ಮಾದರಿ ಮಹಾಕಾವ್ಯಮಂದಿರ ʻತುಳಸಿ ಭವನʼ
ಇಡೀ ಉತ್ತರ ಭಾರತದಲ್ಲಿ ಬಹಳಷ್ಟು ಜನಪ್ರಿಯವಾಗಿರುವ ರಾಮಾಯಣವೆಂದರೆ ಅದು ತುಳಸಿ ರಾಮಾಯಣ ಎಂದು ಕರೆಯಲ್ಪಡುವ ʻಶ್ರೀ ರಾಮಚರಿತ ಮಾನಸʼ. ತಮ್ಮ ಇಡೀ ಮಹಾಕಾವ್ಯದಲ್ಲಿ ರಾಮನ ಅವತಾರದ ಬಗ್ಗೆ ಅವನ ಅತಿಮಾನುಷ ಶಕ್ತಿಯ ಬಗ್ಗೆ ಮನಸೋ ಇಚ್ಚೆ ವರ್ಣಿಸುವ ತುಳಸಿದಾಸರಿಗೆ ಕೊನೆಗೂ ತೃಪ್ತಿಯಾಗದೇ ʻರಾಮಪ್ರಭುವಿನ ಅತಿಮಾನುಷ ಶಕ್ತಿಯನ್ನು ಪೂರ್ಣಪ್ರಮಾಣದಲ್ಲಿ ನನ್ನಿಂದ ವರ್ಣಿಸಲು ಸಾಧ್ಯವಾಗಿಲ್ಲ; ಅದು ನನ್ನಿಂದ ಆಗದ ಕೆಲಸʼ ಎಂದು ತಮ್ಮ ಅಸಹಾಯಕತೆಯನ್ನು ಹೇಳಿಕೊಳ್ಳುತ್ತಾರೆ.
ಈ ಕಾವ್ಯದ ಒಂದು ಘಟನೆಯನ್ನು ನೆನಪು ಮಾಡಿಕೊಳ್ಳುವುದಾದರೆ ರಾಮ ಇನ್ನೂ ಚಿಕ್ಕಕೂಸು. ಕೌಸಲ್ಯೆ ಆ ಕೂಸನ್ನು ತೊಟ್ಟಿಲಲ್ಲಿ ಹಾಕಿರುತ್ತಾಳೆ. ಆ ಕಡೆ ಪೂಜೆ ಮಾಡಿ ದೇವರ ಮನೆಯಲ್ಲಿ ದೇವರಿಗೆ ನೈವೇದ್ಯವನ್ನು ಇಟ್ಟಿರುತ್ತಾಳೆ. ತುಸು ಹೊತ್ತಿನ ನಂತರ ದೇವರ ಮನೆಗೆ ಹೋಗಿ ಅವಳು ನೋಡಿದರೆ ತೊಟ್ಟಿಲ ಕೂಸು ಅಲ್ಲಿಗೆ ಬಂದು ನೈವೇದ್ಯವನ್ನು ತಿನ್ನುತ್ತಿರುತ್ತದೆ. ಆಶ್ಚರ್ಯದಿಂದ ಅವಳು ತೊಟ್ಟಿಲಿಗೆ ಬಂದು ನೋಡುತ್ತಾಳೆ. ಕೂಸು ಅಲ್ಲಿಯೂ ಇದೆ. ಒಂದೇ ಕೂಸು ಎರಡು ಕಡೆ ಇದೆ! ಇದರಿಂದ ಅವಕ್ಕಾದ ಕೌಸಲ್ಯೆಗೆ ಕೂಸೇ ಸಮಾಧಾನ ಮಾಡುತ್ತದೆ. ತನ್ನ ದಿವ್ಯದರ್ಶನ ಮಾಡುತ್ತದೆ. ದೇವರನ್ನೇ ಮಗುವಾಗಿ ಪಡೆದದ್ದಕ್ಕೆ ಕೌಸಲ್ಯೆಗೆ ಏಕಕಾಲಕ್ಕೆ ಹೆಮ್ಮೆಯೂ ಒಂದು ರೀತಿಯ ಕೀಳರಿಮೆಯೂ ಸಹಜವಾಗಿ ಆಗುತ್ತವೆ. ʻಅಯ್ಯೋ ದೇವ, ಮೂರು ಲೋಕವನ್ನೂ ಸಲಹುವ ನಿನ್ನನ್ನೇ ಸಲಹುವ ಕೆಲಸ ನನಗೆ ಬಂತೇ?ʼ ಎಂದು ಅವಳು ತನ್ನ ಅಳಲನ್ನು ತೋಡಿಕೊಳ್ಳುತ್ತಾಳೆ. ರಾಮ ತನ್ನ ದಿವ್ಯದರ್ಶನ ತೋರಿಸಿ ತಾನು ದೇವರ ಅವತಾರಿ ಎಂಬುದನ್ನು ಯಾರಿಗೂ ಹೇಳಬೇಡ ಎಂದು ಕೌಸಲ್ಯೆಗೆ ಹೇಳುತ್ತಾನೆ. ಅವಳು ʼಆಗಲಿ ಪ್ರಭುʼ ಎಂದು ನಮಸ್ಕರಿಸುತ್ತಾಳೆ.
