Saturday, June 7, 2025

ʻಕಾವೇರಿ ಆರತಿʼ: ಯಾವುದರ ಆಹುತಿ?

 

ʻಕಾವೇರಿ ಆರತಿʼ: ಯಾವುದರ ಆಹುತಿ?

ಡಾ. ರಾಜೇಂದ್ರ ಬುರಡಿಕಟ್ಟಿ

`ದಕ್ಷಿಣ ಭಾರತದ ಮುಖ್ಯನದಿ’ ಎಂದು ಕರೆಯಲ್ಪಡುವ ಕಾವೇರಿ ನದಿಗೆ ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರದ ಬಳಿ ʼಕಾವೇರಿ ಆರತಿʼ ಎಂಬ ಕಾರ್ಯಕ್ರಮವನ್ನು ಆರಂಭಿಸುವ ಕುರಿತಂತೆ ಪರವಿರೋಧಗಳ ಚರ್ಚೆ ಈಗ ಮುನ್ನೆಲೆಗೆ ಬಂದಿದೆ. ರಾಜ್ಯ ರೈತ ಸಂಘದ ಅನೇಕ ಮುಖಂಡರು ಇದಕ್ಕೆ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದು ವರದಿಯಾಗಿದೆ. ಈ ಹಿನ್ನಲೆಯಲ್ಲಿ ಈ ಆರತಿ ಕಾರ್ಯಕ್ರಮದ ಸಾಧಕ ಬಾದಕಗಳೇನು? ಈ ಕಾರ್ಯಕ್ರಮ ಒಂದು ವೇಳೆ ಜಾರಿಯಾಗದಿದ್ದರೆ ಆಗಬಹುದಾದ ನಷ್ಟವೇನು ಮತ್ತು ಜಾರಿಯಾದರೆ ಆಗಬಹುದಾದ ಲಾಭ ನಷ್ಟಗಳೇನು ಎಂಬುದನ್ನು ಚರ್ಚಿಸುವುದು ಈ ಲೇಖನದ ಉದ್ದೇಶ.

ಈ ʼಆರತಿʼ ಕಾರ್ಯಕ್ರಮದ ಚರ್ಚೆಗೆ ತೊಡಗುವ ಮುನ್ನ ಕರ್ನಾಟಕದ ಸಾಂಸ್ಕೃತಿಕ ರಾಜಕಾರಣದಲ್ಲಿ ದಕ್ಷಿಣದ ʼಕಾವೇರಿ ವಲಯವುʼ ಉತ್ತರದ ʼಕೃಷ್ಣಾವಲಯʼದ ಮೇಲೆ ಹೇಗೆಲ್ಲ ತನ್ನ ಅಧಿಪತ್ಯವನ್ನು ಸಾಧಿಸಿದೆ ಎಂಬುದನ್ನು ತುಸು ವಿವರವಾಗಿ ನೋಡೋಣ. ಇದನ್ನು ಇದರ ಭಾಗವಾದ ಕಾವೇರಿ ನದಿಯಿಂದಲೇ ಆರಂಭಿಸಬಹುದು.  ರಾಜಕೀಯ ಪ್ರಭಾವದಿಂದ  ನದಿಗಳಲ್ಲಿ ಕಾವೇರಿಯು ಉಳಿದ ನದಿಗಳಿಗಿಂತ ತಕ್ಕ ಅರ್ಹತೆಯಿಲ್ಲದೆ ಹೇಗೆ ಮೇಲುಸ್ಥಾನವನ್ನು ಪಕ್ಷಪಾತವಾಗಿ ಪಡೆದುಕೊಂಡಿದೆ ಹಾಗನ್ನುವುದಕ್ಕಿಂತ ನಾವು ಅದಕ್ಕೆ ಪಕ್ಷಪಾತಮಾಡಿ ಹೇಗೆ ಅದಕ್ಕೆ ವಿಶಿಷ್ಟ ಸ್ಥಾನ ಕಲ್ಪಿಸಿದ್ದೇವೆ ಎಂಬುದನ್ನು ನೋಡಿ. ʻಕಾವೇರಿಗೆ ದಕ್ಷಿಣದ ಗಂಗೆʼ ಎಂದು ಕರೆಯಲಾಗಿದೆ. ಉತ್ತರ ಪ್ರದೇಶದ ಅಲಹಾಬಾದ್‌ (ಪ್ರಯಾಗ್‌ರಾಜ್‌ ಬಳಿ) ಗಂಗಾ ಯಮುನಾ ಮತ್ತು ಅದೃಶ್ಯ ಸರಸ್ವತಿಯರ ಸಂಗಮ ಸ್ಥಾನವೆಂದು ಕರೆಯುವ ʻತ್ರಿವೇಣಿಸಂಗಮʼವಿದೆ. ಇದು ಇಡೀ ಭಾರತದ ಧಾರ್ಮಿಕ ಕ್ಷೇತ್ರಗಳಲ್ಲಿ ಹೆಸರುವಾಸಿಯಾಗಿರುವ ಸ್ಥಳಗಳಲ್ಲಿ ಒಂದಾಗಿದೆ. ಇದನ್ನು ಅನುಸರಿಸಿ ನಮ್ಮ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರ ತಾಲ್ಲೂಕಿನನಲ್ಲಿ ಕೂಡ ಒಂದು ಈ ರೀತಿಯ ಒಂದು ʻಮೂರುನದಿ ಕೂಡುಸ್ಥಳʼವಿದೆ. ಕಾವೇರಿ, ಕಪಿಲಾ ಮತ್ತು ಸ್ಪಟಿಕಸರೋವರ ನದಿಗಳು ಕೂಡುವ ಈ ಸ್ಥಳವನ್ನು ಸಂಕ್ತಿಪ್ತವಾಗಿ ʻ

ಸಂಗಮʼ ಎಂದು ಕರೆಯಲಾಗುತ್ತಿದ್ದು ಇತ್ತೀಚೆಗೆ ಅದಕ್ಕೂ ʼತ್ರಿವೇಣಿ ಸಂಗಮʼ ಎಂಬ ಹೆಸರನ್ನೇ ಜನಪ್ರಿಯಗೊಳಿಸಲಾಗಿದೆ. ಇಲ್ಲಿಗೆ ಅಷ್ಟೇನೂ ದೂರದಲ್ಲಿ ಇಲ್ಲದ ಶ್ರೀರಂಗಪಟ್ಟಣದ ಬಳಿ ಕೂಡ ಒಂದು ತ್ರಿವೇಣಿ ಸಂಗಮ ಇರುವುದು ಬಹಳ ಜನಕ್ಕೆ ಗೊತ್ತಿರಲಿಕ್ಕಿಲ್ಲ. ಅದು ಕೂಡ ಕಾವೇರಿ, ಹೇಮಾವತಿ ಮತ್ತು ಲೋಕಪಾವನಿ ಎಂಬು ಮೂರು ನದಿಗಳ ಕೂಡು ಸ್ಥಳವಾಗಿದ್ದು ಅದು ಟಿ ನರಸೀಪುರದಷ್ಟು ಜನಪ್ರಿಯವಾಗಿಲ್ಲ. ಇದಕ್ಕೆ ಕಾರಣ ಪ್ರಯಾಗರಾಜ್‌ ನಲ್ಲಿ ಕೂಡುವ ಮೂರು ನದಿಗಳಲ್ಲಿ ಸರಸ್ವತಿ ಗುಪ್ತಗಾಮಿನಿಯಾಗಿದ್ದು ಅದರಂತೆ ಟಿ ನರಸೀಪುರದಲ್ಲಿ ಸ್ಪಟಿಕಸರೋವರನದಿ ಗುಪ್ತಗಾಮಿನಿ ಆಗಿರುವ ಸಾಮ್ಯತೆ ಕಾರಣವಿರಲೂಬಹುದು.

