ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ:
ನನಸಾಗದ ಕನಸೋ ಅಥವಾ ಚಿಗುರಿದ ಕನಸೋ ?
ಮಂಡ್ಯದ ಎಂಬತ್ತೇಳನೆಯ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈಗಷ್ಟೆ ತೆರೆಬಿದ್ದಿದೆ. ನಿಗಧಿತ ಮತ್ತು ಅಧಿಕೃತ ಗೋಷ್ಠಿಗಳಿಗಿಂತ
ನಿಗಧಿತವಲ್ಲದ ಮತ್ತು ಅನಧಿಕೃತವಾದ ಒಂದೊಂದು ಸಂಗತಿಗಳು ಒಂದೊಂದು ಸಮ್ಮೇಳನಗಳಲ್ಲಿ ಮುಂದೆ ಬಂದು ವ್ಯಾಪಕ
ಪ್ರಚಾರ ಪಡೆಯುತ್ತಿರುವುದು ಈ ಕನ್ನಡ ಸಾಹಿತ್ಯ ಸಮ್ಮೇಳನದ ಇತ್ತೀಚೆಗಿನ ಒಂದು ವೈಶಿಷ್ಟ್ಯವೇ ಆಗುತ್ತಿದೆ. ಹಾಗೆ ಈ ಸಲ ಮುನ್ನೆಲೆಗೆ ಬಂದು ವ್ಯಾಪಕವಾಗಿ ಪ್ರಚಾರ ಪಡೆದುಕೊಂಡದ್ದು
ಸಮ್ಮೇಳನದಲ್ಲಿ ಮಾಂಸಾಹಾರ ವಿತರಣೆ ಆಗಬೇಕು ಎಂಬ ವಿಚಾರ. ಸಮ್ಮೇಳನದ ಸಂದರ್ಭದಲ್ಲಿ ಇದು ಹುಟ್ಟಿದ್ದು
ಹೇಗೆ, ಬೆಳೆದದ್ದು ಹೇಗೆ, ಕೊನೆಗೆ ಬಂದು ನಿಂತದ್ದು ಎಲ್ಲಿಗೆ ಮತ್ತು ಇದರ ಮುಂದಿನ ನಡೆ ಏನಾಗಬಹುದು
ಎಂಬುದನ್ನು ಒಂದಿಷ್ಟು ವಿವರವಾಗಿ ಚರ್ಚಿಸುವುದು ಈ ಲೇಖನದ ಉದ್ದೇಶ.
ಮೊಟ್ಟ ಮೊದಲನೆಯದಾಗಿ
ಈ ಯೋಚನೆ ಯಾರ ತಲೆಗೆ ಹೊಳೆಯಿತೋ ತಿಳಿಯದು. ಸಮ್ಮೇಳನದ ಮಳಿಗೆಗಳನ್ನು ಪಡೆಯುವವರು ಪಾಲಿಸಬೇಕಾದ ನಿಯಮಗಳೆಂದು
ಕೆಲವು ʼನಿಯಮʼಗಳನ್ನು ರೂಪಿಸಿದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ ಜೋಶಿ ಮಳಿಗೆಗಳಲ್ಲಿ
ಮದ್ಯಪಾನ, ಗುಟಕಾ ಸೇವನೆ ಮಾಂಸಾಹಾರ ತಯಾರಿಕೆ ಇತ್ಯಾದಿಗಳಿಗೆ ಅವಕಾಶವಿಲ್ಲವೆಂದು ಒಂದು ನಿಯಮ ಸೇರಿಸದರೆಂದೂ
ಅದನ್ನು ಪ್ರತಿಭಟಿಸುವ ಭರಾಟೆಯಲ್ಲಿ ಈ ಮಾಂಸಾಹಾರದ ಚರ್ಚೆ ಹುಟ್ಟಿ ಮುನ್ನೆಲೆಗೆ ಬಂತೆಂದೂ ನಾವು ಮೇಲ್ನೋಟಕ್ಕೆ
ಇದರ ಹುಟ್ಟಿನ ಸ್ಥಳ ಮತ್ತು ಕಾರಣಗಳನ್ನು ಗುರುತಿಸಬಹುದು. ಮಾಂಸಾಹಾರದ ಚರ್ಚೆ ಮುನ್ನೆಲೆಗೆ ಬಂದಂತೆ
ಗುಟಕಾ ಪ್ರಿಯರು, ಮದ್ಯಮಿತ್ರರು ಈ ನಿಯಮವನ್ನು ಅಷ್ಟೊಂದು ಗಂಭಿರವಾಗಿ ತೆಗೆದುಕೊಳ್ಳಲಿಲ್ಲವಾದ್ದರಿಂದ
ಅವುಗಳ ಚರ್ಚೆ ಮುಂದಕ್ಕೆ ಬರಲಿಲ್ಲ.
ಆರಂಭದಲ್ಲಿ ಮಾಂಸಾಹಾರ
ಸೇವನೆಯನ್ನು ನಿಷೇಧಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಕೆಲವು
ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಕೆಲವು ಪೋಸ್ಟ್ ಗಳನ್ನು ಹಾಕುವ ಮೂಲಕ ಈ ಚರ್ಚೆ ಶುರುವಾಯಿತು.
ಇಲ್ಲೊಂದು ಸಣ್ಣ ಸಂಗತಿಯನ್ನು ಗಮನಿಸಬೇಕು. ಮಳಿಗೆಗಳಲ್ಲಿ ಮಾಂಸಾಹಾರ ತಯಾರಿಕೆಯನ್ನು ನಿಷೇಧಿಸಲಾಗಿತ್ತೇ
ಹೊರತು ಅದರ ಸೇವನೆಯನ್ನಲ್ಲ; ಹಾಗಾಗಿ ಹೊರಗಿನಿಂದ ತೆಗೆದುಕೊಂಡು ಹೋದ ಮಾಂಸಾಹಾರವನ್ನು ಸೇವಿಸುವುದನ್ನು
ಅದು ನಿರ್ಬಂಧಿಸುವುದಿಲ್ಲ ಎಂದು ಒಬ್ಬ ವಿದ್ವಾಂಸರು ತಮ್ಮ ಪೋಸ್ಟ್ ಒಂದರಲ್ಲಿ ಸ್ಪಷ್ಟೀಕರಿಸಿದರು.
ಆದರೆ ಅದನ್ನು ಅನೇಕರು ಗಮನಿಸಲಿಲ್ಲ. ಅದಕ್ಕೂ ಮುಖ್ಯ ಸಂಗತಿ ಎಂದರೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು
ಅಂತಹ ಒಂದು ನಿಯಮವನ್ನು ಮಾಡುವ ಅವಶ್ಯಕತೆಯೇ ಇರಲಿಲ್ಲ. ಆದರೂ ಮಾಡಿದರು. ಇದು ಅನೇಕರನ್ನು ಕೆರಳಿಸಿತು.
ಅದನ್ನು ದಿಕ್ಕರಿಸಬೇಕು ಎಂದು ಅವರಿಗೆ ಅನ್ನಿಸಿತು. ಅಷ್ಟೇ ಆಗಿದ್ದರೆ ಆ ನಿಯಮವನ್ನು ವಾಪಸ್ಸು ತೆಗೆದುಕೊಳ್ಳಬೇಕು
ಆಹಾರದ ಸೇವನೆಯನ್ನು ಅವರವರ ಇಷ್ಟಕ್ಕೆ ಬಿಡಬೇಕು ಎಂಬ ಬೇಡಿಕೆ ಮಾತ್ರ ಬರುತ್ತಿತ್ತು. ಪರಿಷತ್ತು ಅದನ್ನು
ಮರಳಿ ಪಡೆಯುವ ಸಾಧ್ಯತೆ ಇತ್ತು. ಅಲ್ಲಿಗೆ ಆ ವಿಷಯ ಮುಗಿಯುತ್ತಿತ್ತು.
ಆದರೆ ಇದನ್ನು
ಮುಗಿಸಲು ಕೆಲವರಿಗೆ ಇಷ್ಟವಿರಲಿಲ್ಲವೇನೋ. ಪರಿಷತ್ತಿನ
ಅಧ್ಯಕ್ಷರು ಮಾಡಿದ ಈ ಅನವಶ್ಯಕ ನಿಯಮವನ್ನು ಹಿಂತೆಗೆದುಕೊಳ್ಳಲು ಒತ್ತಡ ತರುವುದಕ್ಕೆ ಬದಲಾಗಿ ಅದನ್ನೊಂದು
ʻಸದವಕಾಶʼವಾಗಿ ಬಳಸಿಕೊಂಡು ಇದು ʼಮಾಂಸಾಹಾರಿಗಳೆಲ್ಲರಿಗೂ ಮಾಡಿದ ಅಪಮಾನʼ
ಎಂಬಂತೆ ಅದನ್ನು ಬಿಂಬಿಸಿ ಸಮ್ಮೇಳನದಲ್ಲಿ ನೀಡಲಾಗುವ ಆಹಾರದಲ್ಲಿ ಸಸ್ಯಾಹಾರದ ಜೊತೆಗೆ ಮಾಂಸಾಹಾರವೂ
ಇರಬೇಕು ಎಂಬ ಹೊಸ ಬೇಡಿಕೆಯೊಂದನ್ನು ಮುಂದಿಟ್ಟರು. ಈ ಬೇಡಿಕೆ ಆರಂಭದಲ್ಲಿ ಕೆಲವರಿಂದ ಕೆಲವು ಕಡೆ
ತಮಾಸೆಗೆ ಒಳಗಾದಾಗ, ಇದು ಕೇವಲ ಮಾಂಸಾಹಾರದ ಸೇವನೆಯ ಚಪಲಕ್ಕೆ ಮಾಡುತ್ತಿರುವ ಹೋರಾಟವಲ್ಲವೆಂದೂ ಆಹಾರ
ಸಂಸ್ಕೃತಿಯಲ್ಲಿನ ತರತಮಭಾವನೆಯನ್ನು ಹೋಗಲಾಡಿಸುವುದಕ್ಕಾಗಿ, ಸಾರ್ವಜನಿಕ ಆಹಾರ ನೀಡಿಕೆಯಲ್ಲಿ ಬ್ರಾಹ್ಮಣೀಕರಣದ
ಮೇಲಾಳ್ವಿಕೆಯನ್ನು ಕೊನೆಗಾಣಿಸಲು ಮಾಡುತ್ತಿರುವ ಹೋರಾಟವೆಂದೂ ಸ್ಪಷ್ಟೀಕರಣವನ್ನು ಇವರು ನೀಡತೊಡಗಿದರು.
ಇದು ʻಆಹಾರಕ್ರಾಂತಿ’ಯ ಹೋರಾಟʼ ಇದಕ್ಕೆ ಕೈಜೊಡಿಸಿ ಎಂದು ಇವರು ಸಾರ್ವಜನಿಕರಲ್ಲಿ
ಮನವಿಯನ್ನೂ ಮಾಡತೊಡಗಿದರು. (ಕುವೆಂಪು ಸುಮಾರು ಒಂದು ನೂರು ವರ್ಷಗಳ ಹಿಂದೆ ಇದೇ ಭಾಗದಲ್ಲಿ ʻವಿಚಾರಕ್ರಾಂತಿʼಗೆ
ಆಹ್ವಾನವನ್ನು ನೀಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.) ನಂತರದ ದಿನಗಳಲ್ಲಿ ಇದಕ್ಕೆ ಇತಿಹಾಸ,
ಭೂಗೋಳ, ಸಮಾಜಶಾಸ್ತ್ರ, ಧರ್ಮ ಇತ್ಯಾದಿ ಸುತ್ತಿಕೊಂಡು ಅದನ್ನು ಒಂದು ʻಸಾಮಾಜಿಕ
ಸಮಸ್ಯೆʼಯನ್ನಾಗಿ ರೂಪಿಸಿದವು.
ಇದರ ಪರಿಣಾಮ ಏನಾಯಿತು
ಎಂದರೆ ಸಮ್ಮೇಳನದ ಆರಂಭಕ್ಕೂ ಮುನ್ನ ಸುಮಾರು ಹತ್ತು ಹದಿನೈದು ದಿನಗಳಲ್ಲಿ ಪತ್ರಿಕೆಗಳಲ್ಲಿ ಸಮ್ಮೇಳನದಲ್ಲಿ
ಯಾವ ಯಾವ ಗೋಷ್ಠಿಗಳು ನಡೆಯುತ್ತವೆ, ಮನರಂಜನಾ ಕಾರ್ಯಕ್ರಮಗಳಲ್ಲಿ ಯಾವ ತಂಡಗಳು ಭಾಗವಹಿಸುತ್ತವೆ,
ಪುಸ್ತಕ ಮಳಿಗೆಗಳ ವ್ಯವಸ್ಥೆ ಹೇಗಾಗಿದೆ ಎಂಬ ಬಹುಮುಖ್ಯ ಮಾಹಿತಿಗಿಂತ ಈ ಮಾಂಸಾಹಾರದ ಚರ್ಚೆಯೇ ವ್ಯಾಪಕವಾಗಿ
ನಡೆಯಿತು. ಈ ಹೋರಾಟಕ್ಕೆ ಒಂದು ಸಾಂಘಿಕ ಬಲ ಬರಲೆಂದು
ಕೆಲವು ʻಮಾಂಕಮಿʼಗಳು (ಮಾಂಸಾಹಾರಿಗಳೆಂದು ಕರೆಯಲ್ಪಡುವ ಮಿಶ್ರಾಹಾರಿಗಳು) ಒಂದು
ʻಬಾಬʼ (ಬಾಡೂಟ ಬಳಗ) ರಚಿಸಿಕೊಂಡು ಹೋರಾಟಕ್ಕೆ ಚಳವಳಿಯ ಮೆರಗನ್ನು ನೀಡಿದರು.
