Saturday, May 31, 2025

ವೀರಣ್ಣನ ಅಮಾನತ್ತು ಪ್ರಕರಣ: ಸದುದ್ದೇಶಿತ ಸೀಮೋಲ್ಲಂಘನ ಮತ್ತು ಶಿಕ್ಷಕ ಸಂಘದ ಜವಾಬ್ದಾರಿ

 ವೀರಣ್ಣನ ಅಮಾನತ್ತು ಪ್ರಕರಣ: ಸದುದ್ದೇಶಿತ ಸೀಮೋಲ್ಲಂಘನ ಮತ್ತು ಶಿಕ್ಷಕ ಸಂಘದ ಜವಾಬ್ದಾರಿ


ಶಿಕ್ಷಕ ಸಾಹಿತಿಗಳಾದ ಮಿತ್ರ ವೀರಣ್ಣ ಮಡಿವಾಳರ ಅವರನ್ನು ಬೆಳಗಾವಿ ಜಿಲ್ಲಾಡಳಿತ ಸೇವೆಯಿಂದ ಅಮಾನತ್ತು ಮಾಡಿದೆ. ಅದಕ್ಕೆ ಕಾರಣಗಳೇನು ಎಂಬುವು ಈಗಾಗಲೇ ಮಾಧ್ಯಮದಲ್ಲಿ ಸಾಕಷ್ಟು ವರದಿಯಾಗಿವೆ. ವೀರಣ್ಣ ಕೂಡ ಪ್ರತಿಹಂತದ ಬೆಳವಣಿಗೆಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರ ಗಮನಕ್ಕೆ ತರುತ್ತಿದ್ದಾರೆ.

ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಅವರ ಅಮಾನತ್ತು ಆದದ್ದು ಅವರು ತಾವು ಪಾಠಮಾಡುವ ಮತ್ತು ಮುಖ್ಯಶಿಕ್ಷಕರಾಗಿರುವ ಸರ್ಕಾರಿ ಶಾಲೆಗೆ ಹೆಚ್ಚುವರಿ ಕೊಠಡಿಗಳು ಬೇಕು ಎಂದು ಕಾಲ್ನಡಿಗೆ ಜಾಥಾ ನಡೆಸಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿ ಎದುರು ಧರಣಿ ಕೂತರು ಎಂಬುದು.

ಅವರನ್ನು ಅಮಾನತ್ತು ಮಾಡಲು ಸರ್ಕಾರಿ ಅಧಿಕಾರಿಗಳಿಗೆ ಇಷ್ಟು ಸಾಕಾಗುತ್ತದೆ. ಮತ್ತು ನಾಳೆ ಕೋರ್ಟು ಕಛೇರಿ ಅಂತ ಪ್ರಕರಣ ಹೋದರೆ ಅವರ ಕ್ರಮವನ್ನು ಅವರು ಇಷ್ಟರಿಂದಲೇ ಸಮರ್ಥಿಸಿಕೊಳ್ಳಬಹುದಾಗಿದೆ. ಅಧಿಕಾರಿಗಳು ತಮ್ಮ ಕೆಳಗಿನ ನೌಕರರನ್ನು ಅಮಾನತ್ತು ಮಾಡಲು ಯಾವುದಾದರೂ ನಿಯಮ ಇಟ್ಟುಕೊಂಡೇ ಮಾಡುತ್ತಾರೆ. ಹಾಗಾಗಿ ಕಾನೂನು ಪ್ರಕಾರ ಅವರ ಕ್ರಮವನ್ನು ತಪ್ಪು ಎನ್ನಲು ಬರುವುದಿಲ್ಲ. ಮತ್ತು ಕಾನೂನಿನಿಂದಲೇ ವೀರಣ್ಣನವರಾಗಲೀ ಅವರ ಹಿತವನ್ನು ಬಯಸುವ ಯಾರೇ ಆಗಲಿ ಇಂತಹ ಪ್ರಕರಣಗಳನ್ನು ಎದುರಿಸಿ ಗೆಲ್ಲುವುದು ಕಷ್ಟ!

ಆದರೆ ಇಂತಹ ಪ್ರಕರಣಗಳನ್ನು ನೋಡುವಾಗ ಕಾನೂನಿನಾಚೆಯ ಒಂದು ದೃಷ್ಟಿಕೋನ ಅಧಿಕಾರಿಗಳಿಗೆ ಬೇಕಾಗುತ್ತದೆ. ಅದು ನಮ್ಮ ಎಷ್ಟು ಜನ ಅಧಿಕಾರಿಗಳಿಗೆ ಇದೆ ಎನ್ನುವುದು ಬಹಳ ಮುಖ್ಯವಾದ ಸಂಗತಿ. ಅವರು ರೂಲ್ಸಿಗೆ ಅಂಟಿಕೊಂಡಿರುತ್ತಾರೆ. ಎಷ್ಟರ ಮಟ್ಟಿಗೆ ಎಂದರೆ ಹೀಗೆ ಒಂದು ಪ್ರಕರಣವನ್ನು ಉದಾಹರಿಸುವುದಾದರೆ ಒಬ್ಬ ಅಧಿಕಾರಿಯನ್ನು ಮುಜರಾಯಿ ಇಲಾಖೆಯಲ್ಲಿ ಒಂದು ದೇವಸ್ಥಾನದ ಅಧಿಕಾರಿಯನ್ನಾಗಿ ನೇಮಕಮಾಡಲಾಯಿತಂತೆ. ಅವನಿಗೆ ರೂಲ್ಸು ಎಂದರೆ ರೂಲ್ಸು. ನಿಯಮದಲ್ಲಿ ಹೇಳಿದ್ದನ್ನು ಬಿಟ್ಟು ಒಂದಿಂಚೂ ಅತ್ತಿತ್ತ ಸರಿಯಲು ಅವನು ಒಪ್ಪುತ್ತಿರಲಿಲ್ಲವಂತೆ. ಮುಜರಾಯಿ ಇಲಾಖೆಯ ನಿಯಮಗಳಲ್ಲಿ ಒಂದು ನಿಯಮ, “ದೇವಸ್ಥಾನದ ಒಳಗೆ ಹೋಗುವ ಭಕ್ತರೆಲ್ಲರೂ ಪಾದರಕ್ಷೆಗಳನ್ನು ಹೊರಗೆ ಬಿಟ್ಟೇ ಹೋಗಬೇಕು” ಎಂದು ಇತ್ತಂತೆ. ಹೀಗೆ ಒಂದು ದಿನ ಆ ದೇವಸ್ಥಾನಕ್ಕೆ ಅಯ್ಯಪ್ಪಸ್ವಾಮಿ ಭಕ್ತರ ಒಂದು ದಂಡು ಬಂತಂತೆ. ಅಯ್ಯಪ್ಪಸ್ವಾಮಿ ಭಕ್ತರು ಸಾಮಾನ್ಯವಾಗಿ ಪಾದರಕ್ಷೆ ಹಾಕಿಕೊಂಡು ಬರುವುದಿಲ್ಲ. ಅವತ್ತೂ ಅವರು ಹಾಕಿಕೊಂಡು ಬಂದಿರಲಿಲ್ಲ. ಇವನು ನಿಯಮದ ಪ್ರಕಾರ ಪಾದರಕ್ಷೆ ಬಿಟ್ಟೇ ಹೋಗಬೇಕು ಎಂದು ತಗಾದೆ ತೆಗೆದನಂತೆ! ಅವರು, “ನಾವು ಪಾದರಕ್ಷೆ ಹಾಕಿಕೊಂಡು ಬಂದಿಲ್ಲ” ಎಂದರೂ ಇವನು ಕೇಳುತ್ತಿರಲಿಲ್ಲವಂತೆ. “ನನಗೆ ಅದನ್ನೆಲ್ಲ ಹೇಳಬೇಡಿ. ಪಾದರಕ್ಷೆ ಬಿಡಿ; ಮುಂದಕ್ಕೆ ಹೋಗಿ” ಎಂದು ಹಟಮಾಡತೊಡಗಿದನಂತೆ!! ಇದು ತಮಾಸೆಯೂ ಇರಬಹುದು. ಆದರೆ ಇಂತಹ ಅಧಿಕಾರಿಗಳು ಇಲ್ಲ ಎಂದು ಹೇಳಲು ಬರುವುದಿಲ್ಲ.

ವೀರಣ್ಣನವರನ್ನು ಅಮಾನತ್ತು ಮಾಡಲು ಇಂತಹ ಒಂದು ಸಣ್ಣನಿಯಮ ಸಾಕಾಗುತ್ತದೆ. “ಸರ್ಕಾರಿ ನೌಕರರು ತಾವು ಕೆಲಸ ಮಾಡುವ ಸರ್ಕಾರದ ವಿರುದ್ಧ ಮುಷ್ಕರ, ಧರಣಿ ಇತ್ಯಾದಿ ಮಾಡುವಂತಿಲ್ಲ” ಎಂಬ ನಿಯಮ ಇದ್ದೇ ಇದೆ. ಇದನ್ನೇ ಹಿಡಿದುಕೊಂಡು ಅವರು ಅವರ ಕೆಲಸವನ್ನು ಮಾಡಿದ್ದಾರೆ.

ಆದರೆ ಇಂತಹ ಪ್ರಕರಣಗಳಲ್ಲಿ ಒಬ್ಬ ಶಿಕ್ಷಕರಾಗಿ ವೀರಣ್ಣ ಮಾಡುವುದಕ್ಕಿಂತಲೂ ಹೆಚ್ಚಾಗಿ ಶಿಕ್ಷಕರ ಸಂಘಗಳು ಮಾಡುವುದು ಬಹಳ ಇರುತ್ತದೆ. ಸ್ವಭಾವತಃ ಸೇವಾ ಮನೋಭಾವದ ಮತ್ತು ಸಾಹಿತ್ಯ ಸಂಸ್ಕೃತಿಗಳ ಬಗ್ಗೆ ನಿಕಟ ಸಂಪರ್ಕ ಹೊಂದಿರುವ ವೀರಣ್ಣ ಕೆಟ್ಟ ಮನುಷ್ಯನಂತೂ ಅಲ್ಲವೇ ಅಲ್ಲ. ಆದರೆ ಅನ್ಯಾಯದ ವಿರುದ್ದ ಸೆಟೆದು ನಿಲ್ಲುವಾಗ ತುಸು ದುಡುಕುತ್ತಾರೆ. ಇಂತಹ ಸಣ್ಣಪುಟ್ಟ ನಿಯಮಗಳನ್ನು ಸದುದ್ಧೇಶದಿಂದ ಉಲ್ಲಂಘಿಸುತ್ತಾರೆ ಅಷ್ಟೆ! ವೀರಣ್ಣ ಮಾಡಿದ್ದು ನಿಯಮಗಳ ಪ್ರಕಾರ ತಪ್ಪೇ ಇದ್ದೀತು. ಆದರೆ ಅವರು ಮಾಡಿದ ಕೆಲಸದ ವೈಖರಿಯನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳದೆ ಅದರ ಹಿಂದಿನ ಉದ್ದೇಶವನ್ನೂ ಗಣನೆಗೆ ತೆಗೆದುಕೊಂಡು ಅದನ್ನು ಸಂಘದವರು ಅಧಿಕಾರಿಗಳಿಗೆ ತಿಳಿಹೇಳುವ ಪ್ರಯತ್ನಮಾಡಿ ಅವರ ಮೇಲೆ ಶಿಸ್ತುಕ್ರಮಗಳು ಆಗದಂತೆ ನೋಡಿಕೊಳ್ಳಬೇಕು. ನನಗೆ ತಿಳಿದಂತೆ ಅವರು ಇಲಾಖೆಗೆ ಬೇರೆ ಬೇರೆ ರೀತಿಯಲ್ಲಿ ಗೌರವ, ಕೀರ್ತಿ, ಶ್ರೇಯಸ್ಸು ತಂದಂಥವರು. ಈ ಒಂದು ಪ್ರಕರಣವನ್ನು ಮುಂದೆ ಮಾಡಿಕೊಂಡು ಅದೂ ಮಕ್ಕಳ, ಶಾಲೆಯ ಹಿತದೃಷ್ಟಿಯಿಂದ ಮಾಡಿದ ಈ ನಿಯಮೋಲ್ಲಂಘನೆಯ ಪ್ರಕರಣವನ್ನು ಇಟ್ಟುಕೊಂಡು ಅವರು ಇದುವರೆಗೂ ಶಾಲೆಗೆ ಆ ಮೂಲಕ ಇಲಾಖೆಗೆ ತಂದ ಗೌರವ, ಕೀರ್ತಿ ಇವುಗಳನ್ನು ಮರೆಮಾಚುವುದು ಅಥವಾ ಅವನ್ನು ಗೌಣವೆಂದು ಭಾವಿಸುವುದು ಸರಿಯಲ್ಲ. ಏಕೆಂದರೆ ಇಂತಹ ಪ್ರಕರಣಗಳು  ಶಿಕ್ಷಕರು ಪ್ರತಿಭಟನೆ ಮುಷ್ಕರ ಮುಂತಾದವುಗಳನ್ನು ಕಡಿಮೆ ಮಾಡುವಂತಹ ಸಕಾರಾತ್ಮಕ ಪರಿಣಾಮ ಉಂಟುಮಾಡುವುದಕ್ಕಿಂತ ಹೆಚ್ಚಾಗಿ ಅವರು ಶಾಲೆಯ ಕೆಲಸಗಳಲ್ಲಿ ಸಕ್ರಿಯವಾಗಿ ಮತ್ತು ಸಂಪೂರ್ಣವಾಗಿ  ತೊಡಗಿಕೊಂಡು ಕೆಲಸಮಾಡಲು ಹಿಂದೇಟು ಹಾಕುವಂತಹ ನಕಾರಾತ್ಮಕ ಪರಿಣಾಮವನ್ನು ಉಂಟುಮಾಡುವುದೇ ಹೆಚ್ಚು.


ಹೀಗಾಗಿ ಶಿಕ್ಷಕರ ಹಿತಕಾಯಲಿಕ್ಕೇ ಇರುವ ಶಿಕ್ಷಕರ ಸಂಘಗಳು, ಅದರಲ್ಲಿಯೂ ಸರ್ಕಾರಿ ನೌಕರರ ಸಂಘಗಳಲ್ಲಿಯೇ ಅತ್ಯಂತ ಬಲಾಢ್ಯ ಸಂಘ ಎಂದು ಹೆಸರಾಗಿರುವ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಈ ಪ್ರಕರಣದಲ್ಲಿ ಮ‍ಧ್ಯೆ ಪ್ರವೇಶಿಸಿ ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು . ಅದು ಆ ಸಂಘದ ಜವಾಬ್ದಾರಿ ಕೂಡ ಹೌದು. ಶಾಲೆಯ ಮಕ್ಕಳ ಅಕ್ಷರ ದಾಸೋಹದ ಅಕ್ಕಿ ಕದ್ದವರು, ಹಾಲಿನ ಪ್ಯಾಕೇಟ್‌ ಮನೆಗೆ ಒಯ್ದವರು, ಮಕ್ಕಳನ್ನು ಲೈಂಗಿಕ ಶೋಷಣೆ ಮಾಡಿದವರು, ಶಾಲೆಯ ಹಣ ದುರುಪಯೋಗ ಮಾಡಿಕೊಂಡವರು ಇಂಥವರು ಅಮಾನತ್ತಾದಾಗ ಅನೇಕ ಸಂದರ್ಭಗಳಲ್ಲಿ ನಮ್ಮ ಸಂಘಗಳು ಅಂಥವರ ಬೆಂಬಲಕ್ಕೆ ನಿಲ್ಲುವುದುಂಟು. ಅದು ಮಾಡಬಾರದ ಕೆಲಸ. ಇದು ಮಾಡಬೇಕಾದ ಕೆಲಸ. ಮಾಡಬಾರದ ಕೆಲಸವನ್ನು ಮಾಡಹೋಗುವುದು ಎಷ್ಟು ಕೆಟ್ಟದ್ದೋ ಮಾಡಬೇಕಾದ ಕೆಲಸವನ್ನು ಮಾಡದೇ ಬಿಡುವುದೂ ಅಷ್ಟೇ ಕೆಟ್ಟದ್ದು. ಈ ಹಿನ್ನಲೆಯಲ್ಲಿ ಆದಷ್ಟು ಬೇಗ ಶಿಕ್ಷಕರ ಸಂಘ ಈ ಪ್ರಕರಣದಲ್ಲಿ ಮಧ್ಯೆ ಪ್ರವೇಶಿಸಿ  ವೀರಣ್ಣಗೂ ಒಂದಿಷ್ಟು ದುಡುಕದಂತೆ ಬುದ್ಧಿಹೇಳಿ ಅಧಿಕಾರಿಗಳು ಅವರ ಮೇಲೆ ಶಿಸ್ತುಕ್ರಮ ಜರುಗಿಸದಂತೆ ನೋಡಿಕೊಳ್ಳಲಿ.

ಡಾ. ರಾಜೇಂದ್ರ ಬುರಡಿಕಟ್ಟಿ

31-05-2025

Wednesday, May 28, 2025

ಸಾವರ್ಕರ್:‌ ʻದೇಶಭಕ್ತʼ ʻದೇಶದ್ರೋಹಿʼ – ಯಾವುದು ಸರಿ?

ಸಾವರ್ಕರ್:‌ ʻದೇಶಭಕ್ತʼ ʻದೇಶದ್ರೋಹಿʼ – ಯಾವುದು ಸರಿ?

·       ಡಾ. ರಾಜೇಂದ್ರ ಬುರಡಿಕಟ್ಟಿ

ʻಸಾವರ್ಕರ್:‌ ʻದೇಶಭಕ್ತʼ ʻದೇಶದ್ರೋಹಿʼ ಯಾವುದು ಸರಿ?ʼ ಈ ಪ್ರಶ್ನೆಯನ್ನು ನಾವು ಇಂದು ಯಾರಿಗಾದರೂ ಕೇಳಿದರೆ ಉತ್ತರ ಏನು ಬರುತ್ತದೆ? ನಿಸ್ಸಂಶಯವಾಗಿ ಈ ಎರಡೂ ಉತ್ತರಗಳು ದೊರೆಯುತ್ತವೆ! ಬಹಳಷ್ಟು ಸಂದರ್ಭಗಳಲ್ಲಿ ಪ್ರಶ್ನೆ ಕೇಳುವವರು ಯಾರು ಮತ್ತು ಉತ್ತರ ಕೊಡುವವರು ಯಾರು ಎನ್ನುವುದರ ಆಧಾರದ ಮೇಲೆ ಈ ಉತ್ತರಗಳು ಅವಲಂಭಿಸಿರುತ್ತವೆಯೇ ಹೊರತು ಸಾವರ್ಕರ್‌ ಅವರ ವ್ಯಕ್ತಿತ್ವದ ಆಧಾರದ ಮೇಲೆ ಅಲ್ಲ. ಇದಕ್ಕೆ ಕಾರಣವೂ ಇದೆ. ಆಧುನಿಕ ಭಾರತದ ಅತ್ಯಂತ ವಿವಾದಾತ್ಮಕ ನಾಯಕರುಗಳಲ್ಲಿ ಮುಖ್ಯವಾದವರು ವಿನಾಯಕ ದಾಮೋದರ ಸಾವರ್ಕರ್.‌ ಅವರ ನಿಜವಾದ ವ್ಯಕ್ತಿತ್ವ ಏನು? ಅವರ ಸಾಮಾಜಿಕ ಜೀವನದಲ್ಲಿ ಆದ ಪಲ್ಲಟಗಳೇನು ಎಂಬುದನ್ನು ಆದಷ್ಟೂ ಮುಕ್ತವಾಗಿ ದಾಖಲಿಸುವುದು ಈ ಲೇಖನದ ಉದ್ದೇಶ. ಈಗಾಗಲೇ ಸಾವರ್ಕರ್‌ ಅವರ ಬಗ್ಗೆ ತಮ್ಮತಮ್ಮದೇ ಅದ ಪೂರ್ವಾಭಿಪ್ರಯಗಳನ್ನು ಹೊಂದಿರದ ಮತ್ತು ಹೊಂದಿದ್ದರೂ ಅವನ್ನು ಮಾರ್ಪಡಿಸಿಕೊಳ್ಳಲು ಸಾಧ್ಯವಿರುವವರನ್ನು ಈ ಲೇಖನ ಉದ್ದೇಶಿಸಿದೆ. ಬನ್ನಿ ಅವರ ಜನನ ಬಾಲ್ಯದಿಂದಲೇ ಆರಂಭಿಸೋಣ:

೧೮೮೩ರ ಮೇ ೨೮ ರಂದು ಮಹಾರಾಷ್ಟ್ರದ ನಾಸಿಕ್‌ ಬಳಿಯ ಭಾಗೂರು ಎಂಬ ಹಳ್ಳಿಯ ಚಿದ್ಭಾವನಾ ಬ್ರಾಹ್ಮಣ ಕುಟುಂಬದ ದಾಮೋದರ ಮತ್ತು ರಾಧಾಬಾಯಿ ಎಂಬ ದಂಪತಿಗಳಿಗೆ ಜನಿಸಿದ ವಿನಾಯಕನಿಗೆ ಮನೆಯಲ್ಲಿ ಇದ್ದದ್ದು ಗಣೇಶ ಮತ್ತು ನಾರಾಯಣ ಎಂಬ ಇಬ್ಬರು ಸಹೋದರರು ಮತ್ತು ಮೈನಾಬಾಯಿ ಎಂಬ ಒಬ್ಬ ಸಹೋದರಿ. ಬಾಲಕ ವಿನಾಯಕನ ಸಾಮಾಜಿಕ ಹೋರಾಟದ ಬದುಕು ತನ್ನ ಶಾಲಾದಿನದಿಂದಲೇ ಆರಂಭವಾಗುತ್ತದೆ. ಹನ್ನೆರಡು ವರ್ಷದವನಿದ್ದಾಗಲೇ ತನ್ನ ಸಂಗಾತಿಗಳನ್ನು ಕಟ್ಟಿಕೊಂಡು ತನ್ನ ಹಳ್ಳಿಯ ಮಸೀದಿಯೊಂದರ ಮೇಲೆ ದಾಳಿಗೆ ಮುಂದಾಗುವ ಈತ ಆಗಲೇ ಹೇಳುವುದು, “ನಮ್ಮ ಮನತೃಪ್ತಿಗಾಗಿ ನಾವು ಮಸೀದಿಯನ್ನು ಧ್ವಂಸಮಾಡುತ್ತೇವೆ” ಎಂದು. ೧೯೦೩ರಲ್ಲಿ ನಾಸಿಕ್‌ ನಲ್ಲಿ ತನ್ನ ಹಿರಿಯ ಸಹೋದರ ಗಣೇಶನ ಜೊತೆಗೂಡಿ ಸ್ಥಾಪಿಸುವ ಭೂಗತ ಕ್ರಾಂತಿಕಾರಿ ಸಂಘಟನೆ ʼಮಿತ್ರಮೇಳʼ ಮುಂದೆ ಮೂರು ವರ್ಷಗಳ ನಂತರ ೧೯೦೬ರಲ್ಲಿ ಬ್ರಿಟೀಷ್‌ ಅಧಿಪತ್ಯವನ್ನು ಕಿತ್ತುಹಾಕಿ ಹಿಂದೂ ಅಧಿಪತ್ಯವನ್ನು ಸ್ಥಾಪನೆ ಮಾಡುವ ಧ್ಯೇಯವನ್ನಿಟ್ಟುಕೊಂಡ ʼಅಭಿನವ ಭಾರತ ಸೊಸೈಟಿʼ ಆಗುತ್ತದೆ.

ಪುಣೆಯ ಫರ್ಗೂಸನ್‌ ಕಾಲೇಜಿನಲ್ಲಿ ಓದುವಾಗಲೂ ತಮ್ಮ ಕ್ರಾಂತಿಕಾರಿ ಚಟುವಟಿಕೆಗಳನ್ನು ಮುಂದುವರೆಸಿದ ಸಾವರ್ಕರ್‌ ಮೇಲೆ ಆ ಕಾಲದಲ್ಲಿ ಬಹಳಷ್ಟು ಪ್ರಭಾವ ಬೀರಿದವರು ಸ್ವಾತಂತ್ರ್ಯ ಹೋರಾಟದ ತೀವ್ರಗಾಮಿ ಗುಂಪಿನ ಪ್ರಮುಖರಾದ ಬಾಲಗಂಗಾಧರ ತಿಲಕ್‌ ಅವರು. ಅವರೇ ಶಿವಾಜಿ ಸ್ಕಾಲರ್‌ ಶಿಪ್‌ ದೊರೆಯುವಂತೆ ಮಾಡಿ ಕಾನೂನಿನಲ್ಲಿ ಉನ್ನತ ಪದವಿ ಪಡೆಯಲು ಲಂಡನ್ನಿಗೆ ಹೋಗಲು ಸಾವರ್ಕರ್‌ ಅವರಿಗೆ ಸಹಾಯ ಮಾಡಿದ್ದು. ೧೯೦೫ರ ಬಂಗಾಳ ವಿಭಜನೆ ವಿರುದ್ಧದ ಹೋರಾಟದಲ್ಲಿ ಬಾಲಗಂಗಾದರ ತಿಲಕರ ಸಮ್ಮುಖದಲ್ಲಿ ʼವಿದೇಶಿ ವಸ್ತ್ರದಹನʼ ಚಳವಳಿ ಮಾಡಿ ಯುವಕ ವಿನಾಯಕ ಆಗಲೇ ಅವರ ಮೆಚ್ಚುಗೆಯನ್ನು ಗಳಿಸಿದ್ದ.

ಲಂಡನ್ನಿನಲ್ಲಿ ಕ್ರಾಂತಿಕಾರಿ ಚಟುವಟಿಕೆಗಳು:

ಲಂಡನ್ನಿನಲ್ಲಿ ಕಾನೂನು ಓದಲು ಹೋದಾಗಲೂ ಬ್ರಿಟಿಷ್‌ ಅಧಿಪತ್ಯದ ವಿರುದ್ಧದ ಸಾವರ್ಕರ್‌ ಹೋರಾಟ ಮುಂದುವರೆಯುತ್ತದೆ. ಭಾರತದ ಸ್ವಾತಂತ್ರ್ಯವೆಂಬುದನ್ನು ಕ್ರಾಂತಿಕಾರಿ ಚಟುವಟಿಕೆಗಳ ಮೂಲಕವೇ ಪಡೆಯಲು ಸಾಧ್ಯವೆಂದು ಗಾಢವಾಗಿ ನಂಬಿದ್ದ ಸಾವರ್ಕರ್‌ ಆ ಬಗೆಯ ಆಲೋಚನೆಯನ್ನು ಬೆಂಬಲಿಸುವ ಕೆಲವು ಪುಸ್ತಕಗಳನ್ನು ಅಲ್ಲಿ ಬರೆಯುತ್ತಾರೆ. ಅವುಗಳಲ್ಲಿ ಮುಖ್ಯವಾದದ್ದು ʻಭಾರತದ ಸ್ವಾಂತಂತ್ರ್ಯ ಸಂಗ್ರಾಮʼ (ದಿ ಇಂಡಿಯನ್‌ ವಾರ್‌ ಆಫ್‌ ಇಂಡಿಪೆಂಡೆನ್ಸ್‌). ಇದು ೧೮೫೭ಲ್ಲಿ ಬ್ರಿಟಿಷ್‌ ಅಧಿಪತ್ಯದ ವಿರುದ್ದ ನಡೆದ ಐತಿಹಾಸಿಕ ಮಹತ್ವದ ;ಮಹಾದಂಗೆʼಯನ್ನು ಕುರಿತ ಪುಸ್ತಕ. ʼಸಿಪಾಯಿದಂಗೆʼ ಎಂದು ಕರೆಯಲ್ಪಡುತ್ತಿದ್ದ ಇದನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮʼ ಎಂದು ಮೊದಲು ಕರೆದದ್ದೇ ಸಾವರ್ಕರ್‌ ಎನ್ನಲಾಗುತ್ತದೆ. ಆದರೆ ಇತ್ತೀಚಿನ ಸಂಶೋಧನೆಗಳು ಇದನ್ನು ಅಲ್ಲಗಳೆಯುತ್ತವೆ; ಮತ್ತು ಹಾಗೆ ಮೊದಲು ಕರೆದವರು ಸಾವರ್ಕರ್‌ ಅವರಿಗಿಂತ ಮೊದಲು ಕಾರ್ಲ್‌ಮಾಕ್ಸ್‌ ಎಂಬುದನ್ನು ದಾಖಲಿಸುತ್ತವೆ. ಅದು ಏನೇ ಇರಲಿ ಈ ಪುಸ್ತಕವನ್ನು ಸಾವರ್ಕರ್‌ ಅವರಿಗೆ ಲಂಡನ್ನಿನಲ್ಲಿ ಪ್ರಕಟಿಸಲು ಸಾಧ್ಯವಾಗುವುದಿಲ್ಲ. ಕಾರಣ ಅದಕ್ಕೆ ಬ್ರಿಟಿಷ್‌ ಸರ್ಕಾರ ನಿಷೇಧ ಹೇರುತ್ತದೆ.  ಹಾಗಿದ್ದರೆ ಈ ಪುಸ್ತಕ ಪ್ರಕಟವಾದದ್ದು ಹೇಗೆ? ಅದಕ್ಕೆ ಸಹಾಯ ಮಾಡಿದವರು ಯಾರು ಎಂಬ ಪ್ರಶ್ನೆಗಳು ಏಳುತ್ತವೆ. ಈ ಪುಸ್ತಕವನ್ನು ಬ್ರಿಟಿಷ್‌ ಸರ್ಕಾರ ನಿಷೇಧಿಸಿದಾಗ ಅದನ್ನು ಹಾಲೆಂಡಿನಲ್ಲಿ ಗುಟ್ಟಾಗಿ ಮೊದಲು ಮುದ್ರಿಸಲಾಗುತ್ತದೆ. ಅದರ ಕೆಲವು ಪ್ರತಿಗಳನ್ನು ಭಾರತಕ್ಕೆ ಗುಟ್ಟಾಗಿ ತರುವ ಅಪಾಯಕಾರಿ ಸಾಹಸ ಮಾಡಿ ಜಯಗಳಿಸಿದ ವ್ಯಕ್ತಿ ಸಾವರ್ಕರ್‌ ಅವರ ʻಅಭಿನವ ಭಾರತʼ ಸಂಘಟನೆಯ ಸಕ್ರಿಯ ಸದಸ್ಯನಾಗಿದ್ದ ಸಿಕಂದರ್‌ ಹಯಾತ್‌ ಖಾನ್! (ಆ ಕಾಲದಲ್ಲಿ ಸಾವರ್ಕರ್‌ ಅವರು ಮುಸ್ಲಿಂ ದ್ವೇಷಿ ಆಗಿರಲಿಲ್ಲ. ಹಾಗಾಗಿ ಅವರ ಸಂಘಟನೆಯಲ್ಲಿ ಬಹಳಷ್ಟು ಜನ ಮುಸ್ಲಿಮರು ಇದ್ದರು).