ಧಾರ್ಮಿಕವಾಗಿ ಕರ್ನಾಟಕದಲ್ಲಿ ಬೇರೆ ಯಾವ ನದಿಗೂ ಇಲ್ಲದ ವಿಶೇಷ ಸ್ಥಾನಮಾನ ಕಾವೇರಿಗೆ ಮಾತ್ರ ಇರುವಲ್ಲಿ ಇರುವ ವಾಸ್ತವ ಕಾರಣಗಳೆಷ್ಟು ಮತ್ತು ನಾವು ಆರೋಪಿಸಿರುವ ಕಾರಣಗಳೆಷ್ಟು ಎಂಬುದನ್ನು ಒರೆಗೆ ಹಚ್ಚುವುದು ತುಸು ಕಷ್ಟವಾಗಬಹುದು. ಇಲ್ಲಿ ಇತಿಹಾಸಕ್ಕಿಂತ ಪುರಾಣದ ಪ್ರಭಾವಳಿ ಹೆಚ್ಚಾಗಿರುವುದು ಇದಕ್ಕೆ ಕಾರಣ. ಪುರಾಣದ ಸಂಗತಿಗಳು ಇತಿಹಾಸದಂತೆ ಒಂದಿಷ್ಟಾದರೂ ಗಟ್ಟಿಯಾದ ಸಾಕ್ಷಗಳು ಮತ್ತು ಆಧಾರಗಳನ್ನು ಒಳಗೊಂಡಿರುವುದಿಲ್ಲ. ಅದಕ್ಕೆ ನಂಬಿಕೆ ಒಂದಿದ್ದರೆ ಸಾಕು. ಹಾಗಾಗಿ ಯಾರು ಬೇಕಾದರೂ ಹೇಗೆ ಬೇಕಾದರೂ ಅದನ್ನು ತಮ್ಮ ತಮ್ಮ ಕಡೆಗೆ ಎಳೆದುಕೊಂಡು ವಾದಿಸಬಹುದಾಗಿದೆ. ಕರ್ನಾಟಕದ ಉತ್ತರ ಭಾಗಕ್ಕಿಂತ ʻಪುರಾಣಪ್ರವೀಣʼರ ಸಂಖ್ಯೆ ದಕ್ಷಿಣ ಕರ್ನಾಟಕದಲ್ಲಿ ಅಂದರೆ ಕಾವೇರಿ ವಲಯದಲ್ಲಿ ದಟ್ಟವಾಗಿರುವುದರಿಂದ ಕಾವೇರಿಗೆ ಅವರು ಉಳಿದೆಲ್ಲ ನದಿಗಳಿಗಿಂತ ವಿಶೇಷ ಸ್ಥಾನವನ್ನು ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿರುವುದು ತೀರಾ ಸಹಜವಾದದ್ದು.

ಪುರಾಣದ ಸಂಗತಿಗಳ ಮಿತಿ ಇದಾದರೆ ಇತಿಹಾಸ ಮತ್ತು ವರ್ತಮಾನವಾದರೂ ಈ ಅನ್ಯಾಯವನ್ನು ಸರಿಪಡಿಸುವಲ್ಲಿ ತಕ್ಕುದಾದ ಏನಾದರೂ ಕೆಲಸ ಮಾಡಿದೆಯೇ ಎಂದು ಸೂಕ್ಷ್ಮವಾಗಿ ನೋಡಿದರೆ ಅಲ್ಲಿಯೂ ನಮಗೆ ನಿರಾಶೆಯೇ ಆಗುತ್ತದೆ. ಕರ್ನಾಟಕದ ಏಕೀಕರಣಕ್ಕಾಗಿ ನಡೆದ ಚಳವಳಿಯನ್ನೇ ಗಮನಿಸಿ. ಈ ಏಕೀಕರಣಕ್ಕಾಗಿ ಪಣತೊಟ್ಟು ಹೋರಾಡಿದವರು ಇಂದಿನ ʻಕಿತ್ತೂರು ಕರ್ನಾಟಕʼ ಮತ್ತು ʻಕಲ್ಯಾಣ ಕರ್ನಾಟಕʼ ಭಾಗದವರು. ಮೈಸೂರು ಭಾಗದವರು ಮುಂದೆ ನಿಂತು ಹೋರಾಡುವುದಿರಲಿ ಅವರ ಹೋರಾಟಕ್ಕೂ ಒಮ್ಮತದಿಂದ ಬೆಂಬಲ ಕೊಡಲಿಕ್ಕೇ ಮೀನಾಮೇಷ ಎಣಿಸಿದರು. ಅಂದಿನ ಮೈಸೂರು ರಾಜಕೀಯ ವಲಯವೇ ಈ ನಿಟ್ಟಿನಲ್ಲಿ ಇಬ್ಬಾಗವಾಯಿತು. ಉತ್ತರ ಭಾಗದಲ್ಲಿ ಏಕೀಕರಣ ಪರವಾದ ಸಮ್ಮೇಳನಗಳು ನಡೆಯುತ್ತಿರುವಾಗಲೇ ಇಲ್ಲಿ ಏಕೀಕರಣ ವಿರೋಧಿ ಸಮ್ಮೇಳನಗಳೂ ನಡೆದವು! ಬಹುಶಃ ಕುವೆಂಪು ಅಂಥ ಸಾಂಸ್ಕೃತಿಕ ನಾಯಕರು ಆ ಕಾಲದಲ್ಲಿ ಏಕೀಕರಣದ ಪರವಾಗಿ ಗಟ್ಟಿಯಾಗಿ ನಿಲ್ಲದಿದ್ದರೆ ಏಕೀಕರಣದ ಸಾಧ್ಯತೆಗಳು ಇನ್ನಷ್ಟು ಕ್ಷೀಣಿಸುತ್ತಿದ್ದವೇನೋ…

ʻಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಸಿಕ್ಕಿತುʼ ಎಂಬಂತೆ ಏಕೀಕರಣ ಸಾಧ್ಯವಾಗಿ ವಿಶಾಲ ಕರ್ನಾಟಕವೇನೋ ಉದಯವಾಯಿತು. ಆದರೆ ಆ ಹಂತದಲ್ಲಿಯೇ ಈಗಿನ ʻಕಾವೇರಿವಲಯʼ ತನ್ನ ರಾಜಕೀಯ ಪ್ರಭಾವನ್ನು ಬಳಸಿ ಸಿಂಹಪಾಲನ್ನು ಪಡೆದುಕೊಂಡು ಯಾರು ಏಕೀಕರಣಕ್ಕಾಗಿ ಹಗಲಿರುಳು ಚಳವಳಿ ಕಟ್ಟಿ ದುಡಿದು ದಣಿದಿದ್ದರೋ ಅಂತಹ ಕರ್ನಾಟಕದ ಉತ್ತರ ಭಾಗದ ರಾಜಕೀಯ ನಾಯಕರಲ್ಲಿ ಅಸಮಾಧಾನವನ್ನು ಉಂಟುಮಾಡಿಬಿಟ್ಟಿತು. ಹೊಸ ರಾಜ್ಯ ಉದಯವಾಗುವಾಗಲೇ ಉತ್ತರದವರ ಪ್ರಾತಿನಿಧ್ಯವನ್ನು ದಕ್ಷಿಣದವರ ಪ್ರಭಾವ ಕುಗ್ಗಿಸಿಬಿಟ್ಟಿತು!

