Friday, March 21, 2025

 

ಸುನೀತಾ ಸಾಧನೆ : ʻಗಣೇಶʼ ʼಭಗವದ್ಗೀತೆʼ ಮತ್ತು ʻಗೆದ್ದ ಎತ್ತ್ತಿನ ಬಾಲ ಹಿಡಿಯುವಿಕೆʼ

ಸುನೀತಾ ವಿಲಿಯಮ್ಸ್ ತಮ್ಮ ದೀರ್ಘಾವಧಿಯ ಅಂತರಿಕ್ಷಯಾನವನ್ನು ಯಶಸ್ವಿಯಾಗಿ ಪೂರೈಸಿ ಭೂಮಿಗೆ ಮರಳಿದ್ದಾರೆ. ಅವರು ಕೈಗೊಂಡದ್ದು ಅತ್ಯಂತ ಅಪಾಯಕಾರಿಯಾದ ಒಂದು ದುಸ್ಸಾಹಸದ ಕಾರ್ಯವಾಗಿದ್ದುಅದನ್ನು ಅವರು ಧೈರ್ಯದಿಂದ ಕೈಗೊಂಡು ಯಶಸ್ವಿಯಾಗಿ ಪೂರೈಸಿದ್ದು ಅವರ ಈ ಯಾನ ಭಾರತ ಮಾತ್ರವಲ್ಲ ಇಡೀ ಮನುಕುಲದ ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಮುಂದಿನ ದಿನಗಳಲ್ಲಿ ಅನೇಕ ವಿಧದಲ್ಲಿ ನೆರವಾಗಬಹುದಾಗಿದ್ದರಿಂದ ನಾವೆಲ್ಲರೂ ಅಂದರೆ ಭಾರತೀಯರು ಮಾತ್ರವಲ್ಲ ವಿಶ್ವದ ಜನರು ಹೆಮ್ಮೆ ಪಡಬೇಕಾದ ಸಂಗತಿ.

ಆದರೆ ಅವರ ಈ ಸಾಧನೆಯನ್ನು ನಮ್ಮಲ್ಲಿ ಕೆಲವು ಜನ ಕೊಂಡಾಡುವುದು ಬೇರೆಯದೇ ಆದ ಕಾರಣಕ್ಕಾಗಿ. ಸುನೀತಾ ಭಾರತೀಯ ಮೂಲದವರು ಎಂದು ಇವರು ಕೊಂಡಾಲಿಕ್ಕೆ ಕಾರಣ ಅವರ ʼಭಾರತೀಯತೆʼ ಅಲ್ಲ. ಅವರ ಕೆಲವು ಮಾತು ಮತ್ತು ನಡವಳಿಕೆಗಳು ಇವರ ಮೂಗಿಗೆ ʼಹಿಂದೂʼ ವಾಸನೆಯನ್ನು ಬಡಿಸಿರುವುದರಿಂದ. ಸುನೀತಾ ಅವರು ಅಂತರಿಕ್ಷದಲ್ಲಿ ತೊಂದರೆಯಲ್ಲಿ ಸಿಲುಕಿಕೊಂಡಾಗ ಇವರೆಲ್ಲ ದೇವಸ್ಥಾನಗಳಲ್ಲಿ ವಿಶೇಶ ಪೂಜೆ ಪ್ರಾರ್ಥನೆ ಸಲ್ಲಿಸಿ ಅವರನ್ನು ಸಂಕಷ್ಟದಿಂದ ಪಾರುಮಾಡಿದ್ದರು! ಕೊರೊನಾ ಕಾಲದಲ್ಲಿ ಕೂಡ ಇವರು ಹೀಗೆ ಮಾಡಿ, ರಸ್ತೆಗಳಲ್ಲಿ ಪಾತ್ರೆ ಪಡಗ ಬಾರಿಸಿ ಅದರ ಸೌಂಡಿನಿಂದಲೇ ದೇಶದಿಂದ ಹೊರದಬ್ಬಿದ್ದರು!!

ಇವರ ವಿಶೇಷತೆ ಎಂದರೆ ತಮಗೆ ಇಷ್ಟಬರುವುದನ್ನು ಯಾರಾದರೂ ಆಡಿದರೆ ಇಷ್ಟಬರುವುದನ್ನು ಯಾರಾದರೂ ಮಾಡಿದರೆ ಅವರೆಲ್ಲ ಜಾತಿ ಜನಾಂಗ ಧರ್ಮ ಯಾವುದಿದ್ದರೂ ಇವರಿಗೆ ಹತ್ತಿರದ ನೆಂಟರಾಗಿಬಿಡುತ್ತಾರೆ! ಹೀಗಾಗಿಯೇ ಕೆಲವರು ಸುನೀತಾ ಗಣಪತಿ ಮೂರ್ತಿಗೆ ಆರತಿ ಬೆಳಗುವ ಫೋಟೋವನ್ನು ಹಂಚಿಕೊಂಡು ಸಂಭ್ರಮಿಸಿದರು. ಒಬ್ಬ ಮತಿಗೇಡಿ ʼಸುನೀತಾ ಅಂತರಿಕ್ಷಕ್ಕೆ ಒಯ್ದದ್ದು ಭಗವದ್ಗೀತೆಯನ್ನೇ ಹೊರತು ಬುದ್ಧನ ಬುರಡೆ ಮಾತುಗಳನ್ನಲ್ಲʼ ಎಂದು ಬುದ್ಧನ ಮೇಲಿನ ತನ್ನ ಸಿಟ್ಟನ್ನು ಕಾರಿಕೊಂಡ. ಸುನೀತಾ ಅವರು ತನ್ನ ಕಷ್ಟಕಾಲದಲ್ಲಿ ಉಪನ್ನಿಷತ್ತಿನ ವಾಕ್ಯಗಳೋ ಅಥವಾ ಭಗವದ್ಗೀತೆಯ ಸಂದೇಶವೋ ತನ್ನಲ್ಲಿ ಚೈತನ್ಯ ತುಂಬುತ್ತದೆ ಎಂದು ನಂಬಿಕೊಂಡಿದ್ದರೆ ಮತ್ತು ಅದೇ ಕಾರಣಕ್ಕೆ ಗಣೇಶನ ವಿಗ್ರಹವನ್ನೋ ಅಥವಾ ಭಗವದ್ಗೀತೆಯ ಪ್ರತಿಯನ್ನೋ ತಮ್ಮೊಂದಿಗೆ ಅಂತರಿಕ್ಷಕ್ಕೆ ಒಯ್ದಿದ್ದರೆ ಅದು ಅವರ ವೈಯಕ್ತಿಕ ನಂಬಿಕೆ. ಅದರಿಂದ ಯಾರಿಗೂ ತೊಂದರೆ ಇಲ್ಲ; ಹಾಗಾಗಿ ನಾವು ಅದನ್ನು ವಿರೋಧಿಸಬೇಕಾಗಿಲ್ಲ.

ಆದರೆ ನಾವು ಸೂಕ್ಷ್ಮವಾಗಿ ಗಮನಿಸಬೇಕಾದದ್ದು ನಮ್ಮ ʻಧರ್ಮವೀರʼರ ಅಂಧಭಕ್ತಿಯನ್ನು. ಗಣೇಶನ ವಿಗ್ರಹವನ್ನೋ ಭಗವದ್ಗೀತೆಯ ಪ್ರತಿಯನ್ನೋ ಒಯ್ದದ್ದರಿಂದಲೇ ಅವರು ಆ ದೊಡ್ಡ ಸಾಧನೆಯನ್ನು ಮಾಡಲಿಕ್ಕೆ ಸಾಧ್ಯವಾಯಿತು ಎಂಬುದೇ ಇವರ ಆ ಅಂಧಭಕ್ತಿ! ಒಂದು ವೇಳೆ ಸುನೀತಾ ಅವರು ತಮ್ಮ ದೇಶದ ಬಹುಸಂಖ್ಯಾತರ ಧರ್ಮವಾದ ಕ್ರಿಶ್ಚಿಯನ್‌ ಧರ್ಮದ ಧರ್ಮಗ್ರಂಥವಾದ ಬೈಬಲ್‌ ಅನ್ನೋ ಅಥವಾ ಕುರಾನನ್ನೋ ಒಯ್ದಿದ್ದರೆ ಇವರ ವರ್ತನೆ ಬೇರೆಯದೇ ಆಗಿರುತ್ತಿತ್ತು ಎಂದು ಬೇರೆ ಹೇಳಬೇಕಿಲ್ಲ. ಕ್ರಿ‍ಶ್ಚಿಯನ್‌ ಮತ್ತು ಮುಸಲ್ಮಾನರ ಹೆಸರನ್ನು ಕೇಳಿದರೇನೆ ಒಂಥರಾ ಹೊಟ್ಟೆನೋವು ಶುರುವಾಗುವ ಇವರಿಗೆಲ್ಲ ಗಣೇಶನ ವಿಗ್ರಹ ಮತ್ತು ಭಗವದ್ಗೀತೆಯನ್ನು ಗೌರವಿಸಿದ್ದಕ್ಕಾಗಿ ಸುನೀತಾ ಕ್ರಿಶ್ಚಿಯನ್‌ ವ್ಯಕ್ತಿಯನ್ನು ಮದುವೆಯಾದರೂ ಇವರಿಗೆಲ್ಲ ಕ್ರಿಶ್ಚಿಯನ್‌ ಆಗಿ ಕಾಣುತ್ತಿಲ್ಲ; ಬದಲಾಗಿ ಇವರ ಅಕ್ಕನೋ ತಂಗಿಯೋ ಆಗಿ ಕಾಣುತ್ತಿದ್ದಾರೆ!