ಇದೇ ಕಾಲಘಟ್ಟದಲ್ಲಿ ಇಟಲಿಯ ಕ್ರಾಂತಿಕಾರಿ ಚಳವಳಿಯ ನಾಯಕ ಮಝನಿಯಿಂದ ಪ್ರಭಾವಿತರಾಗುವ ಸಾವರ್ಕರ್‌ ಆತನ ಜೀವನಚರಿತ್ರೆಯನ್ನು ಮರಾಠಿಗೆ ಅನುವಾದಿಸುತ್ತಾರೆ. ೧೯೦೯ರಲ್ಲಿ ಬ್ರಿಟಿಷ್‌ ಅಧಿಕಾರಿ ಕರ್ಜನ್‌ ವ್ಯಾಲಿಯನ್ನು ಹತ್ಯೆ ಮಾಡಿದ ಮದನ್‌ ಲಾಲ್‌ ದಿಂಗ್ರಾ ಸಾವರ್ಕರ್‌ ಅವರ ಸಹಚರನಾಗಿದ್ದವನು ಮತ್ತು ಅವರಿಂದ ಪ್ರಭಾವಿತನಾದವನು. ಆತನು ಹತ್ಯೆ ಮಾಡಿದ ಗನ್‌ ಪೂರೈಸಿದ್ದು ಮತ್ತು ಆತ ನೇಣಿಗೆ ಕೊರಳು ಕೊಡುವ ಮೊದಲು ಕೋರ್ಟಿಗೆ ನೀಡಿದ ಹೇಳಿಕೆಯನ್ನು ಬರೆದುಕೊಟ್ಟವರು ಸಾವರ್ಕರ್‌ ಎಂಬಲ್ಲಿಂದ ಸಾವರ್ಕರ್‌ ಬ್ರಿಟೀಷ್‌ ಅಧಿಪತ್ಯಕ್ಕೆ ಕಣ್ಣಿಗೆ ಬೀಳುವಂತಾದರು. ಮುಂದೆ ಸುಮಾರು ನಲವತ್ತು ವರ್ಷಗಳ ನಂತರ ಯಾರ ಕೊಲೆಯ ಆರೋಪಿಯಾಗಿ ಗುರುತಿಸಲಾಯಿತೋ ಅಂತಹ ಮಹಾತ್ಮಾ ಗಾಂಧಿಯನ್ನು ಸಾವರ್ಕರ್‌ ಮೊದಲು ಭೇಟಿಯಾಗಿದ್ದು ಕೂಡ ಇಂಗ್ಲೆಂಡಿನಲ್ಲಿ ಅದೂ ಈ ಬ್ರಿಟೀಷ್‌ ಅಧಿಕಾರಿಯ ಕೊಲೆಯ ಸಂದರ್ಭದಲ್ಲಿ. ಆಗ ಅವರೊಡನೆ ನಡೆದ ಚರ್ಚೆಯಲ್ಲಿ ಭಾರತ ಸ್ವಾತಂತ್ರ್ಯಕ್ಕಾಗಿ ಅವರು ನಡೆಸುತ್ತಿರುವ ಹಿಂಸಾತ್ಮಕ ಕ್ರಾಂತಿಕಾರಿ ಚಟುವಟಿಕೆಗಳು ಮತ್ತು ಗೆರಿಲ್ಲಾ ಯುದ್ಧಗಳ ಪರಿಣಾಮಗಳ ಬಗ್ಗೆ ಕೂಡ ಸಾಕಷ್ಟು ಚರ್ಚೆಯಾಗುತ್ತದೆ.

ಇದೇ ವೇಳೆಗೆ ಸಾವರ್ಕರ್‌ ಅವರ ಸಹೋದರ ಗಣೇಶ್‌ ಸಾವರ್ಕರ್‌ ಮಹಾರಾಷ್ಟ್ರದಲ್ಲಿ ಮಾರ್ಲೆ-ಮಿಂಟೋ ಸುಧಾರಣೆ ವಿರುದ್ಧ ಸಶಸ್ತ್ರ ಬಂಡಾಯ ಸಂಘಟಿಸಿದ್ದಕ್ಕಾಗಿ ಅಂಡಮಾನಿನ ಜೀವಾವದಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಇತ್ತ ಭಾರತದಲ್ಲಿ ಈ ಘಟನೆ ನಡೆಯುವ ಸಂದರ್ಭದಲ್ಲಿಯೇ ಲಂಡನ್ನಿನಲ್ಲಿ ಸಾವರ್ಕರ್ ಬ್ರಿಟೀಷ್‌ ಅಧಿಕಾರಿಗಳ ಕಣ್ಣಿಗೆ ಬೀಳುವ ವ್ಯಕ್ತಿಯಾದರು. ಭಾರತದಲ್ಲಿ ಬ್ರಿಟೀಷ್‌ ಅಧಿಪತ್ಯವನ್ನು ಕಿತ್ತೊಗೆಯುವ ರಾಜದ್ರೋಹದ ಕೆಲಸಗಳಿಗೆ ಇವರ ಕುಮ್ಮಕ್ಕು ಇದೆ ಎಂಬುದು ಅವರು ಬ್ರಿಟೀಷ್‌ ಅಧಿಕಾರಿಗಳ ಕಣ್ಣಿಗೆ ಬೀಳಲು ಪ್ರಮುಖ ಕಾರಣವಾಯಿತು. ಬ್ರಿಟೀಷ್‌ ಅಧಿಪತ್ಯದಿಂದ ಬಂಧನವನ್ನು ತಪ್ಪಿಸಿಕೊಳ್ಳುವ ಸಲುವಾಗಿ ಅವರು ಪ್ಯಾರಿಸ್‌ ಗೆ ಹೋಗಿ ಮೇಡಂ ಕಾಮಾ ಅವರ ಮನೆಯಲ್ಲಿ ಆಶ್ರಯ ಪಡೆಯುತ್ತಾರಾದರೂ ಅಲ್ಲಿರಲು ಮನಸ್ಸಾಗದೇ ಸ್ನೇಹಿತರ ಮಾತನ್ನೂ ಅಲಕ್ಷಿಸಿ ಮತ್ತೆ ಲಂಡನ್ನಿಗೆ ವಾಪಸ್ಸಾಗುತ್ತಾರೆ. ಆಗ ೧೯೧೦ರ ಮಾರ್ಚ್‌ ೧೩ ರಂದು ಅವರನ್ನು ಮೊಟ್ಟಮೊದಲ ಬಾರಿ ಅನೇಕ ಆರೋಪಗಳನ್ನು ಹೊರಿಸಿ ಬ್ರಿಟೀಷ್‌ ಸರ್ಕಾರ ಬಂಧಿಸುತ್ತದೆ.

ಅವರನ್ನು ಬಂಧಿಸಲು ಕಾರಣವಾಗಿದ್ದ ಪ್ರಮುಖ ಆರೋಪಗಳೆಂದರೆ ಅವರು ಬ್ರಿಟೀಷ್‌ ಅಧಿಕಾರಿಗಳ ಕೊಲೆಗೆ ಸಂಚುರೂಪಿಸಿದ್ದು, ಭಾರತದಲ್ಲಿ ಬ್ರಿಟೀಷ್‌ ಆಡಳಿತ ಕಿತ್ತೊಗೆಯಲು ಪ್ರಯತ್ನಿಸುತ್ತಿರುವುದು, ದ್ವೇಷದ ಭಾಷಣ ಮಾಡುತ್ತಿರುವುದು, ಶಸ್ತ್ರಾಸ್ತ್ರಗಳ ಕಳ್ಳಸಾಗಾಣಿಕೆ ಇತ್ಯಾದಿಗಳು. ಅವರನ್ನು ಬಂಧಿಸುವ ಸಂದರ್ಭದಲ್ಲಿ ನಿಷೇದಕ್ಕೆ ಒಳಗಾದ ಅವರ ಪುಸ್ತಕಗಳೂ ಸೇರಿದಂತೆ ಅನೇಕ ʼಕ್ರಾಂತಿಕಾರಿ ಪುಸ್ತಕʼಗಳನ್ನು ಸರ್ಕಾರ ವಶಪಡಿಸಿಕೊಂಡಿತ್ತು. ಇದಲ್ಲದೆ ೨೦ ಹ್ಯಾಂಡ್‌ ಗನ್ನುಗಳನ್ನು ಭಾರತಕ್ಕೆ ಕಳ್ಳಸಾಗಾಣಿಕೆ ಮಾಡಿದ ಸಾಕ್ಷವನ್ನೂ ಅಧಿಕಾರಿಗಳು ಕಲೆಹಾಕಿದ್ದರು ಮತ್ತು ಈ ಗನ್ನುಗಳಲ್ಲಿಯೇ ಒಂದನ್ನು ಬಳಸಿ ೧೯೦೯ರಲ್ಲಿ ನಾಸಿಕ್‌ ಜಿಲ್ಲಾಧಿಕಾರಿ ಎ ಎಂ ಟಿ ಜಾಕ್ಸನ್‌ ಎಂಬುವನನ್ನು ಅನಂತ ಲಕ್ಷ್ಮಣ್‌ ಕನ್ಹೇರೆ ಎಂಬುವನು ಕೊಲೆಮಾಡಿದ್ದ. ಈ ಕೊಲೆಯ ಪಿತೂರಿಯಲ್ಲಿ ಸಾವರ್ಕರ್‌ ಭಾಗಿಯಾಗಿದ್ದರು ಎಂಬುದು ಆ ಅಧಿಕಾರಿಗಳ ವಾದವಾಗಿತ್ತು.

ಸಾವರ್ಕರ್‌ ಅವರ ಮೇಲೆ ಹೊರಿಸಲಾದ ಅಪರಾಧದ ಚಟುವಟಿಕೆಗಳು ಇಂಗ್ಲೆಂಡ್‌ ಮತ್ತು ಭಾರತ ಎರಡೂ ದೇಶಗಳಿಗೂ ಸಂಬಂಧಿಸಿದ್ದರೂ ಸರ್ಕಾರ ಅವರನ್ನು ವಿಚಾರಣೆಗೆ ಒಳಪಡಿಸಲು ಭಾರತವನ್ನೇ ಆಯ್ಕೆಮಾಡಿಕೊಂಡಿತು. ಸಾವರ್ಕರ್‌ ಅವರನ್ನು ವಿಚಾರಣೆಗಾಗಿ ಭಾರತಕ್ಕೆ ಪೋಲಿಸ್‌ ಬಂದೋಬಸ್ತಿನಲ್ಲಿ ಹಡಗಿನಲ್ಲಿ ಕಳಿಸುವ ಏರ್ಪಾಡಾಗುತ್ತದೆ. ಬರುವಾಗ ಒಂದು ಕುತೂಹಲದ ಘಟನೆಯೂ ನಡೆಯುತ್ತದೆ. ಬಂಧನದಿಂದ ತಪ್ಪಿಸಿಕೊಳ್ಳುವ ಪ್ರಯತ್ನವಾಗಿ ಅವರು ಹಡಗು ಫ್ರೆಂಚ್‌ ಬಂದರೊಂದರಲ್ಲಿ ನಿಂತಾಗ ಹಡಗಿನ ಕಿಡಕಿಯಿಂದ ಕಡಲಿಗೆ ಹಾರಿ ಈಜಿ ದಡಸೇರಿ ಅಲ್ಲಿನ ಬಂದರಿನ ಫ್ರೆಂಚ್‌ ಅಧಿಕಾರಿಗಳ ನೆರವು ಕೇಳುತ್ತಾರೆ. ಆದರೆ ಆ ಅಧಿಕಾರಿಗಳು ಸ್ಪಂದಿಸಿ ಅವರಿಗೆ ನೆರವು ನೀಡದೆ ಅವರನ್ನು ಹಿಡಿದು ಬ್ರಿಟೀಷ್‌ ಅಧಿಕಾರಿಗಳಿಗೆ ಮರಳಿ ಒಪ್ಪಿಸಿಬಿಡುತ್ತಾರೆ. ಹೀಗಾಗಿ ತಪ್ಪಿಸಿಕೊಳ್ಳುವ ಅವರ ಮೊದಲ ವೀರೋಚಿತ ಪ್ರಯತ್ನವೇ ವಿಫಲವಾಗಿಬಿಡುತ್ತದೆ!

ಅಂಡಮಾನಿನ ಜೈಲು ಮತ್ತು ಅಲ್ಲಿನೆ ಸೆರೆವಾಸಿಗಳು:

ಭಾರತದ ಬಾಂಬೆ (ಈಗಿನ ಮುಂಬೈ)ಯಲ್ಲಿ ಅವರ ವಿಚಾರಣೆ ನಡೆಯುತ್ತದೆ. ನಾಸಿಕ್‌ ಜಿಲ್ಲಾಧಿಕಾರಿ ಕೊಲೆಯ ವಿಚಾರಣೆ ನಡೆಸಿದ ನ್ಯಾಯಾಲಯ ಅವರನ್ನು ಅಪರಾಧಿ ಎಂದು ಪರಿಗಣಿಸಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು, ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಅಂಡಮಾನಿನ ಸೆಲ್ಯುಲರ್‌ ಜೈಲಿಗೆ ಕಳಿಸುತ್ತದೆ. ಇಲ್ಲಿಯವರೆಗೆ ಹೆಚ್ಚುಕಡಿಮೆ ಭಾರತದ ಇತರೆ ಸ್ವಾತಂತ್ರ್ಯ ಹೋರಾಟಗಾರರ ಬದುಕಿನಂತೆಯೇ ಇದ್ದ ಸಾವರ್ಕರ್‌ ಅವರ ಬದುಕು ಇಲ್ಲಿಂದ ಮುಂದೆ ಚಿತ್ರವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತ್ತದೆ ಮತ್ತು ಸಾರ್ವಜನಿಕ ಭಿನ್ನಾಭಿಪ್ರಾಯಗಳ ಮಿತಿಮೀರಿದ ಚರ್ಚೆಗೆ ಆಹಾರವಾಗುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ತುಸು ವಿವರವಾಗಿ ನೋಡೋಣ.


ಅಂಡಮಾನಿನ ಜೈಲಿನ ಬಗ್ಗೆ ಹೇಳುವುದಾದರೆ ಅದು ಒಟ್ಟು ಏಳು ವಿಭಾಗಗಳಲ್ಲಿ ಇದ್ದ ಒಟ್ಟು ಏಳುನೂರು ಗೂಡುಗಳು (ಸೆಲ್)‌ ಇದ್ದ ಜೈಲು. ಅಲ್ಲಿ ದೊಡ್ಡ ಹಜಾರ ಅಥವಾ ಕೋಣೆಗಳಿರಲಿಲ್ಲ. ಯಾವಾಗಲೂ ಖೈದಿಗಳು ಈ ಗೂಡುಗಳಲ್ಲಿಯೇ ನರಕ ಸದೃಶ್ಯವಾದ ಜೀವನವನ್ನು ಸಾಗಿಸಬೇಕಾಗಿತ್ತು. ಈ ಜೈಲಿನಲ್ಲಿ ಏಕಕಾಲಕ್ಕೆ ಒಟ್ಟು ೭೦೦ ಕೈದಿಗಳನ್ನು ಇರಿಸಬಹುದಾಗಿರುತ್ತದೆ.  ಇಲ್ಲಿಗೆ ಬ್ರಿಟೀಷರು ಕಳಿಸುತ್ತಿದ್ದ ಖೈದಿಗಳಲ್ಲಿ ರಾಜಕೀಯ ಕೈದಿಗಳ ಜೊತೆ ಇತರೆ ಅಪರಾಧ ಮಾಡಿದವರೂ ಇರುತ್ತಿದ್ದರು. ಇವರಲ್ಲಿ ಮಹಿಳೆಯರೂ ಇದ್ದರು. ಕೆಲವು ದಾಖಲೆಗಳ ಪ್ರಕಾರ ೧೮೫೭ರ ದಂಗೆಯಲ್ಲಿ ಪಾಲ್ಗೊಂಡ ಕೈದಿಗಳ ಒಂದು ತಂಡವನ್ನು ಬ್ರಿಟೀಷರು ಮೊದಲಸಲ ಇಲ್ಲಿಗೆ ತರುತ್ತಾರೆ. ಇಲ್ಲಿ ಗಮನಿಸಬೇಕಾದ ಮುಖ್ಯಸಂಗತಿ ಏನೆಂದರೆ ಬ್ರಿಟೀಷರು ಕೇವಲ ಸಾವರ್ಕರ್‌ ಅವರನ್ನು ಮಾತ್ರ ಇಲ್ಲಿಗೆ ತರಲಿಲ್ಲ. ಅದಕ್ಕೂ ಮೊದಲೇ ಅನೇಕರನ್ನು ಅಲ್ಲಿ ಇರಿಸಿದ್ದರು. ಇವರಲ್ಲಿ ಪ್ರಸಿದ್ಧ ನ್ಯಾಯಶಾಸ್ತ್ರ ಪಂಡಿತರೂ ಲೇಖಕರೂ ಆಗಿದ್ದ ಮತ್ತು ಬ್ರಿಟೀಷ್‌ ಆಳ್ವಿಕೆಯ ಕಾಲದಲ್ಲಿ ದೆಹಲಿಯಲ್ಲಿ ನ್ಯಾಯಾಧೀಶರಾಗಿದ್ದ ಮೌಲ್ವಿ ಫಜಲ್‌ ಎ ಹಕ್‌ ಖೈರಾಬಾದಿ, ಮೌಲ್ವಿ ಲಿಯಾಕತ್‌ ಅಲಹಾಬಾದಿ, ಮೊಹಮದ್‌ ಜಾಫರ್‌ ಥಾನೆಸ್ರಿ ಮುಂತಾದ ಮುಸ್ಲಿಂ ಸಮುದಾಯದ ಮಹಾನ್‌ ನಾಯಕರೂ ಇದ್ದರು. ಇದರಲ್ಲಿ ಮೊದಲಿಬ್ಬರು ಅಲ್ಲಿಯೇ ಮರಣಹೊಂದಿದರೆ ಕೊನೆಯವರು ೧೮೮೩ ರಲ್ಲಿ ಬಿಡುಗಡೆಯಾದರು. ಬಹುಭಾಷಾ ಪ್ರವೀಣರಾಗಿದ್ದ ಥಾನೆಸ್ರಿ ಅವರು ತಮ್ಮ ಅಲ್ಲಿನ ಅನುಭವವನ್ನು ʼತ್ವರೀಕ್-ಎ-ಅಜೀಬ್‌ ಯಾನಿ ಕಾಲಾ ಪಾನಿʼ (ಪರಕೀಯ ನಾಡಿನ ಚರಿತ್ರೆ: ಕರಿನೀರು) ಎಂಬ ಪ್ರಮುಖ ಕೃತಿ ಬರೆದು ವಿವರಿಸಿದರು.

ಆ ನಂತರ ಅಂಡಮಾನಿಗೆ ಕಳಿಸಲ್ಪಟ್ಟ ದೊಡ್ಡ ಸಂಖ್ಯೆಯ ಕೈದಿಗಳೆಂದರೆ ವಹಾಬಿ ದಂಗೆಯ ನೇತೃತ್ವ ವಹಿಸಿದ್ದ ಮುಸ್ಲಿಂ ಕ್ರಾಂತಿಕಾರಿಗಳು. ಇವರಲ್ಲಿ ಅನೇಕರು ೧೮೫೭ರ ದಂಗೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಈ ಕೈದಿಗಳ ಪೈಕಿ ಒಬ್ಬರಾಗಿದ್ದ ಶೇರ್‌ ಅಲಿ ಅಫ್ರಿದಿ ಎಂಬುವರು ಈ ಸೆಲ್ಯೂಲರ್‌ ಜೈಲಿಗೆ ಆಗ ಭೇಟಿ ನೀಡಿದ್ದ ಆಗಿನ ಭಾರತದ ವೈಸರಾಯ್‌ ಲಾರ್ಡ್‌ ಮೇಯೋರವರ ಹತ್ಯೆಯನ್ನೇ ಮಾಡಿಬಿಟ್ಟರು! ಅಂದರೆ ಸಾವರ್ಕರ್‌ ಅವರನ್ನು ಅಲ್ಲಿಗೆ ಕಳಿಸುವ ವೇಳೆಗಾಗಲೇ ಅನೇಕ ಕ್ರಾಂತಿಕಾರಿಗಳು ವಿದ್ವಾಂಸರು ಇಂಥವರನ್ನು ಅಲ್ಲಿ ಶಿಕ್ಷೆಗೆ ಒಳಪಡಿಸಿದ್ದರಿಂದ ಅಂಡಮಾನಿನ ಸೆಲ್ಯೂಲರ್‌ ಜೈಲು ಆಗಲೇ ಸಾಕಷ್ಟು ಹೆಸರು ಪಡೆದುಕೊಂಡಿತ್ತು.

ನರಕಸದೃಶ್ಯ ಹಿಂಸೆಯೂ ಸಾವರ್ಕರ್‌ ಕ್ಷಮಾಪಣಾ ಪತ್ರಗಳೂ…

ಸಾವರ್ಕರ್‌ ಅವರಿಗೆ ಎರಡು ವಿಶೇಷ ನ್ಯಾಯಾಲಯಗಳು ಅನುಕ್ರಮವಾಗಿ ೧೯೧೦ರ ಡಿಸೆಂಬರ್‌ ೩ ಮತ್ತು ೧೯೧೧ರ ಜನವರಿ ೩೦ ರ ದಿನಗಳಂದು ತೀರ್ಪುನೀಡಿ ಎರಡು ಜೀವಾವಧಿ ಶಿಕ್ಷೆಯನ್ನು ವಿಧಿಸಿದವು. ಈ ಎರಡೂ ಜೀವಾವಧಿ ಶಿಕ್ಷೆಗಳ ಒಟ್ಟು ಅವಧಿ ೫೦ ವರ್ಷವಾಗಿತ್ತು. ಅದನ್ನು ಕಳೆಯಲು ಅವರನ್ನು ಅಂಡಮಾನಿನ ಈ ಜೈಲಿಗೆ ೧೯೧೧ರ ಜುಲೈ ೪ ರಂದು ಕಳಿಸಲಾಗುತ್ತದೆ. ಆದರೆ ಅಲ್ಲಿಂದ ಕೇವಲ ೧೦ ವರ್ಷಗಳ ಒಳಗಾಗಿಯೇ ಅವರನ್ನು ಭಾರತದ ಮುಖ್ಯಭಾಗದಲ್ಲಿರುವ ಮಹಾರಾಷ್ಟ್ರದ ಯರವಾಡ ಜೈಲಿಗೆ ಸ್ಥಳಾಂತರಿಸಲಾಗುತ್ತದೆ. ಮತ್ತು ಅಂತಿಮವಾಗಿ ೧೯೨೪ ರ ಜನವರಿ ೬ ರಂದು ಅವರನ್ನು ಕೆಲವು ಷರತ್ತುಗಳೊಂದಿಗೆ ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ. ಮುಂದೆ ೧೯೩೪ ರಲ್ಲಿ ಹಿಂದೂ ಮಹಾಸಭಾದ ವಾಮನ್‌ ರಾವ್‌ ಚವ್ಹಾಣ್‌ ಎಂಬುವನು ಬ್ರಿಟೀಷ್‌ ಮಿಲಿಟರಿ ಅಧಿಕಾರಿ ಸ್ವೀಟ್‌ ಲ್ಯಾಂಡ್‌ ಎಂಬುವನ ಮೇಲೆ ಗುಂಡುಹಾರಿಸಿದ ಪ್ರಕರಣದಲ್ಲಿ ಇವರನ್ನು ಬಂಧಿಸಿ ಎರಡುವಾರ ಜೈಲಿನಲ್ಲಿ ಇಡಲಾಗಿತ್ತಾದರೂ ಆ ಪ್ರಕರಣಕ್ಕೂ ನನಗೂ ಏನೂ ಸಂಬಂಧವಿಲ್ಲ ಎಂಬ ಹೇಳಿಕೆ ನೀಡಿ ಇನ್ನುಮುಂದೆ ಯಾವುದೇ ರಾಜಕೀಯ ಚಳವಳಿಗಳಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಮಚ್ಚಳಿಕೆ ಬರೆದುಕೊಟ್ಟು ಇವರು ಹೊರಬರುತ್ತಾರೆ.

ಹೀಗೆ ತಮಗೆ ವಿಧಿಸಲಾಗಿದ್ದ ಒಟ್ಟು ಐವತ್ತು ವರ್ಷಗಳ ಜೈಲುಶಿಕ್ಷೆಯಲ್ಲಿ ಸಾವರ್ಕರ್‌ ಜೈಲಿನಲ್ಲಿ ಕಳೆದದ್ದು ಒಟ್ಟು ಹದಿಮೂರು ವರ್ಷ ಮಾತ್ರ! ಅದರಲ್ಲಿಯೂ ಅಂಡಮಾನಿನ ಕರಿನೀರಿನ ಶಿಕ್ಷೆ ಅನುಭವಿಸಿದ್ದು ಹತ್ತು ವರ್ಷಗಳು ಮಾತ್ರ! ಉಳಿದ ಮೂವತ್ತೇಳು ವರ್ಷಗಳ ರಿಯಾಯತಿಯನ್ನು ಅವರು ಬ್ರಿಟೀಷ್‌ ಸರ್ಕಾರದಿಂದ ಪಡೆದರು. ಅಂದರೆ ಒಟ್ಟು ಶಿಕ್ಷೆಯಲ್ಲಿ ಮುಕ್ಕಾಲು ಪಾಲು ರಿಯಾಯತಿ ಪಡೆದು ಕಾಲುಭಾಗ ಮಾತ್ರ ಶಿಕ್ಷೆ ಅನುಭವಿಸಿದರು. ಭಾರತದ ಯಾವ ಸ್ವಾತಂತ್ರ್ಯ ಹೋರಾಟಗಾರನಿಗೂ ಇಷ್ಟೊಂದು ದೊಡ್ಡ ಪ್ರಮಾಣದ ರಿಯಾಯತಿಯನ್ನು ಬ್ರಿಟೀಷ್‌ ಸರ್ಕಾರ ನೀಡಿರಲಿಲ್ಲ ಎಂಬುದನ್ನು ನಾವು ಗಮನಿಸಬೇಕು.