ವಿಶಾಲ ರಾಜ್ಯಕ್ಕೆ ʼಮೈಸೂರುʼ ಎಂದು ಹೆಸರಿಡಲಾಯಿತು. ರಾಜಧಾನಿ ಬೆಂಗಳೂರೇ ಆಯಿತು. ರಾಜ್ಯಪಾಲರು ಮೈಸೂರಿನ ರಾಜರೇ ಆದರು. ನಾಡದೇವತೆಯಾಗಿ ʼಬನಶಂಕರಿʼ ಬದಲು ʼಚಾಮುಂಡಿʼಯನ್ನೇ ಆಯ್ಕೆಮಾಡಲಾಯಿತು. ಅಷ್ಟೇ ಏಕೆ ಕನ್ನಡದ ವಿವಿಧ ಪ್ರಾದೇಶಿಕ ನುಡಿಗಳಲ್ಲಿ ʼಮೈಸೂರು ಕನ್ನಡʼವನ್ನೇ ಹೊಸರಾಜ್ಯದ ʻಅಧಿಕೃತ ಆಡಳಿತ ಕನ್ನಡʼವನ್ನಾಗಿ ಸ್ವೀಕರಿಸಲಾಯಿತು. ಈ ನಾಲ್ಕು ಮಹತ್ವದ ಸ್ಥಾನಮಾನಗಳಲ್ಲಿ ಒಂದೂ ಉತ್ತರದವರಿಗೆ ದಕ್ಕಲಿಲ್ಲ! ಇದೇ ಕಾರಣಕ್ಕಾಗಿ ಏಕೀಕರಣದ ದಿನ ಕಾರ್ಯಕ್ರಮ ಮುಗಿಸಿಕೊಂಡು ತಮ್ಮ ಊರುಗಳಿಗೆ ತೆರಳುವಾಗ ಆ ನಾಯಕರಲ್ಲಿ ಅತ್ಯಂತ ಪ್ರಮುಖರಾದವರೊಬ್ಬರು, ʼಇಟ್‌ ಇಸ್‌ ನಾಟ್‌ ಯುನಿಫಿಕೇಷನ್‌ ಆಫ್‌ ಕರ್ನಾಟಕ ಬಟ್‌ ದ ಎಕ್ಸಟೆನ್ಷನ್‌ ಆಫ್‌ ಮೈಸೂರ್‌ʼ ಎಂಬ ಹೇಳಿಕೆ ನೀಡಿ ʼಮೈಸೂರಿನವರು ನಮ್ಮನ್ನು ಗೆದ್ದುಕೊಂಡುಬಿಟ್ಟರುʼ ಎಂಬ ತಮ್ಮ ಮನದಾಳದ ಅಸಮಾಧಾನವನ್ನು ಹೊರಹಾಕಿದರಂತೆ!

ಅಯೋಧ್ಯೆಯಲ್ಲಿ ನಡೆಯುವ ಸರಯೂ ಆರತಿ ದೃ‍ಶ್ಯ

ಹೀಗೆ ಹುಟ್ಟಿಕೊಂಡ ಉತ್ತರ ದಕ್ಷಿಣಗಳ ಏರುಪೇರಿನ ಸ್ಥಾನಮಾನ ಮುಂದೆಯೂ ಕೂಡ ಸರಿಯಾಗಲಿಲ್ಲ. ʻಕಾವೇರಿಯಿಂದ ಗೋದಾವರಿವರಮಿರ್ದʼ ಎಂಬ ಕವಿರಾಜಮಾರ್ಗಕಾರನ ಹೇಳಿಕೆಯಲ್ಲಿ ಈ ʻಕಾವೇರಿʼ ಕನ್ನಡ ನಾಡಿನ ಒಂದು ಗಡಿರೇಖೆಯಾಗಿ ಮಾನ್ಯತೆ ಪಡೆದದ್ದು ಪ್ರಾಚೀನ ಸಂಗತಿಯಾದರೆ ಕುವೆಂಪು ಅವರು ಸಾಂಸ್ಕೃತಿಕ ಕರ್ನಾಟಕ ತಾತ್ವಿಕತೆಯನ್ನು ಪ್ರತಿಪಾದಿಸಲು ಬರೆದ ʼಎಲ್ಲಾದರು ಇರು ಎಂತಾದರು ಇರುʼ ಎಂಬ ಪ್ರಸಿದ್ಧ ಗೀತೆಯಲ್ಲಿ ಕೂಡ ʼನೀ ಕುಡಿಯುವ ನೀರ್‌ ಕಾವೇರಿʼ ಎಂಬ ಮಾತು ಬಂದು ಅದೇ ಪ್ರವೃತ್ತಿ ಮುಂದುವರೆಯುತ್ತಾ ಬಂದಿತು. ಅದಕ್ಕೊಂದು ʻಬ್ರೆಕ್‌ʼ ಹಾಕುವ ಕೆಲಸ ಶುರುವಾಗಲು ಎಪ್ಪತ್ತರ ದಶಕದ ಬಂಡಾಯ ಬರೆಹಗಾರ ಕಾಲದವರೆಗೂ ಕಾಯಬೇಕಾಯಿತು. ಬರಗೂರು ಅಂಥವರು ಕುವೆಂಪು ಅವರ ಗೀತೆಯಲ್ಲಿ ಬರುವ ʻಶ್ರೀಗಂಧʼ ಮತ್ತು ʼಕಾವೇರಿʼ ಎರಡೂ ಕರ್ನಾಟಕದ ಪ್ರಾತಿನಿಧಿಕ ಅಂಶಗಳು ಅಲ್ಲ ಎಂಬುದನ್ನು ಸರಿಯಾಗಿಯೇ ಗುರುತಿಸಿದರು. ಈ ಸಾಂಸ್ಕೃತಿಕ ಯಜಮಾನಿಕೆಯನ್ನು ತಾತ್ವಿಕವಾಗಿ ಪ್ರಶ್ನಿಸಿ ಕರ್ನಾಟಕದ ಬಹುಭಾಗದಲ್ಲಿ ಬೆಳೆಯುವುದು ಜಾಲಿಯೇ ಹೊರತು ‍ಶ್ರೀಗಂಧವಲ್ಲ; ಹಾಗೆಯೇ ಕರ್ನಾಟಕದ ಬಹುಭಾಗದ ಜನ ಕುಡಿಯುವುದು ಕೃಷ್ಣಾನದಿಯ ನೀರನ್ನೇ ಹೊರತು ಕಾವೇರಿ ಅಲ್ಲ ಎಂಬುದು ಅವರ ವಾದಕ್ಕೆ ಮೂಲವಾಗಿತ್ತು.