ಸ್ವಾಗತ ಸಮಿತಿಗೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿಗೆ ಮನವಿ ಸಲ್ಲಿಸುವುದು, ಮಂಡ್ಯ ಜಿಲ್ಲಾಧಿಕಾರಿಗಳ
ಕಛೇರಿಯೆದುರು ಕೂತು ಬಾಡೂಟ ಸೇವಿಸುವುದು, ಸಂಬಂಧ ಪಟ್ಟವರು ಮನವಿಗೆ ಸ್ಪಂದಿಸದಿದ್ದರೆ ತಾವೇ ವೈಯಕ್ತಿಕ
ನೆಲೆಯಲ್ಲಿ ಬಾಡೂಟ ಕೊಡುವ ವ್ಯವಸ್ಥೆ ಮಾಡುವುದಾಗಿ ಒತ್ತಡ ತರುವುದೂ ಎಲ್ಲವೂ ನಡೆದವು.
ಈ ಸಂದರ್ಭದಲ್ಲಿ ಮುನ್ನೆಲೆಗೆ ತಂದ ಬಹುಮುಖ್ಯ ಸಂಗತಿ ಎಂದರೆ
ಶತಶತಮಾನಗಳಿಂದಲೂ ಸಸ್ಯಾಹಾರ ಮತ್ತು ಮಾಂಸಾಹಾರಗಳ ನಡುವೆ ತರತಮ ಭಾವನೆಯಿದೆ. ʻಸಸ್ಯಾಹಾರ
ಮೇಲು, ಮಾಂಸಾಹಾರ ಕೀಳುʼ ಎಂಬ ಭಾವನೆಯಿದ್ದು ಇದು ಸರಿಯಲ್ಲ. ಇದು ಹೋಗಬೇಕು. ಇದು ಮಂಡ್ಯದಿಂದಲೇ ಆರಂಭವಾಗಲಿ
ಎಂಬುದು. ಈ ಹಿನ್ನಲೆಯಲ್ಲಿ ಮಂಡ್ಯದ ಅನನ್ಯತೆಯ ಸಂಕೇತಗಳೆಂದು ಭಾವಿಸಿ ಸಿಂಹಾಸನದ ಮೇಲೆ ಕೂರಿಸಲಾಗಿದ್ದ
ʼಸಕ್ಕರೆʼ ಮತ್ತು ʼಬೆಲ್ಲʼ ಇವುಗಳನ್ನು ಪಕ್ಕಕ್ಕೆ ದಬ್ಬಿ ಅಲ್ಲಿಗೆ ʻಬಾಡುʼ
ಬಂದು ಕುಳಿತುಕೊಂಡಿತು. ಆದರೆ ಮಂಡ್ಯ ನಗರದ ಪ್ರವೇಶದಲ್ಲಿ
ಹಾಕಾಲಾಗಿದ್ದ ʻಸಕ್ಕರೆ ನಾಡಿಗೆ ಸ್ವಾಗತʼ ಎಂಬ ಫಲಕ ಮಾತ್ರ ಸಧ್ಯಕ್ಕೆ ʼಬಾಡಿನ ನಾಡಿಗೆ
ಸ್ವಾಗತʼ ಎಂದು ಬದಲಾವಣೆ ಆಗದೇ ಹಾಗೇ ಉಳಿದುಕೊಂಡಿತು!
ಮಂಡ್ಯದಲ್ಲಿ ಇಪ್ಪತ್ತು
ಮೂವತ್ತು ಜನರು ಭೌತಿಕವಾಗಿ ಈ ಹೋರಾಟ ಮಾಡುತ್ತಿದ್ದರೆ ಕೆಲವು ಹಿರಿಯ ಚಿಂತಕರು, ವಿಚಾರವಾದಿ ಸ್ನೇಹಿತರು
ದೂರದಿಂದಲೇ ಈ ಹೋರಾಟಕ್ಕೆ ತಾತ್ವಿಕವಾಗಿ ಬೆಂಬಲ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕತೊಡಗಿದರು.
ಇನ್ನು ಕೆಲವರು ಈ ತಾತ್ವಿಕತೆ ಅದು ಇದು ಏನೂ ತಿಳಿಯದೆ ಇದ್ದರೂ ʼಬಾಡೂಟʼದ ಸಂಭ್ರಮವನ್ನು ನೆನಪುಮಾಡಿಕೊಂಡು
ಇದನ್ನು ಬೆಂಬಲಿಸತೊಡಗಿದರು! ಇದರಿಂದ ಉತ್ತೇಜನಗೊಂಡು ಈ ಬಾಬ ಈ ಸಮ್ಮೇಳನದಲ್ಲಿ ಏನಾದರೂ ಮಾಡಿ ಬಾಡೂಟ
ಕೊಡಿಸಲೇಬೇಕು ಎಂಬ ಹಟಕ್ಕೆ ಬಿದ್ದು ʼಬಾಡೇ ನಮ್ಮ ಗಾಡುʼ ಎಂಬ ಘೋಷವಾಕ್ಯ ರಚಿಸಿಕೊಂಡು ಹೋರಾಟವನ್ನು
ತೀರ್ವಗೊಳಿಸಿತು. ಆದರೂ ಇದು ಸ್ಥಳೀಯವಾಗಿ ನಿರೀಕ್ಷಿಸಿದಷ್ಟು ಜನಮಾನ್ಯತೆಯನ್ನು ಪಡೆಯಲಿಲ್ಲ. ಮಾಂಸ
ಊಟ ಮಾಡುವ ಬಹುಸಂಖ್ಯಾತ ಜನರು ಕೂಡ ಸುಮ್ಮನ್ನೆ ಏನಾಗುತ್ತೋ ಆಗಲಿ ಎಂದು ಕಾದುನೋಡುವ ತಂತ್ರ ಅನುಸರಿಸಿದರು.
ಏಕೆಂದರೆ ಅವರಿಗೆ ಮಾಂಸಾಹಾರವನ್ನು ʻಕೊಟ್ಟರೆ ಕಷ್ಟವಲ್ಲ; ಕೊಡದಿದ್ದರೆ ನಷ್ಟವೂ ಅಲ್ಲ. ಮೂಳೆ ಸಿಗದಿದ್ದರೇನು
ಹೋಳಿಗೆ ಇರುತ್ತಲ್ಲ ಎಂಬ ಧೋರಣೆ ಅವರದು.
ಸಮಿತಿಯ ನಿರಾಕರಣೆ
ಮತ್ತು ಅಸಮಾಧಾನದ ಹೊರಹೊಮ್ಮುವಿಕೆ
ಸಮ್ಮೇಳನಕ್ಕೆ
ಒಂದೆರಡು ದಿನಗಳ ಮೊದಲು ಆಹಾರ ಸಮಿತಿ ತಾನು ಸಮ್ಮೇಳನದಲ್ಲಿ ನೀಡಲು ಉದ್ದೇಶಿಸಿದ್ದ ಆಹಾರ ಪದಾರ್ಥಗಳ
ಪಟ್ಟಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿತು. ಈ ಬಾಬ ಅಷ್ಟೊಂದು ಪ್ರಯತ್ನಮಾಡಿದ್ದರೂ, ಈ ಪಟ್ಟಿಯಲ್ಲಿ
ಅದರ ಬೇಡಿಕೆಯನ್ನು ನಿರಾಕರಿಸಲಾಗಿತ್ತು. ಬಹಳಷ್ಟು ಐಟಂಗಳು ಅಲ್ಲಿದ್ದರೂ ಮಾಂಸಾಹಾರವೆಂದು ಭಾವಿಸುವ
ಯಾವ ಒಂದು ಐಟಂ ಕೂಡ ಆ ಪಟ್ಟಿಯಲ್ಲಿ ಇರಲಿಲ್ಲ. ಇದನ್ನು ಸಹಜವಾಗಿ ಈ ಬಾಬದ ಹೋರಾಟಗಾರರು ತಮಗೆ ಮಾಡಲಾದ
ಅವಮಾನ ಎಂಬಂತೆ ತೆಗೆದುಕೊಂಡರು ಅನ್ನಿಸುತ್ತದೆ. (ಆ ರೀತಿ ಯಾವುದೇ ಸಸ್ಯಾಹಾರಿಗಳು ಅಥವಾ ಸಂಘಟಕರು
ಅವರನ್ನು ಅವಮಾನ ಮಾಡದಿದ್ದರೂ). ಹೀಗಾಗಿ ಅದುವರೆಗೂ ಪ್ರಜಾಸತ್ತಾತ್ಮಕವಾಗಿ ಹಳಿಯ ಮೇಲೆ ನಡೆಯುತ್ತಿದ್ದ
ತಮ್ಮ ಹೋರಾಟವನ್ನು, ʻಮಾಡು ಇಲ್ಲವೆ ಮಡಿʼ ಎಂಬಂತೆ ಪ್ರತಿಷ್ಠೆಯಾಗಿ ತೆಗೆದುಕೊಂಡು ಹಳಿತಪ್ಪಿಸಿ
ಒಂದಿಷ್ಟು ಸಲ್ಲದ ನಡೆಗಳ ಕಡೆ ತಿರುಗಿಸಿದರು.
ಈ ಸಲ್ಲದ ನಡೆಗಳಲ್ಲಿ
ಮೊದಲನೆಯದು ಅಂದರೆ ತಮಗೆ ಬಾಡೂಟ ಸಿಗುವುದಿಲ್ಲ ಎಂಬುದು ಖಚಿತವಾದ ತಕ್ಷಣ ತಮಗೆ ಉಂಟಾದ ಬೇಸರ ಮತ್ತು
ಸಿಟ್ಟನ್ನು ಸಮ್ಮೇಳನದಲ್ಲಿ ಏನೇನು ಕುಂದುಕೊರತೆಗಳು ಇವೆ ಎಂಬುದನ್ನು ಎತ್ತಿ ತೋರಿಸುವ ಮೂಲಕ ಹೊರಹಾಕತೊಡಗಿದ್ದು.
ಇದರಲ್ಲಿ ಬಹಳಷ್ಟು ತಿಳಿದವರೂ ಇದ್ದರು. ಎರಡು ಸಂಗತಿಗಳನ್ನು ಗಮನಿಸಿ. ಒಬ್ಬ ಹಿರಿಯ ಮಹಿಳಾ ಸಾಹಿತಿ
ಗೋಷ್ಠಿಯೊಂದರ ಅಧ್ಯಕ್ಷತೆ ವಹಿಸಬೇಕಾಗಿದ್ದ ತನ್ನನ್ನು ವೇದಿಕೆಗೆ ಪೋಲಿಸರು ಬಿಡಲು ಸತಾಯಿಸಿದರು,
ರಾಜಕಾರಣಿಗಳು ಸ್ವಾಮಿಗಳು ಇವರನ್ನು ಐಡಿ ಕೇಳದೆ ಬಿಟ್ಟರು. ನನ್ನನ್ನು ಮಾತ್ರ ತಡೆದರುʼ ಎಂದು ಬೇಸರ
ವ್ಯಕ್ತಪಡಿಸಿದರು. ಸಮ್ಮೇಳನದ ವೇದಿಕೆ ಮೇಲೆ ಹೋಗುವಾಗ ಪೋಲೀಸರು ಐಡಿ ಕೇಳುವುದು ಒಂದು ಸಾಮಾನ್ಯ ಪ್ರಕ್ರಿಯೆ.
