Sunday, June 4, 2023

ವಿವೇಚನಾ ಪೂರ್ವಕವಾಗಿ ಮಂಡಿಸಿದಂತಹ ವಿಚಾರಗಳು

ವಿವೇಚನಾ ಪೂರ್ವಕವಾಗಿ ಮಂಡಿಸಿದಂತಹ ವಿಚಾರಗಳು


ರಾಜೇಂದ್ರ ಬುರಡಿಕಟ್ಟಿಯವರ ಹೆಸರು ಕನ್ನಡದ ವಿಚಾರವಾದಿಗಳಿಗೆ ಸುಪರಿಚಿತ. ಮೊದಲು ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿದ್ದು  ಸಾಹಿತ್ಯದ ಮೇಲಿನ ತಮ್ಮ ಅಪರಿಮಿತ ಆಸಕ್ತಿಯಿಂದ ಖಾಸಗಿಯಾಗಿ ಕನ್ನಡ ಎಂ.ಎ.ಮಾಡಿ ಕನ್ನಡದ ಹತ್ತು ಪುರಾತನ ಮತ್ತು ಆಧುನಿಕ ಮಹಾಕಾವ್ಯಗಳ ತೌಲನಿಕ ಅಧ್ಯಯನ ಮಾಡಿ ಪಿ.ಹೆಚ್.ಡಿ ಮಹಾಪ್ರಬಂಧ ಬರೆದು ಡಾಕ್ಟರೇಟ್ ಗಳಿಸಿದರು. ನಂತರ ಹೈಸ್ಕೂಲಿಗೆ ಬಡ್ತಿ ಹೊಂದಿದರು. ಪುಸ್ತಕಗಳನ್ನು ಪ್ರಕಟಿಸಿದ್ದು ಕಡಿಮೆ. 'ಕೆಮ್ಮುಗಿಲು' 'ಗುಲಾಬಿ ಮುಳ್ಳು' ಎಂಬ ಎರಡು ಕವನ ಸಂಕಲನಗಳು, 'ಯುಗಧರ್ಮ ಮತ್ತು ಆಧುನಿಕ ಕನ್ನಡ ಮಹಾಕಾವ್ಯಗಳು' (ಪಿಹೆಚ್ ಡಿ ಮಹಾಪ್ರಬಂಧ) ಮತ್ತು ಇತ್ತೀಚೆಗೆ ಪ್ರಕಟಿಸಿದ 'ಕಪ್ಪು ಬುರ್ಖಾ ಮತ್ತು ಕೇಸರಿ ಶಾಲ್ ' ಎಂಬ ಲೇಖನ ಸಂಕಲನ. ಇವಿಷ್ಟೇ ಇವರ ಕೃತಿಗಳು.

         ಬುದ್ಧಿ ಬಂದಾಗಿನಿಂದ ವೈಚಾರಿಕ ಚಿಂತನೆಯಲ್ಲಿ ನಂಬಿಕೆಯಿಟ್ಟು ಆ ಪ್ರಕಾರ ನಡೆಯುತ್ತಾ ಬಂದವರು ರಾಜೇಂದ್ರ ಬುರಡಿಕಟ್ಟಿಯವರು. ತಳಬುಡವಿಲ್ಲದ ಮೂಢನಂಬಿಕೆಗಳನ್ನು ಬೆಳೆಸಿಕೊಳ್ಳುವುದರಿಂದ ಸಾಮಾಜಿಕ ಪ್ರಗತಿ  ಕುಂಠಿತವಾಗುತ್ತದೆ ಎಂದು ಹೇಳುತ್ತಲೇ ಬಂದವರು. ಪುರೋಹಿತಶಾಹಿಯಿಂದ ಜನರಿಗಾಗುವ ಅನ್ಯಾಯವನ್ನು ಖಂಡಿಸುವ ನಿಟ್ಟಿನಲ್ಲಿ ಕುವೆಂಪು ಪ್ರಣೀತ 'ಮಂತ್ರಮಾಂಗಲ್ಯ' ರೀತಿಯಲ್ಲಿ ಶಶಿಕಲಾ ಅವರನ್ನು ಮದುವೆಯಾದವರು. ನಾವು ಮಾಡುವ ಒಳ್ಳೆಯ ಕೆಲಸ ಕಾರ್ಯಗಳಿಗೆ ಯಾವುದೇ ಮುಹೂರ್ತ-ಗಳಿಗೆಗಳನ್ನು ನೋಡುವ ಅಗತ್ಯವಿಲ್ಲ, ಬದಲಾಗಿ ಗುರು-ಹಿರಿಯರ, ಬಂಧು-ಮಿತ್ರರ ಶುಭಹಾರೈಕೆಗಳಿದ್ದರೆ ಸಾಕು ಎಂದು ವಾದಿಸಿ ಆ ಪ್ರಕಾರ ಮಾಡಿ  ಸಾಧಿಸಿದವರು. ಅವರು ಬರೆದು ಕೃತಿಗಳೂ ಇವೇ ಆದರ್ಶವನ್ನು ಹಿಡಿದಿವೆ.

