Friday, December 13, 2024

ಯಾರೇನಂದರೂ ದೇವನೂರು ದೇವನೂರೇ.....

 ಯಾರೇನಂದರೂ ದೇವನೂರು ದೇವನೂರೇ.....



ದೇವನೂರು ಮಹಾದೇವ ತಮ್ಮ ಬರೆಹ ಮಾತ್ರವಲ್ಲ ಬದುಕಿನಿಂದಲೂ ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆ ಅತ್ಯಮೂಲ್ಯವಾದದ್ದು. ದೇವನೂರು ʼಭಯಂಕರ ಭಾಷಣಕಾರʼ ಅಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಮಾಡಿಕೊಂಡ ಟಿಪ್ಪಣಿ ಕಳೆದುಕೊಂಡರೆ ಅವರಿಗೆ ವೇದಿಕೆ ಮೇಲೆ ಹತ್ತು ನಿಮಿಷ ಮಾತನಾಡಲಿಕ್ಕೂ ಆಗುವುದಿಲ್ಲ. ಇದನ್ನು ಯಾವುದೇ ಮುಚ್ಚುಮರೆಯಿಲ್ಲದೆ ಅವರೇ ವೇದಿಕೆಯ ಮೇಲೆ ಹೇಳಿಕೊಂಡಿದ್ದೂ ಇದೆ. ಹೀಗಿದ್ದೂ ಅವರನ್ನು ಜನ ನಮ್ಮ ಅನೇಕ ʼಭೀಕರ ಭಾಷಣಕಾರʼರಿಗಿಂತ ಹೆಚ್ಚಾಗಿ ಹಚ್ಚಿಕೊಂಡಿರುವುದು ಒಂದು ಕುತೂಹಲದ ಸಂಗತಿಯೇ ಆಗಿದೆ. ಇದು ಕೇವಲ ಅವರ ಬರೆವಣಿಗೆಯ ಕಾರಣಕ್ಕಲ್ಲ; ಬದಲಾಗಿ ಆಡಂಬರವಿಲ್ಲದ ತಮ್ಮ ಸರಳಾತಿಸರಳ ಬದುಕಿಗಾಗಿ ಮತ್ತು ತಮ್ಮ ಬರೆಹಗಳ ಹಿಂದಿನ ತಾತ್ವಿಕ ಬದ್ಧತೆಗಾಗಿ. ಅವರ ಬದ್ಧತೆ ಎಂಥದ್ದು ಎಂದರೆ ತಮ್ಮ ತಾತ್ವಿಕ ಬದ್ಧತೆಗಾಗಿ (ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸು ಸಂಕಲ್ಪವನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿಲ್ಲದ ಕಾರಣಕ್ಕಾಗಿ) ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ (ಶ್ರವಣಬೆಳಗೊಳ) ಸರ್ವಾಧ್ಯಕ್ಷ ಸ್ಥಾನವನ್ನೇ ನಿರಾಕರಿಸಿ ಕರ್ನಾಟಕ ಮಾತ್ರವಲ್ಲ ಇಡೀ ದೇಶದ ಸಾರಸ್ವತ ಲೋಕದಲ್ಲಿ ಸಂಚಲನ ಮೂಡಿಸಿದರು. ಏಕೆಂದರೆ ಈ ಘಟನೆ ನೂರು ವರ್ಷಕ್ಕೂ ಮಿಗಿಲಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿಯೇ ಏಕೈಕ ಘಟನೆಯಾಗಿತ್ತು ಮಾತ್ರವಲ್ಲ; ಭಾರತದ ಉಳಿದ ಭಾಷೆ, ಸಾಹಿತ್ಯ ಸಂಸ್ಕೃತಿಗಳ ಇತಿಹಾಸದಲ್ಲಿಯೂ ಒಂದು ಅಪರೂಪದ ಘಟನೆಯಾಗಿತ್ತು!