ಇದಕ್ಕೆ ಕಾರಣವೇನು ಎಂಬುದನ್ನು ನೋಡೋಣ. ಅಂಡಮಾನಿನ ಸೆಲ್ಯುಲರ್‌ ಜೈಲು ಶಿಕ್ಷೆ ಒಂದು ಉಗ್ರಶಿಕ್ಷೆಯಾಗಿದ್ದು ಅಲ್ಲಿನ ಶಿಕ್ಷೆ ಭಯಾನಕವಾಗಿತ್ತು ಎಂಬುದು ಸತ್ಯ. ಅದರ ವಿವರಗಳನ್ನು ಅಲ್ಲಿ ಶಿಕ್ಷೆ ಅನುಭವಿಸಿ ಬಂದವರಲ್ಲಿ ಕೆಲವರು ಅನುಭವ ಕಥನಗಳಾಗಿ ಬರೆದಿದ್ದಾರೆ. ಅನೇಕ ಸಂಶೋಧಕರೂ ಈ ಬಗ್ಗೆ ಸಂಶೋಧನೆ ಮಾಡಿ ಸತ್ಯಾಂಶಗಳನ್ನು ದಾಖಲಿಸಿದ್ದಾರೆ. ೧೮೫೭ ರ ಕ್ರಾಂತಿಯಲ್ಲಿ ಬ್ರಿಟೀಷ್‌ ಅಧಿಪತ್ಯಕ್ಕೆ ತಲೆಬಾಗದ ಅನೇಕ ಕ್ರಾಂತಿಕಾರಿಗಳು ಈ ಜೈಲಿನಲ್ಲಿಯೇ ಹುತಾತ್ಮರಾದರು. ಅಂಥವರನೇಕರ ಹೆಸರು ಇಂದು ಯಾರಿಗೂ ಗೊತ್ತಿಲ್ಲದಂತೆ ಚರಿತ್ರೆಯಲ್ಲಿ ಹುದುಗಿಹೋಗಿವೆ. ಇಲ್ಲಿನ ಕಠಿಣ ಶಿಕ್ಷೆಯನ್ನು ಅನುಭವಿಸಿ ಹೊರಬಂದು ೧೯೭೦ರ ದಶಕದಲ್ಲಿ ಮರಣಹೊಂದಿದ ತ್ರೈಲೋಕ್ಯನಾಥ್‌ ಚಕ್ರವರ್ತಿ (ಮಹಾರಾಜ್‌ ಎಂದು ಕರೆಯಲ್ಪಡುತ್ತಿದ್ದವರು) ʼ ಮೂವತ್ತು ವರ್ಷಗಳ ಜೈಲುವಾಸʼ ಎಂಬ ಪುಸ್ತಕವನ್ನು ಬಂಗಾಲಿಯಲ್ಲಿ ಬರೆದು ಅಲ್ಲಿನ ಜೀವನ ವಿವರವನ್ನು ನೀಡಿದ್ದಾರೆ. ಅವರ ಪ್ರಕಾರ ಪ್ರತಿತಿಂಗಳು ಸರಾಸರಿ ಮೂವರು ಕೈದಿಗಳು ಹಿಂಸೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು! ಅಸ್ತಮಾ ರೋಗಿಯಾಗಿದ್ದ ಇವರಿಗೆ ಸ್ವಲ್ಪವೂ ಕರುಣೆ ತೋರದೆ, ʻಇದು ಜೈಲು ನಿನಗೆ ಕುಡಿಯಲು ಹಾಲು ಕೊಡ್ಬೇಕಾʼ ಎಂದು ಜೈಲು ಅಧಿಕಾರಿಗಳು ಕ್ರೂರತೆ ಪ್ರದರ್ಶಿಸುತ್ತಿದ್ದರಂತೆ. ಊಟಮಾಡುವಾಗ ಒಬ್ಬ ಕೈದಿಯ ಹತ್ತಿರ ಇನ್ನೊಬ್ಬ ಕೈದಿ ಜೊತೆಗೂಡದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸುತ್ತಿದ್ದರಂತೆ. ಸಣ್ಣಪುಟ್ಟ ಕಾರಣಗಳಿಗೂ ಹೊಡೆಯುವುದು ಬೈಯುವುದು ತೀರಾ ಸಾಮಾನ್ಯ ಸಂಗತಿಯಾಗಿತ್ತಂತೆ. ʼಸೂಳೆಮಗʼ ʼಬೋಳಿಮಗʼ ಇಂತಹ ಬೈಗುಳಗಳಂತೂ ತೀರಾ ಸಹಜ ಮತ್ತು ಸಾಮಾನ್ಯವಾಗಿದ್ದವಂತೆ.

ಇಲ್ಲಿನ ಚಿತ್ರಹಿಂಸೆ, ಹೊಟ್ಟೆ ತುಂಬಾ ಆಹಾರ ನೀಡದೆ ಒಂದು ಗುಟುಕು ಗಂಜಿ ನೀಡುವುದು, ಮೈಮುರಿಯುವ ಕೆಲಸ, ಅನಾರೋಗ್ಯದ ನಿರ್ಲಕ್ಷ ಇತ್ಯಾದಿಗಳಿಂದ ಅನೇಕ ಕಟ್ಟುಮಸ್ತಾದ ದೇಹಧಾಡ್ಯ ಹೊಂದಿದವರು ಅಕಾಲವೃದ್ಧರಾಗುವುದು ಸಾವಿಗೀಡಾಗುವುದು ನಡೆಯುತ್ತದೆ. ಈ ಚಿತ್ರಹಿಂಸೆ ತಾಳಿಕೊಳ್ಳಲಾಗದೆ ಕೆಲವರು ಜೀವಕಳೆದುಕೊಂಡರೆ ಕೆಲವರು ಇಂತಹ ಚಿತ್ರಹಿಂಸೆಯ ಮಧ್ಯೆಯೂ ತಾವು ನಂಬಿದ ತತ್ವಗಳಿಗಾಗಿ ಜೀವಹಿಡಿದುಕೊಂಡು ನರಕಯಾತನೆಯನ್ನು ಅನುಭವಿಸುತ್ತಾರೆ. ಪಂಡಿತ್‌ ರಾಮರಕ್ಷ ಎಂಬ ಒಬ್ಬ ಕೈದಿ ಇಲ್ಲಿಗೆ ಬಂದಾಗ ಅವನ ಮೈಮೇಲೆ ಜನಿವಾರ ಇರುತ್ತದೆ. ಜೈಲು ನಿಯಮದ ಪ್ರಕಾರ ಅದನ್ನು ಅವನು ತೆಗೆಯಬೇಕಾಗುತ್ತದೆ. ಆದರೆ ಅದನ್ನು ತೆಗೆಯಲು ಅವನು ಒಪ್ಪುವುದಿಲ್ಲ. ಅಧಿಕಾರಿಗಳು ಬಲತ್ಕಾರದಿಂದ ಅದನ್ನು ಕಿತ್ತುಹಾಕಿದ್ದರಿಂದ ಅವನು ಊಟಬಿಟ್ಟು ಅದನ್ನು ಮರಳಿಕೊಡಲು ಸತ್ಯಾಗ್ರಹ ಮಾಡುತ್ತಾನೆ. ಕೊನೆಗೂ ಅಧಿಕಾರಿಗಳು ಅದನ್ನು ಮರಳಿಸಲಿಲ್ಲ. ರಾಮರಕ್ಷ ಸತತ ಮೂರು ತಿಂಗಳು ಕಾಲ ಹೀಗೆ ಹೋರಾಡಿ ಜನಿವಾರಕ್ಕಾಗಿ ತನ್ನ ಪ್ರಾಣವನ್ನೆ ಬಿಡುತ್ತಾರೆ!

ಇನ್ನೊಬ್ಬ ಕೈದಿ ಉಲ್ಲಾಸ್ಕರ್‌ ದತ್ತ ಎಂಬುವರನ್ನು ಇನ್ನಿಬ್ಬರು ಕೈದಿಗಳೊಂದಿಗೆ ಎಣ್ಣೆ ತೆಗೆಯುವ ಗಾಣಕ್ಕೆ ಎತ್ತನ್ನು ಕಟ್ಟುವಂತೆ ಕಟ್ಟಿ ದಿನಕ್ಕೆ ೮೦ ಪೌಂಡ್‌ ಎಣ್ಣೆ ತೆಗೆಯುವಂತೆ ಬಲಾತ್ಕಾರ ಮಾಡುತ್ತಾರೆ. (ದಿನಕ್ಕೆ ೧೫ ಪೌಂಡ್‌ ಎಣ್ಣೆ ತೆಗೆಯುವುದು ಎತ್ತುಗಳಿಗೂ ಕಷ್ಟ!) ಅಲ್ಲಿನ ಅನ್ಯಾಯವನ್ನು ಪ್ರತಿಭಟಿಸಿ ಉಪವಾಸ ಮಾಡುವುದು, ಅಂಥವರು ತಮ್ಮ ತತ್ವಸಿದ್ದಾಂತಕ್ಕಾಗಿ ಸಾಯುವುದು ಮತ್ತು ಸತ್ತವರನ್ನು ಸಮುದ್ರಕ್ಕೆ ಎಸೆಯುವುದು ಅಲ್ಲಿನ ತೀರಾ ಸಹಜ ನಡವಳಿಕೆಗಳಾಗಿರುತ್ತವೆ. ಇಂತಹ ಘೋರಶಿಕ್ಷೆಗಳು ಸಾವರ್ಕರ್‌ ಅವರು ತಮ್ಮ ಆಲೋಚನೆಯನ್ನು ಬದಲಿಸಿಕೊಳ್ಳುವಂತೆ ಮಾಡುತ್ತವೆ. ಅವರಿಗೆ ಅಂತಹ ಶಿಕ್ಷೆಗೆ ಎದುರಾಗಲು ಆಗಲಿಲ್ಲ; ಸಾಯಲೂ ಮನಸ್ಸು ಬರಲಿಲ್ಲ. ಹಾಗಾಗಿ ಅವರ ಹತ್ತಿರ ಉಳಿದದ್ದು ಒಂದೇ ಆಯ್ಕೆ; ಅದು ಬ್ರಿಟೀಷ್‌ ಸರ್ಕಾರಕ್ಕೆ ಕ್ಷಮಾಪಣಾ ಪತ್ರ ಬರೆದು ಕನಿಕರ ತೋರಿಸಲು ಕೋರುವುದು! ಸಾವರ್ಕರ್‌ ಇದನ್ನೇ ಆಯ್ದುಕೊಳ್ಳುತ್ತಾರೆ. ಒಟ್ಟು ಅವರು ಬ್ರಿಟೀಷ್‌ ಸರ್ಕಾರಕ್ಕೆ ಬರೆದದ್ದು ಒಂದಲ್ಲ ಎರಡಲ್ಲ ಐದು ಕ್ಷಮಾಪಣಾ ಪತ್ರಗಳು!

ಅವರು ಈ ಪತ್ರಗಳನ್ನು ಬರೆದದ್ದನ್ನು ಸಮರ್ಥಿಸಿಕೊಂಡ ಸಂಘ ಪರಿವಾರದ ಮುಖವಾಣಿ ʻಆರ್ಗನೈಸರ್‌ʼ ಅದನ್ನು ಸಮರ್ಥಿಸಿದ್ದು ಹೀಗೆ, “ಅವರು ಒಬ್ಬ ಸಮರ್ಥ ತಂತ್ರಗಾರ. ವಸಾಹತುಶಾಹಿಯನ್ನು ಹಿಮ್ಮೆಟ್ಟಿಸಲು ದೇಶವು ಅತ್ಯುತ್ರಗಾವಿ ಹೋರಾಡುತ್ತಿರುವ?ಾಗ ಜೈಲಿನಲ್ಲಿ ಟ್ರಿಟೀಷರಿಂದ ಚಿತ್ರಹಿಂಸೆಗೆ ಒಳಗಾಗಿ ತಾನು ತನ್ನ ಬದುಕಿನ ಬಹುಮುಖ್ಯ ಸಮಯವನ್ನು ವ್ಯರ್ಥಮಾಡಿಕೊಳ್ಳುತ್ತಿದ್ದೇನೆ ಎಂದು ಭಾವಿಸಿದರು.. ದರಿದ್ರ ಜೈಲಿನಿಂದ ಹೊರಬಂದು ಸಕ್ರಿಯ ರಾಜಕೀಯ ಮತ್ತು ಸ್ವಾತಂತ್ರ್ಯ ಚಳವಳಿಗೆ ಹಿಂದಿರುಗುವ ಸಲುವಾಗಿ ಅವರು ಈ ಪತ್ರಗಳನ್ನು ಬರೆದದ್ದು ಸಮರ್ಥನೀಯವೇ ಸರಿ.”  ಆದರೆ ಅವರ ಕ್ಷಮಾಪಣೆ ಪತ್ರಗಳನ್ನು ಇಲ್ಲಿ ಸಮರ್ಥನೆ ಮಾಡಿಕೊಂಡಂತೆ ಮುಂದೆ ಏನೂ ಆಗಲಿಲ್ಲ. ಶತ್ರುವಿನ ಮುಂದೆ ಸೋಲೊಪ್ಪಿದಂತೆ ಅಥವಾ ಶರಣಾದಂತೆ ನಟಿಸಿ ಮುಂದೆ ಸಮಯ ಸಿಕ್ಕಾಗ ಹೊಂಚುಹಾಕಿ ಮತ್ತೆ ಅವರ ಮೇಲೆ ಎರಗುವುದು ಒಂದು ಯುದ್ಧತಂತ್ರವೆಂಬುದು ಸತ್ಯ. ಆದರೆ ಅಂತಹ ಯಾವ ಕೆಲಸವನ್ನೂ ಮುಂದೆ  ಸಾವರ್ಕರ್ ಮಾಡಲಿಲ್ಲ. ತಾವು ಏನನ್ನು ಬರೆದುಕೊಟ್ಟಿದ್ದರೋ ಅದರಂತೆ ಬ್ರಿಟೀಷ್‌ ಸರ್ಕಾರಕ್ಕೆ ವಿಧೇಯರಾಗಿ ಸಾಧ್ಯವಿದ್ದಷ್ಟೂ ಅವರಿಗೆ ಸಹಾಯ ಮಾಡುತ್ತಾ ಬದುಕಿದರು!

ಹಾಗೆ ನೋಡಿದರೆ ಕ್ಷಮಾಪಣೆ ಪತ್ರವನ್ನು ಬರೆದವರು ಕೇವಲ ಸಾವರ್ಕರ್‌ ಮಾತ್ರವಲ್ಲ; ಇನ್ನೂ ಹಲವಾರು ಜನ ಬರೆದಿದ್ದರು. ಆದರೆ ಬ್ರಿಟೀಷ್‌ ಸರ್ಕಾರ ವಿಧಿಸಿದ ಷರತ್ತುಗಳು ಭಾರತ ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕುವ ಕ್ರಮವಾಗಿವೆ ಎಂದು ಅನ್ನಿಸಿ ಅವರು ಅವುಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದರು. ಆದರೆ ಸಾವರ್ಕರ್‌ ಅವರಿಗೆ ತಮ್ಮ ವೈಯಕ್ತಿಕ ಸ್ವಾತಂತ್ರ್ಯವು ದೇಶದ ಸ್ವಾತಂತ್ರ್ಯಕ್ಕಿಂತ ದೊಡ್ಡದು ಎನ್ನಿಸಿಯೋ ಏನೋ ಬ್ರಿಟೀಷ್‌ ಸರ್ಕಾರದ ಎಲ್ಲ ಷರತ್ತುಗಳಳನ್ನು ಸಂತೋಷದಿಂದಲೇ ಒಪ್ಪಿಕೊಂಡು ಅವರು ಬಿಡುಗಡೆಹೊಂದಿದರು.

ಬಿಡುಗಡೆಯ ನಂತರದ ಸಾವರ್ಕರ್‌ ಬದುಕು

ಸಾವರ್ಕರ್‌ ಅವರ ತಂದೆ ಅಂಚೆ ಇಲಾಖೆಯಲ್ಲಿ ಸಣ್ಣ ಕೆಲಸದಲ್ಲಿದ್ದು ನಿವೃತ್ತರಾಗಿ ಇಂದಿನ ಮಹಾರಾಷ್ಟ್ರದ ರತ್ನಗಿರಿಯಲ್ಲಿ ನೆಲೆಸಿದ್ದರು. ಬಿಡುಗಡೆಯ ನಂತರ ಸಾವರ್ಕರ್‌ ಕೂಡ ಇಲ್ಲಿಯೇ ನೆಲೆಯಾದರು. ಇಲ್ಲಿಗೆ ಅವರ ಸ್ವಾತಂತ್ರ್ಯ ಹೋರಾಟದ ಕತೆ ಮುಗಿಯುತ್ತದೆ. ಇದೇನೂ ತೀರಾ ಅವರನ್ನು ನಿಂದಿಸಬೇಕಾದ ಸಂಗತಿಯಲ್ಲ. ಸ್ವಾತಂತ್ರ್ಯ ಹೋರಾಟವವನ್ನು ಅವರು ಮಧ್ಯದಲ್ಲಿ ನಿಲ್ಲಿಸಿದ್ದು ಸರಿಯಲ್ಲ ಎಂದು ನಮಗೆ ಅನ್ನಿಸಿದರೂ ಅದು ದೊಡ್ಡ ಅಪರಾಧವೇನಲ್ಲ. ಅದಕ್ಕಾಗಿಯೇ ನಾವು ಅವರನ್ನು ಹಂಗಿಸಬೇಕಾಗಿಲ್ಲ. ಹಾಗೆ ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಚಳವಳಿಗೆ ವಿಮುಖರಾದವರು ಅವರೊಬ್ಬರೇ ಆಗಿರಲಿಲ್ಲ. ಅರವಿಂದ ಘೋಷ್‌ ಅವರೂ ಕೂಡ ಚಳವಳಿಗೆ ವಿಮುಖರಾಗಿ ಪಾಂಡಿಚೇರಿಯಲ್ಲಿ ಆಶ್ರಮ ಕಟ್ಟಿಕೊಂಡು ಆಧ್ಯಾತ್ಮಕ ಸಾಧನೆಗೆ ತೊಡಗಿದ್ದರು. ಆದರೆ ಅರವಿಂದ ಘೋಷ್‌ ಅವರಿಗೆ ಇಲ್ಲದ ಟೀಕೆ ವಿವಾದಗಳು ಸಾವರ್ಕರ್‌ ಅವರನ್ನು ಸುತ್ತಿಕೊಂಡವು. ಇದಕ್ಕೆ ಕಾರಣವೇನು?

ಸ್ವಾತಂತ್ರ್ಯ ಚಳವಳಿಯಿಂದ ವಿಮುಖರಾದರೂ ಅರವಿಂದರ ಹಾಗೆ ಸಾವರ್ಕರ್‌ ಅವರು ಕೂಡ ಅರವಿಂದ ಘೋಷ್‌ ಅವರಂತೆ ಆಧ್ಯಾತ್ತ್ಮಿಕ ಸಾಧನೆಯಲ್ಲಿಯೋ ಅಥವಾ ತಮ್ಮ ವೈಯಕ್ತಿಕ ಬದುಕಿನಲ್ಲಿಯೇ ಲೀನವಾಗಿದ್ದರೆ ಬಹುಶಃ ಅವರು ಇಷ್ಟೊಂದು ಟೀಕೆಗೆ ಒಳಗಾಗುತ್ತಿರಲಿಲ್ಲ. ಆದರೆ ಅವರು ಹಾಗೆ ಮಾಡಲಿಲ್ಲ. ಬದಲಾಗಿ ಯಾವ ಬ್ರಿಟೀಷರ ವಿರುದ್ಧ ಅವರು ತಮ್ಮ ಆರಂಭಿಕ ಜೀವನದಲ್ಲಿ ಪ್ರಾಮಾಣಿಕವಾಗಿ ಹೋರಾಡಿದ್ದರೋ ಅದೇ ಬ್ರಿಟೀಷರ ಜೊತೆಗೆ ತಮ್ಮ ಜೀವನದ ಉತ್ತರ ಕಾಲಘಟ್ಟದಲ್ಲಿ ಸೇರಿಕೊಂಡು ನಮ್ಮ ಸ್ವಾತಂತ್ರ್ಯ ಚಳವಳಿಗೆ ದ್ರೋಹ ಬಗೆದದ್ದು ಅಕ್ಷಮ್ಯ ಅಪರಾಧವಾಯಿತು. ಸ್ವಾತಂತ್ರ್ಯ ಚಳವಳಿಯು ಹಿಂದೂ ಮುಸ್ಲಿಮ್‌ ಐಕ್ಯತೆಯಿಂದಾಗಿ ಗಟ್ಟಿಗೊಳ್ಳುತ್ತಾ ಹೋದಂತೆ ಬ್ರಿಟೀಷರಿಗೆ ಅದನ್ನು ಬಗ್ಗುಬಡಿಯುವುದು ಕಷ್ಟವಾಗತೊಡಗಿತು. ಅದಕ್ಕೆ ಅವರು ಈ ಎರಡು ಬಲಾಢ್ಯ ಕೋಮುಗಳ ಐಕ್ಯತೆಯನ್ನು ಒಡೆಯಲು ಹವಣಿಸುತ್ತಿದ್ದರು. ಅದೇ ಹೊತ್ತಿಗೆ ಅಸ್ತ್ರವಾಗಿ ಅವರಿಗೆ ಸಾವರ್ಕರ್‌ ಸಿಕ್ಕರು. ಯಾವಾಗ ಇವರನ್ನು ಹಿಂದೂಗಳ ನಾಯಕರನ್ನಾಗಿ ರೂಪಿಸಿ ಮುಸ್ಲಿಮರ ವಿರುದ್ಧ ಹರಿಹಾಯಲು ಬಿಡಬಹುದು ಎನ್ನಿಸಿತೋ ಆ ಕ್ಷಣ ಬ್ರಿಟೀಷರು ಇವರನ್ನು ಜೈಲಿನಿಂದ ಬಿಡುಗಡೆಮಾಡಿಬಿಟ್ಟರು!

ಜೈಲಿನಿಂದ ಬಿಡುಗಡೆಯಾದ ಮೇಲೆ ಸಾವರ್ಕರ್‌ ಹಿಂದುತ್ವದ ಪ್ರತಿಪಾದಕರಾಗಿ ಬ್ರಿಟೀಷರಿಗೆ ಬರೆದುಕೊಟ್ಟ ಕ್ಷಮಾಪಣಾ ಪತ್ರದಲ್ಲಿ ತಿಳಿಸಿದಂತೆ ಅವರಿಗೆ ಅನುಕೂಲಕರವಾದ ಚಟುವಟಿಕೆಗಳನ್ನು ಮಾಡುವುದರಲ್ಲಿ ನಿರತರಾದರು. ೧೯೪೨ರ ಭಾರತಬಿಟ್ಟು ತೊಲಗಿ ಚಳವಳಿ ಕಾಲಘಟ್ಟದಲ್ಲಿ ಗಾಂಧೀಜಿಯವರ ನೇತೃತ್ವದಲ್ಲಿ ಇಡೀ ದೇಶ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಕುದಿಯುತ್ತಿದ್ದಾಗ, ಅತ್ತ ಸುಭಾಶ್ಚಂದ್ರದ ಭೋಸ್‌ ಯಾವುದ್ಯಾವುದೋ ದೇಶದಲ್ಲಿ ಸುತ್ತಾಡಿ ಬ್ರಿಟೀಷರ ವಿರುದ್ಧ ಸಮರ ಸಾರಲು ಸೈನ್ಯವನ್ನು ಕಟ್ಟುತ್ತಿದ್ದಾಗ ಇಲ್ಲಿ ಈ ಸಾವರ್ಕರ್‌ ತಮ್ಮ ಸಂಘಟನೆಯ ಮೂಲಕ ಅನೇಕ ಕಡೆ ಭಾಷಣಗಳನ್ನು ಮಾಡಿ ಬ್ರಿಟೀಷ್‌ ಸೈನ್ಯವನ್ನು ಸೇರಿಕೊಳ್ಳಲು ಭಾರತೀಯ ತರುಣರನ್ನು ಪ್ರಚೋದಿಸಿ ಅವರಲ್ಲಿ ಹುಮ್ಮಸ್ಸು ತುಂಬುತ್ತಿದ್ದರು! ಇದನ್ನು ದೇಶದ್ರೋಹ ಎನ್ನದೇ ಮತ್ತೇನನ್ನಬೇಕು?

ದೇಶದ ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಹೀಗೆ ನಮ್ಮ ಯುವಕರು ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕದೆ ಬ್ರಿಟೀಷ್‌ ಸೈನ್ಯವನ್ನು ಸೇರಲು ಪ್ರಚೋದಿಸುತ್ತಿದ್ದುದ್ದಲ್ಲದೇ ಅವರು ಮಾಡಿದ ಇನ್ನೊಂದು ಕೆಲಸವೆಂದರೆ ದ್ವಿರಾಷ್ಟ್ರ ಕಲ್ಪನೆಯನ್ನು ಮುನ್ನೆಲೆಗೆ ತಂದದ್ದು. ಸಾಮಾನ್ಯವಾಗಿ ಅನೇಕ ಚರಿತ್ರೆಕಾರರು ದ್ವಿರಾಷ್ಟ್ರ ಕಲ್ಪನೆಯನ್ನು ಮೊಹಮದ್‌ ಆಲಿ ಜಿನ್ನಾ ಅವರ ತಲೆಗೆ ಕಟ್ಟುತ್ತಾರೆ. ಆದರೆ ಆ ವಿಷಯದಲ್ಲಿ ಸಾವರ್ಕರ್‌ ಅವರ ಆಲೋಚನೆ ಏನಾಗಿತ್ತು ಎನ್ನುವುದನ್ನು ಹೇಳುವಲ್ಲಿ ಮೌನವಹಿಸುತ್ತಾರೆ. ಸಾವರ್ಕರ್‌ ಅವರು ಕೂಡ ಅದೇ ಆಲೋಚನೆಯವರಾಗಿದ್ದರು. ಇದನ್ನು ಅಂಬೇಡ್ಕರ್‌ ತಮ್ಮ ʼಪಾಕಿಸ್ತಾನ ಅಥವಾ ಭಾರತದ ವಿಭಜನೆʼ ಎಂಬ ಕೃತಿಯಲ್ಲಿ ಸ್ಪಷ್ಟಮಾತುಗಳಲ್ಲಿ ಹೇಳುವುದು ಹೀಗೆ: “ಸಾವರ್ಕರ್‌ ಮತ್ತು ಜಿನ್ನಾ ಇಬ್ಬರೂ ಒಂದು ರಾಷ್ಟ್ರ ಮತ್ತು ದ್ವಿರಾಷ್ಟ್ರದ ವಿಚಾರದಲ್ಲಿ ಪರಸ್ಪರ ವಿರೋಧಿಗಳಾಗುವ ಬದಲು ಅದರ ಬಗ್ಗೆ ಸಂಪೂರ್ಣ ಸಹಮತ ಹೊಂದಿದ್ದಾರೆ. ಇಬ್ಬರೂ -ಒಂದು ಹಿಂದೂರಾಷ್ಟ್ರ ಮತ್ತು ಇನ್ನೊಂದು ಮುಸ್ಲಿಂ ರಾಷ್ಟ್ರ, ಎಂದು ಸಮರ್ಥಿಸುತ್ತಾರೆ ಕೂಡ. ಆ ಎರಡು ರಾಷ್ಟ್ರಗಳು ಯಾವ ಕರಾರುಗಳು ಹಾಗು ಷರತ್ತುಗಳ ಆಧಾರದಲ್ಲಿ ಇರಬೇಕು ಎಂಬ ಬಗ್ಗೆ ಮಾತ್ರ ಅವರಿಬ್ಬರಲ್ಲಿ ವ್ಯತ್ಯಾಸ ಇದೆ ಅಷ್ಟೆ”

ಸಾವಿನವರೆಗೂ ಅಂಟಿಕೊಂಡ ಗಾಂಧಿ ಹತ್ಯೆಯ ಕಳಂಕ:

ಇಡೀ ಸ್ವಾತಂತ್ರ್ಯ ಭಾರತದ ಚರಿತ್ರೆಯಲ್ಲಿ ಒಂದು ಕಪ್ಪುಚುಕ್ಕೆ ಎಂದರೆ ಅದು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಹತ್ಯೆ. ಈ ಹತ್ಯೆಗೆ ಸಂಬಂಧಿಸಿದಂತೆ ಹತ್ಯೆ ನಡೆದು ನಾಲ್ಕು ತಿಂಗಳಿಗೆ ಪೋಲೀಸರು  ಒಟ್ಟು ಹದಿಮೂರು ಮಂದಿ ಆರೋಪಿಗಳ ಮೇಲೆ ದೋಷಾರೋಪ ಪಟ್ಟಿ ದಾಖಲಿಸಿದರು. ಅವರಲ್ಲಿ ಮೂರು ಜನ ತಲೆಮರೆಸಿಕೊಂಡಿದ್ದಾರೆ ಎಂದು ಷರಾ ಬರೆದು ಉಳಿದ ಒಂಬತ್ತು ಜನರ ʼದುಷ್ಟನವಗ್ರಹಕೂಟʼವನ್ನು ಕೋರ್ಟಿಗೆ ಹಾಜರ್‌ ಪಡಿಸಿದರು. ಅವರಲ್ಲಿ ವಿ ಡಿ ಸಾವರ್ಕರ್‌ ಕೂಡ ಇದ್ದರು. ಆರೋಪಿಗಳು ತಮ್ಮ ಪರವಾಗಿ ಸಮರ್ಥರೆನ್ನಿಸುವ ವಕೀಲರನ್ನು ನೇಮಕ ಮಾಡಿಕೊಳ್ಳುವ ಅವಕಾಶವನ್ನು ನ್ಯಾಯಾಲಯ ನೀಡಿತ್ತು. ಇದನ್ನು ಬಳಸಿಕೊಂಡ ಸಾವರ್ಕರ್‌ ಆ ಕಾಲದ ಮತ್ತು ಆ ಪ್ರದೇಶದ ಪ್ರಸಿದ್ಧ ವಕೀಲರಾಗಿದ್ದ ಶ್ರೀ ಎಲ್‌ ಬಿ ಬೋಪಟ್ಕರ್‌ ಅವರನ್ನು ನೇಮಿಸಿಕೊಂಡಿದ್ದರು. ವಿಚಾರಣೆಯ ವೇಳೆ ಸಾವರ್ಕರ್‌ ಅವರು ತಮಗೂ ಹತ್ಯೆ ಮಾಡಿದ ನಾಥೂರಾಮ್‌ ಗೋಡ್ಸೆಗೂ ಯಾವುದೇ ರೀತಿಯ ಸಂಬಂಧವಿಲ್ಲವೆಂದೇ ವಾದಿಸಿದರು.

