Tuesday, June 17, 2025

'ಮಹಾನಾಯಕʼನ ಮಾದರಿ ಬದುಕಿನ ಚಿತ್ರಗಳು

 

ʻಮಹಾನಾಯಕʼನ ಮಾದರಿ ಬದುಕಿನ ಚಿತ್ರಗಳು

·         ಡಾ. ರಾಜೇಂದ್ರ ಬುರಡಿಕಟ್ಟಿ

ಮಹಾವ್ಯಕ್ತಿಗಳ ವೈಯಕ್ತಿಕ ಬದುಕಿನ ವಿವರಗಳನ್ನು ತಿಳಿಯುವ ಕುತೂಹಲ ಸಾಮಾನ್ಯ ಜನರಿಗೆ ಸಹಜವಾಗಿ ಇರುತ್ತದೆ. ಈ ಮಹಾವ್ಯಕ್ತಿಗಳು ಬರೆಹಗಾರರಾದರಂತೂ ಅವರ ಕೃತಿಗಳನ್ನು ಓದುವ ಓದುಗರಿಗೆ ಅವರ ಬದುಕಿನ ವಿವರಗ್ತಳನ್ನು ತಿಳಿಯುವ ಹಂಬಲ ತುಸು ಹೆಚ್ಚೇ ಇರುತ್ತದೆ. ಹಲವು ಕಾರಣಗಳಿರಬಹುದು. ಅವುಗಳಲ್ಲಿ ಒಂದು ಕಾರಣ ಎಲ್ಲರಿಗೂ ಇರುವಂತೆ ಅವರಿಗೂ ದಿನಕ್ಕೆ ಇಪ್ಪತ್ತನಾಲ್ಕೇ ಗಂಟೆಗಳ ಸಮಯವಿರುವಾಗ ನಮಗೆ ಆಗದ್ದನ್ನು ಸಾಧಿಸಲು ಅವರಿಗೆ ಹೇಗೆ ಸಾಧ್ಯವಾಯಿತು ಎಂಬುದನ್ನು ತಿಳಿಯುವ ಕುತೂಹಲ. ಇಂತಹ ಸಾಮಾನ್ಯರ ಅಪೇಕ್ಷೆಯನ್ನು ಈಡೇರಿಸುವಂಥವು ಅಂತಹ ಮಹಾವ್ಯಕ್ತಿಗಳ ಆತ್ಮಕಥೆಗಳು ಅಥವಾ ಅವರನ್ನು ಕುರಿತ ಜೀವನಚರಿತ್ರೆಗಳು. ಆತ್ಮಕಥೆಗಳಿಗಿಂತ ಜೀವನಚರಿತ್ರೆಗಳಿಗೆ ಜನ ಒಂದಿಷ್ಟು ಹೆಚ್ಚು ಆದ್ಯತೆ ನೀಡುವುದುಂಟು. ಆತ್ಮಕಥೆಗಳಲ್ಲಿ ಒಬ್ಬ ವ್ಯಕ್ತಿ ಕೆಲವು ಸಂಗತಿಗಳನ್ನು ಬರೆಯುವ ಮೂಲಕ ತನ್ನನ್ನು ತೆರೆದುಕೊಳ್ಳಲು ಇಷ್ಟಪಡದೆ ಬಿಟ್ಟ ಸಂಗತಿಗಳನ್ನೂ ಜೀವನಚರಿತ್ರೆಗಳು ಒಳಗೊಂಡಿರಲು ಸಾಧ್ಯವೆಂದು ನಂಬುವುದು ಬಹುಶಃ ಇದಕ್ಕೆ ಕಾರಣವಿರಬಹುದು. ಹಾಗಾಗಿ ಮಹಾವ್ಯಕ್ತಿಗಳ ಜೀವನ ಚರಿತ್ರೆಗಳಿಗೆ ಅವರ ಬದುಕಿನ ವಿವರಗಳನ್ನು ಕುರಿತ ವ್ಯಕ್ತಿಚಿತ್ರಗಳು ಮತ್ತು ಬಿಡಿಲೇಖನಗಳಿಗೆ ತಮ್ಮದೇ ಆದ ಮಹತ್ವವಿದೆ.