ಹೀಗೆ ಯಾರಾದರೂ ಒಬ್ಬರು ಗಣನೀಯ ಸಾಧನೆಯನ್ನು ಮಾಡಿದಾಗ ಅವರನ್ನು ತಲೆಯ ಮೇಲೆ ಹೊತ್ತುಕೊಂಡು ಕುಣಿಯುವ ಮತ್ತು ಹತ್ತಿರ ಎಳೆದುಕೊಂಡು ಸಂಭ್ರಮಿಸುವ ʻಆಲಿಂಗನಗುಣʼ ನಮ್ಮ ಭಾರತೀಯರಿಗೆ ಹೊಸದಲ್ಲ; ಆದರೆ ಸುನೀತಾ ಭಾರತೀಯ ಮೂಲದವರಾದರೂ ಅವರ ಕುಟುಂಬದ ಮೂಲವನ್ನು ಲೆಕ್ಕಕ್ಕೆ ತೆಗೆದುಕೊಂಡು ʼಹೊರಗಿನವಳುʼ ಎಂಬ ಯಾವುದೇ ಭೇದ ಮಾಡದೆ ಅವರ ಪ್ರತಿಭೆಯನ್ನು ಗೌರವಿಸಿ ಅವರನ್ನು ಇಂತಹ ದೊಡ್ಡ ಸಾಧನೆ ಮಾಡಲು ಸಹಕರಿಸಿದ್ದು ಅಮೇರಿಕ! ಅವರಿಗೆ ಭಗವದ್ಗೀತೆಯ ಬಗ್ಗೆಯೋ ಗಣೇಶನ ವಿಗ್ರಹದ ಬಗ್ಗೆಯೋ ಸುನೀತಾ ಹೊಂದಿರುವ ಗೌರವದ ಭಾವನೆ ತಮ್ಮ ಧರ್ಮಕ್ಕೆ ಮಾಡುವ ದ್ರೋಹ ಎಂದು ಅನ್ನಿಸಲಿಲ್ಲ! ಅದು ಅವರ ದೊಡ್ಡ ಗುಣ. ಆದರೆ ನಮ್ಮ ದೇಶದಲ್ಲಿ ಯಾರಾದರೂ ಅಂತರಿಕ್ಷಕ್ಕೆ ಕುರಾನನ್ನೋ ಬೈಬಲ್‌ ಅನ್ನೋ ತೆಗೆದುಕೊಂಡು ಹೋದರೆ ಆಕಸ್ಮಿಕವಾಗಿ ಅವರು ದುರಂತಕ್ಕೆ ಎಡೆಯಾದರೆ ಈ ಭಕ್ತರು ಆ ವ್ಯಕ್ತಿಯ ದುರಂತಕ್ಕೆ ಈ ಪುಸ್ತಕಗಳೇ ಕಾರಣ ಎಂದು ಬೊಬ್ಬೆಹೊಡೆಯುವುದನ್ನು ಯಾರಾದರೂ ಊಹಿಸಿಕೊಳ್ಳಬಹುದು. ಒಂದು ವೇಳೆ ಸುನೀತಾ ಅವರು ನಮ್ಮಲ್ಲಿ ಇದ್ದಿದ್ದರೆ ನಾವೂ ಅವರ ಹಿನ್ನಲೆ ಮುನ್ನೆಲೆ ಏನೂ ನೋಡದೆ ಅವರ ಪ್ರತಿಭೆಯನ್ನು ಮಾತ್ರ ಗಣನೆಗೆ ತೆಗೆದುಕೊಂಡು ಇಷ್ಟು ಎತ್ತರಕ್ಕೆ ಬೆಳೆಯಲು ಬಿಡುತ್ತಿದ್ದೆವು ಎಂದು ಹೇಳುವುದೂ ಕಷ್ಟ!

ಸುನೀತಾ ಅವರು ಭಾರತದಲ್ಲಿ ಹುಟ್ಟಲಿಲ್ಲ; ಭಾರತದಲ್ಲಿ ಬೆಳೆಯಲಿಲ್ಲ; ಭಾರತದವನನ್ನು ಮದುವೆಯಾಗಲಿಲ್ಲ; ಭಾರತದ ಪೌರತ್ವವನ್ನು ಪಡೆದಿಲ್ಲ. ಅವರ ಹೆಸರು (ʼಸುನೀತʼ ಎಂದರೇನೇ ʻಒಳ್ಳೆಯ ನೀತಿಯʼ, ʻಒಳ್ಳೆಯ ನಡವಳಿಕೆಯʼ ಎಂದರ್ಥ) ಬಿಟ್ಟರೆ ಉಳಿದ ಏನೂ ʼಭಾರತೀಯʼ ಆಗಿಲ್ಲ. (ಇದು ಅವರ ಕೊರತೆಯೇನಲ್ಲ.) ಹಾಗಿದ್ದೂ ಅವರು ಇವರಿಗೆಲ್ಲ ʼಭಾರತೀಯಳುʼ! ಅವರ ಅಪ್ಪನೋ ಅಜ್ಜನೋ ಇಲ್ಲಿ ಹುಟ್ಟಿದ್ದರು ಎಂಬುದು ಇದಕ್ಕೆ ಕಾರಣ. ಅವರ ಅಜ್ಜ ಮುತ್ತಜ್ಜ ಏಕೆ ಏಳೆಂಟು ತಲೆಮಾರಿನ ಹಿಂದಿನವರು ಭಾರತದವರು ಎಂಬ ಎಳೆ ಸಿಕ್ಕರೂ ಸಾಕು ಇವರ ಕೊಂಡಾಟ ಶುರುವಾಗುತ್ತದೆ! ಆದರೆ ಇದೇ ಗುಣ ಬೇರೆ ದೇಶದ ಮೂಲದವರು ನಮ್ಮ ದೇಶಕ್ಕೆ ಬಂದು ಏನನ್ನಾದರೂ ಸಾಧನೆ ಮಾಡಿದರೆ ಅದನ್ನು ಗೌರವಿಸುವ ಗುಣ ಇಂಥವರಲ್ಲಿ ಇರುವುದಿಲ್ಲ. ಅಷ್ಟೇ ಏಕೆ ಅವರ ಸಾಧನೆಯನ್ನು ಅವರ ದೇಶಗಳಲ್ಲಿ ಸಂಭ್ರವಿಸುವುದನ್ನು ಕೂಡ ಸಹಿಸಿಕೊಳ್ಳುವ ಮನಸ್ಥಿತಿ ಇಂಥವರಿಗೆ ಇರುವುದಿಲ್ಲ. ಅಂತಹ ಸಂದರ್ಭಗಳಲ್ಲೆಲ್ಲ ಇವರಿಗೆ ʻಹೊರಗಿನವರುʼ ಬಂದು ಇಲ್ಲಿ ಹೆಸರು ಮಾಡಿದ್ದಕ್ಕೆ ಒಳಗೊಳಗೇ ಹೊಟ್ಟೆ ಹಿಂಡತೊಡಗುತ್ತದೆ.

ಯುರೋಪಿಯನ್ನರು ಅದರಲ್ಲಿಯೂ ವಿಶೇಷವಾಗಿ ಬ್ರಿಟೀಷರು ಈ ದೇಶಕ್ಕೆ ಬಂದು ಅವರ ವಿದ್ವಾಂಸರು ನಮ್ಮ ದೇಶಿಯ ಭಾಷೆ ಕಲೆ, ಸಾಹಿತ್ಯ ಆರೋಗ್ಯ ಇಂತಹ ಸೇವೆಗಳಲ್ಲಿ ಗಣನೀಯ ಸೇವೆಯನ್ನು ಮಾಡಿದಾಗ ಇವರು ಅದನ್ನು ಮೆಚ್ಚಿಕೊಳ್ಳುವುದಿಲ್ಲ. ಅಗೆಲ್ಲ ಇವರಿಗೆ ಅವರು ʼಹೊರಗಿನವರುʼ ಆಗಿಯೇ ಕಾಣುತ್ತಾರೆ. ಕಿಟಲ್, ಮದರ್ ತೆರೆಸಾ ಮುಂತಾದವರ ಸಾಧನೆಯಲ್ಲಿ ಇವರಿಗೆ ʼಧರ್ಮಪ್ರಚಾರʼ ʼಮತಾಂತರʼ ಇಂತಹ ಹುಳುಕುಗಳೇ ಕಾಣುವುದು ಇದೇ ಕಾರಣದಿಂದ. ಇವರ ಮನಸ್ಥಿತಿಯ ಇನ್ನೂ ಕೆಟ್ಟಸಂಗತಿ ಎಂದರೆ ಈ ದೇಶಕ್ಕೆ ಅಧಿಕೃತವಾಗಿ ಬಂದು ಈ ದೇಶದ ಪ್ರಜೆಯಾಗಿಯೇ ಇದ್ದು ಈ ದೇಶದ ಬದುಕು ಸಂಸ್ಕೃತಿಗಳನ್ನು ಗೌರವಿಸುತ್ತಾ ಬಾಳುವವರೂ ಇವರಿಗೆ ಈ ದೇಶದವರಾಗಿ ಕಾಣುವುದಿಲ್ಲ!

ಹೀಗೆ ʻನಮ್ಮವರುʼ ʼನಮ್ಮ ಊರಿನವರುʼ ʼನಮ್ಮ ದೇಶದವರುʼ ಎಂದು ಕೊಂಡಾಟ ಮಾಡುವ ಇವರೆಲ್ಲ ನಮ್ಮವರೆ ಬೇರೆ ಕಡೆಗೆ ಹೋಗಿ ಮಾಡಬಾರದ ಕೆಲಸವನ್ನು ಮಾಡಿ ಆರೋಪಿಗಳೋ ಅಪರಾಧಿಗಳೋ ಆದಾಗ ಬಹಳಷ್ಟು ಜಾಣತನದಿಂದ ಆದಷ್ಟೂ ಅವರಿಂದ ಅಂತರ ಕಾಪಾಡಿಕೊಳ್ಳುತ್ತಾರೆ! ಇದೇ ಕಾರಣದಿಂದ ನಮ್ಮಲ್ಲಿಯೇ ಹುಟ್ಟಿ ಈಗ ಬೇರೆ ದೇಶಗಳಲ್ಲಿ ಇರುವ ದೊಡ್ಡ ದೊಡ್ಡ ಆರೋಪಿಗಳನ್ನು ಇವರು ʼನಮ್ಮವರುʼ ಎನ್ನಲು ಹಿಂದೇಟು ಹಾಕುತ್ತಾರೆ. ಇದೇ ಸುನೀತಾ ಇಂತಹ ಸಾಧನೆಯನ್ನು ಮಾಡದೆ ಎಂಥದೋ ಕೆಟ್ಟ ಕೆಲಸ ಮಾಡಿ ಪ್ರಖ್ಯಾತಿಯ ಬದಲು ಕುಖ್ಯಾತಿ ಪಡೆದಿದ್ದರೆ ಇವರ ಪ್ಲೇಟ್ ಉಲ್ಟಾ ತಿರುಗತೊಡಗುತ್ತಿತ್ತು. ಅವರ ಪೂರ್ವಜರು ಯಾವುದೋ ಕಾಲದಲ್ಲಿ ಇಲ್ಲಿಂದ ಅಮೇರಿಕಕ್ಕೆ ಹೋಗಿದ್ದಾರೆ. ಹಾಗಿದ್ದಾಗ ಸುನೀತಾ ಭಾರತಕ್ಕೆ ಹೇಗೆ ಸಂಬಂಧಪಡುತ್ತಾರೆ? ಎಂದು ಇವರೆಲ್ಲ ವಕಾಲತ್ತು ಹೂಡುತ್ತಿದ್ದರು!

