Monday, May 19, 2025

ಯುದ್ಧತುರಿಕೆಯ ಹೊತ್ತಲ್ಲಿ ಬುದ್ಧನಾಡಲ್ಲಿ ಪಯಣ

ಯುದ್ಧತುರಿಕೆಯ ಹೊತ್ತಲ್ಲಿ ಬುದ್ಧನಾಡಲ್ಲಿ ಪಯಣ

ಡಾ. ರಾಜೇಂದ್ರ ಬುರಡಿಕಟ್ಟಿ

ಸುಜನಾ ಅವರ ʻಯುಗಸಂಧ್ಯಾʼ ಎಂಬ ಮಹಾಕಾವ್ಯ ಮಹಾಭಾರತದ ಯುದ್ಧಾನಂತರದ ಸಾವು ನೋವುಗಳ ಧಾರುಣ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ನೀಡಿ ಯುದ್ಧದ ಪರಿಣಾಮಗಳ ಭೀಕರತೆಯನ್ನು ಮನದಟ್ಟುಮಾಡಿಸುತ್ತದೆ. ಕುವೆಂಪು ಅವರ ʻಸ್ಮಶಾನ ಕುರುಕ್ಷೇತ್ರಂʼ ನಾಟಕವಂತೂ ಈ ಯುದ್ಧಗಳು ಉಂಟುಮಾಡುವ ಕಷ್ಟನಷ್ಟಗಳು, ದುಕ್ಕ ದುಮ್ಮಾನಗಳನ್ನು ಎಳೆಎಳೆಯಾಗಿ ಬಿಡಿಸಿ ಹೇಳುತ್ತದೆ. ಸಾರಾ ಅಬೂಬಕ್ಕರ್‌ ಅವರ ʼಯುದ್ಧʼ ಕಥೆ ಈ ಯುದ್ಧದಲ್ಲಿ ಸಿಕ್ಕಿಹಾಕಿಕೊಂಡ ಸಾಮಾನ್ಯ ಕುಟುಂಬವೊಂದರ ಸಂಕಟವನ್ನು ಮನಸ್ಸಿಗೆ ತಟ್ಟುವಂತೆ ಕಟ್ಟಿಕೊಡುತ್ತದೆ ಮತ್ತು ವೈರತ್ವದ ಗಡಿರೇಖೆಗಳನ್ನೂ ಮೀರಿ ಮಾನವೀಯತೆ ಹೇಗೆ ಕೆಲಸ ಮಾಡಬೇಕು ಎಂಬುದನ್ನು ಎತ್ತಿತೋರಿಸುತ್ತದೆ. ಇಂತಹ ಸಾಹಿತ್ಯ ಕೃತಿಗಳನ್ನು ಓದಿಕೊಂಡವರು ಹಾಗಲ್ಲದಿದ್ದರೂ ಕೊನೆಯ ಪಕ್ಷ ಅವನ್ನು ಕೇಳಿ ತಿಳಿದವರು, ಅವುಗಳಿಂದ ಪ್ರಭಾವಿತರಾದವರು ಯುದ್ಧದ ಕರಾಳತೆಯನ್ನು ಚೆನ್ನಾಗಿಯೇ ಯೋಚಿಸಬಲ್ಲರು. ಹೀಗಾಗಿಯೇ ಭಾರತ ಪಾಕಿಸ್ತಾನಗಳು ಇತ್ತೀಚೆಗೆ ತುದಿಗಾಲಿನಲ್ಲಿ ಯುದ್ದಕ್ಕೆ ನಿಂತಿರುವ ಸಂದರ್ಭದಲ್ಲಿ ಅವರು ಭಾರತ ಯುದ್ದಕ್ಕೆ ಮುನ್ನುಗ್ಗುವುದನ್ನು ಬೆಂಬಲಿಸಲಿಲ್ಲ. ಹಾಗಾಗಿ ಅವರೆಲ್ಲ ʻಯುದ್ಧ ಬೇಡʼ ಎಂದೇ ಹೇಳಿದರು.

ಆದರೆ ಅಂಥವರನ್ನೆಲ್ಲ ʻಹೇಡಿಗಳುʼ ಎಂದೋ ʼದೇಶ ವಿರೋಧಿಗಳುʼ ಎಂದೋ ಬಿಂಬಿಸಿ ಹಳಿಯುವ ದೊಡ್ಡ ʻದೇಶಭಕ್ತ ಜನವರ್ಗʼವೊಂದು ನಮ್ಮಲ್ಲಿ ಸಕ್ರಿಯವಾಗಿದೆ. ಈ ಜನವರ್ಗವನ್ನು ಒಂದು ದೇಶಪ್ರೇಮಿ ವರ್ಗ ಅನ್ನುವುದಕ್ಕಿಂತ ʻರಾಜಕೀಯ ಪ್ರೇರಿತ ಜನವರ್ಗʼ ಎನ್ನುವುದೇ ಸರಿ. ಏಕೆಂದರೆ ಈ ವರ್ಗದವರ ಆಲೋಚನೆಯಲ್ಲಿ ಒಂದು ದೃಢತೆಯಾಗಲೀ ಸ್ಪಷ್ಟತೆಯಾಗಲೀ ಇದ್ದಂತಿಲ್ಲ. ವಿಚಾರವಾದಿಗಳು ʻಯುದ್ಧ ಬೇಡʼ ಎನ್ನುವಲ್ಲಿ ಅವರಿಗೆ ತಮ್ಮ ಆಲೋಚನೆಯ ಬಗ್ಗೆ ಒಂದು ದೃಢತೆ ಮತ್ತು ಸ್ಪಷ್ಟತೆ ಇದೆ. ಅದನ್ನು ಒಪ್ಪಿಕೊಳ್ಳುವುದು ಬಿಡುವುದು ಬೇರೆ. ಆದರೆ ಅದಕ್ಕೆ ವಿರುದ್ಧವಾಗಿ ಇವರು ಯಾವಾಗಲೂ ʻಯುದ್ಧ ಬೇಕುʼ ಎನ್ನುವ ವಾದಕ್ಕೆ ಅಂಟಿಕೊಳ್ಳಲಿಲ್ಲ. ಇವರು ಒಪ್ಪಿಕೊಂಡಿರುವ ಜನನಾಯಕರು ಯುದ್ಧಕ್ಕೆ ಮುಂದಾದಾಗ ಇವರೆಲ್ಲ ʻಅದೇ ಸರಿʼ ಎಂದು ವಾದಮಾಡಿದರೆ ಅವರು ಯುದ್ಧದಿಂದ ಹಿಂದಕ್ಕೆ ಹೆಜ್ಜೆ ಇಟ್ಟಾಗ ʻಇದೇ ಸರಿʼ ಎಂದು ಪ್ಲೇಟು ಬದಲಿಸಿ ವಾದಮಾಡಿದರು! ʻಅದು ಒಂದು ತಂತ್ರʼ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು. ಹಾಗೆ ಬಂದರೆ ಹಾಗೆ; ಹೀಗೆ ಬಂದರೆ ಹೀಗೆ! ಇವರೆಲ್ಲ ಮಳೆ ಬಂದ ಕಡೆ ಕೊಡೆ ಹಿಡಿಯುವವರು!



