ಕಿಚ್ಚಿಲ್ಲದ ಬೆಂಕಿ
ಮತ್ತು ಬಕ್ರಿದ್ ಅನುಮತಿ
ಬಹಳಷ್ಟು ಶಿಕ್ಷಕರಿಗೆ ತಿಳಿದಿರುವಂತೆ ಈ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆ- ೨ ರ ಮೌಲ್ಯಮಾಪನ ಕಾರ್ಯ ಜೂನ್ ಆರಕ್ಕೆ ಆರಂಭವಾಗುತ್ತಿದೆ. ರಾಜ್ಯದ ಬಹಳಷ್ಟು ಜನ ಶಿಕ್ಷಕರು ಈ ಕೆಲಸಕ್ಕೆ ನಿಯೋಜಿತರಾಗಿದ್ದಾರೆ. ಇದೆಲ್ಲ ಅವರು ಮಾಡಲೇಬೇಕಾದ ಕೆಲಸ ಬಿಡಿ. ಅದೇನೂ ಉಲ್ಲೇಖಿಸಬೇಕಾದ ಸಂಗತಿಯಲ್ಲ. ಆದರೆ ಈ ದಿನಾಂಕಗಳನ್ನು ಸೂಕ್ಷ್ಮವಾಗಿ ತುಸು ಗಮನಿಸಿ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜೂನ್ ಐದು-ಆರು ಈ ದಿನಗಳಲ್ಲಿ ಪೂರ್ವಪರೀಕ್ಷೆಯನ್ನು ಸಾಮೂಹಿಕವಾಗಿ ಮಾಡುತ್ತಿದ್ದಾರೆ. ಆ ದಿನಾಂಕಗಳೂ ಮೊದಲೇ ಘೋಷಣೆಯಾದಂಥವು.
ಆರನೆಯ ತಾರೀಖೇ ಈ ಮೌಲ್ಯಮಾಪನಕ್ಕೆ ಶಿಕ್ಷಕರು ಹಾಜರಾಗಲು ತಿಳಿಸಲಾಗಿದೆ.
ಆರನೆಯ ತಾರೀಖಿನ ಪರೀಕ್ಷೆ ಶಾಲೆಗಳಲ್ಲಿ ಯಾವ ರೀತಿ ನಡೆಯಬಹುದು ಯೋಚಿಸಿ. ಏಕೆಂದರೆ ಕೆಲವು ಶಾಲೆಗಳಲ್ಲಿ
ಮೌಲ್ಯಮಾಪನಕ್ಕೆ ಶಿಕ್ಷಕರು ಹೋದರೆ ಅಲ್ಲಿ ಪರೀಕ್ಷೆ ಮಾಡುವವರೇ ಇಲ್ಲ. ಇರಲಿ ಅದನ್ನು ಇನ್ನೊಂದು ದಿನ
ಮಾಡಿಕೊಂಡರಾಯಿತು ಅನ್ನಲಿಕ್ಕೆ ಅದು ಅನೇಕ ಕಡೆ ಸ್ಥಳೀಯವಾಗಿ ಶಾಲಾ ಹಂತದಲ್ಲಿ ನಡೆಯದೇ ತಾಲ್ಲೂಕು
ಹಂತದಲ್ಲಿಯೋ ಜಿಲ್ಲಾ ಹಂತದಲ್ಲಿಯೋ ನಡೆಯುತ್ತಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನೂ ಯಾರೂ ಸೂಚಿಸಲಿಲ್ಲ.
ಎಸ್. ಎಸ್. ಎಲ್. ಸಿ. ಮೌಲ್ಯಮಾಪನಕ್ಕೆ ಹೋಗುವ ಶಿಕ್ಷಕರು ಹೋಗಲೇ ಬೇಕು ಹೊರಡುತ್ತಾರೆ. ಉಳಿದ
ಶಿಕ್ಷಕರು ಇನ್ನೇನು ಮಾಡುತ್ತಾರೆ? ʻಆದಂಗಾಯ್ತು
ಹಾಟಗಳ್ಳನ ಮದ್ವೆʼ ಅನ್ನುವ ಗಾದೆಯಂತೆ ಒಟ್ಟಿನಲ್ಲಿ ಪರೀಕ್ಷೆ ಮಾಡುವ ಶಾಸ್ತ್ರವನ್ನು ಮಾಡಿ ಮುಗಿಸುತ್ತಾರೆ.