ಆದರೆ ಅವರಿಗೂ ನಾಥೂರಾಮನಿಗೂ ಕಳೆದ ಎಷ್ಟೋ ವರ್ಷಗಳಿಂದ ನಿಕಟ ಸಂಪರ್ಕವಿರುವುದು ನಂತರದ ದಿನಗಳಲ್ಲಿಸಿಕ್ಕ ಸಾಕ್ಷಗಳು  ಸಾಬೀತುಪಡಿಸಿದವು. ಎಸ್‌ ಎಸ್‌ ಎಲ್‌ ಸಿ ಪಾಸುಮಾಡಲಾಗದೆ ಅಂಡಲೆಯುತ್ತಿದ್ದ ನಾಥೂರಾಮ ಎಂಬ ಹುಡುಗ ಸಾವರ್ಕರ್‌ ಅವರ ಶಿಷ್ಯನಾಗಿದ್ದವನು. ಅವನು ಅವರ ಹಿಂದುತ್ವದ ವಿಚಾರಗಳಿಂದ ಪ್ರಭಾವಿತನಾಗಿದ್ದವನು. ಗಾಂಧೀಜಿ ಔರಂಗಜೇಬನ ಅವತಾರ ಎಂಬ ಹಿಂದುತ್ವದ ಮಂಕುಬೂದಿಯನ್ನು ಊದಿಸಿಕೊಂಡವನು. ೧೯೪೨ರಲ್ಲಿ ಕರ್ನಾಟಕದ ಶಿವಮೊಗ್ಗದಲ್ಲಿ ನಡೆದ ಹಿಂದೂ ಮಹಾಸಭಾದ ಸಮಾವೇಶದಲ್ಲಿ ನಾಥೂರಾಮ್‌ ಗೋಡ್ಸೆ ತನ್ನ ಗುರು ಸಾವರ್ಕರ್‌ ಜೊತೆ ಪಾಲ್ಗೊಂಡ ಭಾವಚಿತ್ರ ನಂತರದ ದಿನಗಳಲ್ಲಿ ದೊರೆಯಿತು ಕೂಡ. ಅಷ್ಟೇ ಏಕೆ ನಾಥೂರಾಮ್‌ ತಾನು ಗಾಂಧೀಜಿಯನ್ನು ಏಕೆ ಕೊಂದೆ ಎಂದು ನ್ಯಾಯಾಲಯಕ್ಕೆ ನೀಡಿದ ಸುಧೀರ್ಘ ಲಿಖಿತ ಹೇಳಿಕೆ ಇದೆಯಲ್ಲ. ಅದನ್ನು ಓದಿದರೆ ಯಾರಿಗಾದರೂ ಅರ್ಥವಾಗುವ ಸಂಗತಿ ಎಂದರೆ ಅಷ್ಟೊಂದು ಪ್ರಬುದ್ಧವಾದ ಭಾಷೆಯಲ್ಲಿ ಎಸ್‌ ಎಸ್‌ ಎಲ್‌ ಸಿ ಪಾಸಾಗದ ಒಬ್ಬ ಯುವಕ ಬರೆಯಲು ಸಾಧ್ಯವಿಲ್ಲವೆಂಬುದು. ಅದನ್ನು ಬರೆದವರು ಅವನ ಗುರುಗಳಾದ ಸಾವರ್ಕರ್‌ ಅವರೇ ಎಂಬುದು ಬಹಳಷ್ಟು ಜನರ ಅಭಿಮತ!

ಕೊನೆಗೆ ʻಸಾಕ್ಷಾಧಾರಗಳ ಕೊರತೆʼಯ ಕಾರಣದಿಂದ ಸಾವರ್ಕರ್‌ ಈ ಕೇಸಿನಲ್ಲಿ ಬಿಡುಗಡೆಯಾದರು.  ನಂತರದ ದಿನಗಳಲ್ಲಿ ಸಿಕ್ಕಂತಹ ಸಾಕ್ಷಗಳು ಮೊದಲೇ ಸಿಕ್ಕಿದ್ದರೆ ಅವರು ಈ ಪ್ರಕರಣದಲ್ಲಿ ಬಿಡುಗಡೆ ಆಗಲು ಸಾಧ್ಯವೇ ಇರಲಿಲ್ಲ ಎಂಬುದು ಬಹಳಷ್ಟು ಜನ ನ್ಯಾಯಪರಿಣಿತರ ಅಭಿಪ್ರಾಯ. ಹೀಗೆ ನ್ಯಾಯಾಲಯದ ಕಣ್ಣಲ್ಲಿ ತಾಂತ್ರಿಕವಾಗಿ ʼನಿರಪರಾಧಿʼ ಅನ್ನಿಸಿ ಅವರು ಹೊರಬಂದರೂ ದೇಶದ ಜನರ ದೃಷ್ಟಿಯಲ್ಲಿ ಅವರು ತಮ್ಮ ಜೀವನದ ಕೊನೆಯವರೆಗೂ ಅಪರಾಧಿಯಾಗಿಯೇ ಉಳಿಯಬೇಕಾಯಿತು! ಗಾಂಧೀಜಿ ಕೊಲೆಯ ಕಳಂಕವನ್ನು ಅವರು ತಮ್ಮ ಜೀವಿತದ ಕೊನೆಯವರೆಗೂ ತೊಳೆದುಕೊಳ್ಳಲು ಆಗಲೇ ಇಲ್ಲ. ಎಷ್ಟರಮಟ್ಟಿಗೆ ಎಂದರೆ ಅವರು ೧೯೬೬ರಲ್ಲಿ ಅವರು ತಮ್ಮ ೮೩ನೆಯ ವಯಸ್ಸಿನಲ್ಲಿ ಮರಣ ಹೊಂದಿದಾಗ ಅವರ ಸಾವಿಗೆ ಯಾವುದೇ ಸಾರ್ವಜನಿಕ ಶೋಕ ವ್ಯಕ್ತವಾಗಲಿಲ್ಲ; ಅದು ಯಾವುದೇ ಸದ್ದುಗದ್ದಲವಿಲ್ಲದ ಒಬ್ಬ ಸಾಮಾನ್ಯ ವ್ಯಕ್ತಿಯ ಸಾವಾಗಿ ದೇಶದ ಬಹುಪಾಲು ಜನರ ಗಮನಕ್ಕೂ ಬರದೇ ಹೋಯಿತು!

ಮೊದಲಿನಿಂದಲೂ ಮುಸ್ಲಿಂ ದ್ವೇಷಿಯಾಗಿದ್ದರೇ?

ಸಾವರ್ಕರ್‌ ತಮ್ಮ ʻಹಿಂದುತ್ವʼ ಪ್ರತಿಪಾದನೆಯ ಕಾರಣಕ್ಕಾಗಿಯೇ ಕೆಲವರ ಪಾಲಿಗೆ ಆರಾಧ್ಯ ದೈವ ಆಗಿರುವುದು ಮತ್ತು ಇನ್ನು ಕೆಲವರ ಪಾಲಿಗೆ ʼದೇಶದ್ರೋಹಿʼ ಆಗಿರುವಂಥದ್ದು. ಆದರೆ ಸಾವರ್ಕರ್‌ ಅವರು ಮೊದಲಿನಿಂದಲೂ ಹೀಗೆ ಮುಸ್ಲಿಂ ದ್ವೇಷಿಯಾಗಿದ್ದರೇ ಎಂಬ ಪ್ರಶ್ನೆಗೆ ಉತ್ತರ ʻಇಲ್ಲʼ ಎನ್ನುವುದೇ ಅಗಿದೆ. ತಮ್ಮ ಶಾಲಾ ದಿನಗಳಲ್ಲಿ ಅವರು ಮಸೀದಿ ಮೇಲೆ ದಾಳಿಮಾಡುವ ಕೆಲವು ಸಣ್ಣಪುಟ್ಟ ಕೆಲಸಗಳನ್ನು ಮಾಡಿದ್ದು ಬಿಟ್ಟರೆ ವಯಸ್ಕರಾದ ಮೇಲೆ ಅವರು ಅದನ್ನು ಮಾಡಲಿಲ್ಲ. ಲಂಡನ್ನಿನಲ್ಲಿ ಓದುವಾಗ ಅವರು ಬರೆದ ʻಭಾರತ ಮೊದಲ ಸ್ವಾತಂತ್ರ್ಯ ಸಂಗ್ರಾಮʼ ಕೃತಿಯನ್ನು ಓದಿದರೆ ಈ ವಿಷಯ ಸ್ಪಷ್ಟವಾಗುತ್ತದೆ. ಅವರ ಆಲೋಚನೆ ವಿಚಾರಧಾರೆ ಭಾರತದ ಪುರಾಣ ಧಾರ್ಮಿಕ ಕೃತಿಗಳಲ್ಲಿ ಬೇರು ಬಿಟ್ಟಿದ್ದರೂ ಸಧ್ಯದ ಭಾರತದ ವಿಮೋಚನೆ ಇಲ್ಲಿನ ಹಿಂದೂ ಮತ್ತು ಮುಸ್ಲಿಮರಿಬ್ಬರೂ ಒಟ್ಟಾಗಿ ಒಗ್ಗಟ್ಟಿನಿಂದಲೇ ಸಾಧಿಸಬೇಕಾದ ಕೆಲಸವೆಂದು ಅವರು ಈ ಹಂತದಲ್ಲಿ ಅಚಲವಾಗಿ ನಂಬಿದ್ದರು.

ಈ ಪುಸ್ತಕದ ಮುನ್ನಡಿಯಲ್ಲಿ ಅವರು ಬರೆಯುವುದು ಹೀಗೆ: “ದೇಶವು ತನ್ನ ಇತಿಹಾಸದ ಒಡೆಯನಾಗಬೇಕೆ ಹೊರತು ಗುಲಾಮನಾಗಬಾರದು. ಮಹಮದೀಯರ ವಿರುದ್ಧದ ದ್ವೇಷ ಭಾವನೆಯು ಶಿವಾಜಿಯ ಕಾಲಕ್ಕಷ್ಟೇ ಅಗತ್ಯವಾಗಿತ್ತು... ಈಗ ಅಂತಹ ಭಾವನೆಯನ್ನು ಪೋಷಿಸುವುದು ಅನ್ಯಾಯ ಮತ್ತು ಮೂರ್ಖತನವಾಗುತ್ತದೆ.”  ಹೀಗೆ ಬರೆದ ಅವರು ತಮ್ಮ ಆ ಕೃತಿಯಲ್ಲಿ ತಾಯ್ನಾಡಿಗಾಗಿ ಪ್ರಾಣತೆತ್ತ ಮಹಾಚೇತನಗಳು ಎಂದು ಕೆಲವು ಹೆಸರುಗಳನ್ನು ಹೇಳಿದ್ದಾರೆ. ಅವರಲ್ಲಿ ಹಿಂದೂಗಳ ಜೊತೆಗೆ ಅನೇಕ ಮುಸ್ಲಿಂ ಹುತಾತ್ಮರ ಹೆಸರೂ ಇವೆ. ಬ್ರಿಟೀಷ್‌ ಈಸ್ಟ್‌ ಇಂಡಿಯ ಕಂಪನಿಯ ವಿರುದ್ಧ ಹೋರಾಟ ಮಾಡಲು ಒಂದು ನೀಲಿ ನಕ್ಷೆ ತಯಾರಿಸಿದ್ದ ಮಹಾನ್‌ ಮಿಲಿಟರಿ ತಂತ್ರಜ್ಞನಾದ ಅಜೀಮುಲ್ಲಾ ಖಾನ್‌ ಅವರನ್ನು ಬಾಯ್ತುಂಬ ಹೊಗಳುವ ಸಾವರ್ಕರ್‌ ಅವರ ಮಾತನ್ನು ಗಮನಿಸಿ, “ಇಬ್ಬರೂ (ಹಿಂದೂ ಮುಸ್ಲಿಮರು) ಹಿಂದೂಸ್ತಾನದ ಮಣ್ಣಿನ ಮಕ್ಕಳೇ ಆಗಿದ್ದಾರೆ. ಅವರ ಹೆಸರುಗಳು ಬೇರೆ ಬೇರೆ. ಆದರೆ ಅವರು ಒಂದೇ ತಾಯಿಯ ಮಕ್ಕಳು. ಭಾರತವು ಇವರಿಬ್ಬರಿಗೂ ಸಮಾನ ತಾಯಿ ಆಗಿರುವುದರಿಂದ ರಕ್ತಸಂಬಂಧದಲ್ಲದದಿ ಅವರು ಸಹೋದರರೇ ಆಗಿದ್ದಾರೆ.”

ಕೊನೆಗೂ ಸಾವರ್ಕರ್‌ ಅವರು ತಮ್ಮ ಈ ಮೇರು ಕೃತಿಯನ್ನು ಮುಗಿಸುವುದು ಬಹದ್ದೂರ್‌ ಷಾ ಜಾಫರ್‌ ಅವರ ಒಂದು ದ್ವಿಪದಿಯಿಂದ ಅದು ಹೀಗೆ ಇದೆ:

ಘಾಜಿಯೋ ಮೇ ಬೂ ರಹೇಗಿ ಜಬ್ತಲಕ್ಇಮಾಮ್ಕಿ

ತಖ್ತೇ ಲಂಡನ್ತಕ್ಚಲೇಗಿ ತೇಜ್ಹಿಂದೂಸ್ತಾನ್ಕಿ

(ಇದರ ಅರ್ಥ: ಎಲ್ಲಿಯ ತನಕ ನಂಬಿಕೆಯ ಪ್ರೀತಿಯ ನಮ್ಮ ವೀರಪುರುಷರ ಎದೆಯಲ್ಲಿ ಇರುತ್ತದೆಯೋ ಅಲ್ಲಿಯವರೆಗೂ ಹಿಂದೂಸ್ತಾನದ ಖಡ್ಗವು ಲಂಡನ್ನಿನ ಸಿಂಹಸನವನ್ನು ತಲುಪುವುದು). ಮುಂದೆ ೧೮೫೭ ರಲ್ಲಿ ದೆಹಲಿಯು ಬ್ರಿಟೀಷರಿಂದ ವಿಮೋಚನೆಯಾಗಿ ಬಾಹಾದ್ದೂರ್‌ ಷಾ ಜಾಫರ್‌ ದೊರೆ ಎಂದು ಘೋಷಣೆಯಾದ ಘಟನೆಯನ್ನು ಕೂಡ ಅವರು ಅತ್ಯಂತ ಸಂಭ್ರಮದಿಂದ ತಮ್ಮ ಕೃತಿಯಲ್ಲಿ ದಾಖಲಿಸುತ್ತಾರೆ. ಒಟ್ಟಾರೆ ಹೇಳುವುದಾದರೆ ತಮ್ಮ ಆರಂಭಿಕ ಕಾಲಘಟ್ಟದಲ್ಲಿ ಅವರಿಗೆ ಮುಸ್ಲಿಮರ ಬಗ್ಗೆ ಯಾವುದೇ ದ್ವೇಷಭಾವನೆ ಇರಲಿಲ್ಲ. ಅವರ ಸ್ವಾತಂತ್ರ್ಯ ಹೋರಾಟದ ಬಗ್ಗೆ ಅನುಮಾನಗಳೂ ಇರಲಿಲ್ಲ. ಸ್ವತಃ ಸಾವರ್ಕರ್‌ ಕೂಡ ಆಗ ಒಬ್ಬ ಪ್ರಾಮಾಣಿಕ ಸ್ವಾತಂತ್ರ್ಯ ಹೋರಾಟಗಾರರೇ ಆಗಿದ್ದರು. ಅದರಲ್ಲಿ ಸಂಶಯ ಪಡುವಂಥದ್ದು ಏನೂ ಇರಲಿಲ್ಲ.

ಆದರೆ ಇಂತಹ ಒಬ್ಬ ಅಪ್ಪಟ ಸ್ವಾತಂತ್ರ್ಯ ಪ್ರೇಮಿ ಮುಂದೆ ತಾವು ಅದುವರೆಗೂ ನಡೆದು ಬಂದ ದಾರಿಗೆ ವಿರುದ್ಧವಾಗಿ ತಿರುಗಿ ಮುಸ್ಲಿಂ ವಿರೋಧಿಯಾದದ್ದು, ಸ್ವಾತಂತ್ರ್ಯ ಹೋರಾಟಕ್ಕೆ ವಿಮುಖವಾದುದಲ್ಲದೇ ಅದಕ್ಕೆ ಅನೇಕ ಬಗೆಯಲ್ಲಿ ಕೇಡು ಬಗೆದುದು ಒಟ್ಟಾರೆ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಆದ ಒಂದು ದೊಡ್ಡ ಹಿನ್ನಡೆಯೂ ಹೌದು. ನಮ್ಮ ದೌರ್ಭಾಗ್ಯವೂ ಹೌದು. ಇದಕ್ಕೆ ಅನೇಕರು ಅನೇಕ ರೀತಿಯ ಕಾರಣಗಳನ್ನು ನೀಡುತ್ತಾರೆ. ಅಂಡಮಾನಿನ ಜೈಲಿನಲ್ಲಿ ಮುಸ್ಲಿಂ ಅಧಿಕಾರಿಗಳು ನೀಡಿದ ಚಿತ್ರಹಿಂಸೆ ಮತ್ತು ಕಿರುಕುಳದಿಂದ ಅವರು ಬದಲಾದರು ಎಂಬುದು ಅವುಗಳಲ್ಲಿ ಒಂದು. ಆದರೆ ಈ ವಾದದಲ್ಲಿ ಹುರುಳಿಲ್ಲ ಅನ್ನಿಸುತ್ತದೆ. ಏಕೆಂದರೆ ಅಲ್ಲಿ ಚಿತ್ರಹಿಂಸೆ ಇದ್ದದ್ದು ನಿಜ. ಅಧಿಕಾರಿಗಳಲ್ಲಿ ಮುಸ್ಲಿಮರು ಇದ್ದದ್ದೂ ನಿಜ. ಆದರೆ ಅಲ್ಲಿನ ಚಿತ್ರಹಿಂಸೆ ಧರ್ಮ ಜನಾಂಗವನ್ನು ಅವಲಂಬಿಸಿರಲಿಲ್ಲ. ಅವರು ಮುಸ್ಲಿಮೇತರರಿಗೆ ನೀಡುವಷ್ಟೇ ಚಿತ್ರಹಿಂಸೆಯನ್ನು ಮುಸ್ಲಿಂ ಕೈದಿಗಳಿಗೂ ನೀಡುತ್ತಿದ್ದರು. ಅಷ್ಟಕ್ಕೂ ಅಧಿಕಾರಿಗಳು ಎಲ್ಲರೂ ಮುಸ್ಲಿಮರೂ ಇರಲಿಲ್ಲ. ಅಧಿಕಾರಿಗಳು ಯಾರೇ ಇದ್ದರೂ ಕೈದಿಗಳು ಯಾವ ಜನಾಂಗದವರೇ ಅಗಿದ್ದರೂ ಈ ಹಿಂಸೆ ಹೆಚ್ಚೂ ಕಡಿಮೆ ಸಮಾನವಾಗಿಯೇ ನಡೆಯುತ್ತಿತ್ತು.

ಇಲ್ಲಿ ಅಪ್ರಸ್ತುತವಲ್ಲ ಎಂದು ಒಂದು ಹೋಲಿಕೆ ಕೊಡುತ್ತಿದ್ದೇನೆ. ಬ್ರಿಟೀಷ್‌ ಸಾಮ್ರಾಜ್ಯದ ಬಗ್ಗೆ ಗಾಂಧಿಯವರ ನಿಲುವು ಕೂಡ ಹೀಗೆ ಎರಡು ರೀತಿಯಲ್ಲಿ ಇತ್ತು. ಆರಂಭದಲ್ಲಿ ಅವರು ಬ್ರಿಟೀಷ್‌ ಸೈನ್ಯದಲ್ಲಿ ಗಾಯಾಳುಗಳ ಆರೈಕೆ ಮಾಡುವ ಕೆಲಸವನ್ನು ಮಾಡಿದರು. ನಂತರ ಅದೇ ಬ್ರಿಟೀಷ್‌ ಸಾಮ್ರಾಜ್ಯವನ್ನು ಕಿತ್ತೊಗೆಯಲು ಪಣತೊಟ್ಟು ಹೋರಾಡಿದರು. ಸಾವರ್ಕರ್‌ ಕೂಡ ಅದನ್ನೇ ಮಾಡಿದರೂ ಅವರಿಬ್ಬರ ನಡುವಿನ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಗಮನಿಸುವುದಾದರೆ ಗಾಂಧೀಜಿ ಆರಂಭದಲ್ಲಿ ಬ್ರಿಟೀಷರಿಗೆ ನೆರವಾಗಿ ನಂತರ ಅವರ ವಿರುದ್ಧವಾದರು. ಅದರೆ ಸಾವರ್ಕರ್‌ ಆರಂಭದಲ್ಲಿ ಬ್ರಿಟೀಷರ ವಿರುದ್ಧವಿದ್ದು ನಂತರ ಅವರ ಆಪ್ತರಾದರು. ಜನ ನಮ್ಮ ಜೀವನದ ಮೊದಲ ಘಟ್ಟಕ್ಕಿಂತ ನಂತರ ಕಾಲಘಟ್ಟದ ಆಲೋಚನೆಯನ್ನು ʻಪ್ರಬುದ್ಧʼ ಎಂದು ಪರಿಗಣಿಸುತ್ತಾರೆ. ಬಹುಶಃ ಇದೇ ಕಾರಣದಿಂದಲೇ ಇರಬೇಕು ಗಾಂಧೀಜಿ ʻರಾಷ್ಟ್ರಪಿತʼ ಆಗಿ ದೇಶ ಮಾತ್ರವಲ್ಲ ಜಗತ್ತಿನ ಜನಮಾನಸದ ಎದೆಒಳಗೆ ಹೋದರು. ಸಾವರ್ಕರ್‌ ಸತ್ತಮೇಲೂ ಕಳಂಕಿತರಾಗಿಯೇ ಉಳಿದರು.

ಹಾಗಾಗಿ ಈ ಲೇಖನದ ಆರಂಭದಲ್ಲಿ ಎತ್ತಿದ ಪ್ರಶ್ನೆಗೆ ಕೊನೆಯಲ್ಲಿ ಹೇಳಬಹುದಾದ ಉತ್ತರವೆಂದರೆ ʻಆ ಎರಡೂ ಉತ್ತರಗಳು ಸರಿ; ಎರಡೂ ಉತ್ತರಗಳೂ ತಪ್ಪುʼ ಎಂಬುದೇ ಆಗಿದೆ. ಸಾವರ್ಕರ್‌ ಅವರ ಮೊದಲರ್ಧ ಜೀವನವನ್ನಷ್ಟೇ ಲೆಕ್ಕಕ್ಕೆ ತೆಗೆದುಕೊಳ್ಳುವುದಾದರೆ ಅವರು ʼದೇಶಪ್ರೇಮಿʼ ಸರಿ. ಕೊನೆಯ ಅರ್ಧವನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳುವುದಾದರೆ ಅವರುʼ ದೇಶದ್ರೋಹಿʼ ಎನ್ನುವುದು ಸರಿ. ಇಡೀ ಜೀವನವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಾದರೆ? ಪ್ರಶ್ನೆ ಪ್ರಶ್ನೆಯೇ! ಇಂತಹ ಸಾವರ್ಕರ್‌ ಅವರನ್ನು ರಾಷ್ಟ್ರೀಯ ನಾಯಕರನ್ನಾಗಿ ಮಾಡುವ ಕೆಲಸಗಳು ರಾಜಕೀಯ ಪ್ರೇರಿತವಾದವುಗಳು ಮತ್ತು ಅವುದ ತೀರಾ ಇತ್ತೀಚಿನವು. ಮೊದಲೇ ಹೇಳಿದಂತೆ ಅವರ ಸಾವಿನವರೆಗೂ ಅಂತಹ ಆಲೋಚನೆ ಯಾರಿಗೂ ಇರಲಿಲ್ಲ. ಮಹಾರಾಷ್ಟ್ರದಲ್ಲಿ ಅವರದ್ದೇ ಸರ್ಕಾರವಿದ್ಧಾಗ್ಯೂ ಅವರ ಭಾವಚಿತ್ರವನ್ನು ಅಲ್ಲಿನ ವಿಧಾನಸೌಧದಲ್ಲಿ ಹಾಕುವ ವಿಷಯ ಪ್ರಸ್ತಾಪವಾಗಲಿಲ್ಲ. ಈಗ ಅವರನ್ನು ಬೇರೆಯದೇ ಅದ ಕಾರಣಕ್ಕಾಗಿ ಮುನ್ನೆಲೆಗೆ ತರಲಾಗುತ್ತಿದೆ.

ಅದರೆ ನಮಗೆಲ್ಲ ಸ್ಪಷ್ಟವಾಗಿ ತಿಳಿದಿರಬೇಕಾದ ಸಂಗತಿಯೆಂದರೆ ಸಾವರ್ಕರ್‌ ಅವರು ಪ್ರತಿಪಾದಿಸಿದ ʻಹಿಂದೂರಾಷ್ಟ್ರʼ ಅದರಲ್ಲಿಯೂ ಅಖಂಡ ಭಾರತʼ ನಿರ್ಮಾಣ ಕನಸಿನಲ್ಲಿಯೂ ಸಾಧ್ಯವಿಲ್ಲದ ಸಂಗತಿ. ಅಖಂಡ ಭಾರತ ನಿರ್ಮಾಣವೆಂದರೆ ಈಗಿನ ಪಾಕಿಸ್ತಾನ, ಅಫಘಾನಿಸ್ತಾನ, ನೇಪಾಳ, ಭರ್ಮಾ, ಬಾಂಗ್ಲಾದೇಶ ಇವೆಲ್ಲ ಕೂಡಿಕೊಳ್ಳುವುದು. ಇದು ಆಗುಹೋಗುವ ಸಂಗತಿಯಲ್ಲ. ವಾಸ್ತವ ಸಂಗತಿ ಎಷ್ಟು ಕಠಿಣವಾಗಿದೆ ಎಂದರೆ ಇಡೀ ಭಾರತವನ್ನು ಹಿಂದೂರಾಷ್ಟ್ರ ಮಾಡುವುದು ಒತ್ತಟ್ಟಿಗಿರಲಿ; ಒಂದು ಸಣ್ಣ ಊರನ್ನು ʻಹಿಂದೂಹಳ್ಳಿʼಯನ್ನಾಗಿ ಮಾಡುವುದೂ ಸುಲಭವಾಗಿಲ್ಲ. ಎಲ್ಲ ಊರಿನಲ್ಲಿಯೂ ಮುಸ್ಲಿಮರಿದ್ದಾರೆ. ಅವರಿಲ್ಲದಿದ್ದರೆ ನಾವು ಹಿಂದುಗಳಲ್ಲ ಎಂದು ಹೇಳುವ, ಜೈನರು, ಬೌದ್ಧರು, ಲಿಂಗಾಯತರಾದರೂ ಇದ್ದಾರೆ. ಇವರ್ಯಾರೂ ಇಲ್ಲದಿದ್ದರೆ ʼಧಾರ್ಮಿಕ ನಂಬಿಕೆಯಿಲ್ಲದ ಜನವಂತೂ ಇದ್ದೇ ಇದ್ದಾರೆ. ಹೀಗಾಗಿ ಇದೊಂದು ಹುಚ್ಚು ಆಲೋಚನೆಯಲ್ಲದೇ ಮತ್ತೇನೂ ಅಲ್ಲ. ಹಾಗಾಗಿ ನಮ್ಮ ಜನತೆ ಇಡೀ ಪ್ರಪಂಚವನ್ನೇ ಇಸ್ಲಾಮಿಕ್‌ ಸ್ಟೇಟ್‌ ಮಾಡುತ್ತೇವೆ ಎನ್ನುವ ಹುಚ್ಚರನ್ನು ತಿರಸ್ಕರಿಸಿದಂತೆ ಇಡೀ ದೇಶವನ್ನು ಹಿಂದೂರಾಷ್ಟ್ರಮಾಡುತ್ತೇವೆ ಎನ್ನುವ ಈ ವೀರಾವೇಶಿಗಳನ್ನೂ ತಿರಸ್ಕರಿಸಬೇಕು. ಮತ್ತು ನಮ್ಮ ಮುಂದೆ ಇರುವ ಆಯ್ಕೆಗಳು ಎರಡೇ ಎರಡು ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಅವೆಂದರೆ, ಒಂದು ಪರಸ್ಪರ ಹೊಂದಿಕೊಂಡು ಬದುಕುವುದು; ಇನ್ನೊಂದು ಹೊಡದಾಡಿಕೊಂಡು ಸಾಯುವುದು. ಇವುಗಳಲ್ಲಿ ನಮ್ಮ ಆಯ್ಕೆ ಯಾವಾಗಲೂ ಮೊದಲನೆಯದೇ ಆಗಿರಲಿ.

