು ʼಅಂಶೀಸಮಾಸʼ ಎಂದು ಬರೆಯಬೇಕು  ಎಂಬುದಾಗಿರುತ್ತದೆ  ತಾನೆ? ಹಾಗೆ ಬರೆದಾಗ ಅದನ್ನು ಸರಿಯೆಂದು ಒಪ್ಪಿಕೊಳ್ಳುವುದು ನಿಜತಾನೆ? ಆದರೆ ಇದು ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ನಾವು ಸೂಕ್ಷ್ಮವಾಗಿ ನೋಡೋಣ. ಹೀಗೆ ಈ ಪದಗಳನ್ನು ಪೂರ್ವಪದ ಅರ್ಥಪ್ರಧಾನವಾಗಿ ಬಿಡಿಸಿ ಬರೆಯುವುದು ಭಾಷಾ ರಚನೆಯ ದೃಷ್ಟಿಯಿಂದ ಸರಿಯಿರುವುದೇನೋ ನಿಜ. ಆದರೆ ಅರ್ಥದ ದೃಷ್ಟಿಯಿಂದ ಸರಿಯಾಗುತ್ತವೆಯೇ? 

ಅಂಶೀ ಸಮಾಸದ ನಿಯಮದ ಪ್ರಕಾರ ಪೂರ್ವಪದದ ಒಂದು ಭಾಗವನ್ನು ಉತ್ತರಪದ ನಿರ್ದೇಶಿಸಬೇಕು. ಹಾಗಾಗಿಯೇ ಹೀಗೆ ಬರೆಯುವುದು. ಆದರೆ ಈ ಪದಗಳನ್ನು ವಾಸ್ತವವಾಗಿ ನಾವು ಯಾವ ಅರ್ಥದಲ್ಲಿ ಬಳಸುತ್ತೇವೆ? ʼಹಿಂಬಾಗಿಲುʼ ಎಂಬ ಪದವನ್ನು ʼಬಾಗಿಲಿನ ಹಿಂದಿನ ಭಾಗʼ ಎಂಬ ಅರ್ಥ ಬರುವಂತೆ ಯಾರೂ ಬಳಸುವುದಿಲ್ಲ. ಅಂದರೆ ಅಂಶ-ಅಂಶೀಭಾವದಿಂದಾಗಲೀ, ಅವ್ಯಯೀಭಾವದಿಂದಾಗಲೀ ಅದು ಬಳಕೆಯಾಗುವುದೇ ಇಲ್ಲ. ಒಂದು ಮನಯಲ್ಲಿರುವ ಅನೇಕ ಬಾಗಿಲುಗಳಲ್ಲಿ ಮನೆಯ ಹಿಂದೆ ಇರುವ ಬಾಗಿಲನ್ನು ನಿರ್ದೇಶಿಸುವುದಕ್ಕೆ ʼಹಿಂಬಾಗಿಲುʼ ಎಂದೂ ಅದೇ ರೀತಿ ಮುಂದಿರುವ ಬಾಗಿಲನ್ನು ನಿರ್ದೇಶಿಸುವುದಕ್ಕೆ ʼಮುಂಬಾಗಿಲುʼ ಎಂದೂ, ಊರಿನ ಬಹಳಷ್ಟು ಕೇರಿಗಳಲ್ಲಿ ಕೆಳಗೆ ಇರುವ ಕೇರಿಯನ್ನು ನಿರ್ದೇಶಿಸುವುದಕ್ಕೆ ʼಕೆಳಗೇರಿʼ ಎಂದು ಬಳಕೆ ಮಾಡಲಾಗುತ್ತದೆಯೇ ಹೊರತು ಅವನ್ನು, ಒಂದು ಬಾಗಿಲಿನ ಹಿಂದಿನ ಭಾಗ, ಅಥವಾ ಮುಂದಿನ ಭಾಗ, ಅಥವಾ ಒಂದೇ ಕೇರಿಯ ಕೆಳಗಿನ ಭಾಗ ಎಂಬರ್ಥದಲ್ಲಿ ಎಲ್ಲಿಯೂ ಬಳಕೆಮಾಡಲಾಗುವುದಿಲ್ಲ. ಹಾಗಾಗಿ ಈ ಪದಗಳನ್ನು ಮುಂದಿನ + ಬಾಗಿಲು, ಹಿಂದಿನ + ಬಾಗಿಲು, ಕೆಳಗಿನ + ಕೇರಿ ಎಂದು ಬಿಡಿಸಿ ಬರೆಯುವುದೇ ಸರಿಯಾದ ಕ್ರಮ. ಹೀಗೆ ಬರೆದಾಗ ಅವು ಸಮಂಜವಾಗುತ್ತವೆ! ಆದರೆ ಹೀಗೆ ಬರೆದರೆ ಅವರು ಅಂಶೀ ಸಮಾಸ ಆಗುವುದಿಲ್ಲ!! 

