Tuesday, December 10, 2024

ಸಾಹಿತ್ಯ ಸಮ್ಮೇಳನ ಮತ್ತು ಬಾಡೂಟದ ಮಹಿಮೆ!

 

ಸಾಹಿತ್ಯ ಸಮ್ಮೇಳನ ಮತ್ತು ಬಾಡೂಟದ ಮಹಿಮೆ!


ಇನ್ನೇನು ನಾವು ಊಟ ಸೆಳೆಯಬೇಕು ಅನ್ನುವಷ್ಟರಲ್ಲಿ ಗಂಡಿನ ಕಡೆಯ ದಢೂತಿಯೊಬ್ಬ ಖ್ಯಾತೆ ತೆಗೆದೇಬಿಟ್ಟ. ʼಏನೋ ಇದು ಬಿರ್ಯಾನಿ ನೋಡಿದ್ರೆ, ʼಮೊಘಲೇ ಆಜಂʼ (ಬೀಫ್)ದು ಇದ್ದಂಗಿದೆ. ಥೂ ಥೂ ನಾವು ಇದೆಲ್ಲಾ ತಿನ್ನೋದಿಲ್ಲಪ್ಫ!ʼ ಎಂದುಬಿಟ್ಟ. ..ಹುಡುಗಿಯ ಅಣ್ಣ ಈ ಮಾತು ಕೇಳಿ ಫುಲ್‌ ಗರಂ ಆಗಿಬಿಟ್ಟ. ʼಏನಂದಲೇ ಮಗನೇ, ನಾಲ್ಕು ಕುರಿ ಕೊಯ್ಸಿದ್ಧೀನಿ! ಕಷ್ಟಬಿದ್ದು ಸಾಲಸೋಲ ಮಾಡಿ ಕುರಿ ಮಟನ್‌ ಮಾಡ್ಸಿದ್ರೆ ದನದ ಮಾಂಸ ಅಂತ ಜರಿತೀಯಾ. ನಿಮ್ಮಪ್ಪ ದನಕ್ಕೆ ದುಡ್ಡು ಎಣಿಸಿ ಕೊಟ್ಟಿದ್ನೇನೋ ಲೌಡಿಮಗನೆʼ ಎಂದವನೇ ಆವೇಶದಿಂದ ಕೈಯಲ್ಲಿದ್ದ ಕುದಿಯುತ್ತಿದ್ದ ದಾಲ್ಚವನ್ನು (ಬೇಳೆಸಾರು) ಅವನ ತಲೆಮೇಲೆ ಸುರಿದುಬಿಟ್ಟ. ನಂತರ ಶುರುವಾಯಿತು ನೋಡಿ ಮಾರಾಮಾರಿ!

ಯಾರು ಯಾರಿಗೆ ಹೊಡಿಯುತ್ತಿದ್ದಾರೆ ಅನ್ನೋದೆ ತಿಳಿಯದಂಗೆ ಭಾರಿ ಯುದ್ಧವೇ ಶುರುವಾಗಿ ಬಿಟ್ಟಿತು. ಹಾಕಿದ್ದ ಟೇಬಲ್‌, ಕುರ್ಚಿಗಳೆಲ್ಲಾ ಚೆಲ್ಲಾಪಿಲ್ಲಿ. ಖುಷ್ಕ, ದಾಲ್‌, ಬಿರ್ಯಾನಿ ತುಂಬಿದ ತಟ್ಟೆ, ಗಟ್ಟಿ ಪಾಯಸದ ಬಟ್ಟಲುಗಳೆಲ್ಲಾ ಸಮರ ಸಾಮಗ್ರಿಯಾಗಿ ಬಿಟ್ಟವು. ಎಲ್ಲರೂ ತಮಗೆ ಸಿಕ್ಕ ಶಸ್ತ್ರಾಸ್ತ್ರಗಳನ್ನು ಆಯ್ದುಕೊಂಡರು. ಅದರಲ್ಲಿ ಒಬ್ಬ ಸ್ಥೂಲಕಾಯದ ಆಸಾಮಿ ನೆಟ್ಟಿದ್ದ ಶಾಮಿಯಾನದ ಬೊಂಬನ್ನೇ ಹೊಡೆಯಲೆಂದು ಎಳೆದುಕೊಂಡ.  ಸಪೋರ್ಟಿಗೆ ಇಟ್ಟಿದ್ದ ಆ ಬೊಂಬು ತೆಗೆಯುತ್ತಲೇ ಅಯೋಮಯವಾದ ಶಾಮಿಯಾನು ಆಯತಪ್ಪಿ ʼಧೋʼ ಎಂದು ಕಳಚಿ ಕೆಳಗಿದ್ದವರ ಮೇಲೆ ಬಿದ್ದು ಹೋಯಿತು. ಅದರಡಿಯಲ್ಲಿದ್ದ ಎಲ್ಲರಿಗೂ ತಕ್ಷಣ ಕತ್ತಲು ಕವಿದಂತಾಗಿ ಅಬ್ಬಬ್ಬೋ ಎಂದು ಕಿರಿಚಾಡತೊಡಗಿದರು. ಕೆಲ ಹೆಂಗಸರಂತೂ … ಕಿರಿಚಿಕೊಂಡರು.

ಯಾರೋ ಬಂದು ಪರದೆಯಾಗಿದ್ದ ಶಾಮಿಯಾನವನ್ನು ಎಳೆದು ಹಾಕಿದರು. ನಂತರ ಸಿಕ್ಕಸಿಕ್ಕವರು ಎದುರಿಗೆ ದಕ್ಕಿದವರ ಮುಖಮೂತಿ ನೋಡದೆ ಎಲ್ಲೆಂದರಲ್ಲಿ ಬಾರಿಸತೊಡಗಿದವರು. ದೂರ ದೂರ ಇದ್ದವರೆಲ್ಲಾ ಈ ಅನಾಹುತ ನೋಡಲು ಬಂದು ತಾವೂ ಸಿಕ್ಕ ಸಿಕ್ಕವರನ್ನೆಲ್ಲಾ ಚಚ್ಚಿದರು. ಯಾರು ಯಾರಿಗೆ ಹೊಡೆಯುತ್ತಿದ್ದಾರೆ, ಯಾರು ಹೊಡೆತ ತಿನ್ನುತ್ತಿದ್ದಾರೆ? ಅನ್ನೋದೆ ಗೊತ್ತಾಗದಷ್ಟು ಗೊಂದಲದ ಗೂಡಾಯಿತು…. ʼನಮ್ಮ ಹುಡುಗಿ ಮದ್ವೆ ನಿಂತುಹೋದ್ರೂ ಪರ್ವಾಗಿಲ್ಲ. ನಮ್ಮ ಬಿರ್ಯಾನಿ ದನದ್ದು ಅಂದನಲ್ಲ ಅವನ ಜೀವ ಮಾತ್ರ ಇವತ್ತು ತೆಗೀದೆ ಬಿಡಬೇಡಿʼ ಎಂದು ಫರ್ಮಾನು ಹೊರಡಿಸಿದ. ಮತ್ತೊಬ್ಬ, ʼಗಂಡಿನ ಕಡೆ ಒಬ್ಬರನ್ನೂ ಜೀವ ಸಹಿತ ಬಿಡಬೇಡಿ. ಅವರ ತಿಥಿ ಇಲ್ಲೇ ಆಗಲಿʼ ಎಂದು ಆಜ್ಞಾಪಿಸಿದ. ಸರಿ ಆಮೇಲೆ ಬಿದ್ದವು ನೋಡಿ ಗೂಸದ ಮೇಲೆ ಗೂಸಗಳು. ಮದುವೆ ಊಟ ಎಂದು ಚಪ್ಪರಿಸಲು ಬಂದವರಿಗೆಲ್ಲ ಏಟಿನ ಹಬ್ಬದೂಟ! ಎದ್ದೆವೋ ಬಿದ್ದೆವೋ ಎಂದು ಮದುವೆಗೆ ಬಂದಿದ್ದ ಅತಿಥಿಗಳೆಲ್ಲಾ ಜೀವ ಉಳಿಸಿಕೊಂಡು ಓಡತೊಡಗಿದರು. ಅಂತಿಮವಾಗಿ ಮದುವೆಯೇ ನಿಂತುಹೋಯಿತು.