ಶಾಲೆಯ ಕಥೆ ಇದಾದರೆ ಶಿಕ್ಷಕರದ್ದು ವೈಯಕ್ತಿಕವಾಗಿ ಬೇರೊಂದು ಕಥೆ.
ಆರು ಶುಕ್ರವಾರ. ಏಳು ಶನಿವಾರ ಬಕ್ರಿದ್ ರಜೆ. ಎಂಟು ಭಾನುವಾರ. ಉಳಿದ ಶಿಕ್ಷಕರು ಬಕ್ರಿದ್ ರಜೆ
ಮತ್ತು ಭಾನುವಾರದ ರಜೆಯಲ್ಲಿ ಮನೆಯಲ್ಲಿ ಇರುವಾಗ ಈ ಶಿಕ್ಷಕರು ಮೌಲ್ಯಮಾಪನ ಮಾಡಬೇಕು. ಇವರು ಅದೆಷ್ಟು
ಮನಸ್ಸುತುಂಬಿ ಈ ಕೆಲಸವನ್ನು ರಜಾ ದಿನದಲ್ಲಿ ಶ್ರದ್ಧಾಪೂರ್ವಕವಾಗಿ ಮಾಡುತ್ತಾರೋ ಭಗವಂತನೇ ಬಲ್ಲ.
ರಾಜ್ಯಮಟ್ಟದಲ್ಲಿ ಶಿಕ್ಷಕರ ಸಂಘಗಳು ಬಲಾಢ್ಯವಾಗಿರುವುದು ಬೇಡ ಅರ್ಧಬರ್ಧ ಜೀವ ಇಟ್ಟುಕೊಂಡರೂ ಅಲ್ಲಿನ
ಅಧಿಕಾರಿಗಳಿಗೆ ಮನವರಿಕೆ ಮಾಡಿ, “ಎರಡು ದಿನ ಮೌಲ್ಯಮಾಪನ ಮುಂದೆ ಹಾಕಿ. ಎರಡು ದಿನ ತಡವಾದರೆ ರಾಜ್ಯದ
ಶಿಕ್ಷಣ ವ್ಯವಸ್ಥೆಯೇ ಕುಸಿದು ಬೀಳುವುದಿಲ್ಲ” ಎಂದು ಈ ಕಾರ್ಯವನ್ನು ಮುಂದೆ ಹಾಕಿಸಲು ಅವಕ್ಕೆ ಸಾಧ್ಯವಾಗುತ್ತಿತ್ತು.
ಅವು ಆ ಪ್ರಯತ್ನವನ್ನು ಮಾಡಲೇ ಇಲ್ಲವೋ ಅಥವಾ ಮಾಡಲು ಹೋಗಿ ಯಶಸ್ವಿಯಾಗಲಿಲ್ಲವೋ ತಿಳಿಯದು.
ಈ ಪತ್ರದ ವಿಶೇಷತೆ ಎಂದರೆ ಇದರಲ್ಲಿ ಬಕ್ರಿದ್ ಹಬ್ಬದ ನಿಮಿತ್ತ ಅನುಮತಿ
ಕೇಳುವ ಶಿಕ್ಷಕರಿಗೆ ಅನುಮತಿ ನೀಡಲು ಸೂಚಿಸಲಾಗಿದೆ.
ಇದರ ಅನುಷ್ಠಾನದ ಸಂಕೀರ್ಣತೆಯ ಬಗ್ಗೆ ಅಲ್ಲಿ ಯಾವುದೇ ಉಲ್ಲೇಖವಿಲ್ಲ. ಒಂದು ಕಾಲ್ಪನಿಕ ಉದಾಹರಣೆ
ಗಮನಿಸಿ. ಯಾವುದೋ ಒಂದು ಪರೀಕ್ಷಾ ಕೇಂದ್ರಕ್ಕೆ ಬಂದ ಎಲ್ಲ ಶಿಕ್ಷಕರೂ ಬಕ್ರಿದ್ ಹಬ್ಬದ ನಿಮಿತ್ತ
ಮೌಲ್ಯಮಾಪನ ಕಾರ್ಯದಿಂದ ಹೊರಗುಳಿಯಲು ಅನುಮತಿ ಕೋರುತ್ತಾರೆ ಅಂತ ಇಟ್ಟುಕೊಳ್ಳಿ. ಆಗ ಅನುಮತಿ ಕೊಡುವವರು
ಏನು ಮಾಡಬೇಕು? ಅದು ಅವರಿಗೆ ಬಿಟ್ಟದ್ದು. ಎಲ್ಲರಿಗೂ ಅನುಮತಿ ಕೊಟ್ಟು ಅವತ್ತಿನ ಮಟ್ಟಿಗೆ ಮೌಲ್ಯಮಾಪನ
ಕಾರ್ಯವನ್ನು ಸ್ಥಗಿತಗೊಳಿಸುವದು ಒಂದು ಮಾರ್ಗ.