ಯುದ್ಧ ವಾಸ್ತವವಾಗಿ ಗಡಿಯಲ್ಲಿ ನಡೆಯಿತೋ ಇಲ್ಲವೋ ಆದರೆ ನಮ್ಮ ಕೆಲವು ಟಿವಿ ಚಾನೆಲ್‌ ಗಳಂತೂ ಈ ವಿಷಯವನ್ನು ಹಿಡಿದುಕೊಂಡು ದಿನಗಟ್ಟಲೆ ತೌಡುಕುಟ್ಟುತ್ತಾ ತಾವೇ ಸ್ವತಃ ರಣರಂಗದಲ್ಲಿ ನಿಂತು ವರದಿಮಾಡುತ್ತಿರುವಂತೆ ಫೋಜುಕೊಡುತ್ತಾ ಜನರಲ್ಲಿ ಅನಗತ್ಯವಾದ ದ್ವೇಷ ಅಸೂಯೆ, ಕೋಪಗಳಂತಹ ನಕಾರಾತ್ಮಕ ಭಾವನೆಗಳು ಉದ್ಧೀಪನವಾಗುವಂತೆ ಮಾಡಿ ನಮ್ಮ ನಮ್ಮಲ್ಲಿಯೇ ʻಮೌಖಿಕಯುದ್ಧʼಮಾಡಿಸಿದವು! ಇನ್ನು ನಮ್ಮ ಜನ ಸಾಮಾಜಿಕ ಜಾಲತಾಣದಲ್ಲಿಯಂತೂ ಕಳೆದ ಮೂರುನಾಲ್ಕು ವಾರಗಳ ಕಾಲ ʻಅಕ್ಷರಯುದ್ಧʼ ಮಾಡಿ ಈಗ ಪ್ರಕ್ಷುಬ್ಧ ಸಾಗರವು ಶಾಂತವಾಗುವಂತೆ ಆಗಿದ್ದಾರೆ. ಅದರಲ್ಲಿ ನಮ್ಮ ಕೆಲವು ʻದೇಶಭಕ್ತʼರಂತೂ ತಾವೇ ಈಗ ಯುದ್ಧಭೂಮಿಗೆ ಹೊರಡಲು ಸಿದ್ಧರಿರುವವರಂತೆ ತೊಡೆತಟ್ಟಿ ವೀರಾವೇಶ ತೋರುತ್ತಿದ್ದದ್ಧಂತೂ ಬಹಳ ತಮಾಸೆಯಾಗಿ ಕಾಣುತ್ತಿತ್ತು. ಬಹುಶಃ, ಪ್ರಜಾಪ್ರಭುತ್ವ ವ್ಯವಸ್ಥೆಯೊಂದರ ಅಂಗವಾಗಿರುವ ದೇಶದ ಪ್ರಜೆಗಳಿಗೆ ಹಾಗೆ ನೇರವಾಗಿ ಯುದ್ಧದಲ್ಲಿ ಭಾಗವಹಿಸಲು ಆಗುವುದಿಲ್ಲವೆಂಬ ಖಾತರಿಯಿಂದಲೇ ಇವರು ಹೀಗೆಲ್ಲ ಮಾಡಿದ್ದೂ ಇದ್ದೀತು! ಇವರೆಲ್ಲರದೂ ಯುದ್ಧಪ್ರೇರಿತ ರಾಷ್ಟ್ರಭಕ್ತಿ. ಯುದ್ಧರಂಗದಿಂದ ಸಾಕಷ್ಟು ದೂರದಲ್ಲಿ ಸುರಕ್ಷಿತ ಅಂತರದಲ್ಲಿ ನಿಂತುಕೊಂಡು ಈ ಯುದ್ಧಪ್ರೇರಿತ ದೇಶಭಕ್ತಿಯನ್ನು ಮೈಮೇಲೆ ಆವಾಹಿಸಿಕೊಂಡು ನಾವು ಯುದ್ಧಹುಮ್ಮಸ್ಸನ್ನು ತೋರುವುದು ಬೇರೆ; ಯುದ್ಧರಂಗದಲ್ಲಿ ಸಿಕ್ಕಿಹಾಕಿಕೊಂಡು ನಮ್ಮದಲ್ಲದ ತಪ್ಪಿಗಾಗಿ ನಾವು ನರಳಾಡುವುದು ಬೇರೆ. ಬಹುತೇಕ ಯುದ್ಧಗಳು ನಡೆದಾಗ ಅವುಗಳಿಂದ ಸಂಕಷ್ಟಕ್ಕೆ ಈಡಾಗುವ ಬಹುತೇಕ ಜನ ಯುದ್ಧಕ್ಕೆ ಯಾವರೀತಿಯಿಂದಲೂ ಕಾರಣವಲ್ಲದ ಅಮಾಯಕರೇ ಆಗಿರುತ್ತಾರೆ; ಅದು ಯಾವ ಕಡೆಗೇ ಆಗಲಿ. ಆದರೆ ಯುದ್ಧಪ್ರೇರಿತ ರಾಷ್ಟ್ರಭಕ್ತಿಯ ಸಾಮಾನ್ಯ ಲಕ್ಷಣ ಎಂದರೆ ಹೀಗೆ ತಮ್ಮದಲ್ಲದ ತಪ್ಪಿನಿಂದ ಯುದ್ಧಕ್ಕೆ ಸಿಲುಕಿಕೊಂಡು ಸಾವುನೋವುಗಳನ್ನು ಅನುಭವಿಸುವ ಅಮಾಯಕರ ಬಗೆಗೆ ನಮ್ಮ ಅಂತರಾಳದಲ್ಲಿ ಸಹಜವಾಗಿ ಇರುವ ʻಮಿಡಿಯುವ ಮಾನವೀಯತೆʼಯನ್ನು ಕೊಂದುಹಾಕುವುದು! ಮತ್ತು ʻದೇಶಭಕ್ತಿʼಯ ಹೆಸರಿನಲ್ಲಿ ನಮ್ಮನ್ನು ಎಷ್ಟು ಸಾಧ್ಯವೋ ಅಷ್ಟು ಕ್ರೂರಿಗಳನ್ನಾಗಿ ಮಾಡುವುದು!

ಹೀಗೆ ಒಂದು ವ್ಯವಸ್ಥೆಯೆಲ್ಲ ಯುದ್ಧದ ತುರಿಕೆ ಹಚ್ಚಿಕೊಂಡು ಮೈಕೈ ಕೆರೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಯುದ್ಧದ ಕಾರಣದಿಂದಲೇ, ʻಯುದ್ಧ ಬೇಡʼ ಎಂದದ್ದಕ್ಕೇ ಮನೆಬಿಡಬೇಕಾಗಿ ಬಂದ ಮತ್ತು ಆ ಮೂಲಕ ತನ್ನ ದೀರ್ಘ ತಪಸ್ಸಿನ ಮೂಲಕ ಈ ಜಗತ್ತನ್ನು ಕಾಡುತ್ತಿರುವ ಸಮಸ್ಯೆಗಳನ್ನು ದೇವರ ಸಹಾಯವಿಲ್ಲದೇ ಮನುಷ್ಯರಾದ ನಾವೇ ನಮ್ಮ ತಿಳಿವಳಿಕೆ ಮತ್ತು ಪರಿಶ್ರಮ ಪೂರ್ಣ ಕಾರ್ಯಗಳಿಂದ ಬಗೆಹರಿಸಿಕೊಳ್ಳಬಹುದು ಮಾತ್ರವಲ್ಲ ಬಗೆಹರಿಸಿಕೊಳ್ಳಬೇಕುʼ ಎಂಬ ಅಭೂತಪೂರ್ವ ಸಂದೇಶವನ್ನು ಜಗತ್ತಿಗೆ ಮೊಟ್ಟಮೊದಲ ಬಾರಿಗೆ ಸಾರಿ ಹೇಳಿದ ಜಗತ್ತುಕಂಡ ಮಹಾನ್‌ ಚಿಂತಕ, ದಾರ್ಶನಿಕ ಗೌತಮ ಬುದ್ಧನ ನಾಡಿನಲ್ಲಿ ನಾನು ಮತ್ತು ನನ್ನ ಹೆಂಡತಿ ತಿರುಗಾಡುತ್ತಿದ್ದೆವು. ಈ ವರ್ಷದ ಬುದ್ಧಪೂರ್ಣಿಮೆಯ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸಲೆಂದು ಸಿದ್ಧಾರ್ಥನಿಗೆ ಜ್ಞಾನೋದಯವಾಗಿ ಬುದ್ಧನಾದ ಎಂದು ಹೇಳಲಾಗುವ ಬಿಹಾರ ರಾಜ್ಯದ ಗಯಾ ಜಿಲ್ಲೆಯ ಬೋಧಗಯಾದ ಭೋಧಿವೃಕ್ಷ ಸ್ಥಳಕ್ಕೆ (ಮಹಾಬೋಧಿ ವಿಹಾರ) ಹೋಗಿದ್ದೆವು. ಅಲ್ಲಿಗೆ ಬರುವುದಕ್ಕೂ ಹಿಂದಿನ ದಿನ ಬುದ್ಧನು ಮೊಟ್ಟಮೊದಲು ತನ್ನ ಬೋಧನೆಯನ್ನು ಆರಂಭ ಮಾಡಿದ ಉತ್ತರ ಪ್ರದೇಶದ ವಾರಣಾಸಿ ಬಳಿಯ ಸಾರಾನಾಥಕ್ಕೂ ಹೋಗಿ ಅಲ್ಲಿನ ದೇವಾಲಯಗಳು ಸ್ಥೂಪ ಮತ್ತು ನವೀಕೃತ ಕೃತಕ ಅಶೋಕಸ್ಥಂಭ ಇವುಗಳ ದರ್ಶನ ಮಾಡಿಕೊಂಡು ಬಂದಿದ್ದೆವು.

ನಾವು ಬೆಳಿಗ್ಗೆ ಗಯಾದಿಂದ ಬೋಧಗಯಾಕ್ಕೆ ಹೋಗಬೇಕಾಗಿತ್ತು. ಗಯಾದಿಂದ ಸುಮಾರು ಹದಿನೈದು ಕಿಲೋ ಮೀಟರ್‌ ದೂರದಲ್ಲಿರುವ ಬೋಧಗಯಾಕ್ಕೆ ಹೋಗಲಿಕ್ಕೆ ಬಸ್ಸುಗಳ ಮತ್ತು ಸವಾರಿ ಆಟೋಗಳ ವ್ಯವಸ್ಥೆ ಇದೆಯಾದರೂ ಅವು ನಮ್ಮ ಅನುಕೂಲಕ್ಕೆ ಹೊಂದಿಕೆ ಆಗದಿದ್ದಕ್ಕೆಇಡೀ ದಿನಕ್ಕೆ ಒಂದೂವರೆ ಸಾವಿರ ಕೊಟ್ಟು ಒಂದು ಆಟೋ ಗೊತ್ತುಮಾಡಿಕೊಂಡು ಹೊರಟೆವು. ಬೋಧಗಯಾಕ್ಕೆ ಹೋದಾಗ ಬೆಳಿಗ್ಗೆ ಎಂಟುಗಂಟೆಯಾಗಿತ್ತಾದರೂ ನಮ್ಮಲ್ಲಿ ಮಧ್ಯಾಹ್ನ ಹನ್ನೆರಡು-ಒಂದು ಗಂಟೆಯ ವೇಳೆ ಇರುವ ಬಿಸಿಲು ಇತ್ತು. ಬುದ್ಧಪೂರ್ಣಿಮೆಯ ದಿನವನ್ನು ಆಚರಿಸಲು ಇಡೀ ಬೋಧಗಯಾ ಅಲಂಕೃತಗೊಂಡಿತ್ತು.