ಹೀಗೆ ಆಡಳಿತಾತ್ಮಕ ರಾಜಕಾರಣ ಮತ್ತು ಸಾಂಸ್ಕೃತಿಕ ರಾಜಕಾರಣ ಇವುಗಳ ಬಲದಿಂದ ಕರ್ನಾಟಕದ ದಕ್ಷಿಣ ಭಾಗ ಉತ್ತರ ಭಾಗವನ್ನು ಅನೇಕ ಅಂಶಗಳಲ್ಲಿ ಸರಿಸಮಾನವಾಗಿ ಕಾಣದೆ ʻಸಾಮಂತʼ ಸ್ಥಾನದಲ್ಲಿಟ್ಟುಕೊಂಡೇ ಬಂದಿರುವುದು ವಾಸ್ತವ. ಈ ಅಂಶಗಳು ರಾಜಕಾರಣ, ಕಲೆ, ಸಾಹಿತ್ಯ, ಸಂಸ್ಕೃತಿ ಹೀಗೆ ಎಲ್ಲಕಡೆಗೂ ವಿಸ್ತರಿಸಿಕೊಂಡಿವೆ. ಇದಕ್ಕೆ ಪೂರಕವಾಗಿ ಇನ್ನೊಂದು ಸಂಗತಿಯನ್ನು ಉದಾಹರಿಸಬಹುದು. ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ಮಾತ್ರ ಅಸ್ತಿತ್ವದಲ್ಲಿ ಇರುವ ಜನಪದ ಕಲೆಯಾದ ಯಕ್ಷಗಾನಕ್ಕೆ ಬಹಳಷ್ಟು ದಿನಗಳ ಹಿಂದೆಯೇ ಒಂದು ಅಕಾಡಮಿಯನ್ನೇ ರಚಿಸಿ ವಿಶೇಷ ಸ್ಥಾನಮಾನ ಕಲ್ಪಿಸಲಾಗಿತ್ತು. ಆದರೆ ಕರ್ನಾಟಕದ ಉತ್ತರ ಭಾಗದ ಅನೇಕ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಪ್ರಚಲಿತವಿದ್ದ ಸಣ್ಣಾಟ, ದೊಡ್ಡಾಟ ಇವುಗಳಿಗೆ ಬಹುಕಾಲದವರೆಗೆ ಇಂತಹ ಯಾವುದೇ ಸ್ಥಾನಮಾನ ದೊರೆಯಲೇಯಿಲ್ಲ. ಶಿವರಾಮ ಕಾರಂತರಂಥ ಅತಿರಥರು ಆ ಕಲೆಯಲ್ಲಿ ತೊಡಗಿಕೊಂಡದ್ದು ಅದರ ಬಗ್ಗೆ ಪುಸ್ತಕ ಇತ್ಯಾದಿ ಬರೆಯುವುದು ಮಾಡಿದಂತೆ ಆ ಭಾಗದಂತೆ ಯಾರೂ ಮಾಡಲಾಗದ್ದು ಇದಕ್ಕೆ ಕಾರಣವಾಗಿಯೂ ಇದ್ದೀತು.

ಕಾಶಿಯ ಬಳಿ ಗಂಗಾನದಿಯಲ್ಲಿ ನಡೆಯುವ ಗಂಗಾ ಆರತಿಯ ಒಂದು ದೃಶ್ಯ:


ಈಗ  ಚರ್ಚೆಯ ಮೂಲ ವಿಷಯವಾದ  ʻಕಾವೇರಿ ಆರತಿʼಗೆ ಬರೋಣ. ಇದು ಕೂಡ ತಿಳಿದೋ ತಿಳಿಯದೆಯೋ ಕರ್ನಾಟಕದಲ್ಲಿ ಈಗ ಇರುವ ಈ ಅಸಮತೋಲನವನ್ನು ಹೋಗಲಾಡಿಸುವ ಬದಲಾಗಿ ಅದನ್ನು ಇನ್ನಷ್ಟು ವಿಸ್ತರಿಸುವ ಕಾರ್ಯಕ್ರಮವೇ ಆಗಬಹುದಾದ ಎಲ್ಲ ಲಕ್ಷಣಗಳನ್ನೂ ಹೊಂದಿರುವ ಒಂದು ಕಾರ್ಯಕ್ರಮ. ನೇರವಾಗಿ ಉತ್ತರ ಭಾರತದ ನೆರಳು ಇದರ ಮೇಲೆ ಇದೆ ಎಂದು ಬೇರೆ ಹೇಳಬೇಕಾಗಿಲ್ಲ.  ಏಕೆಂದರೆ ದಕ್ಷಿಣ ಭಾರತದಲ್ಲಿ ಇಂತಹ ಆಚರಣೆಗಳು ಸಾಂಪ್ರದಾಯಿಕವಾಗಿ ಇಲ್ಲ. ನನಗೆ ತಿಳಿದಿರುವಂತೆ ಉತ್ತರ ಭಾರತದ ಎರಡು ಮೂರು ಕಡೆ ಈ ʻಆರತಿʼ ಇದೆ. ಇವುಗಳಲ್ಲಿ ಕಾಶಿಯಲ್ಲಿ ನಡೆಯುವ ʻಗಂಗಾ ಆರತಿʼ ಮತ್ತು ಅಯೋಧ್ಯೆಯ ಸರಯೂ ನದಿಯ ದಂಡೆಯಲ್ಲಿ ನಡೆಯುವ ʻಸರಯೂ ಆರತಿʼ ಇವುಗಳಲ್ಲಿ ಮುಖ್ಯವಾದಂಥವು. ಇವುಗಳಲ್ಲಿ ಭಾಗವಹಿಸಿದ ನನ್ನ ಸ್ವಂತ ಅನುಭವದ ಮೇಲೆ ಹೇಳುವುದಾದರೆ ಕಾಶಿಯಲ್ಲಿ ನಿತ್ಯ ಸಂಜೆ ನಡೆಯುವ ಗಂಗಾ ಆರತಿ ಉಳಿದವಕ್ಕೆ ಹೋಲಿಸಿದರೆ ಜನಸಂದಣಿ ದೃಷ್ಟಿಯಿಂದ ಅತಿದೊಡ್ಡದು ಮತ್ತು ದಿನನಿತ್ಯ ಸಾವಿರಾರು ಜನ ಸೇರುವಂಥದ್ದು! ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮ ಜನಸಂಖ್ಯೆಯ ಸೇರುವಿಕೆಯ ದೃಷ್ಟಿಯಿಂದ ಗಂಗಾ ಆರತಿಗಿಂತ ಚಿಕ್ಕದಾದದ್ದು. ಅಲ್ಲಿ ನಿತ್ಯ ಸುಮಾರು ಒಂದರಿಂದ ಒಂದೂವರೆ ಸಾವಿರ ಜನ ಕೆಲವು ವೇಳೆ ಎರಡು ಸಾವಿರ ಜನ ಸೇರುತ್ತಾರೆ.