ಸಮಂಜಸವಾಗದಿದ್ದರೂ ಪರವಾಗಿಲ್ಲ; ಸಮಾಸವಾದರೆ ಸಾಕು ಎನ್ನುವ ಅಭಿಪ್ರಾಯ ನಮ್ಮದಾಗಬಾರದು. ಏಕೆಂದರೆ ಭಾಷೆಗಿಂತ ಬದುಕು ಮುಖ್ಯ! ಮಕ್ಕಳು ಬದುಕಿಗೆ ಮಹತ್ವ ಕೊಡುವುದಿಲ್ಲ; ಯಾಕೆಂದರೆ ಅದರ ಬಗ್ಗೆ ಯೋಚಿಸುವಷ್ಟು ಪ್ರಬುದ್ಧ ವಯಸ್ಸು ಅವರದ್ದಲ್ಲ. ʼಅಪ್ಪʼ ಶಬ್ದಕ್ಕೆ ವಿರುದ್ಧಪದ ಬರೆ ಎಂದು ಪ್ರಶ್ನೆಕೊಟ್ಟರೆ ಅವರು ʼಅಮ್ಮʼ ಎಂದು ಬರೆದು, ʼಆಕಾಶʼ ಪದಕ್ಕೆ ಬಹುವಚನ ಬರೆ ಎಂದು ಪ್ರಶ್ನೆಕೊಟ್ಟರೆ, ʻಆಕಾಶಗಳುʼ ಎಂದು ಬರೆದು ಪೂರ್ತಿ ಅಂಕಗಳನ್ನು ಅವರು ಪಡೆಯುತ್ತಾರೆ. ಏಕೆಂದರೆ ನಮ್ಮ ಮೇಷ್ಟ್ರು ನಮ್ಮಿಂದ ಯಾವ ಉತ್ತರವನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದು ಅವರಿಗೆ ಗೊತ್ತಿರುತ್ತದೆ. ಆದರೆ ಪ್ರಶ್ನೆ ಸಮಂಜಸವಾಗಿದೆಯೇ ಎಂಬುದನ್ನು ಅದನ್ನು ಕೇಳುವವರು ಯೋಚಿಸಬೇಕಾಗುತ್ತದೆ. ಅಪ್ಪನಿಗೆ ಅಮ್ಮ ವಿರುದ್ಧ ಎಂಬುದನ್ನು ಒಪ್ಪಿಕೊಂಡರೆ ಗಂಡನಿಗೆ ಹೆಂಡತಿ ವಿರುದ್ಧ ಎಂಬುದನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಗಂಡನಿಗೆ ಹೆಂಡತಿ ವಿರುದ್ಧವಾದರೆ ಸಂಸಾರ ಬದುಕು ನಡೆಯುವುದು ಹೇಗೆ? ʼಆಕಾಶಗಳುʼ ಇರುವುದಾದರೂ ಹೌದಾ?...... ಈ ಹಿಂದೆಲೆ ಹಿಂಬಾಗಿಲ ಸಂಗತಿಯೂ ಇಂಥದ್ದೇ. ಆದರೆ ತುಸು ಸಂಕೀರ್ಣವಾದದ್ದು ಅಷ್ಟೆ.

****

ಡಾ. ರಾಜೇಂದ್ರ ಬುರಡಿಕಟ್ಟಿ

೩೦-೧೧-೨೦೨೪

No comments:

Post a Comment