ಕಳ್ಳರಿರುವುದು ಕನ್ನಡಿಗರಿಗೆ ಮಾತ್ರ ಏಕೆ ಗೊತ್ತಾಗಬೇಕು?
ತ್ರಿಭಾಷಾ ಸೂತ್ತ ಉತ್ತರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಇರುತ್ತದೆ. ನಾವು ಅಂದರೆ ದಕ್ಷಿಣದವರು ಹಿಂದಿಗೆ ಕೊಡುವ ಕಾಲುಭಾಗ ಗೌರವ ಮಾನ್ಯತೆಗಳನ್ನೂ ಅಲ್ಲಿ ಉತ್ತರದಲ್ಲಿ ಕೊಡುವುದಿಲ್ಲ. ಅವರ ಅಲ್ಪಸ್ವಲ್ಪ ಗೌರವ ಏನಾದರೂ ಇದ್ದರೆ ಅದು ತಮಿಳುನಾಡು ಬಗ್ಗೆ ಮತ್ತು ತಮಿಳು ಭಾಷೆಯ ಬಗ್ಗೆ. ಕನ್ನಡವಂತೂ ಅವರಿಗೆ ಲೆಕ್ಕಕ್ಕೆ ಇಲ್ಲ.
ಈ ಧೋರಣೆ ಒಂದೊಂದು ಕಡೆ ಒಂದೊಂದು ರೀತಿ ಇರುತ್ತದೆ. ಕೇಂದ್ರ ಸರ್ಕಾರದ ರೈಲ್ವೇ ಇಲಾಖೆಯ ಊರುಫಲಕಗಳನ್ನು ಗಮನಿಸಿ. ದಕ್ಷಿಣ ಭಾರತದ ರೈಲ್ವೇನಿಲ್ದಾಣಗಳ ಹೆಸರುಗಳು ಪ್ರಾದೇಶಿಕ ಭಾಷೆ, ಭಾರತದ ಬಹುಜನರ ಭಾಷೆಯಾದ ಹಿಂದಿ, ಮತ್ತು ಜಾಗತಿಕ ಭಾಷೆಯ ಮಾನ್ಯತೆ ಪಡೆದಿರುವ ಇಂಗ್ಲಿಷ್ ಈ ಮೂರರಲ್ಲಿ ಇರುತ್ತವೆ. ಹಾಗಾದರೆ ಪ್ರಾದೇಶಿಕ ಭಾಷೆ ಮತ್ತು ಭಾರತದ ಬಹುಜನರ ಭಾಷೆ ಒಂದೇ ಆಗಿರುವ ಹಿಂದಿ ಪ್ರದೇಶಗಳಲ್ಲಿ ಅವರು ಮೂರನೆ ಭಾಷೆಯನ್ನಾಗಿ ಯಾವುದನ್ನು ಸೇರಿಸುತ್ತಾರೆ? ಉರ್ದು. ಉತ್ತರ ಭಾರತದ ನಿಲ್ದಾಣಗಳ ಬಹುತೇಕ ಹೆಸರುಗಳು ಇರುವುದು ಹಿಂದಿ, ಉರ್ದು ಮತ್ತು ಇಂಗ್ಲಿಷ್ ನಲ್ಲಿ. ಒಟ್ಟಿನಲ್ಲಿ ಮೂರು ಭಾಷೆ ಮಾಡಲು ಉರ್ದು ಸೇರಿಸಿದ್ದಾರೆ. ಉರ್ದು ಸೇರಿಸಿಕೊಳ್ಳಲು ಒಂದು ನಿರ್ದಿಷ್ಠ ಮಾನದಂಡ ಅನುಸರಿಸಿದಂತಿಲ್ಲ. ಏಕೆಂದರೆ ಉರ್ದು ಭಾಷಿಕರು ಕೇವಲ ಉತ್ತರ ಭಾರತದಲ್ಲಿಲ್ಲ ದಕ್ಷಿಣದಲ್ಲೂ ಇದ್ದಾರೆ. ಹಾಗೆ ನೋಡಿದರೆ ಉರ್ದು ಹುಟ್ಟಿದ್ದೇ ದಕ್ಷಿಣದಲ್ಲಿ ಉತ್ತರದಲ್ಲಿ ಅಲ್ಲ!