ಅದಕ್ಕೆ ನಾವು ಹೊಂದಿಕೊಳ್ಳಬೇಕು. ಎಲ್ಲೆಲ್ಲಿಂದಲೋ ಬಂದು ಕರ್ತವ್ಯದಲ್ಲಿ ತೊಡಗಿರುವ ಪೋಲೀಸರಿಗೆ ಸಾಮಾನ್ಯವಾಗಿ
ಪ್ರಮುಖ ರಾಜಕಾರಣಿಗಳು ಮತ್ತು ಸ್ವಾಮೀಜಿಗಳು ಗೊತ್ತಿರುತ್ತಾರೆ. ಹಾಗಾಗಿ ಅವರನ್ನು ಐಡಿ ಇಲ್ಲದೆಯೂ
ಅವರು ಬಿಡುತ್ತಾರೆ. ಆದರೆ ಸಾಹಿತಿಗಳ ಪರಿಚಯ ಅವರಿಗೆ ಸರಿಯಾಗಿ ಇರುವುದಿಲ್ಲ. ಆದ್ದರಿಂದ ಅವರು ಅನುಮಾನ
ಪಡುತ್ತಾರೆ ಅಷ್ಟೆ. ಈ ಅನುಮಾನವನ್ನೇ ಅವಮಾನವೆಂದು ಆವಾಹಿಸಿಕೊಳ್ಳುವ, ಒಂದು ಸಣ್ಣ ತೊಂದರೆಯನ್ನೂ
ಸಹಿಸಿಕೊಳ್ಳಲಾಗದವರು ಇಂತಹ ಲಕ್ಷಾಂತರ ಜನ ಸೇರುವ ಸಮ್ಮೇಳನಕ್ಕೆ ಬರಲು ಒಪ್ಪಿಕೊಳ್ಳುವುದಾದರೂ ಏತಕ್ಕೆ?
ಈ ಅನುಮಾನವನ್ನು ಇವರಷ್ಟೇ ಎದುರಿಸಿದ್ದಲ್ಲ. ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರಂಥವರನ್ನೇ ಒಂದು
ಸಮ್ಮೇಳನದಲ್ಲಿ ಪೋಲೀಸರು ತಡೆದು ನಿಲ್ಲಿಸಿದ್ದರಂತೆ. ಆದರೆ ಶಿವರುದ್ರಪ್ಪನವರು ದೊಡ್ಡವರು. ಅವರು
ಈ ವಿಷಯವನ್ನು ಬಹಿರಂಗವಾಗಿ ಹೇಳಿ ದೊಡ್ಡದು ಮಾಡುವ ಸಣ್ಣತನ ತೋರಲಿಲ್ಲ. ನಾವು ಸಾಹಿತಿಗಳು. ಶಿವರುದ್ದರಪ್ಪನವರು
ತೋರಿಸಿದ ದೊಡ್ಡತನವನ್ನು ತೋರಿಸುವುದನ್ನು ಕಲಿಯಬೇಕು. ಅವರೇ ಇನ್ನೊಂದು ಕಡೆ ನನಗೆ ಊಟವನ್ನು ಪಡೆಯುವುದೇ
ಕಷ್ಟವಾಯಿತು. ಮಾಂಸಾಹಾರದ ವ್ಯವಸ್ಥೆಯನ್ನೂ ಮಾಡಿದ್ದರೆ ಈ ನೂಕು ನುಗ್ಗಲು ಇರುತ್ತಿರಲಿಲ್ಲ ಎಂದು
ನನಗೆ ಅನ್ನಿಸಿತು ಎಂದೂ ಬರೆದರು. ಹೀಗೆ ಬರೆಯಲಿಕ್ಕಾಗಿಯೇ ಇವರು ಸಾರ್ವಜನಿಕರ ಊಟದ ಮನೆಗೆ ಹೋದರೋ
ಏನೋ? ಏಕೆಂದರೆ ಈ ನೂಕು ನುಗ್ಗಲು ತಪ್ಪಿಸಲೆಂದೇ ಸಂಘಟಕರು ಅತಿಥಿಗಳಿಗೆ ಮತ್ತು ನೋಂದಾಯಿತ ಪ್ರತಿನಿಧಿಗಳಿಗೆ
ಪ್ರತ್ಯೇಕ ಊಟದ ವ್ಯವಸ್ಥೆ ಮಾಡಿದ್ದರು. ಸುಮಾರು ಎಂಟುಹತ್ತು ಸಾವಿರಕ್ಕೂ ಮಿಕ್ಕಿದ ನೋಂದಾಯಿತ ಪ್ರತಿನಿಧಿಗಳ
ಊಟದ ಮನೆಯಲ್ಲಿಯೇ ಯಾವ ದಿನವೂ ನೂಕುನುಗ್ಗಲು ಆಗಲಿಲ್ಲ. ಇನ್ನು ಅದಕ್ಕಿಂತ ಅತ್ಯಂತ ಕಡಿಮೆ ಇರುವ ವಿಶೇಷ
ಅತಿಥಿಗಳ ಊಟದ ಮನೆಯಲ್ಲಿ ನೂಕು ನುಗ್ಗಲು ಇರುತ್ತದೆಯೇ?
ಇನ್ನೊಬ್ಬ ಸ್ನೇಹಿತರು
“ಅಷ್ಟು ಕೋಟಿ ಹಣ ಖರ್ಚುಮಾಡಿದರೂ ಸಮ್ಮೇಳನದಲ್ಲಿ ಕುಡಿಯುವ ನೀರಿಗಾಗಿ ಪರದಾಟ ತಪ್ಪಲಿಲ್ಲ” ಎಂದು
ಬರೆದರು. ನನಗೆ ಪರಿಚಯವಿದ್ದ ಅವರಿಗೆ ನಾನು ತಕ್ಷಣ ಫೋನ್ ಮಾಡಿ, “ಸಮ್ಮೇಳನದ ಎಲ್ಲಕಡೆಗೂ ಸಾಕಷ್ಟು
ಶುದ್ಧಕುಡಿಯುವ ನೀರಿನ ವ್ಯವಸ್ಥೆಮಾಡಿದ್ದಾರೆ. ನಾನು ಕಳೆದ ಮೂವತ್ತು ವರ್ಷಗಳಿಂದಲೂ ಸಮ್ಮೇಳನದಲ್ಲಿ
ಭಾಗವಹಿಸುತ್ತಿದ್ದು ಕುಡಿಯುವ ನೀರಿನ ವಿಷಯದಲ್ಲಿ ಇಷ್ಟೊಂದು ಚೆನ್ನಾಗಿ ಎಲ್ಲಿಯೂ ವ್ಯವಸ್ಥೆ ಮಾಡಿದ್ದನ್ನು
ನೋಡಿಲ್ಲ. ನೀವು ಎಲ್ಲಿ ಇದ್ದೀರಿ. ನಿಮಗೆ ಕುಡಿಯುವ ನೀರಿಗಾಗಿ ಪರದಾಟ ಮಾಡುವ ಸ್ಥಿತಿ ಎಲ್ಲಿ ಆಯಿತು?”
ಎಂದು ಕೇಳಿದೆ. ಅದಕ್ಕವರು, “ನಾನು ಮಂಡ್ಯಕ್ಕೆ ಬಂದಿಲ್ಲ ಊರಲ್ಲಿ ಇದ್ದೇನೆ” ಅಂದರು. “ಮತ್ತೆ
ಇಲ್ಲಿ ನೀರಿನ ಪರದಾಟ ಇರುವುದು ನಿಮಗೆ ಹೇಗೆ ಗೊತ್ತಾಯಿತು?” ಎಂದದ್ದಕ್ಕೆ “ಅಲ್ಲಿಗೆ
ಹೋಗಿರುವ ನನ್ನ ಫ್ರೆಂಡು ಒಬ್ರು ಹಾಗೆ ಹೇಳಿದ್ರು” ಎಂದರು!!
ʼಮನೆಗೊಂದು ಕೋಳಿ;
ಊರಿಗೊಂದು ಕುರಿʼ ಯೋಜನೆ
ಮೂರನೆಯದಾಗಿ ತಾವು
ಏನೇ ಒತ್ತಡ ತಂದರೂ ಈ ಸಮ್ಮೇಳನದಲ್ಲಿ ಮಾಂಸಾಹಾರ ನೀಡುವುದಿಲ್ಲ ಎಂದು ಖಚಿತವಾದಾಗ ಇವರೆಲ್ಲ ತಾಳ್ಮೆ
ಕಳೆದುಕೊಂಡು ಹತಾಶರಾದರೆಂದು ಕಾಣುತ್ತದೆ. ಹಾಗಾಗಿ ಈ ʻಬಾಬʼದವರು
ತಾವೇ ತಮ್ಮ ಹಂತದಲ್ಲಿ ಮಾಂಸಾಹಾರ ನೀಡುತ್ತೇವೆ ಎಂದು ತಾವೇ ತಂದಿದ್ದ ಮಾಂಸಾಹಾರದೊಂದಿಗೆ ಸಮ್ಮೇಳನದ
ಕೆಲವು ಊಟದ ಕೌಂಟರ್‌ಗಳಿಗೆ ಬಲಾತ್ಕಾರವಾಗಿ ಮುನ್ನುಗ್ಗಿ ಮಾಂಸಾಹಾರವನ್ನು ವಿತರಿಸಲು ಮುಂದಾದರು ಎಂದು
ಪತ್ರಿಕೆಯಲ್ಲಿ ಸುದ್ಧಿಬಂತು. ಇದು ನಡೆದದ್ದೇ ನಿಜವೇ ಆಗಿದ್ದರೆ ಇದು ಖಂಡನೀಯ. ಮೇಲಿನ ನಡೆ ಹೇಡಿತನದ್ದಾದರೆ
ಇದು ಪುಂಡಾಟಿಕೆಯಾಗುತ್ತದೆ. ಇಷ್ಟೆಲ್ಲ ಇವರು ಸ್ವಾತಂತ್ರ್ಯ ಹೋರಾಟಗಾರರಂತೆ ನುಗ್ಗಿ ಮಾಂಸಾಹಾರವನ್ನು
ಕೊಡಲು ಮುಂದಾಗಲು ಅಲ್ಲಿ ಯಾರೂ ಇವರ ಮಾಂಸಾಹಾರಕ್ಕಾಗಿ ಬಾಯಿ ತೆಗೆದುಕೊಂಡು ಉಪವಾಸ ಕುಳಿತಿರಲಿಲ್ಲ.
ಇವರೇ ಕೊಡುವುದು ಇವರೇ ತೆಗೆದುಕೊಳ್ಳುವುದೂ ಮಾಡಿ ಸಾರ್ವಜನಿಕರು ಮತ್ತು ಕ್ಯಾಮರಾ ಮಾಧ್ಯಮಗಳ ಗಮನ
ಸೆಳೆಯಲು ಮಾತ್ರ ಇದು ಸಹಾಯವಾಗಬಲ್ಲದು.
ಇದರ ಜೊತೆಗೆ ಇವರು ಹಾದಿ ಬೀದಿಯಲ್ಲಿ ಮಾಂಸಾಹಾರ ನೀಡಿ ಒಟ್ಟಾರೆ ತಮ್ಮ ಹೋರಾಟ ಯಶಸ್ವಿಯಾಯಿತು ಎಂದು ತೋರಿಸಿಕೊಳ್ಳಲು ಹರಸಾಹಸ ಮಾಡಿದ್ದು ಅಯ್ಯೋ ಅನ್ನಿಸುವಂತಿತ್ತು. ಈ ಮೊದಲು ಸಮಿತಿಯ ನಿರ್ಧಾರಕ್ಕೆ ಪ್ರತಿಯಾಗಿ ಅವರು ʼಮನೆಗೊಂದು ಕೋಳಿ; ಊರಿಗೊಂದು ಕುರಿʼ ಎಂಬ ಯೋಜನೆಯನ್ನು ರೂಪಿಸಿ ಜನರಿಗೆ ತಾವೇ ಬಾಡೂಟ ನೀಡುವುದಾಗಿ ಘೋಷಿಸಿದ್ದರು. ಈ ಬಗ್ಗೆ ನಾಲ್ಕಾರು ಕುರಿ ಕೋಳಿಗಳನ್ನು ಹಿಡಿದುಕೊಂಡ ಫೋಟೋ ಪತ್ರಿಕೆಯಲ್ಲಿ ಬರುವಂತೆ ಕೂಡ ಇವರು ನೋಡಿಕೊಂಡಿದ್ದರು. ಆದರೆ ಈ ಯೋಜನೆ ಯಶಸ್ವಿಯಾದಂತೆ ಕಾಣಲಿಲ್ಲ. ಕೊನೆಗೆ ʻಕೊಟ್ಟಮಾತಿಗೆ ತಪ್ಪಿದರೆ ಕೆಟ್ಟಮಾತು ಬರುತ್ತದೆʼ ಎಂದು ಕೊಟ್ಟ ಮಾತು ಉಳಿಸಿಕೊಳ್ಳುವುದಕ್ಕಾಗಿ ತಮ್ಮ ʼಬದ್ಧತೆʼ ತೋರ್ಪಡಿಸುವುದಕ್ಕಾಗಿ ಒಂದಿಷ್ಟು ಮಾಂಸಾಹಾರ ಬಡಿಸಿ ಮಾನ ಮರ್ಯಾದೆ ಉಳಿಸಿಕೊಳ್ಳೋಣ ಎಂದು ರಸ್ತೆಗಳಲ್ಲಿ ಬಾಡೂಟ ಬಡಿಸಿದರಂತೆ. ಅದನ್ನು ಕೆಲವರು ಊಟಮಾಡುತ್ತಿರುವ ಫೋಟೋಗಳೂ ಪತ್ರಿಕೆಯಲ್ಲಿ ಬಂದವು. ಕೋಳಿಸಂಗ್ರಹ ಆಗದೆ ಸಾಂಕೇತಿಕವಾಗಿ ಮೊಟ್ಟೆ ಸಂಗ್ರಹಿಸಿ ವಿತರಿಸಬೇಕಾಯಿತು.
