ಮನಸೂರೆಗೈದ ʻಮಹಾಬೆಳಗುʼ!
·
ಡಾ. ರಾಜೇಂದ್ರ ಬುರಡಿಕಟ್ಟಿ
ಟಿ.ವಿ, ಮೊಬೈಲುಗಳ ಹಿಂದೆ ಬಿದ್ದಿರುವ ಜನ ಪುಸ್ತಕ ಓದು ರಂಗಭೂಮಿ ಚಟುವಟಿಕೆಗಳಿಂದ ವಿಮುಖರಾಗಿದ್ದಾರೆ ಎಂಬುದು ಈಗ ನಿತ್ಯ ಕೇಳಿಬರುತ್ತಿರುವ ಕ್ಲೀಷೆಯಾದ ಮಾತು. ಆದರೆ ಒಂದು ಒಳ್ಳೆಯ ಪುಸ್ತಕ ಪ್ರಕಟವಾದಾಗ ಅದರ ಪ್ರತಿಗಳು ಖರ್ಚಾಗುವ ರೀತಿ ಒಂದು ಒಳ್ಳೆಯ ನಾಟಕ ಪ್ರದರ್ಶನಗೊಂಡಾಗ ಅದನ್ನು ಮುಗಿಬಿದ್ದು ನೋಡುವ ಜನರ ಸಂಖ್ಯೆ ಒಂದೊಂದು ಸಲ ಈ ಹೇಳಿಕೆ ತಪ್ಪು ಎನ್ನುವಂತೆ ಮಾಡುತ್ತವೆ. ಇದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ ಇತ್ತೀಚೆಗೆ ಶಿವಮೊಗ್ಗದ ರಂಗಮಂದಿರದಲ್ಲಿ ನಡೆದ ʻಮಹಾಬೆಳಗುʼ ನಾಟಕ.
ಶಿವಮೊಗ್ಗದ ಸೃಷ್ಟಿ ಸಾಂಸ್ಕೃತಿಕ ವೇದಿಕೆಯ ಕಲಾವಿದರು ತಮ್ಮ ವೇದಿಕೆಯ ಬೆಳ್ಳಿಹಬ್ಬದ ಅಂಗವಾಗಿ ಅಭಿನಯಿಸಿದ ಈ ನಾಟಕ ಸಿರಿಗೆರೆ ತರಳಬಾಳು ಪೀಠದ ಹಿರಿಯ ಜಗದ್ಗುರು ಲಿಂಗೈಕ್ಯ ಶಿವಕುಮಾರ ಮಹಾಸ್ವಾಮಿಗಳ ಜೀವನ ಮತ್ತು ಸಾಧನೆಗಳನ್ನು ಆಧರಿಸಿ ಡಾ ರಾಜಶೇಖರ ಹನಮಲಿ ಅವರು ರಚಿಸಿರುವಂಥದ್ದು. ಈ ನಾಟಕವನ್ನು ರಂಗಕ್ಕೆ ವಿನ್ಯಾಸಗೊಳಿಸಿ ಅದರ ನಿರ್ದೇಶನವನ್ನು ಮಾಡಿದವರು ಖ್ಯಾತ ರಂಗಭೂಮಿ ಕಲಾವಿದರೂ ನಾಟಕ ನಿರ್ದೇಶಕ ದಂಪತಿಗಳೂ ಆದ ಶ್ರೀ ವೈ. ಡಿ ಬಾದಾಮಿ ಮತ್ತು ಮಂಜುಳಾ ಬಾದಾಮಿ.
