ಸಾವರ್ಕರ್: ʻದೇಶಭಕ್ತʼ ʻದೇಶದ್ರೋಹಿʼ – ಯಾವುದು ಸರಿ?
· ಡಾ. ರಾಜೇಂದ್ರ ಬುರಡಿಕಟ್ಟಿ
ʻಸಾವರ್ಕರ್: ʻದೇಶಭಕ್ತʼ ʻದೇಶದ್ರೋಹಿʼ ಯಾವುದು ಸರಿ?ʼ ಈ ಪ್ರಶ್ನೆಯನ್ನು ನಾವು ಇಂದು ಯಾರಿಗಾದರೂ ಕೇಳಿದರೆ ಉತ್ತರ ಏನು ಬರುತ್ತದೆ? ನಿಸ್ಸಂಶಯವಾಗಿ ಈ ಎರಡೂ ಉತ್ತರಗಳು ದೊರೆಯುತ್ತವೆ! ಬಹಳಷ್ಟು ಸಂದರ್ಭಗಳಲ್ಲಿ ಪ್ರಶ್ನೆ ಕೇಳುವವರು ಯಾರು ಮತ್ತು ಉತ್ತರ ಕೊಡುವವರು ಯಾರು ಎನ್ನುವುದರ ಆಧಾರದ ಮೇಲೆ ಈ ಉತ್ತರಗಳು ಅವಲಂಭಿಸಿರುತ್ತವೆಯೇ ಹೊರತು ಸಾವರ್ಕರ್ ಅವರ ವ್ಯಕ್ತಿತ್ವದ ಆಧಾರದ ಮೇಲೆ ಅಲ್ಲ. ಇದಕ್ಕೆ ಕಾರಣವೂ ಇದೆ. ಆಧುನಿಕ ಭಾರತದ ಅತ್ಯಂತ ವಿವಾದಾತ್ಮಕ ನಾಯಕರುಗಳಲ್ಲಿ ಮುಖ್ಯವಾದವರು ವಿನಾಯಕ ದಾಮೋದರ ಸಾವರ್ಕರ್. ಅವರ ನಿಜವಾದ ವ್ಯಕ್ತಿತ್ವ ಏನು? ಅವರ ಸಾಮಾಜಿಕ ಜೀವನದಲ್ಲಿ ಆದ ಪಲ್ಲಟಗಳೇನು ಎಂಬುದನ್ನು ಆದಷ್ಟೂ ಮುಕ್ತವಾಗಿ ದಾಖಲಿಸುವುದು ಈ ಲೇಖನದ ಉದ್ದೇಶ. ಈಗಾಗಲೇ ಸಾವರ್ಕರ್ ಅವರ ಬಗ್ಗೆ ತಮ್ಮತಮ್ಮದೇ ಅದ ಪೂರ್ವಾಭಿಪ್ರಯಗಳನ್ನು ಹೊಂದಿರದ ಮತ್ತು ಹೊಂದಿದ್ದರೂ ಅವನ್ನು ಮಾರ್ಪಡಿಸಿಕೊಳ್ಳಲು ಸಾಧ್ಯವಿರುವವರನ್ನು ಈ ಲೇಖನ ಉದ್ದೇಶಿಸಿದೆ. ಬನ್ನಿ ಅವರ ಜನನ ಬಾಲ್ಯದಿಂದಲೇ ಆರಂಭಿಸೋಣ:
೧೮೮೩ರ ಮೇ ೨೮
ರಂದು ಮಹಾರಾಷ್ಟ್ರದ ನಾಸಿಕ್ ಬಳಿಯ ಭಾಗೂರು ಎಂಬ ಹಳ್ಳಿಯ ಚಿದ್ಭಾವನಾ ಬ್ರಾಹ್ಮಣ ಕುಟುಂಬದ ದಾಮೋದರ
ಮತ್ತು ರಾಧಾಬಾಯಿ ಎಂಬ ದಂಪತಿಗಳಿಗೆ ಜನಿಸಿದ ವಿನಾಯಕನಿಗೆ ಮನೆಯಲ್ಲಿ ಇದ್ದದ್ದು ಗಣೇಶ ಮತ್ತು ನಾರಾಯಣ
ಎಂಬ ಇಬ್ಬರು ಸಹೋದರರು ಮತ್ತು ಮೈನಾಬಾಯಿ ಎಂಬ ಒಬ್ಬ ಸಹೋದರಿ. ಬಾಲಕ ವಿನಾಯಕನ ಸಾಮಾಜಿಕ ಹೋರಾಟದ ಬದುಕು
ತನ್ನ ಶಾಲಾದಿನದಿಂದಲೇ ಆರಂಭವಾಗುತ್ತದೆ. ಹನ್ನೆರಡು ವರ್ಷದವನಿದ್ದಾಗಲೇ ತನ್ನ ಸಂಗಾತಿಗಳನ್ನು ಕಟ್ಟಿಕೊಂಡು
ತನ್ನ ಹಳ್ಳಿಯ ಮಸೀದಿಯೊಂದರ ಮೇಲೆ ದಾಳಿಗೆ ಮುಂದಾಗುವ ಈತ ಆಗಲೇ ಹೇಳುವುದು, “ನಮ್ಮ ಮನತೃಪ್ತಿಗಾಗಿ
ನಾವು ಮಸೀದಿಯನ್ನು ಧ್ವಂಸಮಾಡುತ್ತೇವೆ” ಎಂದು. ೧೯೦೩ರಲ್ಲಿ ನಾಸಿಕ್ ನಲ್ಲಿ ತನ್ನ ಹಿರಿಯ ಸಹೋದರ
ಗಣೇಶನ ಜೊತೆಗೂಡಿ ಸ್ಥಾಪಿಸುವ ಭೂಗತ ಕ್ರಾಂತಿಕಾರಿ ಸಂಘಟನೆ ʼಮಿತ್ರಮೇಳʼ ಮುಂದೆ ಮೂರು ವರ್ಷಗಳ ನಂತರ
೧೯೦೬ರಲ್ಲಿ ಬ್ರಿಟೀಷ್ ಅಧಿಪತ್ಯವನ್ನು ಕಿತ್ತುಹಾಕಿ ಹಿಂದೂ ಅಧಿಪತ್ಯವನ್ನು ಸ್ಥಾಪನೆ ಮಾಡುವ ಧ್ಯೇಯವನ್ನಿಟ್ಟುಕೊಂಡ
ʼಅಭಿನವ ಭಾರತ ಸೊಸೈಟಿʼ ಆಗುತ್ತದೆ.
ಪುಣೆಯ ಫರ್ಗೂಸನ್
ಕಾಲೇಜಿನಲ್ಲಿ ಓದುವಾಗಲೂ ತಮ್ಮ ಕ್ರಾಂತಿಕಾರಿ ಚಟುವಟಿಕೆಗಳನ್ನು ಮುಂದುವರೆಸಿದ ಸಾವರ್ಕರ್ ಮೇಲೆ
ಆ ಕಾಲದಲ್ಲಿ ಬಹಳಷ್ಟು ಪ್ರಭಾವ ಬೀರಿದವರು ಸ್ವಾತಂತ್ರ್ಯ ಹೋರಾಟದ ತೀವ್ರಗಾಮಿ ಗುಂಪಿನ ಪ್ರಮುಖರಾದ
ಬಾಲಗಂಗಾಧರ ತಿಲಕ್ ಅವರು. ಅವರೇ ಶಿವಾಜಿ ಸ್ಕಾಲರ್ ಶಿಪ್ ದೊರೆಯುವಂತೆ ಮಾಡಿ ಕಾನೂನಿನಲ್ಲಿ ಉನ್ನತ
ಪದವಿ ಪಡೆಯಲು ಲಂಡನ್ನಿಗೆ ಹೋಗಲು ಸಾವರ್ಕರ್ ಅವರಿಗೆ ಸಹಾಯ ಮಾಡಿದ್ದು. ೧೯೦೫ರ ಬಂಗಾಳ ವಿಭಜನೆ ವಿರುದ್ಧದ
ಹೋರಾಟದಲ್ಲಿ ಬಾಲಗಂಗಾದರ ತಿಲಕರ ಸಮ್ಮುಖದಲ್ಲಿ ʼವಿದೇಶಿ ವಸ್ತ್ರದಹನʼ ಚಳವಳಿ ಮಾಡಿ ಯುವಕ ವಿನಾಯಕ
ಆಗಲೇ ಅವರ ಮೆಚ್ಚುಗೆಯನ್ನು ಗಳಿಸಿದ್ದ.
ಲಂಡನ್ನಿನಲ್ಲಿ ಕ್ರಾಂತಿಕಾರಿ ಚಟುವಟಿಕೆಗಳು:
ಲಂಡನ್ನಿನಲ್ಲಿ
ಕಾನೂನು ಓದಲು ಹೋದಾಗಲೂ ಬ್ರಿಟಿಷ್ ಅಧಿಪತ್ಯದ ವಿರುದ್ಧದ ಸಾವರ್ಕರ್ ಹೋರಾಟ ಮುಂದುವರೆಯುತ್ತದೆ.
ಭಾರತದ ಸ್ವಾತಂತ್ರ್ಯವೆಂಬುದನ್ನು ಕ್ರಾಂತಿಕಾರಿ ಚಟುವಟಿಕೆಗಳ ಮೂಲಕವೇ ಪಡೆಯಲು ಸಾಧ್ಯವೆಂದು ಗಾಢವಾಗಿ
ನಂಬಿದ್ದ ಸಾವರ್ಕರ್ ಆ ಬಗೆಯ ಆಲೋಚನೆಯನ್ನು ಬೆಂಬಲಿಸುವ ಕೆಲವು ಪುಸ್ತಕಗಳನ್ನು ಅಲ್ಲಿ ಬರೆಯುತ್ತಾರೆ.
ಅವುಗಳಲ್ಲಿ ಮುಖ್ಯವಾದದ್ದು ʻಭಾರತದ ಸ್ವಾಂತಂತ್ರ್ಯ ಸಂಗ್ರಾಮʼ (ದಿ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್).
ಇದು ೧೮೫೭ಲ್ಲಿ ಬ್ರಿಟಿಷ್ ಅಧಿಪತ್ಯದ ವಿರುದ್ದ ನಡೆದ ಐತಿಹಾಸಿಕ ಮಹತ್ವದ ;ಮಹಾದಂಗೆʼಯನ್ನು ಕುರಿತ
ಪುಸ್ತಕ. ʼಸಿಪಾಯಿದಂಗೆʼ ಎಂದು ಕರೆಯಲ್ಪಡುತ್ತಿದ್ದ ಇದನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮʼ
ಎಂದು ಮೊದಲು ಕರೆದದ್ದೇ ಸಾವರ್ಕರ್ ಎನ್ನಲಾಗುತ್ತದೆ. ಆದರೆ ಇತ್ತೀಚಿನ ಸಂಶೋಧನೆಗಳು ಇದನ್ನು ಅಲ್ಲಗಳೆಯುತ್ತವೆ;
ಮತ್ತು ಹಾಗೆ ಮೊದಲು ಕರೆದವರು ಸಾವರ್ಕರ್ ಅವರಿಗಿಂತ ಮೊದಲು ಕಾರ್ಲ್‌ಮಾಕ್ಸ್ ಎಂಬುದನ್ನು ದಾಖಲಿಸುತ್ತವೆ.
ಅದು ಏನೇ ಇರಲಿ ಈ ಪುಸ್ತಕವನ್ನು ಸಾವರ್ಕರ್ ಅವರಿಗೆ ಲಂಡನ್ನಿನಲ್ಲಿ ಪ್ರಕಟಿಸಲು ಸಾಧ್ಯವಾಗುವುದಿಲ್ಲ.