ಧಾರವಾಡದಲ್ಲಿ ಮಾತೃಭಾಷೆಗಳ ರಾಷ್ಟ್ರೀಯ ವಿಚಾರ ಸಂಕಿರಣವೊಂದು ನಡೆದಿತ್ತು. ಕಲಬುರ್ಗಿ ಅವರೂ ಅಲ್ಲಿಗೆ ಬಂದಿದ್ದರು. ಈ ವಿಚಾರ ಸಂಕಿರಣವನ್ನು ಉದ್ಘಾಟಿಸಲು ಕವಿ ಸಿದ್ಧಲಿಂಗಯ್ಯ ಬಂದಿದ್ದರು. ಕಾರ್ಯಕ್ರಮ ಉದ್ಘಾಟಿಸಿ ವೇದಿಕೆಯಿಂದ ಮಾತನಾಡುತ್ತಾ ಅವರು ಕಾರ್ಯಕ್ರಮದ ಸಂಘಟಕರನ್ನು ಕುರಿತು ತಮಾಸೆಗೆ ಎಂಬಂತೆ ಹೀಗೆ ಹೇಳಿದರು: "ನೀವು ಈ ಕಾರ್ಯಕ್ರಮದ ಉದ್ಘಾಟನೆಗೆ ದೇವನೂರು ಅವರನ್ನು ಕರೆದಿರುತ್ತೀರಿ. ಅವರು ಬರುವುದಿಲ್ಲ ಅಂದಿರುತ್ತಾರೆ. ಅದಕ್ಕೆ ನೀವು ನನ್ನನ್ನು ಕರೆದಿದ್ದೀರಿ ಅಂದುಕೊಂಡಿದ್ದೆ. ಇಲ್ಲಿ ಬಂದು ನೋಡಿದರೆ ದೇವನೂರು ಸಭಾಂಗಣದಲ್ಲಿ ಮುಂದಿನ ಸಾಲಿನಲ್ಲಿ ನನ್ನ ಎದುರಿಗೇ ಕುಳಿತಿದ್ದಾರೆ. ಒಮ್ಮೇಲೆ ಅವರನ್ನು ನೋಡಿ ನನಗೆ ದಿಗಿಲಾಗಿ ಒಂದು ಕ್ಷಣ ಆತಂಕಕ್ಕೆ ಒಳಗಾದೆ." ಈ ಮಾತನ್ನು ಅವರು ಹೇಳಿದ್ದು ಏಕೆಂದರೆ ಕೆಲವೇ ತಿಂಗಳುಗಳ ಹಿಂದೆ ದೇವನೂರು ಅವರು ಕರ್ನಾಟಕದ ಭಾಷೆ ಶಿಕ್ಷಣದಂತಹ ಅತ್ಯಂತ ಮಹತ್ವದ
ಸಾಮಾಜಿಕ ಆಯಾಮದ ತಾತ್ವಿಕ ಕಾರಣವನ್ನು ನೀಡಿ ತಮಗೆ ಒಲಿದು ಬಂದಿದ್ದ ‍ ಶ್ರವಣಬೆಳಗೊಳದ ಸಮ್ಮೇಳನಾಧ್ಯಕ್ಷತೆ ತಿರಸ್ಕರಿಸಿದಾಗ ಎರಡನೆಯ ಆಯ್ಕೆಯಾಗಿ ಪರಿಷತ್ತು ಈ ಸಿದ್ಧಲಿಂಗಯ್ಯನವರು ಆಯ್ಕೆಮಾಡಲಾಗಿತ್ತು! ಸಿದ್ಧಲಿಂಗಯ್ಯ ಅದನ್ನು ಒಪ್ಪಿಕೊಂಡು ಅಧ್ಯಕ್ಷತೆವಹಿಸಿದ್ದರು. ಈ ಸಮ್ಮೇಳನವು ಸರ್ವಾಧ್ಯಕ್ಷರಿಲ್ಲದ ಸಮ್ಮೇಳನವಾಗಿಯೇ ನಡೆಯಬೇಕು; ಇದರಿಂದ ಪ್ರತಿ ಸಮ್ಮೇಳನದ ಹೊತ್ತಿಗೆ ಬಿಡುಗಡೆ ಆಗುವ ಹಿಂದಿನ ಸಮ್ಮೇಳನಾಧ್ಯಕ್ಷರ ದೀರ್ಘವಾದ ಪಟ್ಟಿಯಲ್ಲಿ ದಾಖಲಾಗುವ ಈ ಖಾಲಿಜಾಗ ಪ್ರತಿಬಾರಿಯೂ ಸಮ್ಮೇಳನ ನಡೆಯುವಾಗ ಈ ಘಟನೆ ಅನುರಣನಗೊಳ್ಳುವಂತೆ ಮಾಡಲಿ ಎಂಬುದು ನಮ್ಮಂಥ ಕೆಲವರ ಅಪೇಕ್ಷೆ ಆಗಿತ್ತು. ಆದರೆ ಈ ಸಿದ್ಧಲಿಂಗಯ್ಯ ಆ ಎರಡನೆಯ ಆಯ್ಕೆಯನ್ನು ಒಪ್ಪಿಕೊಂಡು ಈ ಘಟನೆ ಮುಂದಿನವರಿಗೆ ನೆನಪಾಗದಂತೆ ಮಾಡಿಬಿಟ್ಟಿದ್ದರು. ಈ ಬಗ್ಗೆ ದೇವನೂರು ಏನೂ ಹೇಳಿರಲಿಲ್ಲವಾದರೂ ಈ ಸಿದ್ಧಲಿಂಗಯ್ಯನವರಿಗೆ ಮಾತ್ರ ಈ ವಿಷಯದಲ್ಲಿ ತಪ್ಪುಮಾಡಿದೆ ಎಂಬ ಆತಂಕ ಒಳಗೆ ಇದ್ದೇ ಇತ್ತು ಅಂತ ಕಾಣುತ್ತದೆ. ಹಾಗಾಗಿಯೇ ಅವರಿಗೆ ಇಲ್ಲಿ ಆತಂಕ, ದಿಗಿಲು ಆಗಿದ್ದು. ಹೀಗೆ ಮಾತಿನಿಂದ ಮಾತ್ರವಲ್ಲ ಮೌನಕೃತಿಯಿಂದಲೂ ತಪ್ಪುಮಾಡುವಂಥವರಿಗೆ ಆತಂಕ, ದಿಗಿಲು ಮತ್ತು ಭೀತಿಯನ್ನುಂಟುಮಾಡುವ ಶಕ್ತಿ ಈ ದೇವನೂರು ಅವರಿಗೆ ಇದೆ.