ನಾವು ಬೋಧಗಯಾದಲ್ಲಿ ಮೊದಲು ಹೋದದ್ದು ಬೃಹತ್‌ ಬುದ್ಧನ ವಿಗ್ರಹವನ್ನು. ಈ ವಿಗ್ರಹ ಇಡೀ ಬೋಧಗಯಾದ ಒಂದು ಮಹತ್ವದ ಆಕರ್ಷಣ ಸ್ಥಳ. ೧೯೮೯ ರಲ್ಲಿ ಜಪಾನಿನ ದಾನಿಯೊಬ್ಬರು ಈ ವಿಗ್ರಹವನ್ನು ಮಾಡಿಸಿದ್ದಾರೆ. ಹಣಕಾಸಿನ ಖರ್ಚು ಅವರದ್ದಾದರೂ ಅದನ್ನು ಕೆತ್ತಿದವರು ನಮ್ಮ ಉತ್ತರ ಪ್ರದೇಶದ ಶಿಲ್ಪಿಗಳು. ಉದ್ಘಾಟಿಸಿದ್ದು ದಲಾಯಿಲಾಮ. ಈ ಬೃಹತ್‌ ಬುದ್ಧನ ವಿಗ್ರಹದ ಪಕ್ಕದಲ್ಲಿಯೇ ಆತನ ಪ್ರಥಮ ಹಂತದ ಐದು ಜನ ಶಿಷ್ಯರ ಶಿಲಾಮೂರ್ತಿಗಳನ್ನೂ ಕೆತ್ತಲಾಗಿದೆ. ಅವೂ ಸಾಕಷ್ಟು ದೊಡ್ಡ ಮೂರ್ತಿಗಳೇ ಆದರೂ ಬುದ್ಧನ ಮೂರ್ತಿ ಅತ್ಯಂತ ದೊಡ್ಡದಿರುವುದರಿಂದ ಅದರ ಪಕ್ಕ ಅವು ತುಸು ಚಿಕ್ಕವಾಗಿ ಕಾಣುತ್ತವೆ ಅಷ್ಟೆ. ನಾವು ಹೋದಾಗ ಈ ಬೃಹತ್‌ ಬುದ್ಧನ ಮೂರ್ತಿಗೆ ಏನೋ ರಿಪೇರಿ ಕೆಲಸವೋ ಅಥವಾ ಹೆಚ್ಚುವರಿ ನಿರ್ವಹಣೆಯ ಕೆಲಸವೋ ನಡೆಯುತ್ತಿತ್ತಾದ್ದರಿಂದ ಅದರ ಎದುರು ನಿಂತು ಫೋಟೋ ತೆಗೆಸಿಕೊಳ್ಳುವ ನಮ್ಮ ಚಿಕ್ಕ ಆಸೆಗೆ ಆರಂಭದಲ್ಲಿ ತಣ್ಣೀರೆರಚಿದಂತೆ ಆಯಿತಾದರೂ ಅದು ತಕ್ಷಣವೇ ಬರೆಹರಿಯಿತು. ಅಲ್ಲಿಯೇ ಇದ್ದ ವೃತ್ತಿಛಾಯಾಗ್ರಾಹಕನೊಬ್ಬನ ಸಹಾಯವನ್ನು ಕೇಳಿದಾಗ ಅವನು ನಾನು ಮತ್ತು ನನ್ನ ಹೆಂಡತಿಯನ್ನು ಅದೇ ಮೂರ್ತಿಯ ಎದುರು ನಿಲ್ಲಿಸಿ ಆ ಕಂಬಿಗಳು ಬರದಂತೆಯೋ ಅಥವಾ ಮೊದಲೇ ತೆಗೆದಿದ್ದ ಬುದ್ಧನ ಮೂರ್ತಿಗೆ ನಮ್ಮ ಫೋಟೋ ಜೋಡಿಸಿಯೋ ಒಟ್ಟಿನಲ್ಲಿ ಹತ್ತು ನಿಮಿಷಗಳಲ್ಲಿ ನಮಗೆ ಎಂತಹ ಫೋಟೋ ಬೇಕಿತ್ತೋ ಅಂಥದ್ದನ್ನು ಮಾಡಿಕೊಟ್ಟ! ಅವನ ಕೈಗೆ ಎರಡು ನೂರು ರೂಪಾಯಿ ಇಟ್ಟು ಫೋಟೋ ತೆಗೆದುಕೊಂಡು ಮುಂದೆ ಹೊರಟೆವು.

ಬೋಧಗಯಾದಲ್ಲಿ ಸುತ್ತಾಡುವುದು ಅಂದರೆ ಬೌದ್ಧದರ್ಮದ ಪ್ರಭಾವವಿರುವ ಆಗ್ನೇಯ ಏಷ್ಯಾದ ರಾಷ್ಟ್ರಗಳನ್ನೆಲ್ಲ ಒಂದು ಸುತ್ತುಹಾಕಿಕೊಂಡು ಬಂದ ಸಣ್ಣ ಅನುಭವವಾಗುತ್ತದೆ. ಇಲ್ಲಿ ಭೂತಾನ್‌, ಜಪಾನ್‌, ಮೈನ್ಮಾರ್‌, ಟಿಬೇಟ್‌, ಥೈಲ್ಯಾಂಡ್‌, ಕೋರಿಯಾ, ಚೀನಾ, ಶ್ರೀಲಂಕಾ ಒಳಗೊಂಡಂತೆ ಅನೇಕ ದೇಶಗಳ ಜನರು ಸೇರುತ್ತಾರೆ. ಆ ದೇಶಗಳಲ್ಲಿ ಕೆಲವು ದೇಶಗಳ ಮಾಂಟೇಸರಿಗಳೂ ಇಲ್ಲಿವೆ. ಆಯಾ ದೇಶಗಳ ಸಂಸ್ಕೃತಿಯನ್ನು ಅನುಸರಿಸಿ ಇವು ಅಲ್ಪಸ್ವಲ್ಪ ಭಿನ್ನವಾಗಿ ರಚಿತವಾಗಿವೆಯಾದರೂ ಒಟ್ಟಾರೆಯಾಗಿ ನೋಡಿದರೆ ಬಹಳಷ್ಟು ವ್ಯತ್ಯಾಸವೇನೂ ಕಾಣುವುದಿಲ್ಲ. ಅಲ್ಲೆಲ್ಲ ಆಯಾ ದೇಶಗಳಲ್ಲಿನ ಬೌದ್ಧಧರ್ಮೀಯ ಆಚರಣೆಗಳು ನಡೆಯುತ್ತವೆ.


ಆಯಾ ದೇಶಗಳು ಧರ್ಮಗುರುಗಳು ಜೊತೆಗೆ ಒಂದಿಷ್ಟು ಜನ ನಮಗೆ ನೋಡಲು ಮತ್ತು ಮಾತನಾಡಲು ಸಿಗುತ್ತಾರೆ. ಇವುಗಳಲ್ಲಿ ಒಂದಂತೂ ಬಹಳಷ್ಟು ಗಮನ ಸೆಳೆಯಿತು. ಅದರಲ್ಲಿ ಬುದ್ಧನ ವಿವಿಧ ಭಂಗಿಗಳ ಒಂದು ಸಾವಿರ ಮೂರ್ತಿಗಳನ್ನು ಕಟ್ಟಡದ ಒಳಗೋಡೆಗೆ ಜೋಡಿಸಿದ್ದಾರೆ. ಈ ಸಾವಿರ ಬುದ್ಧಮೂರ್ತಿಗಳೂ ಒಂದರಂತೆ ಇನ್ನೊಂದಿಲ್ಲ. ತುಸುವಾಧರೂ ಭಿನ್ನವಾಗಿವೆ; ಅನನ್ಯವಾಗಿವೆ! ನಾವು ಹೀಗೆ ವಿವಿಧ ರಾಷ್ಟ್ರಗಳ ಮಾಂಟೇಸರಿಗಳನ್ನು ನೋಡಿಕೊಂಡು ಎಲೆಲ್ಲೂ ಇರುವ ಬೃಹತ್‌ ಗಾತ್ರದ ಬುದ್ಧನ ಮೂರ್ತಿಗಳಿಗೆ ಒಂದೊಂದು ನಮಸ್ಕಾರ ಮಾಡಿ ಅಲ್ಲೆಲ್ಲ ಒಂದಿಷ್ಟು ಹೊತ್ತು ಕೂತೆದ್ದು ಬಂದೆವು.

ಈ ವರ್ಷದ ಬುದ್ಧಪೂರ್ಣಿಮೆಯ ವಿಶೇಷ ಕಾರ್ಯಕ್ರಮಗಳು ಬೆಳಿಗ್ಗೆ ಆರರಿಂದಲೇ ಆರಂಭವಾಗಿದ್ದವು  ಮತ್ತು ಇಡೀ ದಿನ ಅವು ನಡೆಯಲಿದ್ದವು. ನಾವು ವಿವಿಧ ಮಾಂಟೇಸರಿಗಳು ದೇವಾಲಯಗಳು ಎಲ್ಲ ಸುತ್ತಾಡಿ ಬೋಧಿವೃಕ್ಷವಿರುವ ಮಹಾವಿಹಾರ ಸ್ಥಳಕ್ಕೆ ಬರುತ್ತಿದ್ದಂತೆಯೇ ಬಿಹಾರದ ರಾಜ್ಯಪಾಲರು ಕಾರ್ಯಕ್ರಮ ಮುಗಿಸಿ ಹೊರಟರು. ಮೆರವಣಿಗೆಗಾಗಿ ಥೈಲ್ಯಾಂಡ್‌ ದೇಶದವರು ಸಿದ್ಧಗೊಳಿಸಲಾಗಿದ್ದ ಅಲಂಕೃತ ಸಾರೋಟಿನಲ್ಲಿನ ಬುದ್ಧನ ಎದುರು ನಿಂತು ಒಂದು ಫೋಟೋ ತೆಗೆದುಕೊಂಡು ಬೋಧಿವೃಕ್ಷದ ಹತ್ತಿರ ಬಂದೆವು. ಬೋಧಿವೃಕ್ಷದ ಮುಂದೆ ಇರುವ ಪುರಾತನ ಕಾಲದ ದೇವಾಲಯದಲ್ಲಿರುವ ಬುದ್ಧನ ಮೂರ್ತಿಯನ್ನು ನೋಡಲು ಬೇರೆ ಬೇರೆ ದೇಶಗಳಿಂದ ಬಂದು ನಿಂತ ಜನರ ಸಾಲು ಸುಮಾರು ಅರ್ಧ ಕಿಲೋಮೀಟರ್‌ ಗಿಂತ ದೊಡ್ಡದಾಗಿತ್ತು. ನಾವು ಬೇರೆ ಹೊರಗಡೆ ಚಪ್ಪಲಿಬಿಟ್ಟು ಹೋಗಿದ್ದೆವು.