*****

ಇದು ಲೇಖನಿ ಮಿತ್ರ ಕಲೀಮ್ ಉಲ್ಲಾ ಅವರ ʼಬಾಡೂಟದ ಮಹಿಮೆʼ ಪ್ರಬಂಧ ಸಂಕಲನದಲ್ಲಿ ಬರುವ ಅದೇ ಹೆಸರಿನ ಲೇಖನದಲ್ಲಿ ಬರುವ ವಿವರಣೆ. ಮದುವೆ ಮನೆಯೊಂದರಲ್ಲಿ ಬಾಡೂಟದ ಸಂಬಂಧ ಹುಟ್ಟಿಕೊಳ್ಳುವ ಒಂದು ಜಗಳ ಎಷ್ಟು ದೊಡ್ಡದಾಗಿ ಬೆಳೆದು ಏನೆಲ್ಲ ಅನಾಹುತ ಮಾಡಿತು ಎಂಬುದನ್ನು ತುಂಬಾ ಹಾಸ್ಯಮಯವಾಗಿ ದಾಖಲಿಸುವ ಈ ಘಟನೆ ಮಂಡ್ಯದಲ್ಲಿ ಈ ತಿಂಗಳು ನಡೆಯಲಿರುವ ಎಂಬತ್ತೇಳನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಮಾಂಸಾಹಾರವನ್ನು ನೀಡಬೇಕು ಎಂದು ಕೆಲವರು ಒಂದು ರೀತಿಯ ʼಹಕ್ಕೊತ್ತಾಯʼ ಮಾಡುತ್ತಿರುವ ಈ ಸಂದರ್ಭದಲ್ಲಿ ತಕ್ಷಣಕ್ಕೆ ನೆನಪಿಗೆ ಬಂತು. ಮೇಲಿನ ಘಟನೆ ಯಾವುದೋ ಒಂದು ಮನೆಯಲ್ಲಿ ನಡೆದಿರಬಹುದಾದ, ಸಾರ್ವತ್ರಿಕ ಮಹತ್ವ ಹೊಂದಿರದ, ಅಲಕ್ಷಿಸಬೇಕಾದ ಒಂದು ಘಟನೆ ಮಾತ್ರ ಆಗಿದ್ದರೆ ಬಹುಶಃ ಆ ಲೇಖಕ ಅದನ್ನು ಅಲ್ಲಿ ದಾಖಲಿಸುತ್ತಿರಲಿಲ್ಲ; ಈ ಲೇಖಕ ಅದನ್ನು ಇಲ್ಲಿ ಉಲ್ಲೇಖಿಸುತ್ತಲೂ ಇರಲಿಲ್ಲ. ಈ ಬಾಡೂಟದ ಸಂಬಂಧ ಇಂತಹ ಅನೇಕ ಘಟನೆಗಳು ನಡೆದದ್ದನ್ನು ನಾನು ಅನೇಕ ಲೇಖಕರ ಬರೆಹಗಳಲ್ಲಿ ಓದಿದ್ದೇನೆ; ಹಾಗೇ ಅನೇಕರಿಂದ ಕೇಳಿದ್ದೇನೆ; ಅಷ್ಟುಮಾತ್ರವಲ್ಲ ಅಂತಹ ಅನೇಕ ಘಟನೆಗಳನ್ನು ಕಣ್ಣಾರೆ ಕಂಡಿದ್ದೇನೆ. ಇದು ನಿಜಕ್ಕೂ ಬಾಡೂಟದ ಮಹಿಮೆಯೇ ಎನ್ನುವುದರಲ್ಲಿ ನನಗಂತೂ ಸಂಶಯವಿಲ್ಲ.

ಮಂಡ್ಯದ ಸಮ್ಮೇಳನದಲ್ಲಿ ಮಾಂಸಾಹಾರ ನೀಡಬೇಕು ಎನ್ನುವ ಒತ್ತಾಯದ ಹಿಂದೆ ಎರೆಡು ಕಾರಣವಿರಲಿಕ್ಕೆ ಸಾಧ್ಯವಿದೆ. ಒಂದು ʻಬಾಡೂಟದ ಸಂಭ್ರಮʼ ಸವಿಯುವ ಅಪೇಕ್ಷೆ. ಇನ್ನೊಂದು ʼಸಸ್ಯಾಹಾರʼ ಮತ್ತು ʼಮಾಂಸಾಹಾರʼ ಇವುಗಳ ನಡುವೆ ನಮ್ಮ ಸಮಾಜದಲ್ಲಿ ಅನಗತ್ಯವಾಗಿ ನಡೆದುಕೊಂಡು ಬಂದಿರುವ ತರತಮದ ಭಾವನೆಯನ್ನು ಕಿತ್ತೊಗೆಯಬೇಕೆಂಬ ಹಂಬಲ. ಮೊದಲಿಗೆ ಬಾಡೂಟದ ಸಂಭ್ರಮದ ಬಗ್ಗೆ ನೋಡೋಣ. ತಮ್ಮಲ್ಲಿ ಅನೇಕರಿಗೆ ಗೊತ್ತಿರಬಹುದು. ಈ ಬಾಡೂಟ ಮಾಡುವವರು ಆ ಊಟಕ್ಕೆ ಎಷ್ಟೊಂದು ಮಹತ್ವಕೊಟ್ಟಿರುತ್ತಾರೆ ಎಂಬುದು. ಯಾವುದಾದರೂ ಊಟದ ಮನೆಗೆ ಕರೆಯಿದ್ದರೆ ಅದು ಸಿಹಿ ಊಟವಾದರೆ ಇವರು ಹೋಗಬಹುದು ಅಥವಾ ಬಿಡಬಹುದು. ಆದರೆ ಅದು ಬಾಡೂಟವಾದರೆ ಮಾತ್ರ ಮಿಸ್‌ ಮಾಡುವುದು ಬಹಳ ಅಪರೂಪ. ಅದು ಎಷ್ಟೇ ಕಷ್ಟವಾಗಲೀ ಎಷ್ಟೇ ದೂರವಾಗಲಿ ಅವರು ಹೋಗಿಯೇ ಹೋಗುತ್ತಾರೆ. ಸಸ್ಯಾಹಾರದ ಯಾವುದೇ ಪದಾರ್ಥ ಅದು ಎಷ್ಟೇ ಉತ್ಕೃಷ್ಟ ರುಚಿಯದ್ದಾಗಿದ್ದರೂ ಅವರಿಗೆ ಅದು ಬಾಡೂಟಕ್ಕೆ ಸರಿಸಮವಾಗಲಾರದು. ʼಎಷ್ಟು ಕಳಪೆಯಿದ್ದರೂ ಈ ನಮ್ಮ ಬಾಡು / ಸರಿಗಟ್ಟಬಲ್ಲುದೆ  ಅದ ನಿನ್ನ ಲಾಡುʼ ಎನ್ನುವುದೇ ಅವರ ಧೋರಣೆಯಾಗಿರುತ್ತದೆ. ಹೀಗಾಗಿಯೇ ಅವರು ಸಸ್ಯಾಹಾರವನ್ನು ಊಟಮಾಡುವಾಗಲೂ ಸಾರಿನಲ್ಲಿ ಬರುವ ತರಕಾರಿ ಹೋಳುಗಳಿಗೆ ಅಪೇಕ್ಷೆ ಪಡುವಾಗಲೂ ಒಂದೆರೆಡು ʼಪೀಸ್‌ ಹಾಕಿʼ  ʼತುಂಡು ಬರಲೇ ಇಲ್ಲʼ ಎಂದು ಮಾತನಾಡುತ್ತಿರುತ್ತಾರೆ. ಅಂದರೆ ಭೌತಿಕವಾಗಿ ಅವರು ಸಸ್ಯಾಹಾರವನ್ನು ಊಟಮಾಡುವಾಗಲೂ ಮಾನಸಿಕವಾಗಿ ಬಾಡೂಟವನ್ನೇ ಮಾಡುತ್ತಿರುತ್ತಾರೆ. ಇದು ತೀರಾ ಸಹಜವಲ್ಲ. ಏಕೆಂದರೆ ಇದಕ್ಕೆ ವ್ಯತಿರಿಕ್ತವಾಗಿ ತರಕಾರಿ ಹೋಳು ಬಿದ್ದಾಗ ʼತುಂಡುʼ ನೆನಪಾದಂತೆ ಇವರಿಗೆ  ತಟ್ಟೆಗೆ ಮಾಂಸದ ತುಂಡು ಬಿದ್ದಾಗ ತರಕಾರಿ ಹೋಳು ನೆನಪಾಗುವುದಿಲ್ಲ. ಇವರ ಪಾಲಿಗೆ ಬಾಡಿನ ತುಂಡು ಯಾವಾಗಲೂ ʼಉಪಮಾನʼವಾಗಿರುತ್ತದೆಯೇ ಹೊರತು ಅಪ್ಪಿತಪ್ಪಿಯೂ ʼಉಪಮೇಯʼ ಆಗುವುದೇ ಇಲ್ಲ. ಮಂಡ್ಯದ ಸಮ್ಮೇಳನದಲ್ಲಿ ಮಾಂಸಾಹಾರದ ಊಟ ಇರಬೇಕು ಎನ್ನುವವರಲ್ಲಿ ಇಂಥವರೇ ಇದ್ದಾರೆ ಎನ್ನುವುದು ತಪ್ಪಾಗಬಹುದು; ಆದರೆ ಇಲ್ಲವೇ ಇಲ್ಲ ಎನ್ನೂವುದೂ ತಪ್ಪಾದೀತು.