ಭಾರತ ಮಾತ್ರವಲ್ಲ ವಿಶ್ವದ ಮಹಾವ್ಯಕ್ತಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ಹೆಸರು ಡಾ ಬಿ ಆರ್‌ ಅಂಬೇಡ್ಕರ್‌ ಅವರದ್ದು. ಅವರಷ್ಟು ಓದಿಕೊಂಡವರು ಈಗಿನ ಕಾಲದಲ್ಲಿಯೇ ಇಲ್ಲವೆನ್ನುವಷ್ಟು ವಿರಳವಾಗಿರುವಾಗ ಅವರ ಕಾಲಕ್ಕಂತೂ ಇರಲೇ ಇಲ್ಲವೆಂದು ಧೈರ್ಯದಿಂದ ಹೇಳಬಹುದು. ಭಾರತದಲ್ಲಿ ಈಗಲೂ ಅಂಬೇಡ್ಕರ್‌ ಅಂದರೆ ಬಹಳಷ್ಟು ಜನರಿಗೆ ತಕ್ಷಣಕ್ಕೆ ನೆನಪಿಗೆ ಬರುವುದು ಅವರ ಜಾತಿಯೇ ಹೊರತು ಅವರ ವಿದ್ವತ್ತು ಅಲ್ಲ. ಆದರೆ ಅಂಬೇಡ್ಕರ್‌ ಅಂದರೆ ಏನು? ಅವರ ವ್ಯಕ್ತಿತ್ವ ಎಷ್ಟು ದೊಡ್ಡಮಟ್ಟದ್ದು ಎಂಬುದನ್ನು ಇಡೀ ವಿಶ್ವ ಗುರುತಿಸಿದೆ. ಅನೇಕ ಕಡೆ ಅವರ ಜನ್ಮದಿನವನ್ನು ʼಜ್ಞಾನದ ದಿನʼವೆಂದು ಕೂಡ ಆಚರಿಸಲಾಗುತ್ತಿದೆ.

ಇಂತಹ ಒಬ್ಬ ಮಹಾವ್ಯಕ್ತಿಯ ಜೀವನದ ವಿವಿರಗಳನ್ನು ತಿಳಿಸುವ ಅನೇಕ ಕೃತಿಗಳು ಈಗಾಗಲೇ ಕನ್ನಡವೂ ಸೇರಿದಂತೆ ಭಾರತದ ಬೇರೆ ಬೇರೆ ಭಾಷೆಗಳಲ್ಲಿ ಬಂದಿವೆ. ಅಂತಹವುಗಳ ಸಾಲಿಗೆ ಇತ್ತೀಚೆಗೆ ಪ್ರಕಟವಾಗಿರುವ ʼಡಾ ಬಾಬಾ‌ ಸಾಹೇಬ್ಅಂಬೇಡ್ಕರ್‌ ದಿನಚರಿʼ ಹೊಸದಾಗಿ ಸೇರ್ಪಡೆ. ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಪ್ರಕಟಿಸಿರುವ ಸುಮಾರು ೧೬೦ ಪುಟಗಳ ಈ ಪುಸ್ತಕ ಅಂಬೇಡ್ಕರ್‌ ಅವರ ಖಾಸಗೀ ಬದುಕಿನ ಕೆಲವು ಮುಖ್ಯ ಸಂಗತಿಗಳನ್ನು ತಿಳಿಸುವ ಹನ್ನೊಂದು ಕಿರುಲೇಖನಗಳು ಮತ್ತು ಅನುಬಂಧದಲ್ಲಿ ಸೇರಿಸಲ್ಪಟ್ಟ ಮೂರು ದೊಡ್ಡ ಲೇಖನಗಳನ್ನು ಒಳಗೊಂಡಿದೆ. ಅಂಬೇಡ್ಕರ್‌ ಅವರ ಮನೆಯ ಗ್ರಂಥಾಲಯವನ್ನು ನೋಡಿಕೊಳ್ಳುವ ಜವಾಬ್ದಾರಿಯ ಮೇಲೆ ಬಹಳಷ್ಟು ಕಾಲ ಅವರೊಂದಿಗೆ ತೀರಾ ಹತ್ತಿರದ ಒಡನಾಟದಲ್ಲಿದ್ದ ಉತ್ತರ ಪ್ರದೇಶ ಮೂಲದ ದೇವಿದಯಾಳ್‌ ಅವರು ಅಂಬೇಡ್ಕರ್‌ ಅವರ ಬೃಹತ್‌ ಜೀವನ ಚರಿತ್ರೆಯನ್ನು ಹಲವು ಸಂಪುಟಗಳಲ್ಲಿ ಬರೆದಂಥವರು. ಹಿಂದಿಯಲ್ಲಿರುವ ಅವರ ಕೆಲವು ಆಯ್ದ ಲೇಖನಗಳು ಮತ್ತು ಅವುಗಳ ತೆಲುಗು ಅನುವಾದಗಳನ್ನು ಇಟ್ಟುಕೊಂಡು ಅವನ್ನು ಇಲ್ಲಿ ಕನ್ನಡಕ್ಕೆ ತಂದಿರುವವರು ಪ್ರಾಧ್ಯಾಪಕ ಪಿ ಆರಡಿ ಮಲ್ಲಯ್ಯ ಕಟ್ಟೇರ ಅವರು.