ಸ್ವಚ್ಚತೆ ಮತ್ತು ನೈರ್ಮಲ್ಯದ ಹಿನ್ನಲೆಯಲ್ಲಿ ಹೇಳುವುದಾದರೆ ಚಿಕ್ಕದಾದ ಅಯೋಧ್ಯೆಯ ಸರಯೂ ಆರತಿ ಸ್ಥಳ ಗಂಗಾ ಆರತಿ ಸ್ಥಳಕ್ಕಿಂತ ಸಹಜವಾಗಿಯೇ ಚೆನ್ನಾಗಿದೆ. ಗಂಗಾನದಿಯಷ್ಟು ಮಾಲಿನ್ಯ ಅಲ್ಲಿ ಉಂಟಾಗಿಲ್ಲ ಅನ್ನಬಹುದು. ಇದೇ ಕಾರಣಕ್ಕೆ ಸರಯೂ ನದಿಯಲ್ಲಿ ದೋಣಿವಿಹಾರ ಮಾಡಿದಾಗ ಆನಂದ ನಮಗೆ ಗಂಗಾನದಿಯಲ್ಲಿ ಮಾಡುವಾಗ ಆಗುವುದಿಲ್ಲ. ಇಲ್ಲಿ ನಡೆಯುವ ಆರತಿ ಕಾರ್ಯಕ್ರಮಗಳ ಬಗ್ಗೆ ಹೇಳುವುದಾದರೆ ಇವು ನಿತ್ಯ ಆರತಿ ಕಾರ್ಯಕ್ರಮಗಳು. ಎರಡೂ ಕಡೆ ಸಂಜೆ ಸುಮಾರು ಆರರಿಂದ ಎಂಟು ಗಂಟೆಯವರೆಗೂ ಈ ಕಾರ್ಯಕ್ರಮಗಳು ನಡೆಯುತ್ತವೆ. ನದಿಯನ್ನು ನದಿಯೆಂದು ಭಾವಿಸಿ ಗೌರವಿಸಲಾಗದವರು ಅದನ್ನು ತಾಯಿಯೆಂದೋ ದೇವಿಯೆಂದೋ ಭಾವಿಸಿಕೊಂಡು ಗೌರಿವಿಸುವ ರೀತಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತವೆ. ಸರಯೂ ನದಿಯಲ್ಲಿ ದಂಡೆಯ ಮೆಟ್ಟಿಲುಗಳ ಮೇಲೆಯೇ ಕುಳಿತು ಜನ ಈ ಕಾರ್ಯಕ್ರಮ ವೀಕ್ಷಣೆ ಮಾಡುತ್ತಾರೆ. ಆದರೆ ಕಾಶಿಯ ವಿಶ್ವನಾಥನ ಮಂದಿರದ ಹತ್ತಿರ ನಡೆಯುವ ಗಂಗಾ ಆರತಿ ದೊಡ್ಡ ಪ್ರಮಾಣದಲ್ಲಿ ಜನಸೇರುವ ಕಾರ್ಯಕ್ರಮವಾಗುವುದರಿಂದ ದಂಡೆಯಲ್ಲಿ ಕುಳಿತು ಎಲ್ಲ ಜನ ನೋಡಲು ಅಲ್ಲಿ ಸಾಧ್ಯವಿಲ್ಲ. ಅದರ ಬದಲು ನದಿಯ ಇನ್ನೊಂದು ದಂಡೆಯಿಂದ ದೋಣಿಗಳಲ್ಲಿ ಜನರನ್ನು ಕರೆದುಕೊಂಡು ಹೋಗಿ ಗಂಗಾನದಿಯ ಮಧ್ಯದಲ್ಲಿಯೇ ದೋಣಿಗಳನ್ನು ನಿಲ್ಲಿಸಿ ಅಲ್ಲಿಂದ ಈ ಕಾರ್ಯಕ್ರಮ ತೋರಿಸುವ ವ್ಯವಸ್ಥೆ ಇದೆ. ಇದಕ್ಕೆ ಖಾಸಗೀ ದೋಣಿಗಳ ಜೊತೆಗೆ ಕೇಂದ್ರ ಸರ್ಕಾರದ ಒಳನಾಡು ಜಲಸಾರಿಗೆಯ ಕ್ರೂಸರ್‌ ಗಳೂ ಇಲ್ಲಿವೆ.

ಈ ಕಾರ್ಯಕ್ರಮದಲ್ಲಿ ಹೇಳಿಕೊಳ್ಳುವ ವಿಶೇಷತೆ ಏನೂ ಇರುವುದಿಲ್ಲ. ಎಲ್ಲ ದೇವಸ್ಥಾನಗಳಗಳಂತೆ ಇಲ್ಲಿಯೂ ಪೂಜೆ ಪುನಸ್ಕಾರ ಇತ್ಯಾದಿ ನಡೆಯುತ್ತವೆ. ಇದಾದ ಮೇಲೆ ಇದಕ್ಕಾಗಿ ನಿಯೋಜಿತರಾದ ಐದರಿಂದ ಒಂಬತ್ತು ತರುಣ ಪುರೋಹಿತರು (ಅಯೋಧ್ಯೆಯಲ್ಲಿ ಐದು, ಕಾಶಿಯಲ್ಲಿ ಒಂಬತ್ತು) ನದಿಗಳಿಗೆ ಮುಖವಾಗಿ ʻಸರಯೂ ಮಾತಾʼ ʻಗಂಗಾ ಮಾತಾʼ ಎಂಬ ಭಕ್ತಿಗೀತೆಯನ್ನು ಹಾಕಿಕೊಂಡು ಕೆಲವು ಧಾರ್ಮಿಕ ವಿಧಿವಿಧಾನಗಳನ್ನು ನಡೆಸುತ್ತಾರೆ. (ಒಂದು ಸಾರೆ ಊದುಬತ್ತಿಯಿಂದ ಪ್ರದಕ್ಷಣೆ, ಇನ್ನೊಂದು ಬಾರಿ ಆರತಿ ತಟ್ಟೆಯಿಂದ ಪ್ರದಕ್ಷಣೆ ಇತ್ಯಾದಿ). ಜನರನ್ನು ಭಕ್ತಿಯಿಂದ ಭಾವಪರವಶರಾಗುವ ವಾತಾವರಣವನ್ನು ಸೃಷ್ಟಿಮಾಡಲಾಗುತ್ತದೆ. ಬರುವವರೆಲ್ಲರೂ ಇಲ್ಲಿ ಭಕ್ತರೇ ಆಗುವುದರಿಂದ ಅದನ್ನು ಆನಂದಿಸುತ್ತಾರೆ. 'ಕಾಯಕವೇ ಕೈಲಾಸ' ಎಂಬ ತತ್ವಕ್ಕೆ ವಿರುದ್ಧವಾಗಿ ಕೈಲಾಸವನ್ನೇ ಕಾಯಕವನ್ನಾಗಿ ಮಾಡಿಕೊಂಡ ಒಂದು ದೊಡ್ಡ ಪುರೋಹಿತ ವರ್ಗ ಇದನ್ನು ವ್ಯವಸ್ಥಿತವಾಗಿ ಮಾಡುತ್ತದೆ. ಯಾರೇ ಆಗಲಿ ಒಂದು ಸಲ ನೋಡಿ ಆನಂದಿಸಲು ಚೆನ್ನಾಗಿರುತ್ತದೆ ಎನ್ನುವುದರಲ್ಲಿ ಅನುಮಾನವೇನಿಲ್ಲ. ಆದರೆ ಇದು ಒಂದು ದೇಶದ ಅಥವಾ ರಾಜ್ಯದ ಅಭಿವೃದ್ಧಿಗಾಗಿ ನಡೆಯಲೇಬೇಕಾದ ಕಾರ್ಯವೇನೂ ಅಲ್ಲ. 