ಆಹಾರ ಪದ್ಧತಿಯಲ್ಲಿ ಭೇದಭಾವ

ಇನ್ನು ಎರಡನೆಯ ಕಾರಣ, ʼಸಸ್ಯಾಹಾರʼ ಮತ್ತು ʼಮಾಂಸಾಹಾರʼ ಇವುಗಳ ನಡುವೆ ನಮ್ಮ ಸಮಾಜದಲ್ಲಿ ಅನಗತ್ಯವಾಗಿ ನಡೆದುಕೊಂಡು ಬಂದಿರುವ ತರತಮದ ಭಾವನೆಯನ್ನು ಕಿತ್ತೊಗೆಯಬೇಕೆಂಬ ಹಂಬಲ. ಇದು ಮೇಲಿನದಕ್ಕೆ ಹೋಲಿಸಿದರೆ ಸಾಕಷ್ಟು ವ್ಯಾಪಕವಾದ ಸಾಮಾಜಿಕ ಆಯಾಮವನ್ನೂ ಮಹತ್ವವನ್ನೂ ಹೊಂದಿರುವ ಕಾರಣ. ಇದು ಸಮಸಮಾಜದ ಕನಸು ಕಾಣುತ್ತಿರುವ ಎಲ್ಲರೂ ತಾತ್ವಿಕವಾಗಿ ಬೆಂಬಲಿಸಲೇಬೇಕಾದ ಸಂಗತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಂಡ್ಯದಲ್ಲಿ ಮಾಂಸಾಹಾರಕ್ಕೆ ಒತ್ತಾಯ ಮಾಡುತ್ತಿರುವವರು ಮುಂದಿಡುತ್ತಿರುವ ಅಂಶ ಇದುವೇ ಆಗಿದೆ. ಆಹಾರದ ಪದ್ಧತಿಗಳ ನಡುವಿನ ಭೇದಭಾವ ಹೋಗಬೇಕು ಎಂಬ ಅವರ ಕಾಳಜಿಯನ್ನು ನಾವು ಸಂಶಯಪಡಬೇಕಿಲ್ಲ. ಆದರೆ ಅದಕ್ಕೆ ಆಯ್ದುಕೊಂಡ ಸಂದರ್ಭ ಎಷ್ಟು ಉಚಿತ ಎನ್ನುವುದು ಪ್ರಶ್ನಾರ್ಹ.  ತಮ್ಮ ಆಹಾರದ ಬಗ್ಗೆ ಯಾರಿಗೇ ಆಗಲಿ ಗೌರವವಿರಬೇಕು. ಅದಕ್ಕೆ ಅವಮರ್ಯಾದೆ ಆದಾಗ ಸಕಾರಣಯುಕ್ತವಾಗಿ ಪ್ರಶ್ನಿಸಬೇಕು ಎನ್ನುವುದಾದರೆ ನಿಜವಾಗಿಯೂ ಮುಖ್ಯಮಂತ್ರಿಯೊಬ್ಬರು ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋದರು ಅದು ಅಪವಿತ್ರ, ಅಸಹ್ಯ ಎಂದು ಈ ನಾಡಿನ ʻಸನಾತನಿಶ್ರೇಷ್ಠರುʼ ಪುಕಾರು ಎಬ್ಬಿಸಿದಾಗ ʼಇದು ಶಾಸ್ತ್ರೋಕ್ತವಾಗಿ ತಪ್ಪಲ್ಲʼ ಎಂದು ದೇವಸ್ಥಾನದವರೇ ಹೇಳಿದಾಗಲೂ ಈ ಸನಾತನಿಗಳು ಅದನ್ನು ದೊಡ್ಡ ಅಪರಾಧವೆಂಬಂತೆ ಬಿಂಬಿಸಿದಾಗ ಅದನ್ನು ಈ ವರ್ಗ ತೀರಾ ಗಂಭೀರವಾಗಿ ಪರಿಗಣಿಸಿ ಪ್ರತಿಭಟಿಸಬೇಕಿತ್ತು. ಆದರೆ ಅದು ಹಾಗೆ ಆಗಲೇ ಇಲ್ಲ. ಎಲ್ಲೋ ಒಂದೆರಡು ಕಡೆ ಸಾಂಕೇತಿಕವಾಗಿ ಪ್ರತಿರೋಧ ವ್ಯಕ್ತವಾಗಿ ತಣ್ಣಗಾಯಿತು.  ಈಗಲೂ ಮಾಂಸಾಹಾರಿಗಳಿಗೆ ತಮ್ಮ ಆಹಾರದ ಬಗ್ಗೆ ದೊಡ್ಡಮಟ್ಟದ ಗೌರವ ಇದೆ ಎಂದು ಹೇಳಲಾಗದು. ಹಾಗಾಗಿಯೇ ಅವರು ಕೆಲವು ವಾರ ಮಾಂಸ ತಿನ್ನದಿರುವ, ಅದನ್ನು ಮನೆಯ ಹೊರಗಡೆ ಬೇಯಿಸುವ ಕೆಲವು ಕ್ರಮಗಳನ್ನು ಅನುಸರಿಸುತ್ತಾರೆ. ಇದು ʻತಾವು ತಪ್ಪು ಮಾಡುತ್ತಿದ್ದೇವೆʼ, ʻಮಾಂಸಾಹಾರ ಅಪವಿತ್ರʼ ಎಂದು ಅವರೇ ಪರೋಕ್ಷವಾಗಿ ಒಪ್ಪಿಕೊಂಡಂತೆ ಆಗುವುದಿಲ್ಲವೇ?

ಮಂಡ್ಯದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿ ಹುಟ್ಟಿಕೊಂಡಿರುವ ಬೇಡಿಕೆಗೆ ಇನ್ನೂ ಎರಡು ಅಂಶಗಳನ್ನು ನೋಡಬಹುದು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಅನಗತ್ಯವಾಗಿ ಮಾಂಸಾಹಾರವನ್ನು ಪ್ರಸ್ತಾಪಿಸಿ ನಿಯಮವೊಂದನ್ನು ಮಾಡಿದ್ದಾರೆ ಎಂಬುದು ಅದರಲ್ಲಿ ಒಂದು. ಮೂಲತಃ ಬ್ರಾಹ್ಮಣ ಸಮೂದಾಯಕ್ಕೆ ಸೇರಿರುವ ಅವರನ್ನು ಹಣಿಯಲು ಇದು ಒಂದು ಅಸ್ತ್ರವಾಗಿಯೂ ಕೆಲವರಿಗೆ ಸಿಕ್ಕಂತಾಗಿದೆ. ʼಇದು ಇಡೀ ಸಮ್ಮೇಳನವನ್ನು ಬ್ರಾಹ್ಮಣೀಕರಣ ಮಾಡುವ ಹುನ್ನಾರʼ ಎಂಬ ಟೀಕೆ ಬಂದಿರುವುದು ಈ ಹಿನ್ನಲೆಯಲ್ಲಿಯೇ. ಇನ್ನೊಂದು ಮದ್ಯ ಮಾಂಸಗಳು ವರ್ಜ್ಯ ಎಂದು ಭಾವಿಸಲಾಗುವ ಶರಣ ಸಂಸ್ಕೃತಿಗೆ ಸೇರಿರುವ ವಯೋವೃದ್ಧರೂ ಜ್ಞಾನವೃದ್ಧರೂ ಆಗಿರುವ ಗೊ ರು ಚನ್ನಬಸಪ್ಪ ಅವರು ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವಂಥದ್ದು. ಅವರು ತಮ್ಮ ಹಿರಿತನಕ್ಕೆ ಮತ್ತು ಮಿತಿಗೆ ಅನುಗುಣವಾಗಿ, ʼಆಹಾರ ನೀಡಿಕೆ ವಿಷಯ ಅಲ್ಲಿನ ಸ್ವಾಗತ ಸಮಿತಿಗೆ ಬಿಟ್ಟ ವಿಷಯʼ ಎಂದು ಹೇಳಿದ್ದಾರೆ. ಸಿದ್ಧಲಿಂಗಯ್ಯನವರೋ ದೇವನೂರ ಅವರೋ ಅಧ್ಯಕ್ಷರಾಗಿದ್ದರೆ ಅವರ ಪ್ರತಿಕ್ರಿಯೆ ಹೇಗಿರುತ್ತಿತ್ತೋ ಗೊತ್ತಿಲ್ಲ.