ಮೇ ಬಿಸಿಲು ಬೆಂಕಿಯಂತೆ ಸುರಿಯುತ್ತಿತ್ತು. ಕಾಲಿಟ್ಟರೆ ಅದು ಕಲ್ಲೋ ಅಥವಾ ಅಗ್ನಿಕುಂಡವೋ ಎನ್ನುವ ಅನುಭವ. ಇಂಥದ್ದರಲ್ಲಿ ಜನ ಹಾಗೂ ಹೀಗೂ ಮಾಡಿ ಬುದ್ಧದರ್ಶನಕ್ಕಾಗಿ ಕಾದಿದ್ದರು. ನನಗಂತೂ ಈ ಸಾಲಿನಲ್ಲಿ ನಿಲ್ಲುವುದು ಸಾಧ್ಯವೇ ಇಲ್ಲವೆನ್ನಿಸಿ ಕೆಲವರು ಚಪ್ಪಲಿ, ಶೂ ಸಮೇತ ಇದ್ದದ್ದನ್ನು ನೋಡಿ ಹೊರಗೆ ಹೋಗಿ ಪಾದರಕ್ಷೆಗಳನ್ನು ಹಾಕಿಕೊಂಡಾದರೂ ಬಂದರೆ ನೋಡಬಹುದೇನೋ ಅನ್ನಿಸಿತು. ಆದರೆ ಮುಖ್ಯಧ್ವಾರದಿಂದ ಬಹಳಷ್ಟು ಸಾಗಿ ಬಂದಾಗಿತ್ತು. ಅದರಲ್ಲಿ ಬೇರೆ ಅದು ಒಮ್ಮುಖ ಹಾದಿ ಒಳಬರಲಷ್ಟೇ ಅಲ್ಲಿ ಅವಕಾಶ. ಏನು ಮಾಡುವುದೆಂದು ತಿಳಿಯದೇ ಪರದಾಟ ಶುರುವಾಯಿತು. ಒಳಗೆ ಹೋಗದೆ ಹೋದರೆ ದೊಡ್ಡ ನಷ್ಟವೇನಿಲ್ಲ ಅನ್ನಿಸಿತು. ಆದರೆ ಇಲ್ಲಿಯ ತನಕ ಬಂದು ಹಾಗೇ ಹೋಗುವುದೂ ಸರಿಯಲ್ಲವೆಂದೂ ಅನ್ನಿಸಿತು. ಏನು ಮಾಡುವುದೆಂದು ಯೋಚಿಸುತ್ತಾ ಸಾಲಿನ ಬದಿಯಿಂದ ಈ ಬೃಹತ್‌ ದೇವಾಲಯದ ಹಿಂಭಾಗದಲ್ಲಿರುವ ಶಾಂತವಾದ ಉದ್ಯಾನಕ್ಕೆ ಬಂದು ನೋಡಿದರೆ ನಾವು ಕುತೂಹಲದಿಂದ ನೋಡಲು ಬಂದ ಬೋಧಿವೃಕ್ಷ ಅಲ್ಲಿಯೇ ಇದೆ! ನಾವು ನೋಡಬೇಕಾದದ್ದು ಬುದ್ಧನ ಮೂರ್ತಿಯಾಗಿರಲಿಲ್ಲ. ಅದನ್ನು ಎಲ್ಲ ಮಾಂಟೇಸರಿಗಳಲ್ಲಿ ಮಾತ್ರವಲ್ಲದೇ ಜಪಾನಿನ ದಾನಿಯೊಬ್ಬರು ನಿರ್ಮಿಸಿದ ಈಗಾಗಲೇ ತಿಳಿಸಿದಂತೆ ನೋಡಿಯಾಗಿತ್ತು. ಬೋಧಿವೃಕ್ಷವನ್ನುನೋಡಬೇಕಾಗಿತ್ತು. ಅದು ಸಿಕ್ಕೇಬಿಟ್ಟಿತು! ಒಮ್ಮೊಮ್ಮೆ ತಲೆಕೆಟ್ಟಾಗ ತಲೆಗೆ ಒಳ್ಳೆಯ ವಿಚಾರ ಅದು ಸಣ್ಣದಿದ್ದರೂ ಹೊಳೆಯುವುದಿಲ್ಲ. ಜನರ ಉದ್ದದ ಸಾಲು ನೋಡಿ ನಾವು ಕಂಗಾಗಲಾದದ್ದು ನಿಜವಾದರೂ ಬೋಧೀವೃಕ್ಷವನ್ನು ದೇವಸ್ಥಾನದ ಒಳಗೆ ಇಟ್ಟಿರಲು ಸಾಧ್ಯವಿಲ್ಲ ಅದು ಹೊರಗೇ ಇರಬಹುದು ಎಂಬ ಚಿಕ್ಕವಿಚಾರಕ ಕೂಡ ಆಗ ತಕ್ಷಣಕ್ಕೆ ಹೊಳೆಯಲಿಲ್ಲ. ತಲೆಮೇಲಿನ ಬೆಂಕಿಬಿಸಿಲು ತಲೆಕೆಲಸ ಮಾಡದಂತೆ ಮಾಡಿತ್ತೇನೋ! ಅಂತೂ ಸಾಲಿನಲ್ಲಿ ನಿಲ್ಲದೇ ಬೋಧಿವೃಕ್ಷದ ಹತ್ತಿರ ಬಂದಾಯಿತು.

ಹಾಗೆ ನೋಡಿದರೆ ಬೋಧಗಯಾದಲ್ಲಿ ಇದೊಂದೇ ಅರಳಿಮರವಿಲ್ಲ. ಬೋಧಗಯಾ ಮತ್ತು ಗಯಾದಲ್ಲಿ ಎಲ್ಲೆಂದರಲ್ಲಿ ನಮ್ಮಲ್ಲಿ ಮಾವು ಬೇವಿನ ಮರಗಳಂತೆ ಈ ಅರಳಿಮರಗಳು ನೋಡಲು ಸಿಗುತ್ತವೆ. ಹಾಗಿದ್ದೂಈ ವೃಕ್ಷಕ್ಕೆ ವಿಶೇಷ ಸ್ಥಾನವಿದೆ. ಇದಕ್ಕೆ ಕಾರಣ ರಾಜಕುಮಾರ ಸಿದ್ಧರ್ಥನಿಗೆ ಈ ವೃಕ್ಷದ ಕೆಳಗೆ ಧ್ಯಾನಾಸಕ್ತನಾಗಿದ್ದಾಗಲೇ ಜ್ಞಾನೋದಯವಾಯಿತು ಎಂಬುದು. ಈ ಬೋಧಿವೃಕ್ಷದ ಕಟ್ಟೆಯ ಸುತ್ತ ತಡೆಬೇಲಿಯೊಂದನ್ನು ಕಟ್ಟಿ ಅದರ ಬುಡದ ಭಾಗಕ್ಕೆ ಜನ ನುಗ್ಗದಂತೆ ಆ ಮರವನ್ನು ಹತ್ತದಂತೆ ಯಾವುದ್ಯಾವುದೋ ಶೈಲಿಯಲ್ಲಿ ನಿಂತು ಸೆಲ್ಫಿತೆಗೆದುಕೊಳ್ಳುತ್ತಾ ಉಳಿದ ಜನರಿಗೆ ಕಿರಿಕಿರಿಮಾಡದಂತೆ ಮಾಡಿ ಅದರ ಸಂಘಟಕರು ಉಪಕಾರ ಮಾಡಿದ್ದಾರೆ. ವಿಶೇಷ ದಿನವಾಗಿದ್ದರಿಂದ ಬೋಧಿವೃಕ್ಷದ ಬುಡದಲ್ಲಿ ದೊಡ್ಡಪ್ರಮಾಣದ ಹೂವಿನ ರಾಶಿಯೇ ನಿರ್ಮಾಣವಾಗಿತ್ತು. ಆ ವೃಕ್ಷ ಮತ್ತು ಅದರ ಜೊತೆಗಿರುವ ವೃಕ್ಷಗಳು ಸೇರಿ ಇಡೀ ವಾತಾವರಣವನ್ನು ಪ್ರಶಾಂತಗೊಳಿಸಿದ್ದವು.


ಈ ವೃಕ್ಷದ ಮುಂದಿನ ಹಸಿರು ಮರಗಳ ಉದ್ಯಾನದಲ್ಲಿಯೇ ಈ ವರ್ಷದ ಬುದ್ಧಪೂರ್ಣಿಮೆಯ ವಿಶೇಷ ಕಾರ್ಯಕ್ರಮಗಳ ಚಿಕ್ಕ ಮತ್ತು ಸರಳ ವೇದಿಕೆ ಹಾಕಲಾಗಿತ್ತು. ಜನರಿಗೆ ಕುಳಿತುಕೊಳ್ಳಲು ಕುರ್ಚಿಯ ಬದಲು ಚಾಪೆಗಳನ್ನು ಹಾಕಲಾಗಿತ್ತು. ಬೌದ್ಧದರ್ಮ ದೇವರ ಧರ್ಮವಲ್ಲ; ಅದು ಮಾನವ ಧರ್ಮ; ಅದರಲ್ಲಿಯೂ ಸಾಮಾನ್ಯ ಜನರ ಧರ್ಮ. ಅದು ಇಲ್ಲಿ ಆಚರಣೆಯಲ್ಲಿಯೂ ಕಾಣುತ್ತಿತ್ತು. ಈ ಬೋಧಿವೃಕ್ಷದ ಕೆಳಗೆ ಕುಳಿತು ಧ್ಯಾನ ಮಾಡಿದವರೆಲ್ಲರೂ ಬುದ್ಧರಾಗುವುದಿಲ್ಲವೆಂಬುದು ನಿಜವಾದರೂ ಅಲ್ಲಿಯ ತನಕ ಹೋಗಿ ಹೀಗೆ ಮಾಡದಿದ್ದರೆ ಹೇಗೆ?  ನಾನೂ ನನ್ನ ಹೆಂಡತಿಯೂ ತುಸುಹೊತ್ತು ಈ ವೃಕ್ಷದ ಕೆಳಗೆ ಕುಳಿತು ಧ್ಯಾನದಲ್ಲಿದ್ದೆವು. ಅದುವರೆಗೂ ಬೆಂಕಿಯಂಥ ಬಿಸಿಲಿನಲ್ಲಿ ಬೆಂದುಹೋಗಿದ್ದ ಮೈ ಮನಸ್ಸುಗಳಿಗೆ ಆವರಿಸಿದ್ದ ದಣಿವೆಲ್ಲವೂ ಕರಗಿಹೋಯಿತು. ಎಷ್ಟರ ಮಟ್ಟಿಗೆ ಎಂದರೆ ಸುಮಾರು ಅರ್ಧಗಂಟೆಯಾದರೂ ನನ್ನ ಹೆಂಡತಿ ಅಲ್ಲಿಂದ ಹೊರಡಲು ತಯಾರಿರಲಿಲ್ಲ. ನಾನೇ ಮತ್ತಿಷ್ಟು ಹೊತ್ತು ಸಮಯನೀಡಿ ಆಕೆಯನ್ನು ಅಲ್ಲಿಂದ ಒತ್ತಾಯಪೂರ್ವಕವಾಗಿ ಹೊರಡಿಸಿಕೊಂಡು ಹೊರಡಬೇಕಾಯಿತು.

