ವೀರಣ್ಣನ ಅಮಾನತ್ತು ಪ್ರಕರಣ: ಸದುದ್ದೇಶಿತ ಸೀಮೋಲ್ಲಂಘನ ಮತ್ತು ಶಿಕ್ಷಕ ಸಂಘದ ಜವಾಬ್ದಾರಿ
ಶಿಕ್ಷಕ ಸಾಹಿತಿಗಳಾದ ಮಿತ್ರ ವೀರಣ್ಣ ಮಡಿವಾಳರ ಅವರನ್ನು ಬೆಳಗಾವಿ ಜಿಲ್ಲಾಡಳಿತ ಸೇವೆಯಿಂದ ಅಮಾನತ್ತು ಮಾಡಿದೆ. ಅದಕ್ಕೆ ಕಾರಣಗಳೇನು ಎಂಬುವು ಈಗಾಗಲೇ ಮಾಧ್ಯಮದಲ್ಲಿ ಸಾಕಷ್ಟು ವರದಿಯಾಗಿವೆ. ವೀರಣ್ಣ ಕೂಡ ಪ್ರತಿಹಂತದ ಬೆಳವಣಿಗೆಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರ ಗಮನಕ್ಕೆ ತರುತ್ತಿದ್ದಾರೆ.
ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಅವರ ಅಮಾನತ್ತು ಆದದ್ದು ಅವರು ತಾವು
ಪಾಠಮಾಡುವ ಮತ್ತು ಮುಖ್ಯಶಿಕ್ಷಕರಾಗಿರುವ ಸರ್ಕಾರಿ ಶಾಲೆಗೆ ಹೆಚ್ಚುವರಿ ಕೊಠಡಿಗಳು ಬೇಕು ಎಂದು ಕಾಲ್ನಡಿಗೆ
ಜಾಥಾ ನಡೆಸಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿ ಎದುರು ಧರಣಿ ಕೂತರು ಎಂಬುದು.
ಅವರನ್ನು ಅಮಾನತ್ತು ಮಾಡಲು ಸರ್ಕಾರಿ ಅಧಿಕಾರಿಗಳಿಗೆ ಇಷ್ಟು ಸಾಕಾಗುತ್ತದೆ. ಮತ್ತು ನಾಳೆ ಕೋರ್ಟು ಕಛೇರಿ ಅಂತ ಪ್ರಕರಣ ಹೋದರೆ ಅವರ ಕ್ರಮವನ್ನು ಅವರು ಇಷ್ಟರಿಂದಲೇ ಸಮರ್ಥಿಸಿಕೊಳ್ಳಬಹುದಾಗಿದೆ. ಅಧಿಕಾರಿಗಳು ತಮ್ಮ ಕೆಳಗಿನ ನೌಕರರನ್ನು ಅಮಾನತ್ತು ಮಾಡಲು ಯಾವುದಾದರೂ ನಿಯಮ ಇಟ್ಟುಕೊಂಡೇ ಮಾಡುತ್ತಾರೆ. ಹಾಗಾಗಿ ಕಾನೂನು ಪ್ರಕಾರ ಅವರ ಕ್ರಮವನ್ನು ತಪ್ಪು ಎನ್ನಲು ಬರುವುದಿಲ್ಲ. ಮತ್ತು ಕಾನೂನಿನಿಂದಲೇ ವೀರಣ್ಣನವರಾಗಲೀ ಅವರ ಹಿತವನ್ನು ಬಯಸುವ ಯಾರೇ ಆಗಲಿ ಇಂತಹ ಪ್ರಕರಣಗಳನ್ನು ಎದುರಿಸಿ ಗೆಲ್ಲುವುದು ಕಷ್ಟ!