ಕೆಲ ತಿಂಗಳ ಹಿಂದೆ ಯಾರೋ ಅವರ ತಾತ್ವಿಕ ಬದ್ಧತೆಯನ್ನು ತೋರಿಸುವ ಇನ್ನೊಂದು ಘಟನೆಯನ್ನು ನೆನಪಿಸಿಕೊಂಡಿದ್ದರು. ದೇವನೂರು ಅವರು ರೈಲು ನಿಲ್ದಾಣವೊಂದರಲ್ಲಿ ಕೆಳಹಂತದ ಭೋಗಿಯಿಂದ ಇಳಿಯುವುದನ್ನು ನೋಡಿದ ಅವರು ಆಶ್ಚರ್ಯದಿಂದ, ದೇವನೂರು ಅವರನ್ನು ಸಮೀಪಿಸಿ, "ಸರ್‌ ತಮಗೆ ಕೇಂದ್ರ ಸರ್ಕಾರ ಪ್ರಥಮ ದರ್ಜೆಯ ಭೋಗಿಯಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯ ನೀಡಿದೆಯಲ್ಲ. ಆದರೂ ತಾವು ಈ ಭೋಗಿಯಲ್ಲಿ ಏಕೆ ಪ್ರಯಾಣ ಮಾಡಿದ್ದು?" ಎಂದು ಕೇಳಿದರಂತೆ. ಅದಕ್ಕೆ ದೇವನೂರು ಅವರು ಬಹಳ ಮೆಲುದನಿಯಲ್ಲಿ ಹೇಳಿದರಂತೆ: "ಹೌದು. ಆದರೆ ನಾನು ಆ ಸೌಲಭ್ಯ ನೀಡಿದ್ದ ಪ್ರಶಸ್ತಿಯನ್ನು ಮರಳಿಕೊಟ್ಟಿದ್ದೇನೆ. ಪ್ರಶಸ್ತಿಯನ್ನು ಮರಳಿಸಿದ ಮೇಲೆ ಪ್ರಶಸ್ತಿಯೊಂದಿಗೆ ಬಂದ ಆ ಸೌಲಭ್ಯವನ್ನು ಬಳಸಿಕೊಳ್ಳುವುದು ಸರಿಯಲ್ಲವಲ್ಲ. ಅದಕ್ಕೆ". ದೇವನೂರು ಅವರಿಗೆ ಕೇಂದ್ರ ಸರ್ಕಾರ ಪದ್ಮಪ್ರಶಸ್ತಿ ನೀಡಿತ್ತು. ಅದನ್ನು ಅವರು ತಾತ್ವಿಕ ಕಾರಣವೊಂದನ್ನು ಮುಂದುಮಾಡಿ (ಬಹುಶಃ ಕಲಬುರ್ಗಿ ಅವರ ಕೊಲೆ ಎಂದು ಕಾಣುತ್ತದೆ) ಹಿಂದಿರುಗಿಸಿದ್ದರು. ಸರ್ಕಾರ ಪ್ರಶಸ್ತಿಯೊಂದಿಗೆ ನೀಡಿದ್ದ ರೈಲು ಪ್ರಯಾಣದ ಸೌಲಭ್ಯವನ್ನು ಮರಳಿ ಪಡೆದಿರಲಿಲ್ಲವಾದರೂ ಅದನ್ನು ಅವರು ಬಳಸಿಕೊಳ್ಳಬಹುದಾಗಿದ್ದರೂ ಅವರು ತಮ್ಮಷ್ಟಕ್ಕೇ ತಾವು ಅದು ಸರಿಯಲ್ಲವೆಂದು ಅದನ್ನು ಬಳಸಿಕೊಳ್ಳುವುದನ್ನೇ ಬಿಟ್ಟರು.