ಅಲ್ಲಲ್ಲಿ ಒಂಟಿ ಒಂಟಿಯಾಗಿ ಕೇಳಿ ಬರುವ ಧ್ವನಿ ಎತ್ತರಕ್ಕೆ ಏರಲಾರದು ಬಿತ್ತರಕ್ಕೆ ವ್ಯಾಪಿಸಲಾರದು ಎಂದು ಮಾಂಸಾಹಾರಕ್ಕೆ ಒತ್ತಾಯಿಸುತ್ತಿರುವವರೆಲ್ಲ ಒಂದು ʼಬಾಡೂಟ ಬಳಗʼವನ್ನೂ ರಚಿಸಿಕೊಂಡು ಸಾಂಘಿಕವಾಗಿ ತಮ್ಮ ಹಕ್ಕೊತ್ತಾಯವನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಪತ್ರಿಕಾ ಗೋಷ್ಠಿ, ಪ್ರತಿಭಟನೆ, ಮನವಿ ಸಲ್ಲಿಕೆ ಇತ್ಯಾದಿ ಕಾರ್ಯಗಳು ಈ ಹಕ್ಕೊತ್ತಾಯದ ಭಾಗವಾಗಿ ನಡೆಯುತ್ತಿವೆ. ಈ ಬಗ್ಗೆ ಸಮ್ಮೇಳನದ ಸ್ವಾಗತ ಸಮಿತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿಗೆ ಮನವಿ ಸಲ್ಲಿಸುವುದಾಗಿಯೂ ತಮ್ಮ ಬೇಡಿಕೆಗೆ ಸರಿಯಾದ ಸ್ಪಂದನೆ ಸಿಗದಿದ್ದರೆ ತಾವೇ ಈ ಮಾಂಸಾಹಾರದ ವ್ಯವಸ್ಥೆ ಮಾಡುವುದಾಗಿಯೂ ಹೇಳಿಕೆ ನೀಡಿ ಒಂದು ರೀತಿಯ ಒತ್ತಡವನ್ನೂ ಸೃಷ್ಟಿಸಲು ಅವರು ಪ್ರಯತ್ನಿಸುತ್ತಿದ್ದಾರೆ.

ಶತಶತಮಾನಗಳಿಂದ ಸಸ್ಯಾಹಾರಿಗಳು ಮಾಂಸಾಹಾರಿಗಳನ್ನು ಕೀಳಾಗಿ ಕಾಣುತ್ತಿರುವುದು, ಬಹುಸಂಖ್ಯಾತರ ಆಹಾರ ಪದ್ಧತಿಯೊಂದನ್ನು ಅವಮಾನಿಸುವ ಕ್ರಮವೇ ಆಗಿದೆ. ಇದನ್ನು ಹೋಗಲಾಡಿಸಲು ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆಗೆ ಮಾಂಸಾಹಾರವನ್ನೂ ನೀಡಬೇಕು ಎಂಬುದು ಇವರ ಒಟ್ಟಾರೆ ಬೇಡಿಕೆಯ ಸಾರಾಂಶ. ಇವರ ಹೇಳಿಕೆಯಲ್ಲಿ ಅರ್ಧಭಾಗ, ಅಂದರೆ ʼಶತಶತಮಾನಗಳಿಂದ ಸಸ್ಯಾಹಾರಿಗಳು ಮಾಂಸಾಹಾರಿಗಳನ್ನು ಕೀಳಾಗಿ ಕಾಣುತ್ತಿರುವುದು ಮತ್ತು ಆ ಮೂಲಕ ಬಹುಸಂಖ್ಯಾತರ ಆಹಾರ ಪದ್ಧತಿಯೊಂದನ್ನು ಅವಮಾನಿಸುತ್ತಿರುವುದುʼ ಇದನ್ನು ಒಪ್ಪಿಕೊಳ್ಳಲು ಯಾರಿಗೂ ಸಮಸ್ಯೆಯಿಲ್ಲ. ಏಕೆಂದರೆ ಇದು ಸೂರ್ಯಪ್ರಕಾಶದಷ್ಟು ಸ್ಪಷ್ಟವಾಗಿರುವ ಸತ್ಯವಾಗಿದೆ. ಆದರೆ ಇದಕ್ಕೆ ಪರಿಹಾರವಾಗಿ ಅಂದರೆ ʻಇದನ್ನು ಹೋಗಲಾಡಿಸಲು ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆಗೆ ಮಾಂಸಾಹಾರವನ್ನೂ ನೀಡಬೇಕುʼ ಎಂಬುದನ್ನು ಸಾರ್ವತ್ರಿಕವಾಗಿ ಒಪ್ಪಿಕೊಳ್ಳಲು ಸಾಕಷ್ಟು ಸಮಸ್ಯೆಗಳಿವೆ. ಹೀಗಾಗಿಯೇ ಇದರ ಪರ ಮತ್ತು ವಿರೋಧ ಅಭಿಪ್ರಾಯಗಳ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ, ಪತ್ರಿಕೆಗಳಲ್ಲಿ ವ್ಯಾಪಕವಾಗಿ ನಡೆದಿದೆ. ಈ ಸಮಸ್ಯೆ ಎಷ್ಟು ಆಳ ಮತ್ತು ಅಗಲಗಳನ್ನು ಹೊಂದಿದೆ ಎಂಬುದನ್ನು ಕೆಲವು ಅಂಶಗಳ ಪರಿಶೀಲನೆಯ ಮೂಲಕ ನೋಡೋಣ.

ಮೊದಲನೆಯದಾಗಿ ಇವರು ಹೇಳುವಂತೆ ಆಹಾರದ ವಿಷಯದಲ್ಲಿ ಸಸ್ಯಾಹಾರಿಗಳು ಮಾಂಸಾಹಾರಿಗಳನ್ನು ʼಕೀಳಾಗಿʼ ಕಾಣುವುದು ಸರಿಯಲ್ಲ ಎಂಬುದೇನೋ ನಿಜ. ಆದರೆ ಮಾಂಸಾಹಾರಿಗಳು ಆಹಾರದ ವಿಷಯದಲ್ಲಿ ʼತಾವೆಲ್ಲ ಒಂದುʼ ಎಂದು ಭಾವಿಸುತ್ತಾರೆಯೇ? ಖಂಡಿತಾ ಇಲ್ಲ. ಅವರಲ್ಲಿಯೂ ಮತ್ತೆ ಒಳಭೇದವಿದೆ.  ಈ ಬಗ್ಗೆ ಹಿರಿಯ ಸಂಶೋಧಕರಾದ ರಹಮತ್‌ ತರೀಕೆರೆಯವರು ತಮ್ಮ ಸಂಶೋಧನಾ ಗ್ರಂಥವೊಂದರಲ್ಲಿ ವ್ಯಾಪಕವಾಗಿ ಚರ್ಚೆಮಾಡಿದ್ದಾರೆ. ಅವರು ಹೇಳುವ ಪ್ರಕಾರ ಆಹಾರ ಪದ್ಧತಿಗಳನ್ನು ಆಧರಿಸಿ ಇರುವ ಈ ಭೇದಭಾವ ಕೇವಲ ಸಸ್ಯಾಹಾರಿಗಳ ಮತ್ತು ಮಾಂಸಾಹಾರಿಗಳ ಮಧ್ಯೆ ಮಾತ್ರವಿಲ್ಲ. ಮಾಂಸಾಹಾರಿಗಳು ಕೂಡ ತಾವೆಲ್ಲ ಒಂದು ಎಂದು ಭಾವಿಸುವುದಿಲ್ಲ. ಅದರಲ್ಲಿನ ಒಳಭೇದ ಹೇಗಿದೆ ಎಂದರೆ ಸಸ್ಯವನ್ನು ತಿನ್ನುವ ಪ್ರಾಣಿಗಳನ್ನು (ಕುರಿ, ಕೋಳಿ ಇತ್ಯಾದಿ) ತಿನ್ನುವವರು ಶ್ರೇಷ್ಠ; ಮಾಂಸವನ್ನು ತಿನ್ನುವ ಪ್ರಾಣಿಗಳನ್ನು (ಬೆಕ್ಕು, ನಾಯಿ ಇತ್ಯಾದಿ) ತಿನ್ನುವವರು ಕನಿಷ್ಠ! ಪರಿಸ್ಥಿತಿ ಹೀಗಿರುವಾಗ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆಗೆ ಮಾಂಸಾಹಾರ ನೀಡಿದರೆ ಈ ಸಮಸ್ಯೆ ಬಗೆಹರಿಯುವ ಬದಲು ಇನ್ನಷ್ಟು ಕಗ್ಗಂಟಾಗುವ ಅಪಾಯವೇ ಹೆಚ್ಚು.