ಒಂದು ಉದಾಹರಣೆ ಕೊಡುವುದಾದರೆ ನಮ್ಮ ಕುಂದಾಪುರದ ಮಹಿಳೆಯೊಬ್ಬರು, ಬೆಂಕಿ-ಬಿರುಗಾಳಿಯ ʻಭೀಕರ ಭಾಷಣʼಮಾಡಿ ಧರ್ಮ ರಕ್ಷಣೆ ಮಾಡುವಾಗ ಅಲ್ಲಿನ ಅನೇಕರು ತನ್ನ ಹೆಸರಿಗೆ ಊರಿನ ಹೆಸರನ್ನೇ ತಗಲುಹಾಕಿಕೊಂಡ ಈ ಮಹಿಳೆ ಇಡೀ ಊರಿಗೆ ಕೀರ್ತಿ ತರುತ್ತಿದ್ದಾಳೆ ಎಂದು ಸಂಭ್ರಮಿಸಿದರು. ಆದರೆ ಅದೇ ಮಹಿಳೆ ಅದ್ಯಾವುದೋ ಪಕ್ಷದ ಟಿಕೆಟ್ ಕೊಡಿಸುವ ವಂಚನೆಯ ಕೇಸಿನಲ್ಲಿ ಸಿಕ್ಕಿಹಾಕಿಕೊಂಡು ಆ ಸುದ್ಧಿ ದಿನಾ ಪತ್ರಿಕೆಯಲ್ಲಿ ಬರತೊಡಗಿದಾಗ ಇವರೆಲ್ಲ ಮೂಗುಮುರಿದು ಆಕೆಯ ಹೆಸರಿನೊಂದಿಗೆ ನಮ್ಮ ಊರಿನ ಹೆಸರನ್ನು ಮಾಧ್ಯಮದವರು ಬಳಸಬಾರದು ಎಂದು ಅವಲತ್ತುಕೊಂಡರು! ಒಳ್ಳೆಯದಾದರೆ ಕೊಂಡಾಡಿ ʼತಬ್ಬಿಕೊಳ್ಳುವುದು; ಕೆಟ್ಟದ್ದಾದರೆ ಮೂಗುಮುರಿದು ದಬ್ಬಿಬಿಡುವುದು! ಇಂಥವರ ಮನಸ್ಥಿತಿ ಯಾವಾಗಲೂ ಗೆದ್ದೆತ್ತಿನ ಬಾಲ ಹಿಡಿಯುವ ಕಡೆಗೇ ಇರುತ್ತದೆ. ಇವರ ಅಪ್ಪ ದೊಡ್ಡ ಸಾಧನೆ ಮಾಡಿ ಸಾರ್ವಜನಿಕವಾಗಿ ಗುರುತಿಸಿಕೊಂಡಿದ್ದರೆ ಇವರು ತಮ್ಮನ್ನು ,ʼಇಂಥವರ ಮಗʼ ಎಂದು ಪರಿಚಯಿಸಿಕೊಳ್ಳುತ್ತಾರೆ. ಒಂದು ವೇಳೆ ಅಪ್ಪ ಅಂಥದ್ದೇನೂ ಸಾಧನೆ ಮಾಡಿರದ ವ್ಯಕ್ತಿಯಾಗಿರದೇ ಸಾಮಾನ್ಯ ವ್ಯಕ್ತಿಯಾಗಿದ್ದು ಹೆಣ್ಣುಕೊಟ್ಟ ಮಾವ ಏನಾರೂ ಅಂತಹ ಸಾಧನೆ ಮಾಡಿದ್ದರೆ ಆಗ ತಕ್ಷಣ ಇವರ ಪ್ಲೇಟ್ ಬದಲಿಯಾಗಿಬಿಡುತ್ತದೆ. ಆಗ ಇವರೆಲ್ಲ ನಾನು ಇಂಥವರ ಅಳಿಯʼ ಎಂದು ಪರಿಚಯಿಸಿಕೊಳ್ಳುತ್ತಾರೆ!

ಇದು ಮಾರ್ಚ್ ತಿಂಗಳು. ಸ್ವತಂತ್ರ ಭಾರತದ ಸಮಾಜೋರಾಜಕೀಯ ಕ್ಷೇತ್ರವನ್ನು ಬಹುವಾಗಿ ಪ್ರಭಾವಿಸಿರುವ ರಾಮಮನೋಹರ ಲೋಹಿಯಾ ಅವರ ಜನ್ಮ ಆದ ತಿಂಗಳು. ಅವರು ಪ್ರತಿಪಾದಿಸಿದ ಸಪ್ತಕ್ರಾಂತಿಯಲ್ಲಿನ ಒಂದು ಮುಖ್ಯ ಅಂಶ ʼವಿಶ್ವಸರ್ಕಾರʼ ರಚನೆ. ಅಂಥದ್ದೊಂದು ಕನಸು ನನಸಾದರೆ ನಾವೆಲ್ಲ ಆ ದೇಶದವರು, ಈ ದೇಶದವರು ಎಂಬ ಸಂಕುಚಿತತೆಯಿಂದ ಮುಕ್ತರಾಗಿ ಕುವೆಂಪು ಹೇಳುವಂತೆ ನಿಜಾರ್ಥದಲ್ಲಿ ʼವಿಶ್ವಪ್ರಜೆʼಗಳಾಗುತ್ತೇವೆ. ಅಂತಹ ಒಂದು ಸ್ಥಿತಿ ಸಧ್ಯಕ್ಕೆ ಕಾಣದಿದ್ದರೂ ಅತ್ತಕಡೆ ಮುಖಮಾಡಿ ನಡೆಯಬೇಕಾದದ್ದು ಪ್ರಜ್ಞಾವಂತರೆಲ್ಲರ ಕರ್ತವ್ಯ.

ಆ ಕರ್ತವ್ಯವನ್ನು ಮಾಡಬೇಕಾದರೆ ಇಂತಹ ಕ್ಷುಲ್ಲಕ ಮನಸ್ಥಿತಿಗಳಿಂದ ಹೊರಬಂದು ನಾವು ವಿಶ್ವಮಟ್ಟದಲ್ಲಿ ಆಲೋಚಿಸುವಂಥವರಾಗಬೇಕು. ಇಂತಹ ಕೊಂಡಾಟ, ಭಂಟಾಟಗಳಲ್ಲಿ ತೊಡಗಿಕೊಳ್ಳದೆ ವಿಶ್ವದ ಯಾವುದೇ ದೇಶದ ಯಾವುದೇ ಜನಾಂಗದ ವ್ಯಕ್ತಿ ಇಡೀ ವಿಶ್ವಕ್ಕೆ ಉಪಯುಕ್ತವಾಗಬಲ್ಲ ಏನನ್ನಾದರೂ ಸಾಧನೆ ಮಾಡಿದರೆ ಅವರು ನಮ್ಮವರು ತಮ್ಮವರು ಎಂಬ ಭೇದ ಮಾಡದೆ ಅವರ ಸಾಧನೆಯ ಕಾರಣಕ್ಕೇ ನಾವು ಅವರನ್ನು ಗೌರವಿಸುವುದನ್ನು ಕಲಿಯಬೇಕು. ಆಗ ಕುವೆಂಪು ಹೇಳುವ ವಿಶ್ವಮಾನವ ಪ್ರಜ್ಞೆ ನಮ್ಮದಾಗಬಹುದು; ಅದು ಲೋಹಿಯಾ ಪ್ರತಿಪಾದನೆಯ ವಿಶ್ವಸರ್ಕಾರ ರಚನೆಯ ಕಡೆ ನಮ್ಮದೃಷ್ಟಿಯನ್ನು ತಿರುಗಿಸಬಲ್ಲದು. ಸುನೀತಾ ಅವರನ್ನು ಅಂತರಿಕ್ಷಕ್ಕೆ ಕಳಿಸಿದ್ದೂ ವಿಜ್ಞಾನವೇ; ಅವರನ್ನು ಅಲ್ಲಿಂದ ಕರೆಸಿಕೊಂಡದ್ದೂ ವಿಜ್ಞಾನವೇ! ಇದನ್ನು ಧರ್ಮಕ್ಕೆ ಗಂಟುಹಾಕುವುದು ಅಜ್ಞಾನದ ಕೆಲಸವಲ್ಲದೇ ಬೇರೇನೂ ಅಲ್ಲ!!