ಅಂಬೇಡ್ಕರ್‌ ಅಂತಹವರ ಜೀವನ ಚರಿತ್ರೆಯನ್ನು ಯಾರು ಬರೆದರೂ ಎಷ್ಟು ಬರೆದರೂ ಇನ್ನೂ ಏನಾದರೂ ಮಹತ್ವದ್ದು ಉಳಿದೇ ಇರುತ್ತದೆ ಎಂಬುದನ್ನು ಒಪ್ಪಿಕೊಳ್ಳವ ಅನುವಾದಕರು ʼಈ ಪುಸ್ತಕವನ್ನು ಅನುವಾದ ಮಾಡುವಾಗ ಮುಖ್ಯವಾಗಿ ನನ್ನ ಎದುರಿಗೆ ಇದ್ದದ್ದು ವಿದ್ಯಾರ್ಥಿ ಸಮೂಹ; ಅವರ ಜೀವನಕ್ಕೆ ಮಾರ್ಗದರ್ಶನ ನೀಡಬಲ್ಲ ಅಂಬೇಡ್ಕರ್‌ ಜೀವನದ ಕೆಲವು ಮುಖ್ಯ ಸಂಗತಿಗಳನ್ನು ಅತ್ಯಂತ ಸರಳವಾಗಿ ತಿಳಿಸಿಕೊಡುವುದನ್ನೇ ಇಲ್ಲಿ ನಾನು ಮುಖ್ಯ ಗುರಿಯಾಗಿ ಇಟ್ಟುಕೊಂಡಿದ್ದೇನೆʼ ಎಂದು ಹೇಳಿ ಈ ಕೆಲಸವನ್ನು ಮಾಡಿದ್ದಾರೆ. ಅವರು ಹೇಳಿದಂತೆ ಇದು ಇಂದು ಕೋಮುವಾದ, ಜಾತಿಯತೆ, ದೇವರು ಧರ್ಮಗಳ ಹೆಸರಿನಲ್ಲಿ ಜನಾಂಗಗಳ ಮಧ್ಯೆ ದ್ವೇಷ ಅಸೂಯೆಗಳನ್ನು ಹುಟ್ಟುಹಾಕಿ ಹೊಡೆದಾಟದ ಅಸ್ತ್ರಗಳಾಗಿ ಬಳಕೆಯಾಗುವ ಮೂಲಕ ತಮ್ಮ ಭವಿಷ್ಯವನ್ನೂ ಆ ಮೂಲಕ ದೇಶದ ಭವಿಷ್ಯವನ್ನೂ ಹಾಳುಮಾಡುತ್ತಿರುವ ನಮ್ಮ ವಿದ್ಯಾರ್ಥಿಗಳು ಮತ್ತು ಯುವಕರು ಅಂಬೇಡ್ಕರ್‌ ಅವರ ಜೀವನದಿಂದ ಕಲಿಯಬಹುದಾದ ಮತ್ತು ಕಲಿಯಲೇಬೇಕಾದ ಹತ್ತು ಹಲವು ಸಂಗತಿಗಳನ್ನು ಈ ಕೃತಿ ಒಳಗೊಂಡಿದೆ.

ʻನಾನು ಮಲಗುವ ಕೋಣೆಯೇ ನನ್ನ ಸಮಾಧಿʼ ʻಡಾ ಅಂಬೇಡ್ಕರ್‌ ಅವರ ರಜಾದಿನಗಳುʼ ʻಶಿಕ್ಷಣ ಪಡೆಯುವುದೆಂದರೆ ಶಕ್ತಿಯನ್ನು ಪಡೆಯುವುದೆಂದೆ ಅರ್ಥʼ ʼ ಅಂಬೇಡ್ಕರ್‌ ಅವರ ಅಧ್ಯಯನಶೀಲತೆʼ ಮುಂತಾದ ಲೇಖನಗಳು ಅಂಬೇಡ್ಕರ್‌ ಅವರ ಓದಿನ ತೀವ್ರವಾದ ಆಸಕ್ತಿ, ಅದನ್ನು ಪೂರೈಸಿಕೊಳ್ಳಲು ಅವರು ತಮಗಿರುವ  ಬಡತನದ ನಡುವೆಯೇ ಮಾಡುತ್ತಿದ್ದ ಪ್ರಯತ್ನಗಳು, ಬಿಡುವಿಲ್ಲದೆ ಕೆಲಸಗಳ ನಡುವೆಯೂ ಓದಲು ಹೊಂದಿಸಿಕೊಳ್ಳುತ್ತಿದ್ದ ಸಮಯ, ಮಿತವಾದ ಆದಾಯದಲ್ಲಿಯೇ ಅವರು ಪುಸ್ತಕ ಖರೀದಿಗೆ ಎಷ್ಟುಹಣವನ್ನು ಹೇಗೆ ಮೀಸಲಿಡುತ್ತಿದ್ದರು  ಇತ್ಯಾದಿಗಳ ಬಗ್ಗೆ ಅನೇಕ ಮಾರ್ಗದರ್ಶಿ ಅಂಶಗಳನ್ನು ನಮ್ಮ ವಿದ್ಯಾರ್ಥಿಗಳಿಗೆ ನೀಡುತ್ತವೆ.