*****

೨೮-೦೫-೨೦೨೫

 

Wednesday, May 21, 2025

ಮಾದರಿ ಮಹಾಕಾವ್ಯಮಂದಿರ ʻತುಳಸಿ ಭವನʼ

 ಮಾದರಿ ಮಹಾಕಾವ್ಯಮಂದಿರ ʻತುಳಸಿ ಭವನʼ


ಇಡೀ ಉತ್ತರ ಭಾರತದಲ್ಲಿ ಬಹಳಷ್ಟು ಜನಪ್ರಿಯವಾಗಿರುವ ರಾಮಾಯಣವೆಂದರೆ ಅದು ತುಳಸಿ ರಾಮಾಯಣ ಎಂದು ಕರೆಯಲ್ಪಡುವ ʻಶ್ರೀ ರಾಮಚರಿತ ಮಾನಸʼ. ತಮ್ಮ ಇಡೀ ಮಹಾಕಾವ್ಯದಲ್ಲಿ ರಾಮನ ಅವತಾರದ ಬಗ್ಗೆ ಅವನ ಅತಿಮಾನುಷ ಶಕ್ತಿಯ ಬಗ್ಗೆ ಮನಸೋ ಇಚ್ಚೆ ವರ್ಣಿಸುವ ತುಳಸಿದಾಸರಿಗೆ ಕೊನೆಗೂ ತೃಪ್ತಿಯಾಗದೇ ʻರಾಮಪ್ರಭುವಿನ ಅತಿಮಾನುಷ ಶಕ್ತಿಯನ್ನು ಪೂರ್ಣಪ್ರಮಾಣದಲ್ಲಿ ನನ್ನಿಂದ ವರ್ಣಿಸಲು ಸಾಧ್ಯವಾಗಿಲ್ಲ; ಅದು ನನ್ನಿಂದ ಆಗದ ಕೆಲಸʼ ಎಂದು ತಮ್ಮ ಅಸಹಾಯಕತೆಯನ್ನು ಹೇಳಿಕೊಳ್ಳುತ್ತಾರೆ.


ಈ ಕಾವ್ಯದ ಒಂದು ಘಟನೆಯನ್ನು ನೆನಪು ಮಾಡಿಕೊಳ್ಳುವುದಾದರೆ ರಾಮ ಇನ್ನೂ ಚಿಕ್ಕಕೂಸು. ಕೌಸಲ್ಯೆ ಆ ಕೂಸನ್ನು ತೊಟ್ಟಿಲಲ್ಲಿ ಹಾಕಿರುತ್ತಾಳೆ. ಆ ಕಡೆ ಪೂಜೆ ಮಾಡಿ ದೇವರ ಮನೆಯಲ್ಲಿ ದೇವರಿಗೆ ನೈವೇದ್ಯವನ್ನು ಇಟ್ಟಿರುತ್ತಾಳೆ. ತುಸು ಹೊತ್ತಿನ ನಂತರ ದೇವರ ಮನೆಗೆ ಹೋಗಿ ಅವಳು ನೋಡಿದರೆ ತೊಟ್ಟಿಲ ಕೂಸು ಅಲ್ಲಿಗೆ ಬಂದು ನೈವೇದ್ಯವನ್ನು ತಿನ್ನುತ್ತಿರುತ್ತದೆ. ಆಶ್ಚರ್ಯದಿಂದ ಅವಳು ತೊಟ್ಟಿಲಿಗೆ ಬಂದು ನೋಡುತ್ತಾಳೆ. ಕೂಸು ಅಲ್ಲಿಯೂ ಇದೆ. ಒಂದೇ ಕೂಸು ಎರಡು ಕಡೆ ಇದೆ! ಇದರಿಂದ ಅವಕ್ಕಾದ ಕೌಸಲ್ಯೆಗೆ ಕೂಸೇ ಸಮಾಧಾನ ಮಾಡುತ್ತದೆ. ತನ್ನ ದಿವ್ಯದರ್ಶನ ಮಾಡುತ್ತದೆ. ದೇವರನ್ನೇ ಮಗುವಾಗಿ ಪಡೆದದ್ದಕ್ಕೆ ಕೌಸಲ್ಯೆಗೆ ಏಕಕಾಲಕ್ಕೆ ಹೆಮ್ಮೆಯೂ ಒಂದು ರೀತಿಯ ಕೀಳರಿಮೆಯೂ ಸಹಜವಾಗಿ ಆಗುತ್ತವೆ. ʻಅಯ್ಯೋ ದೇವ, ಮೂರು ಲೋಕವನ್ನೂ ಸಲಹುವ ನಿನ್ನನ್ನೇ ಸಲಹುವ ಕೆಲಸ ನನಗೆ ಬಂತೇ?ʼ ಎಂದು ಅವಳು ತನ್ನ ಅಳಲನ್ನು ತೋಡಿಕೊಳ್ಳುತ್ತಾಳೆ. ರಾಮ ತನ್ನ ದಿವ್ಯದರ್ಶನ ತೋರಿಸಿ ತಾನು ದೇವರ ಅವತಾರಿ ಎಂಬುದನ್ನು ಯಾರಿಗೂ ಹೇಳಬೇಡ ಎಂದು ಕೌಸಲ್ಯೆಗೆ ಹೇಳುತ್ತಾನೆ. ಅವಳು ʼಆಗಲಿ ಪ್ರಭುʼ ಎಂದು ನಮಸ್ಕರಿಸುತ್ತಾಳೆ.


ಹೀಗೆ ಇಡೀ ಕಾವ್ಯದ ತುಂಬ ರಾಮನ ಅವತಾರದ ಗುಣಗಾನ ಮಾಡುವ ತುಳಸಿದಾಸರ ಮಹಾಕಾವ್ಯ ತನ್ನ ಕಾವ್ಯ ಸೌಂದರ್ಯಕ್ಕಾಗಿ, ವರ್ಣನೆಗಳಿಗಾಗಿ ನಮ್ಮ ಮನಸ್ಸನ್ನು ಸೆಳೆಯುವುದು ನಿಜವಾದರೂ ತಾತ್ವಿಕವಾಗಿ ಅದು ನನ್ನಂಥವರಿಗೆ ಅಷ್ಟೇನೂ ಖುಷಿಕೊಡುವ ಕಾವ್ಯವಲ್ಲ. ಏಕೆಂದರೆ ರಾಮಾವತಾರ ಏತಕ್ಕಾಗಿ ಆಯಿತು ಎಂದು ಹೇಳುವಾಗ ತುಳಸಿದಾಸರು, ಧೇನು ಮತ್ತು ಬ್ರಾಹ್ಮಣರ ಉದ್ಧಾರಕ್ಕಾಗಿ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಮತ್ತು ಇಡೀ ಕಾವ್ಯದಲ್ಲಿ ಅದೇ ಕೆಲಸವನ್ನು ಅವರು ರಾಮನಿಂದ ಮಾಡಿಸುತ್ತಾರೆ. ತಾತ್ವಿಕವಾಗಿ ಏನೇ ಭಿನ್ನಾಭಿಪ್ರಾಯವಿದ್ದರೂ ಒಂದು ಸಾಹಿತ್ಯ ಕೃತಿಯಾಗಿ ಓದುವ ಖುಷಿಯನ್ನು ತುಳಸಿ ರಾಮಾಯಣ ಕೊಡುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.

ರಾಮಚರಿತ ಮಾನಸದ ತುಳಸಿದಾಸರಿಗೂ ವಾರಣಾಸಿಗೂ ಬಿಡದ ಸಂಬಂಧ. ಈ ಕಾರಣದಿಂದಲೋ ಏನೋ ವಾರಣಾಸಿ(ಕಾಶಿ)ಯಲ್ಲಿ ಅವರಿಗೆ ಮತ್ತು ಅವರ ಕಾವ್ಯಕ್ಕೆ ಎಂದೇ ಒಂದು ಬೃಹತ್‌ ಮಂದಿರ ನಿರ್ಮಾಣವಾಗಿದೆ. ಮೊನ್ನೆ ಉತ್ತರ ಪ್ರದೇಶದಲ್ಲಿ ಪ್ರವಾಸದಲ್ಲಿದ್ದ ನಾನು ಈ ಮಂದಿರವನ್ನು ನೋಡಲು ಹೋಗಿದ್ದೆ. ಎರಡು ಅಂತಸ್ತಿನ ಈ ಮಂದಿರದ ವಿಶೇಷತೆ ಎಂದರೆ ಎರಡೂ ಅಂತಸ್ತಿನ ಸುತ್ತಲ ಇಡೀ ಕಟ್ಟಡದ ಒಳಭಾಗದ ಗೋಡೆಗಳನ್ನು ಅಮೃತಶಿಲೆಯಲ್ಲಿ ರಾಮಚರಿತ ಮಾನಸ ಮಹಾಕಾವ್ಯದ ಮೂಲ ಕಾವ್ಯದ ಎಲ್ಲ ಶ್ಲೋಕಗಳು ಮತ್ತು ಅವುಗಳ ಸರಳ ಅರ್ಥವನ್ನು ಕೆತ್ತಿಸಿ ಹಾಕಿರುವುದು. ಕವಿಗಳ ಕಾವ್ಯಗಳ ಕೆಲವು ಮುಖ್ಯ ಭಾಗಗಳನ್ನು ಗೋಡೆಗಳ ಮೇಲೆ ಹಾಕಿಸುವುದು ಸಾಮಾನ್ಯ ಸಂಗತಿ. ಕುಪ್ಪಳಿಯಲ್ಲಿ ಕುವೆಂಪು ಸ್ಮಾರಕ ಭವನದಲ್ಲಿ ಕೂಡ ಹೀಗೆ ಕಲ್ಲಿನಲ್ಲಿ ಕವಿಯ ಕಾವ್ಯಸೂಕ್ತಿಗಳನ್ನು ಕೆತ್ತಿಸಿ ಹಾಕಲಾಗಿದೆ. ಆದರೆ ಒಬ್ಬ ಕವಿಯ ಇಡೀ ಮಹಾಕಾವ್ಯವನ್ನೇ ಅದರಲ್ಲೂ ಅರ್ಥದ ಸಮೇತ ಹೀಗೆ ಕಲ್ಲಿನಲ್ಲಿ ಕೆತ್ತಿಸಿ ಹಾಕಿರುವುದು ಅಪರೂಪ. ಇದು ನಾನು ಕಂಡ ಏಕೈಕ ಉದಾಹರಣೆ. ಸಮಯ ವಿದ್ದವರು ಈ ಮಂದಿರದಲ್ಲಿ ನಿಂತು ಕುಂತು ಇಡೀ ಕಾವ್ಯವನ್ನೇ ಓದಬಹುದು!

ಹೀಗೆ ಇಡೀ ಕಾವ್ಯವನ್ನು ಗೋಡೆಗಳಲ್ಲಿ ಕೆತ್ತಿರುವುದರ ಜೊತೆಗೆ ಕೆಳ ಅಂತಸ್ತಿನಲ್ಲಿ ಸ್ವತಃ ಕಾವ್ಯವನ್ನು ತುಳಸೀದಾಸರು ಓದಿಹೇಳುತ್ತಿರುವಂತೆ ತಂತ್ರಜ್ಞಾನಬಳಸಿ ಹಾವ ಭಾವ ಧ್ವನಿ ಇವುಗಳನ್ನೊಳಗೊಂಡ ತುಳಸೀದಾಸರ ಪ್ರತಿಕೃತಿ ಮಾಡಿದ್ದಾರೆ. ಆ ಮೂರ್ತಿಯ ಮುಂದೆ ಹೋಗಿ ನಿಂತರೆ ಅವರು ನಮಗೆ ಮಹಾಕಾವ್ಯದ ಹಾಳೆಗಳನ್ನು ತಿರುವುತ್ತಾ ತಮ್ಮ ಕಾವ್ಯವ
ನ್ನು ನಮಗೆ ಓದಿ ಹೇಳುತ್ತಿರುವ ಮತ್ತು ನಾವು ಆಸ್ವಾದಿಸುತ್ತಿರುವ ಅನುಭವವಾಗುತ್ತದೆ.


ಕಟ್ಟಡದ ಮೇಲಂತಸ್ತಿನಲ್ಲಿ ತುಳಸಿ ರಾಮಾಯಣದಲ್ಲಿ ಬರುವ ಪ್ರಮುಖ ಘಟನೆಗಳ ಚಲನಶೀಲ ಗೊಂಬೆಗಳ ದೃಶ್ಯಾವಳಿಗಳನ್ನು ನಿರ್ಮಿಸಿದ್ದಾರೆ. ಸೀತಾ ಸ್ವಯಂವರ, ಶ್ರೀರಾಮ ಪಟ್ಟಾಭಿಷೇಕ, ಅತ್ರಿಮುನಿಗಳ ದರ್ಶನ, ಅಹಲ್ಯಾ ಪ್ರಕರಣ, ಸೀತಾಪರಹಣ, ರಾಮರಾವಣರ ಯುದ್ಧ ಹೀಗೆ ಅನೇಕ ಚಿತ್ರಾವಳಿಗಳು ದೃಶ್ಯಾವಳಿಗಳಾಗಿ ಇಲ್ಲಿ ರೂಪುಗೊಂಡು ಇಡೀ ರಾಮಾಯಣ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಮಾಡಿವೆ. ಓದಲು ಆಗದವರು ಇವನ್ನು ನೋಡಿ ಆನಂದಿಸಬಹುದು.


ತುಳಸಿದಾಸರ ಕಾವ್ಯದ ತಾತ್ವಿಕತೆಯ ಬಗ್ಗೆ ನಮಗೆ ವಿರೋಧವಿದ್ದರೂ ಒಂದು ಕಾವ್ಯವನ್ನು ಹೇಗೆಲ್ಲ ಜನರಿಗೆ ಮುಟ್ಟಿಸಬಹುದು ಎಂಬುದಕ್ಕೆ ಈ ಮಂದಿರ ಒಂದು ಉತ್ತಮ ಮಾದರಿ ಎನ್ನುವುದರಲ್ಲಿ ಅನುಮಾನವಿಲ್ಲ. ಬಹಳ ಒಳ್ಳೆಯ ಪ್ರಯತ್ನ. ಮತ್ತು ಇತರೆ ಭಾಷೆಗಳ ದೊಡ್ಡ ಕವಿಗಳ ಹೆಸರಲ್ಲಿರುವ ಟ್ರಸ್ಟ್‌ ಗಳೂ ತಮ್ಮ ತಮ್ಮ ಕವಿಗಳ ಬಗ್ಗೆ ಇಂಥದ್ದೇನನ್ನಾದರೂ ಮಾಡಬಹುದೇ ಎಂದು ಆಲೋಚಿಸಲು ಇದು ಒಂದು ಮಾದರಿ ಆಗಿರುವುದಂತೂ ಸತ್ಯ!


ಡಾ. ರಾಜೇಂದ್ರ ಬುರಡಿಕಟ್ಟಿ
೧೬-೦೫-೨೦೨೫

Monday, May 19, 2025

ಯುದ್ಧತುರಿಕೆಯ ಹೊತ್ತಲ್ಲಿ ಬುದ್ಧನಾಡಲ್ಲಿ ಪಯಣ

ಯುದ್ಧತುರಿಕೆಯ ಹೊತ್ತಲ್ಲಿ ಬುದ್ಧನಾಡಲ್ಲಿ ಪಯಣ

ಡಾ. ರಾಜೇಂದ್ರ ಬುರಡಿಕಟ್ಟಿ

ಸುಜನಾ ಅವರ ʻಯುಗಸಂಧ್ಯಾʼ ಎಂಬ ಮಹಾಕಾವ್ಯ ಮಹಾಭಾರತದ ಯುದ್ಧಾನಂತರದ ಸಾವು ನೋವುಗಳ ಧಾರುಣ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ನೀಡಿ ಯುದ್ಧದ ಪರಿಣಾಮಗಳ ಭೀಕರತೆಯನ್ನು ಮನದಟ್ಟುಮಾಡಿಸುತ್ತದೆ. ಕುವೆಂಪು ಅವರ ʻಸ್ಮಶಾನ ಕುರುಕ್ಷೇತ್ರಂʼ ನಾಟಕವಂತೂ ಈ ಯುದ್ಧಗಳು ಉಂಟುಮಾಡುವ ಕಷ್ಟನಷ್ಟಗಳು, ದುಕ್ಕ ದುಮ್ಮಾನಗಳನ್ನು ಎಳೆಎಳೆಯಾಗಿ ಬಿಡಿಸಿ ಹೇಳುತ್ತದೆ. ಸಾರಾ ಅಬೂಬಕ್ಕರ್‌ ಅವರ ʼಯುದ್ಧʼ ಕಥೆ ಈ ಯುದ್ಧದಲ್ಲಿ ಸಿಕ್ಕಿಹಾಕಿಕೊಂಡ ಸಾಮಾನ್ಯ ಕುಟುಂಬವೊಂದರ ಸಂಕಟವನ್ನು ಮನಸ್ಸಿಗೆ ತಟ್ಟುವಂತೆ ಕಟ್ಟಿಕೊಡುತ್ತದೆ ಮತ್ತು ವೈರತ್ವದ ಗಡಿರೇಖೆಗಳನ್ನೂ ಮೀರಿ ಮಾನವೀಯತೆ ಹೇಗೆ ಕೆಲಸ ಮಾಡಬೇಕು ಎಂಬುದನ್ನು ಎತ್ತಿತೋರಿಸುತ್ತದೆ. ಇಂತಹ ಸಾಹಿತ್ಯ ಕೃತಿಗಳನ್ನು ಓದಿಕೊಂಡವರು ಹಾಗಲ್ಲದಿದ್ದರೂ ಕೊನೆಯ ಪಕ್ಷ ಅವನ್ನು ಕೇಳಿ ತಿಳಿದವರು, ಅವುಗಳಿಂದ ಪ್ರಭಾವಿತರಾದವರು ಯುದ್ಧದ ಕರಾಳತೆಯನ್ನು ಚೆನ್ನಾಗಿಯೇ ಯೋಚಿಸಬಲ್ಲರು. ಹೀಗಾಗಿಯೇ ಭಾರತ ಪಾಕಿಸ್ತಾನಗಳು ಇತ್ತೀಚೆಗೆ ತುದಿಗಾಲಿನಲ್ಲಿ ಯುದ್ದಕ್ಕೆ ನಿಂತಿರುವ ಸಂದರ್ಭದಲ್ಲಿ ಅವರು ಭಾರತ ಯುದ್ದಕ್ಕೆ ಮುನ್ನುಗ್ಗುವುದನ್ನು ಬೆಂಬಲಿಸಲಿಲ್ಲ. ಹಾಗಾಗಿ ಅವರೆಲ್ಲ ʻಯುದ್ಧ ಬೇಡʼ ಎಂದೇ ಹೇಳಿದರು.

ಆದರೆ ಅಂಥವರನ್ನೆಲ್ಲ ʻಹೇಡಿಗಳುʼ ಎಂದೋ ʼದೇಶ ವಿರೋಧಿಗಳುʼ ಎಂದೋ ಬಿಂಬಿಸಿ ಹಳಿಯುವ ದೊಡ್ಡ ʻದೇಶಭಕ್ತ ಜನವರ್ಗʼವೊಂದು ನಮ್ಮಲ್ಲಿ ಸಕ್ರಿಯವಾಗಿದೆ. ಈ ಜನವರ್ಗವನ್ನು ಒಂದು ದೇಶಪ್ರೇಮಿ ವರ್ಗ ಅನ್ನುವುದಕ್ಕಿಂತ ʻರಾಜಕೀಯ ಪ್ರೇರಿತ ಜನವರ್ಗʼ ಎನ್ನುವುದೇ ಸರಿ. ಏಕೆಂದರೆ ಈ ವರ್ಗದವರ ಆಲೋಚನೆಯಲ್ಲಿ ಒಂದು ದೃಢತೆಯಾಗಲೀ ಸ್ಪಷ್ಟತೆಯಾಗಲೀ ಇದ್ದಂತಿಲ್ಲ. ವಿಚಾರವಾದಿಗಳು ʻಯುದ್ಧ ಬೇಡʼ ಎನ್ನುವಲ್ಲಿ ಅವರಿಗೆ ತಮ್ಮ ಆಲೋಚನೆಯ ಬಗ್ಗೆ ಒಂದು ದೃಢತೆ ಮತ್ತು ಸ್ಪಷ್ಟತೆ ಇದೆ. ಅದನ್ನು ಒಪ್ಪಿಕೊಳ್ಳುವುದು ಬಿಡುವುದು ಬೇರೆ. ಆದರೆ ಅದಕ್ಕೆ ವಿರುದ್ಧವಾಗಿ ಇವರು ಯಾವಾಗಲೂ ʻಯುದ್ಧ ಬೇಕುʼ ಎನ್ನುವ ವಾದಕ್ಕೆ ಅಂಟಿಕೊಳ್ಳಲಿಲ್ಲ. ಇವರು ಒಪ್ಪಿಕೊಂಡಿರುವ ಜನನಾಯಕರು ಯುದ್ಧಕ್ಕೆ ಮುಂದಾದಾಗ ಇವರೆಲ್ಲ ʻಅದೇ ಸರಿʼ ಎಂದು ವಾದಮಾಡಿದರೆ ಅವರು ಯುದ್ಧದಿಂದ ಹಿಂದಕ್ಕೆ ಹೆಜ್ಜೆ ಇಟ್ಟಾಗ ʻಇದೇ ಸರಿʼ ಎಂದು ಪ್ಲೇಟು ಬದಲಿಸಿ ವಾದಮಾಡಿದರು! ʻಅದು ಒಂದು ತಂತ್ರʼ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು. ಹಾಗೆ ಬಂದರೆ ಹಾಗೆ; ಹೀಗೆ ಬಂದರೆ ಹೀಗೆ! ಇವರೆಲ್ಲ ಮಳೆ ಬಂದ ಕಡೆ ಕೊಡೆ ಹಿಡಿಯುವವರು!



ಯುದ್ಧ ವಾಸ್ತವವಾಗಿ ಗಡಿಯಲ್ಲಿ ನಡೆಯಿತೋ ಇಲ್ಲವೋ ಆದರೆ ನಮ್ಮ ಕೆಲವು ಟಿವಿ ಚಾನೆಲ್‌ ಗಳಂತೂ ಈ ವಿಷಯವನ್ನು ಹಿಡಿದುಕೊಂಡು ದಿನಗಟ್ಟಲೆ ತೌಡುಕುಟ್ಟುತ್ತಾ ತಾವೇ ಸ್ವತಃ ರಣರಂಗದಲ್ಲಿ ನಿಂತು ವರದಿಮಾಡುತ್ತಿರುವಂತೆ ಫೋಜುಕೊಡುತ್ತಾ ಜನರಲ್ಲಿ ಅನಗತ್ಯವಾದ ದ್ವೇಷ ಅಸೂಯೆ, ಕೋಪಗಳಂತಹ ನಕಾರಾತ್ಮಕ ಭಾವನೆಗಳು ಉದ್ಧೀಪನವಾಗುವಂತೆ ಮಾಡಿ ನಮ್ಮ ನಮ್ಮಲ್ಲಿಯೇ ʻಮೌಖಿಕಯುದ್ಧʼಮಾಡಿಸಿದವು! ಇನ್ನು ನಮ್ಮ ಜನ ಸಾಮಾಜಿಕ ಜಾಲತಾಣದಲ್ಲಿಯಂತೂ ಕಳೆದ ಮೂರುನಾಲ್ಕು ವಾರಗಳ ಕಾಲ ʻಅಕ್ಷರಯುದ್ಧʼ ಮಾಡಿ ಈಗ ಪ್ರಕ್ಷುಬ್ಧ ಸಾಗರವು ಶಾಂತವಾಗುವಂತೆ ಆಗಿದ್ದಾರೆ. ಅದರಲ್ಲಿ ನಮ್ಮ ಕೆಲವು ʻದೇಶಭಕ್ತʼರಂತೂ ತಾವೇ ಈಗ ಯುದ್ಧಭೂಮಿಗೆ ಹೊರಡಲು ಸಿದ್ಧರಿರುವವರಂತೆ ತೊಡೆತಟ್ಟಿ ವೀರಾವೇಶ ತೋರುತ್ತಿದ್ದದ್ಧಂತೂ ಬಹಳ ತಮಾಸೆಯಾಗಿ ಕಾಣುತ್ತಿತ್ತು. ಬಹುಶಃ, ಪ್ರಜಾಪ್ರಭುತ್ವ ವ್ಯವಸ್ಥೆಯೊಂದರ ಅಂಗವಾಗಿರುವ ದೇಶದ ಪ್ರಜೆಗಳಿಗೆ ಹಾಗೆ ನೇರವಾಗಿ ಯುದ್ಧದಲ್ಲಿ ಭಾಗವಹಿಸಲು ಆಗುವುದಿಲ್ಲವೆಂಬ ಖಾತರಿಯಿಂದಲೇ ಇವರು ಹೀಗೆಲ್ಲ ಮಾಡಿದ್ದೂ ಇದ್ದೀತು! ಇವರೆಲ್ಲರದೂ ಯುದ್ಧಪ್ರೇರಿತ ರಾಷ್ಟ್ರಭಕ್ತಿ. ಯುದ್ಧರಂಗದಿಂದ ಸಾಕಷ್ಟು ದೂರದಲ್ಲಿ ಸುರಕ್ಷಿತ ಅಂತರದಲ್ಲಿ ನಿಂತುಕೊಂಡು ಈ ಯುದ್ಧಪ್ರೇರಿತ ದೇಶಭಕ್ತಿಯನ್ನು ಮೈಮೇಲೆ ಆವಾಹಿಸಿಕೊಂಡು ನಾವು ಯುದ್ಧಹುಮ್ಮಸ್ಸನ್ನು ತೋರುವುದು ಬೇರೆ; ಯುದ್ಧರಂಗದಲ್ಲಿ ಸಿಕ್ಕಿಹಾಕಿಕೊಂಡು ನಮ್ಮದಲ್ಲದ ತಪ್ಪಿಗಾಗಿ ನಾವು ನರಳಾಡುವುದು ಬೇರೆ. ಬಹುತೇಕ ಯುದ್ಧಗಳು ನಡೆದಾಗ ಅವುಗಳಿಂದ ಸಂಕಷ್ಟಕ್ಕೆ ಈಡಾಗುವ ಬಹುತೇಕ ಜನ ಯುದ್ಧಕ್ಕೆ ಯಾವರೀತಿಯಿಂದಲೂ ಕಾರಣವಲ್ಲದ ಅಮಾಯಕರೇ ಆಗಿರುತ್ತಾರೆ; ಅದು ಯಾವ ಕಡೆಗೇ ಆಗಲಿ. ಆದರೆ ಯುದ್ಧಪ್ರೇರಿತ ರಾಷ್ಟ್ರಭಕ್ತಿಯ ಸಾಮಾನ್ಯ ಲಕ್ಷಣ ಎಂದರೆ ಹೀಗೆ ತಮ್ಮದಲ್ಲದ ತಪ್ಪಿನಿಂದ ಯುದ್ಧಕ್ಕೆ ಸಿಲುಕಿಕೊಂಡು ಸಾವುನೋವುಗಳನ್ನು ಅನುಭವಿಸುವ ಅಮಾಯಕರ ಬಗೆಗೆ ನಮ್ಮ ಅಂತರಾಳದಲ್ಲಿ ಸಹಜವಾಗಿ ಇರುವ ʻಮಿಡಿಯುವ ಮಾನವೀಯತೆʼಯನ್ನು ಕೊಂದುಹಾಕುವುದು! ಮತ್ತು ʻದೇಶಭಕ್ತಿʼಯ ಹೆಸರಿನಲ್ಲಿ ನಮ್ಮನ್ನು ಎಷ್ಟು ಸಾಧ್ಯವೋ ಅಷ್ಟು ಕ್ರೂರಿಗಳನ್ನಾಗಿ ಮಾಡುವುದು!