   ಪ್ರಸ್ತುತ ' ಕಪ್ಪುಬುರ್ಖಾ ಮತ್ತು ಕೇಸರಿ ಶಾಲು ' ಕೃತಿಯಲ್ಲಿ ಮೂವತ್ತು ಲೇಖನಗಳಿವೆ. ಎಲ್ಲವೂ ವೈಚಾರಿಕ ಚಿಂತನೆಯ ಮೇಲೆ ಒತ್ತು ಹಾಕಿದ ಲೇಖನಗಳು. ವರ್ತಮಾನದ ಘಟನೆಗಳಿಗೆ ಸಂಬಂಧಿಸಿ ಸಮಯೋಚಿತವಾಗಿ ಸರಿ-ತಪ್ಪುಗಳ ಬಗ್ಗೆ ಸಮತೋಲನವನ್ನು ಕಾಪಾಡಿಕೊಂಡು, ವಿವೇಚನಾ ಪೂರ್ವಕವಾಗಿ ಮಂಡಿಸಿದಂತಹ ವಿಚಾರಗಳು ಇಲ್ಲಿವೆ. ಏಳೆಂಟು ಲೇಖನಗಳಷ್ಟೇ ಪೂರ್ಣ ಪ್ರಮಾಣದ ಪ್ರಬಂಧಗಳು. ಉಳಿದವು ಒಂದೆರಡು ಪುಟಗಳ ಪುಟ್ಟ ಬರಹಗಳು.

   ಮುಖ್ಯವಾಗಿ ಇಲ್ಲಿ ಹಲವು ಲೇಖನಗಳಲ್ಲಿ ತಮ್ಮ ಧರ್ಮದ ಸಿದ್ಧಾಂತಗಳನ್ನು ತಪ್ಪಾಗಿ ಅರ್ಥಮಾಡಿಕೊಂಡು ಹಿಂಸೆ-ದೊಂಬಿಗಿಳಿದು ಸಾಮಾಜಿಕ ಶಾಂತಿಯನ್ನು ಹಾಳುಗೆಡಹುವ ಹಿಂದೂಗಳಾಗಲಿ, ಮುಸ್ಲಿಮರಾಗಲಿ, ಕ್ರೈಸ್ತರಾಗಲಿ- ಎಲ್ಲರ ಅಜ್ಞಾನದ ಬಗ್ಗೆ ಲೇಖಕರು ತಮ್ಮ ನೋವನ್ನು ವ್ಯಕ್ತಪಡಿಸುತ್ತಾರೆ. ಇನ್ನೊಬ್ಬರ ಧಾರ್ಮಿಕ  ನಂಬಿಕೆಗಳನ್ನು ಹೀಗಳೆದು ಗೇಲಿ ಮಾಡುವುದು ಯಾವ ಧರ್ಮದ ಲಕ್ಷಣವೂ ಅಲ್ಲವೆನ್ನುತ್ತಾರೆ.  ನಮ್ಮ ಧರ್ಮವೇ ಸರ್ವಶ್ರೇಷ್ಠ, ಅದು ಪ್ರಪಂಚದ ಎಲ್ಲರೂ ಅನುಸರಿಸುವ ಧರ್ಮವಾಗಬೇಕೆಂದು ಹೇಳುತ್ತಾ  ಅದಕ್ಕಾಗಿ ಹಿಂಸಾಮಾರ್ಗಕ್ಕಿಳಿಯುವುದು ಅಮಾನುಷ ಅನ್ನುತ್ತಾರೆ. ನಮ್ಮದೇ ಸರಿಯೆಂದು ವಾದಿಸುವವರು ಸ್ವಲ್ಪ ತಾಳ್ಮೆ ವಹಿಸಿ ಆತ್ಮಾವಲೋಕನ ಮಾಡಿಕೊಳ್ಳಲು ಕರೆ  ಕೊಡುತ್ತಾರೆ.  ಎಲ್ಲ ಧರ್ಮಗಳ ಅನುಯಾಯಿಗಳಲ್ಲೂ ಒಳ್ಳೆಯವರೂ ಇರುತ್ತಾರೆ, ಕೆಟ್ಟವರೂ ಇರುತ್ತಾರೆ. ಕೆಟ್ಟ ಆಲೋಚನೆಗಳನ್ನು ಇಟ್ಟುಕೊಂಡವರಿಂದಾಗಿ  ಒಳ್ಳೆಯ ಮನಸ್ಸಿನ ಮುಗ್ಧರು ತೊಂದರೆ ಅನುಭವಿಸುವಂತಾಗುತ್ತದೆ ಅನ್ನುತ್ತಾರೆ. ಈ ರೀತಿ ಮಾತನಾಡುವುದಕ್ಕೆ ಪೂರ್ವಭಾವಿಯಾಗಿ ಲೇಖಕರು ಎಲ್ಲ ಪ್ರಮುಖ  ಧರ್ಮಗ್ರಂಥಗಳನ್ನು ಅಧ್ಯಯನ ಮಾಡಿ ನಿಷ್ಪಕ್ಷವಾಗಿ  ಅಲ್ಲಿಂದ  ಸಂಬಂಧಪಟ್ಟ ಸಾಲುಗಳನ್ನು  ಉದಾಹರಿಸುತ್ತಾರೆ. ಇದು ಅವರ ಸೂಕ್ಷ್ಮ ವಿವೇಚನೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. 