ರಾಬು
೨೧-೦೩-೨೦೨೪

Saturday, March 8, 2025

ಮತ್ತೆ ಮೇಲೆದ್ದ ಸೌಜನ್ಯ: ಸಾಯಲೊಪ್ಪದ ಸತ್ತ ಹುಡುಗಿಯ ಪ್ರಕರಣ

 

ಮತ್ತೆ ಮೇಲೆದ್ದ ಸೌಜನ್ಯ: ಸಾಯಲೊಪ್ಪದ ಸತ್ತ ಹುಡುಗಿಯ ಪ್ರಕರಣ 

ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಇತ್ತೀಚೆಗಷ್ಟೆ ಬಹಳ ದೊಡ್ಡ ಪ್ರಮಾಣದಲ್ಲಿ ವೈರಲ್‌ ಆದ ಸಮೀರ್‌ ಎಂಬ ಯೂಟೂಬರ್‌ ಯುವಕನ ವಿಡಿಯೋದ ಕಾರಣಕ್ಕಾಗಿ ಇದು ಆಗಿದೆ. ನಾನು ಸಮೀರನ ಆ ವಿಡಿಯೋವನ್ನು ನೋಡಿದೆ. ಅದರಲ್ಲಿ ಆತ ಏನನ್ನೂ ಹೊಸದಾಗಿ ಹೇಳಿಲ್ಲ ಅನ್ನಿಸಿತು. ಆದರೂ ಅದು ಅಷ್ಟು ದೊಡ್ಡ ಪ್ರಮಾಣದಲ್ಲಿ ವೈರಲ್‌ ಆಗಲು ಕಾರಣವಾದದ್ದು ಆ ವಿಡಿಯೋದ ವಿಷಯ ಹೊಸದಲ್ಲವಾದರೂ ಅದನ್ನು ನೋಡಿದವರು ಬಹಷ್ಟು ಪ್ರಮಾಣದಲ್ಲಿ ಹೊಸಬರೇ ಆಗಿದ್ದು ಅನ್ನಿಸಿತು. ಇತ್ತೀಚಿನ ದಿನಗಳಲ್ಲಿ ಈ ಪ್ರಕರಣ ಮುನ್ನೆಲೆಗೆ ಬಂದದ್ದು ಇದು ಎರಡನೆ ಸಲ. ಹದಿಮೂರು ವರ್ಷಗಳ ಹಿಂದಿನ ಅಂದರೆ ೨೦೧೨ರ ಈ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ʼಕೊಲೆಗಾರʼ ಎಂದು ʼಸಿಕ್ಕಿಹಾಕಿಸಲ್ಪಟ್ಟಿದ್ದʼ ಸಂತೋಷ್‌‌ ರಾವ್ ಎಂಬ ವ್ಯಕ್ತಿಯನ್ನು ೨೦೨೩ರ ಜೂನ್‌ನಲ್ಲಿ ನ್ಯಾಯಾಲಯ ದೋಷಮುಕ್ತಗೊಳಿಸಿ ಬಿಡುಗಡೆಮಾಡಿದಾಗ ಮೊಟ್ಟಮೊದಲು ಈ ಪ್ರಕರಣ ಸುದ್ಧಿಮಾಡಿತು.  ಅದಾದ ನಂತರ ಅದಕ್ಕಿಂತ ವ್ಯಾಪಕವಾಗಿ ಈ ಪ್ರಕರಣವನ್ನು ವಿಸ್ತರಿಸಿದ್ದು ಈ ವಿಡಿಯೋ.

೨೦೨೩ರಲ್ಲಿ ಈ ಪ್ರಕರಣ ಸುದ್ದಿ ಮಾಡಿದ್ದು ಏಕೆಂದರೆ ಈ ಪ್ರಕರಣದಲ್ಲಿ ಆ ಹುಡುಗಿಯನ್ನು ʼಬರ್ಬರವಾಗಿ ಕೊಲೆಮಾಡಲಾಗಿದೆʼ ಎಂಬ ಅಂಶ ಆಗಲೇ ನ್ಯಾಯಾಲಯದಲ್ಲಿ ಸಾಬೀತಾಗಿತ್ತು. ಕೊಲೆಮಾಡಿದವನೆಂದು ಸಿಕ್ಕಿಹಾಕಿಸಲ್ಪಟ್ಟ ವ್ಯಕ್ತಿಯು ನಿಪರಾಧಿ ಎಂಬುದೂ ನಂತರ ಸಾಬೀತಾಯಿತು. ಆಗ ದೊಡ್ಡ ಪ್ರಶ್ನೆಯೊಂದು ಹುಟ್ಟಿಕೊಂಡಿತು. ಕೊಲೆಗಾರ ಈತನಲ್ಲದಿದ್ದರೆ ಮತ್ಯಾರು? ಎಂಬುದೇ ಆ ಪ್ರಶ್ನೆ. ಈ ಪ್ರ‍ಶ್ನೆಯನ್ನು ಮುಂದುಮಾಡಿಕೊಂಡು ಸೌಜನ್ಯ ಸಾವಿಗೆ ನ್ಯಾಯಕ್ಕಾಗಿ ಹೋರಾಟಮಾಡುವ ಹೋರಾಟಗಾರರು ಮತ್ತೆ ಪ್ರಕರಣದ ಮರುತನಿಖೆಗೆ ಒತ್ತಾಯ ಮಾಡುಲು ಧ್ವನಿ ಎತ್ತಿದ್ದು ಸದ್ದು ಮಾಡಲು ಕಾರಣವಾಗಿತ್ತು. ಆರಂಭದಲ್ಲಿ ಧರ್ಮಸ್ಥಳಕ್ಕೆ ನಂತರ ಸುತ್ತಮುತ್ತಲ ಹಳ್ಳಿಗಳಿಗೆ ನಂತರ ಕರಾವಳಿಗೆ ಆನಂತರ ಬೆಟ್ಟದ ಮೇಲಿನ ಜಿಲ್ಲೆಗಳಿಗೆ ಹೀಗೆ ಈ ಪ್ರಕರಣದ ಚರ್ಚೆ ವ್ಯಾಪಿಸಿತು. ಆದಾಗ್ಯೂ ಈ ಪ್ರಕರಣ ಸಾರ್ವಜನಿಕವಾಗಿ ರಾಜ್ಯದ ಎಲ್ಲಕಡೆಗೂ ಚರ್ಚೆಯ ವಿಷಯವಾಗಿರಲಿಲ್ಲ. ಸಮೀರ್‌ ವಿಡಿಯೋ ಇದುವರೆಗೂ ಯಾರು ಈ ಪ್ರಕರಣಕ್ಕೆ ಅಪರಿಚಿತರಾಗಿದ್ದರೋ ಅಂಥವರನ್ನು ದೊಡ್ಡ ಸಂಖ್ಯೆಯಲ್ಲಿ ಮುಟ್ಟಿದ್ದು ಅವರಲ್ಲಿ ದಿಗ್ಭ್ರಮೆಯನ್ನು ಉಂಟುಮಾಡಿದ್ದು ಇದು ದೇಶವಿದೇಶಗಳ ಕನ್ನಡಿಗರಿಗೂ ತಲುಪುವಂತೆ ವೈರಲ್‌ ಆಗಲು ಕಾರಣ ಅನ್ನಿಸುತ್ತದೆ.

ಈ ಪ್ರಕರಣದ ಬಗ್ಗೆ ಈಗಾಗಲೇ ಅನೇಕ ಹೋರಾಟಗಾರರು ತಮ್ಮ ಅನೇಕ ಬರೆಹ ಮತ್ತು ಮಾತುಗಳಲ್ಲಿ ಅದರ ಹಿನ್ನಲೆ, ಹುನ್ನಾರ, ಇತಿಹಾಸ ಇತ್ಯಾದಿಯಾಗಿ ಸಾಕಷ್ಟು ವಿವರಗಳನ್ನು ಸಾರ್ವಜನಿಕವಾಗಿ ನೀಡುತ್ತಲೇ ಬಂದಿದ್ದರೂ ಮತ್ತು ಈಮೊದಲೇ ಪ್ರಸ್ತಾಪವಾದಂತೆ ಈಗಾಗಲೇ ಒಂದಿಷ್ಟು ಜನರಿಗೆ ಗೊತ್ತಿರುವ ಸಂಗತಿಗಳನ್ನೇ ಸಂಗ್ರಹಿಸಿ, ಸಂಕ್ಷೇಪಿಸಿ, ಅವನ್ನು ಒಂದು ಸರಣಿಯಾಗಿ ಜೋಡಿಸಿ ಅತ್ಯಂತ ಕಡಿಮೆ ಅವಧಿಯಲ್ಲಿ ಸಾಮಾನ್ಯರಿಗೆ ಸುಲಭವಾಗಿ ಪ್ರಕರಣ ಅರ್ಥವಾಗುವಂತೆ ಮಾಡಿದ್ದಷ್ಟೆ ಈ ವಿಡಿಯೋದಲ್ಲಿ ಸಮೀರ್‌ ಮಾಡಿದ ಕೆಲಸ. ಆತ ಆ ವಿಡಿಯೋದಲ್ಲಿ ನೀಡಿದ ವಿವರ ಮಾಡಿದ ಆರೋಪ ಯಾವೂ ಹೊಸವಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಅವೆಲ್ಲ ಸೌಜನ್ಯಪರ ಹೋರಾಟಗಾರರು ಇದುವರೆಗೂ ನೀಡಿದ ವಿವರಗಳೇ ಮತ್ತು ಆರೋಪಗಳೇ ಆಗಿವೆ. ಆದರೂ ಈ ವಿಡಿಯೋ ಪ್ರಕರಣ ಹೆಚ್ಚು ತೀವ್ರಸ್ವರೂಪದ ವಾದ ವಿವಾದಗಳನ್ನು ಹುಟ್ಟುಹಾಕಲು ಕಾರಣವಾದದ್ದು ಎರಡು ಅಂಶಗಳು ಅನ್ನಿಸುತ್ತದೆ.

ಒಂದು ಕಳೆದ ಹತ್ತು ವರ್ಷಗಳವರೆಗೂ ಸೌಜನ್ಯಪರ ಹೋರಾಟಗಾರರು ಎಷ್ಟು ಮಾತುಗಳನ್ನು ಆಡಿದ್ದರೂ ಸಭೆಗಳನ್ನು ಮಾಡಿದ್ದರೂ, ಲೇಖನಗಳನ್ನು ಬರೆದಿದ್ದರೂ ಅವು ಇಷ್ಟೊಂದು ದೊಡ್ಡಪ್ರಮಾಣದ ʼಹೊಸಬರನ್ನುʼ ತಲುಪಿ ಅವರ ಮನಸ್ಸು ಹೃದಯಗಳನ್ನು ತಲ್ಲಣಗೊಳಿಸಿರಲಿಲ್ಲ ಮತ್ತು ಅದನ್ನು ಈ ವಿಡಿಯೋ ಮಾಡಿತು. ಇನ್ನೊಂದು ಅದಕ್ಕೆ ದೇವರು ಧರ್ಮದ ಬಣ್ಣ ಅಂಟಿಸಿ ಅದನ್ನು ಹಾದಿತಪ್ಪಿಸಲು ನೋಡುತ್ತಿರುವವರು ಅದನ್ನು ವಿರೋಧಿಸಿದ್ದು. ಏಕೆಂದರೆ ಸಾಮಾಜ ಸುಧಾರಣೆಯ ಅಥವಾ ಅನ್ಯಾಯವನ್ನು ಪ್ರತಿಭಟಿಸುವ ಒಂದು ಹೇಳಿಕೆಯನ್ನು ಸಮಾಜ ಸ್ವೀಕರಿಸುವಲ್ಲಿ ಆ ಸಂದೇಶ ಅಥವಾ ಹೇಳಿಕೆಯ ವಿಷಯವಷ್ಟೆ ಮುಖ್ಯವಾಗದೆ ಅದನ್ನು ಹೇಳಿದವರು ಯಾರು ಎಂಬುದೂ ಮುಖ್ಯವಾಗಿಬಿಡುತ್ತದೆ. ಅಂದರೆ ಕಾಯಿಲೆಗೆ ಕೊಟ್ಟ ಇಂಜೆಕ್ಷನ್‌ ಒಂದೇ ಆದರೂ ಅದನ್ನು ಕೊಡಲು ಬಳಸಿದ ಸಿರಿಂಜ್‌ ಬದಲಾದಾಗ ಪರಿಣಾಮವೂ ಬದಲಾಗುವ  ಪರಿ ಇದು! ʼಸಮೀರ್ʼ ಎಂಬ ಹೆಸರೇ ಅದನ್ನು ಧಾರ್ಮಿಕವಾಗಿ ಬಳಸಿಕೊಳ್ಳಲು ಅಸ್ತ್ರವಾದದ್ದು ಇಲ್ಲಿನ ಬೆಳೆವಣಿಗೆ.