ಸಮಿತಿ ತಮ್ಮ ಬೇಡಿಕೆನ್ನು
ಮಾನ್ಯಮಾಡದಿದ್ದಾಗ ಈ ಹೋರಾಟಗಾರರಿಗೆ ಮಹೇಶಜೋಶಿ ವಿಲನ್ ಆಗಿ ತೋರತೊಡಗಿದ್ದರು. ಅವರ ಮೇಲೆ ನಿರಂತರವಾಗಿ
ಅಕ್ಷರಬಾಣ ಬಿಡುತ್ತಲೇ ಇದ್ದರು. ಮಹೇಶ ಜೋಶಿ ಅವರನ್ನು ಟೀಕಿಸಲು ಅನೇಕ ಕಾರಣಗಳಿದ್ದವು ಎಂಬುದು ನಿಜ.
ಆದರೆ ಆಹಾರ ನೀಡಿಕೆಯಲ್ಲಿ ಅವರ ಪಾತ್ರ ಇಲ್ಲವೆನ್ನುವಷ್ಟು ಕಡಿಮೆ! ಅದೂ ಇವರಿಗೆ ಗೊತ್ತಿಲ್ಲ. ವಾಸ್ತವವಾಗಿ ಪ್ರತಿನಿಧಿಗಳಿಗೆ ಊಟ ವಸತಿ ವ್ಯವಸ್ಥೆಯನ್ನು
ಮಾಡುವುದು ಪರಿಷತ್ತು ಅಲ್ಲ; ಬದಲಾಗಿ ಅಲ್ಲಲ್ಲಿನ ಸ್ವಾಗತ ಸಮಿತಿಗಳು. ಈ ಸಮಿತಿ ಮಾಂಸಾಹಾರವನ್ನು
ಕೊಡಲು ಒಪ್ಪಲಿಲ್ಲ ಎನ್ನುವುದನ್ನು ಬಿಟ್ಟರೆ ತಾನು ನೀಡಲು ಉದ್ದೇಶಿಸಿದ್ದ ಆಹಾರ ಪದಾರ್ಥಗಳ ವಿತರಣೆಯಲ್ಲಿ
ಯಾವುದೇ ಭೇದಭಾವ ಮಾಡಲಿಲ್ಲ. ಸಮ್ಮೇಳನದ ಮೂರೂ ದಿನಗಳು ತಾನು ನಿಗಧಿಪಡಿಸಿದ ಆಹಾರ ಪದಾರ್ಥಗಳನ್ನೇ
ಎಲ್ಲ ಕೌಂಟರ್‌ಗಳಲ್ಲಿ ಯಾವುದೇ ಭೇದಭಾವ ಮಾಡದೆ ನೀಡಿತು. ವಿಶೇಷ ಅತಿಥಿಗಳು, ನೋಂದಾಯಿತ ಪ್ರತಿನಿಧಿಗಳು,
ಸಾರ್ವಜನಿಕರು ಇತ್ಯಾದಿಯಾಗಿ ಊಟದ ಮನೆಗಳು ಬೇರೆ ಬೇರೆ ಇದ್ದರೂ ಕೇವಲ ನೂಕು ನುಗ್ಗಲನ್ನು ತಡೆಯುವ
ಕ್ರಮವಾಗಿ ಅವನ್ನು ಮಾಡಲಾಗಿತ್ತೇ ಹೊರತು ಆಹಾರ ನೀಡಿಕೆಯಲ್ಲಿ ಭೇದಭಾವ ಮಾಡಲು ಅಲ್ಲ.
ಬಾಡೂಟವನ್ನು ಸಮ್ಮೇಳನ
ಎತ್ತಿಹಿಡಿದದ್ದು ನಿಜವೇ?
ಸಮ್ಮೇಳನದ ಮಧ್ಯದ
ದಿನ ಸಮ್ಮೇಳನದ ಮುಖ್ಯ ವೇದಿಕೆಯ ಮುಂಭಾಗ ಸುಮಾರು ಹತ್ತು ಹದಿನೈದು ಜನರು ʻನಮ್ಮ
ಆಹಾರ ನಮ್ಮ ಹಕ್ಕುʼ ಎಂದು ಬರೆಯಲ್ಪಟ್ಟ ಪ್ಲೇಕರ್ಡ್ ಗಳನ್ನು ಹಿಡಿದು ಸಾಂಕೇತಿಕವಾಗಿ ಪ್ರತಿಭಟನೆ
ಮಾಡಿದರು. ಇದೊಂದು ಭಿನ್ನ ರುಚಿಯ ಸುದ್ಧಿಯಾಗುವುದರಿಂದ ಈ ಪ್ಲೇಕರ್ಡ್ ಹಿಡಿದು ಪ್ರತಿಭಟಿಸುವರ ಸಂಖ್ಯೆಯ
ಎರಡರಷ್ಟು ಸಂಖ್ಯೆಯಲ್ಲಿ ಕ್ಯಾಮರಾ ಸಮೇತ ಸೇರಿದ್ದ ಡಿಜಿಟಲ್ ಮತ್ತು ಮುದ್ರಣ ಮಾಧ್ಯಮದ ಪ್ರತಿನಿಧಿಗಳು
ಅದನ್ನು ವಿಶೇಷವೆಂದು ಪರಿಗಣಿಸಿ ಸುದ್ಧಿಮಾಡಿದರು. ಆದರೆ ಹಾಗೆ ಸುದ್ಧಿಮಾಡುವಾಗ ಅವರು ಮಾಡಿದ ಚಿಕ್ಕ
ಲೋಪವೆಂದರೆ ಇವರು ಅಲ್ಲಲ್ಲಿ ಹೀಗೆ ವೈಯಕ್ತಿಕ ನೆಲೆಯಲ್ಲಿ ಮಾಂಸಾಹಾರ ಹಂಚಿದ್ದನ್ನು, ʻಮಾಂಸಾಹಾರಕ್ಕೆ
ಮುನ್ನುಡಿ ಬರೆದ ಸಮ್ಮೇಳನʼ ʼಬಾಡೂಟವನ್ನು ಎತ್ತಿಹಿಡಿದ ಸಮ್ಮೇಳನʼ ಎಂದು ವರದಿ ಮಾಡಿದ್ದು. ಈ ವರದಿ
ಪ್ರಕಟವಾದಾಗ ವಾಸ್ತವವಾಗಿ ಪ್ರತಿಭಟನಕಾರರು ಬಾಡೂಟ ಬೇಕೆಂದು ಪ್ಲೇಕಾರ್ಡ್ ಎತ್ತಿಹಿಡಿದಿದ್ದರೆ ಹೊರತು
ಸಮ್ಮೇಳನ ಇವರ ಬೇಡಿಕೆಯನ್ನು ಮಾನ್ಯಮಾಡಿ ಬಾಡೂಟವನ್ನು ಎತ್ತಿ ಹಿಡಿದಿರಲಿಲ್ಲ; ಬದಲಾಗಿ ತಳ್ಳಿಹಾಕಿತ್ತು!
ಇಷ್ಟೆಲ್ಲ ವಿದ್ಯಮಾನಗಳು ನಡೆಯುತ್ತಿರಬೇಕಾದರೆ ಸಮ್ಮೇಳನದ ಕೊನೆಯ ದಿನ ರಾತ್ರಿ ಹತ್ತುಗಂಟೆ ಹೊತ್ತಿಗೆ ದಿಢೀರನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಒಂದು ವಿಡಿಯೋ ತುಣುಕು ಹಂಚಲ್ಪಟ್ಟಿತು. ಅದು ಸಮ್ಮೇಳನದ ಊಟದ ಕೌಂಟರ್ ಗಳಲ್ಲಿ ಮೊಟ್ಟೆಯನ್ನು ಕೊಡುತ್ತಿರುವ ದೃಶ್ಯವನ್ನು ಒಳಗೊಂಡಿತ್ತು. ಇದನ್ನು ಹಾಕಿಕೊಂಡು ಎಲ್ಲರೂ ಇದನ್ನು ಸಂಭ್ರಮಿಸಿ ದೊಡ್ಡ ಯುದ್ಧವನ್ನು ಗೆದ್ದ ʻರಾಜಸಂತೋಷʼವನ್ನು ಪರಸ್ಪರ ಹಂಚಿಕೊಳ್ಳತೊಡಗಿದರು. ಕಳೆದ ಮೂರು ದಿನಗಳಿಂದ ಸ್ವಾಗತ ಸಮಿತಿಯ ಬಗ್ಗೆ ಕೆಟ್ಟದಾಗಿ ಪೋಸ್ಟ್ ಹಾಕುತ್ತಿದ್ದವರೆಲ್ಲ ದಿಢೀರನೆ ಯೂ ಟರ್ನ್ ತೆಗೆದುಕೊಂಡು ಸ್ವಾಗತ ಸಮಿತಿಯನ್ನು ಅಭಿನಂಧಿಸಿ ಹೂವಿನ ಮಳೆಗರೆಯತೊಡಗಿದರು!
ಈ ಘಟನೆಯನ್ನು ಸೂಕ್ಷ್ಮವಾಗಿ ನೋಡಿದರೆ ಕೆಲವು ಸಂಗತಿಗಳು ವೇದ್ಯವಾಗುತ್ತವೆ. ಮಾಂಸಾಹಾರವನ್ನು ಕೊಡುವ ಬೇಡಿಕೆಯನ್ನು ನಿರಾಕರಿಸಿದ್ದಕ್ಕಾಗಿ ಈ ಹೋರಾಟಗಾರರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ ಜೋಶಿ ಮೇಲೆ ಅಕ್ಷರಬಾಣ ಬಿಡುತ್ತಿರುವುದರ ಜೊತೆಗೆ ಸತತವಾಗಿ ಸ್ವಾಗತಸಮಿತಿಯ ಮೇಲೆ ಕೂಡ ಒತ್ತಡವನ್ನು ತರುತ್ತಲೇ ಇದ್ದರು. ಸ್ವಾಗತ ಸಮಿತಿಯ ಅಧ್ಯಕ್ಷರಾದ ಚತುರರಾದ ಚಲುವರಾಯಸ್ವಾಮಿ ಒಂದು ʻರಾಜತಂತ್ರʼವನ್ನು ಬಳಸಿದರೆಂದು ತೋರುತ್ತದೆ. ʼಕಾಡಿ ಬೇಡಿ ಊಟ ಪಡೆಯುವ ಇವರ ಕಾಟವನ್ನು ತಾಳಲಾರದೆ, ಸಾಮಾನ್ಯವಾಗಿ ಸಮ್ಮೇಳನಕ್ಕೆ ಬಂದವರ ಪೈಕಿ ಶೇಕಡಾ ಎಂಬತ್ತು ತೊಂಬತ್ತರಷ್ಟು ಜನರು ಜಾಗ ಖಾಲಿಮಾಡಿ ಊರಿಗೆ ಹೊರಟುಹೋದ ಮೇಲೆ ಕೊನೆಯ ದಿನದ ರಾತ್ರಿ ಊಟಕ್ಕೆ ಬೇಯಿಸಿದ ಮೊಟ್ಟೆಯನ್ನು ನೀಡುವ ವ್ಯವಸ್ಥೆಮಾಡಿದರೆಂದು ತೋರುತ್ತದೆ. ಇದನ್ನೇ ʻಹೋರಾಟದ ಅಪ್ರತಿಮ ಜಯʼವೆಂದು ಇವರೆಲ್ಲ ತಮ್ಮ ವಿಜಯೋತ್ಸವ ಆಚರಿಸತೊಡಗಿದರು. ಈ ಆಹಾರ ವಿತರಣೆಯನ್ನು ಹಲವು ಪತ್ರಿಕೆಗಳು ಹಲವು ರೀತಿ ಬರೆದವು. ಈ ಮೊಟ್ಟೆ ವಿತರಣೆ ಸಮ್ಮೇಳನದ ಸ್ವಾಗತ ಸಮಿತಿಯ ಅಧಿಕೃತ ಕೌಂಟರ್ ಗಳಲ್ಲಿಯೇ ಆಯಿತಾದ್ದರಿಂದ ಇದನ್ನು ಸಮಿತಿಯ ʼಆಫಿಸಿಯಲ್ ಲಂಚ್ʼ ಎಂದೇ ಒಂದು ಪ್ರಸಿದ್ಧ ಇಂಗ್ಲಿಷ್ ಪತ್ರಿಕೆ ವರದಿಮಾಡಿತು. ಆದರೆ ಈ ʼಅಧಿಕೃತ ಮಾಂಸಾಹಾರ ನೀಡಿಕೆʼ ಎಷ್ಟರಮಟ್ಟಿಗೆ ಅಧಿಕೃತವಾಗಿತ್ತು ಎನ್ನುವುದನ್ನೂ ನಾವು ಅವಲೋಕಿಸಬೇಕು.