    ಧರ್ಮ ಮಾತ್ರವಲ್ಲದೆ ಇಂದಿನ ಶಿಕ್ಷಣ ಕ್ರಮ, ಸಂಸ್ಕೃತಿ-ಕಲೆಗಳ ಬಗೆಗೂ ಇಲ್ಲಿ ಲೇಖನಗಳಿವೆ. ಅಲ್ಲಲ್ಲಿ ನಡೆದ ಘಟನೆಗಳನ್ನು ಉದಾಹರಣೆಯಾಗಿ ಕೊಡುತ್ತಾ ತಮ್ಮ ನಿಲುವುಗಳನ್ನು ಲೇಖಕರು ಮಂಡಿಸುತ್ತಾರೆ. ಹಳೆಗನ್ನಡ, ಹೊಸಗನ್ನಡ ಸಾಹಿತ್ಯದ ಅನೇಕ ಉತ್ತಮ ಕೃತಿಗಳನ್ನು ಚೆನ್ನಾಗಿ ಓದಿಕೊಂಡ ಅವರು ಅಲ್ಲಿಂದ ಆಯ್ದ ಸಾಲುಗಳನ್ನು ಸಂದರ್ಭೋಚಿತವಾಗಿ ಉಲ್ಲೇಖಿಸುತ್ತಾರೆ.  ಲೇಖನಗಳಿಗೆ ಅವರು ಕೊಡುವ ಶೀರ್ಷಿಕೆಗಳು  ( ಒಂದಾಗಲು ಬಿಡದ 'ವಂದೇ ಮಾತರಂ',  ಮಂಗನಬ್ಯಾಟೆ ಮತ್ತು ಮಂಗಚೇಷ್ಟೆ,  ಬಂಡುಂಬ ಭ್ರಮರವೂ ಬಂಡಾಯದ ಕಾಗೆಗಳೂ, ಖಾಲಿ ಕುರ್ಚಿ ಮತ್ತು ಪೋಲಿ ಪತ್ರಕರ್ತ,  ಮಂಗಳೂರಿನ ಕೆಂಪು ಮತ್ತು ಕಲಬುರ್ಗಿಯ ಕಂಪು ಇತ್ಯಾದಿ) ಆಕರ್ಷಕವಾಗಿದ್ದು ಗಮನ ಸೆಳೆಯುತ್ತವೆ. ದೋಷಮುಕ್ತ ವಾದ ಸರಳ ಸುಂದರ ಬರವಣಿಗೆಯ ಶೈಲಿಯು ಅವರ ಕೃತಿಗೆ ಮೆರುಗನ್ನೂ ಗಾಂಭೀರ್ಯವನ್ನೂ ಇತ್ತಿದೆ. 

- ಡಾ. ಪಾರ್ವತಿ ಜಿ. ಐತಾಳ್

ಲೇಖನವನ್ನುಅವಧಿಯಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿರಿ.

http://bitly.ws/G4TE


No comments:

Post a Comment