ಕಾರಣ ಅದಕ್ಕೆ ಬ್ರಿಟಿಷ್ ಸರ್ಕಾರ ನಿಷೇಧ ಹೇರುತ್ತದೆ. ಹಾಗಿದ್ದರೆ ಈ ಪುಸ್ತಕ ಪ್ರಕಟವಾದದ್ದು ಹೇಗೆ? ಅದಕ್ಕೆ ಸಹಾಯ
ಮಾಡಿದವರು ಯಾರು ಎಂಬ ಪ್ರಶ್ನೆಗಳು ಏಳುತ್ತವೆ. ಈ ಪುಸ್ತಕವನ್ನು ಬ್ರಿಟಿಷ್ ಸರ್ಕಾರ ನಿಷೇಧಿಸಿದಾಗ
ಅದನ್ನು ಹಾಲೆಂಡಿನಲ್ಲಿ ಗುಟ್ಟಾಗಿ ಮೊದಲು ಮುದ್ರಿಸಲಾಗುತ್ತದೆ. ಅದರ ಕೆಲವು ಪ್ರತಿಗಳನ್ನು ಭಾರತಕ್ಕೆ
ಗುಟ್ಟಾಗಿ ತರುವ ಅಪಾಯಕಾರಿ ಸಾಹಸ ಮಾಡಿ ಜಯಗಳಿಸಿದ ವ್ಯಕ್ತಿ ಸಾವರ್ಕರ್ ಅವರ ʻಅಭಿನವ
ಭಾರತʼ ಸಂಘಟನೆಯ ಸಕ್ರಿಯ ಸದಸ್ಯನಾಗಿದ್ದ ಸಿಕಂದರ್ ಹಯಾತ್ ಖಾನ್! (ಆ ಕಾಲದಲ್ಲಿ ಸಾವರ್ಕರ್ ಅವರು
ಮುಸ್ಲಿಂ ದ್ವೇಷಿ ಆಗಿರಲಿಲ್ಲ. ಹಾಗಾಗಿ ಅವರ ಸಂಘಟನೆಯಲ್ಲಿ ಬಹಳಷ್ಟು ಜನ ಮುಸ್ಲಿಮರು ಇದ್ದರು).
ಇದೇ ಕಾಲಘಟ್ಟದಲ್ಲಿ
ಇಟಲಿಯ ಕ್ರಾಂತಿಕಾರಿ ಚಳವಳಿಯ ನಾಯಕ ಮಝನಿಯಿಂದ ಪ್ರಭಾವಿತರಾಗುವ ಸಾವರ್ಕರ್ ಆತನ ಜೀವನಚರಿತ್ರೆಯನ್ನು
ಮರಾಠಿಗೆ ಅನುವಾದಿಸುತ್ತಾರೆ. ೧೯೦೯ರಲ್ಲಿ ಬ್ರಿಟಿಷ್ ಅಧಿಕಾರಿ ಕರ್ಜನ್ ವ್ಯಾಲಿಯನ್ನು ಹತ್ಯೆ ಮಾಡಿದ
ಮದನ್ ಲಾಲ್ ದಿಂಗ್ರಾ ಸಾವರ್ಕರ್ ಅವರ ಸಹಚರನಾಗಿದ್ದವನು ಮತ್ತು ಅವರಿಂದ ಪ್ರಭಾವಿತನಾದವನು. ಆತನು
ಹತ್ಯೆ ಮಾಡಿದ ಗನ್ ಪೂರೈಸಿದ್ದು ಮತ್ತು ಆತ ನೇಣಿಗೆ ಕೊರಳು ಕೊಡುವ ಮೊದಲು ಕೋರ್ಟಿಗೆ ನೀಡಿದ ಹೇಳಿಕೆಯನ್ನು
ಬರೆದುಕೊಟ್ಟವರು ಸಾವರ್ಕರ್ ಎಂಬಲ್ಲಿಂದ ಸಾವರ್ಕರ್ ಬ್ರಿಟೀಷ್ ಅಧಿಪತ್ಯಕ್ಕೆ ಕಣ್ಣಿಗೆ ಬೀಳುವಂತಾದರು.
ಮುಂದೆ ಸುಮಾರು ನಲವತ್ತು ವರ್ಷಗಳ ನಂತರ ಯಾರ ಕೊಲೆಯ ಆರೋಪಿಯಾಗಿ ಗುರುತಿಸಲಾಯಿತೋ ಅಂತಹ ಮಹಾತ್ಮಾ
ಗಾಂಧಿಯನ್ನು ಸಾವರ್ಕರ್ ಮೊದಲು ಭೇಟಿಯಾಗಿದ್ದು ಕೂಡ ಇಂಗ್ಲೆಂಡಿನಲ್ಲಿ ಅದೂ ಈ ಬ್ರಿಟೀಷ್ ಅಧಿಕಾರಿಯ
ಕೊಲೆಯ ಸಂದರ್ಭದಲ್ಲಿ. ಆಗ ಅವರೊಡನೆ ನಡೆದ ಚರ್ಚೆಯಲ್ಲಿ ಭಾರತ ಸ್ವಾತಂತ್ರ್ಯಕ್ಕಾಗಿ ಅವರು ನಡೆಸುತ್ತಿರುವ
ಹಿಂಸಾತ್ಮಕ ಕ್ರಾಂತಿಕಾರಿ ಚಟುವಟಿಕೆಗಳು ಮತ್ತು ಗೆರಿಲ್ಲಾ ಯುದ್ಧಗಳ ಪರಿಣಾಮಗಳ ಬಗ್ಗೆ ಕೂಡ ಸಾಕಷ್ಟು
ಚರ್ಚೆಯಾಗುತ್ತದೆ.
ಇದೇ ವೇಳೆಗೆ ಸಾವರ್ಕರ್
ಅವರ ಸಹೋದರ ಗಣೇಶ್ ಸಾವರ್ಕರ್ ಮಹಾರಾಷ್ಟ್ರದಲ್ಲಿ ಮಾರ್ಲೆ-ಮಿಂಟೋ ಸುಧಾರಣೆ ವಿರುದ್ಧ ಸಶಸ್ತ್ರ
ಬಂಡಾಯ ಸಂಘಟಿಸಿದ್ದಕ್ಕಾಗಿ ಅಂಡಮಾನಿನ ಜೀವಾವದಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಇತ್ತ ಭಾರತದಲ್ಲಿ
ಈ ಘಟನೆ ನಡೆಯುವ ಸಂದರ್ಭದಲ್ಲಿಯೇ ಲಂಡನ್ನಿನಲ್ಲಿ ಸಾವರ್ಕರ್ ಬ್ರಿಟೀಷ್ ಅಧಿಕಾರಿಗಳ ಕಣ್ಣಿಗೆ ಬೀಳುವ
ವ್ಯಕ್ತಿಯಾದರು. ಭಾರತದಲ್ಲಿ ಬ್ರಿಟೀಷ್ ಅಧಿಪತ್ಯವನ್ನು ಕಿತ್ತೊಗೆಯುವ ರಾಜದ್ರೋಹದ ಕೆಲಸಗಳಿಗೆ ಇವರ
ಕುಮ್ಮಕ್ಕು ಇದೆ ಎಂಬುದು ಅವರು ಬ್ರಿಟೀಷ್ ಅಧಿಕಾರಿಗಳ ಕಣ್ಣಿಗೆ ಬೀಳಲು ಪ್ರಮುಖ ಕಾರಣವಾಯಿತು. ಬ್ರಿಟೀಷ್
ಅಧಿಪತ್ಯದಿಂದ ಬಂಧನವನ್ನು ತಪ್ಪಿಸಿಕೊಳ್ಳುವ ಸಲುವಾಗಿ ಅವರು ಪ್ಯಾರಿಸ್ ಗೆ ಹೋಗಿ ಮೇಡಂ ಕಾಮಾ ಅವರ
ಮನೆಯಲ್ಲಿ ಆಶ್ರಯ ಪಡೆಯುತ್ತಾರಾದರೂ ಅಲ್ಲಿರಲು ಮನಸ್ಸಾಗದೇ ಸ್ನೇಹಿತರ ಮಾತನ್ನೂ ಅಲಕ್ಷಿಸಿ ಮತ್ತೆ
ಲಂಡನ್ನಿಗೆ ವಾಪಸ್ಸಾಗುತ್ತಾರೆ. ಆಗ ೧೯೧೦ರ ಮಾರ್ಚ್ ೧೩ ರಂದು ಅವರನ್ನು ಮೊಟ್ಟಮೊದಲ ಬಾರಿ ಅನೇಕ
ಆರೋಪಗಳನ್ನು ಹೊರಿಸಿ ಬ್ರಿಟೀಷ್ ಸರ್ಕಾರ ಬಂಧಿಸುತ್ತದೆ.
ಅವರನ್ನು ಬಂಧಿಸಲು
ಕಾರಣವಾಗಿದ್ದ ಪ್ರಮುಖ ಆರೋಪಗಳೆಂದರೆ ಅವರು ಬ್ರಿಟೀಷ್ ಅಧಿಕಾರಿಗಳ ಕೊಲೆಗೆ ಸಂಚುರೂಪಿಸಿದ್ದು, ಭಾರತದಲ್ಲಿ
ಬ್ರಿಟೀಷ್ ಆಡಳಿತ ಕಿತ್ತೊಗೆಯಲು ಪ್ರಯತ್ನಿಸುತ್ತಿರುವುದು, ದ್ವೇಷದ ಭಾಷಣ ಮಾಡುತ್ತಿರುವುದು, ಶಸ್ತ್ರಾಸ್ತ್ರಗಳ
ಕಳ್ಳಸಾಗಾಣಿಕೆ ಇತ್ಯಾದಿಗಳು. ಅವರನ್ನು ಬಂಧಿಸುವ ಸಂದರ್ಭದಲ್ಲಿ ನಿಷೇದಕ್ಕೆ ಒಳಗಾದ ಅವರ ಪುಸ್ತಕಗಳೂ
ಸೇರಿದಂತೆ ಅನೇಕ ʼಕ್ರಾಂತಿಕಾರಿ ಪುಸ್ತಕʼಗಳನ್ನು ಸರ್ಕಾರ ವಶಪಡಿಸಿಕೊಂಡಿತ್ತು. ಇದಲ್ಲದೆ ೨೦ ಹ್ಯಾಂಡ್
ಗನ್ನುಗಳನ್ನು ಭಾರತಕ್ಕೆ ಕಳ್ಳಸಾಗಾಣಿಕೆ ಮಾಡಿದ ಸಾಕ್ಷವನ್ನೂ ಅಧಿಕಾರಿಗಳು ಕಲೆಹಾಕಿದ್ದರು ಮತ್ತು
ಈ ಗನ್ನುಗಳಲ್ಲಿಯೇ ಒಂದನ್ನು ಬಳಸಿ ೧೯೦೯ರಲ್ಲಿ ನಾಸಿಕ್ ಜಿಲ್ಲಾಧಿಕಾರಿ ಎ ಎಂ ಟಿ ಜಾಕ್ಸನ್ ಎಂಬುವನನ್ನು
ಅನಂತ ಲಕ್ಷ್ಮಣ್ ಕನ್ಹೇರೆ ಎಂಬುವನು ಕೊಲೆಮಾಡಿದ್ದ. ಈ ಕೊಲೆಯ ಪಿತೂರಿಯಲ್ಲಿ ಸಾವರ್ಕರ್ ಭಾಗಿಯಾಗಿದ್ದರು
ಎಂಬುದು ಆ ಅಧಿಕಾರಿಗಳ ವಾದವಾಗಿತ್ತು.