ಸ್ವಾಗತ ಸಮಿತಿಯ
ಅಧ್ಯಕ್ಷರಾದ ಚಲುವರಾಯಸ್ವಾಮಿಯವರು ಈ ಹೋರಾಟಗಾರರೊಂದಿಗೆ
ಚರ್ಚೆ ನಡೆಸಿ ಬಾಡೂಟಕ್ಕೆ ಬದಲಾಗಿ ಬೇಯಿಸಿದ ಮೊಟ್ಟೆಯನ್ನು ಕೊಡುವ ವ್ಯವಸ್ಥೆಯನ್ನು ಮಾಡಿ ಅದನ್ನೂ
ಬಹುತೇಕ ಸಮ್ಮೇಳನಕ್ಕೆ ಬಂದವರು ಹೊರಟುಹೋದ ಮೇಲೆ ಕೊನೆಗೆ ಕೊಡಲು ಮಾಡಿದ್ದು ಬಹುಶಃ ಸಮ್ಮೇಳನದ ಸಮಿತಿಯ
ಸಾಮೂಹಿಕ ನಿರ್ಣಯವಾಗಿರದೇ, ಅನವಶ್ಯಕ ಗಲಾಟೆಯನ್ನು ತಪ್ಪಿಸಿಕೊಳ್ಳಲು ಮತ್ತು ಒಟ್ಟಿನಲ್ಲಿ ಎಲ್ಲರನ್ನೂ
ಸಮಾಧಾನದಿಂದ ಸಾಗುಹಾಕಲು ಅವರು ತಮ್ಮ ಸ್ಥಾನಬಲದಿಂದ ಮಾಡಿದ ಒಂದು ಏರ್ಪಾಡು ಆಗಿತ್ತು ಎಂಬುದನ್ನು
ನಾವು ಅರ್ಥಮಾಡಿಕೊಳ್ಳಬೇಕು. ಈ ಹೋರಾಟಗಾರರು ಕೂಡ ಆಗಲೇ ಹೋರಾಡಿ ಹೋರಾಡಿ ಸುಸ್ತಾಗಿದ್ದರು. ಮೊದಮೊದಲು
ಬಾಡೂಟವೇ ಬೇಕು ಎಂದು ಇವರು ಹಟಮಾಡಿದ್ದರು. ನಂತರದಲ್ಲಿ ಒಂದೊಂದು ಕಬಾಬ್ ಪೀಸ್ ಕೊಟ್ಟರೆ ಸಾಕು
ಎಂಬಲ್ಲಿಗೆ ಬಂದರು. ಕೊನೆಕೊನೆಗಂತೂ ಒಂದು ಮೊಟ್ಟೆಕೊಟ್ಟರೂ ಸಾಕು ಎನ್ನುವ ಹಂತ ತಲುಪಿದ್ದರು! ಹಾಗಾಗಿ
ಮೊಟ್ಟೆ ಸಿಕ್ಕತಕ್ಷಣ ಧನ್ಯತೆಯ ಭಾವ ಆವರಿಸಿತು. ಅಂತೂ
ಸಮ್ಮೇಳನ ಮುಗಿಯಿತು. ಹೋರಾಟಗಾರರಿಗೆ ಎಲ್ಲೇಲ್ಲೋ ಇರುವ ʻನಾಡಬಾಂಧವರುʼ
ಅದರಲ್ಲಿಯೂ ವಿಶೇಷವಾಗಿ ʻಬಾಡುಬಾಂಧವರುʼ ಶುಭಕೋರಿ ಅಭಿನಂದನೆಗಳ ಮಹಾಪೂರವನ್ನೇ ಹರಸಿದರು. ಶತಶತಮಾನಗಳಿಂದ
ನಡೆದು ಬಂದ ಅಸಮಾನತೆಗೆ ಸೆಡ್ಡು ಹೊಡೆದು ಹೋರಾಡಿ ಯಶಸ್ವಿಯಾಗಿ ಸಮಾನತೆಗೆ ಮುನ್ನುಡಿ ಬರೆದ ಕೀರ್ತಿಗೆ
ಈ ಬಾಬದವರು ಪಾತ್ರರಾದರು. ಇಲ್ಲಿಗೀಕಥೆ ಮುಗಿಯಿತು.
ಎಳೆಗರುಂ ಎತ್ತಾಗದೇ?
ಮೊಟ್ಟೆ ಮರಿಯಾಗದೇ?
ʻಅಂತೂ
ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಸಿಕ್ಕಿತುʼ ಅನ್ನುವಂತೆ ಮಂಡ್ಯ ಸಮ್ಮೇಳನದಲ್ಲಿ ಬಾಡೂಟವಲ್ಲದಿದ್ದರೂ
ಮೊಟ್ಟೆ ಸಿಕ್ಕಿತು ಎನ್ನುವುದಂತೂ ಸತ್ಯ. ಇದನ್ನು ಇಡೀ ಸಮ್ಮೇಳನದಲ್ಲಿಯೇ ಯಶಸ್ವಿಯಾಗಿ ಜರುಗಿದ ಗೋಷ್ಠಿ
ಎಂದು ಹಿರಿಯ ಚಿಂತಕರೊಬ್ಬರು ಬಣ್ಣಿಸಿದ್ದಾರೆ. ಇನ್ನೊಬ್ಬ ಹಿರಿಯರು, “ಈ
ವರ್ಷ ಮೊಟ್ಟೆ ಮುಂದಿನ ವರ್ಷ ಅದರ ಅಮ್ಮ” ಎಂದು ತಮ್ಮ ಮನದಾಳದ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ವಾಸ್ತವವಾಗಿ
ಮೊಟ್ಟೆ ಸಸ್ಯಾಹಾರವೋ ಮಾಂಸಾಹಾರವೋ ಎಂಬುದು ಬಹಳಷ್ಟು ಸಲ ಚರ್ಚೆಗೆ ಬಂದಿದ್ದರೂ ಅಂತಿಮ ತೀರ್ಪು ಬಂದಂತೆ
ತೋರುವುದಿಲ್ಲ. ಸಧ್ಯಕ್ಕೆ ಈ ಮೊಟ್ಟೆ ಸಸ್ಯಾಹಾರ ಮತ್ತು ಮಾಂಸಾಹಾರ ಇವುಗಳ ಮಧ್ಯದಲ್ಲಿದೆ. ಮಾಂಸಹಾರವನ್ನು
ಸೇವಿಸದ ಅನೇಕರು ಮೊಟ್ಟೆಯನ್ನು ತಿನ್ನುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ಅವರೆಲ್ಲ ಮೊಟ್ಟೆಯನ್ನು ಸಸ್ಯಾಹಾರವೆಂದೇ
ಹೇಳುವುದುಂಟು. ಮಾಂಸಾಹಾರ ಸೇವಿಸುವವರಿಗೆ ಇದನ್ನು ಒರೆಗೆ ಹಚ್ಚಿ ನೋಡುವ ಅವಶ್ಯಕತೆಯೇ ಬರುವುದಿಲ್ಲ.
ಶಾಲೆಗಳಲ್ಲಿ ಅಪೌಷ್ಟಿಕತೆಯ ನಿವಾರಣೆಗೆಂದು ಈಗಾಗಲೇ
ಮೊಟ್ಟೆಯನ್ನು ಕೊಡುವ ಕ್ರಮವೂ ಇದೆ. ಇದಕ್ಕೆ ಒಂದಿಷ್ಟು ವಿರೋಧ ಬಂದರೂ ಈಗ ಎಲ್ಲರೂ ಅದಕ್ಕೆ ಹೊಂದಿಕೊಂಡಿದ್ದಾರೆ. ಅದನ್ನು ಮಾಂಸಾಹಾರ ಎಂದು ಪರಿಗಣಿಸುವವರ ಸಂಖ್ಯೆ ಕೂಡ ಈಗ
ಬಹಳಷ್ಟು ಕಡಿಮೆ ಆಗಿದೆ. ಹೀಗಿರುವಾಗ ಮೊಟ್ಟೆಯನ್ನು ಮಾಂಸಾಹಾರವೆಂದೇ ಈ ಹೋರಾಟಗಾರರು ತಮ್ಮಕಡೆಗೆ
ಎಳೆದುಕೊಂಡು ಸಂಭ್ರಮಿಸಿದ್ದಾರೆ. ತಮ್ಮ ʻಹೋರಾಟ ಯಶಸ್ವಿಯಾಯಿತುʼ
ಅನ್ನಿಸಿಕೊಳ್ಳಲು ಈ ಹಂತದಲ್ಲಿ ಇದು ಅವರಿಗೆ ತೀರಾ ಅವಶ್ಯಕವೂ ಆಗಿದೆ. ಹಾಗಾಗಿ ಅದನ್ನು ಬಾಡೂಟಕ್ಕೆ
ಮುನ್ನುಡಿ ಎಂದೇ ಬಣ್ಣಿಸಲಾಗಿದೆ. ಸಸ್ಯಾಹಾರದಿಂದ ಮಾಂಸಾಹಾರಕ್ಕೆ ಶಿಫ್ಟ್ ಆಗುವವರು ಮೊದಲು ಸೇವಿಸುವುದು
ಮೊಟ್ಟೆಯೇ ಆದ್ದರಿಂದ ಇವರ ತರ್ಕಕ್ಕೂ ಒಂದು ಅರ್ಥವಿರುವುದನ್ನು ತಳ್ಳಿಹಾಕಲಿಕ್ಕೆ ಆಗುವುದಿಲ್ಲ.
ನಡುಗನ್ನಡದ ಪ್ರಸಿದ್ಧ
ಕವಿ ಪುಲಿಗೆರೆಯ ಸೋಮನಾಥ ತನ್ನ ಸೋಮೇಶ್ವರ ಶತಕದ ಪದ್ಯವೊಂದರಲ್ಲಿ ʼಎಳೆಗರುಂ ಎತ್ತಾಗದೇ?ʼ ಎಂದು ಕೇಳುತ್ತಾನೆ.
ಅದೇ ರೀತಿ ಈ ಬಾಬದವರು ʼಮೊಟ್ಟೆ ಮರಿಯಾಗದೇ?ʼ ಎಂದು ಕೇಳುತ್ತಿದ್ದಾರೆ. ಇಂದಿನ ಕರು ನಾಳೆ ಎತ್ತಾಗಿ
ಬೆಳದೇ ಬೆಳೆಯುತ್ತದೆ ಎನ್ನುವುದು ಸೋಮನಾಥನ ವಿಶ್ವಾಸ. ಅದೇ ರೀತಿ ಮಂಡ್ಯದಲ್ಲಿ ಕೊಡಲ್ಪಟ್ಟ ಮೊಟ್ಟೆ
ಬಳ್ಳಾರಿಯ ಸಮ್ಮೇಳನದ ವೇಳೆಗೆ ಮರಿಯಾಗಿ ಏಕೆ ಪೊಗದಸ್ತಾದ ಕೋಳಿಯಾಗಿಯೇ ಸಿಗುತ್ತದೆ ಎನ್ನುವುದು ಈ
ಬಾಬಾದವರ ಮತ್ತು ಕೆಲವು ಮಾಂಕಮಿಗಳ ಅಚಲ ವಿಶ್ವಾಸ.
ಆದರೆ ಈ ಮೊಟ್ಟೆಯ ವಿಶೇಷತೆ ಎಂದರೆ ಅದಕ್ಕೆ ಒಳಗಿನಿಂದ ಒತ್ತಡ ಉಂಟಾದರೆ ಒಡೆದು ಮರಿಯಾಗಿ
ಕೋಳಿಯಾಗಿ ಬೆಳೆದು ಜೀವವೊಂದರ ಉಗಮವಾಗುತ್ತದೆ. ಅದೇ ಒತ್ತಡ ಹೊರಗಿನಿಂದ ಬಿದ್ದರೆ ಅದು ಅದು ಒಡೆದು
ಜೀವವೊಂದರ ನಾಶವಾಗುತ್ತದೆ. ಹಾಗಾಗಿ ಈ ಒತ್ತಡ ಯಾವ
ಕಡೆಯಿಂದ ಬೀಳುತ್ತದೆ ಅನ್ನುವುದರ ಮೇಲೆ ಈ ಸಮ್ಮೇಳನದ ಮೊಟ್ಟೆ ಮುಂದಿನ ಸಮ್ಮೇಳನದ ವೇಳೆಗೆ ಕೋಳಿಯಾಗುತ್ತದೆಯೋ
ಇಲ್ಲವೇ ಸುಮ್ಮನೆ ಹೋಳಾಗುತ್ತದೆಯೋ ಎಂಬುದು ನಿಂತಿದೆ.