ಇನ್ನು ದೇಶದ ಬಹಳಷ್ಟು ಜನ ಬರುವ ತೀರ್ಥಕ್ಷೇತ್ರಗಳಲ್ಲಿ ಸ್ಥಳಗಳ ಹೆಸರುಗಳನ್ನು ಭಾರತದ ಎಲ್ಲ ಅಧಿಕೃತ ಭಾಷೆಗಳಲ್ಲಿ ಬರೆಯುವ ಕೆಲಸವನ್ನು ಕೆಲವು ಕಡೆ ಮಾಡಲಾಗಿದೆ. ಅಯೋಧ್ಯೆಯ ಎಲ್ಲ ಪ್ರವಾಸಿ ಸ್ಥಳಗಳಲ್ಲೂ ಕನ್ನಡ ಬಿಟ್ಟು ಉಳಿದ ದಕ್ಷಿಣ ಭಾಷೆಗಳಲ್ಲಿ ಅಲ್ಲಿನ ಹೆಸರನ್ನು ಬರೆದಿದ್ದಾರೆ. ಹಾಗೆ ನೋಡಿದರೆ ರಾಮನನ್ನು ತಲೆಯ ಮೇಲೆ ಹೊತ್ತುಕೊಂಡು ಕುಣಿಯುವರು, ರಾಮನ ಹೆಸರಿನಲ್ಲಿ ಗಲಾಟೆ ಮಾಡುವವರು ಕೇರಳ, ತಮಿಳುನಾಡುಗಳಿಗಿಂತ ಕರ್ನಾಟಕದಲ್ಲಿಯೇ ಹೆಚ್ಚು ಇರುವುದು. ಕನ್ನಡಿಗರೆಲ್ಲರಿಗೆ ಅಲ್ಲದಿದ್ದರೂ ಈ ʻಉದ್ರಿಕ್ತ ರಾಮಭಕ್ತʼರಿಗೆ ಗೌರವ ಕೊಡಲಿಕ್ಕಾದರೂ ಈ ಅಯೋಧ್ಯೆಯವರು ಕನ್ನಡ ವನ್ನು ಬಳಸಬೇಕಿತ್ತಲ್ಲವೇ? ಇದು ಅವರಿಗೆ ಅವಮರ್ಯಾದೆ ಮಾಡಿದಂತೆ ಅಲ್ಲವೆ? ಕರ್ನಾಟಕದವರು ಅಯೋಧ್ಯೆಗೆ ಹೋಗುವುದು ಬೇಡವೇ? ಅಯೋಧ್ಯೆಯ ಸಂಧಿಮೂಲೆಯಲ್ಲಿರುವ ಎಲ್ಲ ದೇವಸ್ಥಾನಗಳನ್ನೂ ನಾನು ಸುತ್ತಾಡಿ ನೋಡಿದೆ. ಎಲ್ಲಕಡೆಯೂ ಇದೇ ಕಥೆ. ಕರ್ನಾಟಕದ ಹನುಮಂತ ಅಲ್ಲಿ ಬೀದಿಬೀದಿಯಲ್ಲಿದ್ದಾನೆ; ಕನ್ನಡ ಇಲ್ಲ!