ಆದರೆ ಇಂತಹ ಪ್ರಕರಣಗಳನ್ನು ನೋಡುವಾಗ ಕಾನೂನಿನಾಚೆಯ ಒಂದು ದೃಷ್ಟಿಕೋನ
ಅಧಿಕಾರಿಗಳಿಗೆ ಬೇಕಾಗುತ್ತದೆ. ಅದು ನಮ್ಮ ಎಷ್ಟು ಜನ ಅಧಿಕಾರಿಗಳಿಗೆ ಇದೆ ಎನ್ನುವುದು ಬಹಳ ಮುಖ್ಯವಾದ
ಸಂಗತಿ. ಅವರು ರೂಲ್ಸಿಗೆ ಅಂಟಿಕೊಂಡಿರುತ್ತಾರೆ. ಎಷ್ಟರ ಮಟ್ಟಿಗೆ ಎಂದರೆ ಹೀಗೆ ಒಂದು ಪ್ರಕರಣವನ್ನು
ಉದಾಹರಿಸುವುದಾದರೆ ಒಬ್ಬ ಅಧಿಕಾರಿಯನ್ನು ಮುಜರಾಯಿ ಇಲಾಖೆಯಲ್ಲಿ ಒಂದು ದೇವಸ್ಥಾನದ ಅಧಿಕಾರಿಯನ್ನಾಗಿ
ನೇಮಕಮಾಡಲಾಯಿತಂತೆ. ಅವನಿಗೆ ರೂಲ್ಸು ಎಂದರೆ ರೂಲ್ಸು. ನಿಯಮದಲ್ಲಿ ಹೇಳಿದ್ದನ್ನು ಬಿಟ್ಟು ಒಂದಿಂಚೂ
ಅತ್ತಿತ್ತ ಸರಿಯಲು ಅವನು ಒಪ್ಪುತ್ತಿರಲಿಲ್ಲವಂತೆ. ಮುಜರಾಯಿ ಇಲಾಖೆಯ ನಿಯಮಗಳಲ್ಲಿ ಒಂದು ನಿಯಮ, “ದೇವಸ್ಥಾನದ
ಒಳಗೆ ಹೋಗುವ ಭಕ್ತರೆಲ್ಲರೂ ಪಾದರಕ್ಷೆಗಳನ್ನು ಹೊರಗೆ ಬಿಟ್ಟೇ ಹೋಗಬೇಕು” ಎಂದು ಇತ್ತಂತೆ. ಹೀಗೆ ಒಂದು
ದಿನ ಆ ದೇವಸ್ಥಾನಕ್ಕೆ ಅಯ್ಯಪ್ಪಸ್ವಾಮಿ ಭಕ್ತರ ಒಂದು ದಂಡು ಬಂತಂತೆ. ಅಯ್ಯಪ್ಪಸ್ವಾಮಿ ಭಕ್ತರು ಸಾಮಾನ್ಯವಾಗಿ
ಪಾದರಕ್ಷೆ ಹಾಕಿಕೊಂಡು ಬರುವುದಿಲ್ಲ. ಅವತ್ತೂ ಅವರು ಹಾಕಿಕೊಂಡು ಬಂದಿರಲಿಲ್ಲ. ಇವನು ನಿಯಮದ ಪ್ರಕಾರ
ಪಾದರಕ್ಷೆ ಬಿಟ್ಟೇ ಹೋಗಬೇಕು ಎಂದು ತಗಾದೆ ತೆಗೆದನಂತೆ! ಅವರು, “ನಾವು ಪಾದರಕ್ಷೆ ಹಾಕಿಕೊಂಡು ಬಂದಿಲ್ಲ”
ಎಂದರೂ ಇವನು ಕೇಳುತ್ತಿರಲಿಲ್ಲವಂತೆ. “ನನಗೆ ಅದನ್ನೆಲ್ಲ ಹೇಳಬೇಡಿ. ಪಾದರಕ್ಷೆ ಬಿಡಿ; ಮುಂದಕ್ಕೆ
ಹೋಗಿ” ಎಂದು ಹಟಮಾಡತೊಡಗಿದನಂತೆ!! ಇದು ತಮಾಸೆಯೂ ಇರಬಹುದು. ಆದರೆ ಇಂತಹ ಅಧಿಕಾರಿಗಳು ಇಲ್ಲ ಎಂದು
ಹೇಳಲು ಬರುವುದಿಲ್ಲ.
ವೀರಣ್ಣನವರನ್ನು ಅಮಾನತ್ತು ಮಾಡಲು ಇಂತಹ ಒಂದು ಸಣ್ಣನಿಯಮ ಸಾಕಾಗುತ್ತದೆ.