ಅಂಬೇಡ್ಕರ್‌ ಅವರ ಆದಾಯ ೧೦೦ ರೂಪಾಯಿ ಇದ್ದಾಗ ಅದರಲ್ಲಿ ೫೦ ರೂಪಾಯಿಗಳನ್ನು ಪುಸ್ತಕ ಖರೀದಿಸಲು ಬಳಸುತ್ತಿದ್ದರಂತೆ! ಅಂಬೇಡ್ಕರ್‌ ಮನೆ ಎಂದರೆ ಅದು ಒಂದು ಗ್ರಂಥಾಲಯವಲ್ಲದೇ ಬೇರೆ ಏನೂ ಅಲ್ಲ. ನನಗೆ ತಿಳಿದ ಮಟ್ಟಿಗೆ ಭಾರತದಲ್ಲಿ ಅವರಷ್ಟು ಪುಸ್ತಕಗಳನ್ನು ವೈಯಕ್ತಿಕ ಗ್ರಂಥಾಲಯವಾಗಿ ಸಂಗ್ರಹಿಸಿದವರು, ಮತ್ತು ಅವನ್ನು ಓದಿದವರು ಇಲ್ಲ. ಆ ಕಾಲಕ್ಕೇ ಅವರ ಗ್ರಂಥಾಲಯದಲ್ಲಿ ಐವತ್ತು ಸಾವಿರ ಪುಸ್ತಕಗಳಿದ್ದವಂತೆ! ಭಾರತದಲ್ಲಿ ಪುಸ್ತಕಗಳನ್ನು ಇಡಲೆಂದೇ ಒಂದು ಭವ್ಯವಾದ ಮನೆಯನ್ನು ಕಟ್ಟಿಸಿದವರೆಂದರೆ ಅವರು ಅಂಬೇಡ್ಕರ್‌ ಮಾತ್ರ. ಮುಂಬೈನ ʼರಾಜಗೃಹʼ ಅವರ ಮನೆಯೆಂಬ ಒಂದು ಅಮೂಲ್ಯ ಗ್ರಂಥಾಲಯವೇ! ಅವರು ಕೇಂದ್ರದ ಮಂತ್ರಿಯಿದ್ದಾಗ ದೆಹಲಿಯ ಮನೆಗಳೂ ಕೂಡ ಒಂದರ್ಥದಲ್ಲಿ ಗ್ರಂಥಾಲಯಗಳೇ! ಅಂಬೇಡ್ಕರ್‌ ಅವರು ಕೇವಲ ಪುಸ್ತಕಗಳನ್ನು ಸಂಗ್ರಹಿಸುವ ಹವ್ಯಾಸಿ ಆಗಿರಲಿಲ್ಲ; ಬದಲಾಗಿ ಅವುಗಳನ್ನು ಅಮೂಲಾಗ್ರವಾಗಿ ಓದುವ ಶಿಸ್ತುಬದ್ಧ ಅಧ್ಯಯನಕಾರರೂ ಆಗಿದ್ದರು. ಅವರು ಎಲ್ಲಿಗೇ ಹೊರಡಲಿ ಅವರ ಜೊತೆಗೆ ಕೆಲವಾದರೂ ಪುಸ್ತಕಗಳು ಇದ್ದೇ ಇರುತ್ತಿದ್ದವಂತೆ.  ʻಪುಸ್ತಕ ಜೊತೆಗೆ ಇಲ್ಲದ ಅಂಬೇಡ್ಕರ್‌ ಅವರನ್ನು ನೀವು ನೋಡಲಾರಿರಿʼ ಎಂಬ ಲೇಖಕರ ಮಾತು ಅತಿಶಯೋಕ್ತಿಯೇನಲ್ಲ. ಅವರಿಗೆ ಹತ್ತು ನಿಮಿಶ ಸಮಯ ಸಿಕ್ಕರೂ ಅವರು ಯಾವುದಾದರೂ ಒಂದು ಪುಸ್ತಕ ಓದಲು ತೊಡಗುತ್ತಿದ್ದರು. ಕಛೇರಿಯಲ್ಲಿರುವಾಗ, ಮನೆಯಲ್ಲಿರುವಾಗ, ಯಾರದ್ದಾದರೂ ಜೊತೆ ಮಾತನಾಡಲು ಕೊಟ್ಟ ಸಮಯ ಮುಗಿದಾಗ, ಕೋರ್ಟಿನಲ್ಲಿ ಬೇರೆಯವರು ವಾದ ಮಾಡುವಾಗ ಅಷ್ಟೇ ಏಕೆ ಮನೆಯಿಂದ ಐದಾರು ನಿಮಿಷಗಳ ಪ್ರಯಾಣದ ಅವಧಿಯಲ್ಲಿ ಕಾರಿನಲ್ಲಿ ಕುಳಿತಾಗ ಕೂಡ ಅವರು ಮಾಡುತ್ತಿದ್ದ ಕೆಲಸ ಎಂದರೆ ಅದು ಓದುವುದು! ಹಾಳು ಹರಟೆ ಹೊಡೆಯುವುದು, ಕೆಲಸಕ್ಕೆ ಬಾರದ ಕೆಲಸಗಳಲ್ಲಿ, ಮಾತುಗಳಲ್ಲಿ ತೊಡಗುವುದು ಇತ್ಯಾದಿಗಳಲ್ಲಿಅವರೆಂದೂ ಸಮಯವನ್ನು ಪೋಲುಮಾಡುತ್ತಿರಲಿಲ್ಲ.