ಗಂಟು ಕಗ್ಗಂಟಾಗುವ ಅಪಾಯ

ಅದು ಹೇಗೆ ಎಂದರೆ ಒಂದು ವೇಳೆ ಇವರ ಬೇಡಿಕೆಗೆ ಮಾನ್ಯತೆ ನೀಡಿ ಸಸ್ಯಾಹಾರದ ಜೊತೆಗೆ ಮಾಂಸಾಹಾರವನ್ನೂ ನೀಡಬೇಕು ಎಂದು ಸಂಘಟಕರು ಒಪ್ಪಿಕೊಂಡರು ಎಂದೇ ಇಟ್ಟುಕೊಳ್ಳೋಣ. ಆಗ ಮೊದಲನೆಯದಾಗಿ ಯಾವ ಪ್ರಾಣಿಯ ಮಾಂಸವನ್ನು ನೀಡಬೇಕು ಎಂಬ ಪ್ರಶ್ನೆ ಎದುರಾಗಬಹುದು. (ತರಕಾರಿಯ ವಿಷಯದಲ್ಲಿ ಯಾವ ತರಕಾರಿಯ ಸಾರು ಮಾಡಬೇಕು ಎಂಬುದು ಸಮಸ್ಯೆಯಾಗಲಾರದು). ಸಂಘಟಕರು ಖರ್ಚುವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಸಾವಿರಾರು ಜನರಿಗೆ ಊಟದ ವ್ಯವಸ್ಥೆಮಾಡಬೇಕಾಗುವುದರಿಂದ ಅಗ್ಗದ ಮಾಂಸವನ್ನು ಖರಿದಿಸಲು ಅನಿವಾರ್ಯವಾಗಿ ಮುಂದಾಗಬೇಕಾಗಬಹುದು. ಆಗ ಅವರು ದನದ ಮಾಂಸ (ಬೀಫ್)ಕ್ಕೆ ಆದ್ಯತೆ ನೀಡಬೇಕಾಗುತ್ತದೆ. ಹೀಗೆ ಅವರು ಮುಂದುವರೆದರೆ ಗೋವನ್ನು `ಅಮ್ಮ’ `ಅಮ್ಮ’ ಎಂದು ಕರೆಯುವ ಹಿಂದುತ್ವವಾದಿಗಳು ಸುಮ್ಮನಿರುತ್ತಾರೆಯೇ? ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಧ್ವಜಹಿಡಿದು ಎದ್ದುನಿಲ್ಲುತ್ತಾರೆ! ಅಷ್ಟು ಮಾಡಿದರೆ ಪುಣ್ಯ. ಅದಕ್ಕೆ ಜನಾಂಗೀಯ ಧಾರ್ಮಿಕ ದ್ವೇಷ ಇತ್ಯಾದಿ ಬಣ್ಣಬಳಿದು, ಇದು ʻಅಲ್ಪಸಂಖ್ಯಾತರ ತುಷ್ಟೀಕರಣʼ ಎಂದು ಮುಸ್ಲಿಮರ ಮೇಲಿನ ತಮ್ಮ ಪರಂಪರಾನುಗತ ದ್ವೇಷವನ್ನು ಕಕ್ಕತೊಡಗುತ್ತಾರೆ.

ಇನ್ನು ಮಾಂಸಾಹಾರಿಗಳಾದ ಬೆಕ್ಕು,ನಾಯಿ, ಹಾವು ಇತ್ಯಾದಿಗಳನ್ನು ಬಳಸುವುದು ಸಾಧ್ಯವಿಲ್ಲದ ಮಾತು. ಏಕೆಂದರೆ ಅವು ಎಲ್ಲ ಮಾಂಸಹಾರಿಗಳ ಆಹಾರವಲ್ಲ ಎಂಬುದು ಒಂದು ಕಾರಣವಾದರೆ ಅವುಗಳ ದೊಡ್ಡ ಪ್ರಮಾಣದ ಅಲಭ್ಯತೆ ಇನ್ನೊಂದು ಕಾರಣ. ಹಂದಿಗಳ ಬಳಕೆ ಕೂಡ ಧಾರ್ಮಿಕ ಆಯಾಮ ಪಡೆಯುವುದರಿಂದ ಅದೂ ಆಗದ ಮಾತು. ಅಂತಿಮವಾಗಿ ಉಳಿದ ಆಯ್ಕೆ ಎಂದರೆ ಬಹುಬಳಕೆಯ ಕುರಿ ಮತ್ತು ಕೋಳಿಗಳು. ಪಾಪ ಇವುಗಳು ಅದೇನು ಕರ್ಮ ಮಾಡಿವೆಯೋ ಏನೋ. ಇವುಗಳ ಬಳಕೆಯ ಬಗ್ಗೆ ಒಂದಿಷ್ಟು ಸಹಮತ ಮೂಡಬಹುದೇನೋ. ಆದರೆ ಇವುಗಳ ಬಳಕೆ ಕೂಡ ನಿರ್ವಿಘ್ನವಾಗಿ ನಡೆಯುತ್ತದೆ ಎನ್ನಲಾಗದು. ಲಕ್ಷಾಂತರ ಜನರಿಗೆ ಊಟದ ವ್ಯವಸ್ಥೆ ಮಾಡಬೇಕಾಗುವುದರಿಂದ ಸಾವಿರಗಟ್ಟಲೆ ಈ ಪ್ರಾಣಿಗಳು ಬೇಕಾಗಬಹುದು. ಆಗ ಬಹಳ ದೊಡ್ಡಮಟ್ಟದಲ್ಲಿ ಈ ಪ್ರಾಣಿಗಳ ʻಮಾರಣಹೋಮʼ ನಡೆಯಬೇಕಾಗುತ್ತದೆ. ಆಗ ಇದಕ್ಕೆ ʼಪ್ರಾಣಿದಯಾ ಸಂಘʼಗಳು ಅಡ್ಡಿಪಡಿಸಲಾರವೇ? (ಸಧ್ಯಕ್ಕೆ ಸಸ್ಯದಯಾ ಸಂಘಗಳು ಇಲ್ಲವಾದ್ದರಿಂದ ಸಸ್ಯಾಹಾರಕ್ಕೆ ಈ ಸಮಸ್ಯೆ ಇಲ್ಲ).