ಮೊನ್ನೆ ಪ್ರಯಾಗರಾಜ್ ನಲ್ಲಿ ಕುಂಭ ಮೇಳ ನಡೆದ ತ್ರಿಮೇಣಿ ಸಂಗಮದಲ್ಲಿ ಸುತ್ತಾಡಿ ದೋಣಿವಿಹಾರ ಮಾಡಿ ಜನ ಮುಳುಗಿ ಏಳುತ್ತಿದ್ದ ಸ್ಥಳಕ್ಕೆ ದೋಣಿಯಲ್ಲಿಯೇ ಹೋಗಿ ಅವರು ಮುಳುಗಿ ಏಳುವುದನ್ನೂ ಒಬ್ಬರು ಗಲೀಜು ಮಾಡಿದ ನೀರನ್ನು ಇನ್ನೊಬ್ಬರು ತೀರ್ಥವೆಂದು ಕುಡಿಯುವುದನ್ನೂ ಕ್ಯಾನುಗಳಿಗೆ ತುಂಬಿಕೊಂಡು ಹೋಗುವುದನ್ನು ಹತ್ತಿರದಿಂದ ನೋಡಿ ನಾನು ಅವೆರಡನ್ನೂ ಮಾಡದೆ ನೀರಿನಲ್ಲಿ ಗಲೀಜು ಹೆಕ್ಕಿ ತೆಗೆಯುತ್ತಿದ್ದ ಉತ್ತರ ಪ್ರದೇಶ ಸರ್ಕಾರದ ವಾಹನ ಚಾಲಕನನ್ನು ಮಾತಾಡಿಸಿ ತೇಲುವ ಮುಳುಗುವ ತೆಂಗಿನಕಾಯಿಗಳು ಪ್ಲಾಸ್ಟಿಕ್ ಬ್ಯಾಗುಗಳು, ಹೂವುಗಳು ಇತ್ಯಾದಿ ನೋಡುತ್ತಾ ದೋಣಿ ಇಳಿದು ಯಮುನಾ ನದಿ ದಂಡೆಯ ಮೇಲೆಯೇ ಇದ್ದ ಈಗ ಬಹುಪಾಲು ನಮ್ಮ ಸೇನೆಯ ವಶದಲ್ಲಿರುವ ಅಕ್ಬರನ ಅಲಹಾಬಾದ್ ಕೋಟೆ, ಅದಕ್ಕೆ ಹೊಂದಿಕೊಂಡೇ ಇರುವ ಇತಿಹಾಸ ಪ್ರಸಿದ್ಧ ಪಾತಾಳಪುರಿ, ಶ್ರೀರಾಮಚಂದ್ರನ ವನವಾಸದ ಆರಂಭದಲ್ಲಿ ಅವನು ತಮ್ಮ ಮತ್ತು ಹೆಂಡತಿಯೊಂದಿಗೆ ಪ್ರಯಾಗರಾಜ್ ಗೆ ಬಂದಾಗ ಅವನಿಗೆ ಚಿತ್ರಕೂಟಕ್ಕೆ ಹೋಗಿ ಅತ್ರಿಮುನಿಗಳನ್ನು ಕಾಣುವಂತೆ ಹೇಳಿದ ಭಾರಧ್ವಜ ಮುನಿಯ ಆಶ್ರಮ ನೋಡಿಕೊಂಡು ಬರುತ್ತಿದ್ದೆ.
ದಾರಿಯಲ್ಲಿಯೇ ಇರುವ ʻಅಲೋಪಶಂಕರಿ ದೇವಸ್ಥಾನʼದ ಹತ್ತಿರ ಗಾಡಿ ನಿಲ್ಲಿಸಿದ ನನ್ನ ಡ್ರೈವರ್ ಒಳಗೆ ಹೋಗಿ ಬರಲು ಸಲಹೆ ಮಾಡಿದ. ʻಇಂತಹ ನೂರಾರು ದೇವಸ್ಥಾನಗಳು ನಮ್ಮ ಊರುಗಳಲ್ಲಿಯೇ ಇವೆ ಬಿಡಪ್ಪ ಇವನ್ನು ನೋಡಲಿಕ್ಕೆ ಇಲ್ಲಿಗೆ ಬರಬೇಕಾ?ʼ ಎಂಬ ಉದಾಶೀನತೆಯಿಂದಲೇ ನಾನು ಗಾಡಿ ಇಳಿದು ಒಳಗೆ ಹೋದೆ. ಸಂತೋಷಕ್ಕೆ ತಪ್ಪುತಪ್ಪಾಗಿಯಾದರೂ ʻಕುಡಿಯುವ ನೀರುʼ ಎಂದು ಉಳಿದ ಭಾಷೆಗಳ ಜೊತೆಗೆ ಕನ್ನಡದಲ್ಲಿಯೂ ಫಲಕವನ್ನು ಬರೆದದ್ದನ್ನು ನೋಡಿ ನೀರು ಕುಡಿದಷ್ಟೇ ಸಮಾಧಾನವಾಯಿತು.