1940ರಲ್ಲಿ ಸಿರಿಗೆರೆ ತರಳಬಾಳು ಪೀಠದ ಇಪ್ಪತ್ತನೆಯ ಪೀಠಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಶಿವಕುಮಾರ ಸ್ವಾಮಿಗಳು ತಮ್ಮ ಪೀಠಾಧ್ಯಕ್ಷರ ಸ್ಥಾನವನ್ನು ʼಅಧಿಕಾರʼ ವಾಗಿ ಪರಿಗಣಿಸದೆ ʼಜವಾಬ್ದಾರಿʼಯಾಗಿ ಪರಿಗಣಿಸಿ ಆ ಪೀಠಕ್ಕೊಂದು ಘನತೆ ತಂದವರು. ಅವರು ತಮ್ಮ ಸುಮಾರು ಮೂವತ್ತಕ್ಕೂ ಹೆಚ್ಚು ವರ್ಷಗಳ ತಮ್ಮ ಈ ʼಜವಾಬ್ದಾರಿʼಯ ಅವಧಿಯಲ್ಲಿ ಮಾಡಿದ ಕಾರ್ಯವು ಕರ್ನಾಟಕದ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಮತ್ತು ಸಾಂಸ್ಕೃತಿಕ ಕ್ಷೇತ್ರದ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದು. ಬಡತನ, ಅನಕ್ಷರತೆ, ಅಜ್ಞಾನ ಮೂಢನಂಬಿಕೆ ಹೀಗೆ ಹತ್ತು ಹಲವು ಸಮಸ್ಯೆಗಳಿಂದ ನಮ್ಮ ಸಮಾಜದ ಜನ ನರಳುತ್ತಿರುವಾಗ ಈ ಎಲ್ಲ ಕ್ಷೇತ್ರಗಳಲ್ಲೂ ಪ್ರವೇಶಿಸಿ ಅವರು ಇವನ್ನು ತೊಡೆದುಹಾಕಲು ಅನೇಕ ಅಡೆತಡೆಗಳ ನಡುವೆಯೂ ಇಟ್ಟ ಆರಂಭಿಕ ಹೆಜ್ಜೆಗಳು ಈ ಕ್ಷೇತ್ರಗಳ ಅಭಿವೃದ್ಧಿಗೆ ಭದ್ರವಾದ ಅಡಿಗಲ್ಲುಗಳನ್ನೇ ಹಾಕಿದವು. ಅವರ ಈ ಬಗೆಯ ಕೆಲಸಗಳು ಆ ಪೀಠದ ಮುಂದಿನ ಗುರುಗಳಿಗೆ ಮಾತ್ರವಲ್ಲ ಯಾವುದೇ ಪೀಠದ ಪೀಠಾಧಿಪತಿಗಳಿಗೆ ಮಾದರಿ ಆಗುವಂಥವು.
ಶಿವಕುಮಾರ ಸ್ವಾಮಿಗಳು ಶಾಲೆ-ಕಾಲೇಜುಗಳನ್ನು ಕಟ್ಟುವಾಗ ಸ್ವತಃ ತಮ್ಮ ಶಿಷ್ಯಬಳಗ ಮತ್ತು ವಿದ್ಯಾರ್ಥಿಗಳೊಂದಿಗೆ ಶ್ರಮದಾನ ಮಾಡುತ್ತಿದ್ದಂಥವರು. ಅವರು ನಿಜಾರ್ಥದಲ್ಲಿ ʻ
ಇಂತಹ ಒಬ್ಬ ಮಹಾ ಸಂತನ ಜೀವನವನ್ನು ನಾಟಕರೂಪದಲ್ಲಿ ಆಡಿ ತೋರಿಸಿ ಅವರ ಜೀವನ ಮತ್ತು ಸಾಧನೆಯನ್ನು ಇಂದಿನ ಪೀಳಿಗೆಗೆ ಕಣ್ಣಿಗೆ ಕಟ್ಟುವಂತೆ ಮಾಡಿ ಅಪಾರ ಜನಮನ್ನಣೆಯನ್ನು ಈ ಈ ಸೃಷ್ಟಿ ಸಾಂಸ್ಕೃತಿಕ ವೇದಿಕೆಯ ಕಲಾವಿದರು ಪಡೆದರು. ಸುಮಾರು ಇಪ್ಪತ್ತೈದು ಮೂವತ್ತು ಜನ ಕಲಾವಿದರನ್ನು ಒಳಗೊಂಡ ಈ ಕಲಾತಂಡದ ಸದಸ್ಯರಲ್ಲಿ ಯಾರೊಬ್ಬರೂ ವೃತ್ತಿಕಲಾವಿದರಾಗಿರದೇ ಎಲ್ಲರೂ ಹವ್ಯಾಸಿ ಕಲಾವಿದರಾಗಿದ್ದದ್ದು ವಿಶೇಷ. ಅವರಲ್ಲಿ ಬಹಳಷ್ಟು ಜನ ಕಾಲೇಜು ಉಪನ್ಯಾಸಕರು, ವಕೀಲರು, ಮತ್ತು ವಿವಿಧ ಇಲಾಖೆಗಳ ನೌಕರರೂ ಇದ್ದು ಅವರೆಲ್ಲರೂ ತಮ್ಮ ಬಿಡುವಿಲ್ಲದ ವೃತ್ತಿಬದುಕಿನ ಒತ್ತಡಗಳ ನಡುವೆಯೂ ಅತ್ಯಂತ ಶ್ರದ್ಧೆಯಿಂದ ಈ ನಾಟಕದ ಪಾತ್ರಗಳಿಗೆ ಜೀವತುಂಬಿ ಅಭಿನಯಿಸಿದ್ದರಿಂದಲೇ ಈ ನಾಟಕ ಅಷ್ಟೊಂದು ಯಶಸ್ವಿಯಾಗಲು ಕಾರಣವಾಯಿತು.