ಇನ್ನು ವಿತರಣೆ ಸಮಸ್ಯೆ. ಒಂದು ವೇಳೆ ಈ ಎಲ್ಲ ಸಮಸ್ಯೆಗಳನ್ನು ಏನೋ ಹೊಂದಾಣಿಕೆ ಮಾಡಿಕೊಂಡು ಮಾಂಸಾಹಾರವನ್ನು ಮಾಡುವುದು ಎಂದು ಅಂದುಕೊಂಡರೂ ಅದರ ವಿತರಣೆ ಅಷ್ಟು ಸುಲಭವಲ್ಲ. ಎರಡು ರೀತಿಯ ಆಹಾರ ಎಂದಾಗ ಅದನ್ನು ಸಾಮಾನ್ಯವಾಗಿ ಬೇರೆ ಬೇರೆ ಪೆಂಡಾಲುಗಳಲ್ಲಿಯೇ ಮಾಡುವುದು ರೂಢಿ. ಇದರಿಂದ ಮತ್ತೆ ಯಾವ ಭೇದಭಾವವನ್ನು ತೊಡೆದುಹಾಕಬೇಕು ಎಂದು ಇಷ್ಟೆಲ್ಲ ಹೋರಾಟ ನಡೆಯುತ್ತಿದೆಯೋ ಆ ಹೋರಾಟಕ್ಕೆ ವಿರುದ್ಧವಾಗಿ ಆ ಭೇದಭಾವ ಇನ್ನಷ್ಟು ಢಾಳಾಗಿ ಕಾಣತೊಡಗುತ್ತದೆ. ಇದು ಮತ್ತೆ ಮಾಂಸಾಹಾರಿಗಳನ್ನು ಅಸ್ಪೃಶ್ಯರಂತೆ ಕಾಣುವ ಕ್ರಮವೇ ಆಗುವುದರಿಂದ ಇದು ಇರಕೂಡದು, ಒಂದೇ ಪೆಂಡಾಲಿನಲ್ಲಿ ಇವುಗಳ ವ್ಯವಸ್ಥೆಯಾಗಬೇಕು ಬೇಕಾದವರು ಬೇಕಾದದ್ದನ್ನು ಆಯ್ದುಕೊಂಡು ಊಟಮಾಡಲಿ ಎಂದು ಕೆಲವರು ಸಲಹೆ ನೀಡಿದ್ದಾರೆ. ಆದರೆ ಇದು ವಾಸ್ತವದಲ್ಲಿ ಆಗದ ಮಾತು. ಏಕೆಂದರೆ ಕುರಿ, ಕೋಳಿ ತಿನ್ನುವವರು ತಮ್ಮಂತೆಯೇ ಮಾಂಸಾಹಾರಿಗಳಾದ ಬೆಕ್ಕು, ಜಿರಲೆ ಇತ್ಯಾದಿ ತಿನ್ನುವವರ ಜೊತೆಗೆ ಕೂತು ಊಟಮಾಡಲು ಮುಜುಗರ ಪಡುತ್ತಾರೆ ಎನ್ನುವುದಾದರೆ ಎಂದೆಂದೂ ಮಾಂಸಾಹಾರವನ್ನೇ ಮುಟ್ಟದ ಸಸ್ಯಾಹಾರಿಗಳು ಇವರ ಜೊತೆ ಕುಳಿತು ಊಟಮಾಡುತ್ತಾರೆಯೇ? ಸಾಧ್ಯವಿಲ್ಲ. ಈ ಬಗ್ಗೆ ಯಾರನ್ನಾದರೂ ಒತ್ತಾಯಪಡಿಸುವುದು ಸರಿಯಾಗುತ್ತದೆಯೇ? ಮತ್ತೆ ಇದು ಜನರನ್ನು ಪ್ರತ್ಯೇಕಿಸುವ ಸಂಗತಿಯೇ ಆಗುತ್ತದೆ. ಒಂದು ವೇಳೆ ಎರಡೂ ಆಹಾರಗಳನ್ನು ಒಂದೇಕಡೆ ವಿತರಿಸುವ ವ್ಯವಸ್ಥೆಯಾದರೆ ಅಲ್ಲಿ ಇಡುವ ಸಸ್ಯಾಹಾರ ಹಾಗೇ ಉಳಿದುಬಿಡುತ್ತದೆ. ಏಕೆಂದರೆ ʼಸಸ್ಯಾಹಾರಿ ಮತ್ತು ಮಾಂಸಾಹಾರಿ ಹೊಟೆಲ್‌ʼ ಗಳಲ್ಲಿ ಸಸ್ಯಾಹಾರವನ್ನು ಉಂಡು ಉಂಡು ಬೇಜಾರಾದ ಮಾಂಸಾಹಾರಿಗಳು ಮಾತ್ರ ಒಂದು ಬದಲಾವಣೆಗಾಗಿ ಸಸ್ಯಾಹಾರವನ್ನು ಊಟಮಾಡುತ್ತಾರೆಯೇ ಹೊರತು ಎಂದೆಂದೂ ಮಾಂಸಾಹಾರವನ್ನೇ ಊಟಮಾಡದವರು ಅಲ್ಲಿಗೆ ಹೋಗುವುದೇ ಇಲ್ಲ. ಇಲ್ಲಿಯೂ ಸಸ್ಯಾಹಾರಿಗಳು ಊಪವಾಸವಿರುವ ಸಂದರ್ಭ ಬಂದರೂ ಊಟದ ಕೌಂಟರ್‌ಗಳ ಕಡೆ ತಲೆಹಾಕುವುದಿಲ್ಲ.


ಅಶ್ಪೃಶ್ಯತೆ ಆದರೂ ಸರಿ ಬೇರೆ ಬೇರೆ ಕಡೆ ವ್ಯವಸ್ಥೆಮಾಡಿವುದೇ ಸರಿ ಎಂದರೂ ಸಮಸ್ಯೆ ಬಗೆಹರಿಯುವುದಿಲ್ಲ. ʻಬಾಡೂಟʼ ಎಂಬುದು  ಕೇವಲ ಹಸಿವನ್ನು ಹಿಂಗಿಸುವ ಒಂದು ಸಾಮಾನ್ಯ ಆಹಾರ ಅಲ್ಲ. ಅದು ಒಂದು ಸಂಭ್ರಮ! ಸಂಭ್ರಮವಿದ್ದಲ್ಲಿ, ಸ್ಪರ್ಧೆ, ಸಮಸ್ಯೆಗಳೂ ಸಾಮಾನ್ಯ. ಅದು ಏನೆಲ್ಲ ಅನಾಹುತ ಮಾಡುತ್ತದೆ ಎಂಬುದನ್ನು ಈ ಲೇಖನದ ಆರಂಭದ ಒಂದು ಉದಾಹರಣೆಯಲ್ಲಿ ನೋಡಿದ್ದೇವೆ. ಲೇಖಕರು ತಮ್ಮ ಲೇಖನದಲ್ಲಿ ಕೊಡುವ ಇನ್ನೊಂದು ಉದಾಹರಣೆಯಲ್ಲಿ ಮಧ್ಯಮವರ್ಗದ ಮಹಿಳೆಯಾದ ಅವರ ಅಮ್ಮ ದುಬಾರಿ ಮಾಂಸವನ್ನು ಹೆಚ್ಚು ಬಳಸಲು ಆಗದಿದ್ದಕ್ಕೆ ಮಾಂಸದ ಸಾರಿನಲ್ಲಿ ಕಡಿಮೆ ಖರ್ಚಿನ ತರಕಾರಿ ತುಂಡುಗಳನ್ನು ಎಸೆದು ಹೊಂದಾಣಿಕೆ ಮಾಡುತ್ತಿದ್ದರಂತೆ. ಸಮ್ಮೇಳನದ ಸಂಘಟಕರೂ ದೊಡ್ಡಪ್ರಮಾಣದಲ್ಲಿ ಇಂತಹ ವ್ಯವಸ್ಥೆಮಾಡುವಾಗ ಹೀಗೆ ತರಕಾರಿ ತುಂಡು ಸೇರಿಸುವುದು ಅನಿವಾರ್ಯವಾದೀತು. ಆಗ ಊಟಮಾಡುವಾಗ ತಮಗೆ ತರಕಾರಿ ತುಂಡು ಬಂತೆಂದೂ, ಮಾಂಸದ ತುಂಡು ಬರಲಿಲ್ಲವೆಂದೂ, ಅದು ಬಂದರೂ ದೇಹದ ʼಕನಿಷ್ಠʼಭಾಗದ ತುಂಡು ಬಂದಿತೆಂದೂ (ಪ್ರಾಣಿಗಳ ದೇಹದ ಬೇರೆ ಬೇರೆ ʼಪೀಸ್‌ʼಗಳಿಗೆ ಬೇರೆ ಬೇರೆ ಹಂತದ ಗೌರವಗಳಿವೆ.) ಖ್ಯಾತೆ ತೆಗೆಯುವವರು ಸಾಮಾನ್ಯ.

ಇವೆಲ್ಲ ಅನವಶ್ಯಕ ಚರ್ಚೆಯೆಂದೂ ಸಾಹಿತ್ಯ ಸಮ್ಮೇಳನಕ್ಕೆ ಬರುವವರೆಲ್ಲ ಪ್ರಬುದ್ಧರಾಗಿರುತ್ತಾರೆಂದೂ ಕೆಲವರು ಹೇಳಬಹುದೇನೋ. ಆದರೆ ಅಷ್ಟು ಪ್ರಬುದ್ಧರನ್ನೇ ಸೇರಿಸಿಕೊಂಡು ಮಾಡುವ ಸಮ್ಮೇಳನ ಇದಲ್ಲ. ಇಲ್ಲಿ ವಿಶಾಲ ಹೃದಯರೂ, ಸಂಕುಚಿತ ಬುದ್ಧಿಯವರೂ, ʼಸಣ್ಣಮನಸ್ಸಿನ ದೊಡ್ಡಜನʼರೂ ಎಲ್ಲರೂ ಇರುತ್ತಾರೆ. ಮೂರು ದಿನ ಊಟಮಾಡಿದರೂ ಒಂದು ಸಲವೂ ನನಗೆ ಊಟದಲ್ಲಿ ಒಂದೇ ಒಂದು ʼಲೆಗ್‌ ಪೀಸ್‌ʼ ಬರಲಿಲ್ಲ ಎಂದು ಭಾಷಣ ಮಾಡುವುದನ್ನೆ ಬಿಟ್ಟು ಸಿಟ್ಟಾಗಿ ಹೊರಡುವ ವಿದ್ವಾಂಸರೂ ಇರುತ್ತಾರೆ ಅನ್ನುವುದನ್ನು ಗಮನಿಸಬೇಕು. (ಸರಿಯಾದ ವಸತಿ ವ್ಯವಸ್ಥೆಮಾಡಿಲ್ಲ, ವಾಹನದ ವ್ಯವಸ್ಥೆ ಮಾಡಿಲ್ಲ ಎಂದು ಹೀಗೆ ವಿದ್ವಾಂಸರೂ, ಕಲಾವಿದರೂ ಮುನಿಸಿಕೊಳ್ಳುವ ಉದಾಹರಣೆಗಳು ಈ ಹಿಂದಿನ ಸಮ್ಮೇಳನಗಳಲ್ಲಿ ಈಗಾಗಲೇ ನಡೆದೇ ಇವೆ). ಅಲ್ಲಿ ಮದುವೆಯೇ ನಿಂತುಹೋದಂತೆ ಇಲ್ಲಿ ಸಾಹಿತ್ಯ ಸಮ್ಮೇಳನವೇ ನಿಂತುಹೋಗದಿದ್ದರೂ ಅಧ್ವಾನವಂತೂ ಆಗಬಹುದು. ಎಲ್ಲೇ ಬಾಡೂಟ ನಡೆಯಲಿ. ಹತ್ತು ಊಟಗಳಲ್ಲಿ ಮೂರು ನಾಲ್ಕರಲ್ಲಾದರೂ ಗಲಾಟೆಗಳಾಗದಿದ್ದರೆ ಅದು ಬಾಡೂಟಕ್ಕೇ ಅವಮಾನ! ಏಕೆಂದರೆ ಅದರ ಮಹಿಮೆಯೇ ಅಂಥದ್ದು ಹೀಗಾಗಿ ಬಾಡೂಟ ಎಂಬುದು ಊಟ ಮಾತ್ರವಲ್ಲ; ಸ್ಪೋಟವೂ ಹೌದು! ಅದಕ್ಕೆ ಬಾಂಧವ್ಯವನ್ನು ಬೆಸೆಯುವ ಗುಣವಿದ್ದಂತೆ ಬಂಧುಗಳನ್ನು ಛಿದ್ರಛಿದ್ರಮಾಡುವ ಸ್ಪೋಟಕ ಗುಣವೂ ಇದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು.