ಯಾರು ಏನೇ ಹೋರಾಡಲಿ,
ಒತ್ತಡ ತರಲಿ ಸಾಹಿತ್ಯ ಸಮ್ಮೇಳಗಳಲ್ಲಿ ಊಟದಲ್ಲಿ ಏನನ್ನು ಕೊಡಬೇಕು ಮತ್ತು ಏನನ್ನು ಕೊಡಬಾರದು ಎಂಬುದನ್ನು
ಅಂತಿಮವಾಗಿ ನಿರ್ಧರಿಸುವಂಥವು ಆಯಾ ಸಮ್ಮೇಳನಗಳ ಸ್ವಾಗತ ಸಮಿತಿಗಳು. ಎಲ್ಲರಿಗೂ ತಿಳಿದಿರುವಂತೆ ಮಂಡ್ಯ
ಬಹುಜನ ಮಾಂಕಮಿಗಳು ಇರುವ ನಾಡು. ಅಲ್ಲಿಯೇ ಈ ಬಾಡೂಟದ ಬೇಡಿಕೆ ಸರಿಯಾಗಿ ಈಡೇರಲಿಲ್ಲ ಎಂದರೆ ಮಾಂಸಾಹಾರವನ್ನು
ನಿಷಿದ್ಧ, ವರ್ಜ್ಯ, ತ್ಯಾಜ್ಯ ಎಂದು ಭಾವಿಸುವ ಜನಸಮುದಾಯಗಳು ಹೆಚ್ಚಿರುವ ಮತ್ತು ಈ ಸಮುದಾಯಗಳ ನಾಯಕರು,
ಸ್ವಾಮಿಗಳು ಇಂಥವರೇ ಸ್ವಾಗತ ಸಮಿತಿಯ ಆಯಕಟ್ಟಿನ ಸ್ಥಳಗಳಲ್ಲಿ ಸಹಜವಾಗಿ ಇರಬಹುದಾದ ಬಳ್ಳಾರಿಯಲ್ಲಿ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ನೀಡುವ ವ್ಯವಸ್ಥೆಆಗುತ್ತದೆ
ಎಂಬುದನ್ನು ನಿರೀಕ್ಷಿಸುವುದು ಕಷ್ಟ. ಮಂಡ್ಯದಲ್ಲಿ ನಡೆದ ಈ ಆಹಾರ ಸಂಸ್ಕೃತಿ ಚರ್ಚೆ ಒಮ್ಮುಖವಾಗಿತ್ತು.
ಇಬ್ಬರೋ ಮೂವರೋ ಬಿಟ್ಟರೆ ಈ ಚರ್ಚೆಯಲ್ಲಿ ಪಾಲ್ಗೊಂಡ ಎಲ್ಲ ಹೋರಾಟಗಾರರೂ ಚಿಂತಕರೂ ಮಾಂಕಮಿಗಳೆ! ಮಾಂಸಾಹಾರ ನಿಷಿದ್ಧವೆಂದು ಭಾವಿಸುವ ಜನಸಮುದಾಯಗಳ ಯಾವ ನಾಯಕರೂ,
ಮಠಗಳ ಸ್ವಾಮಿಗಳೂ ಚಿಂತಕರೂ ಇಲ್ಲಿ ಪ್ರವೇಶ ಪಡೆಯಲಿಲ್ಲ. ಆದರೆ ಇದೇ ರೀತಿ ಬಳ್ಳಾರಿಯಲ್ಲೂ ಆಗುತ್ತದೆ
ಎಂದು ಹೇಳುವುದು ಕಷ್ಟ. ನಿಜವಾದ ಹೋರಾಟ-ತಾಕಲಾಟ ಅಲ್ಲಿ ನಡೆಯಬಹುದು. ಹಾಗಾಗಿ ಮಂಡ್ಯದ ಮೊಟ್ಟೆ ಅಲ್ಲಿ
ಮರಿಯಾಗದೆ ಬಾಡೂಟದ ಕನಸು ನನಸಾಗದೇ ಹೋಗಬಹುದು; ಮಂಡ್ಯದಲ್ಲಿ ʻಚಿಗುರಿದ
ಕನಸುʼ ಬಳ್ಳಾರಿಯ ಬಿಸಿಲಿಗೆ ʻಕಮರಿದ ಕನಸುʼ ಆಗಿಯೂ ಬಿಡಬಹುದು. ಅಥವಾ ಮೊಟ್ಟೆ ಕೋಳಿಯಾಗಿ ಬೆಳೆಯುವ,
ಅಥವಾ ಒಡೆದು ಹಾಳಾಗುವ ಎರಡೂ ಆಯ್ಕೆಗಳು ನಿರಾಕರಿಸಲ್ಪಟ್ಟು ಮೊಟ್ಟೆ ಮೊಟ್ಟೆಯಾಗಿಯೇ ಮುಂದುವರೆಯಲೂ
ಬಹುದು. ಯಾವುದಕ್ಕೂ ಅದನ್ನು ನೋಡಲು ಮುಂದಿನ ಸಮ್ಮೇಳನ ಬರುವವರೆಗೂ ಕಾಯಬೇಕು ಅಷ್ಟೆ.
ಮಾಂಸಾಹಾರದ ಬೇಡಿಕೆ
ಅಗತ್ಯವೇ? ಅಥವಾ ಅಪೇಕ್ಷೆಯೇ
ಮಂಡ್ಯದಲ್ಲಿ ಕೆಲವು
ಮಾಂಕಮಿಗಳು ಸೇರಿ ರಚಿಸಿಕೊಂಡ ಬಾಬ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ನೀಡಬೇಕು ಎಂದು ಇರಿಸಿದ್ದ ಬೇಡಿಕೆ
ಒಂದು ಅಗತ್ಯವಾಗಿತ್ತೇ ಅಥವಾ ಅಪೇಕ್ಷೆಯಾಗಿತ್ತೇ ಎಂಬುದನ್ನು ನಾವು ಗಮನಿಸಬೇಕು. ನಾನು ಈಗಾಗಲೇ ಈ
ಸಂಬಂಧದ ಬರೆಯಲಾದ ಇನ್ನೊಂದು ಲೇಖನದಲ್ಲಿ ಈ ಬಗ್ಗೆ ವಿವರವಾಗಿ ಚರ್ಚೆಮಾಡಿದಂತೆ ಮನುಷ್ಯರಲ್ಲಿ ಮಾಂಸಹಾರಿಗಳು
ಎಂಬುವವರು ಇಲ್ಲವೇ ಇಲ್ಲ. ಇರುವವರು ಸಸ್ಯಾಹಾರಿಗಳು ಮತ್ತು ಮಿಶ್ರಾಹಾರಿಗಳು ಮಾತ್ರ. ಸಸ್ಯಾಹಾರಿಗಳಿಗೆ
ಸಸ್ಯಾಹಾರ ಅಗತ್ಯ ಮತ್ತು ಅನಿವಾರ್ಯ. ಆದರೆ ತಮ್ಮನ್ನು ಮಾಂಸಾಹಾರಿಗಳೆಂದು ಕರೆದುಕೊಳ್ಳುವ ವಾಸ್ತವದಲ್ಲಿ
ಮಿಶ್ರಾಹಾರಿಗಳಾಗಿರುವ ಮಾಂಕಮಿಗಳಿಗೆ ಮಾಂಸಾಹಾರ ಅಗತ್ಯ ಮತ್ತು ಅನಿವಾರ್ಯವಲ್ಲ. ಅದು ಕೇವಲ ಅವರ ಅಪೇಕ್ಷೆ.
ಸಸ್ಯಾಹಾರವಿಲ್ಲದಿದ್ದರೆ ಸಸ್ಯಾಹಾರಿ ತೊಂದರೆಗೊಳಗಾಗುವಂತೆ ಇವರು ಮಾಂಸಾಹಾರವಿಲ್ಲದಿದ್ದರೆ ತೊಂದರೆಗೆ
ಒಳಗಾಗುವುದಿಲ್ಲ. ತಕ್ಷಣ ಸಸ್ಯಾಹಾರಕ್ಕೆ ಹೊರಳಿಕೊಳ್ಳಲು ಅವರಿಗೆ ಅವಕಾಶಗಳಿರುತ್ತವೆ. ಇದೇ ಕಾರಣದಿಂದ
ಇವರ ಬೇಡಿಕೆ ಸಾರ್ವಜನಿಕ ಮಾನ್ಯತೆ ಪಡೆಯುವಲ್ಲಿ ಸಾಕಷ್ಡು ಸಲ ವಿಫಲವಾಗುತ್ತದೆ. ಇವರ ಅಪೇಕ್ಷೆಯು
ಬಾಯಿ ಚಪಲಕ್ಕೆ ಹಾಗೆ ಮಾಡುತ್ತಾರೆ ಎಂಬ ಉಪೇಕ್ಷೆಗೂ ಒಳಗಾಗುವುದುಂಟು.
ಇವರು ಈ ಸಂಬಂಧ
ಮುಂದುಮಾಡಿರುವ ತಾತ್ವಿಕತೆಯನ್ನೂ ವಿಮರ್ಶೆಗೆ ಒಳಪಡಿಸಿದರೆ ಈ ತಾತ್ವಿಕತೆಯೂ ಹೊರಗೆ ಗಟ್ಟಿಯಾಗಿರುವಂತೆ
ಕಂಡರೂ ಒಳಗೆ ಟೊಳ್ಳಾಗಿರುವುದನ್ನು ನಾವು ಕಂಡುಕೊಳ್ಳಬಹುದು. ʻಸಸ್ಯಾಹಾರಿಗಳು
ಮಾಂಸಾಹಾರವನ್ನು ತುಚ್ಚವಾಗಿ ಕಾಣುತ್ತಾರೆ. ಅದು ನಮಗೆ ಮಾಡುವ ಅವಮಾನʼ ಎಂಬ ಇವರ ಆರೋಪವನ್ನು ಮೊದಲು
ನೋಡಬಹುದು. ಹೌದು ತಾತ್ವಿಕವಾಗಿ ಯಾವ ಆಹಾರವನ್ನೂ ಯಾರೂ ತುಚ್ಛವಾಗಿ ಕಾಣಬಾರದು ಎಂಬುದು ನಾವೆಲ್ಲ
ರೂಢಿಸಿಕೊಳ್ಳಬೇಕಾಗಿರುವ ಒಂದು ಆದರ್ಶ. ಆದರೆ ವಾಸ್ತವ ಬೇರೆಯೇ ಆಗಿದೆ. ಕೇವಲ ಸಸ್ಯಾಹಾರಿಗಳು ಮಾತ್ರವಲ್ಲ
ಮಾಂಸಾಹಾರಿಗಳೂ ಕೂಡ ಕೆಲವು ಪದಾರ್ಥಗಳನ್ನು ʼತಾಜ್ಯʼ ʼವರ್ಜ್ಯʼ ʼನಿಷೇಧಿತʼ ಎಂದು ಪರಿಗಣಿಸುತ್ತಾರೆ
ಮತ್ತು ಅವುಗಳ ಜೊತೆಗೆ ತಮ್ಮ ಆಹಾರವನ್ನು ಇಟ್ಟುಕೊಂಡು ಸೇವಿಸುವುದಕ್ಕೆ ನಿರಾಕರಿಸುತ್ತಾರೆ. ಪರಿಸ್ಥಿತಿ
ಹೀಗಿರುವಾಗ ಒಂದು ವೇಳೆ ಸಸ್ಯಾಹಾರಿಗಳು ಮಾಂಸಾಹಾರವನ್ನು ತುಚ್ಛವಾಗಿ ಕಾಣುತ್ತಾರೆ ಎಂಬುದನ್ನು ವಾದಕ್ಕೆ
ಒಪ್ಪಿಕೊಂಡರೂ, ಮಾಂಸಾಹಾರವನ್ನು ಎಂದೂ ಆಹಾರವೆಂದು ಪರಿಗಣಿಸದ ಸಸ್ಯಾಹಾರಿಗಳು ಮಾಂಸಾಹಾರದ ಬಗ್ಗೆ
ತುಚ್ಛ ಭಾವನೆ ಇಟ್ಟುಕೊಂಡಿರುವುದು ದೊಡ್ಡ ತಪ್ಪಾಗುತ್ತದೆಯೇ ಅಥವಾ ತಾವು ಊಟಮಾಡುವ ಎರಡು ಆಹಾರಗಳಲ್ಲಿ
ಒಂದಾದ ಮಾಂಸಾಹಾರದ ಜೊತೆಗೆ ತಮ್ಮನ್ನು ಗುರುತಿಸಿಕೊಂಡು ಇನ್ನೊಂದಾದ ಸಸ್ಯಾಹಾರವನ್ನು ತುಚ್ಛವೆಂದು
ಈ ಮಾಂಕಮಿಗಳು ಪರಿಗಣಿಸುವುದು ದೊಡ್ಡ ತಪ್ಪಾಗುತ್ತದೆಯೇ? ತಾವು ಯಾವ
ಆಹಾರವನ್ನೂ ತುಚ್ಛವೆಂದು ಪರಿಗಣಿಸುವುದಿಲ್ಲವೆಂದು ಈ ಮಾಂಕಮಿಗಳು ಹೇಳಬಹುದು. ಆದರೆ ಅವರ ಈ ಮಾತು
ನಂಬಿಕೆಗೆ ಅರ್ಹವಲ್ಲ. ಏಕೆಂದರೆ ತಾವು ವರ್ಷದಲ್ಲಿ ಸೇವಿಸುವ ಒಟ್ಟು ಆಹಾರದಲ್ಲಿ ಮಾಂಸಾಹಾರಕ್ಕಿಂತ
ಸಸ್ಯಾಹಾರವೇ ಹೆಚ್ಚು ಇದ್ದರೂ, ಅಂತಹ ಸಸ್ಯಾಹಾರದ ಶ್ರೇಷ್ಠಗುಣಮಟ್ಟದ ಆಹಾರವನ್ನು ಕೊಡುವ ವ್ಯವಸ್ಥೆಮಾಡಲಾಗಿದ್ದರೂ
ಅದನ್ನು ನಿರಾಕರಿಸಿ ಅಲ್ಲಿ ಇಲ್ಲದ ಮತ್ತು ಇವರು ಆವಾಗ ಈವಾಗ ಸ್ವೀಕರಿಸುವ ಮಾಂಸಾಹಾರಕ್ಕೆ ಬೇಡಿಕೆ
ಇಡುವ ಅಗತ್ಯವಾದರೂ ಏನಿರುತ್ತದೆ? ಹಾಗಾಗಿ ಈ ವಿಷಯದಲ್ಲಿ ಸಸ್ಯಾಹಾರಿಗಳನ್ನು ದೂರುವ ಮೊದಲು ಇವರು
ತಮ್ಮ ಆಲೋಚನೆಯನ್ನು ಪರಿಷ್ಕರಿಸಿಕೊಳ್ಳಬೇಕಾಗುತ್ತದೆ.