ಈ ವಿಡಿಯೋದಲ್ಲಿ ಸೌಜನ್ಯ ಪ್ರಕರಣದ ಪ್ರಮುಖ ವಿವರಗಳೆಲ್ಲ ಇರುವುದರಿಂದ ಮತ್ತು ಅದನ್ನು ಬಹಳಷ್ಟು ಜನ ನೋಡಿರುವುದರಿಂದ ಈ ಪ್ರಕರಣದ ಇತಿಹಾಸ ಹಿನ್ನಲೆ ಇವು ಎಲ್ಲವನ್ನೂ ಬಿಟ್ಟು ನೇರವಾಗಿ ಈ ವಿಡಿಯೋದ ಬಗ್ಗೆ ಕೇಳಿಬಂದ ಕೆಲವು ತಕರಾರುಗಳನ್ನು ಇಲ್ಲಿ ಚರ್ಚೆಗೆ ಎತ್ತಿಕೊಳ್ಳಲಾಗಿದೆ.

ಮೊದಲನೆಯ ತಕರಾರೇ ʼಇದು ಹಿಂದೂ ಧರ್ಮದ ಮೇಲೆ ಮಾಡುತ್ತಿರುವ ದಾಳಿ. ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಗುರಿಯಾಗಿ ಇಟ್ಟುಕೊಂಡು ಅವುಗಳ ಘನತೆ ಗೌರವಗಳನ್ನು ಹಾಳುಮಾಡಲು ಹೂಡಿರುವ ಸಂಚುʼ ಎಂಬುದು. ಈ ಆರೋಪ ಮಾಡಲು ಆ ಹುಡುಗನ ಹೆಸರು ʻಸಮೀರ್‌ʼ ಆಗಿರುವುದು ಈ ತಕರಾರು ಎತ್ತಿದವರಿಗೆ ದೊರೆತ ಒಂದು ಧನಾತ್ಮಕ ಅಂಶ. ಹಿಂದೂ ಧರ್ಮದ ಹುಡುಗಿಯ ವಿಷಯ ಇವನಿಗೆ ಯಾತಕ್ಕೆ ಬೇಕು. ಇವನ ಧರ್ಮದ ಜನಾಂಗದಲ್ಲಿ ಆದ ಇಂತಹ ಪ್ರಕರಣಗಳ ಬಗ್ಗೆ ಇವನೇಕ ವಿಡಿಯೋ ಮಾಡಲ್ಲ ಇತ್ಯಾದಿ ಡೈಲಾಗು ಹೊಡೆಯುವುದು ಅದಕ್ಕೆ ಒಂದಿಷ್ಟು ಬೇರೆ ಪ್ರಕರಣಗಳನ್ನು ಹೆಸರಿಸಿ ಅವುಗಳ ಬಗ್ಗೆ ವಿಡಿಯೋ ಮಾಡು ಅನ್ನುವುದು ಇತ್ಯಾದಿ ಇವರು ಮಾಡುತ್ತಿದ್ದಾರೆ.

ಈ ತಕರಾರಿಗೆ ಕೊಡಬಹುದಾದ ಉತ್ತರವೆಂದರೆ ಒಂದು ಹುಡುಗಿಯ ಸಾವಿಗಾಗಿ ಕೇಳುವ ನ್ಯಾಯವನ್ನು ಈ ರೀತಿ ಮತಧರ್ಮಗಳ ಕೆಸರಲ್ಲಿ ಸಿಕ್ಕಿಹಾಕಿಸುವುದು ಕೇವಲ ಕಿಡಿಗೇಡಿ ಕೆಲಸ ಮಾತ್ರವಲ್ಲ; ಮಹಾ ಅಪರಾಧ ಕೂಡ. ಕಾಲೇಜಿಗೆ ಹೋದ ಹುಡುಗಿಯೊಬ್ಬಳನ್ನು ಬರ್ಬರವಾಗಿ ಕೊಲೆಮಾಡಿರುವ ಒಂದು ಹೇಯ ಪ್ರಕರಣವನ್ನು ಮತಧರ್ಮಮುಕ್ತವಾಗಿ ನಾವು ಚರ್ಚಿಸಬೇಕು. ನಮ್ಮ ಸಾತ್ವಿಕ ಕೋಪ ಹುಟ್ಟಬೇಕಾದದ್ದು ಆ ಹೇಯ ಕೃತ್ಯವನ್ನು ಮಾಡಿದವರ ಮೇಲೆಯೇ ಹೊರತು ಅದನ್ನು ಸಾರ್ವಜನಿಕಗೊಳಿಸಿದವರ ಮೇಲಲ್ಲ.

ಆ ಹುಡುಗಿಗೆ ಆದ ಗತಿ ನಾಳೆ ನಮ್ಮ ಮನೆಯ ಅಕ್ಕತಂಗಿಯರಿಗೋ ಮಕ್ಕಳಿಗೋ ಬರಬಹುದು ಎಂಬ ಎಚ್ಚರ ಮನುಷ್ಯರಾದ ನಮ್ಮೆಲ್ಲರಿಗೂ ಇರಬೇಕು. ಈ ಅನ್ಯಾಯವನ್ನು ನಮ್ಮ ನಮ್ಮ ಹಂತದಲ್ಲಿ ಹೇಗೆ ಪ್ರತಿಭಟಿಸಬಹುದು ಎಂಬುದರ ಕಡೆ ನಮ್ಮ ಗಮನ ಹರಿಸಬೇಕೆ ಹೊರತು ಅದನ್ನು ಪ್ರಶ್ನೆಮಾಡಿದವರು ಮತಧರ್ಮದ ಬಗ್ಗೆ ಅಲ್ಲ. ಆ ಹುಡುಗಿಯನ್ನು ಕೊಂದವರು ಯಾರೆಂದು ಇದುವರೆಗೂ ಖಚಿತವಾಗಿಲ್ಲವಾದರೂ ಈ ಕೃತ್ಯಕ್ಕೆ ಬಲಿಯಾದ ಆ ಹುಡುಗಿಯನ್ನು ಹಿಂದೂ ಧರ್ಮದವಳು ಎನ್ನಲಾಗುತ್ತದೆ. ಹೀಗಿದ್ದರೆ ಈಗ ʼಧರ್ಮʼ ʼಧರ್ಮʼ ಎಂದು ಕೂಗಾಡುವವರು ಅದೇ ಧರ್ಮದ ಒಂದು ಹುಡುಗಿಗೆ ಆದ ಅನ್ಯಾಯವನ್ನು ದೊಡ್ಡಮಟ್ಟದಲ್ಲಿ ಪ್ರತಿಭಟಿಸಬೇಕಿತ್ತಲ್ಲವೇ? ಕನಿಷ್ಠ ಆ ಹುಡುಗ ಮಾಡಿದಂಥ ವಿಡಿಯೋವನ್ನು ಇವರ್ಯಾರೋ ಮಾಡಿದ್ದರೂ ಆಗುತ್ತಿತ್ತಲ್ಲವೇ? ಇವರೇ ಮಾಡಿದ್ದರೆ ಆ ಹುಡುಗ ಮಾಡುವ ಅವಶ್ಯಕತೆಯೇ ಇಂದು ಬರುತ್ತಿರಲಿಲ್ಲ.