ʻಅವರು ಮಲಗುವ ಮೊದಲು ಹಾಸಿಗೆ ಹತ್ತಿರ ಕೆಲವು ಪುಸ್ತಕಗಳನ್ನು ಇಡಲು ಹೇಳುತ್ತಿದ್ದರು. ಅವರು ಮಲಗುವ ಸಂದರ್ಭವನ್ನು ಕೊನೆಗೂ ನನಗೆ ನೋಡಲು ಆಗಲೇ ಇಲ್ಲ. ಯಾವಾಗ ನೋಡಿದರೂ ಓದುತ್ತಲೇ ಇರುತ್ತಿದ್ದರು. ಕೆಲವು ದಿನ ಬೆಳಗಿನ ಜಾವದವರೆಗೂ ಓದಿ ಆಗ ಒಂದಿಷ್ಟು ಹೊತ್ತು ಮಲಗುತ್ತಿದ್ದರುʼ ಎಂದು ಲೇಖಕರು ಬರೆಯುತ್ತಾರೆ. ದಿನಪತ್ರಿಕೆಗಳನ್ನು ಕೂಡ ಸುಮ್ಮನೆ ತಿರುವಿ ಹಾಕದೇ ಅವನ್ನು ಅತ್ಯಂತ ಶಿಸ್ತುಬದ್ಧವಾಗಿಯೇ ಓದುತ್ತಿದ್ದರಂತೆ. ಪತ್ರಿಕೆಗಳನ್ನು ಓದುವಾಗ ಒಂದು ಕೆಂಪು ಮಸಿಯ ಪೆನ್ನು ಕೈಯಲ್ಲಿ ಇರಲೇಬೇಕಿತ್ತಂತೆ. ಪತ್ರಿಕೆಗಳಲ್ಲಿ ಓದಿದ ಮುಖ್ಯಾಂಶಗಳನ್ನು ಟಿಪ್ಪಣಿ ಮಾಡಿಕೊಳ್ಳುವುದು, ಪ್ರಮುಖ ಸುದ್ಧಿಗಳನ್ನು ಗೆರೆಎಳೆದು ಗುರ್ತುಮಾಡಿಕೊಳ್ಳುವುದು, ಅಂತಹ ಸುದ್ಧಿಗಳನ್ನು ಕಟ್‌ ಮಾಡಿ ನಿರ್ಧಿಷ್ಟವಾದ ಫೈಲ್‌ಗಳಲ್ಲಿ ಜೋಡಿಸುವುದು ಇತ್ಯಾದಿ ಮಾಡುತ್ತಿದ್ದರಂತೆ. ಇನ್ನೂ ಕುತೂಹಲದ ಸಂಗತಿ ಎಂದರೆ ಟಾಯ್ಲೆಟ್‌ ರೂಮಿಗೆ ಹೋಗುವಾಗ ಕೂಡ ಒಂದೆರಡು ಪತ್ರಿಕೆ ಎತ್ತಿಕೊಂಡು ಹೋಗಿ ಓದಿಕೊಂಡು ಬರುತ್ತಿದ್ದರಂತೆ! ಅಂಬೇಡ್ಕರ್‌ ಅವರನ್ನು ಇಂದು ವಿಶ್ವಮಟ್ಟದ ನಾಯಕನನ್ನಾಗಿ ಬೆಳಸಿದ್ದು ಅವರ ಈ ಬಗೆಯ ಓದೇ  ಹೊರತು ಬೇರೇನೂ ಅಲ್ಲ. ಅವರನ್ನು ನಾವೆಲ್ಲ ಇಂದು ಅಷ್ಟೊಂದು ಗೌರವಿಸುವಂತೆ ಮಾಡಿದ್ದು ಯಾವುದೇ ವ್ಯಕ್ತಿಯಲ್ಲ; ಬದಲಾಗಿ ಅವರ ಪುಸ್ತಕಗಳು ಎಂಬುದನ್ನು ಮೊಬೈಲ್‌ ರೀಲ್ಸ್‌ಗಳ ಹಿಂದೆ ಬಿದ್ದು ದಿನದಿನಕ್ಕೂ ಓದಿನಿಂದ ವಿಮುಖವಾಗುತ್ತಿರುವ ನಮ್ಮ ವಿದ್ಯಾರ್ಥಿಗಳು ಇಂದು ಅಗತ್ಯವಾಗಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ.