ಸಾವರ್ಕರ್ ಅವರ
ಮೇಲೆ ಹೊರಿಸಲಾದ ಅಪರಾಧದ ಚಟುವಟಿಕೆಗಳು ಇಂಗ್ಲೆಂಡ್ ಮತ್ತು ಭಾರತ ಎರಡೂ ದೇಶಗಳಿಗೂ ಸಂಬಂಧಿಸಿದ್ದರೂ
ಸರ್ಕಾರ ಅವರನ್ನು ವಿಚಾರಣೆಗೆ ಒಳಪಡಿಸಲು ಭಾರತವನ್ನೇ ಆಯ್ಕೆಮಾಡಿಕೊಂಡಿತು. ಸಾವರ್ಕರ್ ಅವರನ್ನು
ವಿಚಾರಣೆಗಾಗಿ ಭಾರತಕ್ಕೆ ಪೋಲಿಸ್ ಬಂದೋಬಸ್ತಿನಲ್ಲಿ ಹಡಗಿನಲ್ಲಿ ಕಳಿಸುವ ಏರ್ಪಾಡಾಗುತ್ತದೆ. ಬರುವಾಗ
ಒಂದು ಕುತೂಹಲದ ಘಟನೆಯೂ ನಡೆಯುತ್ತದೆ. ಬಂಧನದಿಂದ ತಪ್ಪಿಸಿಕೊಳ್ಳುವ ಪ್ರಯತ್ನವಾಗಿ ಅವರು ಹಡಗು ಫ್ರೆಂಚ್
ಬಂದರೊಂದರಲ್ಲಿ ನಿಂತಾಗ ಹಡಗಿನ ಕಿಡಕಿಯಿಂದ ಕಡಲಿಗೆ ಹಾರಿ ಈಜಿ ದಡಸೇರಿ ಅಲ್ಲಿನ ಬಂದರಿನ ಫ್ರೆಂಚ್
ಅಧಿಕಾರಿಗಳ ನೆರವು ಕೇಳುತ್ತಾರೆ. ಆದರೆ ಆ ಅಧಿಕಾರಿಗಳು ಸ್ಪಂದಿಸಿ ಅವರಿಗೆ ನೆರವು ನೀಡದೆ ಅವರನ್ನು
ಹಿಡಿದು ಬ್ರಿಟೀಷ್ ಅಧಿಕಾರಿಗಳಿಗೆ ಮರಳಿ ಒಪ್ಪಿಸಿಬಿಡುತ್ತಾರೆ. ಹೀಗಾಗಿ ತಪ್ಪಿಸಿಕೊಳ್ಳುವ ಅವರ
ಮೊದಲ ವೀರೋಚಿತ ಪ್ರಯತ್ನವೇ ವಿಫಲವಾಗಿಬಿಡುತ್ತದೆ!
ಅಂಡಮಾನಿನ ಜೈಲು ಮತ್ತು ಅಲ್ಲಿನೆ ಸೆರೆವಾಸಿಗಳು:
ಭಾರತದ ಬಾಂಬೆ
(ಈಗಿನ ಮುಂಬೈ)ಯಲ್ಲಿ ಅವರ ವಿಚಾರಣೆ ನಡೆಯುತ್ತದೆ. ನಾಸಿಕ್ ಜಿಲ್ಲಾಧಿಕಾರಿ ಕೊಲೆಯ ವಿಚಾರಣೆ ನಡೆಸಿದ
ನ್ಯಾಯಾಲಯ ಅವರನ್ನು ಅಪರಾಧಿ ಎಂದು ಪರಿಗಣಿಸಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು, ಅವರಿಗೆ
ಜೀವಾವಧಿ ಶಿಕ್ಷೆಯನ್ನು ವಿಧಿಸಿ ಅಂಡಮಾನಿನ ಸೆಲ್ಯುಲರ್ ಜೈಲಿಗೆ ಕಳಿಸುತ್ತದೆ. ಇಲ್ಲಿಯವರೆಗೆ ಹೆಚ್ಚುಕಡಿಮೆ
ಭಾರತದ ಇತರೆ ಸ್ವಾತಂತ್ರ್ಯ ಹೋರಾಟಗಾರರ ಬದುಕಿನಂತೆಯೇ ಇದ್ದ ಸಾವರ್ಕರ್ ಅವರ ಬದುಕು ಇಲ್ಲಿಂದ ಮುಂದೆ
ಚಿತ್ರವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತ್ತದೆ ಮತ್ತು ಸಾರ್ವಜನಿಕ ಭಿನ್ನಾಭಿಪ್ರಾಯಗಳ ಮಿತಿಮೀರಿದ
ಚರ್ಚೆಗೆ ಆಹಾರವಾಗುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ತುಸು ವಿವರವಾಗಿ ನೋಡೋಣ.
ಅಂಡಮಾನಿನ ಜೈಲಿನ ಬಗ್ಗೆ ಹೇಳುವುದಾದರೆ ಅದು ಒಟ್ಟು ಏಳು ವಿಭಾಗಗಳಲ್ಲಿ ಇದ್ದ ಒಟ್ಟು ಏಳುನೂರು ಗೂಡುಗಳು (ಸೆಲ್) ಇದ್ದ ಜೈಲು. ಅಲ್ಲಿ ದೊಡ್ಡ ಹಜಾರ ಅಥವಾ ಕೋಣೆಗಳಿರಲಿಲ್ಲ. ಯಾವಾಗಲೂ ಖೈದಿಗಳು ಈ ಗೂಡುಗಳಲ್ಲಿಯೇ ನರಕ ಸದೃಶ್ಯವಾದ ಜೀವನವನ್ನು ಸಾಗಿಸಬೇಕಾಗಿತ್ತು. ಈ ಜೈಲಿನಲ್ಲಿ ಏಕಕಾಲಕ್ಕೆ ಒಟ್ಟು ೭೦೦ ಕೈದಿಗಳನ್ನು ಇರಿಸಬಹುದಾಗಿರುತ್ತದೆ. ಇಲ್ಲಿಗೆ ಬ್ರಿಟೀಷರು ಕಳಿಸುತ್ತಿದ್ದ ಖೈದಿಗಳಲ್ಲಿ ರಾಜಕೀಯ ಕೈದಿಗಳ ಜೊತೆ ಇತರೆ ಅಪರಾಧ ಮಾಡಿದವರೂ ಇರುತ್ತಿದ್ದರು. ಇವರಲ್ಲಿ ಮಹಿಳೆಯರೂ ಇದ್ದರು. ಕೆಲವು ದಾಖಲೆಗಳ ಪ್ರಕಾರ ೧೮೫೭ರ ದಂಗೆಯಲ್ಲಿ ಪಾಲ್ಗೊಂಡ ಕೈದಿಗಳ ಒಂದು ತಂಡವನ್ನು ಬ್ರಿಟೀಷರು ಮೊದಲಸಲ ಇಲ್ಲಿಗೆ ತರುತ್ತಾರೆ. ಇಲ್ಲಿ ಗಮನಿಸಬೇಕಾದ ಮುಖ್ಯಸಂಗತಿ ಏನೆಂದರೆ ಬ್ರಿಟೀಷರು ಕೇವಲ ಸಾವರ್ಕರ್ ಅವರನ್ನು ಮಾತ್ರ ಇಲ್ಲಿಗೆ ತರಲಿಲ್ಲ. ಅದಕ್ಕೂ ಮೊದಲೇ ಅನೇಕರನ್ನು ಅಲ್ಲಿ ಇರಿಸಿದ್ದರು. ಇವರಲ್ಲಿ ಪ್ರಸಿದ್ಧ ನ್ಯಾಯಶಾಸ್ತ್ರ ಪಂಡಿತರೂ ಲೇಖಕರೂ ಆಗಿದ್ದ ಮತ್ತು ಬ್ರಿಟೀಷ್ ಆಳ್ವಿಕೆಯ ಕಾಲದಲ್ಲಿ ದೆಹಲಿಯಲ್ಲಿ ನ್ಯಾಯಾಧೀಶರಾಗಿದ್ದ ಮೌಲ್ವಿ ಫಜಲ್ ಎ ಹಕ್ ಖೈರಾಬಾದಿ, ಮೌಲ್ವಿ ಲಿಯಾಕತ್ ಅಲಹಾಬಾದಿ, ಮೊಹಮದ್ ಜಾಫರ್ ಥಾನೆಸ್ರಿ ಮುಂತಾದ ಮುಸ್ಲಿಂ ಸಮುದಾಯದ ಮಹಾನ್ ನಾಯಕರೂ ಇದ್ದರು. ಇದರಲ್ಲಿ ಮೊದಲಿಬ್ಬರು ಅಲ್ಲಿಯೇ ಮರಣಹೊಂದಿದರೆ ಕೊನೆಯವರು ೧೮೮೩ ರಲ್ಲಿ ಬಿಡುಗಡೆಯಾದರು. ಬಹುಭಾಷಾ ಪ್ರವೀಣರಾಗಿದ್ದ ಥಾನೆಸ್ರಿ ಅವರು ತಮ್ಮ ಅಲ್ಲಿನ ಅನುಭವವನ್ನು ʼತ್ವರೀಕ್-ಎ-ಅಜೀಬ್ ಯಾನಿ ಕಾಲಾ ಪಾನಿʼ (ಪರಕೀಯ ನಾಡಿನ ಚರಿತ್ರೆ: ಕರಿನೀರು) ಎಂಬ ಪ್ರಮುಖ ಕೃತಿ ಬರೆದು ವಿವರಿಸಿದರು.
ಆ ನಂತರ ಅಂಡಮಾನಿಗೆ
ಕಳಿಸಲ್ಪಟ್ಟ ದೊಡ್ಡ ಸಂಖ್ಯೆಯ ಕೈದಿಗಳೆಂದರೆ ವಹಾಬಿ ದಂಗೆಯ ನೇತೃತ್ವ ವಹಿಸಿದ್ದ ಮುಸ್ಲಿಂ ಕ್ರಾಂತಿಕಾರಿಗಳು.
ಇವರಲ್ಲಿ ಅನೇಕರು ೧೮೫೭ರ ದಂಗೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಈ ಕೈದಿಗಳ ಪೈಕಿ ಒಬ್ಬರಾಗಿದ್ದ
ಶೇರ್ ಅಲಿ ಅಫ್ರಿದಿ ಎಂಬುವರು ಈ ಸೆಲ್ಯೂಲರ್ ಜೈಲಿಗೆ ಆಗ ಭೇಟಿ ನೀಡಿದ್ದ ಆಗಿನ ಭಾರತದ ವೈಸರಾಯ್
ಲಾರ್ಡ್ ಮೇಯೋರವರ ಹತ್ಯೆಯನ್ನೇ ಮಾಡಿಬಿಟ್ಟರು! ಅಂದರೆ ಸಾವರ್ಕರ್ ಅವರನ್ನು ಅಲ್ಲಿಗೆ ಕಳಿಸುವ ವೇಳೆಗಾಗಲೇ
ಅನೇಕ ಕ್ರಾಂತಿಕಾರಿಗಳು ವಿದ್ವಾಂಸರು ಇಂಥವರನ್ನು ಅಲ್ಲಿ ಶಿಕ್ಷೆಗೆ ಒಳಪಡಿಸಿದ್ದರಿಂದ ಅಂಡಮಾನಿನ
ಸೆಲ್ಯೂಲರ್ ಜೈಲು ಆಗಲೇ ಸಾಕಷ್ಟು ಹೆಸರು ಪಡೆದುಕೊಂಡಿತ್ತು.