“ಸರ್ಕಾರಿ ನೌಕರರು ತಾವು ಕೆಲಸ ಮಾಡುವ ಸರ್ಕಾರದ ವಿರುದ್ಧ ಮುಷ್ಕರ, ಧರಣಿ ಇತ್ಯಾದಿ ಮಾಡುವಂತಿಲ್ಲ”
ಎಂಬ ನಿಯಮ ಇದ್ದೇ ಇದೆ. ಇದನ್ನೇ ಹಿಡಿದುಕೊಂಡು ಅವರು ಅವರ ಕೆಲಸವನ್ನು ಮಾಡಿದ್ದಾರೆ.
ಆದರೆ ಇಂತಹ ಪ್ರಕರಣಗಳಲ್ಲಿ ಒಬ್ಬ ಶಿಕ್ಷಕರಾಗಿ ವೀರಣ್ಣ ಮಾಡುವುದಕ್ಕಿಂತಲೂ ಹೆಚ್ಚಾಗಿ ಶಿಕ್ಷಕರ ಸಂಘಗಳು ಮಾಡುವುದು ಬಹಳ ಇರುತ್ತದೆ. ಸ್ವಭಾವತಃ ಸೇವಾ ಮನೋಭಾವದ ಮತ್ತು ಸಾಹಿತ್ಯ ಸಂಸ್ಕೃತಿಗಳ ಬಗ್ಗೆ ನಿಕಟ ಸಂಪರ್ಕ ಹೊಂದಿರುವ ವೀರಣ್ಣ ಕೆಟ್ಟ ಮನುಷ್ಯನಂತೂ ಅಲ್ಲವೇ ಅಲ್ಲ. ಆದರೆ ಅನ್ಯಾಯದ ವಿರುದ್ದ ಸೆಟೆದು ನಿಲ್ಲುವಾಗ ತುಸು ದುಡುಕುತ್ತಾರೆ. ಇಂತಹ ಸಣ್ಣಪುಟ್ಟ ನಿಯಮಗಳನ್ನು ಸದುದ್ಧೇಶದಿಂದ ಉಲ್ಲಂಘಿಸುತ್ತಾರೆ ಅಷ್ಟೆ! ವೀರಣ್ಣ ಮಾಡಿದ್ದು ನಿಯಮಗಳ ಪ್ರಕಾರ ತಪ್ಪೇ ಇದ್ದೀತು. ಆದರೆ ಅವರು ಮಾಡಿದ ಕೆಲಸದ ವೈಖರಿಯನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳದೆ ಅದರ ಹಿಂದಿನ ಉದ್ದೇಶವನ್ನೂ ಗಣನೆಗೆ ತೆಗೆದುಕೊಂಡು ಅದನ್ನು ಸಂಘದವರು ಅಧಿಕಾರಿಗಳಿಗೆ ತಿಳಿಹೇಳುವ ಪ್ರಯತ್ನಮಾಡಿ ಅವರ ಮೇಲೆ ಶಿಸ್ತುಕ್ರಮಗಳು ಆಗದಂತೆ ನೋಡಿಕೊಳ್ಳಬೇಕು. ನನಗೆ ತಿಳಿದಂತೆ ಅವರು ಇಲಾಖೆಗೆ ಬೇರೆ ಬೇರೆ ರೀತಿಯಲ್ಲಿ ಗೌರವ, ಕೀರ್ತಿ, ಶ್ರೇಯಸ್ಸು ತಂದಂಥವರು. ಈ ಒಂದು ಪ್ರಕರಣವನ್ನು ಮುಂದೆ ಮಾಡಿಕೊಂಡು ಅದೂ ಮಕ್ಕಳ, ಶಾಲೆಯ ಹಿತದೃಷ್ಟಿಯಿಂದ ಮಾಡಿದ ಈ ನಿಯಮೋಲ್ಲಂಘನೆಯ ಪ್ರಕರಣವನ್ನು ಇಟ್ಟುಕೊಂಡು ಅವರು ಇದುವರೆಗೂ ಶಾಲೆಗೆ ಆ ಮೂಲಕ ಇಲಾಖೆಗೆ ತಂದ ಗೌರವ, ಕೀರ್ತಿ ಇವುಗಳನ್ನು ಮರೆಮಾಚುವುದು ಅಥವಾ ಅವನ್ನು ಗೌಣವೆಂದು ಭಾವಿಸುವುದು ಸರಿಯಲ್ಲ. ಏಕೆಂದರೆ ಇಂತಹ ಪ್ರಕರಣಗಳು ಶಿಕ್ಷಕರು ಪ್ರತಿಭಟನೆ ಮುಷ್ಕರ ಮುಂತಾದವುಗಳನ್ನು ಕಡಿಮೆ ಮಾಡುವಂತಹ ಸಕಾರಾತ್ಮಕ ಪರಿಣಾಮ ಉಂಟುಮಾಡುವುದಕ್ಕಿಂತ ಹೆಚ್ಚಾಗಿ ಅವರು ಶಾಲೆಯ ಕೆಲಸಗಳಲ್ಲಿ ಸಕ್ರಿಯವಾಗಿ ಮತ್ತು ಸಂಪೂರ್ಣವಾಗಿ ತೊಡಗಿಕೊಂಡು ಕೆಲಸಮಾಡಲು ಹಿಂದೇಟು ಹಾಕುವಂತಹ ನಕಾರಾತ್ಮಕ ಪರಿಣಾಮವನ್ನು ಉಂಟುಮಾಡುವುದೇ ಹೆಚ್ಚು.