ಹೀಗೆ ಒಂದು ವ್ಯವಸ್ಥೆಯೆಲ್ಲ ಯುದ್ಧದ ತುರಿಕೆ ಹಚ್ಚಿಕೊಂಡು ಮೈಕೈ ಕೆರೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಯುದ್ಧದ ಕಾರಣದಿಂದಲೇ, ʻಯುದ್ಧ ಬೇಡʼ ಎಂದದ್ದಕ್ಕೇ ಮನೆಬಿಡಬೇಕಾಗಿ ಬಂದ ಮತ್ತು ಆ ಮೂಲಕ ತನ್ನ ದೀರ್ಘ ತಪಸ್ಸಿನ ಮೂಲಕ ಈ ಜಗತ್ತನ್ನು ಕಾಡುತ್ತಿರುವ ಸಮಸ್ಯೆಗಳನ್ನು ದೇವರ ಸಹಾಯವಿಲ್ಲದೇ ಮನುಷ್ಯರಾದ ನಾವೇ ನಮ್ಮ ತಿಳಿವಳಿಕೆ ಮತ್ತು ಪರಿಶ್ರಮ ಪೂರ್ಣ ಕಾರ್ಯಗಳಿಂದ ಬಗೆಹರಿಸಿಕೊಳ್ಳಬಹುದು ಮಾತ್ರವಲ್ಲ ಬಗೆಹರಿಸಿಕೊಳ್ಳಬೇಕುʼ ಎಂಬ ಅಭೂತಪೂರ್ವ ಸಂದೇಶವನ್ನು ಜಗತ್ತಿಗೆ ಮೊಟ್ಟಮೊದಲ ಬಾರಿಗೆ ಸಾರಿ ಹೇಳಿದ ಜಗತ್ತುಕಂಡ ಮಹಾನ್‌ ಚಿಂತಕ, ದಾರ್ಶನಿಕ ಗೌತಮ ಬುದ್ಧನ ನಾಡಿನಲ್ಲಿ ನಾನು ಮತ್ತು ನನ್ನ ಹೆಂಡತಿ ತಿರುಗಾಡುತ್ತಿದ್ದೆವು. ಈ ವರ್ಷದ ಬುದ್ಧಪೂರ್ಣಿಮೆಯ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸಲೆಂದು ಸಿದ್ಧಾರ್ಥನಿಗೆ ಜ್ಞಾನೋದಯವಾಗಿ ಬುದ್ಧನಾದ ಎಂದು ಹೇಳಲಾಗುವ ಬಿಹಾರ ರಾಜ್ಯದ ಗಯಾ ಜಿಲ್ಲೆಯ ಬೋಧಗಯಾದ ಭೋಧಿವೃಕ್ಷ ಸ್ಥಳಕ್ಕೆ (ಮಹಾಬೋಧಿ ವಿಹಾರ) ಹೋಗಿದ್ದೆವು. ಅಲ್ಲಿಗೆ ಬರುವುದಕ್ಕೂ ಹಿಂದಿನ ದಿನ ಬುದ್ಧನು ಮೊಟ್ಟಮೊದಲು ತನ್ನ ಬೋಧನೆಯನ್ನು ಆರಂಭ ಮಾಡಿದ ಉತ್ತರ ಪ್ರದೇಶದ ವಾರಣಾಸಿ ಬಳಿಯ ಸಾರಾನಾಥಕ್ಕೂ ಹೋಗಿ ಅಲ್ಲಿನ ದೇವಾಲಯಗಳು ಸ್ಥೂಪ ಮತ್ತು ನವೀಕೃತ ಕೃತಕ ಅಶೋಕಸ್ಥಂಭ ಇವುಗಳ ದರ್ಶನ ಮಾಡಿಕೊಂಡು ಬಂದಿದ್ದೆವು.

ನಾವು ಬೆಳಿಗ್ಗೆ ಗಯಾದಿಂದ ಬೋಧಗಯಾಕ್ಕೆ ಹೋಗಬೇಕಾಗಿತ್ತು. ಗಯಾದಿಂದ ಸುಮಾರು ಹದಿನೈದು ಕಿಲೋ ಮೀಟರ್‌ ದೂರದಲ್ಲಿರುವ ಬೋಧಗಯಾಕ್ಕೆ ಹೋಗಲಿಕ್ಕೆ ಬಸ್ಸುಗಳ ಮತ್ತು ಸವಾರಿ ಆಟೋಗಳ ವ್ಯವಸ್ಥೆ ಇದೆಯಾದರೂ ಅವು ನಮ್ಮ ಅನುಕೂಲಕ್ಕೆ ಹೊಂದಿಕೆ ಆಗದಿದ್ದಕ್ಕೆಇಡೀ ದಿನಕ್ಕೆ ಒಂದೂವರೆ ಸಾವಿರ ಕೊಟ್ಟು ಒಂದು ಆಟೋ ಗೊತ್ತುಮಾಡಿಕೊಂಡು ಹೊರಟೆವು. ಬೋಧಗಯಾಕ್ಕೆ ಹೋದಾಗ ಬೆಳಿಗ್ಗೆ ಎಂಟುಗಂಟೆಯಾಗಿತ್ತಾದರೂ ನಮ್ಮಲ್ಲಿ ಮಧ್ಯಾಹ್ನ ಹನ್ನೆರಡು-ಒಂದು ಗಂಟೆಯ ವೇಳೆ ಇರುವ ಬಿಸಿಲು ಇತ್ತು. ಬುದ್ಧಪೂರ್ಣಿಮೆಯ ದಿನವನ್ನು ಆಚರಿಸಲು ಇಡೀ ಬೋಧಗಯಾ ಅಲಂಕೃತಗೊಂಡಿತ್ತು.

ನಾವು ಬೋಧಗಯಾದಲ್ಲಿ ಮೊದಲು ಹೋದದ್ದು ಬೃಹತ್‌ ಬುದ್ಧನ ವಿಗ್ರಹವನ್ನು. ಈ ವಿಗ್ರಹ ಇಡೀ ಬೋಧಗಯಾದ ಒಂದು ಮಹತ್ವದ ಆಕರ್ಷಣ ಸ್ಥಳ. ೧೯೮೯ ರಲ್ಲಿ ಜಪಾನಿನ ದಾನಿಯೊಬ್ಬರು ಈ ವಿಗ್ರಹವನ್ನು ಮಾಡಿಸಿದ್ದಾರೆ. ಹಣಕಾಸಿನ ಖರ್ಚು ಅವರದ್ದಾದರೂ ಅದನ್ನು ಕೆತ್ತಿದವರು ನಮ್ಮ ಉತ್ತರ ಪ್ರದೇಶದ ಶಿಲ್ಪಿಗಳು. ಉದ್ಘಾಟಿಸಿದ್ದು ದಲಾಯಿಲಾಮ. ಈ ಬೃಹತ್‌ ಬುದ್ಧನ ವಿಗ್ರಹದ ಪಕ್ಕದಲ್ಲಿಯೇ ಆತನ ಪ್ರಥಮ ಹಂತದ ಐದು ಜನ ಶಿಷ್ಯರ ಶಿಲಾಮೂರ್ತಿಗಳನ್ನೂ ಕೆತ್ತಲಾಗಿದೆ. ಅವೂ ಸಾಕಷ್ಟು ದೊಡ್ಡ ಮೂರ್ತಿಗಳೇ ಆದರೂ ಬುದ್ಧನ ಮೂರ್ತಿ ಅತ್ಯಂತ ದೊಡ್ಡದಿರುವುದರಿಂದ ಅದರ ಪಕ್ಕ ಅವು ತುಸು ಚಿಕ್ಕವಾಗಿ ಕಾಣುತ್ತವೆ ಅಷ್ಟೆ. ನಾವು ಹೋದಾಗ ಈ ಬೃಹತ್‌ ಬುದ್ಧನ ಮೂರ್ತಿಗೆ ಏನೋ ರಿಪೇರಿ ಕೆಲಸವೋ ಅಥವಾ ಹೆಚ್ಚುವರಿ ನಿರ್ವಹಣೆಯ ಕೆಲಸವೋ ನಡೆಯುತ್ತಿತ್ತಾದ್ದರಿಂದ ಅದರ ಎದುರು ನಿಂತು ಫೋಟೋ ತೆಗೆಸಿಕೊಳ್ಳುವ ನಮ್ಮ ಚಿಕ್ಕ ಆಸೆಗೆ ಆರಂಭದಲ್ಲಿ ತಣ್ಣೀರೆರಚಿದಂತೆ ಆಯಿತಾದರೂ ಅದು ತಕ್ಷಣವೇ ಬರೆಹರಿಯಿತು. ಅಲ್ಲಿಯೇ ಇದ್ದ ವೃತ್ತಿಛಾಯಾಗ್ರಾಹಕನೊಬ್ಬನ ಸಹಾಯವನ್ನು ಕೇಳಿದಾಗ ಅವನು ನಾನು ಮತ್ತು ನನ್ನ ಹೆಂಡತಿಯನ್ನು ಅದೇ ಮೂರ್ತಿಯ ಎದುರು ನಿಲ್ಲಿಸಿ ಆ ಕಂಬಿಗಳು ಬರದಂತೆಯೋ ಅಥವಾ ಮೊದಲೇ ತೆಗೆದಿದ್ದ ಬುದ್ಧನ ಮೂರ್ತಿಗೆ ನಮ್ಮ ಫೋಟೋ ಜೋಡಿಸಿಯೋ ಒಟ್ಟಿನಲ್ಲಿ ಹತ್ತು ನಿಮಿಷಗಳಲ್ಲಿ ನಮಗೆ ಎಂತಹ ಫೋಟೋ ಬೇಕಿತ್ತೋ ಅಂಥದ್ದನ್ನು ಮಾಡಿಕೊಟ್ಟ! ಅವನ ಕೈಗೆ ಎರಡು ನೂರು ರೂಪಾಯಿ ಇಟ್ಟು ಫೋಟೋ ತೆಗೆದುಕೊಂಡು ಮುಂದೆ ಹೊರಟೆವು.

ಬೋಧಗಯಾದಲ್ಲಿ ಸುತ್ತಾಡುವುದು ಅಂದರೆ ಬೌದ್ಧದರ್ಮದ ಪ್ರಭಾವವಿರುವ ಆಗ್ನೇಯ ಏಷ್ಯಾದ ರಾಷ್ಟ್ರಗಳನ್ನೆಲ್ಲ ಒಂದು ಸುತ್ತುಹಾಕಿಕೊಂಡು ಬಂದ ಸಣ್ಣ ಅನುಭವವಾಗುತ್ತದೆ. ಇಲ್ಲಿ ಭೂತಾನ್‌, ಜಪಾನ್‌, ಮೈನ್ಮಾರ್‌, ಟಿಬೇಟ್‌, ಥೈಲ್ಯಾಂಡ್‌, ಕೋರಿಯಾ, ಚೀನಾ, ಶ್ರೀಲಂಕಾ ಒಳಗೊಂಡಂತೆ ಅನೇಕ ದೇಶಗಳ ಜನರು ಸೇರುತ್ತಾರೆ. ಆ ದೇಶಗಳಲ್ಲಿ ಕೆಲವು ದೇಶಗಳ ಮಾಂಟೇಸರಿಗಳೂ ಇಲ್ಲಿವೆ. ಆಯಾ ದೇಶಗಳ ಸಂಸ್ಕೃತಿಯನ್ನು ಅನುಸರಿಸಿ ಇವು ಅಲ್ಪಸ್ವಲ್ಪ ಭಿನ್ನವಾಗಿ ರಚಿತವಾಗಿವೆಯಾದರೂ ಒಟ್ಟಾರೆಯಾಗಿ ನೋಡಿದರೆ ಬಹಳಷ್ಟು ವ್ಯತ್ಯಾಸವೇನೂ ಕಾಣುವುದಿಲ್ಲ. ಅಲ್ಲೆಲ್ಲ ಆಯಾ ದೇಶಗಳಲ್ಲಿನ ಬೌದ್ಧಧರ್ಮೀಯ ಆಚರಣೆಗಳು ನಡೆಯುತ್ತವೆ.


ಆಯಾ ದೇಶಗಳು ಧರ್ಮಗುರುಗಳು ಜೊತೆಗೆ ಒಂದಿಷ್ಟು ಜನ ನಮಗೆ ನೋಡಲು ಮತ್ತು ಮಾತನಾಡಲು ಸಿಗುತ್ತಾರೆ. ಇವುಗಳಲ್ಲಿ ಒಂದಂತೂ ಬಹಳಷ್ಟು ಗಮನ ಸೆಳೆಯಿತು. ಅದರಲ್ಲಿ ಬುದ್ಧನ ವಿವಿಧ ಭಂಗಿಗಳ ಒಂದು ಸಾವಿರ ಮೂರ್ತಿಗಳನ್ನು ಕಟ್ಟಡದ ಒಳಗೋಡೆಗೆ ಜೋಡಿಸಿದ್ದಾರೆ. ಈ ಸಾವಿರ ಬುದ್ಧಮೂರ್ತಿಗಳೂ ಒಂದರಂತೆ ಇನ್ನೊಂದಿಲ್ಲ. ತುಸುವಾಧರೂ ಭಿನ್ನವಾಗಿವೆ; ಅನನ್ಯವಾಗಿವೆ! ನಾವು ಹೀಗೆ ವಿವಿಧ ರಾಷ್ಟ್ರಗಳ ಮಾಂಟೇಸರಿಗಳನ್ನು ನೋಡಿಕೊಂಡು ಎಲೆಲ್ಲೂ ಇರುವ ಬೃಹತ್‌ ಗಾತ್ರದ ಬುದ್ಧನ ಮೂರ್ತಿಗಳಿಗೆ ಒಂದೊಂದು ನಮಸ್ಕಾರ ಮಾಡಿ ಅಲ್ಲೆಲ್ಲ ಒಂದಿಷ್ಟು ಹೊತ್ತು ಕೂತೆದ್ದು ಬಂದೆವು.

ಈ ವರ್ಷದ ಬುದ್ಧಪೂರ್ಣಿಮೆಯ ವಿಶೇಷ ಕಾರ್ಯಕ್ರಮಗಳು ಬೆಳಿಗ್ಗೆ ಆರರಿಂದಲೇ ಆರಂಭವಾಗಿದ್ದವು  ಮತ್ತು ಇಡೀ ದಿನ ಅವು ನಡೆಯಲಿದ್ದವು. ನಾವು ವಿವಿಧ ಮಾಂಟೇಸರಿಗಳು ದೇವಾಲಯಗಳು ಎಲ್ಲ ಸುತ್ತಾಡಿ ಬೋಧಿವೃಕ್ಷವಿರುವ ಮಹಾವಿಹಾರ ಸ್ಥಳಕ್ಕೆ ಬರುತ್ತಿದ್ದಂತೆಯೇ ಬಿಹಾರದ ರಾಜ್ಯಪಾಲರು ಕಾರ್ಯಕ್ರಮ ಮುಗಿಸಿ ಹೊರಟರು. ಮೆರವಣಿಗೆಗಾಗಿ ಥೈಲ್ಯಾಂಡ್‌ ದೇಶದವರು ಸಿದ್ಧಗೊಳಿಸಲಾಗಿದ್ದ ಅಲಂಕೃತ ಸಾರೋಟಿನಲ್ಲಿನ ಬುದ್ಧನ ಎದುರು ನಿಂತು ಒಂದು ಫೋಟೋ ತೆಗೆದುಕೊಂಡು ಬೋಧಿವೃಕ್ಷದ ಹತ್ತಿರ ಬಂದೆವು. ಬೋಧಿವೃಕ್ಷದ ಮುಂದೆ ಇರುವ ಪುರಾತನ ಕಾಲದ ದೇವಾಲಯದಲ್ಲಿರುವ ಬುದ್ಧನ ಮೂರ್ತಿಯನ್ನು ನೋಡಲು ಬೇರೆ ಬೇರೆ ದೇಶಗಳಿಂದ ಬಂದು ನಿಂತ ಜನರ ಸಾಲು ಸುಮಾರು ಅರ್ಧ ಕಿಲೋಮೀಟರ್‌ ಗಿಂತ ದೊಡ್ಡದಾಗಿತ್ತು. ನಾವು ಬೇರೆ ಹೊರಗಡೆ ಚಪ್ಪಲಿಬಿಟ್ಟು ಹೋಗಿದ್ದೆವು.

ಮೇ ಬಿಸಿಲು ಬೆಂಕಿಯಂತೆ ಸುರಿಯುತ್ತಿತ್ತು. ಕಾಲಿಟ್ಟರೆ ಅದು ಕಲ್ಲೋ ಅಥವಾ ಅಗ್ನಿಕುಂಡವೋ ಎನ್ನುವ ಅನುಭವ. ಇಂಥದ್ದರಲ್ಲಿ ಜನ ಹಾಗೂ ಹೀಗೂ ಮಾಡಿ ಬುದ್ಧದರ್ಶನಕ್ಕಾಗಿ ಕಾದಿದ್ದರು. ನನಗಂತೂ ಈ ಸಾಲಿನಲ್ಲಿ ನಿಲ್ಲುವುದು ಸಾಧ್ಯವೇ ಇಲ್ಲವೆನ್ನಿಸಿ ಕೆಲವರು ಚಪ್ಪಲಿ, ಶೂ ಸಮೇತ ಇದ್ದದ್ದನ್ನು ನೋಡಿ ಹೊರಗೆ ಹೋಗಿ ಪಾದರಕ್ಷೆಗಳನ್ನು ಹಾಕಿಕೊಂಡಾದರೂ ಬಂದರೆ ನೋಡಬಹುದೇನೋ ಅನ್ನಿಸಿತು. ಆದರೆ ಮುಖ್ಯಧ್ವಾರದಿಂದ ಬಹಳಷ್ಟು ಸಾಗಿ ಬಂದಾಗಿತ್ತು. ಅದರಲ್ಲಿ ಬೇರೆ ಅದು ಒಮ್ಮುಖ ಹಾದಿ ಒಳಬರಲಷ್ಟೇ ಅಲ್ಲಿ ಅವಕಾಶ. ಏನು ಮಾಡುವುದೆಂದು ತಿಳಿಯದೇ ಪರದಾಟ ಶುರುವಾಯಿತು. ಒಳಗೆ ಹೋಗದೆ ಹೋದರೆ ದೊಡ್ಡ ನಷ್ಟವೇನಿಲ್ಲ ಅನ್ನಿಸಿತು. ಆದರೆ ಇಲ್ಲಿಯ ತನಕ ಬಂದು ಹಾಗೇ ಹೋಗುವುದೂ ಸರಿಯಲ್ಲವೆಂದೂ ಅನ್ನಿಸಿತು. ಏನು ಮಾಡುವುದೆಂದು ಯೋಚಿಸುತ್ತಾ ಸಾಲಿನ ಬದಿಯಿಂದ ಈ ಬೃಹತ್‌ ದೇವಾಲಯದ ಹಿಂಭಾಗದಲ್ಲಿರುವ ಶಾಂತವಾದ ಉದ್ಯಾನಕ್ಕೆ ಬಂದು ನೋಡಿದರೆ ನಾವು ಕುತೂಹಲದಿಂದ ನೋಡಲು ಬಂದ ಬೋಧಿವೃಕ್ಷ ಅಲ್ಲಿಯೇ ಇದೆ! ನಾವು ನೋಡಬೇಕಾದದ್ದು ಬುದ್ಧನ ಮೂರ್ತಿಯಾಗಿರಲಿಲ್ಲ. ಅದನ್ನು ಎಲ್ಲ ಮಾಂಟೇಸರಿಗಳಲ್ಲಿ ಮಾತ್ರವಲ್ಲದೇ ಜಪಾನಿನ ದಾನಿಯೊಬ್ಬರು ನಿರ್ಮಿಸಿದ ಈಗಾಗಲೇ ತಿಳಿಸಿದಂತೆ ನೋಡಿಯಾಗಿತ್ತು. ಬೋಧಿವೃಕ್ಷವನ್ನುನೋಡಬೇಕಾಗಿತ್ತು. ಅದು ಸಿಕ್ಕೇಬಿಟ್ಟಿತು! ಒಮ್ಮೊಮ್ಮೆ ತಲೆಕೆಟ್ಟಾಗ ತಲೆಗೆ ಒಳ್ಳೆಯ ವಿಚಾರ ಅದು ಸಣ್ಣದಿದ್ದರೂ ಹೊಳೆಯುವುದಿಲ್ಲ. ಜನರ ಉದ್ದದ ಸಾಲು ನೋಡಿ ನಾವು ಕಂಗಾಗಲಾದದ್ದು ನಿಜವಾದರೂ ಬೋಧೀವೃಕ್ಷವನ್ನು ದೇವಸ್ಥಾನದ ಒಳಗೆ ಇಟ್ಟಿರಲು ಸಾಧ್ಯವಿಲ್ಲ ಅದು ಹೊರಗೇ ಇರಬಹುದು ಎಂಬ ಚಿಕ್ಕವಿಚಾರಕ ಕೂಡ ಆಗ ತಕ್ಷಣಕ್ಕೆ ಹೊಳೆಯಲಿಲ್ಲ. ತಲೆಮೇಲಿನ ಬೆಂಕಿಬಿಸಿಲು ತಲೆಕೆಲಸ ಮಾಡದಂತೆ ಮಾಡಿತ್ತೇನೋ! ಅಂತೂ ಸಾಲಿನಲ್ಲಿ ನಿಲ್ಲದೇ ಬೋಧಿವೃಕ್ಷದ ಹತ್ತಿರ ಬಂದಾಯಿತು.

ಹಾಗೆ ನೋಡಿದರೆ ಬೋಧಗಯಾದಲ್ಲಿ ಇದೊಂದೇ ಅರಳಿಮರವಿಲ್ಲ. ಬೋಧಗಯಾ ಮತ್ತು ಗಯಾದಲ್ಲಿ ಎಲ್ಲೆಂದರಲ್ಲಿ ನಮ್ಮಲ್ಲಿ ಮಾವು ಬೇವಿನ ಮರಗಳಂತೆ ಈ ಅರಳಿಮರಗಳು ನೋಡಲು ಸಿಗುತ್ತವೆ. ಹಾಗಿದ್ದೂಈ ವೃಕ್ಷಕ್ಕೆ ವಿಶೇಷ ಸ್ಥಾನವಿದೆ. ಇದಕ್ಕೆ ಕಾರಣ ರಾಜಕುಮಾರ ಸಿದ್ಧರ್ಥನಿಗೆ ಈ ವೃಕ್ಷದ ಕೆಳಗೆ ಧ್ಯಾನಾಸಕ್ತನಾಗಿದ್ದಾಗಲೇ ಜ್ಞಾನೋದಯವಾಯಿತು ಎಂಬುದು. ಈ ಬೋಧಿವೃಕ್ಷದ ಕಟ್ಟೆಯ ಸುತ್ತ ತಡೆಬೇಲಿಯೊಂದನ್ನು ಕಟ್ಟಿ ಅದರ ಬುಡದ ಭಾಗಕ್ಕೆ ಜನ ನುಗ್ಗದಂತೆ ಆ ಮರವನ್ನು ಹತ್ತದಂತೆ ಯಾವುದ್ಯಾವುದೋ ಶೈಲಿಯಲ್ಲಿ ನಿಂತು ಸೆಲ್ಫಿತೆಗೆದುಕೊಳ್ಳುತ್ತಾ ಉಳಿದ ಜನರಿಗೆ ಕಿರಿಕಿರಿಮಾಡದಂತೆ ಮಾಡಿ ಅದರ ಸಂಘಟಕರು ಉಪಕಾರ ಮಾಡಿದ್ದಾರೆ. ವಿಶೇಷ ದಿನವಾಗಿದ್ದರಿಂದ ಬೋಧಿವೃಕ್ಷದ ಬುಡದಲ್ಲಿ ದೊಡ್ಡಪ್ರಮಾಣದ ಹೂವಿನ ರಾಶಿಯೇ ನಿರ್ಮಾಣವಾಗಿತ್ತು. ಆ ವೃಕ್ಷ ಮತ್ತು ಅದರ ಜೊತೆಗಿರುವ ವೃಕ್ಷಗಳು ಸೇರಿ ಇಡೀ ವಾತಾವರಣವನ್ನು ಪ್ರಶಾಂತಗೊಳಿಸಿದ್ದವು.


ಈ ವೃಕ್ಷದ ಮುಂದಿನ ಹಸಿರು ಮರಗಳ ಉದ್ಯಾನದಲ್ಲಿಯೇ ಈ ವರ್ಷದ ಬುದ್ಧಪೂರ್ಣಿಮೆಯ ವಿಶೇಷ ಕಾರ್ಯಕ್ರಮಗಳ ಚಿಕ್ಕ ಮತ್ತು ಸರಳ ವೇದಿಕೆ ಹಾಕಲಾಗಿತ್ತು. ಜನರಿಗೆ ಕುಳಿತುಕೊಳ್ಳಲು ಕುರ್ಚಿಯ ಬದಲು ಚಾಪೆಗಳನ್ನು ಹಾಕಲಾಗಿತ್ತು. ಬೌದ್ಧದರ್ಮ ದೇವರ ಧರ್ಮವಲ್ಲ; ಅದು ಮಾನವ ಧರ್ಮ; ಅದರಲ್ಲಿಯೂ ಸಾಮಾನ್ಯ ಜನರ ಧರ್ಮ. ಅದು ಇಲ್ಲಿ ಆಚರಣೆಯಲ್ಲಿಯೂ ಕಾಣುತ್ತಿತ್ತು. ಈ ಬೋಧಿವೃಕ್ಷದ ಕೆಳಗೆ ಕುಳಿತು ಧ್ಯಾನ ಮಾಡಿದವರೆಲ್ಲರೂ ಬುದ್ಧರಾಗುವುದಿಲ್ಲವೆಂಬುದು ನಿಜವಾದರೂ ಅಲ್ಲಿಯ ತನಕ ಹೋಗಿ ಹೀಗೆ ಮಾಡದಿದ್ದರೆ ಹೇಗೆ?  ನಾನೂ ನನ್ನ ಹೆಂಡತಿಯೂ ತುಸುಹೊತ್ತು ಈ ವೃಕ್ಷದ ಕೆಳಗೆ ಕುಳಿತು ಧ್ಯಾನದಲ್ಲಿದ್ದೆವು. ಅದುವರೆಗೂ ಬೆಂಕಿಯಂಥ ಬಿಸಿಲಿನಲ್ಲಿ ಬೆಂದುಹೋಗಿದ್ದ ಮೈ ಮನಸ್ಸುಗಳಿಗೆ ಆವರಿಸಿದ್ದ ದಣಿವೆಲ್ಲವೂ ಕರಗಿಹೋಯಿತು. ಎಷ್ಟರ ಮಟ್ಟಿಗೆ ಎಂದರೆ ಸುಮಾರು ಅರ್ಧಗಂಟೆಯಾದರೂ ನನ್ನ ಹೆಂಡತಿ ಅಲ್ಲಿಂದ ಹೊರಡಲು ತಯಾರಿರಲಿಲ್ಲ. ನಾನೇ ಮತ್ತಿಷ್ಟು ಹೊತ್ತು ಸಮಯನೀಡಿ ಆಕೆಯನ್ನು ಅಲ್ಲಿಂದ ಒತ್ತಾಯಪೂರ್ವಕವಾಗಿ ಹೊರಡಿಸಿಕೊಂಡು ಹೊರಡಬೇಕಾಯಿತು.