ಹೀಗೆ ಇಡೀ ಕಾವ್ಯದ ತುಂಬ ರಾಮನ ಅವತಾರದ ಗುಣಗಾನ ಮಾಡುವ ತುಳಸಿದಾಸರ ಮಹಾಕಾವ್ಯ ತನ್ನ ಕಾವ್ಯ ಸೌಂದರ್ಯಕ್ಕಾಗಿ, ವರ್ಣನೆಗಳಿಗಾಗಿ ನಮ್ಮ ಮನಸ್ಸನ್ನು ಸೆಳೆಯುವುದು ನಿಜವಾದರೂ ತಾತ್ವಿಕವಾಗಿ ಅದು ನನ್ನಂಥವರಿಗೆ ಅಷ್ಟೇನೂ ಖುಷಿಕೊಡುವ ಕಾವ್ಯವಲ್ಲ. ಏಕೆಂದರೆ ರಾಮಾವತಾರ ಏತಕ್ಕಾಗಿ ಆಯಿತು ಎಂದು ಹೇಳುವಾಗ ತುಳಸಿದಾಸರು, ಧೇನು ಮತ್ತು ಬ್ರಾಹ್ಮಣರ ಉದ್ಧಾರಕ್ಕಾಗಿ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಮತ್ತು ಇಡೀ ಕಾವ್ಯದಲ್ಲಿ ಅದೇ ಕೆಲಸವನ್ನು ಅವರು ರಾಮನಿಂದ ಮಾಡಿಸುತ್ತಾರೆ. ತಾತ್ವಿಕವಾಗಿ ಏನೇ ಭಿನ್ನಾಭಿಪ್ರಾಯವಿದ್ದರೂ ಒಂದು ಸಾಹಿತ್ಯ ಕೃತಿಯಾಗಿ ಓದುವ ಖುಷಿಯನ್ನು ತುಳಸಿ ರಾಮಾಯಣ ಕೊಡುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.
ರಾಮಚರಿತ ಮಾನಸದ ತುಳಸಿದಾಸರಿಗೂ ವಾರಣಾಸಿಗೂ ಬಿಡದ ಸಂಬಂಧ. ಈ ಕಾರಣದಿಂದಲೋ ಏನೋ ವಾರಣಾಸಿ(ಕಾಶಿ)ಯಲ್ಲಿ ಅವರಿಗೆ ಮತ್ತು ಅವರ ಕಾವ್ಯಕ್ಕೆ ಎಂದೇ ಒಂದು ಬೃಹತ್ ಮಂದಿರ ನಿರ್ಮಾಣವಾಗಿದೆ. ಮೊನ್ನೆ ಉತ್ತರ ಪ್ರದೇಶದಲ್ಲಿ ಪ್ರವಾಸದಲ್ಲಿದ್ದ ನಾನು ಈ ಮಂದಿರವನ್ನು ನೋಡಲು ಹೋಗಿದ್ದೆ. ಎರಡು ಅಂತಸ್ತಿನ ಈ ಮಂದಿರದ ವಿಶೇಷತೆ ಎಂದರೆ ಎರಡೂ ಅಂತಸ್ತಿನ ಸುತ್ತಲ ಇಡೀ ಕಟ್ಟಡದ ಒಳಭಾಗದ ಗೋಡೆಗಳನ್ನು ಅಮೃತಶಿಲೆಯಲ್ಲಿ ರಾಮಚರಿತ ಮಾನಸ ಮಹಾಕಾವ್ಯದ ಮೂಲ ಕಾವ್ಯದ ಎಲ್ಲ ಶ್ಲೋಕಗಳು ಮತ್ತು ಅವುಗಳ ಸರಳ ಅರ್ಥವನ್ನು ಕೆತ್ತಿಸಿ ಹಾಕಿರುವುದು. ಕವಿಗಳ ಕಾವ್ಯಗಳ ಕೆಲವು ಮುಖ್ಯ ಭಾಗಗಳನ್ನು ಗೋಡೆಗಳ ಮೇಲೆ ಹಾಕಿಸುವುದು ಸಾಮಾನ್ಯ ಸಂಗತಿ. ಕುಪ್ಪಳಿಯಲ್ಲಿ ಕುವೆಂಪು ಸ್ಮಾರಕ ಭವನದಲ್ಲಿ ಕೂಡ ಹೀಗೆ ಕಲ್ಲಿನಲ್ಲಿ ಕವಿಯ ಕಾವ್ಯಸೂಕ್ತಿಗಳನ್ನು ಕೆತ್ತಿಸಿ ಹಾಕಲಾಗಿದೆ. ಆದರೆ ಒಬ್ಬ ಕವಿಯ ಇಡೀ ಮಹಾಕಾವ್ಯವನ್ನೇ ಅದರಲ್ಲೂ ಅರ್ಥದ ಸಮೇತ ಹೀಗೆ ಕಲ್ಲಿನಲ್ಲಿ ಕೆತ್ತಿಸಿ ಹಾಕಿರುವುದು ಅಪರೂಪ. ಇದು ನಾನು ಕಂಡ ಏಕೈಕ ಉದಾಹರಣೆ. ಸಮಯ ವಿದ್ದವರು ಈ ಮಂದಿರದಲ್ಲಿ ನಿಂತು ಕುಂತು ಇಡೀ ಕಾವ್ಯವನ್ನೇ ಓದಬಹುದು!