ನರಕಸದೃಶ್ಯ ಹಿಂಸೆಯೂ ಸಾವರ್ಕರ್ ಕ್ಷಮಾಪಣಾ ಪತ್ರಗಳೂ…
ಸಾವರ್ಕರ್ ಅವರಿಗೆ
ಎರಡು ವಿಶೇಷ ನ್ಯಾಯಾಲಯಗಳು ಅನುಕ್ರಮವಾಗಿ ೧೯೧೦ರ ಡಿಸೆಂಬರ್ ೩ ಮತ್ತು ೧೯೧೧ರ ಜನವರಿ ೩೦ ರ ದಿನಗಳಂದು
ತೀರ್ಪುನೀಡಿ ಎರಡು ಜೀವಾವಧಿ ಶಿಕ್ಷೆಯನ್ನು ವಿಧಿಸಿದವು. ಈ ಎರಡೂ ಜೀವಾವಧಿ ಶಿಕ್ಷೆಗಳ ಒಟ್ಟು ಅವಧಿ
೫೦ ವರ್ಷವಾಗಿತ್ತು. ಅದನ್ನು ಕಳೆಯಲು ಅವರನ್ನು ಅಂಡಮಾನಿನ ಈ ಜೈಲಿಗೆ ೧೯೧೧ರ ಜುಲೈ ೪ ರಂದು ಕಳಿಸಲಾಗುತ್ತದೆ.
ಆದರೆ ಅಲ್ಲಿಂದ ಕೇವಲ ೧೦ ವರ್ಷಗಳ ಒಳಗಾಗಿಯೇ ಅವರನ್ನು ಭಾರತದ ಮುಖ್ಯಭಾಗದಲ್ಲಿರುವ ಮಹಾರಾಷ್ಟ್ರದ
ಯರವಾಡ ಜೈಲಿಗೆ ಸ್ಥಳಾಂತರಿಸಲಾಗುತ್ತದೆ. ಮತ್ತು ಅಂತಿಮವಾಗಿ ೧೯೨೪ ರ ಜನವರಿ ೬ ರಂದು ಅವರನ್ನು ಕೆಲವು
ಷರತ್ತುಗಳೊಂದಿಗೆ ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ. ಮುಂದೆ ೧೯೩೪ ರಲ್ಲಿ ಹಿಂದೂ ಮಹಾಸಭಾದ ವಾಮನ್
ರಾವ್ ಚವ್ಹಾಣ್ ಎಂಬುವನು ಬ್ರಿಟೀಷ್ ಮಿಲಿಟರಿ ಅಧಿಕಾರಿ ಸ್ವೀಟ್ ಲ್ಯಾಂಡ್ ಎಂಬುವನ ಮೇಲೆ ಗುಂಡುಹಾರಿಸಿದ
ಪ್ರಕರಣದಲ್ಲಿ ಇವರನ್ನು ಬಂಧಿಸಿ ಎರಡುವಾರ ಜೈಲಿನಲ್ಲಿ ಇಡಲಾಗಿತ್ತಾದರೂ ಆ ಪ್ರಕರಣಕ್ಕೂ ನನಗೂ ಏನೂ
ಸಂಬಂಧವಿಲ್ಲ ಎಂಬ ಹೇಳಿಕೆ ನೀಡಿ ಇನ್ನುಮುಂದೆ ಯಾವುದೇ ರಾಜಕೀಯ ಚಳವಳಿಗಳಲ್ಲಿ ಪಾಲ್ಗೊಳ್ಳುವುದಿಲ್ಲವೆಂದು
ಮಚ್ಚಳಿಕೆ ಬರೆದುಕೊಟ್ಟು ಇವರು ಹೊರಬರುತ್ತಾರೆ.
ಹೀಗೆ ತಮಗೆ ವಿಧಿಸಲಾಗಿದ್ದ
ಒಟ್ಟು ಐವತ್ತು ವರ್ಷಗಳ ಜೈಲುಶಿಕ್ಷೆಯಲ್ಲಿ ಸಾವರ್ಕರ್ ಜೈಲಿನಲ್ಲಿ ಕಳೆದದ್ದು ಒಟ್ಟು ಹದಿಮೂರು ವರ್ಷ
ಮಾತ್ರ! ಅದರಲ್ಲಿಯೂ ಅಂಡಮಾನಿನ ಕರಿನೀರಿನ ಶಿಕ್ಷೆ ಅನುಭವಿಸಿದ್ದು ಹತ್ತು ವರ್ಷಗಳು ಮಾತ್ರ! ಉಳಿದ
ಮೂವತ್ತೇಳು ವರ್ಷಗಳ ರಿಯಾಯತಿಯನ್ನು ಅವರು ಬ್ರಿಟೀಷ್ ಸರ್ಕಾರದಿಂದ ಪಡೆದರು. ಅಂದರೆ ಒಟ್ಟು ಶಿಕ್ಷೆಯಲ್ಲಿ
ಮುಕ್ಕಾಲು ಪಾಲು ರಿಯಾಯತಿ ಪಡೆದು ಕಾಲುಭಾಗ ಮಾತ್ರ ಶಿಕ್ಷೆ ಅನುಭವಿಸಿದರು. ಭಾರತದ ಯಾವ ಸ್ವಾತಂತ್ರ್ಯ
ಹೋರಾಟಗಾರನಿಗೂ ಇಷ್ಟೊಂದು ದೊಡ್ಡ ಪ್ರಮಾಣದ ರಿಯಾಯತಿಯನ್ನು ಬ್ರಿಟೀಷ್ ಸರ್ಕಾರ ನೀಡಿರಲಿಲ್ಲ ಎಂಬುದನ್ನು
ನಾವು ಗಮನಿಸಬೇಕು.
ಇದಕ್ಕೆ ಕಾರಣವೇನು
ಎಂಬುದನ್ನು ನೋಡೋಣ. ಅಂಡಮಾನಿನ ಸೆಲ್ಯುಲರ್ ಜೈಲು ಶಿಕ್ಷೆ ಒಂದು ಉಗ್ರಶಿಕ್ಷೆಯಾಗಿದ್ದು ಅಲ್ಲಿನ
ಶಿಕ್ಷೆ ಭಯಾನಕವಾಗಿತ್ತು ಎಂಬುದು ಸತ್ಯ. ಅದರ ವಿವರಗಳನ್ನು ಅಲ್ಲಿ ಶಿಕ್ಷೆ ಅನುಭವಿಸಿ ಬಂದವರಲ್ಲಿ
ಕೆಲವರು ಅನುಭವ ಕಥನಗಳಾಗಿ ಬರೆದಿದ್ದಾರೆ. ಅನೇಕ ಸಂಶೋಧಕರೂ ಈ ಬಗ್ಗೆ ಸಂಶೋಧನೆ ಮಾಡಿ ಸತ್ಯಾಂಶಗಳನ್ನು
ದಾಖಲಿಸಿದ್ದಾರೆ. ೧೮೫೭ ರ ಕ್ರಾಂತಿಯಲ್ಲಿ ಬ್ರಿಟೀಷ್ ಅಧಿಪತ್ಯಕ್ಕೆ ತಲೆಬಾಗದ ಅನೇಕ ಕ್ರಾಂತಿಕಾರಿಗಳು
ಈ ಜೈಲಿನಲ್ಲಿಯೇ ಹುತಾತ್ಮರಾದರು. ಅಂಥವರನೇಕರ ಹೆಸರು ಇಂದು ಯಾರಿಗೂ ಗೊತ್ತಿಲ್ಲದಂತೆ ಚರಿತ್ರೆಯಲ್ಲಿ
ಹುದುಗಿಹೋಗಿವೆ. ಇಲ್ಲಿನ ಕಠಿಣ ಶಿಕ್ಷೆಯನ್ನು ಅನುಭವಿಸಿ ಹೊರಬಂದು ೧೯೭೦ರ ದಶಕದಲ್ಲಿ ಮರಣಹೊಂದಿದ
ತ್ರೈಲೋಕ್ಯನಾಥ್ ಚಕ್ರವರ್ತಿ (ಮಹಾರಾಜ್ ಎಂದು ಕರೆಯಲ್ಪಡುತ್ತಿದ್ದವರು) ʼ ಮೂವತ್ತು ವರ್ಷಗಳ ಜೈಲುವಾಸʼ
ಎಂಬ ಪುಸ್ತಕವನ್ನು ಬಂಗಾಲಿಯಲ್ಲಿ ಬರೆದು ಅಲ್ಲಿನ ಜೀವನ ವಿವರವನ್ನು ನೀಡಿದ್ದಾರೆ. ಅವರ ಪ್ರಕಾರ ಪ್ರತಿತಿಂಗಳು
ಸರಾಸರಿ ಮೂವರು ಕೈದಿಗಳು ಹಿಂಸೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು! ಅಸ್ತಮಾ ರೋಗಿಯಾಗಿದ್ದ
ಇವರಿಗೆ ಸ್ವಲ್ಪವೂ ಕರುಣೆ ತೋರದೆ, ʻಇದು ಜೈಲು ನಿನಗೆ ಕುಡಿಯಲು ಹಾಲು ಕೊಡ್ಬೇಕಾʼ ಎಂದು ಜೈಲು ಅಧಿಕಾರಿಗಳು
ಕ್ರೂರತೆ ಪ್ರದರ್ಶಿಸುತ್ತಿದ್ದರಂತೆ. ಊಟಮಾಡುವಾಗ ಒಬ್ಬ ಕೈದಿಯ ಹತ್ತಿರ ಇನ್ನೊಬ್ಬ ಕೈದಿ ಜೊತೆಗೂಡದಂತೆ
ಅಧಿಕಾರಿಗಳು ಎಚ್ಚರಿಕೆ ವಹಿಸುತ್ತಿದ್ದರಂತೆ. ಸಣ್ಣಪುಟ್ಟ ಕಾರಣಗಳಿಗೂ ಹೊಡೆಯುವುದು ಬೈಯುವುದು ತೀರಾ
ಸಾಮಾನ್ಯ ಸಂಗತಿಯಾಗಿತ್ತಂತೆ. ʼಸೂಳೆಮಗʼ ʼಬೋಳಿಮಗʼ ಇಂತಹ ಬೈಗುಳಗಳಂತೂ ತೀರಾ ಸಹಜ ಮತ್ತು ಸಾಮಾನ್ಯವಾಗಿದ್ದವಂತೆ.
ಇಲ್ಲಿನ ಚಿತ್ರಹಿಂಸೆ,
ಹೊಟ್ಟೆ ತುಂಬಾ ಆಹಾರ ನೀಡದೆ ಒಂದು ಗುಟುಕು ಗಂಜಿ ನೀಡುವುದು, ಮೈಮುರಿಯುವ ಕೆಲಸ, ಅನಾರೋಗ್ಯದ ನಿರ್ಲಕ್ಷ
ಇತ್ಯಾದಿಗಳಿಂದ ಅನೇಕ ಕಟ್ಟುಮಸ್ತಾದ ದೇಹಧಾಡ್ಯ ಹೊಂದಿದವರು ಅಕಾಲವೃದ್ಧರಾಗುವುದು ಸಾವಿಗೀಡಾಗುವುದು
ನಡೆಯುತ್ತದೆ. ಈ ಚಿತ್ರಹಿಂಸೆ ತಾಳಿಕೊಳ್ಳಲಾಗದೆ ಕೆಲವರು ಜೀವಕಳೆದುಕೊಂಡರೆ ಕೆಲವರು ಇಂತಹ ಚಿತ್ರಹಿಂಸೆಯ
ಮಧ್ಯೆಯೂ ತಾವು ನಂಬಿದ ತತ್ವಗಳಿಗಾಗಿ ಜೀವಹಿಡಿದುಕೊಂಡು ನರಕಯಾತನೆಯನ್ನು ಅನುಭವಿಸುತ್ತಾರೆ. ಪಂಡಿತ್
ರಾಮರಕ್ಷ ಎಂಬ ಒಬ್ಬ ಕೈದಿ ಇಲ್ಲಿಗೆ ಬಂದಾಗ ಅವನ ಮೈಮೇಲೆ ಜನಿವಾರ ಇರುತ್ತದೆ. ಜೈಲು ನಿಯಮದ ಪ್ರಕಾರ
ಅದನ್ನು ಅವನು ತೆಗೆಯಬೇಕಾಗುತ್ತದೆ. ಆದರೆ ಅದನ್ನು ತೆಗೆಯಲು ಅವನು ಒಪ್ಪುವುದಿಲ್ಲ. ಅಧಿಕಾರಿಗಳು
ಬಲತ್ಕಾರದಿಂದ ಅದನ್ನು ಕಿತ್ತುಹಾಕಿದ್ದರಿಂದ ಅವನು ಊಟಬಿಟ್ಟು ಅದನ್ನು ಮರಳಿಕೊಡಲು ಸತ್ಯಾಗ್ರಹ ಮಾಡುತ್ತಾನೆ.