ದೇವನೂರು ಅವರ ಬಗ್ಗೆ ಕೆಲವು ಸ್ವಾರಸ್ಯಕರ ಕಥೆಗಳಿವೆ. ಅವರ ಸರಳತೆ ಎಂಥದ್ದು ಎಂದರೆ ಅವರಿಗೆ ಹಂಪಿ ಕನ್ನಡ ವಿವಿ ತನ್ನ ಪರಮೋಚ್ಛ ಗೌರವವಾದ ʼನಾಡೋಜʼ ಪ್ರಶಸ್ತಿಯನ್ನು ನೀಡಲೆಂದು ಕರೆಸಿಕೊಂಡಾಗ ವಿವಿಯ ಆಗಿನ ಕುಲಪತಿಗಳು ಅವರಿಗೆ ತಂಗಲು ವಿಶೇಷ ಹವಾನಿಯಂತ್ರಿತ ಕೊಠಡಿಯ ವ್ಯವಸ್ಥೆ ಮಾಡಿದ್ದರಂತೆ. ಅಲ್ಲಿಗೆ ಹೋಗಿ ಅದನ್ನು ನೋಡಿದ ದೇವನೂರು ʼಇದೆಲ್ಲ ನನಗೆ ಬೇಡ ಯಾವುದಾದರೂ ಸಾದಾ ರೂಮಿದ್ರೆ ಕೊಡಪ್ಪʼ ಎಂದು ಕೇಳಿದರಂತೆ. ತಮ್ಮ ಮಿತಿಮೀರಿದ ಸರಳತೆಗಾಗಿ ಈ ದೇವನೂರು ಅನೇಕ ಸಲ ಪೇಚಿಗೆ ಸಿಕ್ಕಿಹಾಕಿಕೊಳ್ಳುವುದೂ ಇದೆ. ಒಮ್ಮೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದೇವನೂರು ಅವರನ್ನು ಭೇಟಿ ಮಾಡಲು ಮೈಸೂರಿನ ಇವರ ಮನೆಗೆ ಹೋಗಿದ್ದರಂತೆ. ಆಗ ದೇವನೂರು ಅವರು ತಮ್ಮ ಸ್ಕೂಟಿ ತೆಗೆದುಕೊಂಡು ಎಲ್ಲೋ ತಿರುಗಾಡಲು ಹೋಗಿದ್ದಾರೆ. ಅವರು ಮರಳಿ ಮನೆಗೆ ಬರುವ ಹೊತ್ತಿಗೆ ಅವರ ಮನೆಗೆ ಹೋಗುವ ಎಲ್ಲ ದಾರಿಗಳನ್ನೂ ಪೋಲೀಸರು (ಆ ಭಾಗದಲ್ಲಿ ಮುಖ್ಯಮಂತ್ರಿ ಇರುವುದರಿಂದ) ಬಂದ್‌ ಮಾಡಿದ್ದರಂತೆ. ಯಾವ ಪೋಲೀಸರು ಇವರನ್ನು ಬಿಡಲು ತಯಾರಿರಲಿಲ್ಲವಂತೆ. ಇತ್ತ ಮುಖ್ಯಂತ್ರಿಗಳು ದೇವನೂರರ ಮನೆಯಲ್ಲಿ ದೇವನೂರು ಈಗ ಬರ್ತಾರೆ ಆಗ ಬರ್ತಾರೆ ಅಂತ ಕಾಯುತ್ತಿದ್ದಾರೆ. ಅತ್ತ ದೇವನೂರು ತಮ್ಮ ಮನೆಗೆ ಸೇರಲು ಪರದಾಡುತ್ತಿದ್ದಾರೆ. ಪೋಲೀಸರು ಅವರನ್ನು ಮನೆಗೆ ಹೋಗಲು ಬಿಡುತ್ತಿಲ್ಲ ಅವರು ಹೋಗಿ ಮುಖ್ಯಮಂತ್ರಿಗಳನ್ನು ಮಾತನಾಡಿಸುವುದಾದರೂ ಹೇಗೆ?....