ಊಟೋಪಚಾರವೆಂಬ ಪ್ರತಿಷ್ಠೆ

ಸಾಹಿತ್ಯ ಸಮ್ಮೇಳನಗಳು ಈಗಾಗಲೇ ಊಟದ ಸಮ್ಮೇಳನಗಳಾಗುತ್ತಿವೆ ಎಂಬ ವ್ಯಾಪಕವಾದ ಟೀಕೆಗಳಿವೆ. ಇದಕ್ಕೆ ಕಾರಣಗಳೂ ಇವೆ. ಸಾಹಿತ್ಯ ಸಮ್ಮೇಳನಗಳ ಗೋಷ್ಠಿಗಳಿಗೆ ಭಾಗವಹಿಸುವ ವಿದ್ವಾಂಸರು ಯಾರು ಅವರ ಅರ್ಹತೆಗಳೇನು? ಅಲ್ಲಿ ನಡೆಸುವ ಗೋಷ್ಠಿಗಳು ಪ್ರಸ್ತುತವೇ ಇಂತಹ ಚರ್ಚೆಗಳಿಗಿಂತ ಊಟ ತಿಂಡಿಗಳ ಚರ್ಚೆಗಳೇ ಮಾಧ್ಯಮಗಳಲ್ಲಿ ದೊಡ್ಡ ಸ್ಥಾನವನ್ನೂ ವ್ಯಾಪಕ ಪ್ರಚಾರವನ್ನೂ ಪಡೆಯುತ್ತಿರುವುದು ಇದಕ್ಕೆ ಮುಖ್ಯ ಕಾರಣ. ಅಂದರೆ ಊಟತಿಂಡಿಗಳ ಚರ್ಚೆಗಳು ನಡೆಯಲೇಬಾರದು ಎಂದಲ್ಲ. ಆದರೆ ಅವು ಸಾಹಿತ್ಯದ ಚರ್ಚೆಯನ್ನು ಹಿಮ್ಮೆಟ್ಟಿಸಿ ಮುಂದೆ ಬಂದು ಚರ್ಚೆಗೊಳಗಾಗಬಾರದು. ಈ ಹಿಂದಿನ ಸಮ್ಮೇಳನಗಳಲ್ಲಿ ಇದನ್ನು ಗಮನಿಸಿ ರಾಯಚೂರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿದಂತೆ ಅನೇಕರು, ಸಾಹಿತ್ಯ ಸಮ್ಮೇಳನಗಳಲ್ಲಿ ಉಚಿತ ಊಟದ ವ್ಯವಸ್ಥೆಯನ್ನು ಸಂಘಟನೆಯ ವತಿಯಿಂದ ಮಾಡುವುದನ್ನು ಕೈಬಿಟ್ಟು ತೀರಾ ಕನಿಷ್ಠ ಮೊತ್ತದ ನೋಂದಣಿ ಶುಲ್ಕವನ್ನು ವಿಧಿಸಿ, ಊಟ ತಿಂಡಿಗಳು ಕಡಿಮೆ ಬೆಲೆಗೆ ಎಲ್ಲರಿಗೂ ಸಿಗುವಂತೆ ಹೊಟೆಲ್‌ಗಳ ವ್ಯವಸ್ಥೆಮಾಡಿ (ಈಗ ಪುಸ್ತಕದ ಅಂಗಡಿಗಳ ವ್ಯವಸ್ಥೆ ಮಾಡಿದಂತೆ) ಸಮ್ಮೇಳನ ಮಾಡುವುದೇ ಸೂಕ್ತ ಎಂಬ ಸಲಹೆಯನ್ನು ನೀಡಿದ್ದಾರೆ. ಆದರೆ ಸಮ್ಮೇಳನದ ಅಧ್ಯಕ್ಷರ ಆಯ್ಕೆ ಮತ್ತು ಗೋಷ್ಠಿಗಳ ವ್ಯವಸ್ಥೆಯನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತದೆ. ಅಲ್ಲಿನ ಊಟೋಪಚಾರ ಮತ್ತು ಮನರಂಜನೆಯ ವ್ಯವಸ್ಥೆಯನ್ನು ಅಲ್ಲಿ ಸ್ಥಳೀಯವಾಗಿ ರಚನೆಯಾಗುವ ಸ್ವಾಗತ ಸಮಿತಿ ಮಾಡುತ್ತದೆ. ಈ ಸ್ವಾಗತ ಸಮಿತಿಯಲ್ಲಿ ಅಲ್ಲಿನ ಚುನಾಯಿತ ಪ್ರತಿನಿಧಿಗಳಿರುತ್ತಾರೆ. ಅಪರೂಪಕ್ಕೆ ತಮ್ಮ ಜಿಲ್ಲೆಗೆ ಬರುವ ಈ ಸಮ್ಮೇಳನವನ್ನು ಅವರೆಲ್ಲ ʼಪ್ರತಿಷ್ಠೆʼಯ ಸಂಗತಿಯಾಗಿ ತೆಗೆದುಕೊಳ್ಳುತ್ತಾರೆ. ಬಂದವರಿಗೆ ಸರಿಯಾಗಿ ಊಟೋಪಚಾರ ಮಾಡದಿದ್ದರೆ ತಮ್ಮ ಜಿಲ್ಲೆಯ ಮರ್ಯಾದೆ ಹರಾಜಾಗುತ್ತದೆ ಎಂಬ ಆತಂಕಕ್ಕೆ ಒಳಗಾಗುವ ಅವರು ಏನಾದರೂ ಸರಿ ಸರಿಯಾದ ಊಟೋಪಚಾರ ಮಾಡಲೇಬೇಕು ಎಂಬ ಹಟಕ್ಕೆ ಬೀಳುತ್ತಾರೆ. ಹಾಗಾಗಿ ಈ ಸಲಹೆಯನ್ನು ಇದುವರೆಗೂ ಯಾವ ಸ್ವಾಗತ ಸಮಿತಿಗಳೂ ಗಂಭೀರವಾಗಿ ಪರಿಗಣಿಸಿಲ್ಲ.