ಮುಖ್ಯಧ್ವಾರಕ್ಕೆ ಮರಳಿ ಬಂದು ಲಾಕರ್‌ ಗಳಿಂದ ನಮ್ಮ ಮೊಬೈಲು ಬ್ಯಾಗು ವಾಪಸ್ಸು ಪಡೆದು ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಪಕ್ಕದ ಉದ್ಯಾನದಲ್ಲಿ ಎರಡು ಕಡೆ ಪ್ರಸಾದ ವ್ಯವಸ್ಥೆ ಮಾಡಿದ್ದರು. ʻತೆಗೆದುಕೊಳ್ಳೋಣವೇʼ ಎನ್ನುವಂತೆ ನನ್ನ ಹೆಂಡತಿ ನನ್ಜ ಕಡೆ ನೋಡಿದಾಗ ನಾನು ʻಸರಿʼ ಎಂದೆ. ಆಕೆ ಹಾಗೆ ಕೇಳಲು ಕಾರಣವಿತ್ತು. ಈ ʻತೀರ್ಥ-ಪ್ರಸಾದʼಗಳ ಬಗ್ಗೆ ನನಗೆ ಇರುವ ಅಲರ್ಜಿ ಇದಕ್ಕೆ ಕಾರಣ. ನಾನು ಸಾಮಾನ್ಯವಾಗಿ ಪ್ರಸಿದ್ಧ ದೇವಾಲಯಗಳಿಗೆ ಹೋದಾಗ ಈ ʼಪ್ರಸಾದʼ ತೆಗೆದುಕೊಳ್ಳುವುದಿಲ್ಲ. ಆರಂಭಿಕ ವರ್ಷಗಳಲ್ಲಿ ಒಂದೆರಡು ಕಡೆ ದೇವರ ದರ್ಶನದ ಬಗ್ಗೆ ವಿಶ್ವಾಸವಿಲ್ಲದ ಕಾರಣ ದರ್ಶನ ಮಾಡದೆ ನೇರವಾಗಿ ಪ್ರಸಾದದ ಹಾಲಿಗೆ ಹೋಗಿ ಊಟಮಾಡುತ್ತಿದ್ದದ್ದು ಉಂಟು. ಆದರೆ ಒಂದು ಸಲ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಹೋದಾಗ ಅಲ್ಲಿ ನಾನು ನೇರವಾಗಿ ಊಟದ ಹಾಲಿಗೆ ಹೋಗಲಿಕ್ಕೆ ದಾರಿ ಇರಲಿಲ್ಲ. ಅಮ್ಮನವರ ದರ್ಶನಕ್ಕೆ ಹೋಗಿ ಅಲ್ಲಿಂದ ಸಾಲಿನಲ್ಲಿ ಪ್ರಸಾದದ ಹಾಲಿಗೆ ಹೋಗುವಂತೆ ದಾರಿ ಇತ್ತು. ಅಂದರೆ ದೇವರ ದರ್ಶನ ಮಾಡಿಯೇ ಪ್ರಸಾದಕ್ಕೆ ಹೋಗಬೇಕು ಎನ್ನುವಂತೆ ಅದು ಇತ್ತು. ಇದನ್ನು ನೋಡಿ ನನಗೆ ಅವರು ಮಾಡಿದ್ದು ಸರಿ ಅನ್ನಿಸಿತು. ನನಗೂ ಈ ಬಗ್ಗೆ ಜ್ಞಾನೋದಯವಾಯಿತು!

ಹೌದು, ದರ್ಶನ-ಪೂಜೆ-ಪ್ರಸಾದ ಇವೆಲ್ಲ ಒಂದಕ್ಕೊಂದು ಸಂಬಂಧ ಇರುವಂಥವು. ಒಂದು ಪ್ಯಾಕೇಜಿನಲ್ಲಿ ಬರುವಂಥವು; ಒಂದನ್ನು ಬಿಟ್ಟು ಇನ್ನೊಂದನ್ನು ಪಡೆಯಲು ಅವಕಾಶವಿಲ್ಲ; ಇದ್ದರೂ ಅದನ್ನು ಪಡೆಯುವುದು ಸಲ್ಲ. ಇದೇ ನನಗೆ ಅಂದು ಆದ ಜ್ಞಾನೋದಯ! ಹೀಗಾಗಿ ಯಾರು ದೇವರ ದರ್ಶನವನ್ನು ಭಕ್ತಿ ಮತ್ತು ಶ್ರದ್ಧೆಗಳಿಂದ ಮಾಡುತ್ತಾರೋ ಅವು ಮಾತ್ರ ಅಲ್ಲಿನ ಉಚಿತ ಪ್ರಸಾದ ಸ್ವೀಕರಿಸುವುದು ಸರಿಯಾದ ಕ್ರಮ; ದೇವರ ಬಗ್ಗೆ ಅಷ್ಟೊಂದು ಸರಿಯಾದ ಶ್ರದ್ಧೆ ಇಲ್ಲದ ನಾನು ಅಲ್ಲಿನ ಪ್ರಸಾದವನ್ನು ಸ್ವೀಕರಿಸುವುದು ಸರಿಯಾದ ಕ್ರಮವಲ್ಲ ಎನ್ನಿಸಿ ಅಂದಿನಿಂದ ಯಾರನ್ನಾದರೂ ಇಂತಹ ದೇವಾಲಯಗಳಿಗೆ ನಾನು ಕರೆದುಕೊಂಡು ಹೋದರೆ ಅವರು ಒಳಗೆ ಹೋಗಿ ದರ್ಶನ ಪ್ರಸಾದ ಇತ್ಯಾದಿ ಮುಗಿಸಿ ಬರುವವರೆಗೆ ನಾನು ದೇವಾಲಯದ ಹೊರಾಂಗಣದಲ್ಲಿ ತಿರುಗಾಡುತ್ತಾ ಅಲ್ಲಿನ ಗೋಡೆಗಳ ಶಿಲ್ಪಗಳು ಇತ್ಯಾದಿಗಳನ್ನು ನೋಡಿ ಆನಂದಿಸುವುದು, ದೇವಾಲಯದ ಅಕ್ಕಪಕ್ಕ ಇರುವ ಕ್ಯಾಂಟೀನುಗಳಿಗೆ ಹೋಗಿ ತಿಂಡಿನೋ ಊಟನೋ ಮಾಡುವುದು ವಾಡಿಕೆಯಾಗಿದೆ.

ಅಷ್ಟೇ ಏಕೆ ನಾವು ಇಂತಹ ಪ್ರಸಿದ್ಧ ದೇವಾಲಯಗಳಿಗೆ ಹೋದರೂ ಅಲ್ಲಿಂದ ಮನೆಗೆಂದೋ ಅಕ್ಕಪಕ್ಕದವರಿಗೆ ಹಂಚಲಿಕ್ಕೆ ಎಂದೋ ಈ ರೀತಿ ಪ್ರಸಾದ ತರುವುದೂ ಇಲ್ಲವೆನ್ನುವಷ್ಟು ಕಡಿಮೆ. ನಾನಂತೂ ಎಂದೂ ತರುತ್ತಲೇ ಇರಲಿಲ್ಲ. ಆದರೆ ನನ್ನ ಹೆಂಡತಿಗೆ ಈ ಬಗ್ಗೆ ಸ್ಪಲ್ಪ ನಂಬಿಕೆ ಇದ್ದದ್ದು ನಿಜ. ಆದರೆ ಮೊನ್ನೆ ಪ್ರಯಾಗ್‌ ರಾಜ್‌ ನ ತ್ರಿವೇಣಿ ಸಂಗಮ (ಕುಂಭಮೇಳ ನಡೆಯುವ ಸ್ಥಳ)ಕ್ಕೆ ದೋಣಿಯಲ್ಲಿ ಕರೆದೊಯ್ದಾಗ ಅಲ್ಲಿ ಮತ್ತು ವಾರಣಾಸಿ (ಕಾಶಿ)ಯ ಗಂಗಾನದಿಯಲ್ಲಿ ಜನ ಒಬ್ಬರು ಗಲೀಜು ಮಾಡುವ ನೀರನ್ನು ಇನ್ನೊಬ್ಬರು ತೀರ್ಥ ಎಂದು ಕುಡಿಯುವುದು, ಕ್ಯಾನುಗಳಲ್ಲಿ ತುಂಬಿಕೊಂಡು ಊರುಗಳಿಗೆ ಒಯ್ಯವುದು ನೋಡಿದಾಗ ಆಕೆಗೂ ಆ ನಂಬಿಕೆ ಹೊರಟು ಹೋಯಿತು ಅನ್ನಿಸುತ್ತದೆ. ನಮ್ಮ ಮನೆಗೆ ಯಾರಾದರೂ ತೀರ್ಥ ಕ್ಷೇತ್ರಗಳಿಗೆ ಹೋಗಿಬಂದವರು ಇಂತಹ ತೀರ್ಥ ಪ್ರಸಾದಗಳನ್ನು ತಂದುಕೊಡುವುದುಂಟು. ಬೇಡ ಅಂದರೆ ಅವರಿಗೆ ಬೇಸರವಾಗುತ್ತದೆ ಎಂದು ಅವನ್ನು ನಾವು ಪಡೆಯುವುದು ನಿಜವಾದರೂ ಬಳಸುವುದು ಕಡಿಮೆ. ಏಕೆಂದರೆ ʻನೂರಾರು ಜನ ಮುಳಿಗಿ ಏಳುವ, ಸ್ನಾನಮಾಡುವ ಸ್ಥಳದಲ್ಲಿ ಒಬ್ಬರೂ ಮಲವನ್ನಲ್ಲದಿದ್ದರೂ ಮೂತ್ರವನ್ನೂ ವಿಸರ್ಜಿಸುವುದಿಲ್ಲ; ಒಂದು ವೇಳೆ ವಿಸರ್ಜಿಸಿದರೂ ಅದು ನಾವು ತೆಗೆದುಕೊಳ್ಳುವ ತೀರ್ಥದಲ್ಲಿ ಬರುವುದಿಲ್ಲʼ ಎಂಭ ಗಾಢ ನಂಬಿಕೆ ಇದಕ್ಕೆ ಬೇಕಾಗುತ್ತದೆ. ಅಂತಹ ಗಾಢ ನಂಬಿಕೆ ನಮ್ಮಲ್ಲಿ ಇಲ್ಲ!