ಈ ವಿಡಿಯೋ ಪ್ರಕರಣವನ್ನು ವಿರೋಧಿಸುವವರಲ್ಲಿ ಮುಖ್ಯವಾಗಿ ಎರಡು ಬಗೆಯವರಿದ್ದಾರೆ. ಅವರಲ್ಲಿ ಮೊದಲನೆಯವರು ದೇವರು ಧರ್ಮಗಳ ಬಗ್ಗೆ ʻಅಂಧಾಭಿಮಾನʼವನ್ನು ಇಟ್ಟುಕೊಂಡು ಯಾವಾಗಲೂ ಎಲ್ಲದಕ್ಕೂ ಧರ್ಮ ದೇವರುಗಳನ್ನು ಎಳೆದುತಂದು ಧಾರ್ಮಿಕ ದ್ವೇಷವನ್ನು ಹುಟ್ಟುಹಾಕಿ ಸಾಮಾಜಿಕ ಕಲಹಗಳನ್ನು ಮತೀಯ ಸಂಘರ್ಷಗಳನ್ನು ಉಂಟುಮಾಡುವವರು.  ಒಂದು ಧರ್ಮದ ರಕ್ಷಣೆಯ ಗುತ್ತಿಗೆ ಪಡೆದವರಂತೆ ವರ್ತಿಸುವ ಇವರಿಗೆ ಅದೇ ಧರ್ಮದ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಿದಾಗ, ಕೊಲೆಮಾಡಿದಾಗ ನೆನಪಿಗೆ ಬರದ ಧರ್ಮ ಅದನ್ನು ಪ್ರಶ್ನೆಮಾಡಿದಾಗ ಓಡೋಡಿ ಬರುತ್ತದೆ. ಅದೂ ಅದನ್ನು ಪ್ರಶ್ನೆಮಾಡಿದವರು ಬೇರೆ ಧರ್ಮದವರಾದರಂತೂ ಇವರ ಪಿತ್ತ ನೆತ್ತಿಗೆ ಏರುತ್ತದೆ. ಒಂದು  ವಿಡಿಯೋ ಬಂದಾಗ ಅದರಲ್ಲಿರುವ ವಿಷಯದ ಸತ್ಯಾಸತ್ಯತೆಯ ಬಗ್ಗೆ ಚರ್ಚೆ ಮಾಡಬೇಕೆ ಹೊರತು ಅದನ್ನು ಬಿಟ್ಟು ʼಅದನ್ನು ಮಾಡಬೇಕಿತ್ತುʼ ʻಇದನ್ನು ಮಾಡಬೇಕಿತ್ತುʼ ಎನ್ನುವುದು ಉಳಿದವರ ಕೆಲಸವಲ್ಲ. ಅಷ್ಟಕ್ಕೂ ಅವನು ಬಿಟ್ಟ ವಿಷಯಗಳನ್ನು ಇವರೇ ಮಾಡಬಹುದಲ್ಲ. ಆ ಯೋಗ್ಯತೆಯೂ ಇವರಿಗೆ ಇರಲ್ಲ. ಕೂಗುಮಾರಿಗಳಂತೆ ಕೂಗಾಡುವುದನ್ನು ಬಿಟ್ಟು ಇವರಿಗೆ ಬೇರೇನೂ ಮಾಡಲು ಆಗುವುದಿಲ್ಲ. ಒಬ್ಬ ವ್ಯಕ್ತಿಯ ಮೇಲಿನ ಸಿಟ್ಟನ್ನು ಇವರು ಒಂದು ಸಮೂಹದ ಮೇಲಿನ ಜನಾಂಗದ ಮೇಲಿನ ಸಿಟ್ಟನ್ನಾಗಿ ಮಾಡಿಕೊಂಡು ಅಷ್ಟಕ್ಕೂ ನಿಲ್ಲದೆ ಅದನ್ನು ʼದ್ವೇಷʼವಾಗಿ ಬೆಳೆಸಿಕೊಂಡು ವೀರಾವೇಶತಾಳುವ ಇವರು ಒಂದು ರೀತಿಯ ʼಧರ್ಮರ(ರಾ)ಕ್ಷಕರು!ʼ. ಇಂತಹವರು ಯಾವುದೇ ಧರ್ಮದಲ್ಲಿದ್ದರೂ ಅವರು ಆ ಧರ್ಮಕ್ಕೆ ದೊಡ್ಡ ಕಳಂಕವೇ. ಇಂತಹವರನ್ನು ನಿಯಂತ್ರಿಸಬೇಕಾದದ್ದು ಮೂಲಭೂತವಾಗಿ ಆಯಾ ಧರ್ಮಗಳ ನಿಜಾರ್ಥದ ಶ್ರದ್ಧಾವಂತ ಅನುಯಾಯಿಗಳ ಜವಾಬ್ದಾರಿ.

ಎರಡನೆಯವರು ಆ ಹುಡುಗಿಯ ಸಾವಿನ ಬಗ್ಗೆ ಹೃದಯದಲ್ಲಿ ನಿಜವಾಗಿಯೂ ಕನಿಕರವನ್ನು ಇಟ್ಟುಕೊಂಡ ಮಾನವಂತರು. ಇವರ ತಕರಾರು ಏನೆಂದರೆ “ಆ ಹುಡುಗಿಯ ಸಾವಿಗೆ ನಿಜವಾದ ನ್ಯಾಯ ಸಿಗಬೇಕು. ಆದರೆ ಅದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳನ್ನು ಅವರ ಕುಟುಂಬವನ್ನು ಹೊಣೆಗಾರರನ್ನಾಗಿ ಮಾಡಿ ಆರೋಪಿಸುವುದು ಅವರ ಘನತೆ ಗೌರವಕ್ಕೆ ಧಕ್ಕೆ ತರುವುದು ಆ ಮೂಲಕ ಹಿಂದೂಗಳ ಪ್ರಮುಖ ಧಾರ್ಮಿಕ ಕ್ಷೇತ್ರವಾದ ʻ

ಧರ್ಮಸ್ಥಳʼ ಕ್ಕೆ ಕಳಂಕ ತರುವುದು ಸರಿಯಲ್ಲ” ಎಂಬುದು. ಇದಕ್ಕೆ ಕೊಡಬಹುದಾದ ಉತ್ತರವೆಂದರೆ ಇದುವರೆಗೂ ನನಗೆ ಗೊತ್ತಿರುವಂತೆ ಸೌಜನ್ಯಪರ ಹೋರಾಟಗಾರರನ್ನೂ ಸೇರಿದಂತೆ ಯಾರೊಬ್ಬರೂ “ಈ ಕೊಲೆಯನ್ನು ಇವರೇ ಮಾಡಿದ್ದಾರೆ ಇವರನ್ನು ಬಂಧಿಸಿ” ಎಂದು ಹೇಳಿಲ್ಲ; ಒತ್ತಡವನ್ನು ತಂದಿಲ್ಲ. ಅದನ್ನು ಮಾಡಲಿಕ್ಕೆ ಬರುವುದೂ ಇಲ್ಲ. ಅವರೆಲ್ಲ ಕೇಳುತ್ತಿರುವುದು ಏನೆಂದರೆ ʼಕೊಲೆಯನ್ನು ಆ ವ್ಯಕ್ತಿ (ಸಂತೋಷ್‌ ರಾವ್) ಮಾಡಿಲ್ಲ ಎಂದಾದರೆ ಅದನ್ನು ಮಾಡಿದವರು ಯಾರು?ʼ ಎಂಬುದು ಸೂಕ್ತ ತನಿಖೆಯಾಗಬೇಕು ಎಂದು. ಹೀಗೆ ಮರು ತನಿಖೆಗೆ ಒತ್ತಾಯಿಸುವಲ್ಲಿ ಅವರು ಧರ್ಮಾಧಿಕಾರಿಗಳು ಅಥವಾ ಅವರ ಕುಟುಂಬವನ್ನು ಪ್ರಸ್ತಾಪಿಸಿರುವುದು ಅಲ್ಲಲ್ಲಿ ಕಂಡುಬರುತ್ತದೆಯಾದರೂ ಅವರೇ ಮಾಡಿದ್ದಾರೆ ಎಂದು ಅವರು ಹೇಳುತ್ತಿಲ್ಲ; ಬದಲಾಗಿ ಅವರ ಮೇಲೆ ನಮಗೆ ಸಂಶಯವಿದೆ ಎಂದು ಹೇಳುತ್ತಿದ್ದಾರೆ.

ಹೀಗೆ ಒಬ್ಬರ ಮೇಲೆ ಸಂಶಯವಿದೆ ಎಂದು ಹೇಳುವುದು ಅವರಿಗೆ ಮಾಡುವ ಅವಮಾನವೆ? ಅಥವಾ ಅದು ಅಪರಾಧವೇ? ಖಂಡಿತಾ ಅಲ್ಲ. ಏಕೆಂದರೆ ನಮ್ಮ ಮನೆಯಲ್ಲಿ ಅಥವಾ ಬೀದಿಯಲ್ಲಿ ಒಂದು ಕೊಲೆಯಾಯಿತು ಎಂದು ನಾವು ಪೋಲಿಸರಿಗೆ ದೂರು ನೀಡಲು ಹೋದಾಗ ಪೋಲೀಸರೇ ನಮಗೆ “ನಿಮಗೆ ಯಾರ ಮೇಲಾದರೂ ಸಂಶಯವಿದೆಯೇ?” ಎಂದು ಕೇಳುತ್ತಾರೆ. ಆಗ ನಮಗೆ ಯಾರ ಮೇಲಾದರೂ ಅನುಮಾನ ಸಂಶಯಗಳು ಇದ್ದರೆ  ನಾವು ಅವರ ಹೆಸರನ್ನು ಹೇಳುತ್ತೇವೆ. ಹಾಗೆ ಹೇಳಿದ ತಕ್ಷಣ ಆ ವ್ಯಕ್ತಿ ಅಪರಾಧಿ ಎಂದು ಆಗುವುದಿಲ್ಲ. ಅಥವಾ ಆ ವ್ಯಕ್ತಿಯ ಹೆಸರನ್ನು ಹೇಳಿದ ಕಾರಣಕ್ಕೆ ಹೆಸರು ಹೇಳಿದವನು ಅಪರಾಧಿ ಆಗುವುದಿಲ್ಲ. ಅದು ತನಿಖೆಗೆ ಚಾಲನೆ ಕೊಡಲು ತನಿಖಾಧಿಕಾರಿಗೆ ಒಂದು ಆರಂಭಿಕ ಮಾಹಿತಿ ಅಷ್ಟೆ. ಆ ತನಿಖಾಧಿಕಾರಿ ತನಿಖೆಮಾಡಿದ ನಂತರ ನಾವು ಸಂಶಯ ಇದೆ ಎಂದು ಹೇಳಲ್ಪಟ್ಟ ವ್ಯಕ್ತಿಅಪರಾಧಿ ಆಗಲೂ ಬಹುದು; ಆಗದಿರಲೂ ಬಹುದು. ಆದರೆ ಆರೋಪ ಮಾಡಲೇ ಬಾರದು ಎನ್ನುವುದು ಸರಿಯಾದ ಕ್ರಮವಲ್ಲ. ಹಾಗಾಗಿ ಆರೋಪವನ್ನು ಗೌರವಿಸಬೇಕು. ಸಂಬಂಧಪಟ್ಟವರನ್ನು ತನಿಖೆಗೆ ಒಳಪಡಿಸಬೇಕು. ಅದನ್ನು ಅವರು ಅವಮಾನವೆಂದಾಗಲೀ ಘನತೆಗೆ ಧಕ್ಕೆ ಎಂದಾಗಲೀ ಭಾವಿಸಲೇಬಾರದು. ಅಥವಾ ಅವರ ಬಗ್ಗೆ ತನಿಖೆಯನ್ನೇ ಮಾಡಬಾರದು ಎಂದು ಹೇಳುವುದು ಸರಿಯಾದ ನಡೆಯಲ್ಲ.