ಕರ್ನಾಟಕದಲ್ಲಿ ಚರ್ಚೆಗೆ ಬಂದಿರುವ ಈ ಕಾವೇರಿ ಆರತಿಗೆ ಈ ಮೇಲೆ ಉಲ್ಲೇಖಿಸಿದ ಆರತಿ ಕಾರ್ಯಕ್ರಮಗಳೇ ಉತ್ತೇಜನ. ಇತ್ತೀಚೆಗೆ ಪ್ರಯಾಗ್‌ ರಾಜ್‌ ನಲ್ಲಿ ಮಹಾಕುಂಭಮೇಳ ನಡೆದಾಗ ಅದರ ಪಡಿಯಚ್ಚಾಗಿ ಟಿ. ನರಸೀಪುರದ ಸಂಗಮದಲ್ಲಿ ಕೂಡ ಕುಂಭಮೇಳ ತುಸು ವಿಜೃಂಬಣೆಯಿಂದಲೇ ನಡೆದದ್ದನ್ನು ನೆನಪಿಸಿಕೊಳ್ಳಬಹುದು. ಅಲ್ಲಿ ನಡೆದದ್ದು ʻಮಹಾ ಕುಂಭಮೇಳʼ. ಇಲ್ಲಿ ನಡೆದದ್ದು ಸಾಮಾನ್ಯ ಕುಂಭಮೇಳ. ಆದರೆ ಅದುವರೆಗೂ ಎರಡು ಮೂರು ತಿಂಗಳು ಮಹಾಕುಂಭಮೇಳದ ಭಜನೆ ಮಾಡಿದ್ದ ಟಿವಿಯವರು ಇದಕ್ಕೂ ʼಮಹಾʼ ಹಚ್ಚಿಯೇ ಪ್ರಸಾರ ಮಾಡಿ ಇದನ್ನೂ ʻಮಹಾಕುಂಭಮೇಳʼವನ್ನಾಗಿಯೇ ಮಾಡಿದರು!

ಈಗ ಕರ್ನಾಟಕದಲ್ಲಿ ಕಾವೇರಿ ಆರತಿ ಕಾರ್ಯಕ್ರಮ ಆರಂಭಿಸುವ ಬಗ್ಗೆ ಮಾಡುತ್ತಿರುವ ವಿರೋಧಕ್ಕೆ ಬೇರೆ ಬೇರೆ ಕಾರಣಗಳಿವೆ. ರೈತಸಂಘವು ಮುಖ್ಯವಾದಿ ಕೃಷ್ಣರಾಜ ಸಾಗರ ಪ್ರದೇಶದಲ್ಲಿ ಉಂಟಾಗುವ ಜನಸಂದಣಿ, ಇದರಿಂದ ಅಲ್ಲಿನ ನೆಲಜಲಮಾಲಿನ್ಯ ಇದರಿಂದ ಜನಜೀವನದ ಮೇಲೆ ಉಂಟಾಗುವ ದುಷ್ಪರಿಣಾಮ, ಅನವಶ್ಯಕ ಆರ್ಥಿಕ ಹೊರೆ  ಇಂಥವುಗಳನ್ನು ಮುಂದೆಮಾಡಿ ತೋರಿಸಿದೆ. ಆದರೆ ಇದಕ್ಕೂ ಮಿಗಿಲಾದ ಕೆಲವು ಕಾರಣಗಳನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ಅಂಥಹ ಕಾರಣಗಳಲ್ಲಿ ಅತ್ಯಂತ ಮುಖ್ಯವಾದದ್ದು ಇದು ಜನರ ವಿಚಾರಶಕ್ತಿಯನ್ನು ಕುಂದಿಸಿ ಅವರಲ್ಲಿ ಮೌಢ್ಯವನ್ನು ಬಿತ್ತುವ ಕೆಲಸವನ್ನು ಮಾಡುತ್ತದೆ ಎಂಬುದು. ಈ ಮಾತು ಅನೇಕ ಶ್ರದ್ಧಾವಂಥ ಭಕ್ತರಿಗೆ ಸಿಟ್ಟು ತರಿಸಬಹುದಾದ ಮಾತೂ ಆಗಬಹುದು. ಇದು ನಮ್ಮ ಧಾರ್ಮಿಕ ಶ್ರದ್ಧೆಗೆ ಮಾಡುವ ಅವಮಾನ ಎಂದು ಅವರು ಗ್ರಹಿಸುವುದು ಅವರ ಸಿಟ್ಟಿಗೆ ಕಾರಣ. ಆದರೆ ಅವರಿಗೆ ಸಿಟ್ಟುಬರುತ್ತದೆ ಎಂದು ಇದನ್ನು ಹೇಳದೆ ಬಿಡಲು ಬರುವುದಿಲ್ಲ.

ಅಯೋಧ್ಯೆಯ ಸರಯೂ ನದಿಯ ಸುಂದರ ದೃಶ್ಯ


ಏಕೆಂದರೆ ಈ ಆರತಿ ಕಾರ್ಯಕ್ರಮ ಮುಖ್ಯವಾದಿ ಒಂದು ಧಾರ್ಮಿಕ ಕಾರ್ಯಕ್ರಮ. ಅಂತಹ ಕಾರ್ಯಕ್ರಮಗಳ ಸ್ಥಾನಮಾನ – ಅವು ಯಾವ ಧರ್ಮಕ್ಕೇ ಸೇರಿರಲಿ – ಹೇಗೆ ಇರಬೇಕು ಎಂಬುದರ ಬಗ್ಗೆ ನಮ್ಮ ಸಂವಿಧಾನ ಸ್ಪಷ್ಟವಾಗಿ ಹೇಳಿದ್ದರೂ ಅದನ್ನು ಪಾಲಿಸುವಲ್ಲಿ ನಾವೂ ನಮ್ಮನ್ನಾಳುವವರೂ ಸೋತಿದ್ದೇವೆ ಎಂಬುದು ಸತ್ಯ. ಅದಕ್ಕೆ ನಮ್ಮ ಅಜ್ಞಾನವೂ ಕಾರಣವಿರಬಹುದು;  ಜ್ಞಾನವಿದ್ದೂ ಬೇರೆಯದೇ ಆದ ಉದ್ದೇಶವೂ ಇರಬಹುದು. ನಮ್ಮ ದೇಶ ಮುಖ್ಯವಾಗಿ ಅನೇಕ ಧರ್ಮಗಳ ನಾಡು. ನಮ್ಮಲ್ಲಿ ಧರ್ಮ ಮತ್ತು ವಿಜ್ಞಾನಗಳ ತಿಕ್ಕಾಟ ಮೊದಲಿನಿಂದ ಇದ್ದರೂ ಸಂವಿಧಾನ ರಚನೆಯಾದ ಮೇಲಂತೂ ಇದು ತುಸು ಹೆಚ್ಚೇ ಆಗಿದೆ. ಈ ʼಧಾರ್ಮಿಕ ಮನೋಭಾವʼ ಮತ್ತು ವೈಜ್ಞಾನಿಕ ಮನೋಭಾವʼ ಇವುಗಳನ್ನು ಕುರಿತಂತೆ ನಮ್ಮ ಸಂವಿಧಾನ ಏನು ಹೇಳುತ್ತದೆ ಎಂದರೆ ಭಾರತ ಪ್ರಜೆಗಳು ತಮಗೆ ಇಷ್ಟಬಂದ ಧರ್ಮವನ್ನು ಆಚರಿಸಬಹುದು; ಸಮಾಜದ ಇತರ ಜನರಿಗೆ ಧಕ್ಕೆ ಆಗದಂತೆ ಕಾರ್ಯಕ್ರಮಗಳನ್ನು ಮಾಡಿಕೊಳ್ಳಬಹುದು. ಇದರಲ್ಲಿ ಸರ್ಕಾರದ ಪಾತ್ರ ಏನು? ಏನೂ ಇಲ್ಲ. ಅವರ ಧಾರ್ಮಿಕ ಹಕ್ಕುಗಳನ್ನು ರಕ್ಷಿಸಬೇಕು. ಅಂದರೆ ಸರ್ಕಾರ ಅವುಗಳನ್ನು ನಿರ್ಭಂದಿಸಬಾರದು ಅಷ್ಟೇ. ಆದರೆ ಸರ್ಕಾರವೇ ಮುಂದೆ ನಿಂತು ಈ ಕಾರ್ಯಗಳನ್ನು ಮಾಡುವುದನ್ನು ಅದು ಬೆಂಬಲಿಸುವುದು ಹಾಗಿರಲಿ ಸಹಿಸುವುದಿಲ್ಲ ಕೂಡ. ಸರ್ಕಾರ ಧಾರ್ಮಿಕವಾಗಿ ನಿರ್ಲಿಪ್ತವಾಗಿರಬೇಕು ಎಂಬುದು ಅದರ ಆಶಯ.