ಅಂಬೇಡ್ಕರ್‌ ಅವರ ಓದು ಅಧ್ಯಯನದ ವಿಧಾನ ಇತ್ಯಾದಿಗಳ ಜೊತೆಗೆ ಅವರು ತಮ್ಮ ಮೊದಲನೆಯ ಹೆಂಡತಿಯ ಮರಣದ ನಂತರದ ತಮ್ಮ ಏಕಾಂಗಿತನದ ಬದುಕನ್ನು ಬೇಸರದ ಬದುಕನ್ನಾಗಿಸಿಕೊಂಡು ನರಳದೆ ಹೇಗೆ ಅದನ್ನು ಸಂತೋಷದ ಬದುಕನ್ನಾಗಿಸಿಕೊಂಡರು, ಅವರ ಬಹುಮುಖ್ಯವೆನಿಸುವ ಕೃತಿಗಳನ್ನು ರಚಿಸುವಾಗ ಏನೆಲ್ಲ ಸಮಸ್ಯೆ ಸವಾಲುಗಳನ್ನು ಎದುರಿಸಿದರು ಎಂಬುದರ ಬಗ್ಗೆ ಕೆಲವು ಸೂಕ್ಷ್ಮ ಅಂಶಗಳನ್ನು ಈ ಕೃತಿ ನೀಡಿದೆ. ದೇಶದ ಕಾರ್ಮಿಕ ಮಂತ್ರಿಯಾಗಿದ್ದರೂ ಅತಿಥಿಗಳಿಗೇ ತಾವೇ ಖುದ್ಧಾಗಿ ಅಡುಗೆ ಮಾಡಿ ಬಡಿಸುತ್ತಿದ್ದ ಅವರ ಅತಿಥಿ ಸತ್ಕಾರದ ರೀತಿ ಗಮನ ಸೆಳೆಯುತ್ತದೆ. ಗಾಂಧೀಜಿಯೊಂದಿಗೆ ಇಡೀ ಬದುಕಿನ ತುಂಬಾ ಅವರು ಇಟ್ಟುಕೊಂಡಿದ್ದ ಸೈದ್ದಾಂತಿಕ ವೈರುಧ್ಯದ ಮಧ್ಯೆಯೂ ಅವರ ಹತ್ಯೆಯ ಸುದ್ಧಿ ಕೇಳಿ ದಿಗ್ಭ್ರಾಂತರಾಗುವುದು ಮತ್ತು ʼಆತನ ಯಾವ ಶತೃ ಕೂಡ ಆತನಿಗೆ ಇಂತಹ ಸಾವು ಬರಲಿ ಎಂದು ಬಯಸುವುದಿಲ್ಲʼ ಎಂದು ಉದ್ಗರಿಸುವುದು ಅವರು ಗಾಂಧಿಯ ಬಗ್ಗೆ ಹೊಂದಿದ್ದ ಗೌರವವನ್ನು ತೋರಿಸುತ್ತದೆ.