ಇನ್ನೊಂದು ಕೆಲವರಿಗೆ ಅನುಮತಿ ಕೊಟ್ಟು ಕೆಲವರಿಗೆ ನಿರಾಕರಿಸುವುದು. ಇದರಿಂದ ಮೌಲ್ಯಮಾಪನ ಕಾರ್ಯ ನಿಲ್ಲದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆಯಾದರೂ ಈ ಆಯ್ಕೆ ಅಷ್ಟು ಸುಲಭದ ದಾರಿಯಲ್ಲ. ಇಲ್ಲಿ ಅನುಮತಿ ನೀಡುವಿಕೆಯ ಪುರಸ್ಕಾರ ಮತ್ತು ತಿರಸ್ಕಾರಗಳನ್ನು ಯಾವ ಮಾನದಂಡ ಇಟ್ಟುಕೊಂಡು ಮಾಡಬೇಕು ಎಂಬ ಪ್ರಶ್ನೆ ಏಳುತ್ತದೆ. ಹಾಗೆ ಮಾಡಲು ಬಹಳಷ್ಟು ಜನರಿಗೆ ತಕ್ಷಣಕ್ಕೆ ಹೊಳೆಯುವ ಮಾನದಂಡ ಎಂದರೆ ʻಬಕ್ರಿದ್ ಮಾಡುವವರಿಗೆ ಅನುಮತಿ ಕೊಟ್ಟು ಉಳಿದವರಿಗೆ ನಿರಾಕರಿಸಬಹುದುʼ ಎಂಬುದು. ಆದರೆ ಅದು ಸಮಸ್ಯಾತ್ಮಕವಾದದ್ದು. ಏಕೆಂದರೆ ಈ ಆಯ್ಕೆಯನ್ನು ಯಾವ ಆಧಾರದ ಮೇಲೆ ನಿರ್ಧರಿಸಬೇಕು? ಆಗ ಅನುಮತಿ ಕೊಡುವ ವ್ಯಕ್ತಿ ಅನಿವಾರ್ಯವಾಗಿ ʻಜಾತಿ- ಜನಾಂಗʼಗಳ ಅಂಶವನ್ನು ಮಾನದಂಡವಾಗಿ ಇಟ್ಟುಕೊಳ್ಳಬೇಕಾಗುತ್ತದೆ ಇದನ್ನು ಇನ್ನೂ ಬಿಡಿಸಿ ಹೇಳುವುದಾದರೆ ಬಕ್ರಿದ್ ಹಬ್ಬ ಮಾಡುವ ಮುಸ್ಲಿಮರಿಗೆ ಅನುಮತಿ ಕೊಟ್ಟು ಉಳಿದವರಿಗೆ ನಿರಾಕರಿಸುವುದು.