ಶಿವಕುಮಾರ ಮಹಾಸ್ವಾಮಿಗಳ ಪಾತ್ರವಹಿಸಿದ್ದ ಉಪನ್ಯಾಸಕ ಚನ್ನಯ್ಯ ಬಿ. ಮಾರವಳ್ಳಿ ಅವರ ಅಭಿನಯವಂತೂ ಸ್ವತಃ ಶಿವಕುಮಾರ ಸ್ವಾಮಿಗಳೇ ನಮ್ಮೆದುರಿಗಿದ್ದಾರೆ ಎಂಬ ಭಾವನೆಯನ್ನು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತುವಂತೆ ಮಾಡಿತು! ಶಿವಕುಮಾರ ಸ್ವಾಮಿಗಳು ಜಾತಿಭೇದಕ್ಕೆ ತೋರುತ್ತಿದ್ದ ಸಾತ್ವಿಕ ಕೋಪ, ರಾಜಕೀಯ ವ್ಯಕ್ತಿಗಳನ್ನು ದಭಾಯಿಸುವಲ್ಲಿ ಅವರಿಗಿದ್ದ ತಾಕತ್ತು, ಅಜ್ಞಾನ ಮೂಢನಂಬಿಕೆಗಳನ್ನು ಕಂಡಾಗ ಉರಿದುಬೀಳುತ್ತಿದ್ದ ರೀತಿ, ಒಳ್ಳೆಯ ಕೆಲಸಗಳನ್ನು ಕಂಡು ಸಂತೋಷದಿಂದ ʼಭೇಷ್ʼ ಎಂದು ಹುರುದುಂಬಿಸುತ್ತಿದ್ದ ಪರಿ, ಕಲೆ ಸಾಹಿತ್ಯ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಅವರೇ ಮುಂದೆ ನಿಂತು ನಾಟಕಗಳನ್ನು ಬರೆದು ಪ್ರಯೋಗ ಮಾಡಿಸುತ್ತಿದ್ದ ಬಗೆ ಹೀಗೆ ಅವರ ಸಂಕೀರ್ಣ ವ್ಯಕ್ತಿತ್ವವನ್ನು ತಮ್ಮ ಗಂಭೀರ ಮತ್ತು ಹಾಸ್ಯಗಳ ಸಮ್ಮಿಶ್ರ ಶೈಲಿಯಲ್ಲಿ ಪ್ರಸ್ತುತ ಪಡಿಸಿದ ಅವರ ಕಲಾನೈಪುಣ್ಯದ ಜೊತೆಗೆ ಅವರ ಅಜಾನುಬಾಹು ದೈಹಿಕ ವ್ಯಕ್ತಿತ್ವ ಕೂಡ ಈ ಪಾತ್ರ ಜನಮಾನಸದಲ್ಲಿ ಅಚ್ಚೊತ್ತಲು ವಿಶೇಷ ಕಾರಣವಾಯಿತು. ಶ್ರೀಗಳ ವಿವಿಧ ವಯಸ್ಸಿನ ದೈಹಿಕ ಚಲನೆಗಳನ್ನು ತೋರಲು ಅವರು ಮಾಡಿಕೊಂಡ ಸೂಕ್ಷ್ಮ ವ್ಯತ್ಯಾಸಗಳೂ ಅವರ ಅಭಿನಯಕ್ಕೆ ವಿಶೇಷ ಮೆರಗು ನೀಡಿದವು. ಸಮಾಜ ಮುಖಂಡರ ಪಾತ್ರಗಳು, ತಮ್ಮ ಧರ್ಮದ ಜೊತೆಗೆ ʻಅನ್ಯʼ ಧರ್ಮಗಳನ್ನು ಗೌರವಿಸುವ ಶ್ರೀಗಳ ಮಹತ್ವದ ಆಲೋಚನೆಯನ್ನು ತೋರಿಸಲಿಕ್ಕೆಂದು ರೂಪಿಸಲ್ಪಟ್ಟ ಹಸನ್ ಮತ್ತು ರಜಿಯಾ ಪಾತ್ರಗಳು ಶ್ರೀಗಳ ಆಧ್ಯಾತ್ಮಿಕ ಜೀವನಕ್ಕಿಂತ ಸಾಮಾಜಿಕ ಜೀವನದ ಮಹತ್ವವನ್ನು ತೋರಿಸುವಲ್ಲಿ ಯಶಸ್ವಿಯಾದವು ಮಾತ್ರವಲ್ಲ ಧರ್ಮ ಮತ್ತು ಆಧ್ಯಾತ್ಮದಂತಹ ಗಂಭೀರ ವಿಷಯವಸ್ತುವಿಗೆ ಹಾಸ್ಯದ ಮೆರಗನು ನೀಡಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದವು. ಈ ಪಾತ್ರಗಳನ್ನು ನಿರ್ವಹಿಸಿದ ಎಫ್ ಕುಟ್ರಿ, ತಿಪ್ಪಣ್ಣ, ಸುಧೀಂದ್ರರಾವ್, ಶ್ರೀಮತಿ ಲಕ್ಷ್ಮಿ, ಮುಂತಾದವರ ಅಭಿನಯಕೂಡ ಬಹಳಷ್ಟು ಅದ್ಭುತವಾಗಿ ಮೂಡಿಬಂದಿತು.
ಸಾಮಾಜಿಕ ಸಮಸ್ಯೆಗಳು, ಹಾಸ್ಯಕಥೆಗಳು ಇವುಗಳನ್ನು ಆಧರಿಸಿದ ನಾಟಕಗಳಿಗೆ ಹೋಲಿಸಿದರೆ ವ್ಯಕ್ತಿಕೇಂದ್ರಿತವಾದ ಸಂತರು ಅಥವಾ ಸಮಾಜ ಸೇವಕರ ಜೀವನಾಧಾರಿತ ನಾಟಕಗಳಿಗೆ ಜನ ತೋರಿಸುವ ಉತ್ಸಾಹ ಕಡಿಮೆಯೇ. ಆದರೆ ಈ ನಾಟಕಕ್ಕೆ ಜನತೋರಿದ ಉತ್ಸಾಹ ಭಿನ್ನವಾಗಿಯೇ ಇತ್ತು. ಈ ಜನವರ್ಗದಲ್ಲಿ ಯಾವುದೋ ಒಂದು ಸಮಾಜ ಅಥವಾ ಕೋಮಿಗೆ ಸೇರಿದ ಜನರಿರದೇ ಎಲ್ಲ ವರ್ಗಗಳ ಜನರೂ ಇದ್ದರು ಎಂಬುದು ಗಮನಿಸಬೇಕಾದ ಅಂಶ. ಸುಮಾರು ಎರಡು ಗಂಟೆಗಳ ಕಾಲ ತೆಗೆದುಕೊಂಡ ಈ ನಾಟಕ ತುಂಬಿದ ರಂಗಮಂದಿರದ ಜನರೆಲ್ಲರನ್ನೂ ತನ್ನಕಥಾಶಕ್ತಿ, ಕಲಾವಿದರ ಶ್ರದ್ಧೆಗಳಿಂದ ಹಿಡಿದಿಟ್ಟುಕೊಳ್ಳುವಲ್ಲಿ ಇದನ್ನು ವಿನ್ಯಾಸಗೊಳಿಸಿ ನಿರ್ದೇಶಿಸಿದ ಬಾದಾಮಿ ದಂಪತಿಗಳ ಪರಿಶ್ರಮವಂತೂ ಬೆನ್ನಿಗೆ ಇದ್ದೇ ಇದೆ. ಇದಕ್ಕೆ ಪೂರಕ ವಾತಾವರಣವನ್ನು ಸೃಷ್ಟಿಸುವಲ್ಲಿ ಶಿವಮೊಗ್ಗದ ಯಾವುದೇ ನಾಟಕಗಳಿಗೆ ಬೆಳಕು ತಜ್ಞರಾಗಿ ಕೆಲಸಮಾಡುವ ಹರಿಗೆ ಗೋಪಾಲಸ್ವಾಮಿ ಅವರ ಚಾತುರ್ಯ, ವಿವಿಧ ಸನ್ನಿವೇಶಗಳಿಗೆ ಮಾಡಿದ್ದ ವಚನಗಳ ಗಾಯನ ಸಂಯೋಜನೆ ಕೂಡ ತಮ್ಮದೇ ಆದ ಕೊಡುಗೆ ನೀಡಿದವು.
*****
02-06-2025
ನಿಮ್ಮ ಅಮೂಲ್ಯ ಅಭಿಪ್ರಾಯಕ್ಕೆ ಧನ್ಯವಾದಗಳು ರಾಜೇಂದ್ರ ಅವರೇ. ಇಡೀ ನಾಟಕವನ್ನು ತುಂಬಾ ಚೆನ್ನಾಗಿ ವಿಮರ್ಶೆ ಮಾಡಿದ್ದೀರಿ. ಆ ದಿನ ಜನರು ತೋರಿದ ಉತ್ಸಾಹ ಮತ್ತು ಪ್ರೀತಿ ಬಹಳ ದೊಡ್ಡದು.
ReplyDelete