ಹೀಗಾಗಿ ಶಿಕ್ಷಕರ ಹಿತಕಾಯಲಿಕ್ಕೇ ಇರುವ ಶಿಕ್ಷಕರ ಸಂಘಗಳು, ಅದರಲ್ಲಿಯೂ ಸರ್ಕಾರಿ ನೌಕರರ ಸಂಘಗಳಲ್ಲಿಯೇ ಅತ್ಯಂತ ಬಲಾಢ್ಯ ಸಂಘ ಎಂದು ಹೆಸರಾಗಿರುವ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಈ ಪ್ರಕರಣದಲ್ಲಿ ಮಧ್ಯೆ ಪ್ರವೇಶಿಸಿ ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು . ಅದು ಆ ಸಂಘದ ಜವಾಬ್ದಾರಿ ಕೂಡ ಹೌದು. ಶಾಲೆಯ ಮಕ್ಕಳ ಅಕ್ಷರ ದಾಸೋಹದ ಅಕ್ಕಿ ಕದ್ದವರು, ಹಾಲಿನ ಪ್ಯಾಕೇಟ್ ಮನೆಗೆ ಒಯ್ದವರು, ಮಕ್ಕಳನ್ನು ಲೈಂಗಿಕ ಶೋಷಣೆ ಮಾಡಿದವರು, ಶಾಲೆಯ ಹಣ ದುರುಪಯೋಗ ಮಾಡಿಕೊಂಡವರು ಇಂಥವರು ಅಮಾನತ್ತಾದಾಗ ಅನೇಕ ಸಂದರ್ಭಗಳಲ್ಲಿ ನಮ್ಮ ಸಂಘಗಳು ಅಂಥವರ ಬೆಂಬಲಕ್ಕೆ ನಿಲ್ಲುವುದುಂಟು. ಅದು ಮಾಡಬಾರದ ಕೆಲಸ. ಇದು ಮಾಡಬೇಕಾದ ಕೆಲಸ. ಮಾಡಬಾರದ ಕೆಲಸವನ್ನು ಮಾಡಹೋಗುವುದು ಎಷ್ಟು ಕೆಟ್ಟದ್ದೋ ಮಾಡಬೇಕಾದ ಕೆಲಸವನ್ನು ಮಾಡದೇ ಬಿಡುವುದೂ ಅಷ್ಟೇ ಕೆಟ್ಟದ್ದು. ಈ ಹಿನ್ನಲೆಯಲ್ಲಿ ಆದಷ್ಟು ಬೇಗ ಶಿಕ್ಷಕರ ಸಂಘ ಈ ಪ್ರಕರಣದಲ್ಲಿ ಮಧ್ಯೆ ಪ್ರವೇಶಿಸಿ ವೀರಣ್ಣಗೂ ಒಂದಿಷ್ಟು ದುಡುಕದಂತೆ ಬುದ್ಧಿಹೇಳಿ ಅಧಿಕಾರಿಗಳು ಅವರ ಮೇಲೆ ಶಿಸ್ತುಕ್ರಮ ಜರುಗಿಸದಂತೆ ನೋಡಿಕೊಳ್ಳಲಿ.
ಡಾ. ರಾಜೇಂದ್ರ ಬುರಡಿಕಟ್ಟಿ
31-05-2025
No comments:
Post a Comment