ಹಾಗೇ ಒಳಗೆ ಹೋಗಿ ದೇವರನ್ನು ಒಂದು ಸುತ್ತು ಹಾಕಿಕೊಂಡು ಬರೋಣವೆಂದು ಹೋಗಿ ಸುತ್ತು ಹೊಡೆಯುವಾಗ ನನಗೆ ಆಶ್ಚರ್ಯವೆಂಬಂತೆ ಬೇರೆ ಯಾವ ಭಾಷೆಯಲ್ಲೂ ಇಲ್ಲದ ಶುದ್ಧವಾಗಿ ಕೈಯಲ್ಲಿ ಬರೆದು ಹಾಕಿದ ಒಂದು ಸೂಚನಾ ಫಲಕವಿತ್ತು. ಅದನ್ನು ಕುತೂಹಲದಿಂದ ಓದಿದೆ: ಅದು ಹೀಗಿತ್ತು: “ದೇವಸ್ಥಾನದ ಆವರಣದಲ್ಲಿ ಕಳ್ಳರಿದ್ದಾರೆ ಜಾಗ್ರತೆ. ತಮ್ಮ ಅಮೂಲ್ಯ ವಸ್ತುಗಳಿಗೆ ತಾವೇ ಜವಾಬ್ದಾರರು. ಕಳ್ಳರಿದ್ದಾರೆ ಎಚ್ಚರಿಕೆ.”
ಇಂತಹ ಬೋರ್ಡುಗಳನ್ನು ನೋಡಿಯೇ ನನಗೆ ದೇವರ ಮೇಲಿದ್ದ ನಂಬಿಕೆ ಹೊರಟುಹೋದದ್ದು. ಒಮ್ಮೆ ಧರ್ಮಸ್ಥಳಕ್ಕೆ ಯಾರನ್ನೋ ಭಕ್ತರನ್ನು ಕರೆದುಕೊಂಡು ಡ್ರೈವರ್ ಆಗಿ ಹೋದಾಗ ಅವರು ಮಂಜುನಾಥ ಸ್ವಾಮಿಯ ದರ್ಶನ ಮತ್ತು ಪ್ರಸಾದಕ್ಕೆಂದು ಒಳಗೆ ಹೋದಾಗ ಅಲ್ಲಿನ ದೇವಸ್ಥಾನದ ಆವರಣದಲ್ಲಿನ ಹುಲ್ಲುಹಾಸಿನ ಮೇಲೆ ಕುಳಿತಿದ್ದೆ. ಅಲ್ಲಿಯೂ ಇಂಥದ್ದೇ ಸೂಚನಾ ಫಲಕವಿತ್ತು. ಅದನ್ನು ನೋಡಿ ದೇವರು ಇಡೀ ಜಗತ್ತನ್ನು ಕಾಯುತ್ತಾನೆ ನಮ್ಮನ್ನೂ ನಮ್ಮ ವಸ್ತುಗಳನ್ನೂ ಕಾಯುತ್ತಾನೆ ಎಂದು ಜನ ಇಲ್ಲಿಗೆ ಬಂದರೆ ಇವರು ನೋಡಿದರೆ ಹೀಗೆ ಬೋರ್ಡು ಹಾಕಿದ್ದಾರಲ್ಲ ಎಂದು ಆಶ್ಚರ್ಯಪಟ್ಟಿದ್ದೆ.
ಆರ್ಯಸಮಾಜದ ಸ್ಥಾಪಕರಾದ ಸ್ವಾಮಿ ದಯಾನಂದ ಸರಸ್ವತೀ ಅವರನ್ನು ಅವರ ಪಾಲಕರು ಚಿಕ್ಕಮಗುವಿದ್ದಾಗ ಒಮ್ಮೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿರುತ್ತಾರೆ. ಅಲ್ಲಿ ದೇವರ ಮೂರ್ತಿಯ ಮೇಲೆ ಇಲಿ ಓಡಾಡಿದ್ದನ್ನು ನೋಡಿದ ಬಾಲಕ ದಯಾನಂದ ನ ಮನಸ್ಸಿನಲ್ಲಿ ಹುಟ್ಟಿದ ಪ್ರಶ್ನೆ,” ತನ್ನ ಮೈಮೇಲಿನ ಇಲಿಗಳನ್ನೇ ಓಡಿಸಿಕೊಳ್ಳಲಾರದ ದೇವರು ಜಗತ್ತಿನ ಜನರ ಸಮಸ್ಯೆಗಳನ್ನು ಹೇಗೆ ಓಡಿಸುತ್ತಾನೆ?” ಎಂಬುದು. ಆದರೂ ಜನರ ನಂಬಿಕೆ ಅನ್ನುವುದು ಬಹಳಷ್ಟು ಗಟ್ಟಿಯಾದದ್ದು!