ಆದರೆ ಹೀಗೆ ಮಾಡುವುದು ಸರಿಯಾಗುತ್ತದೆಯೇ? ನನ್ನ ಪ್ರಕಾರ ಇಲ್ಲ. ಏಕೆಂದರೆ ನಮ್ಮಲ್ಲಿ ಹಿಂದೂ ಹಬ್ಬಗಳು, ಮುಸ್ಲಿಮ್ ಹಬ್ಬಗಳು, ಕ್ರಿಶ್ಚಿಯನ್ ಹಬ್ಬಗಳು ಎಂದು ಕೆಲವು ಹಬ್ಬಗಳನ್ನು ಕರೆಯುವ ವಾಡಿಕೆ ಇದೆಯಾದರೂ ಭಾರತದ ಸಾಂವಿಧಾನಿಕ ಭಾಷೆಯಲ್ಲಿ ಹಾಗೆ ವಿಭಜಿಸಿ ಹೇಳಲು ಬರುವುದಿಲ್ಲ. ಏಕೆಂದರೆ ಅವೆಲ್ಲವನ್ನೂ ಒಟ್ಟಾಗಿ ʻಭಾರತೀಯ ಧಾರ್ಮಿಕ ಹಬ್ಬಗಳುʼ ಎಂದೆ ಅವನ್ನು ಕರೆಯಲಾಗುತ್ತದೆ. ಅಂದರೆ ಭಾರತದ ಯಾವುದೇ ಪ್ರಜೆ ಈ ಯಾವುದೇ ಧಾರ್ಮಿಕ ಹಬ್ಬಕ್ಕೆ ತನ್ನ ಹಕ್ಕನ್ನು ಮಂಡಿಸಬಹುದು ಎಂದಾಗುತ್ತದೆ. ಹೀಗಿರುವಾಗ ʻದೀಪಾವಳಿ ಹಬ್ಬಕ್ಕೆ ಹಿಂದೂಗಳಿಗೆ ಅನುಮತಿ ಕೊಡುತ್ತೇನೆ; ಬಕ್ರಿದ್ ಗೆ ಮುಸ್ಲಿಮರಿಗೆ ಅನುಮತಿ ಕೊಡುತ್ತೇನೆ; ಕ್ರಿಸ್‌ಮಸ್‌ಗೆ ಕ್ರಿಶ್ಚಿಯನ್ನರಿಗೆ ಅನುಮತಿ ಕೊಡುತ್ತೇನೆ ಎಂದು ಯಾರಾದರೂ ಹೇಳಿದರೆ ಅದು ನನ್ನ ಪ್ರಕಾರ ಸಂವಿಧಾನದ ಆಶಯಕ್ಕೆ ವಿರೋಧಿಯಾದ ನಡೆಯಾಗುತ್ತದೆ ಮಾತ್ರವಲ್ಲ ಯಾರಾದರೂ ಪ್ರಶ್ನಿಸಿದರೆ ಅದು ದಂಡನಾರ್ಹ ಅಪರಾಧವೂ ಆಗಿಬಿಡಬಹುದು! ಹಾಗಾದರೆ ಅನುಮತಿ ಕೊಡುವವರು ಏನು ಮಾಡಬೇಕು? ನನ್ನ ಪ್ರಕಾರ ವಿವಾದವನ್ನು ಮೈಮೇಲೆ ಎಳೆದುಕೊಳ್ಳದೆ ಕೇಳಿದವರಿಗೆಲ್ಲ ಅನುಮತಿ
ಕೊಟ್ಟು ಕೈತೊಳೆದುಕೊಳ್ಳುವುದೇ ಸರಿ.
ಇದೆಲ್ಲ ನಮಗೆ ಯಾತಕ್ಕೆ. ಆದೇಶ ಮಾಡುವವರು ಅನುಮತಿ ಕೊಡುವವರು ಏನಾದ್ರೂ ಮಾಡಿಕೊಳ್ಳಲಿ ನಾವು ನಮ್ಮ ಕಷ್ಟ ಮಾತ್ರ ಹೇಳಿಕೊಳ್ಳೋಣ ಎಂದು ಕೆಲವರಿಗೆ ಅನ್ನಿಸಬಹುದು. ಆದರೆ ಅವರೆಲ್ಲರಿಗೂ ರಜಾದಿನದಲ್ಲಿ ಮೌಲ್ಯಮಾಪನಕ್ಕೆ ಕರೆದಿರುವುದರಿಂದ ಒಳಗೊಳಗೆ ಯಾರದ್ಯಾರದೋ ಮೇಲೆ ಸಿಟ್ಟು ಇರುವುದಂತೂ ಸುಳ್ಳಲ್ಲ. ಕೆಲವರು ನನಗೆ ಫೋನ್ ಮಾಡಿ ಯಾರ್ಯಾರಿಗೋ ಬಾಯಿಗೆ ಬಂದಂತೆ ಬಯ್ದದ್ದೂ ಇದೆ. ಆದರೆ ಇವರಿಗೆಲ್ಲ ಹೊಟ್ಟೆಯಲ್ಲಿ ಇರುವ ಸಿಟ್ಟು ರಟ್ಟೆಗೆ ಬರಲ್ಲ. ಎಂತದು ಮಾಡುವುದು ಹೇಳಿ. ಅಂದಮಾತ್ರಕ್ಕೆ ಇವರೆಲ್ಲ ಮೈಗಳ್ಳರಲ್ಲ. ಬಹಳ ಶ್ರದ್ಧೆಯಿಂದಲೇ ಕೆಲಸ ಮಾಡುವಂಥವರು. ಆದರೆ ಮನಶ್ಶಾಸ್ತ್ರ ಓದಿರುವಂಥ ಯಾರಿಗಾದರೂ ತಿಳಿಯುವ ಸಣ್ಣ ಸಂಗತಿ ಎಂದರೆ ವಾರದ ರಜೆ, ಹಬ್ಬದ ರಜೆ ಇವೆಲ್ಲ ನೌಕರರಲ್ಲಿ ಹೊಸಚೈತನ್ಯವನ್ನು ತುಂಬಿ ಅವರ ಕೆಲಸದ ದಕ್ಷತೆಯನ್ನು ಹೆಚ್ಚಿಸುತ್ತವೆ ಎಂಬುದು. ಇದನ್ನು ನಮ್ಮ ಮೇಲಿನವರು ಅರ್ಥಮಾಡಿಕೊಳ್ಳುವುದಿಲ್ಲವಲ್ಲ ಎಂಬುದು ಇವರ ಸಕಾರಣಯುಕ್ತ ಕೋಪಕ್ಕೆ ಕಾರಣ ಅಷ್ಟೆ.; ದ್ವೇಷಕ್ಕಲ್ಲ. ಬಂಡಾಯಕ್ಕಂತೂ ಅಲ್ಲವೇ ಅಲ್ಲ.
ಇತ್ತೀಚೆಗೆ ಭಾರತಕ್ಕೆ ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ತಂದುಕೊಟ್ಟ ಭಾನು ಮುಸ್ತಾಕ್ ಅವರ ʻಹಾರ್ಟ್ ಲ್ಯಾಂಪ್ʼ (ಎದೆಯ ಹಣತೆ) ಕೃತಿಯ ಕಥೆಯೊಂದರಲ್ಲಿ ʻಮನೆಯ ಮಗಳು ಬೇಸರಪಟ್ಟುಕೊಂಡು ಶಪಿಸಬಾರದು. ಹಕ್‌ದಾರ್ ತರ್‌ಸೇ ತೋ ಅಂಗಾರ್ ಕಾ ನ್ಹೂ ಬರ್‌ಸೆʼ ಎಂಬ ಮಾತು ಬರುತ್ತದೆ. ಅಂದರೆ ಯಾರಾದರೂ ತಮ್ಮ ನ್ಯಾಯಯುತ ಹಕ್ಕನ್ನು ಕೇಳಿದಾಗ ನಾವು ಅಧಿಕಾರದ ಬಲದಿಂದ ಅದನ್ನು ನಿರಾಕರಿಸಿದರೆ, ಆಗ ಆ ಹಕ್ಕುದಾರರು ದೇವರಲ್ಲಿ ಮನವಿ ಮಾಡಿಕೊಂಡರೆ ಬೆಂಕಿಯ ಮಳೆಯೇ ಸುರಿದೀತು ಎಂಬುದು ಇದರ ಅರ್ಥ. ಇಲ್ಲಿ ಶಿಕ್ಷಕರು ಶಿಕ್ಷಣ ಇಲಾಖೆಯ ಮಕ್ಕಳು. ಅವರು ಶಾಪ ಹಾಕಿದರೆ ಇಲಾಖೆಗೆ ಒಳ್ಳೆಯದಾಗುವುದಿಲ್ಲ. ಇದನ್ನು ಸಂಬಂಧಪಟ್ಟ ಎಲ್ಲರೂ ಅರ್ಥಮಾಡಿಕೊಳ್ಳುವುದು ಯಾರದೋ ಒಬ್ಬರ ಆರೋಗ್ಯಮಾತ್ರವಲ್ಲ ಇಡೀ ವ್ಯವಸ್ಥೆಯ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.ನನ್ನ ಕತೆ ಕೇಳಿ. ವಾರಪೂರ್ತಿ ಶ್ರದ್ಧೆಯಿಂದ ಕೆಲಸ ಮಾಡುವ ನನಗೆ ಭಾನುವಾರ ವಿಶ್ರಾಂತಿ ತೆಗೆದುಕೊಳ್ಳದಿದ್ದರೆ ಮುಂದಿನ ವಾರ