ಕಳೆದ ಹತ್ತು ವರ್ಷಗಳಿಂದ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಭಾರತದ ಒಬ್ಬ ಪ್ರಮುಖ ಸಾಹಿತಿಯನ್ನು ಗುರುತಿಸಿ ʼಕುವೆಂಪು ರಾಷ್ಟ್ರೀಯ ಪುರಸ್ಕಾರʼವನ್ನು ಕೊಡಮಾಡುತ್ತಿದೆ. ಇದನ್ನು ಈಗಾಗಲೇ ಪಡೆದಿರುವ ಹಿಂದಿ, ಮರಾಠಿ, ಮಲೆಯಾಳಂ, ತಮಿಳು, ತೆಲುಗು, ಓರಿಯಾ, ಅಸ್ಸಾಮಿ, ಉರ್ದು, ಹೀಗೆ ಬೇರೆ ಬೇರೆ ಭಾಷೆಗಳ ಸಾಹಿತಿಗಳ ಪಟ್ಟಿಯಲ್ಲಿ ಆ ಗೌರವವನ್ನು ಪಡೆದ ಏಕೈಕ ಕನ್ನಡ ಸಾಹಿತಿ ಎಂದರೆ ಅದು ನಮ್ಮ ದೇವನೂರು ಅವರು. ತಮ್ಮ ಆಲೋಚನಾ ಕ್ರಮಕ್ಕೆ ತಕ್ಕುದಾದರೆ ಅದು ಎಷ್ಟೇ ಚಿಕ್ಕದಾದರೂ ಆ ಪ್ರಶಸ್ತಿ ಗೌರವವನ್ನು ಅತ್ಯಂತ ಪ್ರೀತಿಯಿಂದ ಒಪ್ಪಿಕೊಳ್ಳುವುದು, ತಮ್ಮ ಆಲೋಚನಾ ಕ್ರಮಕ್ಕೆ, ತಾವು ಒಪ್ಪಿಕೊಂಡ ತಾತ್ವಿಕತೆಗೆ ವಿರುದ್ಧವಿರುವುದಾದರೆ ಅದು ಎಷ್ಟೇ ದೊಡ್ಡ ಪ್ರಶಸ್ತಿ, ಸನ್ಮಾನ-ಗೌರವವಿರಲಿ ಹುಲ್ಲುಕಡ್ಡಿಯಂತೆ ತಳ್ಳಿಬಿಡುವುದು ದೇವನೂರು ಅಂಥ ತಾತ್ವಿಕ ಬದ್ಧತೆಯಿರುವ ಸಾಹಿತಿಗೆ ಮಾತ್ರ ಸಾಧ್ಯವಾಗುವಂಥದ್ದು.