ಮುಖ್ಯಧ್ವಾರಕ್ಕೆ ಮರಳಿ ಬಂದು ಲಾಕರ್‌ ಗಳಿಂದ ನಮ್ಮ ಮೊಬೈಲು ಬ್ಯಾಗು ವಾಪಸ್ಸು ಪಡೆದು ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಪಕ್ಕದ ಉದ್ಯಾನದಲ್ಲಿ ಎರಡು ಕಡೆ ಪ್ರಸಾದ ವ್ಯವಸ್ಥೆ ಮಾಡಿದ್ದರು. ʻತೆಗೆದುಕೊಳ್ಳೋಣವೇʼ ಎನ್ನುವಂತೆ ನನ್ನ ಹೆಂಡತಿ ನನ್ಜ ಕಡೆ ನೋಡಿದಾಗ ನಾನು ʻಸರಿʼ ಎಂದೆ. ಆಕೆ ಹಾಗೆ ಕೇಳಲು ಕಾರಣವಿತ್ತು. ಈ ʻತೀರ್ಥ-ಪ್ರಸಾದʼಗಳ ಬಗ್ಗೆ ನನಗೆ ಇರುವ ಅಲರ್ಜಿ ಇದಕ್ಕೆ ಕಾರಣ. ನಾನು ಸಾಮಾನ್ಯವಾಗಿ ಪ್ರಸಿದ್ಧ ದೇವಾಲಯಗಳಿಗೆ ಹೋದಾಗ ಈ ʼಪ್ರಸಾದʼ ತೆಗೆದುಕೊಳ್ಳುವುದಿಲ್ಲ. ಆರಂಭಿಕ ವರ್ಷಗಳಲ್ಲಿ ಒಂದೆರಡು ಕಡೆ ದೇವರ ದರ್ಶನದ ಬಗ್ಗೆ ವಿಶ್ವಾಸವಿಲ್ಲದ ಕಾರಣ ದರ್ಶನ ಮಾಡದೆ ನೇರವಾಗಿ ಪ್ರಸಾದದ ಹಾಲಿಗೆ ಹೋಗಿ ಊಟಮಾಡುತ್ತಿದ್ದದ್ದು ಉಂಟು. ಆದರೆ ಒಂದು ಸಲ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಹೋದಾಗ ಅಲ್ಲಿ ನಾನು ನೇರವಾಗಿ ಊಟದ ಹಾಲಿಗೆ ಹೋಗಲಿಕ್ಕೆ ದಾರಿ ಇರಲಿಲ್ಲ. ಅಮ್ಮನವರ ದರ್ಶನಕ್ಕೆ ಹೋಗಿ ಅಲ್ಲಿಂದ ಸಾಲಿನಲ್ಲಿ ಪ್ರಸಾದದ ಹಾಲಿಗೆ ಹೋಗುವಂತೆ ದಾರಿ ಇತ್ತು. ಅಂದರೆ ದೇವರ ದರ್ಶನ ಮಾಡಿಯೇ ಪ್ರಸಾದಕ್ಕೆ ಹೋಗಬೇಕು ಎನ್ನುವಂತೆ ಅದು ಇತ್ತು. ಇದನ್ನು ನೋಡಿ ನನಗೆ ಅವರು ಮಾಡಿದ್ದು ಸರಿ ಅನ್ನಿಸಿತು. ನನಗೂ ಈ ಬಗ್ಗೆ ಜ್ಞಾನೋದಯವಾಯಿತು!

ಹೌದು, ದರ್ಶನ-ಪೂಜೆ-ಪ್ರಸಾದ ಇವೆಲ್ಲ ಒಂದಕ್ಕೊಂದು ಸಂಬಂಧ ಇರುವಂಥವು. ಒಂದು ಪ್ಯಾಕೇಜಿನಲ್ಲಿ ಬರುವಂಥವು; ಒಂದನ್ನು ಬಿಟ್ಟು ಇನ್ನೊಂದನ್ನು ಪಡೆಯಲು ಅವಕಾಶವಿಲ್ಲ; ಇದ್ದರೂ ಅದನ್ನು ಪಡೆಯುವುದು ಸಲ್ಲ. ಇದೇ ನನಗೆ ಅಂದು ಆದ ಜ್ಞಾನೋದಯ! ಹೀಗಾಗಿ ಯಾರು ದೇವರ ದರ್ಶನವನ್ನು ಭಕ್ತಿ ಮತ್ತು ಶ್ರದ್ಧೆಗಳಿಂದ ಮಾಡುತ್ತಾರೋ ಅವು ಮಾತ್ರ ಅಲ್ಲಿನ ಉಚಿತ ಪ್ರಸಾದ ಸ್ವೀಕರಿಸುವುದು ಸರಿಯಾದ ಕ್ರಮ; ದೇವರ ಬಗ್ಗೆ ಅಷ್ಟೊಂದು ಸರಿಯಾದ ಶ್ರದ್ಧೆ ಇಲ್ಲದ ನಾನು ಅಲ್ಲಿನ ಪ್ರಸಾದವನ್ನು ಸ್ವೀಕರಿಸುವುದು ಸರಿಯಾದ ಕ್ರಮವಲ್ಲ ಎನ್ನಿಸಿ ಅಂದಿನಿಂದ ಯಾರನ್ನಾದರೂ ಇಂತಹ ದೇವಾಲಯಗಳಿಗೆ ನಾನು ಕರೆದುಕೊಂಡು ಹೋದರೆ ಅವರು ಒಳಗೆ ಹೋಗಿ ದರ್ಶನ ಪ್ರಸಾದ ಇತ್ಯಾದಿ ಮುಗಿಸಿ ಬರುವವರೆಗೆ ನಾನು ದೇವಾಲಯದ ಹೊರಾಂಗಣದಲ್ಲಿ ತಿರುಗಾಡುತ್ತಾ ಅಲ್ಲಿನ ಗೋಡೆಗಳ ಶಿಲ್ಪಗಳು ಇತ್ಯಾದಿಗಳನ್ನು ನೋಡಿ ಆನಂದಿಸುವುದು, ದೇವಾಲಯದ ಅಕ್ಕಪಕ್ಕ ಇರುವ ಕ್ಯಾಂಟೀನುಗಳಿಗೆ ಹೋಗಿ ತಿಂಡಿನೋ ಊಟನೋ ಮಾಡುವುದು ವಾಡಿಕೆಯಾಗಿದೆ.

ಅಷ್ಟೇ ಏಕೆ ನಾವು ಇಂತಹ ಪ್ರಸಿದ್ಧ ದೇವಾಲಯಗಳಿಗೆ ಹೋದರೂ ಅಲ್ಲಿಂದ ಮನೆಗೆಂದೋ ಅಕ್ಕಪಕ್ಕದವರಿಗೆ ಹಂಚಲಿಕ್ಕೆ ಎಂದೋ ಈ ರೀತಿ ಪ್ರಸಾದ ತರುವುದೂ ಇಲ್ಲವೆನ್ನುವಷ್ಟು ಕಡಿಮೆ. ನಾನಂತೂ ಎಂದೂ ತರುತ್ತಲೇ ಇರಲಿಲ್ಲ. ಆದರೆ ನನ್ನ ಹೆಂಡತಿಗೆ ಈ ಬಗ್ಗೆ ಸ್ಪಲ್ಪ ನಂಬಿಕೆ ಇದ್ದದ್ದು ನಿಜ. ಆದರೆ ಮೊನ್ನೆ ಪ್ರಯಾಗ್‌ ರಾಜ್‌ ನ ತ್ರಿವೇಣಿ ಸಂಗಮ (ಕುಂಭಮೇಳ ನಡೆಯುವ ಸ್ಥಳ)ಕ್ಕೆ ದೋಣಿಯಲ್ಲಿ ಕರೆದೊಯ್ದಾಗ ಅಲ್ಲಿ ಮತ್ತು ವಾರಣಾಸಿ (ಕಾಶಿ)ಯ ಗಂಗಾನದಿಯಲ್ಲಿ ಜನ ಒಬ್ಬರು ಗಲೀಜು ಮಾಡುವ ನೀರನ್ನು ಇನ್ನೊಬ್ಬರು ತೀರ್ಥ ಎಂದು ಕುಡಿಯುವುದು, ಕ್ಯಾನುಗಳಲ್ಲಿ ತುಂಬಿಕೊಂಡು ಊರುಗಳಿಗೆ ಒಯ್ಯವುದು ನೋಡಿದಾಗ ಆಕೆಗೂ ಆ ನಂಬಿಕೆ ಹೊರಟು ಹೋಯಿತು ಅನ್ನಿಸುತ್ತದೆ. ನಮ್ಮ ಮನೆಗೆ ಯಾರಾದರೂ ತೀರ್ಥ ಕ್ಷೇತ್ರಗಳಿಗೆ ಹೋಗಿಬಂದವರು ಇಂತಹ ತೀರ್ಥ ಪ್ರಸಾದಗಳನ್ನು ತಂದುಕೊಡುವುದುಂಟು. ಬೇಡ ಅಂದರೆ ಅವರಿಗೆ ಬೇಸರವಾಗುತ್ತದೆ ಎಂದು ಅವನ್ನು ನಾವು ಪಡೆಯುವುದು ನಿಜವಾದರೂ ಬಳಸುವುದು ಕಡಿಮೆ. ಏಕೆಂದರೆ ʻನೂರಾರು ಜನ ಮುಳಿಗಿ ಏಳುವ, ಸ್ನಾನಮಾಡುವ ಸ್ಥಳದಲ್ಲಿ ಒಬ್ಬರೂ ಮಲವನ್ನಲ್ಲದಿದ್ದರೂ ಮೂತ್ರವನ್ನೂ ವಿಸರ್ಜಿಸುವುದಿಲ್ಲ; ಒಂದು ವೇಳೆ ವಿಸರ್ಜಿಸಿದರೂ ಅದು ನಾವು ತೆಗೆದುಕೊಳ್ಳುವ ತೀರ್ಥದಲ್ಲಿ ಬರುವುದಿಲ್ಲʼ ಎಂಭ ಗಾಢ ನಂಬಿಕೆ ಇದಕ್ಕೆ ಬೇಕಾಗುತ್ತದೆ. ಅಂತಹ ಗಾಢ ನಂಬಿಕೆ ನಮ್ಮಲ್ಲಿ ಇಲ್ಲ!

ಆದರೆ ಇಲ್ಲಿ ಪ್ರಸಾದ ಸ್ವೀಕರಿಸಲು ಹೋಗಲಿಕ್ಕೆ ನಮಗೆ ಮುಜುಗರ ಆಗಲಿಲ್ಲ. ಏಕೆಂದರೆ ನಾನು ಗೌತಮ ಬುದ್ಧನ ವಿಚಾರಗಳಿಂದ ಬಹಳಷ್ಟು ಪ್ರಭಾವಿತನಾದವನು. ಆತನ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡವನು. ಇವತ್ತು ಬುದ್ಧಪೂರ್ಣಿಮೆಯ ಆಚರಣೆಯಲ್ಲಿ ಪಾಲ್ಗೊಳ್ಳಲೆಂದು ದೂರದ ಕರ್ನಾಟಕದಿಂದ ಬಂದವನು. ಇಲ್ಲಿ ಬಹಳಷ್ಟು ಶ್ರದ್ಧೆಯಿಂದ ಬೋಧಿವೃಕ್ಷ ಮತ್ತು ಬುದ್ಧನ ದರ್ಶನ ಮಾಡಿ ನನ್ನ ಶ್ರದ್ಧಾಭಕ್ತಿಯನ್ನು ತೋರಿಸಿದ್ದವನು. ಆದರೆ ಸಾಲಿನಲ್ಲಿ ನಿಂತ ನಮಗೆ ಮುಂದಿದ್ದ ನನ್ನ ಹೆಂಡತಿ ಪಾತ್ರೆಯ ಹತ್ತಿರ ಬರುವಷ್ಟು ಹೊತ್ತಿಗೆ ಸರಿಯಾಗಿ ದಾಲ್‌ ಪೂರ್ತಿ ಖಾಲಿಯಾಗಿತ್ತು. ಅನ್ನದ ಪಾತ್ರೆಯಲ್ಲಿ ತಳಕ್ಕೆ ಹತ್ತಿದ್ದ ಒಂದಿಷ್ಟು ಅನ್ನ ಮಾತ್ರ ಅವಳಿಗೆ ಸಿಕ್ಕಿತು. ನನಗೆ ಅದೂ ಸಿಗಲಿಲ್ಲ. ಬೇಸರ ಆಗಲಿಲ್ಲ. ಸುತ್ತ ಕಣ್ಣಾಡಿಸಿದಾಗ ಅಲ್ಲಿ ದೂರದಲ್ಲಿ ಇನ್ನೊಂದು ಸಾಲು ಕಂಡಿತು. ಅಲ್ಲಿಗೆ ಹೋಗಿ ನಿಂತೆ. ಅಲ್ಲಿ ನನ್ನ ಸರದಿ ಬಂದಾಗ ಕೌಂಟರಿನಲ್ಲಿದ್ದ ಯುವತಿಯೊಬ್ಬಳು ನಗುಮುಖದಿಂದಲೇ ನನಗೆ ಒಂದು ಬೋಗುಣಿಗೆ ಒಂದಿಷ್ಟು  ಪಾಯಸ ಹಾಕಿಕೊಟ್ಟಳು. ಆ ಯುವತಿ ಥೈಲ್ಯಾಂಡ್‌ ದೇಶದಿಂದ ಬಂದಿದ್ದಳು! ಇಡೀ ಕೌಂಟರ್‌ ನ ಉಸ್ತುವಾರಿಯನ್ನು ಅವರ ದೇಶದ ಜನರೊಂದಿಗೆ ಅವಳು ಮಾಡುತ್ತಿದ್ದಳು. ʻನಮಸ್ಕಾರʼ ʼಧನ್ಯವಾದʼ ಎಂದು ನಾನು ತಲೆಮಾತ್ರ ಬಗ್ಗಿಸಿ ಹೇಳಿದ್ದಕ್ಕೆ ಆಕೆ ತನ್ನ ಇಡೀ ದೇಹವನ್ನೇ ಬಗ್ಗಿಸಿ ಕೈಮುಗಿದು ನಮಸ್ಕರಿಸಿ ನಾನು ತೋರಿಸಿದ ವಿನಯವನ್ನು ಬಡ್ಡಿಸಮೇತ ತೀರಿಸಿದಳು!!

ಪ್ರಸಾದ ಪಡೆದು ಹೊರಟ ನಾವು ಬೇರೆ ಬೇರೆ ಕಾರ್ಯಕ್ರಮಗಳಿಗೆ ಉಡುಗೊರೆ ಕೊಡಲಿಕ್ಕೆ ಎಂದು ಬುದ್ಧನಿಗೆ ಸಂಬಂಧಿಸಿದ ಬೇರೆ ಬೇರೆ ಎತ್ತರ ಮತ್ತು ಗಾತ್ರಗಳ ಕೆಲವು ಅಶೋಕಸ್ಥಂಭಗಳು, ಕೆಲವು ಕೀ ಚೈನುಗಳು, ಪೆನ್ನುಗಳು, ಒಂಕಾರ ಧ್ವನಿಯನ್ನು ಹೊರಡಿಸುವ ಒಂದು ಬೋಗುಣಿ ಆಕಾರದ ಪಾತ್ರೆ, ಇತ್ಯಾದಿ ಖರೀದಿಸಿದೆವು. ನಮ್ಮ ಆಟೋ ನಿಂತ ಸ್ಥಳದಲ್ಲಿಯೇ ದೊಡ್ಡದಾಗಿ ʻಐ ಲವ್‌ ಬೋದಗಯಾʼ ಎಂಬ ಫಲಕ ಮತ್ತು ಬೃಹತ್‌ ಆದ ಅಂಬೇಡ್ಕರ್‌ ಅವರ ಮೂರ್ತಿ ಕಂಡಿತು. ಸುರಿವ ಬಿಸಿಲಲ್ಲೂ ತಂಪು ನೀಡಿದ ಸಂಗತಿ ಇದಾಗಿತ್ತು. ಬುದ್ಧನ ನಂತರ ಬಸವ ಅನಂತರ ಅಂಬೇಡ್ಕರ್‌ ನನ್ನನ್ನು ಬಹಳಷ್ಟು ಪ್ರಭಾವಿಸಿದವರು. ಒಂದು ಫೋಟೋ ತೆಗೆದುಕೊಂಡು ಭಾರತದ ಭಾಗ್ಯವಿಧಾತನಿಗೆ ನಮಸ್ಕರಿಸಿ ಆಟೋ ಹತ್ತಿದೆವು.

ಬರುವಾಗ ನಮ್ಮ ರಾಮಾಯಣದಲ್ಲಿ ಉಲ್ಲೇಖವಾಗಿರುವ ಗಯಾ ಪಟ್ಟಣದ ಪಕ್ಕದಲ್ಲಿ ಹರಿಯುವ ʻನಿರಂಜನ ನದಿʼ ಎಂದೂ ಕರೆಯಲ್ಪಡುವ ʻಫಾಲ್ಗೂʼ ನದಿ ದಂಟೆಯ ಆ ಕಡೆ ಮತ್ತು ಈ ಕಡೆ ಇರುವ ಎರಡು ಧಾರ್ಮಿಕ ಸ್ಥಳಗಳಾದ ʻಸೀತಾಕುಂಡ' ಮತ್ತು ʻವಿಷ್ಣುಪಾದ ದೇವಿʼ ದೇವಸ್ಥಾನಗಳನ್ನು ನೋಡುವುದನ್ನು ಮರೆಯಲಿಲ್ಲ. ನಾವು ಭಾರತದ ಯಾವ ಮೂಲೆಗೆ ಹೋದರೂ ಯಾವ ಊರಿಗೆ ಹೋದರು ಅಲ್ಲಿನ ಜನ ಇಲ್ಲಿ ರಾಮ ಬಂದಿದ್ದ, ಇಲ್ಲಿ ಸೀತೆ ಸ್ನಾನಮಾಡಿದ್ದಳು, ಇಲ್ಲಿ ಸೀತೆಗಾಗಿ ರಾಮ ಬಾಣಬಿಟ್ಟು ನೀರು ಚಿಮ್ಮಿಸಿದ್ದ, ಎಂದು ಕೆಲವು ಸ್ಥಳಗಳನ್ನು ತೋರಿಸುತ್ತಾರೆ. ಇದರರ್ಥ ರಾಮಾಯಣವನ್ನು ವಾಲ್ಮೀಕಿ ಮಾತ್ರ ಬರೆದಿಲ್ಲ. ಇಡೀ ಭಾರತದ ಜನಸಮುದಾಯವೇ ರಾಮಾಯಣವನ್ನು ತಮ್ಮದೇ ಆದ ಕಥೆಯಾಗಿ ಕಟ್ಟಿಕೊಂಡಿದದ್ದಾರೆ ಎಂಬುದು. ಇಲ್ಲಿಯೂ ಕೂಡ ಅಂತಹ ಒಂದು ಸ್ಥಳವಿದೆ. ಅದೇ ಸೀತಾಕುಂಡ.  ರಾಮ ಲಕ್ಷ್ಮಣರ ವನವಾಸ ಕಾಲದಲ್ಲಿ ಸೀತೆಯ ಬಾಯಾರಿಕೆ ನೀಗಿಸಲೆಂದು ರಾಮ ಬಾಣಬಿಟ್ಟು ಭೂಮಿಯಿಂದ ನೀರು ತೆಗೆಸಿ ಸೀತೆಯ ಬಾಯಾರಿಕೆಯನ್ನು ನೀಗಿಸಿದನೆಂದೂ ಸೀತೆ ತನ್ನ ಮಾವ ದಶರಥ ಮತ್ತು ಆತನ ಪೂರ್ವಜರಿಗೆ ಪಿಂಡದಾನ ಮಾಡಿದಳೆಂದೂ ಕರೆಯಲ್ಪಡುವ ಸ್ಥಳವೇ ಈ ಸೀತಾಕುಂಡ.  ಇಲ್ಲಿ ಅದನ್ನು ತಿಳಿಸುವ ಶಿಲಾಮೂರ್ತಿಗಳಿವೆ. ಅದರ ಜೊತೆ ರಾಮಲಕ್ಷ್ಮಣರ ಹೆಜ್ಜೆಗುರುತುಗಳೆಂದು ಕರೆಯಲ್ಪಡುವ ಶಿಲಾ ರಚನೆಗಳೂ ಇವೆ.

ನಿರಂಜನ ನದಿ ಸಂಪೂರ್ಣ ಬತ್ತಿಹೋಗಿತ್ತು. ಸೀತಾಕುಂಡದಲ್ಲಿ ಕುಂಡದ ಹತ್ತಿರ ಮಾತ್ರ ಒಂದು ಗುಂಡಿಯ ತಳದಲ್ಲಿ ಸ್ವಲ್ಪವೇ ನೀರಿತ್ತು. ಅದನ್ನು ನೋಡಿಕೊಂಡು ನಾವು ಮತ್ತು ನದಿಯ ಈ ಕಡೆ ಇರುವ ಇನ್ನೊಂದು ಸ್ಥಳವಾದ ವಿಷ್ಣುಪಾದ ದೇವಸ್ಥಾನಕ್ಕೆ ಬಂದೆವು. ವಿಷ್ಣುಪಾದ ದೇವಸ್ಥಾನ ಹೆಸರೇ ಹೇಳುವಂತೆ ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣುವಿನ ದೇವಾಲಯ. ಈ ದೇವಾಲಯವು ಬ್ರಾಹ್ಮಣ ಪರಂಪರೆಯಲ್ಲಿ ಪಿಂಡದಾನಕ್ಕೆ ಪ್ರಸಿದ್ಧವಾಗಿದೆ.  ಇಲ್ಲಿ ಒಳಗೆ ಹೋಗಿ ನೋಡಿದರೆ ಎಲ್ಲ ದೇವಾಲಯಗಳಂತೆ ಭಕ್ತರು ಅಲ್ಲಿರುವ ವಿಷ್ಣುವಿನ ಪಾದಕ್ಕೆ ಪೂವು ಕಾಯಿ ಇತ್ಯಾದಿ ನೈವೇದ್ಯವೆಂದು ಅರ್ಪಿಸುವುದು ಮತ್ತು ಅಲ್ಲಿದ್ದವುಗಳನ್ನು ತೆಗೆದುಕೊಂಡು ಪ್ರಸಾದವೆಂದು ಒಯ್ಯುತ್ತಿದ್ದುದು ಮಾಡುತ್ತಿದ್ದರು. ಸೀತೆ ತನ್ನ ಮಾವನ ಮನೆಯ ಪೂರ್ವಜರಿಗೆ ಪಿಂಡದಾನ ಮಾಡಿದ ಸೀತಾಕುಂಡ ಮತ್ತು ವಿಷ್ಣುಪಾದ ದೇವಾಲಯಗಳೆರಡರ ಕಾರಣ ಭಾರತದ ಬೇರೆ ಬೇರೆ ರಾಜ್ಯಗಳಿಂದ ಜನ ಇಲ್ಲಿ ತಮ್ಮ ಪೂರ್ವಜರಿಗೆ ಪಿಂಡದಾನ ಮಾಡಲಿಕ್ಕೆ ಬರುತ್ತಾರೆ ಎಂಬುದು ಅಲ್ಲಿಗೆ ಹೋದ ಮೇಲೆ ನನಗೆ ತಿಳಿಯಿತು.

ಹಿಂದಿನ ದಿನ ನಾನು ವಾರಣಾಸಿಯಿಂದ ಗಯಾಕ್ಕೆ ವಂದೇ ಭಾರತ್‌ ರೈಲಿನಲ್ಲಿ ಬರುವಾಗ ಇಬ್ಬರು ಮಹಿಳೆಯರು ಕನ್ನಡದಲ್ಲಿ ಮಾತನಾಡುತ್ತಿದ್ದದ್ದನ್ನು ಗಮನಿಸಿ ಅವರೂ ಗಯಾದಲ್ಲಿಯೇ ನಮ್ಮ ಜೊತೆ ರೈಲಿನಿಂದ ಇಳಿಯುವಾಗ ಪರಿಚಯ ಮಾಡಿಕೊಂಡು ಅವರೊಡನೆ ಮಾತನಾಡುವಾಗ ಅವರು ಪಿಂಡದಾನ ಮಾಡುವುದಕ್ಕಾಗಿಯೇ ಗಯಾಕ್ಕೆ ಬಂದಿದ್ದೇವೆಂದು ಹೇಳಿದ್ದರು. ನನಗೆ ಪಿಂಡದಾನ ಅಂದರೇನು ಎಂದೇ ಗೊತ್ತಿರಲಿಲ್ಲ ಹಾಗಾಗಿ ಗಯಾ ಅದಕ್ಕೆ ಪ್ರಸಿದ್ಧವಾಗಿರುವುದು ತಿಳಿದಿರುವ ಸಾಧ್ಯತೆ ಇರಲಿಲ್ಲ. ಅವರಲ್ಲಿ ಒಬ್ಬ ಮಹಿಳೆಯೇ 'ಪಿಂಡದಾನಕ್ಕೆ ಇಡೀ ದೇಶದಲ್ಲಿ ಗಯಾವೇ ಶ್ರೇಷ್ಠವಾದದ್ದು ನಿಮಗೆ ಗೊತ್ತಿಲ್ಲ ಅಷ್ಟೇʼ ಎಂದು ಆತ್ಮೀಯವಾಗಿಯೇ ಆ ಬಗೆಗಿನ ನನ್ನ ಅಜ್ಞಾನವನ್ನು ಮನವರಿಕೆ ಮಾಡಿಕೊಟ್ಟಿದ್ದಳು! ಈಗ ಅದು ಗೊತ್ತಾಯಿತು.

ಈ ದೇವಸ್ಥಾನದಿಂದ ಹೊರಗೆ ಬಂದು ನಾನು ಚಪ್ಪಲಿ ಮೆಟ್ಟಿಕೊಳ್ಳುವಾಗ ಅಕಸ್ಮಾತ್‌ ಆಗಿ ದೇವಸ್ಥಾನದ ಗೋಡೆಯ ಮೇಲೆ ಇದ್ದ ಸೂಚನೆಯ ಬರೆಹವೊಂದನ್ನು ನೋಡಿ ಅವಕ್ಕಾದೆ. ಇಂಗ್ಲಿಷ್‌, ಹಿಂದಿ, ಬಂಗಾಲಿ ಮತ್ತು ಉರ್ದು ಹೀಗೆ ನಾಲ್ಕೂ ಭಾಷೆಯಲ್ಲಿ ಇದ್ದ ಈ ಸೂಚನೆಯಲ್ಲಿ ʻಹಿಂದೂಗಳಲ್ಲದವರಿಗೆ ಪ್ರವೇಶವಿಲ್ಲʼ ಎಂದು ಬರೆಯಲಾಗಿತ್ತು.


ಸಾಮಾನ್ಯವಾಗಿ ಇಂತಹ ಪೂಜಾಸ್ಥಳಗಳ ಒಳಗೆ ನಾನು ಹೋಗುವುದಿಲ್ಲ
. ಆದರೆ ಇಲ್ಲಿ ಒಳಗೆ ಹೋಗಿ ಬಂದುಬಿಟ್ಟೆ! ಆ ಸೂಚನೆ ಹಾಕಿದ ದೇವಸ್ಥಾನದವರಾದರೂ ಪ್ರವೇಶದ್ವಾರದಲ್ಲಿ ಒಳಗೆ ಬರುವವರು ಹಿಂದುಗಳು ಹೌದೋ ಅಲ್ಲವೋ ಎಂದು ಪರೀಕ್ಷಿಸಿ ನೋಡುವ ವ್ಯವಸ್ಥೆಯನ್ನೂ ಮಾಡಿರಲಿಲ್ಲ. ಪೋಲಿಸರು ಇದ್ದರಾದರೂ ಅವರು ಉಳಿದ ದೇವಾಲಯಗಳಲ್ಲಿ ಮಾಡುವಂತೆ ನಮ್ಮನ್ನು ಕೈ ಮೇಲೆತ್ತಲು ಹೇಳಿ ಮೈಮೇಲೆ ಕೈಯಾಡಿಸಿ ʼಚೆಕ್‌ʼ ಮಾಡುವ ಶಾಸ್ತ್ರಮಾಡಿ ಒಳಗೆ ಬಿಟ್ಟರು ಅಷ್ಟೆ. ನಾವು ಹಿಂದೂಗಳು ಹೌದೋ ಅಲ್ಲವೋ ಎಂದು ಕೇಳಲೂ ಇಲ್ಲ; ಪರೀಕ್ಷಿಸಲೂ ಇಲ್ಲ.  ಮೊದಲೇ ಆ ಸೂಚನಾ ಫಲಕ ನನ್ನ ಕಣ್ಣಿಗೆ ಬಿದ್ದಿದ್ದರೆ ಖಂಡಿತಾ ನಾನು ಒಳಗೆ ಹೆಜ್ಜೆಯನ್ನೇ ಇಡುತ್ತಿರಲಿಲ್ಲ. ಏಕೆಂದರೆ ಹೀಗೆ ಯಾವುದಾದರೂ ಜನವನ್ನೋ ಜನಾಂಗವನ್ನೋ ನಿರಾಕರಿಸುವ ಪೂಜಾಸ್ಥಳಗಳಿಗೆ ಅವು ಯಾವ ಧರ್ಮದವೇ ಆಗಿರಲಿ ನಾನು ಹೋಗುವುದಿಲ್ಲ. ಎಲ್ಲರನ್ನು ಒಳಗೊಳ್ಳುವ ದೇವಾಲಯಗಳು ಮತ್ತು ದೇವರುಗಳು ಇದ್ದಲ್ಲಿ ಮಾತ್ರ ನಾನು ಹೋಗುವುದು. ಈ ಘಟನೆಯಿಂದ ದೇವಸ್ಥಾನಕ್ಕೆ ಮೈಲಿಗೆ ಆಯಿತೋ ಇಲ್ಲವೋ ಗೊತ್ತಿಲ್ಲ; ನನಗಂತೂ ಅಂತಹ ದೇವಸ್ಥಾನದ ಒಳಗೆ ಹೋಗಿದ ಬಂದದ್ದಕ್ಕೆ ಮೈಲಿಗೆಯ ಭಾವ ಅಂಟಿಕೊಂಡಿತು! ಮೈಲಿಗೆಯನ್ನು ತೊಳೆದುಕೊಳ್ಳಲು ನಿರಂಜನ ನದಿಯಲ್ಲಿ ನೀರೂ ಇರಲಿಲ್ಲವಲ್ಲ. ಅದಕ್ಕೆ ಸೀತೆಯ ಶಾಪ ಬೇರೆ ಇದೆಯಂತೆ. ಹಾಗಾಗಿ ಅದು ಒಣಗಿಹೋಗಿಬಿಟ್ಟಿದೆ!