ಆದರೆ ಇಲ್ಲಿ ಪ್ರಸಾದ ಸ್ವೀಕರಿಸಲು ಹೋಗಲಿಕ್ಕೆ ನಮಗೆ ಮುಜುಗರ ಆಗಲಿಲ್ಲ. ಏಕೆಂದರೆ ನಾನು ಗೌತಮ ಬುದ್ಧನ ವಿಚಾರಗಳಿಂದ ಬಹಳಷ್ಟು ಪ್ರಭಾವಿತನಾದವನು. ಆತನ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡವನು. ಇವತ್ತು ಬುದ್ಧಪೂರ್ಣಿಮೆಯ ಆಚರಣೆಯಲ್ಲಿ ಪಾಲ್ಗೊಳ್ಳಲೆಂದು ದೂರದ ಕರ್ನಾಟಕದಿಂದ ಬಂದವನು. ಇಲ್ಲಿ ಬಹಳಷ್ಟು ಶ್ರದ್ಧೆಯಿಂದ ಬೋಧಿವೃಕ್ಷ ಮತ್ತು ಬುದ್ಧನ ದರ್ಶನ ಮಾಡಿ ನನ್ನ ಶ್ರದ್ಧಾಭಕ್ತಿಯನ್ನು ತೋರಿಸಿದ್ದವನು. ಆದರೆ ಸಾಲಿನಲ್ಲಿ ನಿಂತ ನಮಗೆ ಮುಂದಿದ್ದ ನನ್ನ ಹೆಂಡತಿ ಪಾತ್ರೆಯ ಹತ್ತಿರ ಬರುವಷ್ಟು ಹೊತ್ತಿಗೆ ಸರಿಯಾಗಿ ದಾಲ್‌ ಪೂರ್ತಿ ಖಾಲಿಯಾಗಿತ್ತು. ಅನ್ನದ ಪಾತ್ರೆಯಲ್ಲಿ ತಳಕ್ಕೆ ಹತ್ತಿದ್ದ ಒಂದಿಷ್ಟು ಅನ್ನ ಮಾತ್ರ ಅವಳಿಗೆ ಸಿಕ್ಕಿತು. ನನಗೆ ಅದೂ ಸಿಗಲಿಲ್ಲ. ಬೇಸರ ಆಗಲಿಲ್ಲ. ಸುತ್ತ ಕಣ್ಣಾಡಿಸಿದಾಗ ಅಲ್ಲಿ ದೂರದಲ್ಲಿ ಇನ್ನೊಂದು ಸಾಲು ಕಂಡಿತು. ಅಲ್ಲಿಗೆ ಹೋಗಿ ನಿಂತೆ. ಅಲ್ಲಿ ನನ್ನ ಸರದಿ ಬಂದಾಗ ಕೌಂಟರಿನಲ್ಲಿದ್ದ ಯುವತಿಯೊಬ್ಬಳು ನಗುಮುಖದಿಂದಲೇ ನನಗೆ ಒಂದು ಬೋಗುಣಿಗೆ ಒಂದಿಷ್ಟು  ಪಾಯಸ ಹಾಕಿಕೊಟ್ಟಳು. ಆ ಯುವತಿ ಥೈಲ್ಯಾಂಡ್‌ ದೇಶದಿಂದ ಬಂದಿದ್ದಳು! ಇಡೀ ಕೌಂಟರ್‌ ನ ಉಸ್ತುವಾರಿಯನ್ನು ಅವರ ದೇಶದ ಜನರೊಂದಿಗೆ ಅವಳು ಮಾಡುತ್ತಿದ್ದಳು. ʻನಮಸ್ಕಾರʼ ʼಧನ್ಯವಾದʼ ಎಂದು ನಾನು ತಲೆಮಾತ್ರ ಬಗ್ಗಿಸಿ ಹೇಳಿದ್ದಕ್ಕೆ ಆಕೆ ತನ್ನ ಇಡೀ ದೇಹವನ್ನೇ ಬಗ್ಗಿಸಿ ಕೈಮುಗಿದು ನಮಸ್ಕರಿಸಿ ನಾನು ತೋರಿಸಿದ ವಿನಯವನ್ನು ಬಡ್ಡಿಸಮೇತ ತೀರಿಸಿದಳು!!

ಪ್ರಸಾದ ಪಡೆದು ಹೊರಟ ನಾವು ಬೇರೆ ಬೇರೆ ಕಾರ್ಯಕ್ರಮಗಳಿಗೆ ಉಡುಗೊರೆ ಕೊಡಲಿಕ್ಕೆ ಎಂದು ಬುದ್ಧನಿಗೆ ಸಂಬಂಧಿಸಿದ ಬೇರೆ ಬೇರೆ ಎತ್ತರ ಮತ್ತು ಗಾತ್ರಗಳ ಕೆಲವು ಅಶೋಕಸ್ಥಂಭಗಳು, ಕೆಲವು ಕೀ ಚೈನುಗಳು, ಪೆನ್ನುಗಳು, ಒಂಕಾರ ಧ್ವನಿಯನ್ನು ಹೊರಡಿಸುವ ಒಂದು ಬೋಗುಣಿ ಆಕಾರದ ಪಾತ್ರೆ, ಇತ್ಯಾದಿ ಖರೀದಿಸಿದೆವು. ನಮ್ಮ ಆಟೋ ನಿಂತ ಸ್ಥಳದಲ್ಲಿಯೇ ದೊಡ್ಡದಾಗಿ ʻಐ ಲವ್‌ ಬೋದಗಯಾʼ ಎಂಬ ಫಲಕ ಮತ್ತು ಬೃಹತ್‌ ಆದ ಅಂಬೇಡ್ಕರ್‌ ಅವರ ಮೂರ್ತಿ ಕಂಡಿತು. ಸುರಿವ ಬಿಸಿಲಲ್ಲೂ ತಂಪು ನೀಡಿದ ಸಂಗತಿ ಇದಾಗಿತ್ತು. ಬುದ್ಧನ ನಂತರ ಬಸವ ಅನಂತರ ಅಂಬೇಡ್ಕರ್‌ ನನ್ನನ್ನು ಬಹಳಷ್ಟು ಪ್ರಭಾವಿಸಿದವರು. ಒಂದು ಫೋಟೋ ತೆಗೆದುಕೊಂಡು ಭಾರತದ ಭಾಗ್ಯವಿಧಾತನಿಗೆ ನಮಸ್ಕರಿಸಿ ಆಟೋ ಹತ್ತಿದೆವು.