ʻಕೂಡೂಟʼ ಮತ್ತು ʼಬಾಡೂಟʼ

ಸರಿ, ಸಮ್ಮೇಳನದಲ್ಲಿ ಊಟೋಪಚಾರವನ್ನು ʻಮಾಡುವುದುʼ ʼಬಿಡುವುದುʼ ಇವುಗಳಲ್ಲಿ ʼಮಾಡುವುದನ್ನೇ ಸಂಘಟಕರು ಆಯ್ಕೆಮಾಡಿಕೊಂಡಾಗ ಅದೊಂದು ದೊಡ್ಡ ಸವಾಲಿನ ಕೆಲಸವಾಗುವುದರಿಂದ ಅದರ ನಿರ್ವಹಣೆ ಅಷ್ಟು ಸುಲಭವಾಗಿ ಇರುವುದಿಲ್ಲ. ಅಂಥದ್ದರಲ್ಲಿ ಇಂಥಹ ಆಹಾರವನ್ನೇ ನೀಡಬೇಕು ಎಂದು ಬೇಡಿಕೆ ಇಡುವುದು, ಒತ್ತಡ ತರುವುದು ಸಜ್ಜನಿಕೆ ಅಲ್ಲ. ಅಷ್ಟಕ್ಕೂ ಯಾರೂ ಅಲ್ಲಿಗೆ ಊಟ ಮಾಡಲಿಕ್ಕೇ ಹೋಗಿರುವುದಿಲ್ಲ. ಅಲ್ಲಿ ಆಹಾರ ನೀಡುವುದು ಹಸಿವಿನಂತಹ ಒಂದು ಮೂಲಭೂತ ಅವಶ್ಯಕತೆಯನ್ನು ಪೂರೈಸಲಿಕ್ಕಾಗಿಯೇ ಹೊರತು ಹೋಗುವವರೆಲ್ಲರ ಅಪೇಕ್ಷೆಗಳನ್ನು ಪೂರೈಸಲಿಕ್ಕಲ್ಲ. ಇವತ್ತು ಬಾಡೂಟ ಬೇಕು ಎಂದು ಕೇಳುವವರು ಅದು ಪೂರೈಕೆಯಾದರೆ ಅದರ ಕಾಂಬಿನೇಷನ್‌ ಪರಿಪೂರ್ಣವಾಗಬೇಕಾರೆ ಜೊತೆಗೆ ʼಎಣ್ಣೆʼ ಕೂಡ ಇರಬೇಕು ಎಂಬ ಬೇಡಿಕೆ ಇಡಬಹುದು. ಇದು ಸರಿಯಾದ ನಡೆಯಲ್ಲ. ಹೀಗೆ, ʼಅಗತ್ಯʼ ಮತ್ತು ʼಅಪೇಕ್ಷೆʼ ಇವುಗಳ ಮಧ್ಯೆ ಘರ್ಷಣೆ ಉಂಟಾದರೆ ಸಂಘಟಕರು ಅಗತ್ಯಕ್ಕೇ ಆದ್ಯತೆ ನೀಡಬೇಕು. ಈ ಹಿನ್ನಲೆಯಲ್ಲಿ ಅಲ್ಲಿ ಸಸ್ಯಾಹಾರವನ್ನು ನೀಡುವುದೇ ಸರಿ. ಇದಕ್ಕೆ ಸಾಮಾಜಿಕ, ಧಾರ್ಮಿಕವಾದ ಯಜಮಾನಿಕೆ-ದಾಸ್ಯ, ಏಕಸಂಸ್ಕೃತಿ-ಬಹುಸಂಸ್ಕೃತಿ ಇತ್ಯಾದಿ ಅಂಶಗಳನ್ನು ತಳುಕುಹಾಕಿಕೊಳ್ಳುವುದು, ಈಗಾಗಲೇ ಇರುವ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿಕೊಂಡಂತಾಗುವುದರಿಂದ ಅದನ್ನು ಮಾಡಲಿಕ್ಕೆ ಹೋಗುವುದು ಸರಿಯಲ್ಲ.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೊಂದಿದೆ. ಆಹಾರದ ವಿಷಯಕ್ಕೆ ಸಂಬಂಧಿಸಿದಂತೆ ಜೀವಿಗಳನ್ನು ಸಸ್ಯಾಹಾರಿಗಳು, ಮಾಂಸಾಹಾರಿಗಳು ಮತ್ತು ಮಿಶ್ರಾಹಾರಿಗಳು ಎಂದು ಮೂರು ವಿಧವಾಗಿ ವಿಭಾಗಿಸಿಕೊಳ್ಳುವ ಒಂದು ವೈಜ್ಞಾನಿಕ ತತ್ವವಿದೆ.  ಸಸ್ಯಗಳನ್ನು ಮಾತ್ರ ತಿನ್ನುವಂಥವು ಸಸ್ಯಾಹಾರಿಗಳು, ಮಾಂಸವನ್ನು ಮಾತ್ರ ತಿನ್ನುವಂಥವು ಮಾಂಸಾಹಾರಿಗಳು, ಇವೆರಡನ್ನೂ ತಿನ್ನುವಂಥವು ಮಿಶ್ರಾಹಾರಿಗಳು ಎಂಬುದು ಈ ತತ್ವದ ಸರಳ ನಿರೂಪಣೆ. ಈ ಹಿನ್ನಲೆಯಲ್ಲಿ ನೋಡಿದರೆ ನಾವು ಮನುಷ್ಯರನ್ನು ಈಗ ಮಾಡುತ್ತಿರುವಂತೆ ʻಸಸ್ಯಾಹಾರಿಗಳುʼ ಮತ್ತು ʻಮಾಂಸಾಹಾರಿಗಳುʼ ಎಂದು ವಿಭಾಗಿಸುವುದೇ ತಪ್ಪು ಕ್ರಮ. ಅವರನ್ನು ʻಸಸ್ಯಾಹಾರಿಗಳುʼ ಮತ್ತು ʻಮಿಶ್ರಾಹಾರಿಗಳುʼ ಎಂಬು ವಿಭಾಗಿಸಿಕೊಳ್ಳುವುದು ಸರಿಯಾದ ಕ್ರಮ. ಏಕೆಂದರೆ ಮಾಂಸವನ್ನು ತಿನ್ನದೇ ಇರುವವರು ನಮಗೆ ಸಿಗುತ್ತಾರೆಯೇ ಹೊರತು ಸಸ್ಯವನ್ನು ತಿನ್ನದೇ ಇರುವವರು ಸಿಗುವುದೇ ಇಲ್ಲ!

ಹೀಗಾಗಿ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ವಿತರಣೆ ಮಾಡಬೇಕು ಎಂಬ ಬೇಡಿಕೆ ಸಮಂಜಸವಲ್ಲ. ಆ ಬೇಡಿಕೆಯನ್ನು ಮಾನ್ಯವಾಡುವುದು ಸಂಘಟಕರ ಸರಿಯಾದ ನಡೆಯೂ ಅಲ್ಲ. ವೈಯಕ್ತಿಕ ಹಂತದಲ್ಲಿ ಯಾರಾದರೂ ಅದನ್ನು ಮಾಡಿಕೊಳ್ಳುವುದಾದರೆ ಅದನ್ನು ವಿರೋಧಿಸಬೇಕಾಗಿಯೂ ಇಲ್ಲ. ಆದರೆ ಸಾಹಿತ್ಯ ಸಮ್ಮೇಳನದ ಸಂಘಟಕರು ಮಾತ್ರ ಅದಕ್ಕೆ ಮುಂದಾಗಬಾರದು. ಎಲ್ಲ ಸಾಮೂಹಿಕ ಸಭೆ ಸಮಾರಂಭಗಳು, ಬಹಳಷ್ಟು ದೊಡ್ಡ ಮಟ್ಟದ ಸಮ್ಮೇಳನಗಳಲ್ಲಿ ಸೇರುವ ಬೃಹತ್‌ ಜನಸಮೂಹಕ್ಕೆ ಆಹಾರ ನೀಡುವ ಸಂದರ್ಭದಲ್ಲಿ ಎಲ್ಲಕಡೆ ಅನುಸರಿಸುವ ʻಎಲ್ಲರ ಆಹಾರʼವಾದ ಸಸ್ಯಾಹಾರವನ್ನೇ ನೀಡುವ ಕ್ರಮವನ್ನು ಸಾಹಿತ್ಯ ಸಮ್ಮೇಳನದಲ್ಲಿಯೂ ಅನುಸರಿಸುವುದೇ ಸರಿಯಾದ ಕ್ರಮ.  ಸಮ್ಮೇಳನಕ್ಕೆ ಹುಲಿ, ಚಿರತೆ ಮುಂತಾದವುಗಳನ್ನು ಕರೆಸಿಕೊಳ್ಳುವುದಾದರೆ ಆ ಮಾತು ಬೇರೆ. ಈ ಹಿನ್ನಲೆಯಲ್ಲಿ ʼಬಾಡು ನಮ್ಮ ಗಾಡುʼ ಎಂಬ ಘೋಷವಾಕ್ಯಕ್ಕೆ ವ್ಯತಿರಿಕ್ತವಾಗಿ ʼಕೂಡೂಟದಲ್ಲಿ ಬಾಡೂಟ ಬೇಡʼ ಎಂಬ ಘೋಷವಾಕ್ಯ ಮುನ್ನೆಲೆಗೆ ಬರಲಿ.

*****

ಡಾ. ರಾಜೇಂದ್ರ ಬುರಡಿಕಟ್ಟಿ

೧೧-೧೨-೨೦೨೪

No comments:

Post a Comment