ಕೊನೆಗೂ ಅಧಿಕಾರಿಗಳು ಅದನ್ನು ಮರಳಿಸಲಿಲ್ಲ. ರಾಮರಕ್ಷ ಸತತ ಮೂರು ತಿಂಗಳು ಕಾಲ ಹೀಗೆ ಹೋರಾಡಿ ಜನಿವಾರಕ್ಕಾಗಿ
ತನ್ನ ಪ್ರಾಣವನ್ನೆ ಬಿಡುತ್ತಾರೆ!
ಇನ್ನೊಬ್ಬ ಕೈದಿ
ಉಲ್ಲಾಸ್ಕರ್ ದತ್ತ ಎಂಬುವರನ್ನು ಇನ್ನಿಬ್ಬರು ಕೈದಿಗಳೊಂದಿಗೆ ಎಣ್ಣೆ ತೆಗೆಯುವ ಗಾಣಕ್ಕೆ ಎತ್ತನ್ನು
ಕಟ್ಟುವಂತೆ ಕಟ್ಟಿ ದಿನಕ್ಕೆ ೮೦ ಪೌಂಡ್ ಎಣ್ಣೆ ತೆಗೆಯುವಂತೆ ಬಲಾತ್ಕಾರ ಮಾಡುತ್ತಾರೆ. (ದಿನಕ್ಕೆ
೧೫ ಪೌಂಡ್ ಎಣ್ಣೆ ತೆಗೆಯುವುದು ಎತ್ತುಗಳಿಗೂ ಕಷ್ಟ!) ಅಲ್ಲಿನ ಅನ್ಯಾಯವನ್ನು ಪ್ರತಿಭಟಿಸಿ ಉಪವಾಸ
ಮಾಡುವುದು, ಅಂಥವರು ತಮ್ಮ ತತ್ವಸಿದ್ದಾಂತಕ್ಕಾಗಿ ಸಾಯುವುದು ಮತ್ತು ಸತ್ತವರನ್ನು ಸಮುದ್ರಕ್ಕೆ ಎಸೆಯುವುದು
ಅಲ್ಲಿನ ತೀರಾ ಸಹಜ ನಡವಳಿಕೆಗಳಾಗಿರುತ್ತವೆ. ಇಂತಹ ಘೋರಶಿಕ್ಷೆಗಳು ಸಾವರ್ಕರ್ ಅವರು ತಮ್ಮ ಆಲೋಚನೆಯನ್ನು
ಬದಲಿಸಿಕೊಳ್ಳುವಂತೆ ಮಾಡುತ್ತವೆ. ಅವರಿಗೆ ಅಂತಹ ಶಿಕ್ಷೆಗೆ ಎದುರಾಗಲು ಆಗಲಿಲ್ಲ; ಸಾಯಲೂ ಮನಸ್ಸು
ಬರಲಿಲ್ಲ. ಹಾಗಾಗಿ ಅವರ ಹತ್ತಿರ ಉಳಿದದ್ದು ಒಂದೇ ಆಯ್ಕೆ; ಅದು ಬ್ರಿಟೀಷ್ ಸರ್ಕಾರಕ್ಕೆ ಕ್ಷಮಾಪಣಾ
ಪತ್ರ ಬರೆದು ಕನಿಕರ ತೋರಿಸಲು ಕೋರುವುದು! ಸಾವರ್ಕರ್ ಇದನ್ನೇ ಆಯ್ದುಕೊಳ್ಳುತ್ತಾರೆ. ಒಟ್ಟು ಅವರು
ಬ್ರಿಟೀಷ್ ಸರ್ಕಾರಕ್ಕೆ ಬರೆದದ್ದು ಒಂದಲ್ಲ ಎರಡಲ್ಲ ಐದು ಕ್ಷಮಾಪಣಾ ಪತ್ರಗಳು!
ಅವರು ಈ ಪತ್ರಗಳನ್ನು
ಬರೆದದ್ದನ್ನು ಸಮರ್ಥಿಸಿಕೊಂಡ ಸಂಘ ಪರಿವಾರದ ಮುಖವಾಣಿ ʻಆರ್ಗನೈಸರ್ʼ
ಅದನ್ನು ಸಮರ್ಥಿಸಿದ್ದು ಹೀಗೆ, “ಅವರು ಒಬ್ಬ ಸಮರ್ಥ ತಂತ್ರಗಾರ. ವಸಾಹತುಶಾಹಿಯನ್ನು ಹಿಮ್ಮೆಟ್ಟಿಸಲು
ದೇಶವು ಅತ್ಯುತ್ರಗಾವಿ ಹೋರಾಡುತ್ತಿರುವ?ಾಗ ಜೈಲಿನಲ್ಲಿ ಟ್ರಿಟೀಷರಿಂದ ಚಿತ್ರಹಿಂಸೆಗೆ ಒಳಗಾಗಿ ತಾನು
ತನ್ನ ಬದುಕಿನ ಬಹುಮುಖ್ಯ ಸಮಯವನ್ನು ವ್ಯರ್ಥಮಾಡಿಕೊಳ್ಳುತ್ತಿದ್ದೇನೆ ಎಂದು ಭಾವಿಸಿದರು.. ದರಿದ್ರ
ಜೈಲಿನಿಂದ ಹೊರಬಂದು ಸಕ್ರಿಯ ರಾಜಕೀಯ ಮತ್ತು ಸ್ವಾತಂತ್ರ್ಯ ಚಳವಳಿಗೆ ಹಿಂದಿರುಗುವ ಸಲುವಾಗಿ ಅವರು
ಈ ಪತ್ರಗಳನ್ನು ಬರೆದದ್ದು ಸಮರ್ಥನೀಯವೇ ಸರಿ.” ಆದರೆ
ಅವರ ಕ್ಷಮಾಪಣೆ ಪತ್ರಗಳನ್ನು ಇಲ್ಲಿ ಸಮರ್ಥನೆ ಮಾಡಿಕೊಂಡಂತೆ ಮುಂದೆ ಏನೂ ಆಗಲಿಲ್ಲ. ಶತ್ರುವಿನ ಮುಂದೆ
ಸೋಲೊಪ್ಪಿದಂತೆ ಅಥವಾ ಶರಣಾದಂತೆ ನಟಿಸಿ ಮುಂದೆ ಸಮಯ ಸಿಕ್ಕಾಗ ಹೊಂಚುಹಾಕಿ ಮತ್ತೆ ಅವರ ಮೇಲೆ ಎರಗುವುದು
ಒಂದು ಯುದ್ಧತಂತ್ರವೆಂಬುದು ಸತ್ಯ. ಆದರೆ ಅಂತಹ ಯಾವ ಕೆಲಸವನ್ನೂ ಮುಂದೆ ಸಾವರ್ಕರ್ ಮಾಡಲಿಲ್ಲ. ತಾವು ಏನನ್ನು ಬರೆದುಕೊಟ್ಟಿದ್ದರೋ
ಅದರಂತೆ ಬ್ರಿಟೀಷ್ ಸರ್ಕಾರಕ್ಕೆ ವಿಧೇಯರಾಗಿ ಸಾಧ್ಯವಿದ್ದಷ್ಟೂ ಅವರಿಗೆ ಸಹಾಯ ಮಾಡುತ್ತಾ ಬದುಕಿದರು!
ಹಾಗೆ
ನೋಡಿದರೆ ಕ್ಷಮಾಪಣೆ ಪತ್ರವನ್ನು ಬರೆದವರು ಕೇವಲ ಸಾವರ್ಕರ್ ಮಾತ್ರವಲ್ಲ; ಇನ್ನೂ ಹಲವಾರು ಜನ ಬರೆದಿದ್ದರು.
ಆದರೆ ಬ್ರಿಟೀಷ್ ಸರ್ಕಾರ ವಿಧಿಸಿದ ಷರತ್ತುಗಳು ಭಾರತ ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕುವ ಕ್ರಮವಾಗಿವೆ
ಎಂದು ಅನ್ನಿಸಿ ಅವರು ಅವುಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದರು. ಆದರೆ ಸಾವರ್ಕರ್ ಅವರಿಗೆ ತಮ್ಮ
ವೈಯಕ್ತಿಕ ಸ್ವಾತಂತ್ರ್ಯವು ದೇಶದ ಸ್ವಾತಂತ್ರ್ಯಕ್ಕಿಂತ ದೊಡ್ಡದು ಎನ್ನಿಸಿಯೋ ಏನೋ ಬ್ರಿಟೀಷ್ ಸರ್ಕಾರದ
ಎಲ್ಲ ಷರತ್ತುಗಳಳನ್ನು ಸಂತೋಷದಿಂದಲೇ ಒಪ್ಪಿಕೊಂಡು ಅವರು ಬಿಡುಗಡೆಹೊಂದಿದರು.
ಬಿಡುಗಡೆಯ ನಂತರದ ಸಾವರ್ಕರ್ ಬದುಕು
ಸಾವರ್ಕರ್
ಅವರ ತಂದೆ ಅಂಚೆ ಇಲಾಖೆಯಲ್ಲಿ ಸಣ್ಣ ಕೆಲಸದಲ್ಲಿದ್ದು ನಿವೃತ್ತರಾಗಿ ಇಂದಿನ ಮಹಾರಾಷ್ಟ್ರದ ರತ್ನಗಿರಿಯಲ್ಲಿ
ನೆಲೆಸಿದ್ದರು. ಬಿಡುಗಡೆಯ ನಂತರ ಸಾವರ್ಕರ್ ಕೂಡ ಇಲ್ಲಿಯೇ ನೆಲೆಯಾದರು. ಇಲ್ಲಿಗೆ ಅವರ ಸ್ವಾತಂತ್ರ್ಯ
ಹೋರಾಟದ ಕತೆ ಮುಗಿಯುತ್ತದೆ. ಇದೇನೂ ತೀರಾ ಅವರನ್ನು ನಿಂದಿಸಬೇಕಾದ ಸಂಗತಿಯಲ್ಲ. ಸ್ವಾತಂತ್ರ್ಯ ಹೋರಾಟವವನ್ನು
ಅವರು ಮಧ್ಯದಲ್ಲಿ ನಿಲ್ಲಿಸಿದ್ದು ಸರಿಯಲ್ಲ ಎಂದು ನಮಗೆ ಅನ್ನಿಸಿದರೂ ಅದು ದೊಡ್ಡ ಅಪರಾಧವೇನಲ್ಲ.
ಅದಕ್ಕಾಗಿಯೇ ನಾವು ಅವರನ್ನು ಹಂಗಿಸಬೇಕಾಗಿಲ್ಲ. ಹಾಗೆ ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಚಳವಳಿಗೆ
ವಿಮುಖರಾದವರು ಅವರೊಬ್ಬರೇ ಆಗಿರಲಿಲ್ಲ. ಅರವಿಂದ ಘೋಷ್ ಅವರೂ ಕೂಡ ಚಳವಳಿಗೆ ವಿಮುಖರಾಗಿ ಪಾಂಡಿಚೇರಿಯಲ್ಲಿ
ಆಶ್ರಮ ಕಟ್ಟಿಕೊಂಡು ಆಧ್ಯಾತ್ಮಕ ಸಾಧನೆಗೆ ತೊಡಗಿದ್ದರು. ಆದರೆ ಅರವಿಂದ ಘೋಷ್ ಅವರಿಗೆ ಇಲ್ಲದ ಟೀಕೆ
ವಿವಾದಗಳು ಸಾವರ್ಕರ್ ಅವರನ್ನು ಸುತ್ತಿಕೊಂಡವು. ಇದಕ್ಕೆ ಕಾರಣವೇನು?