ಈ ದೇಶದ ಶೇಕಡಾ ತೊಂಬತ್ತರಷ್ಟು ಜನರ ಬದುಕು ಹಸನಾಗಲು ಜೀವನಪೂರ್ತಿ ಹೋರಾಡಿದ ಅಂಬೇಡ್ಕರ್‌ ನಮ್ಮ ದೇಶದ ತಳಸಮುದಾಯದ ಪಾಲಿಗಂತೂ ನಿಜಾರ್ಥದಲ್ಲಿ ಭಾಗ್ಯವಿಧಾನೇ ಸರಿ. ಈ ಪುಸ್ತಕದಲ್ಲಿನ ಒಂದು ಕುತೂಹಲಕಾರಿ ಸಂದರ್ಭವನ್ನು ಉಲ್ಲೇಖಿಸಬೇಕು: ಒಮ್ಮೆ ʼದಿ ಗಾರ್ಡಿಯನ್‌ʼ ಮತ್ತು ʼದಿ ನ್ಯೂಯಾರ್ಕ್‌ʼ ಪತ್ರಿಕೆಗಳ ಪ್ರತಿನಿಧಿಗಳು ಗಾಂಧೀಜಿ, ಜಿನ್ನಾ ಮತ್ತು ಅಂಬೇಡ್ಕರ್‌ ಅವರನ್ನು ಭೇಟಿ ಮಾಡಲು ಬಂದಿರುತ್ತಾರೆ. ಗಾಂಧೀಜಿ ಅವರಿಗೆ ರಾತ್ರಿ ೯.೦೦ ಗಂಟೆಗೆ ಸಮಯ ನೀಡಿದ್ದರಂತೆ. ಜಿನ್ನಾ ರಾತ್ರಿ ೯.೩೦ಕ್ಕೆ ನೀಡಿದ್ದರಂತೆ. ಅಂಬೇಡ್ಕರ್‌ ಅವರನ್ನು ಕೇಳಿದಾಗ ಯಾವಾಗಲಾದರೂ ಬನ್ನಿ ಎಂದು ಹೇಳಿದ್ದರಂತೆ. ಆದರೆ ನೀಡಲಾದ ಸಮಯದಂತೆ ಅವರು ಹೋದಾಗ ಗಾಂಧೀಜಿ ನಿದ್ರಿಸುತ್ತಿದ್ದಾರೆ ಎಂದು ಉತ್ತರ ದೊರೆಯಿತಂತೆ. ಜಿನ್ನಾ ಅವರ ಸಹಾಯಕರೂ ಇದೇ ಉತ್ತರವನ್ನು ನೀಡಿದರಂತೆ. ಆ ಪ್ರತಿನಿಧಿಗಳು ಅಂಬೇಡ್ಕರ್‌ ಅವರಲ್ಲಿಗೆ ಬರುವಾಗ ಸರಿಸುಮಾರು ಮಧ್ಯರಾತ್ರಿ ಆಗಿತ್ತಂತೆ. ಆಗಲೂ ಓದುತ್ತಾ ಕುಳಿತ ಅಂಬೇಡ್ಕರ್‌ ಅವರನ್ನು ನೋಡಿ ಬೆರಗಾದ ಅವರ ಬಾಯಿಂದ ʼಗಾಂಧೀಜಿ, ಜಿನ್ನಾ ಭೇಟಿಗೆ ಸಿಗಲಿಲ್ಲ. ಅವರು ನಿದ್ರಿಸುತ್ತಿದ್ದರು. ನೀವು ಇಷ್ಟುಹೊತ್ತಿನಲ್ಲೂ ಎಚ್ಚರವಾಗಿದ್ದೀರಲ್ಲ? ಎಂಬ ಪ್ರಶ್ನೆ ಸಹಜವೆಂಬಂತೆ ಬಂದಾಗ ಅಂಬೇಡ್ಕರ್‌ ಕೊಡುವ ಉತ್ತರ ಮಾರ್ಮಿಕವಾಗಿದೆ: “ಗಾಂಧೀಜಿ, ಜಿನ್ನಾ ಅವರು ನಿದ್ರಿಸುತ್ತಿದ್ದಾರೆಂದರೆ ಅವರವರ ಸಮಾಜ ಎಚ್ಚರಗೊಂಡಿವೆ. ಅದು ಅವರಿಗೂ ಗೊತ್ತು ಅವರ ಸಮಾಜಕ್ಕೂ ಗೊತ್ತು. ನಾನು ಎಚ್ಚರವಾಗಿದ್ದೇನೆಂದರೆ ನನ್ನ ಸಮಾಜ ಇನ್ನೂ ಗಾಢನಿದ್ದೆಯಿಂದ ಎದ್ದೇಳುವ ಮನಸ್ಸೂ ಮಾಡಿಲ್ಲ.”