ಇಡೀ ಜಗತ್ತಿನ ಜನರ ನೋವು ಕಷ್ಟಗಳನ್ನು ಪರಿಹರಿಸುವ ಸರಳ ಸೂತ್ರಗಳನ್ನುಮನುಷ್ಯರಲ್ಲಿ ಯಾವುದೇ ಬಗೆಯ ಭೇದಭಾವ ಮಾಡದೆ ಜಗತ್ತಿಗೆ ನೀಡಿ, ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ತನ್ನ ಅನುಯಾಯಿಗಳನ್ನು ಹೊಂದಿದ ಮತ್ತು ಸುಮಾರು ಹತ್ತಕ್ಕೂ ಹೆಚ್ಚು ದೇಶಗಳಲ್ಲಿ ವಿಶೇಷ ಸ್ಥಾನಮಾನಕ್ಕೆ ಅರ್ಹವಾಗಿರುವ ಬೌದ್ಧಧರ್ಮದ ಜನಕ ಮಹಾತ್ಮ ಗೌತಮನ ವಿಶಾಲ ದೃಷ್ಟಿಯ ಒಳಗೊಳ್ಳುವಿಕೆಯ ಆಲೋಚನೆಯ ಮುಂದೆ ಇಂತಹ ಕ್ಷುಲ್ಲಕ ಭಾವನೆಗಳೇ ಇಂದು ಈ ಧರ್ಮದ ಜನ ತಮ್ಮ ಧರ್ಮವನ್ನು ಇರುವ ಒಂದು ದೇಶದಲ್ಲಿ ಉಳಿಸಿಕೊಳ್ಳಲು ಒದ್ದಾಡಬೇಕಾದ ಸ್ಥಿತಿಯನ್ನು ಉಂಟುಮಾಡಿವೆ ಅನ್ನಿಸಿ  ಮನಸ್ಸಿಗೆ ಕಿರಿಕಿರಿ ಅನ್ನಿಸಿ ಮುಂದಿನ ಪ್ರಯಾಣಕ್ಕೆ ಅಗತ್ಯವಾದ ವಿಶ್ರಾಂತಿ ಪಡೆಯಲೆಂದು ನನ್ನ ಕೊಠಡಿಗೆ ಹೊರಟೆ.


ʼಕೊಂದವರುಳಿವರೇ ಕೂಡಲಸಂಗಮದೇವʼ ಎಂಬುದು ಬಸವಣ್ಣನವರ ವಚನದಲ್ಲಿ ಬರುವ ಒಂದು ಸಾಲು. ವೈದಿಕರು ಬೌದ್ಧಧರ್ಮವನ್ನು ಕೊಲ್ಲಲು ಹೋದಾಗ ಅದು ಕೊಲ್ಲಲ್ಪಡಲಿಲ್ಲ; ಬದಲಾಗಿ ಕಂಸನಿಗೆ ಕೈಕೊಟ್ಟು ಬಾಲಕೃಷ್ಣ ಹೊರನಡೆದು ಹೋಗಿ ಬೇರೆಲ್ಲೋ ಬೆಳೆದಂತೆ ಭಾರತವನ್ನು ಬಿಟ್ಟು ಹೊರಗೆ ಹೋಗಿ ಬೇರೆ ಬೇರೆ ದೇಶಗಳಲ್ಲಿ ಸಂಪದ್ಭರಿತವಾಗಿ ಬೆಳೆಯಿತು. ಅದನ್ನು ಕೊಲ್ಲಲು ಹೋದ ಧರ್ಮ ಇಂದು ಬಸವಣ್ಣ ಹೇಳಿದಂತೆ ಬದುಕಲು ಪರದಾಡುತ್ತಿದೆ. ಭಾರತದ ಯಾವುದೇ ಭಾಗದಲ್ಲಿ ರಾಮನನ್ನೋ ಕೃಷ್ಣನನ್ನೋ ಹುಡುಕಲು ನೆಲವನ್ನು ಅಗೆದಾಗ ಈಗಲೂ ಸಿಗುತ್ತಿರುವುದು ಬುದ್ಧದ ಮೂರ್ತಿಗಳು! ಯುದ್ಧದ ಸಾವು ನೋವುಗಳನ್ನು ಅರ್ಥಮಾಡಿಕೊಳ್ಳಬಲ್ಲ ಭಾರತದ ಯುವಜನತೆ ಮತ್ತೆ ಬುದ್ಧನ ಚಿಂತನೆಗಳನ್ನು ಹಂತಹಂತವಾಗಿ ಸಣ್ಣಸಂಖ್ಯೆಯಲ್ಲಿಯಾದರೂ ಮೆಚ್ಚಿ ಮೈಗೂಡಿಸಿಕೊಳ್ಳುತ್ತಿರುವುದನ್ನು ನೋಡಿದರೆ ಇಲ್ಲಿಂದ ಹೊರಹಾಕಲ್ಪಟ್ಟು ವಿದೇಶಗಳಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಬೌದ್ಧಧರ್ಮ ಮತ್ತೆ ತಾನು ಹುಟ್ಟಿದ ಭಾರತಕ್ಕೆ ಬಂದು ಯುದ್ಧದ ತುರಿಕೆ ಹತ್ತಿಸಿಕೊಂಡ ನಮ್ಮ ಜನರಿಗೆ ಶಾಂತಿಯ ಮುಲಾಮು ಸವರಬಹುದಾದ ಸಂದರ್ಭ ತಡವಾಗಿಯಾದರೂ ಬಂದೇ ಬರುತ್ತದೆ ಅನ್ನಿಸುತ್ತದೆ. ಅದು ಎಷ್ಟು ಸಾಧ್ಯವೋ ಅಷ್ಟು ಬೇಗ ಆಗಲಿ ಎಂದು ಆಶಿಸೋಣ! ಈ ಜಗತ್ತಿನಲ್ಲಿ ʼಒಳ್ಳೆಯ ಯುದ್ಧ ಮತ್ತು ಕೆಟ್ಟ ಶಾಂತಿʼ ಎಂಬುವು ಹಿಂದೆ ಯಾವ ಕಾಲದಲ್ಲಿಯೂ ಇರಲಿಲ್ಲಈಗಲೂ ಇಲ್ಲ ಮತ್ತೆ ಮುಂದೆಯೂ ಇರಲು ಸಾಧ್ಯವಿಲ್ಲ ಎಂಬ ವಿಶ್ವಸತ್ಯವನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳೋಣ. ಪರಸ್ಪರ ದ್ವೇಷಾಸೂಯೆಗಳನ್ನು ತೊರೆದು ಪ್ರೀತಿ ನೆಮ್ಮದಿಯ ಬದುಕು ಬದುಕೋಣ.

*****

೧೫-೦೫-೨೦೨೫

Saturday, May 17, 2025

ಕಳ್ಳರಿರುವುದು ಕನ್ನಡಿಗರಿಗೆ ಮಾತ್ರ ಏಕೆ ಗೊತ್ತಾಗಬೇಕು?

 ಕಳ್ಳರಿರುವುದು ಕನ್ನಡಿಗರಿಗೆ ಮಾತ್ರ ಏಕೆ ಗೊತ್ತಾಗಬೇಕು?


ತ್ರಿಭಾಷಾ ಸೂತ್ತ ಉತ್ತರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಇರುತ್ತದೆ. ನಾವು ಅಂದರೆ ದಕ್ಷಿಣದವರು ಹಿಂದಿಗೆ ಕೊಡುವ ಕಾಲುಭಾಗ ಗೌರವ ಮಾನ್ಯತೆಗಳನ್ನೂ ಅಲ್ಲಿ ಉತ್ತರದಲ್ಲಿ ಕೊಡುವುದಿಲ್ಲ. ಅವರ ಅಲ್ಪಸ್ವಲ್ಪ ಗೌರವ ಏನಾದರೂ ಇದ್ದರೆ ಅದು ತಮಿಳುನಾಡು ಬಗ್ಗೆ ಮತ್ತು ತಮಿಳು ಭಾಷೆಯ ಬಗ್ಗೆ. ಕನ್ನಡವಂತೂ ಅವರಿಗೆ ಲೆಕ್ಕಕ್ಕೆ ಇಲ್ಲ.
ಈ ಧೋರಣೆ ಒಂದೊಂದು ಕಡೆ ಒಂದೊಂದು ರೀತಿ ಇರುತ್ತದೆ. ಕೇಂದ್ರ ಸರ್ಕಾರದ ರೈಲ್ವೇ ಇಲಾಖೆಯ ಊರುಫಲಕಗಳನ್ನು ಗಮನಿಸಿ. ದಕ್ಷಿಣ ಭಾರತದ ರೈಲ್ವೇನಿಲ್ದಾಣಗಳ ಹೆಸರುಗಳು ಪ್ರಾದೇಶಿಕ ಭಾಷೆ, ಭಾರತದ ಬಹುಜನರ ಭಾಷೆಯಾದ ಹಿಂದಿ, ಮತ್ತು ಜಾಗತಿಕ ಭಾಷೆಯ ಮಾನ್ಯತೆ ಪಡೆದಿರುವ ಇಂಗ್ಲಿಷ್‌ ಈ ಮೂರರಲ್ಲಿ ಇರುತ್ತವೆ. ಹಾಗಾದರೆ ಪ್ರಾದೇಶಿಕ ಭಾಷೆ ಮತ್ತು ಭಾರತದ ಬಹುಜನರ ಭಾಷೆ ಒಂದೇ ಆಗಿರುವ ಹಿಂದಿ ಪ್ರದೇಶಗಳಲ್ಲಿ ಅವರು ಮೂರನೆ ಭಾಷೆಯನ್ನಾಗಿ ಯಾವುದನ್ನು ಸೇರಿಸುತ್ತಾರೆ? ಉರ್ದು. ಉತ್ತರ ಭಾರತದ ನಿಲ್ದಾಣಗಳ ಬಹುತೇಕ ಹೆಸರುಗಳು ಇರುವುದು ಹಿಂದಿ, ಉರ್ದು ಮತ್ತು ಇಂಗ್ಲಿಷ್‌ ನಲ್ಲಿ. ಒಟ್ಟಿನಲ್ಲಿ ಮೂರು ಭಾಷೆ ಮಾಡಲು ಉರ್ದು ಸೇರಿಸಿದ್ದಾರೆ. ಉರ್ದು ಸೇರಿಸಿಕೊಳ್ಳಲು ಒಂದು ನಿರ್ದಿಷ್ಠ ಮಾನದಂಡ ಅನುಸರಿಸಿದಂತಿಲ್ಲ. ಏಕೆಂದರೆ ಉರ್ದು ಭಾಷಿಕರು ಕೇವಲ ಉತ್ತರ ಭಾರತದಲ್ಲಿಲ್ಲ ದಕ್ಷಿಣದಲ್ಲೂ ಇದ್ದಾರೆ. ಹಾಗೆ ನೋಡಿದರೆ ಉರ್ದು ಹುಟ್ಟಿದ್ದೇ ದಕ್ಷಿಣದಲ್ಲಿ ಉತ್ತರದಲ್ಲಿ ಅಲ್ಲ!
ಇನ್ನು ದೇಶದ ಬಹಳಷ್ಟು ಜನ ಬರುವ ತೀರ್ಥಕ್ಷೇತ್ರಗಳಲ್ಲಿ ಸ್ಥಳಗಳ ಹೆಸರುಗಳನ್ನು ಭಾರತದ ಎಲ್ಲ ಅಧಿಕೃತ ಭಾಷೆಗಳಲ್ಲಿ ಬರೆಯುವ ಕೆಲಸವನ್ನು ಕೆಲವು ಕಡೆ ಮಾಡಲಾಗಿದೆ. ಅಯೋಧ್ಯೆಯ ಎಲ್ಲ ಪ್ರವಾಸಿ ಸ್ಥಳಗಳಲ್ಲೂ ಕನ್ನಡ ಬಿಟ್ಟು ಉಳಿದ ದಕ್ಷಿಣ ಭಾಷೆಗಳಲ್ಲಿ ಅಲ್ಲಿನ ಹೆಸರನ್ನು ಬರೆದಿದ್ದಾರೆ. ಹಾಗೆ ನೋಡಿದರೆ ರಾಮನನ್ನು ತಲೆಯ ಮೇಲೆ ಹೊತ್ತುಕೊಂಡು ಕುಣಿಯುವರು, ರಾಮನ ಹೆಸರಿನಲ್ಲಿ ಗಲಾಟೆ ಮಾಡುವವರು ಕೇರಳ, ತಮಿಳುನಾಡುಗಳಿಗಿಂತ ಕರ್ನಾಟಕದಲ್ಲಿಯೇ ಹೆಚ್ಚು ಇರುವುದು. ಕನ್ನಡಿಗರೆಲ್ಲರಿಗೆ ಅಲ್ಲದಿದ್ದರೂ ಈ ʻಉದ್ರಿಕ್ತ ರಾಮಭಕ್ತʼರಿಗೆ ಗೌರವ ಕೊಡಲಿಕ್ಕಾದರೂ ಈ ಅಯೋಧ್ಯೆಯವರು ಕನ್ನಡ ವನ್ನು ಬಳಸಬೇಕಿತ್ತಲ್ಲವೇ? ಇದು ಅವರಿಗೆ ಅವಮರ್ಯಾದೆ ಮಾಡಿದಂತೆ ಅಲ್ಲವೆ? ಕರ್ನಾಟಕದವರು ಅಯೋಧ್ಯೆಗೆ ಹೋಗುವುದು ಬೇಡವೇ? ಅಯೋಧ್ಯೆಯ ಸಂಧಿಮೂಲೆಯಲ್ಲಿರುವ ಎಲ್ಲ ದೇವಸ್ಥಾನಗಳನ್ನೂ ನಾನು ಸುತ್ತಾಡಿ ನೋಡಿದೆ. ಎಲ್ಲಕಡೆಯೂ ಇದೇ ಕಥೆ. ಕರ್ನಾಟಕದ ಹನುಮಂತ ಅಲ್ಲಿ ಬೀದಿಬೀದಿಯಲ್ಲಿದ್ದಾನೆ; ಕನ್ನಡ ಇಲ್ಲ!
ಮೊನ್ನೆ ಪ್ರಯಾಗರಾಜ್‌ ನಲ್ಲಿ ಕುಂಭ ಮೇಳ ನಡೆದ ತ್ರಿಮೇಣಿ ಸಂಗಮದಲ್ಲಿ ಸುತ್ತಾಡಿ ದೋಣಿವಿಹಾರ ಮಾಡಿ ಜನ ಮುಳುಗಿ ಏಳುತ್ತಿದ್ದ ಸ್ಥಳಕ್ಕೆ ದೋಣಿಯಲ್ಲಿಯೇ ಹೋಗಿ ಅವರು ಮುಳುಗಿ ಏಳುವುದನ್ನೂ ಒಬ್ಬರು ಗಲೀಜು ಮಾಡಿದ ನೀರನ್ನು ಇನ್ನೊಬ್ಬರು ತೀರ್ಥವೆಂದು ಕುಡಿಯುವುದನ್ನೂ ಕ್ಯಾನುಗಳಿಗೆ ತುಂಬಿಕೊಂಡು ಹೋಗುವುದನ್ನು ಹತ್ತಿರದಿಂದ ನೋಡಿ ನಾನು ಅವೆರಡನ್ನೂ ಮಾಡದೆ ನೀರಿನಲ್ಲಿ ಗಲೀಜು ಹೆಕ್ಕಿ ತೆಗೆಯುತ್ತಿದ್ದ ಉತ್ತರ ಪ್ರದೇಶ ಸರ್ಕಾರದ ವಾಹನ ಚಾಲಕನನ್ನು ಮಾತಾಡಿಸಿ ತೇಲುವ ಮುಳುಗುವ ತೆಂಗಿನಕಾಯಿಗಳು ಪ್ಲಾಸ್ಟಿಕ್‌ ಬ್ಯಾಗುಗಳು, ಹೂವುಗಳು ಇತ್ಯಾದಿ ನೋಡುತ್ತಾ ದೋಣಿ ಇಳಿದು ಯಮುನಾ ನದಿ ದಂಡೆಯ ಮೇಲೆಯೇ ಇದ್ದ ಈಗ ಬಹುಪಾಲು ನಮ್ಮ ಸೇನೆಯ ವಶದಲ್ಲಿರುವ ಅಕ್ಬರನ ಅಲಹಾಬಾದ್‌ ಕೋಟೆ, ಅದಕ್ಕೆ ಹೊಂದಿಕೊಂಡೇ ಇರುವ ಇತಿಹಾಸ ಪ್ರಸಿದ್ಧ ಪಾತಾಳಪುರಿ, ಶ್ರೀರಾಮಚಂದ್ರನ ವನವಾಸದ ಆರಂಭದಲ್ಲಿ ಅವನು ತಮ್ಮ ಮತ್ತು ಹೆಂಡತಿಯೊಂದಿಗೆ ಪ್ರಯಾಗರಾಜ್‌ ಗೆ ಬಂದಾಗ ಅವನಿಗೆ ಚಿತ್ರಕೂಟಕ್ಕೆ ಹೋಗಿ ಅತ್ರಿಮುನಿಗಳನ್ನು ಕಾಣುವಂತೆ ಹೇಳಿದ ಭಾರಧ್ವಜ ಮುನಿಯ ಆಶ್ರಮ ನೋಡಿಕೊಂಡು ಬರುತ್ತಿದ್ದೆ.
ದಾರಿಯಲ್ಲಿಯೇ ಇರುವ ʻಅಲೋಪಶಂಕರಿ ದೇವಸ್ಥಾನʼದ ಹತ್ತಿರ ಗಾಡಿ ನಿಲ್ಲಿಸಿದ ನನ್ನ ಡ್ರೈವರ್‌ ಒಳಗೆ ಹೋಗಿ ಬರಲು ಸಲಹೆ ಮಾಡಿದ. ʻಇಂತಹ ನೂರಾರು ದೇವಸ್ಥಾನಗಳು ನಮ್ಮ ಊರುಗಳಲ್ಲಿಯೇ ಇವೆ ಬಿಡಪ್ಪ ಇವನ್ನು ನೋಡಲಿಕ್ಕೆ ಇಲ್ಲಿಗೆ ಬರಬೇಕಾ?ʼ ಎಂಬ ಉದಾಶೀನತೆಯಿಂದಲೇ ನಾನು ಗಾಡಿ ಇಳಿದು ಒಳಗೆ ಹೋದೆ. ಸಂತೋಷಕ್ಕೆ ತಪ್ಪುತಪ್ಪಾಗಿಯಾದರೂ ʻಕುಡಿಯುವ ನೀರುʼ ಎಂದು ಉಳಿದ ಭಾಷೆಗಳ ಜೊತೆಗೆ ಕನ್ನಡದಲ್ಲಿಯೂ ಫಲಕವನ್ನು ಬರೆದದ್ದನ್ನು ನೋಡಿ ನೀರು ಕುಡಿದಷ್ಟೇ ಸಮಾಧಾನವಾಯಿತು.
ಹಾಗೇ ಒಳಗೆ ಹೋಗಿ ದೇವರನ್ನು ಒಂದು ಸುತ್ತು ಹಾಕಿಕೊಂಡು ಬರೋಣವೆಂದು ಹೋಗಿ ಸುತ್ತು ಹೊಡೆಯುವಾಗ ನನಗೆ ಆಶ್ಚರ್ಯವೆಂಬಂತೆ ಬೇರೆ ಯಾವ ಭಾಷೆಯಲ್ಲೂ ಇಲ್ಲದ ಶುದ್ಧವಾಗಿ ಕೈಯಲ್ಲಿ ಬರೆದು ಹಾಕಿದ ಒಂದು ಸೂಚನಾ ಫಲಕವಿತ್ತು. ಅದನ್ನು ಕುತೂಹಲದಿಂದ ಓದಿದೆ: ಅದು ಹೀಗಿತ್ತು: “ದೇವಸ್ಥಾನದ ಆವರಣದಲ್ಲಿ ಕಳ್ಳರಿದ್ದಾರೆ ಜಾಗ್ರತೆ. ತಮ್ಮ ಅಮೂಲ್ಯ ವಸ್ತುಗಳಿಗೆ ತಾವೇ ಜವಾಬ್ದಾರರು. ಕಳ್ಳರಿದ್ದಾರೆ ಎಚ್ಚರಿಕೆ.”
ಇಂತಹ ಬೋರ್ಡುಗಳನ್ನು ನೋಡಿಯೇ ನನಗೆ ದೇವರ ಮೇಲಿದ್ದ ನಂಬಿಕೆ ಹೊರಟುಹೋದದ್ದು. ಒಮ್ಮೆ ಧರ್ಮಸ್ಥಳಕ್ಕೆ ಯಾರನ್ನೋ ಭಕ್ತರನ್ನು ಕರೆದುಕೊಂಡು ಡ್ರೈವರ್‌ ಆಗಿ ಹೋದಾಗ ಅವರು ಮಂಜುನಾಥ ಸ್ವಾಮಿಯ ದರ್ಶನ ಮತ್ತು ಪ್ರಸಾದಕ್ಕೆಂದು ಒಳಗೆ ಹೋದಾಗ ಅಲ್ಲಿನ ದೇವಸ್ಥಾನದ ಆವರಣದಲ್ಲಿನ ಹುಲ್ಲುಹಾಸಿನ ಮೇಲೆ ಕುಳಿತಿದ್ದೆ. ಅಲ್ಲಿಯೂ ಇಂಥದ್ದೇ ಸೂಚನಾ ಫಲಕವಿತ್ತು. ಅದನ್ನು ನೋಡಿ ದೇವರು ಇಡೀ ಜಗತ್ತನ್ನು ಕಾಯುತ್ತಾನೆ ನಮ್ಮನ್ನೂ ನಮ್ಮ ವಸ್ತುಗಳನ್ನೂ ಕಾಯುತ್ತಾನೆ ಎಂದು ಜನ ಇಲ್ಲಿಗೆ ಬಂದರೆ ಇವರು ನೋಡಿದರೆ ಹೀಗೆ ಬೋರ್ಡು ಹಾಕಿದ್ದಾರಲ್ಲ ಎಂದು ಆಶ್ಚರ್ಯಪಟ್ಟಿದ್ದೆ.


ಆರ್ಯಸಮಾಜದ ಸ್ಥಾಪಕರಾದ ಸ್ವಾಮಿ ದಯಾನಂದ ಸರಸ್ವತೀ ಅವರನ್ನು ಅವರ ಪಾಲಕರು ಚಿಕ್ಕಮಗುವಿದ್ದಾಗ ಒಮ್ಮೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿರುತ್ತಾರೆ. ಅಲ್ಲಿ ದೇವರ ಮೂರ್ತಿಯ ಮೇಲೆ ಇಲಿ ಓಡಾಡಿದ್ದನ್ನು ನೋಡಿದ ಬಾಲಕ ದಯಾನಂದ ನ ಮನಸ್ಸಿನಲ್ಲಿ ಹುಟ್ಟಿದ ಪ್ರಶ್ನೆ,” ತನ್ನ ಮೈಮೇಲಿನ ಇಲಿಗಳನ್ನೇ ಓಡಿಸಿಕೊಳ್ಳಲಾರದ ದೇವರು ಜಗತ್ತಿನ ಜನರ ಸಮಸ್ಯೆಗಳನ್ನು ಹೇಗೆ ಓಡಿಸುತ್ತಾನೆ?” ಎಂಬುದು. ಆದರೂ ಜನರ ನಂಬಿಕೆ ಅನ್ನುವುದು ಬಹಳಷ್ಟು ಗಟ್ಟಿಯಾದದ್ದು!
ಇಂತಹ ಬೋರ್ಡುಗಳು ಈಗ ಎಲ್ಲ ದೇವಸ್ಥಾನಗಳಲ್ಲಿಯೂ ಸಾಮಾನ್ಯವಾಗಿವೆ. ನಮ್ಮ ವಸ್ತುಗಳನ್ನು ನಾವೇ ಕಾಯ್ದುಕೊಳ್ಳುವುದಾದರೆ , ಅವನ್ನು ಕದ್ದವರು ರಕ್ತಕಾರಿ ಸಾಯುವಂತೆ ಮಾಡದಿದ್ದರೆ ಅದು ನಮ್ಮಂಥ ಪರಮಭಕ್ತರಿಗೆ ದೇವರು ಮಾಡುವ ಅವಮಾನವಲ್ಲವೇ? ಎಂದು ಯಾರೂ ಅಂದುಕೊಳ್ಳುವ ಪಾಪ ಮಾಡಲಾರರು. ಅವರ ಶ್ರದ್ಧೆ, ನಂಬಿಕೆ ಅಷ್ಟರ ಮಟ್ಟಿಗೆ ಅಚಲವಾಗಿರುತ್ತದೆ.
ಆದರೆ ಈ ಅಲೋಪಶಂಕರಿ ದೇವಸ್ಥಾನದ ಈ ಬೋರ್ಡನ್ನು ನೋಡಿ ನನಗೆ ಆಶ್ಚರ್ಯವಾದದ್ದು ಏಕೆಂದರೆ ಕುಡಿಯುವ ನೀರಿನ ಸೂಚನೆಯಂತೆ ಇಲ್ಲಿ ಕನ್ನಡದ ಜೊತೆಗೆ ಇತರ ಯಾವುದೇ ಭಾಷೆಗಳಿರಲಿಲ್ಲ. ಕೇವಲ ಕನ್ನಡದಲ್ಲಿ ಮಾತ್ರ ಈ ಕಳ್ಳರ ಸೂಚನೆಯ ಫಲಕ ಇದ್ದದ್ದು ಏಕೆ ಎಂದು. ಸುತ್ತಮುತ್ತ ಕಣ್ಣಾಡಿಸಿದೆ. ಬೇರೆ ಯಾವ ಭಾಷೆಗಳಲ್ಲಿಯೂ ಈ ಕಳ್ಳರ ಎಚ್ಚರಿಕೆಯ ಫಲಕಗಳು ಇರಲಿಲ್ಲ. ನನ್ನಲ್ಲಿ ಮೂಡಿದ ಪ್ರಶ್ನೆಗಳು ಇವು: ಕನ್ನಡಿಗರು ತೀರಾ ಕಡಿಮೆ ಸಂಖ್ಯೆಯಲ್ಲಿ ಬರುವ ಉತ್ತರ ಪ್ರದೇಶದಲ್ಲಿನ ಈ ದೇವಸ್ಥಾನದಲ್ಲಿ ಕಳ್ಳರ ಸೂಚನೆಯ ಬಗ್ಗೆ ದೂರದ ಕರ್ನಾಟಕದ ಭಾಷೆ ಕನ್ನಡದಲ್ಲಿ ಸೂಚನೆ ಹಾಕಲು ಏನು ಕಾರಣವಿರಬಹುದು? ಕಳ್ಳರಿರುವುದು ಕನ್ನಡಿಗರಿಗೆ ಮಾತ್ರ ಏಕೆ ಗೊತ್ತಾಗಬೇಕು?
*****
ರಾಜೇಂದ್ರ ಬುರಡಿಕಟ್ಟಿ
೧೬-೦೫-೨೦೨೫