ಹೀಗೆ ಇಡೀ ಕಾವ್ಯವನ್ನು ಗೋಡೆಗಳಲ್ಲಿ ಕೆತ್ತಿರುವುದರ ಜೊತೆಗೆ ಕೆಳ ಅಂತಸ್ತಿನಲ್ಲಿ ಸ್ವತಃ ಕಾವ್ಯವನ್ನು ತುಳಸೀದಾಸರು ಓದಿಹೇಳುತ್ತಿರುವಂತೆ ತಂತ್ರಜ್ಞಾನಬಳಸಿ ಹಾವ ಭಾವ ಧ್ವನಿ ಇವುಗಳನ್ನೊಳಗೊಂಡ ತುಳಸೀದಾಸರ ಪ್ರತಿಕೃತಿ ಮಾಡಿದ್ದಾರೆ. ಆ ಮೂರ್ತಿಯ ಮುಂದೆ ಹೋಗಿ ನಿಂತರೆ ಅವರು ನಮಗೆ ಮಹಾಕಾವ್ಯದ ಹಾಳೆಗಳನ್ನು ತಿರುವುತ್ತಾ ತಮ್ಮ ಕಾವ್ಯವನ್ನು ನಮಗೆ ಓದಿ ಹೇಳುತ್ತಿರುವ ಮತ್ತು ನಾವು ಆಸ್ವಾದಿಸುತ್ತಿರುವ ಅನುಭವವಾಗುತ್ತದೆ.
ಕಟ್ಟಡದ ಮೇಲಂತಸ್ತಿನಲ್ಲಿ ತುಳಸಿ ರಾಮಾಯಣದಲ್ಲಿ ಬರುವ ಪ್ರಮುಖ ಘಟನೆಗಳ ಚಲನಶೀಲ ಗೊಂಬೆಗಳ ದೃಶ್ಯಾವಳಿಗಳನ್ನು ನಿರ್ಮಿಸಿದ್ದಾರೆ. ಸೀತಾ ಸ್ವಯಂವರ, ಶ್ರೀರಾಮ ಪಟ್ಟಾಭಿಷೇಕ, ಅತ್ರಿಮುನಿಗಳ ದರ್ಶನ, ಅಹಲ್ಯಾ ಪ್ರಕರಣ, ಸೀತಾಪರಹಣ, ರಾಮರಾವಣರ ಯುದ್ಧ ಹೀಗೆ ಅನೇಕ ಚಿತ್ರಾವಳಿಗಳು ದೃಶ್ಯಾವಳಿಗಳಾಗಿ ಇಲ್ಲಿ ರೂಪುಗೊಂಡು ಇಡೀ ರಾಮಾಯಣ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಮಾಡಿವೆ. ಓದಲು ಆಗದವರು ಇವನ್ನು ನೋಡಿ ಆನಂದಿಸಬಹುದು.
ತುಳಸಿದಾಸರ ಕಾವ್ಯದ ತಾತ್ವಿಕತೆಯ ಬಗ್ಗೆ ನಮಗೆ ವಿರೋಧವಿದ್ದರೂ ಒಂದು ಕಾವ್ಯವನ್ನು ಹೇಗೆಲ್ಲ ಜನರಿಗೆ ಮುಟ್ಟಿಸಬಹುದು ಎಂಬುದಕ್ಕೆ ಈ ಮಂದಿರ ಒಂದು ಉತ್ತಮ ಮಾದರಿ ಎನ್ನುವುದರಲ್ಲಿ ಅನುಮಾನವಿಲ್ಲ. ಬಹಳ ಒಳ್ಳೆಯ ಪ್ರಯತ್ನ. ಮತ್ತು ಇತರೆ ಭಾಷೆಗಳ ದೊಡ್ಡ ಕವಿಗಳ ಹೆಸರಲ್ಲಿರುವ ಟ್ರಸ್ಟ್ ಗಳೂ ತಮ್ಮ ತಮ್ಮ ಕವಿಗಳ ಬಗ್ಗೆ ಇಂಥದ್ದೇನನ್ನಾದರೂ ಮಾಡಬಹುದೇ ಎಂದು ಆಲೋಚಿಸಲು ಇದು ಒಂದು ಮಾದರಿ ಆಗಿರುವುದಂತೂ ಸತ್ಯ!
ಡಾ. ರಾಜೇಂದ್ರ ಬುರಡಿಕಟ್ಟಿ
೧೬-೦೫-೨೦೨೫
No comments:
Post a Comment