ಬರುವಾಗ ನಮ್ಮ ರಾಮಾಯಣದಲ್ಲಿ ಉಲ್ಲೇಖವಾಗಿರುವ ಗಯಾ ಪಟ್ಟಣದ ಪಕ್ಕದಲ್ಲಿ ಹರಿಯುವ ʻನಿರಂಜನ ನದಿʼ ಎಂದೂ ಕರೆಯಲ್ಪಡುವ ʻಫಾಲ್ಗೂʼ ನದಿ ದಂಟೆಯ ಆ ಕಡೆ ಮತ್ತು ಈ ಕಡೆ ಇರುವ ಎರಡು ಧಾರ್ಮಿಕ ಸ್ಥಳಗಳಾದ ʻಸೀತಾಕುಂಡ' ಮತ್ತು ʻವಿಷ್ಣುಪಾದ ದೇವಿʼ ದೇವಸ್ಥಾನಗಳನ್ನು ನೋಡುವುದನ್ನು ಮರೆಯಲಿಲ್ಲ. ನಾವು ಭಾರತದ ಯಾವ ಮೂಲೆಗೆ ಹೋದರೂ ಯಾವ ಊರಿಗೆ ಹೋದರು ಅಲ್ಲಿನ ಜನ ಇಲ್ಲಿ ರಾಮ ಬಂದಿದ್ದ, ಇಲ್ಲಿ ಸೀತೆ ಸ್ನಾನಮಾಡಿದ್ದಳು, ಇಲ್ಲಿ ಸೀತೆಗಾಗಿ ರಾಮ ಬಾಣಬಿಟ್ಟು ನೀರು ಚಿಮ್ಮಿಸಿದ್ದ, ಎಂದು ಕೆಲವು ಸ್ಥಳಗಳನ್ನು ತೋರಿಸುತ್ತಾರೆ. ಇದರರ್ಥ ರಾಮಾಯಣವನ್ನು ವಾಲ್ಮೀಕಿ ಮಾತ್ರ ಬರೆದಿಲ್ಲ. ಇಡೀ ಭಾರತದ ಜನಸಮುದಾಯವೇ ರಾಮಾಯಣವನ್ನು ತಮ್ಮದೇ ಆದ ಕಥೆಯಾಗಿ ಕಟ್ಟಿಕೊಂಡಿದದ್ದಾರೆ ಎಂಬುದು. ಇಲ್ಲಿಯೂ ಕೂಡ ಅಂತಹ ಒಂದು ಸ್ಥಳವಿದೆ. ಅದೇ ಸೀತಾಕುಂಡ.  ರಾಮ ಲಕ್ಷ್ಮಣರ ವನವಾಸ ಕಾಲದಲ್ಲಿ ಸೀತೆಯ ಬಾಯಾರಿಕೆ ನೀಗಿಸಲೆಂದು ರಾಮ ಬಾಣಬಿಟ್ಟು ಭೂಮಿಯಿಂದ ನೀರು ತೆಗೆಸಿ ಸೀತೆಯ ಬಾಯಾರಿಕೆಯನ್ನು ನೀಗಿಸಿದನೆಂದೂ ಸೀತೆ ತನ್ನ ಮಾವ ದಶರಥ ಮತ್ತು ಆತನ ಪೂರ್ವಜರಿಗೆ ಪಿಂಡದಾನ ಮಾಡಿದಳೆಂದೂ ಕರೆಯಲ್ಪಡುವ ಸ್ಥಳವೇ ಈ ಸೀತಾಕುಂಡ.  ಇಲ್ಲಿ ಅದನ್ನು ತಿಳಿಸುವ ಶಿಲಾಮೂರ್ತಿಗಳಿವೆ. ಅದರ ಜೊತೆ ರಾಮಲಕ್ಷ್ಮಣರ ಹೆಜ್ಜೆಗುರುತುಗಳೆಂದು ಕರೆಯಲ್ಪಡುವ ಶಿಲಾ ರಚನೆಗಳೂ ಇವೆ.

ನಿರಂಜನ ನದಿ ಸಂಪೂರ್ಣ ಬತ್ತಿಹೋಗಿತ್ತು. ಸೀತಾಕುಂಡದಲ್ಲಿ ಕುಂಡದ ಹತ್ತಿರ ಮಾತ್ರ ಒಂದು ಗುಂಡಿಯ ತಳದಲ್ಲಿ ಸ್ವಲ್ಪವೇ ನೀರಿತ್ತು. ಅದನ್ನು ನೋಡಿಕೊಂಡು ನಾವು ಮತ್ತು ನದಿಯ ಈ ಕಡೆ ಇರುವ ಇನ್ನೊಂದು ಸ್ಥಳವಾದ ವಿಷ್ಣುಪಾದ ದೇವಸ್ಥಾನಕ್ಕೆ ಬಂದೆವು. ವಿಷ್ಣುಪಾದ ದೇವಸ್ಥಾನ ಹೆಸರೇ ಹೇಳುವಂತೆ ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣುವಿನ ದೇವಾಲಯ. ಈ ದೇವಾಲಯವು ಬ್ರಾಹ್ಮಣ ಪರಂಪರೆಯಲ್ಲಿ ಪಿಂಡದಾನಕ್ಕೆ ಪ್ರಸಿದ್ಧವಾಗಿದೆ.  ಇಲ್ಲಿ ಒಳಗೆ ಹೋಗಿ ನೋಡಿದರೆ ಎಲ್ಲ ದೇವಾಲಯಗಳಂತೆ ಭಕ್ತರು ಅಲ್ಲಿರುವ ವಿಷ್ಣುವಿನ ಪಾದಕ್ಕೆ ಪೂವು ಕಾಯಿ ಇತ್ಯಾದಿ ನೈವೇದ್ಯವೆಂದು ಅರ್ಪಿಸುವುದು ಮತ್ತು ಅಲ್ಲಿದ್ದವುಗಳನ್ನು ತೆಗೆದುಕೊಂಡು ಪ್ರಸಾದವೆಂದು ಒಯ್ಯುತ್ತಿದ್ದುದು ಮಾಡುತ್ತಿದ್ದರು. ಸೀತೆ ತನ್ನ ಮಾವನ ಮನೆಯ ಪೂರ್ವಜರಿಗೆ ಪಿಂಡದಾನ ಮಾಡಿದ ಸೀತಾಕುಂಡ ಮತ್ತು ವಿಷ್ಣುಪಾದ ದೇವಾಲಯಗಳೆರಡರ ಕಾರಣ ಭಾರತದ ಬೇರೆ ಬೇರೆ ರಾಜ್ಯಗಳಿಂದ ಜನ ಇಲ್ಲಿ ತಮ್ಮ ಪೂರ್ವಜರಿಗೆ ಪಿಂಡದಾನ ಮಾಡಲಿಕ್ಕೆ ಬರುತ್ತಾರೆ ಎಂಬುದು ಅಲ್ಲಿಗೆ ಹೋದ ಮೇಲೆ ನನಗೆ ತಿಳಿಯಿತು.

ಹಿಂದಿನ ದಿನ ನಾನು ವಾರಣಾಸಿಯಿಂದ ಗಯಾಕ್ಕೆ ವಂದೇ ಭಾರತ್‌ ರೈಲಿನಲ್ಲಿ ಬರುವಾಗ ಇಬ್ಬರು ಮಹಿಳೆಯರು ಕನ್ನಡದಲ್ಲಿ ಮಾತನಾಡುತ್ತಿದ್ದದ್ದನ್ನು ಗಮನಿಸಿ ಅವರೂ ಗಯಾದಲ್ಲಿಯೇ ನಮ್ಮ ಜೊತೆ ರೈಲಿನಿಂದ ಇಳಿಯುವಾಗ ಪರಿಚಯ ಮಾಡಿಕೊಂಡು ಅವರೊಡನೆ ಮಾತನಾಡುವಾಗ ಅವರು ಪಿಂಡದಾನ ಮಾಡುವುದಕ್ಕಾಗಿಯೇ ಗಯಾಕ್ಕೆ ಬಂದಿದ್ದೇವೆಂದು ಹೇಳಿದ್ದರು. ನನಗೆ ಪಿಂಡದಾನ ಅಂದರೇನು ಎಂದೇ ಗೊತ್ತಿರಲಿಲ್ಲ ಹಾಗಾಗಿ ಗಯಾ ಅದಕ್ಕೆ ಪ್ರಸಿದ್ಧವಾಗಿರುವುದು ತಿಳಿದಿರುವ ಸಾಧ್ಯತೆ ಇರಲಿಲ್ಲ. ಅವರಲ್ಲಿ ಒಬ್ಬ ಮಹಿಳೆಯೇ 'ಪಿಂಡದಾನಕ್ಕೆ ಇಡೀ ದೇಶದಲ್ಲಿ ಗಯಾವೇ ಶ್ರೇಷ್ಠವಾದದ್ದು ನಿಮಗೆ ಗೊತ್ತಿಲ್ಲ ಅಷ್ಟೇʼ ಎಂದು ಆತ್ಮೀಯವಾಗಿಯೇ ಆ ಬಗೆಗಿನ ನನ್ನ ಅಜ್ಞಾನವನ್ನು ಮನವರಿಕೆ ಮಾಡಿಕೊಟ್ಟಿದ್ದಳು! ಈಗ ಅದು ಗೊತ್ತಾಯಿತು.

ಈ ದೇವಸ್ಥಾನದಿಂದ ಹೊರಗೆ ಬಂದು ನಾನು ಚಪ್ಪಲಿ ಮೆಟ್ಟಿಕೊಳ್ಳುವಾಗ ಅಕಸ್ಮಾತ್‌ ಆಗಿ ದೇವಸ್ಥಾನದ ಗೋಡೆಯ ಮೇಲೆ ಇದ್ದ ಸೂಚನೆಯ ಬರೆಹವೊಂದನ್ನು ನೋಡಿ ಅವಕ್ಕಾದೆ. ಇಂಗ್ಲಿಷ್‌, ಹಿಂದಿ, ಬಂಗಾಲಿ ಮತ್ತು ಉರ್ದು ಹೀಗೆ ನಾಲ್ಕೂ ಭಾಷೆಯಲ್ಲಿ ಇದ್ದ ಈ ಸೂಚನೆಯಲ್ಲಿ ʻಹಿಂದೂಗಳಲ್ಲದವರಿಗೆ ಪ್ರವೇಶವಿಲ್ಲʼ ಎಂದು ಬರೆಯಲಾಗಿತ್ತು.