 ಈ ಎರಡನೆಯ ವರ್ಗದ ಅಭಿಮಾನಿಗಳು ಮೊದಲನೆಯ ವರ್ಗದವರಷ್ಟು ʻಅಂಧಭಕ್ತʼರಲ್ಲದಿದ್ದರೂ ಇವರಿಗೆ ಆ ಹುಡುಗಿಯ ಅತ್ಯಾಚಾರ ಮತ್ತು ಕೊಲೆಗಳಿಗಿಂತ ತಮ್ಮ ಪೂಜ್ಯರ ಮಾನ ಮರ್ಯಾದೆ ಘನತೆ ಗೌರವಗಳೇ ಮುಖ್ಯವಾಗುತ್ತವೆ. ಹಾಗಾಗಿ ಆ ಹುಡುಗಿಯ ಸಾವಿಗೆ ನ್ಯಾಯ ಸಿಗದಿದ್ದರೂ ಪರವಾಗಿಲ್ಲ ಆದರೆ ನಮ್ಮ ಪೂಜ್ಯರ ಘನತೆಗೆ ಧಕ್ಕೆ ಆಗಬಾರದು ಎಂದು ಹಂಬಲಿಸುತ್ತಾರೆ. ಈ ಎರಡೂ ಬಗೆಯವರನ್ನು ಮಾತನಾಡಿಸಿ ನೋಡಿ ಅವರು ಹೇಳುವ ಮಾತು ಎಂದು ಸಾಮಾನ್ಯವಾಗಿ ಹೀಗೆ ಇರುತ್ತದೆ: “ಆ ಹುಡುಗಿಯ ಅತ್ಯಾಚಾರ, ಕೊಲೆ ಆಗಿದ್ದು ನಿಜ; ಆದರೆ ಅದಕ್ಕೂ ನಮ್ಮ ಪೂಜ್ಯರಿಗೂ ಅವರ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ.”  ಇವರೆಲ್ಲ ಅರ್ಥಮಾಡಿಕೊಳ್ಳಬೇಕಾದ ಮುಖ್ಯ ಸಂಗತಿ ಏನೆಂದರೆ ಆ ಸಾವಿಗೆ ನ್ಯಾಯಕ್ಕಾಗಿ ಹೋರಾಡುವವರು ʼ”ಆ ಸಾವಿಗೆ ಇಂಥವರೇ ಕಾರಣ” ಎಂದು ಹೇಳದೇ ಇರುವಾಗ, ಇವರಿಗೆ “ಆ ಸಾವಿಗೆ ಇಂಥವರು ಕಾರಣ ಅಲ್ಲ” ಎಂದು ಹೇಳುವ ಅಧಿಕಾರ ಹೇಗೆ ಮತ್ತು ಎಲ್ಲಿಂದ ಬರುತ್ತದೆ? ಅವೆಲ್ಲ ನ್ಯಾಯಾಲಯದಲ್ಲಿ ಚರ್ಚೆಯಾಗಿ ತೀರ್ಮಾನಿಸಬೇಕಾಗಿರುವ ಸಂಗತಿಗಳು. ಹಾಗಾಗಿ ಈ ʻಭಕ್ತರುʼ ಅನಗತ್ಯ ಭಾವೋದ್ವೇಗಕ್ಕೆ ಒಳಗಾಗದೇ ತನಿಖೆಗೆ ಸಹಕರಿಸಬೇಕು. ಅಷ್ಟಕ್ಕೂ ʻಕುಂಬಳಕಾಯಿ ಕಳ್ಳʼ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವುದು ಬೇರೆಯದೇ ಆದ ಅರ್ಥವನ್ನು ಕೊಟ್ಟುಬಿಡುತ್ತದೆ.

ಈ ವಿಡಿಯೋದ ಬಗ್ಗೆ ಬರುತ್ತಿರುವ ಇನ್ನೊಂದು ತಕರಾರು ಎಂದರೆ “ಇವರ ಹತ್ತಿರ ಅಷ್ಟೊಂದು ದಾಖಲೆಗಳಿದ್ದರೆ ಅವನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಬಹುದಲ್ಲ. ಅದನ್ನು ಬಿಟ್ಟು ಸುಮ್ಮಸುಮ್ಮನೆ ಹೀಗೇಗೆ ಹಾದಿಬೀದಿಯಲ್ಲಿ ಸುದ್ದಿಮಾಡುತ್ತಿದ್ದಾರೆ” ಎಂಬುದು. ಇದಕ್ಕೆ ಕೊಡಬಹುದಾದ ಉತ್ತರವೆಂದರೆ ಸಾಮಾನ್ಯವಾಗಿ ನ್ಯಾಯಾಲಯಗಳ ಪ್ರಕ್ರಿಯೆಯ ಬಗ್ಗೆ ಅರಿವು ಇರುವವರು ಇಂತಹ ತಕರಾರು ಒಡ್ಡುವುದಿಲ್ಲ. ಏಕೆಂದರೆ ನ್ಯಾಯಾಲಯಕ್ಕೆ ಸುಮ್ಮಸುಮ್ಮನೆ ನಮ್ಮಲ್ಲಿರುವ ಸಾಕ್ಷಿಗಳನ್ನು ಒಯ್ದುಕೊಡಲು ಬರುವುದಿಲ್ಲ. ಅದನ್ನು ನ್ಯಾಯಾಲಯ ಸ್ವೀಕರಿಸುವುದೂ ಇಲ್ಲ. ಆ ದಾಖಲೆಗಳನ್ನು ಅಲ್ಲಿ ಸ್ವೀಕರಿಸಬೇಕಾದರೆ ಆ ಬಗ್ಗೆ ಪ್ರಕರಣವೊಂದು ದಾಖಲಾಗಿ ಅದು ನ್ಯಾಯಾಲಯದ ಮುಂದೆ ಬರಬೇಕಾಗುತ್ತದೆ. ಆಗ ನ್ಯಾಯಾಲಯ ಸಾಕ್ಷಿಗಳನ್ನು ಪುರಾವೆಗಳನ್ನು ಕೇಳಬಹುದು. ಅಥವಾ ಇವರೇ ಒಯ್ದು ನ್ಯಾಯಾಲಯಕ್ಕೆ ಸಲ್ಲಿಸಬಹುದು.

ಇಲ್ಲಿ ಪ್ರಕರಣವೇ ದಾಖಲಾಗಿಲ್ಲ. ಹಾಗಿದ್ದ ಮೇಲೆ ಹೋರಾಟಗಾರರು ನ್ಯಾಯಾಲಯಕ್ಕೆ ತಮ್ಮಲ್ಲಿರುವ ಸಾಕ್ಷಿ ಪುರಾವೆಗಳನ್ನು ಹೇಗೆ ಸಲ್ಲಿಸಲು ಬರುತ್ತದೆ? ಹಾಗಾದರೆ ಇಲ್ಲಿ ಪ್ರಕರಣ ದಾಖಲಿಸಬೇಕಾದವರು ಯಾರು? ಈ ಹೋರಾಟಗಾರರು ಅಲ್ಲ. ಏಕೆಂದರೆ ಅವರು ʼಪ್ರಕರಣದ ಮರುತನಿಖೆಗೆ ಒತ್ತಾಯಿಸುತ್ತಿದ್ದಾರೆ ಅಂದರೆ  ಇಂಥವರೇ ಕೊಲೆಗಾರರು ಎಂದು ಅವರಿಗೂ ತಿಳಿದಿಲ್ಲ. ಈಗಾಗಲೇ ಈ ಪ್ರಕರಣಲ್ಲಿ ಸಂತೋಷರಾವ್‌ ನಿರಪರಾಧಿ ಎಂದು ಸಾಬೀತಾಗಿ ಹೊರಗೆ ಬಂದಿರುವುದರಿಂದ ಒಂದು ಆ ಪ್ರಕರಣದಲ್ಲಿ ಹಿನ್ನಡೆಯಾದವರು ಮೇಲಿನ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಬೇಕಾಗಿತ್ತು. ಅಥವಾ ಹೋರಾಟಗಾರರು ನಮ್ಮ ಹೆಸರನ್ನು ಹೇಳುತ್ತಿದ್ದಾರೆ ಅದರಿಂದ ನಮಗೆ ಅವಮಾನವಾಗಿದೆ ನಮ್ಮ ಘನತೆ ಗೌರವಗಳಿಗೋ ನಮ್ಮ ಪೂಜ್ಯರ ವ್ಯಕ್ತಿತ್ವಕ್ಕೋ ಹಾನಿ ಆಗಿದೆ ಎಂದೋ  ಹಾಗೆ ಭಾವಿಸುವವರು ಪ್ರಕರಣ ದಾಖಲಿಸಬೇಕು. ಇವೆರಡೂ ಆಗಿಲ್ಲ. ನ್ಯಾಯಾಲಯ ಕೇಳಿದರೂ ದಾಖಲೆ ಕೊಡದೇ ಇದ್ದದ್ದು ಇದೆಯೇ? ಇಲ್ಲ.  ಹೀಗಾಗಿ ಇವರೆಲ್ಲ ಹೋರಾಟಗಾರರ ಬಗ್ಗೆ  ಮಾಡುತ್ತಿರುವ ಈ ಆರೋಪ ಹುರುಳಿಲ್ಲದ್ದು ಮತ್ತು ಸಾಮಾನ್ಯ ಜನರನ್ನು ಹಾದಿತಪ್ಪಿಸುವಂಥದ್ದು! ಇದೀಗ ಈ ವಿಡಿಯೋ ಪ್ರಕರಣ ಕುರಿತು ಈಗ ಎಫ್‌ ಐ ಆರ್‌ ದಾಖಲಾಗಿರುವುದರಿಂದ ಮುಂದಿನ ಬೆಳವಣಿಗೆಗಳನ್ನು ಕಾಯ್ದುನೋಡಬೇಕಷ್ಟೆ.