ಸ್ವಾತಂತ್ರ್ಯ
ಚಳವಳಿಯಿಂದ ವಿಮುಖರಾದರೂ ಅರವಿಂದರ ಹಾಗೆ ಸಾವರ್ಕರ್ ಅವರು ಕೂಡ ಅರವಿಂದ ಘೋಷ್ ಅವರಂತೆ ಆಧ್ಯಾತ್ತ್ಮಿಕ
ಸಾಧನೆಯಲ್ಲಿಯೋ ಅಥವಾ ತಮ್ಮ ವೈಯಕ್ತಿಕ ಬದುಕಿನಲ್ಲಿಯೇ ಲೀನವಾಗಿದ್ದರೆ ಬಹುಶಃ ಅವರು ಇಷ್ಟೊಂದು ಟೀಕೆಗೆ
ಒಳಗಾಗುತ್ತಿರಲಿಲ್ಲ. ಆದರೆ ಅವರು ಹಾಗೆ ಮಾಡಲಿಲ್ಲ. ಬದಲಾಗಿ ಯಾವ ಬ್ರಿಟೀಷರ ವಿರುದ್ಧ ಅವರು ತಮ್ಮ
ಆರಂಭಿಕ ಜೀವನದಲ್ಲಿ ಪ್ರಾಮಾಣಿಕವಾಗಿ ಹೋರಾಡಿದ್ದರೋ ಅದೇ ಬ್ರಿಟೀಷರ ಜೊತೆಗೆ ತಮ್ಮ ಜೀವನದ ಉತ್ತರ
ಕಾಲಘಟ್ಟದಲ್ಲಿ ಸೇರಿಕೊಂಡು ನಮ್ಮ ಸ್ವಾತಂತ್ರ್ಯ ಚಳವಳಿಗೆ ದ್ರೋಹ ಬಗೆದದ್ದು ಅಕ್ಷಮ್ಯ ಅಪರಾಧವಾಯಿತು.
ಸ್ವಾತಂತ್ರ್ಯ ಚಳವಳಿಯು ಹಿಂದೂ ಮುಸ್ಲಿಮ್ ಐಕ್ಯತೆಯಿಂದಾಗಿ ಗಟ್ಟಿಗೊಳ್ಳುತ್ತಾ ಹೋದಂತೆ ಬ್ರಿಟೀಷರಿಗೆ
ಅದನ್ನು ಬಗ್ಗುಬಡಿಯುವುದು ಕಷ್ಟವಾಗತೊಡಗಿತು. ಅದಕ್ಕೆ ಅವರು ಈ ಎರಡು ಬಲಾಢ್ಯ ಕೋಮುಗಳ ಐಕ್ಯತೆಯನ್ನು
ಒಡೆಯಲು ಹವಣಿಸುತ್ತಿದ್ದರು. ಅದೇ ಹೊತ್ತಿಗೆ ಅಸ್ತ್ರವಾಗಿ ಅವರಿಗೆ ಸಾವರ್ಕರ್ ಸಿಕ್ಕರು. ಯಾವಾಗ
ಇವರನ್ನು ಹಿಂದೂಗಳ ನಾಯಕರನ್ನಾಗಿ ರೂಪಿಸಿ ಮುಸ್ಲಿಮರ ವಿರುದ್ಧ ಹರಿಹಾಯಲು ಬಿಡಬಹುದು ಎನ್ನಿಸಿತೋ
ಆ ಕ್ಷಣ ಬ್ರಿಟೀಷರು ಇವರನ್ನು ಜೈಲಿನಿಂದ ಬಿಡುಗಡೆಮಾಡಿಬಿಟ್ಟರು!
ಜೈಲಿನಿಂದ
ಬಿಡುಗಡೆಯಾದ ಮೇಲೆ ಸಾವರ್ಕರ್ ಹಿಂದುತ್ವದ ಪ್ರತಿಪಾದಕರಾಗಿ ಬ್ರಿಟೀಷರಿಗೆ ಬರೆದುಕೊಟ್ಟ ಕ್ಷಮಾಪಣಾ
ಪತ್ರದಲ್ಲಿ ತಿಳಿಸಿದಂತೆ ಅವರಿಗೆ ಅನುಕೂಲಕರವಾದ ಚಟುವಟಿಕೆಗಳನ್ನು ಮಾಡುವುದರಲ್ಲಿ ನಿರತರಾದರು. ೧೯೪೨ರ
ಭಾರತಬಿಟ್ಟು ತೊಲಗಿ ಚಳವಳಿ ಕಾಲಘಟ್ಟದಲ್ಲಿ ಗಾಂಧೀಜಿಯವರ ನೇತೃತ್ವದಲ್ಲಿ ಇಡೀ ದೇಶ ಭಾರತ ಬಿಟ್ಟು
ತೊಲಗಿ ಚಳವಳಿಯಲ್ಲಿ ಕುದಿಯುತ್ತಿದ್ದಾಗ, ಅತ್ತ ಸುಭಾಶ್ಚಂದ್ರದ ಭೋಸ್ ಯಾವುದ್ಯಾವುದೋ ದೇಶದಲ್ಲಿ
ಸುತ್ತಾಡಿ ಬ್ರಿಟೀಷರ ವಿರುದ್ಧ ಸಮರ ಸಾರಲು ಸೈನ್ಯವನ್ನು ಕಟ್ಟುತ್ತಿದ್ದಾಗ ಇಲ್ಲಿ ಈ ಸಾವರ್ಕರ್
ತಮ್ಮ ಸಂಘಟನೆಯ ಮೂಲಕ ಅನೇಕ ಕಡೆ ಭಾಷಣಗಳನ್ನು ಮಾಡಿ ಬ್ರಿಟೀಷ್ ಸೈನ್ಯವನ್ನು ಸೇರಿಕೊಳ್ಳಲು ಭಾರತೀಯ
ತರುಣರನ್ನು ಪ್ರಚೋದಿಸಿ ಅವರಲ್ಲಿ ಹುಮ್ಮಸ್ಸು ತುಂಬುತ್ತಿದ್ದರು! ಇದನ್ನು ದೇಶದ್ರೋಹ ಎನ್ನದೇ ಮತ್ತೇನನ್ನಬೇಕು?
ದೇಶದ
ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಹೀಗೆ ನಮ್ಮ ಯುವಕರು ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕದೆ ಬ್ರಿಟೀಷ್
ಸೈನ್ಯವನ್ನು ಸೇರಲು ಪ್ರಚೋದಿಸುತ್ತಿದ್ದುದ್ದಲ್ಲದೇ ಅವರು ಮಾಡಿದ ಇನ್ನೊಂದು ಕೆಲಸವೆಂದರೆ ದ್ವಿರಾಷ್ಟ್ರ
ಕಲ್ಪನೆಯನ್ನು ಮುನ್ನೆಲೆಗೆ ತಂದದ್ದು. ಸಾಮಾನ್ಯವಾಗಿ ಅನೇಕ ಚರಿತ್ರೆಕಾರರು ದ್ವಿರಾಷ್ಟ್ರ ಕಲ್ಪನೆಯನ್ನು
ಮೊಹಮದ್ ಆಲಿ ಜಿನ್ನಾ ಅವರ ತಲೆಗೆ ಕಟ್ಟುತ್ತಾರೆ. ಆದರೆ ಆ ವಿಷಯದಲ್ಲಿ ಸಾವರ್ಕರ್ ಅವರ ಆಲೋಚನೆ
ಏನಾಗಿತ್ತು ಎನ್ನುವುದನ್ನು ಹೇಳುವಲ್ಲಿ ಮೌನವಹಿಸುತ್ತಾರೆ. ಸಾವರ್ಕರ್ ಅವರು ಕೂಡ ಅದೇ ಆಲೋಚನೆಯವರಾಗಿದ್ದರು.
ಇದನ್ನು ಅಂಬೇಡ್ಕರ್ ತಮ್ಮ ʼಪಾಕಿಸ್ತಾನ ಅಥವಾ ಭಾರತದ ವಿಭಜನೆʼ ಎಂಬ ಕೃತಿಯಲ್ಲಿ ಸ್ಪಷ್ಟಮಾತುಗಳಲ್ಲಿ
ಹೇಳುವುದು ಹೀಗೆ: “ಸಾವರ್ಕರ್ ಮತ್ತು ಜಿನ್ನಾ ಇಬ್ಬರೂ ಒಂದು ರಾಷ್ಟ್ರ ಮತ್ತು ದ್ವಿರಾಷ್ಟ್ರದ
ವಿಚಾರದಲ್ಲಿ ಪರಸ್ಪರ ವಿರೋಧಿಗಳಾಗುವ ಬದಲು ಅದರ ಬಗ್ಗೆ ಸಂಪೂರ್ಣ ಸಹಮತ ಹೊಂದಿದ್ದಾರೆ. ಇಬ್ಬರೂ
-ಒಂದು ಹಿಂದೂರಾಷ್ಟ್ರ ಮತ್ತು ಇನ್ನೊಂದು ಮುಸ್ಲಿಂ ರಾಷ್ಟ್ರ, ಎಂದು ಸಮರ್ಥಿಸುತ್ತಾರೆ ಕೂಡ. ಆ ಎರಡು
ರಾಷ್ಟ್ರಗಳು ಯಾವ ಕರಾರುಗಳು ಹಾಗು ಷರತ್ತುಗಳ ಆಧಾರದಲ್ಲಿ ಇರಬೇಕು ಎಂಬ ಬಗ್ಗೆ ಮಾತ್ರ ಅವರಿಬ್ಬರಲ್ಲಿ
ವ್ಯತ್ಯಾಸ ಇದೆ ಅಷ್ಟೆ”
ಸಾವಿನವರೆಗೂ ಅಂಟಿಕೊಂಡ ಗಾಂಧಿ ಹತ್ಯೆಯ ಕಳಂಕ:
ಇಡೀ ಸ್ವಾತಂತ್ರ್ಯ ಭಾರತದ ಚರಿತ್ರೆಯಲ್ಲಿ ಒಂದು ಕಪ್ಪುಚುಕ್ಕೆ ಎಂದರೆ ಅದು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಹತ್ಯೆ. ಈ ಹತ್ಯೆಗೆ ಸಂಬಂಧಿಸಿದಂತೆ ಹತ್ಯೆ ನಡೆದು ನಾಲ್ಕು ತಿಂಗಳಿಗೆ ಪೋಲೀಸರು ಒಟ್ಟು ಹದಿಮೂರು ಮಂದಿ ಆರೋಪಿಗಳ ಮೇಲೆ ದೋಷಾರೋಪ ಪಟ್ಟಿ ದಾಖಲಿಸಿದರು. ಅವರಲ್ಲಿ ಮೂರು ಜನ ತಲೆಮರೆಸಿಕೊಂಡಿದ್ದಾರೆ ಎಂದು ಷರಾ ಬರೆದು ಉಳಿದ ಒಂಬತ್ತು ಜನರ ʼದುಷ್ಟನವಗ್ರಹಕೂಟʼವನ್ನು ಕೋರ್ಟಿಗೆ ಹಾಜರ್ ಪಡಿಸಿದರು. ಅವರಲ್ಲಿ ವಿ ಡಿ ಸಾವರ್ಕರ್ ಕೂಡ ಇದ್ದರು. ಆರೋಪಿಗಳು ತಮ್ಮ ಪರವಾಗಿ ಸಮರ್ಥರೆನ್ನಿಸುವ ವಕೀಲರನ್ನು ನೇಮಕ ಮಾಡಿಕೊಳ್ಳುವ ಅವಕಾಶವನ್ನು ನ್ಯಾಯಾಲಯ ನೀಡಿತ್ತು. ಇದನ್ನು ಬಳಸಿಕೊಂಡ ಸಾವರ್ಕರ್ ಆ ಕಾಲದ ಮತ್ತು ಆ ಪ್ರದೇಶದ ಪ್ರಸಿದ್ಧ ವಕೀಲರಾಗಿದ್ದ ಶ್ರೀ ಎಲ್ ಬಿ ಬೋಪಟ್ಕರ್ ಅವರನ್ನು ನೇಮಿಸಿಕೊಂಡಿದ್ದರು. ವಿಚಾರಣೆಯ ವೇಳೆ ಸಾವರ್ಕರ್ ಅವರು ತಮಗೂ ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಗೂ ಯಾವುದೇ ರೀತಿಯ ಸಂಬಂಧವಿಲ್ಲವೆಂದೇ ವಾದಿಸಿದರು.