ಇಂತಹ ಬೋರ್ಡುಗಳು ಈಗ ಎಲ್ಲ ದೇವಸ್ಥಾನಗಳಲ್ಲಿಯೂ ಸಾಮಾನ್ಯವಾಗಿವೆ. ನಮ್ಮ ವಸ್ತುಗಳನ್ನು ನಾವೇ ಕಾಯ್ದುಕೊಳ್ಳುವುದಾದರೆ , ಅವನ್ನು ಕದ್ದವರು ರಕ್ತಕಾರಿ ಸಾಯುವಂತೆ ಮಾಡದಿದ್ದರೆ ಅದು ನಮ್ಮಂಥ ಪರಮಭಕ್ತರಿಗೆ ದೇವರು ಮಾಡುವ ಅವಮಾನವಲ್ಲವೇ? ಎಂದು ಯಾರೂ ಅಂದುಕೊಳ್ಳುವ ಪಾಪ ಮಾಡಲಾರರು. ಅವರ ಶ್ರದ್ಧೆ, ನಂಬಿಕೆ ಅಷ್ಟರ ಮಟ್ಟಿಗೆ ಅಚಲವಾಗಿರುತ್ತದೆ.
ಆದರೆ ಈ ಅಲೋಪಶಂಕರಿ ದೇವಸ್ಥಾನದ ಈ ಬೋರ್ಡನ್ನು ನೋಡಿ ನನಗೆ ಆಶ್ಚರ್ಯವಾದದ್ದು ಏಕೆಂದರೆ ಕುಡಿಯುವ ನೀರಿನ ಸೂಚನೆಯಂತೆ ಇಲ್ಲಿ ಕನ್ನಡದ ಜೊತೆಗೆ ಇತರ ಯಾವುದೇ ಭಾಷೆಗಳಿರಲಿಲ್ಲ. ಕೇವಲ ಕನ್ನಡದಲ್ಲಿ ಮಾತ್ರ ಈ ಕಳ್ಳರ ಸೂಚನೆಯ ಫಲಕ ಇದ್ದದ್ದು ಏಕೆ ಎಂದು. ಸುತ್ತಮುತ್ತ ಕಣ್ಣಾಡಿಸಿದೆ. ಬೇರೆ ಯಾವ ಭಾಷೆಗಳಲ್ಲಿಯೂ ಈ ಕಳ್ಳರ ಎಚ್ಚರಿಕೆಯ ಫಲಕಗಳು ಇರಲಿಲ್ಲ. ನನ್ನಲ್ಲಿ ಮೂಡಿದ ಪ್ರಶ್ನೆಗಳು ಇವು: ಕನ್ನಡಿಗರು ತೀರಾ ಕಡಿಮೆ ಸಂಖ್ಯೆಯಲ್ಲಿ ಬರುವ ಉತ್ತರ ಪ್ರದೇಶದಲ್ಲಿನ ಈ ದೇವಸ್ಥಾನದಲ್ಲಿ ಕಳ್ಳರ ಸೂಚನೆಯ ಬಗ್ಗೆ ದೂರದ ಕರ್ನಾಟಕದ ಭಾಷೆ ಕನ್ನಡದಲ್ಲಿ ಸೂಚನೆ ಹಾಕಲು ಏನು ಕಾರಣವಿರಬಹುದು? ಕಳ್ಳರಿರುವುದು ಕನ್ನಡಿಗರಿಗೆ ಮಾತ್ರ ಏಕೆ ಗೊತ್ತಾಗಬೇಕು?
*****
ರಾಜೇಂದ್ರ ಬುರಡಿಕಟ್ಟಿ
೧೬-೦೫-೨೦೨೫
No comments:
Post a Comment