ಇದರ ಜೊತೆಗೆ ಈ
ಮಾಂಕಮಿಗಳ ಇನ್ನೊಂದು ಸಮಸ್ಯೆ ಎಂದರೆ ತಾವು ಊಟಮಾಡುವ ಮಾಂಸಾಹಾರದ ಬಗ್ಗೆಯೂ ಆತ್ಮಪೂರ್ವಕವಾದ ಗೌರವ
ಇಟ್ಟುಕೊಳ್ಳದಿರುವುದು. ಸಾರ್ವಜನಿಕ ಸ್ಥಳಗಳಲ್ಲಿ ಕೊಡುವ ಆಹಾರಗಳಲ್ಲಿ ಇವರಿಗೆ ಮಾಂಸಾಹಾರ ಬೇಕು.
ಸಸ್ಯಾಹಾರ ಇವರಿಗೆ ಕನಿಷ್ಠ. ಆದರೆ ಮನೆಗಳಲ್ಲಿ ಇವರ ವರ್ತನೆ ಇದಕ್ಕೆ ವಿರುದ್ಧವಾಗಿರುವುದೇ ಹೆಚ್ಚು.
ಅನೇಕ ಮಾಂಕಮಿಗಳು ಶ್ರಾವಣ, ಮತ್ತು ಅವರು ʼಪವಿತ್ರʼವೆಂದು ಭಾವಿಸುವ ಕೆಲವು ದಿನ ಮಾಂಸಾಹಾರವನ್ನು
ಸೇವಿಸದಿರುವುದು, ಸೇವಿಸುವುದಾದರೂ ಮನೆಯ ಹೊರಗೆ ಹೋಗಿ ಅದನ್ನು ಬೇಯಿಸಿಕೊಳ್ಳುವುದು ಇದೆ. ಈ ನಡೆವಳಿಕೆ
ಇವರ ಇಬ್ಬಂಗಿತನವನ್ನು ತೋರಿಸುವುದಿಲ್ಲವೇ? ತಾವು ಹೋರಾಟ ಮಾಡಿ ಕೇಳುವ ಮಾಂಸಾಹಾರವನ್ನು ತಾವೇ ಕನಿಷ್ಠ
ಎಂದು ಒಪ್ಪಿಕೊಂಡಂತೆ ಇದು ಆಗುವುದಿಲ್ಲವೇ? ಇವೆಲ್ಲವನ್ನೂ ನೋಡಿದಾಗ ನಮಗೆ ವೇದ್ಯವಾಗುವ ಸಂಗತಿ ಎಂದರೆ
ಮಾಂಸಾಹಾರ ಇವರ ಅನನ್ಯತೆಯೂ ಅಲ್ಲ. ಅಭಿಮಾನದ ಸಂಗತಿಯೂ ಅಲ್ಲ. ಅದು ಕೇವಲ ಬಾಯಿಚಪಲಕ್ಕಾಗಿನ ಇವರ ಬೇಡಿಕೆ
ಮಾತ್ರ. ಜನರ ಚಪಲವನ್ನು ಈಡೇರಿಸುವುದು ಸಂಘಟಕರಿಗೆ ಕಷ್ಟವಾದ್ದರಿಂದ ಇವರ ಬೇಡಿಕೆ ಅಷ್ಟುಸುಲಭವಾಗಿ
ಮಾನ್ಯತೆ ಪಡೆಯುವುದಿಲ್ಲ. ಅವರು ಅನಗತ್ಯವಾಗಿ ಅದಕ್ಕೆ ʼಆಹಾರ ಸಂಸ್ಕೃತಿʼ ʼಆಹಾರಕ್ರಾಂತಿʼ ʼಬ್ರಾಹ್ಮಣೀಕರಣದ
ನಿರಾಕರಣೆʼ ʼತಳಸಮುದಾಯದ ಅನನ್ಯತೆʼ ಇತ್ಯಾದಿ ಭಾರವಾದ ಪದಪುಂಜಗಳನ್ನು ಬಳಸಿ ಸಮಸ್ಯೆಯೇ ಅಲ್ಲದ ಒಂದು
ಚಿಕ್ಕ ಸಂಗತಿಯನ್ನು ದೊಡ್ಡ ಸಮಸ್ಯೆಯಾಗಿ ಮಾಡುವುದು ಸರಿಯಲ್ಲ.
ಇವರು ಬಳಕೆಗೆ
ತಂದ ʼನಮ್ಮ ಆಹಾರ ನಮ್ಮ ಹಕ್ಕುʼ ಎಂಬ ಹೇಳಿಕೆಗೆ ಇಲ್ಲಿ ಏನು ಅರ್ಥವಿದೆ? ಹಕ್ಕಿನ ಪ್ರಶ್ನೆ ಬರುವುದು ಯಾರದರೂ ನೀವು ಮಾಂಸಾಹಾರವನ್ನು
ಸೇವಿಸಕೂಡದುʼ ಎಂದು ಮಾಂಸಾಹಾರಿಗಳ ಮೇಲೆ ಒತ್ತಡ ತಂದಾಗ ಮಾತ್ರ. ಅದನ್ನು ಯಾರೂ ಮಾಡುತ್ತಿಲ್ಲವಾದ್ದರಿಂದ
ಅದು ಇಲ್ಲಿ ಅಪ್ರಸ್ತುತ. ಸಮ್ಮೇಳನದ ಸಂಘಟಕರು ಮಾಂಸಾಹಾರನ್ನು ಕೊಡಲೇ ಬೇಕು ಎಂದು ಕೇಳುವುದು ಇವರ
ಹಕ್ಕಾಗುವುದಿಲ್ಲ. ನಾವು ಸರ್ಕಾರಕ್ಕೆ ತೆರಿಗೆ ಕಟ್ಟುತ್ತೇವೆ. ನಮ್ಮ ತೆರಿಗೆ ಹಣವನ್ನು ಸರ್ಕಾರ ಸಮ್ಮೇಳನಕ್ಕೆ
ಕೊಡುತ್ತದೆ ಹಾಗಾಗಿ ನಮಗೆ ಅದನ್ನು ಕೇಳುವ ಹಕ್ಕು ಇದೆ ಎಂದು ಕೆಲವರು ವಾದಿಸಬಹುದು. ಎಲ್ಲದಕ್ಕೂ ನಾವು
ಕೊಡುವ ತೆರಿಗೆಯನ್ನು ಮುಂದುಮಾಡಿ ಕೇಳಲು ಬರುವುದಿಲ್ಲ. ಹಾಗೆ ಮಾಡಲು ಬರುತ್ತದೆ ಎನ್ನುವುದಾದರೆ ಸರ್ಕಾರದ
ಅನುದಾನವನ್ನು ಪಡೆಯುವ ಮುಜರಾಯಿ ಇಲಾಖೆಗಳ ದೇವಸ್ಥಾನಗಳಲ್ಲಿ ಕೂಡ ಎರಡೂ ಬಗೆಯ ಆಹಾರ ಇರಬೇಕು ಎಂದು
ನಾವು ವಾದಿಸಬಹುದು. ಅಷ್ಟೇ ಏಕೆ ಸರಾಯಿ ಕುಡಿಯುವವರು (ಅವರು ನಮ್ಮನ್ನು ʻಕುಡುಕರುʼ
ಎನ್ನಕೂಡದು, ʼಮದ್ಯಪ್ರಿಯರುʼ ಎನ್ನಬೇಕು ಎಂದು ಈಗಾಗಲೇ ತಾಕೀತು ಮಾಡಿದ್ದಾರೆ) ʼನಿಮ್ಮೆಲ್ಲರಿಗಿಂತಲೂ
ಸರ್ಕಾರಕ್ಕೆ ಹೆಚ್ಚು ತೆರಿಗೆ ಕೊಡುವವರು ನಾವು. ನಮ್ಮಿಂದಲೇ ಸರ್ಕಾರಗಳು ನಡೆಯುವುದು, ಹಾಗಾಗಿ ನಮ್ಮ
ಬೇಡಿಕೆಗಳಿಗೂ ಮಾನ್ಯತೆಯನ್ನು ಸಮ್ಮೇಳನ ನೀಡಿ ಸಮ್ಮೇಳನದಲ್ಲಿ, ʼಎಣ್ಣೆʼಕೊಡುವ ವ್ಯವಸ್ಥೆ ಮಾಡಬೇಕು
ಎಂದು ಬೇಡಿಕೆ ಇಟ್ಟರೆ ಅದನ್ನು ಕುಚೋದ್ಯದ ಬೇಡಿಕೆ ಎಂದು ತಳ್ಳಿಹಾಕಲು ಬರುತ್ತದೆಯೇ? ಅವರ ಬೇಡಿಕೆಗೂ
ಮಾನ್ಯತೆ ಸಿಕ್ಕರೆ ಸಮ್ಮೇಳನ ನಿಜಾರ್ಥದಲ್ಲಿ ʻರಂಗಾಗುʼವುದಿಲ್ಲವೇ?
ಹಾರಾಟದ ಜೊತೆಗೆ ತೂರಾಟವೂ ಸೇರಿಕೊಳ್ಳುವುದಿಲ್ಲವೇ? ಹಾಗಾಗಿ ನಾವು ಕೊಡುವ ತೆರಿಗೆಯನ್ನು ಮುಂದುಮಾಡಿ
ಇದನ್ನು ಹಕ್ಕಾಗಿ ಪ್ರತಿಪಾದಿಸಬಾರದು.
ಎರಡೂಟವೆಂಬುದು
ಇಬ್ಬಾಗ ಮಾಡದೇ?