ಆದರೆ
ಅವರಿಗೂ ನಾಥೂರಾಮನಿಗೂ ಕಳೆದ ಎಷ್ಟೋ ವರ್ಷಗಳಿಂದ ನಿಕಟ ಸಂಪರ್ಕವಿರುವುದು ನಂತರದ ದಿನಗಳಲ್ಲಿಸಿಕ್ಕ
ಸಾಕ್ಷಗಳು ಸಾಬೀತುಪಡಿಸಿದವು. ಎಸ್ ಎಸ್ ಎಲ್ ಸಿ
ಪಾಸುಮಾಡಲಾಗದೆ ಅಂಡಲೆಯುತ್ತಿದ್ದ ನಾಥೂರಾಮ ಎಂಬ ಹುಡುಗ ಸಾವರ್ಕರ್ ಅವರ ಶಿಷ್ಯನಾಗಿದ್ದವನು. ಅವನು
ಅವರ ಹಿಂದುತ್ವದ ವಿಚಾರಗಳಿಂದ ಪ್ರಭಾವಿತನಾಗಿದ್ದವನು. ಗಾಂಧೀಜಿ ಔರಂಗಜೇಬನ ಅವತಾರ ಎಂಬ ಹಿಂದುತ್ವದ
ಮಂಕುಬೂದಿಯನ್ನು ಊದಿಸಿಕೊಂಡವನು. ೧೯೪೨ರಲ್ಲಿ ಕರ್ನಾಟಕದ ಶಿವಮೊಗ್ಗದಲ್ಲಿ ನಡೆದ ಹಿಂದೂ ಮಹಾಸಭಾದ
ಸಮಾವೇಶದಲ್ಲಿ ನಾಥೂರಾಮ್ ಗೋಡ್ಸೆ ತನ್ನ ಗುರು ಸಾವರ್ಕರ್ ಜೊತೆ ಪಾಲ್ಗೊಂಡ ಭಾವಚಿತ್ರ ನಂತರದ ದಿನಗಳಲ್ಲಿ
ದೊರೆಯಿತು ಕೂಡ. ಅಷ್ಟೇ ಏಕೆ ನಾಥೂರಾಮ್ ತಾನು ಗಾಂಧೀಜಿಯನ್ನು ಏಕೆ ಕೊಂದೆ ಎಂದು ನ್ಯಾಯಾಲಯಕ್ಕೆ
ನೀಡಿದ ಸುಧೀರ್ಘ ಲಿಖಿತ ಹೇಳಿಕೆ ಇದೆಯಲ್ಲ. ಅದನ್ನು ಓದಿದರೆ ಯಾರಿಗಾದರೂ ಅರ್ಥವಾಗುವ ಸಂಗತಿ ಎಂದರೆ
ಅಷ್ಟೊಂದು ಪ್ರಬುದ್ಧವಾದ ಭಾಷೆಯಲ್ಲಿ ಎಸ್ ಎಸ್ ಎಲ್ ಸಿ ಪಾಸಾಗದ ಒಬ್ಬ ಯುವಕ ಬರೆಯಲು ಸಾಧ್ಯವಿಲ್ಲವೆಂಬುದು.
ಅದನ್ನು ಬರೆದವರು ಅವನ ಗುರುಗಳಾದ ಸಾವರ್ಕರ್ ಅವರೇ ಎಂಬುದು ಬಹಳಷ್ಟು ಜನರ ಅಭಿಮತ!
ಮೊದಲಿನಿಂದಲೂ ಮುಸ್ಲಿಂ ದ್ವೇಷಿಯಾಗಿದ್ದರೇ?
ಸಾವರ್ಕರ್ ತಮ್ಮ ʻಹಿಂದುತ್ವʼ ಪ್ರತಿಪಾದನೆಯ ಕಾರಣಕ್ಕಾಗಿಯೇ ಕೆಲವರ ಪಾಲಿಗೆ ಆರಾಧ್ಯ ದೈವ ಆಗಿರುವುದು ಮತ್ತು ಇನ್ನು ಕೆಲವರ ಪಾಲಿಗೆ ʼದೇಶದ್ರೋಹಿʼ ಆಗಿರುವಂಥದ್ದು. ಆದರೆ ಸಾವರ್ಕರ್ ಅವರು ಮೊದಲಿನಿಂದಲೂ ಹೀಗೆ ಮುಸ್ಲಿಂ ದ್ವೇಷಿಯಾಗಿದ್ದರೇ ಎಂಬ ಪ್ರಶ್ನೆಗೆ ಉತ್ತರ ʻಇಲ್ಲʼ ಎನ್ನುವುದೇ ಅಗಿದೆ. ತಮ್ಮ ಶಾಲಾ ದಿನಗಳಲ್ಲಿ ಅವರು ಮಸೀದಿ ಮೇಲೆ ದಾಳಿಮಾಡುವ ಕೆಲವು ಸಣ್ಣಪುಟ್ಟ ಕೆಲಸಗಳನ್ನು ಮಾಡಿದ್ದು ಬಿಟ್ಟರೆ ವಯಸ್ಕರಾದ ಮೇಲೆ ಅವರು ಅದನ್ನು ಮಾಡಲಿಲ್ಲ. ಲಂಡನ್ನಿನಲ್ಲಿ ಓದುವಾಗ ಅವರು ಬರೆದ ʻಭಾರತ ಮೊದಲ ಸ್ವಾತಂತ್ರ್ಯ ಸಂಗ್ರಾಮʼ ಕೃತಿಯನ್ನು ಓದಿದರೆ ಈ ವಿಷಯ ಸ್ಪಷ್ಟವಾಗುತ್ತದೆ. ಅವರ ಆಲೋಚನೆ ವಿಚಾರಧಾರೆ ಭಾರತದ ಪುರಾಣ ಧಾರ್ಮಿಕ ಕೃತಿಗಳಲ್ಲಿ ಬೇರು ಬಿಟ್ಟಿದ್ದರೂ ಸಧ್ಯದ ಭಾರತದ ವಿಮೋಚನೆ ಇಲ್ಲಿನ ಹಿಂದೂ ಮತ್ತು ಮುಸ್ಲಿಮರಿಬ್ಬರೂ ಒಟ್ಟಾಗಿ ಒಗ್ಗಟ್ಟಿನಿಂದಲೇ ಸಾಧಿಸಬೇಕಾದ ಕೆಲಸವೆಂದು ಅವರು ಈ ಹಂತದಲ್ಲಿ ಅಚಲವಾಗಿ ನಂಬಿದ್ದರು.
ಈ
ಪುಸ್ತಕದ ಮುನ್ನಡಿಯಲ್ಲಿ ಅವರು ಬರೆಯುವುದು ಹೀಗೆ: “ದೇಶವು ತನ್ನ ಇತಿಹಾಸದ ಒಡೆಯನಾಗಬೇಕೆ ಹೊರತು
ಗುಲಾಮನಾಗಬಾರದು. ಮಹಮದೀಯರ ವಿರುದ್ಧದ ದ್ವೇಷ ಭಾವನೆಯು ಶಿವಾಜಿಯ ಕಾಲಕ್ಕಷ್ಟೇ ಅಗತ್ಯವಾಗಿತ್ತು...
ಈಗ ಅಂತಹ ಭಾವನೆಯನ್ನು ಪೋಷಿಸುವುದು ಅನ್ಯಾಯ ಮತ್ತು ಮೂರ್ಖತನವಾಗುತ್ತದೆ.” ಹೀಗೆ ಬರೆದ ಅವರು ತಮ್ಮ ಆ ಕೃತಿಯಲ್ಲಿ ತಾಯ್ನಾಡಿಗಾಗಿ ಪ್ರಾಣತೆತ್ತ
ಮಹಾಚೇತನಗಳು ಎಂದು ಕೆಲವು ಹೆಸರುಗಳನ್ನು ಹೇಳಿದ್ದಾರೆ. ಅವರಲ್ಲಿ ಹಿಂದೂಗಳ ಜೊತೆಗೆ ಅನೇಕ ಮುಸ್ಲಿಂ
ಹುತಾತ್ಮರ ಹೆಸರೂ ಇವೆ. ಬ್ರಿಟೀಷ್ ಈಸ್ಟ್ ಇಂಡಿಯ ಕಂಪನಿಯ ವಿರುದ್ಧ ಹೋರಾಟ ಮಾಡಲು ಒಂದು ನೀಲಿ
ನಕ್ಷೆ ತಯಾರಿಸಿದ್ದ ಮಹಾನ್ ಮಿಲಿಟರಿ ತಂತ್ರಜ್ಞನಾದ ಅಜೀಮುಲ್ಲಾ ಖಾನ್ ಅವರನ್ನು ಬಾಯ್ತುಂಬ ಹೊಗಳುವ
ಸಾವರ್ಕರ್ ಅವರ ಮಾತನ್ನು ಗಮನಿಸಿ, “ಇಬ್ಬರೂ (ಹಿಂದೂ ಮುಸ್ಲಿಮರು) ಹಿಂದೂಸ್ತಾನದ ಮಣ್ಣಿನ ಮಕ್ಕಳೇ
ಆಗಿದ್ದಾರೆ. ಅವರ ಹೆಸರುಗಳು ಬೇರೆ ಬೇರೆ. ಆದರೆ ಅವರು ಒಂದೇ ತಾಯಿಯ ಮಕ್ಕಳು. ಭಾರತವು ಇವರಿಬ್ಬರಿಗೂ
ಸಮಾನ ತಾಯಿ ಆಗಿರುವುದರಿಂದ ರಕ್ತಸಂಬಂಧದಲ್ಲದದಿ ಅವರು ಸಹೋದರರೇ ಆಗಿದ್ದಾರೆ.”