ಆದರೆ ವೈಜ್ಞಾನಿಕ ಮನೋಭಾವನೆಯ ಬಗ್ಗೆ ಅದು ನಿರ್ಲಿಪ್ತವಾಗಿರಲು ಹೇಳುವುದಿಲ್ಲ ಎಂಬುದು ಬಹಳ ಮುಖ್ಯವಾದ ಸಂಗತಿ.  ಇದಕ್ಕೆ ಸಂಬಂಧಿಸಿದಂತೆ ಅದು ಹೇಳುವುದೇನೆಂದರೆ ಈ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವುದು ಭಾರತದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದು. ಹಾಗಾಗಿ ಇದನ್ನು ವ್ಯಕ್ತಿಗಳು ಮತ್ತು ಸರ್ಕಾರಗಳು ಮುಂದೆ ನಿಂತು ಮಾಡಬೇಕಾಗುತ್ತದೆ! ʻಕಾವೇರಿ ಆರತಿʼ ಸ್ಪಷ್ಟವಾಗಿ ಒಂದು ಧಾರ್ಮಿಕ ಕಾರ್ಯಕ್ರಮ ಆಗುವುದರಿಂದ ಅದನ್ನು ಪ್ರಜೆಗಳಿಂದ ಆಯ್ಕೆಯಾದ ಭಾರತದ ಯಾವುದೇ ಸರ್ಕಾರಗಳು ಮುಂದೆನಿಂತು ಮಾಡುವ ಅಗತ್ಯವಿಲ್ಲವೆಂಬುದು ಇಲ್ಲಿ ಮುಖ್ಯವಾದ ಸಂಗತಿ. ಇಂತಹ ಧಾರ್ಮಿಕ ಕಾರ್ಯಕ್ರಮಗಳು ಅವು ಯಾವುದೇ ಧರ್ಮಕ್ಕೆ ಸೇರಿರಲಿ ವೈಯಕ್ತಿಕ ಮಟ್ಟದಲ್ಲಿ ಇದ್ದಾಗ ಅವಕ್ಕೊಂದು ಖಾಸಗೀತನದ ಬೆಲೆ ಇರುತ್ತದೆ. ನಾವು ನಂಬುವ ದೇವರನ್ನು ನಮ್ಮ ಹೃದಯದಲ್ಲಿ ಇಟ್ಟುಕೊಂಡು ಆರಾಧಿಸುವುದೇ ಬೇರೆ. ತಲೆಯ ಮೇಲೆ ಹೊತ್ತುಕೊಂಡು ಬೀದಿಯಲ್ಲಿ ಕುಣಿಯುವುದೇ ಬೇರೆ. ಭಕ್ತಿಯೆಂಬುದು ಬೀದಿಗೆ ಬಂದಾಗ ಅದು ತೋರುಂಬ ಲಾಭವಾಗುತ್ತದೆ. ಹೀಗಾಗಿಯೇ ಇರಬೇಕು ವಚನಕಾರರು ದೇವರು ಮತ್ತು ಭಕ್ತನ ಸಂಬಂಧವನ್ನು ಗಂಡ-ಹೆಂಡತಿಯ ಸಂಬಂಧಕ್ಕೆ ಸಮೀಕರಿಸಿದರು. ಗಂಡಹೆಂಡತಿಯ ಸಂಬಂಧ ಖಾಸಗೀ ಆಗಿದ್ದಷ್ಟೂ ಅದರ ಘನತೆ ಹಿಗ್ಗುತ್ತದೆ; ಬೀದಿಗೆ ಬಂದಷ್ಟೂ ಕುಗ್ಗುತ್ತದೆ!

ಇಂತಹ ಆಚರಣೆಗಳು ಮಾಡುವ ಇನ್ನೊಂದು ಅನಾಹುತವೆಂದರೆ ಅವಕ್ಕೊಂದು ಪೌರಾಣಿಕತೆಯನ್ನು ಕಟ್ಟಿಕೊಡುವುದು. ಮತ್ತು ಇತ್ತೀಚಿನ ಆಚರಣೆಗಳನ್ನೂ ತಲೆತಲಾಂತರದಿಂದ ಬಂದ ಆಚರಣೆಗಳೆಂದು ಬಿಂಬಿಸಹೋಗುವುದು. ಇದಕ್ಕೆ ಒಂದು ಉದಾಹರಣೆಯನ್ನು ಕೊಡುವುದಾದರೆ ಇವತ್ತು ಮಳೆಗಾಲದಲ್ಲಿ ಜಲಾಶಯಗಳು ತುಂಬಿದಾಗ ಅವುಗಳಿಗೆ ʼಬಾಗಿನʼ ಅರ್ಪಿಸುವ ಕಾರ್ಯಕ್ರಮ. ಇವತ್ತು ಮಳೆ ಜೋರಾಗಿ ಬಂದು ಜಲಾಶಯಗಳು ತುಂಬಿದೊಡನೆ ದೊಡ್ಡದೊಡ್ಡ ಜನನಾಯಕರು ದೊಡ್ಡ ದೊಡ್ಡ ಜಲಾಶಯಗಳಿಗೆ ಈ ʼಭಾಗಿನʼ ಅರ್ಪಿಸುವುದು ʼಪದ್ಧತಿʼಯಾಗಿಯೇ ಬಿಟ್ಟಿದೆ. ಅವರು ಹಾಗೆ ಮಾಡಿದರೆ ಸ್ಥಳೀಯ ರಾಜಕೀಯ ಮುಂದಾಳುಗಳು ಅವರ ಊರ ಹತ್ತಿರದ ಕೆರೆ ತುಂಬಿದಾಗಲೂ ಇದನ್ನು ಅರ್ಪಿಸುವ ಒಂದು ʻಪದ್ಧತಿʼ ಮಾಡಿಕೊಂಡಿದ್ದಾರೆ. ಇದನ್ನು ಏಕೆ ಮಾಡಬೇಕು? ಇದರ ಮಹತ್ವವೇನು ಎಂದು ನೀವು ಯಾರನ್ನಾದರೂ ಕೇಳಿದರೆ ಅವರು ಏನು ಹೇಳಬಹುದು. ಏನೋ ಹೇಳುತ್ತಾರೆ ಅದು ಬೇರೆ ಪ್ರಶ್ನೆ. ಆದರೆ ಇದು ನಮ್ಮ ಸಂಸ್ಕೃತಿಯ ಭಾಗವೇ? ಇದು ಯಾವಾಗಿನಿಂದ ಜಾರಿಗೆ ಬಂತು ಎಂಬುದನ್ನು ನೋಡಿದರೆ ನಮಗೆ ಕುತೂಹಲವಾದ ಕೆಲವು ಸಂಗತಿಗಳು ದೊರೆಯುತ್ತವೆ. ಕೇವಲ ಐವತ್ತು ವರ್ಷಗಳ ಹಿಂದೆ ಹೀಗೆ ಜನನಾಯಕರು ʼಭಾಗಿನʼ ಅರ್ಪಿಸುವ ಒಂದು ಪದ್ಧತಿ ನಮ್ಮಲ್ಲಿ ಇರಲೇ ಇಲ್ಲವಂತೆ. ನನಗೆ ಒಬ್ಬರು ಹಿರಿಯರು ಹೇಳಿದ ಪ್ರಕಾರ ಗುಂಡೂರಾವ್‌ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಇದೇ ಕಾವೇರಿಗೆ ಸಂಬಂಧಿಸಿದ ಕೃಷ್ಣರಾಜ ಸಾಗರ ಜಲಾಶಯ ತುಂಬಿದಾಗ ಮೊದಲಬಾರಿಗೆ ಹೀಗೆ ಒಮ್ಮೆ ಈ ರೀತಿ ʼಬಾಗಿನʼ ಅರ್ಪಿಸಿದರಂತೆ! ಆಮೇಲೆ ಅದು ಸಾಂಕ್ರಾಮಿಕವಾಗಿ ಹಬ್ಬಿತಂತೆ! 