ಕೆಲವರು ಸಮ್ಮೇಳನಗಳಲ್ಲಿ
ಸಸ್ಯಾಹಾರ ಮಾಂಸಾಹಾರ ಎರಡೂ ಇರಬೇಕು. ಬೇಕಾದವರು ಬೇಕಾದದ್ದನ್ನು ಹಾಕಿಸಿಕೊಂಡು ಊಟ ಮಾಡಲು ಅವಕಾಶ
ಇರಬೇಕು ಎಂಬ ಸಲಹೆ ನೀಡಿದ್ದಾರೆ. ʻನಾವೇನೂ ಸಸ್ಯಾಹಾರ ಇರಲೇಕೂಡದು ಎಂದು ಕೇಳುತ್ತಿಲ್ಲ. ಸಸ್ಯಾಹಾರದ ಜೊತೆಗೆ
ಮಾಂಸಾಹಾರವೂ ಇರಲಿʼ ಎಂದು ಕೇಳುತ್ತಿದ್ದೇವೆ ಎಂದು ಈ ಬಾಬದವರೂ ಹೇಳುತ್ತಿದ್ದಾರೆ. ಹೀಗೆ ಎರಡೂ ಬಗೆಯ
ಊಟವಿರಲಿ ಎನ್ನುವಲ್ಲಿ ಕೆಲವರಿಗೆ, ಯಾರಿಗೂ ವಿಶೇಷವಾಗಿ ಸಸ್ಯಾಹಾರಿಗಳಿಗೆ ತೊಂದರೆ ಆಗಬಾರದು ಎನ್ನುವ
ಕಾಳಜಿಯೂ ಇರಬಹುದು. ಇನ್ನು ಕೆಲವರಿಗೆ ʻಅವರಿಗೆ ಒಂದು
ಸಿಕ್ಕರೆ ನಮಗೆ ಎರಡೂ ಸಿಗುತ್ತದೆʼ ಎಂಬ ಒಳ ಆಸೆಯೂ ಇರಬಹುದು. ಅದು ಏನೇ ಇರಲಿ, ಈ ಎರಡೂಟದ ಸಲಹೆ ಎರಡು
ಕಾರಣಕ್ಕೆ ಪುರಸ್ಕಾರಯೋಗ್ಯವಲ್ಲ. ಮೊದಲನೆಯದು ಆರ್ಥಿಕ ಹೊರೆ. ಸಂಘಟನೆಯ ಸಮಸ್ಯೆ. ಈ ಸಲಹೆ ಕೊಡುವುದು ಸುಲಭ. ಅನುಷ್ಠಾನಕ್ಕೆ
ತರುವುದು ಅಷ್ಟು ಸುಲಭವಲ್ಲ. ಲಕ್ಷಾಂತರ ಜನ ಸೇರುವ ಈ ಸಮ್ಮೇಳನದಲ್ಲಿ ಬಂದವರಿಗೆ ಒಂದು ತರಹದ ಅಡುಗೆ
ಮಾಡಿ ಬಡಿಸಿ ಕಳಿಸುವುದರಲ್ಲಿಯೇ ಸ್ವಾಗತ ಸಮಿತಿಗಳು ಹೈರಾಣಾಗಿಬಿಡುತ್ತವೆ. ಇನ್ನು ಎರಡಾದರೆ ಅವುಗಳ
ಗತಿಯೇನು? ನಾನು ಗಮನಿಸಿದಂತೆ ಈ ಹೋರಾಟ ಮಾಡಿದವರಲ್ಲಿ ಬಹಳಷ್ಟು ಜನ ದೊಡ್ಡ ದೊಡ್ಡ ಸಮ್ಮೇಳನಗಳನ್ನು
ಸಂಘಟಿಸಿದವರಲ್ಲ. ಅಷ್ಟೇ ಏಕೆ ಸಮ್ಮೇಳನದ ವೇದಿಕೆ ಮೇಲೆ ತಮ್ಮ ಭಾಷಣವೋ ಇನ್ನೇನೋ ಇದ್ದರೆ ಮಾತ್ರ ಸಮ್ಮೇಳನಕ್ಕೆ
ಹೋಗುವವರು. ಹೋಗಿಯೂ ಕೂಡ ಅಲ್ಲಿನ ಲೋಪದೋಷಗಳನ್ನೇ ಒತ್ತುಕೊಟ್ಟು ಎತ್ತಿಕೊಡುವಂಥವರು. ಸಂಘಟನೆಯ ಕಷ್ಟ ಅರಿತವರಲ್ಲ. ತಮ್ಮ ಮನೆಯಲ್ಲಿ ಒಂದು ಮದುವೆಯನ್ನೋ
ಒಂದು ಗೃಹಪ್ರವೇಶವನ್ನೋ ಮಾಡಿ ಒಂದಿಷ್ಟು ಜನರಿಗೆ ಊಟಹಾಕಿದ ವ್ಯಕ್ತಿ ಬೇರೆ ಮನೆಗೆ ಊಟಕ್ಕೆ ಹೋದಾಗ
ಅದು ಸರಿಯಿಲ್ಲ ಇದು ಸರಿಯಿಲ್ಲ ಎಂದು ಹೇಳುವುದು, ಅದು ಬೇಕು ಇದು ಬೇಕು ಎಂದು ಕೇಳುವುದು ಮಾಡುವುದಿಲ್ಲ.
ಆದರೆ ತನ್ನ ಮನೆಯಲ್ಲಿ ಎಂದೂ ಒಂದು ಕಾರ್ಯಕ್ರಮ ಮಾಡದೆ ಬರೀ ಬೇರೆಯವರ ಮನೆಗೆ ಊಟಕ್ಕೆ ಹೋಗಿ ಬರುವವನ
ಬೇಡಿಕೆಗಳು ಅನಂತವಾಗಿರುತ್ತವೆ ಮತ್ತು ಕೆಲವು ವೇಳೆ ವಿಚಿತ್ರವೂ ಆಗಿರುತ್ತವೆ.
ಇನ್ನೊಂದು, ಈ ಎರಡೂಟದ ಸಲಹೆ ಮೇಲ್ನೋಟಕ್ಕೆ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸುವ ಸಲಹೆಯಾಗಿ ಕಾಣುತ್ತದೆಯಾದರೂ ತನ್ನೊಳಗೆ ಜನರನ್ನು ವಿಭಾಗಿಸುವ ಅಪಾಯಕಾರಿ ಅಂಶಗಳನ್ನು ಒಳಗೊಂಡಿರುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ದೇಶಕ್ಕೆ ಸ್ವಾತಂತ್ರ್ಯ ದೊರೆಯುವಾಗ ʼಎರಡು ದೇಶʼಗಳ ಬೇಡಿಕೆ ಹುಟ್ಟಿಕೊಂಡಿತು. ಅದು ಈಡೇರಿತು. ಜನರನ್ನು ವಿಭಾಗಿಸಿತು. ರಾಜ್ಯದ ಏಕೀಕರಣ ಆಗುವಾಗ ಕೂಡ ʼಎರಡು ರಾಜ್ಯʼ ನಿರ್ಮಾಣದ ಸಲಹೆ ಮುನ್ನೆಲೆಗೆ ಬಂತು. ಆದರೆ ಅದು ಈಡೇರಲಿಲ್ಲವಾಗಿ ಕರ್ನಾಟಕದ ಜನ ಒಂದಾಗಿಯೇ ಉಳಿದರು. ಆ ಕಾಲದಲ್ಲಿ ಈ ಎರಡು ರಾಜ್ಯಗಳ ಸಲಹೆ ಮುಂದಿಟ್ಟ ಕಡಿದಾಳು ಮಂಜಪ್ಪನವರನ್ನು ʻಕನ್ನಡಿಗರನ್ನು ಕಡಿದು ಆಳುವ ಮಂಜಪ್ಪʼ ಎಂದು ಪಾಟೀಲ್ ಪುಟ್ಟಪ್ಪನವರು ಒಂದು ಲೇಖನವನ್ನೇ ಬರೆದು ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಹೀಗೆ ಇದು ದೇಶವಿರಲಿ, ರಾಜ್ಯವಿರಲಿ, ಆಟವಿರಲಿ, ಊಟವಿರಲಿ, ಎರಡೆಂಬುದು ಜನರನ್ನು ಇಬ್ಬಾಗಿಸುವ ಕೆಲಸವನ್ನೇ ಮಾಡುತ್ತದೆಯೇ ಹೊರತು ಒಂದಾಗಿಸುವ ಕೆಲಸವನ್ನು ಮಾಡುವುದಿಲ್ಲ. ಅದಕ್ಕಾಗಿ ಇದು ಒಳ್ಳೆಯದಲ್ಲ.
ನನಗೆ ಮಂಡ್ಯದಲ್ಲಿ
ಆದ ಎರಡು ಅನುಭವಗಳೊಂದಿಗೆ ಈ ಲೇಖನ ಮುಗಿಸುತ್ತೇನೆ. ನಾನು ಉಳಿದುಕೊಂಡಿದ್ದ ಕೊಠಡಿಯ ರೂಮ್ ಬಾಯ್
ಒಬ್ಬ ಬಂದು ನನಗೆ ರೂಮ್ ಸಿದ್ಧಪಡಿಸಿಕೊಡುವಾಗ ನಾನು ಏತಕ್ಕೆ ಮಂಡ್ಯಕ್ಕೆ ಬಂದಿದ್ದು ಎಂದು ಕೇಳಿದ.
ನಾನು ಸಾಹಿತ್ಯ ಸಮ್ಮೇಳನಕ್ಕೆ ಬಂದ ವಿಷಯವನ್ನು ಆತನಿಗೆ ಹೇಳಿದೆ. ಅವನು ತಕ್ಷಣ ಎಲ್ಲವನ್ನೂ ಬಿಟ್ಟು,
“ಅದೇನೋ ಚಿಕನ್ನು ಮಟನ್ನು ಕೊಡಬೇಕು ಅಂತ ಎಂಥದೋ ಸ್ಟ್ರೈಕ್ ನಡಿತಿದೆಯಂತಲ್ಲ ಸರ್?” ಎಂದ. ನಾನು,
“ಹೌದು ಕೆಲವರು ಸಾಹಿತ್ಯ ಸಮ್ಮೇಳನದಲ್ಲಿ ಅದನ್ನೆಲ್ಲ ಕೊಡಬೇಕು ಅಂತ ಹಟ ಮಾಡ್ತಿದಾರಪ್ಪ” ಎಂದೆ. ತಕ್ಷಣ
ಅವನು, “ಅಷ್ಟೊಂದು ಜನ ಕೂಡಿ ಊಟಮಾಡುವಾಗ ಅದು ಹೇಗೆ ಸರಿಯಾಗುತ್ತೆ ಸರ್?” ಎಂದ. ಈ ಸಮ್ಮೇಳನದ ಸಂದರ್ಭದಲ್ಲಿಯೇ ಹಳ್ಳಿಯಿಂದ ಬಂದಿದ್ದ ಎಂಥದೋ
ಮಾರುತ್ತಿದ್ದ ಒಬ್ಬ ಅಜ್ಜಿಯನ್ನು ನಾನೇ ಮುಂದಾಗಿ ಮಾತನಾಡಿಸಿ, “ಅಜ್ಜಿ ಇಲ್ಲಿ ಸಿಹಿ ಊಟ ಖಾರದ ಊಟ
(ಮಾಂಸಾಹಾರಕ್ಕೆ ಖಾರದ ಊಟ ಎಂದೂ ಕರೆಯುತ್ತಾರೆ) ಎರಡೂ ಇದೆಯಂಥಲ್ಲ. ನಿಂದು ಯಾವ್ದು?” ಎಂದು ಕೇಳಿದೆ.
ಅದಕ್ಕೆ ಆ ಅಜ್ಜಿ, “ಅಯ್ಯೋ ಯಾವುದೋ ಒಂದು ಉಂಡರಾಯ್ತು ಬಿಡಪ್ಪ ಅದೇನು ದೊಡ್ಡ ವಿಷ್ಯ. ಪಾಪಿ ಹೊಟ್ಟೆ
ಹಸ್ದಾಗ ಎಂಥದೋ ಒಂದು ತುಂಬಿಕೊ ಬೇಕು ಅಷ್ಟೆ.” ಎಂದಿತು.
ನಮ್ಮ ಜನಸಾಮಾನ್ಯರು ಬಹುತೇಕವಾಗಿ ಆಲೋಚಿಸುವುದು ಹೀಗೆಯೇ. ಆ ಹುಡುಗ ಈ ಅಜ್ಜಿ ಇಬ್ಬರೂ ಮಾಂಸಾಹಾರನ್ನು
ಊಟಮಾಡುವವರೇ ಆಗಿದ್ದರು. ಇಬ್ಬರದೂ ಪ್ರಾಥಮಿಕ ಶಿಕ್ಷಣವೂ ಪೂರ್ಣವಾಗಿರದ ಓದು. ಅವರ ಮಾತನ್ನು ಕೇಳಿ
ಇಂತಹ ʻಸಣ್ಣʼವರಿಗೆ ಇರುವ ವಿವೇಕವೂ ಬಹಳಷ್ಟು ಓದಿಕೊಂಡ ನಮ್ಮಂತಹ ದೊಡ್ಡವರಿಗೂ
ಅನೇಕ ಸಲ ಇರುವುದಿಲ್ಲ ಅನ್ನಿಸಿತು. ಸಮ್ಮೇಳನದಗಳಂಥ ಬಹಳಷ್ಟು ಜನ ಸೇರುವಲ್ಲಿ ಸಸ್ಯಾಹಾರವನ್ನು ಕೊಡುವುದು
ಅದು ಮಾಂಸಾಹಾರಕ್ಶ್ರೇಕಿಂತ ಶ್ರೇಷ್ಠ ಎಂಬ ಕಾರಣಕ್ಕಲ್ಲ; ಬದಲಾಗಿ ಅದು ಮಾಂಸಾಹಾರಕ್ಒಂಕೆ ಹೋಲಿಸಿದರೆ ಒಂದಿಷ್ಟು ಅಗ್ಗ ಮತ್ತು ಎಲ್ಲರೂ ಭೇದಭಾವ ಇಲ್ಲದೆ
ಜೊತೆಕೂತು ಊಟಮಾಡಬಹುದಾದ ಆಹಾರʼ ಎಂಬ ಕಾರಣಕ್ಕೆ ಎಂಬುದನ್ನು ಇಂತಹವರಿಂದ ನಾವು ಕಲಿಯಬೇಕಿದೆ.
*****
ಡಾ. ರಾಜೇಂದ್ರ
ಬುರಡಿಕಟ್ಟಿ
೨೬-೧೨-೨೦೨೪