ʻಧರ್ಮಸ್ಥಳʼ ಎಂದರೆ ಕೇವಲ ʻಮಂಜುನಾಥಸ್ವಾಮಿ ದೇವಸ್ಥಾನʼ ಅಷ್ಟೇ ಅಲ್ಲ; ಕೇವಲ ಅಲ್ಲಿನ ಧರ್ಮಾಧಿಕಾರಿ ಅಷ್ಟೇ ಅಲ್ಲ.  ಅದೊಂದು ಊರು. ಅಲ್ಲಿ ಎಲ್ಲ ಊರುಗಳ ಹಾಗೆಯೇ ಈ ದೇವಸ್ಥಾನ, ಧರ್ಮಾಧಿಕಾರಿಗಳು ಇವರ ಹೊರತಾಗಿಯೂ ಒಂದು ಜನಜೀವನ ಇದೆ. ಅದಕ್ಕೂ ಅಸ್ತಿತ್ವವಿದೆ ಎಂಬುದನ್ನು ನಾವು ಮರೆಯಬಾರದು. ಹಾಗಾಗಿ ʼಧರ್ಮಸ್ಥಳʼದ ಬಗ್ಗೆ ಯಾರಾದರೂ ಮಾತನಾಡಿದರೆ ಅದನ್ನು ನಮಗೇ ಅಂದದ್ದು ಎಂದು ಯಾರಾದರೂ ಮೈಮೇಲೆ ಎಳೆದುಕೊಳ್ಳುವುದು ಹುಚ್ಚುತನವಲ್ಲದೆ ಬೇರೇನೂ ಅಲ್ಲ. ಒಂದು ವೇಳೆ ಬಹಳಷ್ಟು ಗೌರವಯುತ ವ್ಯಕ್ತಿಯಾಗಿ ಅಲ್ಲಿನ ಧರ್ಮಾಧಿಕಾರಿ ವ್ಯಾಪಕ ಜನಮನ್ನಣೆ ಪಡೆದು ʼಊರೆಂದರೆ ತಾವಲ್ಲದೆ ಬೇರೇನೂ ಅಲ್ಲʼ ಅನ್ನುವಷ್ಟು ದೊಡ್ಡವರು ಎಂದು ವಾದಕ್ಕೆ ಒಪ್ಪಿಕೊಂಡರೂ ಅವರು ಅಥವಾ ಅವರ ಹಿಂಬಾಲಕ ಅಥವಾ ಅಭಿಮಾನಿ ಪಡೆ ಅಲ್ಲಿ ನಡೆದಿರುವ ಕೊಲೆ ಅತ್ಯಾಚಾರ ಇಂಥವುಗಳನ್ನು ತಮಗೆ ತಮ್ಮ ಪೂಜ್ಯರಿಗೆ ಅವಮಾನ ಎಂದು ಭಾವಿಸಬೇಕೋ ಅಥವಾ ಅವುಗಳನ್ನು ಸಾರ್ವಜನಿಕಗೊಳಿಸಿ ಜನಜಾಗೃತಿ ಮಾಡುವಾಗ ತಮ್ಮಮೇಲೆ ಸಂಶಯ ವ್ಯಕ್ತಪಡಿಸಿದ್ದು ಅವಮಾನವೆಂದು ಭಾವಿಸಬೇಕೋ.

ಧರ್ಮಸ್ಥಳದಲ್ಲಿ ಅಲ್ಲಿನ ಧರ್ಮಾಧಿಕಾರಿಗಳ ಪ್ರಭಾವ ಎಷ್ಟು ಎಂಬುದನ್ನು ಹೇಳುವಾಗ ಕೆಲವರು ʻಧರ್ಮಸ್ಥಳದಲ್ಲಿ ಒಂದು ಎಲೆ ಅಲ್ಲಾಡುವುದಾದರೂ ಅದು ಅವರನ್ನು ಕೇಳಿಯೇ ಅಲ್ಲಾಡುವುದುʼ ಎಂದು ಹೇಳುವುದುಂಟು. ಇದು ಅತಿಶಯೋಕ್ತಿ ಇರಬಹುದು. ಆದರೆ ಆ ಊರಿನಲ್ಲಿ ನಡೆಯುವ ಎಲ್ಲ ವಿದ್ಯಮಾನಗಳ ಅರಿವು ಅವರಿಗೆ ಇರುತ್ತದೆ ಆ ಮಟ್ಟಿನ ಸಂಪರ್ಕಜಾಲ ಅವರಿಗೆ ಇದೆ ಎನ್ನುವುದು ಬಹಳಷ್ಟು ಜನರ ಅಭಿಪ್ರಾಯ. ಹೀಗಿದ್ದಮೇಲೆ ಇಂತಹ ಕೆಟ್ಟ ಕೃತ್ಯಗಳು ನಡೆದಾಗ ಅವನ್ನು ಮಾಡಿದವರು ಯಾರು ಎಂಬ ಮಾಹಿತಿ ಅವರಿಗೆ ಬರುವುದಿಲ್ಲವೇ? ಇಡೀ ರಾಜ್ಯದ ಜನರ ರಾಜಿ ಪಂಚಾಯತಿ ಮಾಡುವ ಧರ್ಮಾಧಿಕಾರಿಗಳು ತಮ್ಮ ಊರಿನಲ್ಲಿಯೇ ಇಂತಹ ಘಟನೆಗಳು ನಡೆದರೆ ಅದು ತಮಗೆ ಅವಮಾನ ಎಂದು ಭಾವಿಸಿ ಅವು ನಡೆಯದಂತೆ ಕ್ರಮ ಕೈಗೊಳ್ಳಬೇಕಲ್ಲವೇ?

ಹಾಗೇ ಮಾಡದಿದ್ದರೆ ಈಡೀ ರಾಜ್ಯದ ಜನ ಅಷ್ಟೇ ಏಕೆ ಹೊರರಾಜ್ಯಗಳ ಜನ ʼಪೂಜ್ಯʼವೆಂದು ಭಾವಿಸುವ ʼಪವಿತ್ರʼವೆಂದು ತಿಳಿಯುವ ಒಂದು ಧರ್ಮಕ್ಷೇತ್ರದಲ್ಲಿ ಇಂತಹ ಹೇಯ ಕೃತ್ಯಗಳು ಒಂದಲ್ಲ ಎರಡಲ್ಲ ಸರಣಿಯಾಗಿ ನಡೆಯುತ್ತವೆ ಎಂದರೆ ಜನ ಅದನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ಅವರ ಮೇಲೆ ಜನ ಇಟ್ಟುಕೊಂಡ ಗೌರವ ಏನಾಗಬೇಡ? ಹಾಗಾಗಿ ಅಲ್ಲಿನ ಧರ್ಮಾಧಿಕಾರಿಗಳಾಗಲಿ ಅವರ ಭಕ್ತಮಂಡಳಿಯಾಗಲೀ ಅಲ್ಲಿನ ಸರಣಿ ಅತ್ಯಾಚಾರ ಕೊಲೆ ಇತ್ಯಾದಿಗಳನ್ನು ತಮಗೆ ಅವಮಾನ ಎಂದು ಭಾವಿಸಬೇಕೆ ಹೊರತು ಯಾರಾದರೂ ಆ ಬಗ್ಗೆ ತಮ್ಮ ಬಗ್ಗೆ ವ್ಯಕ್ತಪಡಿಸುವ ಸಂಶಯವನ್ನಲ್ಲ. ಹೀಗೆ ಸಂಶಯ ಅನುಮಾನಗಳು ಬಂದಾಗ ಆ ಬಗ್ಗೆ ಸೂಕ್ತ ತನಿಖೆ ಆಗಬೇಕು ಅದಕ್ಕೆ ಸಂಬಂಧಪಟ್ಟವರೆಲ್ಲರೂ ಸಹಕರಿಸಬೇಕು. ಹೀಗಾಗಿ ಅಲ್ಲಿನ ಈಗಾಗಲೇ ಅಧಿಕೃತವಾಗಿ ದಾಖಲಾಗಿರುವ ಅಪರಾಧ ಕೃತ್ಯಗಳ ಬಗ್ಗೆ ತನಿಖೆಗೆ ಒತ್ತಾಯಿಸಿದರೆ ಅದನ್ನು ಬೆಂಬಲಿಸಿ ಅವರಿಗೆ ಎಲ್ಲರೂ ಸಹಕರಿಸಬೇಕೇ ಹೊರತು ಅದನ್ನು ʼಇಡೀ ಕ್ಷೇತ್ರಕ್ಕೆ ಮಸಿಬಳಿಯುವ ಕುತಂತ್ರʼ ಎಂದು ಸೋಗಲಾಡಿತನ ಮಾಡಿ ತನಿಖೆಯ ದಿಕ್ಕುತಪ್ಪಿಸಬಾರದು. ಅಷ್ಟಕ್ಕೂ ನಿಜವಾದ ಬಂಗಾರವಾದರೆ ಅದು ಬೆಂಕಿಯಲ್ಲಿ ಹಾಕಿದಾಗ ಅದಕ್ಕೆ ʼಕಳಂಕʼ ಹಿಡಿಯುವುದಿಲ್ಲ; ಬದಲಾಗಿ ಅದು ಮತ್ತಷ್ಟು ಹೊಳಪಾಗುತ್ತದೆ ಎಂದು ಕನ್ನಡದ ಪ್ರಸಿದ್ಧ ವಚನಕಾರ್ತಿ ಅಕ್ಕಮಹಾದೇವಿ ವಚನವೊಂದರಲ್ಲಿ ಹೇಳುತ್ತಾಳೆ. ಆದರೆ ಅದು ನಿಜವಾದ ಬಂಗಾರವಾಗಿರಬೇಕು ಅಷ್ಟೆ!

ಇಷ್ಟಾಗಿಯೂ ಯಾರಾದರೂ ಅಲ್ಲಿನ ದೇವಸ್ಥಾನದ ಬಗ್ಗೆ ಧರ್ಮಾಧಿಕಾರಿಗಳ ಬಗ್ಗೆ ಪೂಜ್ಯ ಭಾವನೆ ಇಟ್ಟುಕೊಳ್ಳುವುದು ಅವರ ವೈಯಕ್ತಿಕ ವಿಚಾರ. ಅದು ಅಪರಾಧವಲ್ಲ; ಅದನ್ನು ನಾವ್ಯಾರೂ ಟೀಕಿಸಬೇಕಿಲ್ಲ. ಆದರೆ ʻಭಕ್ತಿʼಯ ನೆರೆಹಾವಳಿಯಲ್ಲಿ ʻನ್ಯಾಯʼ ಕೊಚ್ಚಿಹೋಗಬಾರದು ಅಷ್ಟೆ!!

*****

ಸೂಚನೆ: ಈ ಲೇಖನದಲ್ಲಿ ಚರ್ಚಿಸಲ್ಪಟ್ಟ ಸಮೀರ್‌ ಅವರ ವಿಡಿಯೋ ನೋಡಲು ಯೂ ಟೂಬಿನ ಈ ಲಿಂಕನ್ನು ಒತ್ತಿ: https://youtu.be/LJsfsDH78BY?feature=shared

******

ಡಾ. ರಾಜೇಂದ್ರ ಬುರಡಿಕಟ್ಟಿ

buradikatti@gmail.com

೦೮-೦೩-೨೦೨೫

(ಅಂತರರಾಷ್ಟ್ರೀಯ ಮಹಿಳಾ  ದಿನ)