ಕೊನೆಗೂ
ಸಾವರ್ಕರ್ ಅವರು ತಮ್ಮ ಈ ಮೇರು ಕೃತಿಯನ್ನು ಮುಗಿಸುವುದು ಬಹದ್ದೂರ್ ಷಾ ಜಾಫರ್ ಅವರ ಒಂದು ದ್ವಿಪದಿಯಿಂದ
ಅದು ಹೀಗೆ ಇದೆ:
ಘಾಜಿಯೋ
ಮೇ ಬೂ ರಹೇಗಿ ಜಬ್
ತಲಕ್ ಇಮಾಮ್ ಕಿ
ತಖ್ತೇ ಲಂಡನ್ ತಕ್ ಚಲೇಗಿ ತೇಜ್ ಹಿಂದೂಸ್ತಾನ್ ಕಿ
(ಇದರ
ಅರ್ಥ: ಎಲ್ಲಿಯ ತನಕ ನಂಬಿಕೆಯ ಪ್ರೀತಿಯ ನಮ್ಮ ವೀರಪುರುಷರ ಎದೆಯಲ್ಲಿ ಇರುತ್ತದೆಯೋ ಅಲ್ಲಿಯವರೆಗೂ
ಹಿಂದೂಸ್ತಾನದ ಖಡ್ಗವು ಲಂಡನ್ನಿನ ಸಿಂಹಸನವನ್ನು ತಲುಪುವುದು). ಮುಂದೆ ೧೮೫೭ ರಲ್ಲಿ ದೆಹಲಿಯು ಬ್ರಿಟೀಷರಿಂದ
ವಿಮೋಚನೆಯಾಗಿ ಬಾಹಾದ್ದೂರ್ ಷಾ ಜಾಫರ್ ದೊರೆ ಎಂದು ಘೋಷಣೆಯಾದ ಘಟನೆಯನ್ನು ಕೂಡ ಅವರು ಅತ್ಯಂತ ಸಂಭ್ರಮದಿಂದ
ತಮ್ಮ ಕೃತಿಯಲ್ಲಿ ದಾಖಲಿಸುತ್ತಾರೆ. ಒಟ್ಟಾರೆ ಹೇಳುವುದಾದರೆ ತಮ್ಮ ಆರಂಭಿಕ ಕಾಲಘಟ್ಟದಲ್ಲಿ ಅವರಿಗೆ
ಮುಸ್ಲಿಮರ ಬಗ್ಗೆ ಯಾವುದೇ ದ್ವೇಷಭಾವನೆ ಇರಲಿಲ್ಲ. ಅವರ ಸ್ವಾತಂತ್ರ್ಯ ಹೋರಾಟದ ಬಗ್ಗೆ ಅನುಮಾನಗಳೂ
ಇರಲಿಲ್ಲ. ಸ್ವತಃ ಸಾವರ್ಕರ್ ಕೂಡ ಆಗ ಒಬ್ಬ ಪ್ರಾಮಾಣಿಕ ಸ್ವಾತಂತ್ರ್ಯ ಹೋರಾಟಗಾರರೇ ಆಗಿದ್ದರು.
ಅದರಲ್ಲಿ ಸಂಶಯ ಪಡುವಂಥದ್ದು ಏನೂ ಇರಲಿಲ್ಲ.
ಆದರೆ
ಇಂತಹ ಒಬ್ಬ ಅಪ್ಪಟ ಸ್ವಾತಂತ್ರ್ಯ ಪ್ರೇಮಿ ಮುಂದೆ ತಾವು ಅದುವರೆಗೂ ನಡೆದು ಬಂದ ದಾರಿಗೆ ವಿರುದ್ಧವಾಗಿ
ತಿರುಗಿ ಮುಸ್ಲಿಂ ವಿರೋಧಿಯಾದದ್ದು, ಸ್ವಾತಂತ್ರ್ಯ ಹೋರಾಟಕ್ಕೆ ವಿಮುಖವಾದುದಲ್ಲದೇ ಅದಕ್ಕೆ ಅನೇಕ
ಬಗೆಯಲ್ಲಿ ಕೇಡು ಬಗೆದುದು ಒಟ್ಟಾರೆ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಆದ ಒಂದು ದೊಡ್ಡ ಹಿನ್ನಡೆಯೂ
ಹೌದು. ನಮ್ಮ ದೌರ್ಭಾಗ್ಯವೂ ಹೌದು. ಇದಕ್ಕೆ ಅನೇಕರು ಅನೇಕ ರೀತಿಯ ಕಾರಣಗಳನ್ನು ನೀಡುತ್ತಾರೆ. ಅಂಡಮಾನಿನ
ಜೈಲಿನಲ್ಲಿ ಮುಸ್ಲಿಂ ಅಧಿಕಾರಿಗಳು ನೀಡಿದ ಚಿತ್ರಹಿಂಸೆ ಮತ್ತು ಕಿರುಕುಳದಿಂದ ಅವರು ಬದಲಾದರು ಎಂಬುದು
ಅವುಗಳಲ್ಲಿ ಒಂದು. ಆದರೆ ಈ ವಾದದಲ್ಲಿ ಹುರುಳಿಲ್ಲ ಅನ್ನಿಸುತ್ತದೆ. ಏಕೆಂದರೆ ಅಲ್ಲಿ ಚಿತ್ರಹಿಂಸೆ
ಇದ್ದದ್ದು ನಿಜ. ಅಧಿಕಾರಿಗಳಲ್ಲಿ ಮುಸ್ಲಿಮರು ಇದ್ದದ್ದೂ ನಿಜ. ಆದರೆ ಅಲ್ಲಿನ ಚಿತ್ರಹಿಂಸೆ ಧರ್ಮ
ಜನಾಂಗವನ್ನು ಅವಲಂಬಿಸಿರಲಿಲ್ಲ. ಅವರು ಮುಸ್ಲಿಮೇತರರಿಗೆ ನೀಡುವಷ್ಟೇ ಚಿತ್ರಹಿಂಸೆಯನ್ನು ಮುಸ್ಲಿಂ
ಕೈದಿಗಳಿಗೂ ನೀಡುತ್ತಿದ್ದರು. ಅಷ್ಟಕ್ಕೂ ಅಧಿಕಾರಿಗಳು ಎಲ್ಲರೂ ಮುಸ್ಲಿಮರೂ ಇರಲಿಲ್ಲ. ಅಧಿಕಾರಿಗಳು
ಯಾರೇ ಇದ್ದರೂ ಕೈದಿಗಳು ಯಾವ ಜನಾಂಗದವರೇ ಅಗಿದ್ದರೂ ಈ ಹಿಂಸೆ ಹೆಚ್ಚೂ ಕಡಿಮೆ ಸಮಾನವಾಗಿಯೇ ನಡೆಯುತ್ತಿತ್ತು.
ಇಲ್ಲಿ
ಅಪ್ರಸ್ತುತವಲ್ಲ ಎಂದು ಒಂದು ಹೋಲಿಕೆ ಕೊಡುತ್ತಿದ್ದೇನೆ. ಬ್ರಿಟೀಷ್ ಸಾಮ್ರಾಜ್ಯದ ಬಗ್ಗೆ ಗಾಂಧಿಯವರ
ನಿಲುವು ಕೂಡ ಹೀಗೆ ಎರಡು ರೀತಿಯಲ್ಲಿ ಇತ್ತು. ಆರಂಭದಲ್ಲಿ ಅವರು ಬ್ರಿಟೀಷ್ ಸೈನ್ಯದಲ್ಲಿ ಗಾಯಾಳುಗಳ
ಆರೈಕೆ ಮಾಡುವ ಕೆಲಸವನ್ನು ಮಾಡಿದರು. ನಂತರ ಅದೇ ಬ್ರಿಟೀಷ್ ಸಾಮ್ರಾಜ್ಯವನ್ನು ಕಿತ್ತೊಗೆಯಲು ಪಣತೊಟ್ಟು
ಹೋರಾಡಿದರು. ಸಾವರ್ಕರ್ ಕೂಡ ಅದನ್ನೇ ಮಾಡಿದರೂ ಅವರಿಬ್ಬರ ನಡುವಿನ ವ್ಯತ್ಯಾಸವನ್ನು ಸೂಕ್ಷ್ಮವಾಗಿ
ಗಮನಿಸುವುದಾದರೆ ಗಾಂಧೀಜಿ ಆರಂಭದಲ್ಲಿ ಬ್ರಿಟೀಷರಿಗೆ ನೆರವಾಗಿ ನಂತರ ಅವರ ವಿರುದ್ಧವಾದರು. ಅದರೆ
ಸಾವರ್ಕರ್ ಆರಂಭದಲ್ಲಿ ಬ್ರಿಟೀಷರ ವಿರುದ್ಧವಿದ್ದು ನಂತರ ಅವರ ಆಪ್ತರಾದರು. ಜನ ನಮ್ಮ ಜೀವನದ ಮೊದಲ
ಘಟ್ಟಕ್ಕಿಂತ ನಂತರ ಕಾಲಘಟ್ಟದ ಆಲೋಚನೆಯನ್ನು ʻಪ್ರಬುದ್ಧʼ ಎಂದು ಪರಿಗಣಿಸುತ್ತಾರೆ. ಬಹುಶಃ
ಇದೇ ಕಾರಣದಿಂದಲೇ ಇರಬೇಕು ಗಾಂಧೀಜಿ ʻರಾಷ್ಟ್ರಪಿತʼ ಆಗಿ ದೇಶ ಮಾತ್ರವಲ್ಲ ಜಗತ್ತಿನ
ಜನಮಾನಸದ ಎದೆಒಳಗೆ ಹೋದರು. ಸಾವರ್ಕರ್ ಸತ್ತಮೇಲೂ ಕಳಂಕಿತರಾಗಿಯೇ ಉಳಿದರು.
ಹಾಗಾಗಿ
ಈ ಲೇಖನದ ಆರಂಭದಲ್ಲಿ ಎತ್ತಿದ ಪ್ರಶ್ನೆಗೆ ಕೊನೆಯಲ್ಲಿ ಹೇಳಬಹುದಾದ ಉತ್ತರವೆಂದರೆ ʻಆ
ಎರಡೂ ಉತ್ತರಗಳು ಸರಿ; ಎರಡೂ ಉತ್ತರಗಳೂ ತಪ್ಪುʼ ಎಂಬುದೇ ಆಗಿದೆ. ಸಾವರ್ಕರ್ ಅವರ ಮೊದಲರ್ಧ ಜೀವನವನ್ನಷ್ಟೇ
ಲೆಕ್ಕಕ್ಕೆ ತೆಗೆದುಕೊಳ್ಳುವುದಾದರೆ ಅವರು ʼದೇಶಪ್ರೇಮಿʼ ಸರಿ. ಕೊನೆಯ ಅರ್ಧವನ್ನು ಮಾತ್ರ ಲೆಕ್ಕಕ್ಕೆ
ತೆಗೆದುಕೊಳ್ಳುವುದಾದರೆ ಅವರುʼ ದೇಶದ್ರೋಹಿʼ ಎನ್ನುವುದು ಸರಿ. ಇಡೀ ಜೀವನವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಾದರೆ?
ಪ್ರಶ್ನೆ ಪ್ರಶ್ನೆಯೇ! ಇಂತಹ ಸಾವರ್ಕರ್ ಅವರನ್ನು ರಾಷ್ಟ್ರೀಯ ನಾಯಕರನ್ನಾಗಿ ಮಾಡುವ ಕೆಲಸಗಳು ರಾಜಕೀಯ
ಪ್ರೇರಿತವಾದವುಗಳು ಮತ್ತು ಅವುದ ತೀರಾ ಇತ್ತೀಚಿನವು. ಮೊದಲೇ ಹೇಳಿದಂತೆ ಅವರ ಸಾವಿನವರೆಗೂ ಅಂತಹ ಆಲೋಚನೆ
ಯಾರಿಗೂ ಇರಲಿಲ್ಲ. ಮಹಾರಾಷ್ಟ್ರದಲ್ಲಿ ಅವರದ್ದೇ ಸರ್ಕಾರವಿದ್ಧಾಗ್ಯೂ ಅವರ ಭಾವಚಿತ್ರವನ್ನು ಅಲ್ಲಿನ
ವಿಧಾನಸೌಧದಲ್ಲಿ ಹಾಕುವ ವಿಷಯ ಪ್ರಸ್ತಾಪವಾಗಲಿಲ್ಲ. ಈಗ ಅವರನ್ನು ಬೇರೆಯದೇ ಅದ ಕಾರಣಕ್ಕಾಗಿ ಮುನ್ನೆಲೆಗೆ
ತರಲಾಗುತ್ತಿದೆ.
*****
೨೮-೦೫-೨೦೨೫
No comments:
Post a Comment