ಪೂರ್ತಿ ತಲೆಯೇ ಸರಿ ಇರುವುದಿಲ್ಲ. ಹುಚ್ಚ ಮಾಡಿದಂಗೆ ಮಾಡುತ್ತಿರುತ್ತೇನೆ. ಈ ಸಲ ನನಗೂ ಮೌಲ್ಯಮಾಪನ
ಇದೆ. ಶನಿವಾರ ಬಕ್ರಿದ್ ರಜೆಗೆ ಮನವಿ ಮಾಡಿಕೊಳ್ಳುವುದೋ ಬೇಡವೋ ಅಂಥ ವಿಚಾರ ಮಾಡುತ್ತಿರುವೆ. ಬೆಳಿಗ್ಗೆ
ಮೂಡು ಬಂದ ರೋಡು ಹಿಡಿಯುವೆ. ನಾನು ಅನುಮತಿ ಕೇಳಿದರೆ ಅದಕ್ಕೆ ಅವರು ಕೊಟ್ಟರೆ ಪಸಂದ ಆಯ್ತು. ಕೊಡದಿದ್ದರೆ ಮುಂದೆ ಏನು ಅಂಥ ನೋಡುವ.
ಏಕೆಂದರೆ ಒಂದು ವೇಳೆ ಶನಿವಾರವೂ ಹೋಗಿ ಭಾನುವಾರವೂ ನಾನು ವ್ಯಾಲೂವೇಷನ್ನಿಗೆ ಹೋದರೆ ಭಾನುವಾರ ನನ್ನ
ಕೈಗೆ ಬರುವ ಪೇಪರ್ರುಗಳ ಮಕ್ಕಳ ಗತಿ ಏನು ಎಂಬ ಚಿಂತೆಯಾಗಿದೆ. ಏಕೆಂದರೆ ಅವತ್ತಿನ ನನ್ನ ಕೆಲಸ ಅತ್ಯಂತ
ಕಳಪೆಯಾಗಿರುತ್ತದೆ. ಈ ಕಳಪೆ ಕೆಲಸಕ್ಕೆ ನನಗೆ ಏನೂ ಆದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ
ಮಕ್ಕಳ ಗತಿ? ಊಪರ್ ವಾಲಾನೇ ನೋಡಿಕೊಳ್ಳಬೇಕಾಗುತ್ತದೆ.
ನಾನು ಮೌಲ್ಯಮಾಪನ ಮಾಡಲಾರದೆ ಹೀಗೆ ಮಾಡುತ್ತಿದ್ದೇನೆ ಎಂದು ನೀವು ತಿಳಿದುಕೊಳ್ಳಲಾರಿರಿ;
ಇದರೆ ಹಿಂದೇ ಏನೇನೋ ಕಾರಣಗಳು ಏನೇನೋ ಉದ್ದೇಶಗಳು ಇರುತ್ತವೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳುವಿರಿ
ಅಂದುಕೊಂಡಿದ್ದೇನೆ. ನೀವು ಯಾರು ಯಾರು ಏನು ಮಾಡುವಿರೋ ಗೊತ್ತಿಲ್ಲ. ನೀವು ಕೂಡ ನಿಮ್ಮ ಮೂಡು ಬಂದ
ರೋಡು ಹಿಡಿದು ನಡೆಯೋದೇ ಸರಿ. ಹೇಳಲಿಕ್ಕೂ ಆಗಲ್ಲ ತಾಳಲಿಕ್ಕೂ ಆಗಲ್ಲ ಅಂದರೆ ಅಕ್ಕ ಹೇಳಿದಂತೆ ಕಿಚ್ಚಿಲ್ಲದ
ಬೆಂಕಿಯಲ್ಲಿ ಬೇಯುತ್ತಲೇ ಇರಬೇಕುತ್ತದೆ ಸತತ. ಅಷ್ಟೆ!
ಶಿವನೇ ಶಂಭುಲಿಂಗ!!
ರಾಬು (05-06-2025)
No comments:
Post a Comment