ನಾಳೆ ಈ ಕಾವೇರಿ ಆರತಿ ಕೂಡ ಹೀಗೆ ಆಗುವುದರಲ್ಲಿ ಅನುಮಾನವಿಲ್ಲ. ಇದು ಮುಂದೆ ಕವಲೊಡೆದು ತುಂಗಾ ಆರತಿ, ಕೃಷ್ಣಾ ಆರತಿ, ಶರಾವತಿ ಆರತಿ, ಕುಂಟೆಹೊಳೆ ಆರತಿ, ಹೇಮಾವತಿ ಆರತಿ, ಮೇಲ್ದಂಡೆ ಆರತಿ, ಕೆಳದಂಡೆ ಆರತಿ, ಕೆರೆಆರತಿ, ಹೊಳೆಆರತಿ, ಹಳ್ಳಾರತಿ ಹೀಗೇ ಬೆಳೆಯುತ್ತಾ ಜನರನ್ನು ಮೌಢ್ಯದ ಕಡೆಗೆ ಒಯ್ಯುವಲ್ಲಿ ದೊಡ್ಡಪಾತ್ರವನ್ನೇ ವಹಿಸಬಹುದು. ಇದು ರಾಜ್ಯ ಮತ್ತು ದೇಶಗಳಿಗೆ ಆಗುವ ನಷ್ಟ. ಉತ್ತರ ಭಾರತದ ರಾಜ್ಯಗಳು ಇವತ್ತು ದಕ್ಷಿಣಭಾರತದ ರಾಜ್ಯಗಳಿಗಿಂತ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳಷ್ಟು ಹಿಂದೆ ಉಳಿದಿರುವುದಕ್ಕೆ ಅವುಗಳು ಜನರ ಧಾರ್ಮಿಕತೆಯನ್ನು ಅತಿಯಾಗಿ ಬೆಂಬಲಿಸುತ್ತಿರುವುದು ಕೂಡ ಕಾರಣವಾಗಿದೆ ಎಂಬ ಸತ್ಯವನ್ನು ನಾವು ಅರ್ಥಮಾಡಿಕೊಳ್ಳಬೇಕು. ಅವರು ಮುಂದೆ ಬರಲು ನಮ್ಮನ್ನು ಅನುಸರಿಸುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ನಾವು ಹಿಂದಕ್ಕೆ ಹೋಗಲು ಅವರನ್ನು ಅನುಸರಿಸುವುದು ಜಾಣನಡೆಯಾಗುವುದಿಲ್ಲ. ಹಾಗಾಗಿ ಇಂತಹ ಧಾರ್ಮಿಕ ಕಾರ್ಯಗಳಿಂದ ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿಯಾಗುತ್ತವೆ. ವ್ಯಾಪಾರ ವಹಿವಾಟುಗಳು ಹೆಚ್ಚಾಗುತ್ತವೆ ಇದರಿಂದ ಜನಜೀವನಕ್ಕೆ ನೆರವಾಗುತ್ತದೆ ಎಂದು ಹೇಳುವಾಗಲೆಲ್ಲ ನಾವು ಇಂತಹ ಕಾರ್ಯಗಳು ಉಂಟುಮಾಡುವ ಸಣ್ಣಪುಟ್ಟ ಲಾಭಗಳಿಗಿಂತ ಅವು ಉಂಟುಮಾಡುವ ದೊಡ್ಡಮಟ್ಟದ ಮತ್ತು ಶಾಶ್ವತ ನಷ್ಟದ ಕಡೆಗೆ ಹೆಚ್ಚು ಗಮನಹರಿಸಬೇಕು ಮತ್ತು ಯಾವುದೇ ಚುನಾಯಿತ ಸರ್ಕಾರಗಳು ಆದಷ್ಟೂ ಧಾರ್ಮಿ ಚಟುವಟಿಕಗಳಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಂಡು ಜನರ ವೈಚಾರಿಕತೆ ಮತ್ತು ಜನಜೀವನಮಟ್ಟವನ್ನು ಎತ್ತರಿಸುವತ್ತ ತಮ್ಮ ಶಕ್ತಿ ಮತ್ತು ಸಮಯವನ್ನು ವಿನಿಯೋಗಿಸಬೇಕಾದದ್ದು ಬಹಳ ಮುಖ್ಯವಾದ ಸಂಗತಿಯಾಗುತ್ತದೆ.

ಈ ಎಲ್ಲ ಕಾರಣಗಳಿಂದಾಗಿ ಲೇಖನದ ಶೀರ್ಷಿಕೆಯು ಕೇಳುವ ʼ ಕಾವೇರಿ ಆರತಿ ಯಾವುದರ ಆಹುತಿ ? ಎಂಬ ಪ್ರಶ್ನೆಗೆ ಅದು ಈ ದೇಶದ ಅಜ್ಞಾನ, ಅಂಧಕಾರ, ಬಡತನ ಮುಂತಾದವುಗಳ ಆಹುತಿಯಾಗದೇ ಅವುಗಳನ್ನು ಬಡಿದೋಡಿಸಬಲ್ಲ ಶಿಕ್ಷಣ ಅದರ ಮೂಲಕ ಲಭ್ಯವಾಗುವ ವೈಜ್ಞಾನಿಕ ಮನೋಭಾವದ ಆಹುತಿ ಎಂಬುದೇ ಉತ್ತರವಾಗುತ್ತದೆ.

*****

07-06-2025

No comments:

Post a Comment