ಸಾಮಾನ್ಯವಾಗಿ ಇಂತಹ ಪೂಜಾಸ್ಥಳಗಳ ಒಳಗೆ ನಾನು ಹೋಗುವುದಿಲ್ಲ
. ಆದರೆ ಇಲ್ಲಿ ಒಳಗೆ ಹೋಗಿ ಬಂದುಬಿಟ್ಟೆ! ಆ ಸೂಚನೆ ಹಾಕಿದ ದೇವಸ್ಥಾನದವರಾದರೂ ಪ್ರವೇಶದ್ವಾರದಲ್ಲಿ ಒಳಗೆ ಬರುವವರು ಹಿಂದುಗಳು ಹೌದೋ ಅಲ್ಲವೋ ಎಂದು ಪರೀಕ್ಷಿಸಿ ನೋಡುವ ವ್ಯವಸ್ಥೆಯನ್ನೂ ಮಾಡಿರಲಿಲ್ಲ. ಪೋಲಿಸರು ಇದ್ದರಾದರೂ ಅವರು ಉಳಿದ ದೇವಾಲಯಗಳಲ್ಲಿ ಮಾಡುವಂತೆ ನಮ್ಮನ್ನು ಕೈ ಮೇಲೆತ್ತಲು ಹೇಳಿ ಮೈಮೇಲೆ ಕೈಯಾಡಿಸಿ ʼಚೆಕ್‌ʼ ಮಾಡುವ ಶಾಸ್ತ್ರಮಾಡಿ ಒಳಗೆ ಬಿಟ್ಟರು ಅಷ್ಟೆ. ನಾವು ಹಿಂದೂಗಳು ಹೌದೋ ಅಲ್ಲವೋ ಎಂದು ಕೇಳಲೂ ಇಲ್ಲ; ಪರೀಕ್ಷಿಸಲೂ ಇಲ್ಲ.  ಮೊದಲೇ ಆ ಸೂಚನಾ ಫಲಕ ನನ್ನ ಕಣ್ಣಿಗೆ ಬಿದ್ದಿದ್ದರೆ ಖಂಡಿತಾ ನಾನು ಒಳಗೆ ಹೆಜ್ಜೆಯನ್ನೇ ಇಡುತ್ತಿರಲಿಲ್ಲ. ಏಕೆಂದರೆ ಹೀಗೆ ಯಾವುದಾದರೂ ಜನವನ್ನೋ ಜನಾಂಗವನ್ನೋ ನಿರಾಕರಿಸುವ ಪೂಜಾಸ್ಥಳಗಳಿಗೆ ಅವು ಯಾವ ಧರ್ಮದವೇ ಆಗಿರಲಿ ನಾನು ಹೋಗುವುದಿಲ್ಲ. ಎಲ್ಲರನ್ನು ಒಳಗೊಳ್ಳುವ ದೇವಾಲಯಗಳು ಮತ್ತು ದೇವರುಗಳು ಇದ್ದಲ್ಲಿ ಮಾತ್ರ ನಾನು ಹೋಗುವುದು. ಈ ಘಟನೆಯಿಂದ ದೇವಸ್ಥಾನಕ್ಕೆ ಮೈಲಿಗೆ ಆಯಿತೋ ಇಲ್ಲವೋ ಗೊತ್ತಿಲ್ಲ; ನನಗಂತೂ ಅಂತಹ ದೇವಸ್ಥಾನದ ಒಳಗೆ ಹೋಗಿದ ಬಂದದ್ದಕ್ಕೆ ಮೈಲಿಗೆಯ ಭಾವ ಅಂಟಿಕೊಂಡಿತು! ಮೈಲಿಗೆಯನ್ನು ತೊಳೆದುಕೊಳ್ಳಲು ನಿರಂಜನ ನದಿಯಲ್ಲಿ ನೀರೂ ಇರಲಿಲ್ಲವಲ್ಲ. ಅದಕ್ಕೆ ಸೀತೆಯ ಶಾಪ ಬೇರೆ ಇದೆಯಂತೆ. ಹಾಗಾಗಿ ಅದು ಒಣಗಿಹೋಗಿಬಿಟ್ಟಿದೆ!

ಇಡೀ ಜಗತ್ತಿನ ಜನರ ನೋವು ಕಷ್ಟಗಳನ್ನು ಪರಿಹರಿಸುವ ಸರಳ ಸೂತ್ರಗಳನ್ನುಮನುಷ್ಯರಲ್ಲಿ ಯಾವುದೇ ಬಗೆಯ ಭೇದಭಾವ ಮಾಡದೆ ಜಗತ್ತಿಗೆ ನೀಡಿ, ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ತನ್ನ ಅನುಯಾಯಿಗಳನ್ನು ಹೊಂದಿದ ಮತ್ತು ಸುಮಾರು ಹತ್ತಕ್ಕೂ ಹೆಚ್ಚು ದೇಶಗಳಲ್ಲಿ ವಿಶೇಷ ಸ್ಥಾನಮಾನಕ್ಕೆ ಅರ್ಹವಾಗಿರುವ ಬೌದ್ಧಧರ್ಮದ ಜನಕ ಮಹಾತ್ಮ ಗೌತಮನ ವಿಶಾಲ ದೃಷ್ಟಿಯ ಒಳಗೊಳ್ಳುವಿಕೆಯ ಆಲೋಚನೆಯ ಮುಂದೆ ಇಂತಹ ಕ್ಷುಲ್ಲಕ ಭಾವನೆಗಳೇ ಇಂದು ಈ ಧರ್ಮದ ಜನ ತಮ್ಮ ಧರ್ಮವನ್ನು ಇರುವ ಒಂದು ದೇಶದಲ್ಲಿ ಉಳಿಸಿಕೊಳ್ಳಲು ಒದ್ದಾಡಬೇಕಾದ ಸ್ಥಿತಿಯನ್ನು ಉಂಟುಮಾಡಿವೆ ಅನ್ನಿಸಿ  ಮನಸ್ಸಿಗೆ ಕಿರಿಕಿರಿ ಅನ್ನಿಸಿ ಮುಂದಿನ ಪ್ರಯಾಣಕ್ಕೆ ಅಗತ್ಯವಾದ ವಿಶ್ರಾಂತಿ ಪಡೆಯಲೆಂದು ನನ್ನ ಕೊಠಡಿಗೆ ಹೊರಟೆ.


ʼಕೊಂದವರುಳಿವರೇ ಕೂಡಲಸಂಗಮದೇವʼ ಎಂಬುದು ಬಸವಣ್ಣನವರ ವಚನದಲ್ಲಿ ಬರುವ ಒಂದು ಸಾಲು. ವೈದಿಕರು ಬೌದ್ಧಧರ್ಮವನ್ನು ಕೊಲ್ಲಲು ಹೋದಾಗ ಅದು ಕೊಲ್ಲಲ್ಪಡಲಿಲ್ಲ; ಬದಲಾಗಿ ಕಂಸನಿಗೆ ಕೈಕೊಟ್ಟು ಬಾಲಕೃಷ್ಣ ಹೊರನಡೆದು ಹೋಗಿ ಬೇರೆಲ್ಲೋ ಬೆಳೆದಂತೆ ಭಾರತವನ್ನು ಬಿಟ್ಟು ಹೊರಗೆ ಹೋಗಿ ಬೇರೆ ಬೇರೆ ದೇಶಗಳಲ್ಲಿ ಸಂಪದ್ಭರಿತವಾಗಿ ಬೆಳೆಯಿತು. ಅದನ್ನು ಕೊಲ್ಲಲು ಹೋದ ಧರ್ಮ ಇಂದು ಬಸವಣ್ಣ ಹೇಳಿದಂತೆ ಬದುಕಲು ಪರದಾಡುತ್ತಿದೆ. ಭಾರತದ ಯಾವುದೇ ಭಾಗದಲ್ಲಿ ರಾಮನನ್ನೋ ಕೃಷ್ಣನನ್ನೋ ಹುಡುಕಲು ನೆಲವನ್ನು ಅಗೆದಾಗ ಈಗಲೂ ಸಿಗುತ್ತಿರುವುದು ಬುದ್ಧದ ಮೂರ್ತಿಗಳು! ಯುದ್ಧದ ಸಾವು ನೋವುಗಳನ್ನು ಅರ್ಥಮಾಡಿಕೊಳ್ಳಬಲ್ಲ ಭಾರತದ ಯುವಜನತೆ ಮತ್ತೆ ಬುದ್ಧನ ಚಿಂತನೆಗಳನ್ನು ಹಂತಹಂತವಾಗಿ ಸಣ್ಣಸಂಖ್ಯೆಯಲ್ಲಿಯಾದರೂ ಮೆಚ್ಚಿ ಮೈಗೂಡಿಸಿಕೊಳ್ಳುತ್ತಿರುವುದನ್ನು ನೋಡಿದರೆ ಇಲ್ಲಿಂದ ಹೊರಹಾಕಲ್ಪಟ್ಟು ವಿದೇಶಗಳಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಬೌದ್ಧಧರ್ಮ ಮತ್ತೆ ತಾನು ಹುಟ್ಟಿದ ಭಾರತಕ್ಕೆ ಬಂದು ಯುದ್ಧದ ತುರಿಕೆ ಹತ್ತಿಸಿಕೊಂಡ ನಮ್ಮ ಜನರಿಗೆ ಶಾಂತಿಯ ಮುಲಾಮು ಸವರಬಹುದಾದ ಸಂದರ್ಭ ತಡವಾಗಿಯಾದರೂ ಬಂದೇ ಬರುತ್ತದೆ ಅನ್ನಿಸುತ್ತದೆ. ಅದು ಎಷ್ಟು ಸಾಧ್ಯವೋ ಅಷ್ಟು ಬೇಗ ಆಗಲಿ ಎಂದು ಆಶಿಸೋಣ! ಈ ಜಗತ್ತಿನಲ್ಲಿ ʼಒಳ್ಳೆಯ ಯುದ್ಧ ಮತ್ತು ಕೆಟ್ಟ ಶಾಂತಿʼ ಎಂಬುವು ಹಿಂದೆ ಯಾವ ಕಾಲದಲ್ಲಿಯೂ ಇರಲಿಲ್ಲಈಗಲೂ ಇಲ್ಲ ಮತ್ತೆ ಮುಂದೆಯೂ ಇರಲು ಸಾಧ್ಯವಿಲ್ಲ ಎಂಬ ವಿಶ್ವಸತ್ಯವನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳೋಣ. ಪರಸ್ಪರ ದ್ವೇಷಾಸೂಯೆಗಳನ್ನು ತೊರೆದು ಪ್ರೀತಿ ನೆಮ್ಮದಿಯ ಬದುಕು ಬದುಕೋಣ.

*****

೧೫-೦೫-೨೦೨೫

No comments:

Post a Comment