ಇಂತಹ ಹೆಮ್ಮೆಯ ಸಾಹಿತಿ ದೇವನೂರು ಅವರಿಗೆ ಅವರ ತಾತ್ವಿಕತೆಕೆ ಪೂರಕವಾದ ವೈಕಂ ಪ್ರಶಸ್ತಿ ಬಂದಿರುವುದು ಸಂತೋಷದ ಸಂಗತಿ. ಈ ಪ್ರಶಸ್ತಿಯು ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೋದಿಂದ ʼಆಗ್ನೇಯ ಭಾರತದ ಸಾಕ್ರೆಟಿಸ್‌ʼ ಎಂದು ಹೊಗಳಲ್ಪಟ್ಟ ಭಾರತದ ಮಹಾನ್‌ ವೈಚಾರಿಕ ಚಿಂತಕ ಪೆರಿಯಾರ್‌ ಅವರಿಗೆ ಸಂಬಂಧಿಸಿದ್ದು. ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿ ನೋಡಿದರೆ ದಕ್ಷಿಣ ಭಾರತದ ರಾಜ್ಯಗಳು ಜನರಲ್ಲಿ ವೈಚಾರಿಕತೆ ಬಿತ್ತುವಲ್ಲಿ ಯಾವಾಗಲು ತುಸು ಮುಂದೆಯೇ ಇವೆ. ಇವುಗಳ ಹಿಂದೆ ಕರ್ನಾಟಕದ ಬಸವಣ್ಣ ಮತ್ತು ಶರಣರು, ಕೇರಳದ ನಾರಾಯಣ ಗುರು, ತಮಿಳುನಾಡಿನ ಪೆರಿಯಾರ್‌ ಇಂಥವರ ಕೊಡುಗೆ ಅಪಾರ. ಹೀಗಾಗಿ ಈ ರಾಜ್ಯಗಳಲ್ಲಿ ದೇವರು ಧರ್ಮಗಳನ್ನು ಗುರಾಣಿ ಮಾಡಿಕೊಂಡು ಜನರ ಕಣ್ಣಿಗೆ ಮಂಕುಬೂದಿ ಎರಚುವ ʼಅಂಧಭಕ್ತರʼ ಆಟ ಅಷ್ಟಾಗಿ ನಡೆಯುವುದಿಲ್ಲ. ಇಂತಹ ಹಿನ್ನೆಲೆಯ ಪ್ರಶಸ್ತಿ ಪಡೆಯುವುದು ದೇವನೂರು ಅವರಿಗೂ ಸಂತೋಷವನ್ನು ನೀಡಿರಬಹುದು.

ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಒಂದೇ ವೇದಿಕೆಯಲ್ಲಿ ತಮ್ಮೆರಡೂ ರಾಜ್ಯಗಳಿಗೆ ಸೇರದ ಸಾಹಿತಿಯೋರ್ವನಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವುದನ್ನು ನಾನು ನೋಡುತ್ತಿರುವುದು ಇದೇ ಮೊದಲು. ಇದೇ ದೇವನೂರು ಅವರ ವೈಶಿಷ್ಟ್ಯ.

ಡಾ. ರಾಜೇಂದ್ರ ಬುರಡಿಕಟ್ಟಿ
೧೨-೧೨-೨೦೨೪

No comments:

Post a Comment