ಹೀಗೆ ಹೆಚ್ಚಾಗಿ ಸಾರ್ವಜನಿಕವಾಗಿ ಗೊತ್ತಿಲ್ಲದ ಅಂಬೇಡ್ಕರ್‌ ಅವರ ಜೀವನದ ಕೆಲವು ಮಹತ್ವದ ಸಂಗತಿಗಳ ಬಗ್ಗೆ ಸೂಕ್ಷ್ಮ ಒಳನೋಟವನ್ನು ನೀಡಬಲ್ಲ ಈ ಕೃತಿಗೆ ಮಿತಿಗಳೇ ಇಲ್ಲ ಎಂದೇನೂ ಇಲ್ಲ. ಅನುವಾದಕರು ತಮ್ಮ ಸುಮಾರು ಹದಿನೆಂಟು ಪುಟಗಳ ಸುದೀರ್ಘವಾದ ಮಾತುಗಳನ್ನು ಬರೆದಿದ್ದಾರೆ. ಇದು ಸಹಜವಾಗಿ ಅನೇಕ ಅಂಶಗಳ ಪುನರಾವರ್ತನೆಗೆ ಕಾರಣವಾಗಿದೆ. ಅದನ್ನು ತುಸು ಸಂಕ್ಷಿಪ್ತಗೊಳಿಸಿ ದಿಕ್ಸೂಚಿಯನ್ನಾಗಿಸಬೇಕಿತ್ತು. ಹಾಗೆಯೇ ಕೃತಿಗೆ ತುಸು ʻಭಾರʼವೆನಿಸುವ ಯು ಆರ್‌ ರಾವ್‌ ಮತ್ತು ದಯಾ ಪವಾರ್‌ ಅವರ ದೀರ್ಘಲೇಖನಗಳನ್ನು ಬಿಟ್ಟು ಅದರ ಬದಲು ದೇವಿದಯಾಳ್‌ ಅವರು ಬರೆದ ಅಂಬೇಡ್ಕರ್‌ ಜೀವನ ಚರಿತ್ರೆಯ ಇನ್ನಷ್ಟು ಚಿಕ್ಕ ಚಿಕ್ಕ ಮತ್ತು ಸ್ವಾರಸ್ಯಕರ ಸಂಗತಿಗಳನ್ನೇ ಹೆಕ್ಕಿ ಹಾಕಿಕೊಂಡಿದ್ದರೆ ಕೃತಿ ಇನ್ನಷ್ಟು ʻವಿದ್ಯಾರ್ಥಿಸ್ನೇಹಿʼ ಆಗುವ ಮೂಲಕ ತಮ್ಮ ಉದ್ದೇಶವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಈಡೇರಿಸುವಲ್ಲಿ ಸಹಾಯವಾಗುತ್ತಿತ್ತು.

ಇಂತಹ ಒಂದೆರಡು ಮಿತಿಗಳ ನಡುವೆಯೂ ಈ ಕೃತಿಗೆ ಮೌಲಿಕ ಮುನ್ನುಡಿ ಬರೆದಿರುವ ಹಿರಿಯ ವಿದ್ವಾಂಸ, ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರು ಅಂಬೇಡ್ಕರ್‌ ಅವರ ಮೊದಲನೆಯ ಹೆಂಡತಿಯ ಮರಣದ ನಂತರ ಸುಮಾರು ಹದಿಮೂರು ವರ್ಷಗಳ ಅವರ ಏಕಾಂತ ಜೀವನವನ್ನು ಪ್ರಸ್ತಾಪಿಸುತ್ತಾ, ʼಜ್ಙಾನವನ್ನು ಸಂಪಾದಿಸುವುದು, ಶಿಸ್ತುಬದ್ಧ ಜೀವನವನ್ನು ನಡೆಸುವುದು, ಮತ್ತು ಸಮಾಜಕ್ಕಾಗಿ ಬದುಕನ್ನು ಮುಡುಪಾಗಿಡುವುದು ಈ ಮೂರು ತತ್ವಗಳನ್ನು ಅಳವಡಿಸಿಕೊಂಡವನಿಗೆ ದುಃಖವು ಹತ್ತಿರ ಸುಳಿಯುವುದಿಲ್ಲʼ ಎಂಬ ಅಂಬೇಡ್ಕರ್‌ ಅವರ ಬೆಲೆಯುಳ್ಳ ಮಾತನ್ನು ಉಲ್ಲೇಖ ಮಾಡುವಂತೆ ಏನೆಲ್ಲ ಮನರಂಜನೆಯ ಸೌಕರ್ಯ ಸೌಲಭ್ಯಗಳನ್ನು ಬಳಸಿಕೊಂಡೂ, ಖಿನ್ನತೆಯಿಂದ ಬಳಲುತ್ತಿರುವ ಮತ್ತು ಈ ಸೌಲಭ್ಯ ಸೌಕರ್ಯಗಳಲ್ಲಿ ತಮ್ಮನ್ನೇ ಕಳೆದುಕೊಳ್ಳುತ್ತಿರುವ ನಮ್ಮ ವಿದ್ಯಾರ್ಥಿ ಯುವಜನರು ಮಾತ್ರಲ್ಲ ತಮ್ಮ ಬದುಕನ್ನು ʼಸಾರ್ಥಕʼವಾಗಿ ಬದುಕಬೇಕು ಎಂಬ ಕನಸನ್ನು ಕಟ್ಟಿಕೊಂಡಿರುವ ಎಲ್ಲರೂ ಒಮ್ಮೆ ಓದಬೇಕಾದ ಕೃತಿಯಿದು. ಇಂತಹ ಮೌಲಿಕ ಕೃತಿಯನ್ನು ಕನ್ನಡಕ್ಕೆ ತಂದ ಲೇಖಕರು ಮತ್ತು ಅದನ್ನು ಆಸಕ್ತಿವಹಿಸಿ ಪ್ರಕಟಿಸಿದ ಅಹರ್ನಿಶಿಯ ಅಕ್ಷತಾ ಹುಂಚದಕಟ್ಟೆ ಅಭಿನಂದಾರ್ಹರು.

*****

No comments:

Post a Comment