Tuesday, June 17, 2025

'ಮಹಾನಾಯಕʼನ ಮಾದರಿ ಬದುಕಿನ ಚಿತ್ರಗಳು

 

ʻಮಹಾನಾಯಕʼನ ಮಾದರಿ ಬದುಕಿನ ಚಿತ್ರಗಳು

·         ಡಾ. ರಾಜೇಂದ್ರ ಬುರಡಿಕಟ್ಟಿ

ಮಹಾವ್ಯಕ್ತಿಗಳ ವೈಯಕ್ತಿಕ ಬದುಕಿನ ವಿವರಗಳನ್ನು ತಿಳಿಯುವ ಕುತೂಹಲ ಸಾಮಾನ್ಯ ಜನರಿಗೆ ಸಹಜವಾಗಿ ಇರುತ್ತದೆ. ಈ ಮಹಾವ್ಯಕ್ತಿಗಳು ಬರೆಹಗಾರರಾದರಂತೂ ಅವರ ಕೃತಿಗಳನ್ನು ಓದುವ ಓದುಗರಿಗೆ ಅವರ ಬದುಕಿನ ವಿವರಗ್ತಳನ್ನು ತಿಳಿಯುವ ಹಂಬಲ ತುಸು ಹೆಚ್ಚೇ ಇರುತ್ತದೆ. ಹಲವು ಕಾರಣಗಳಿರಬಹುದು. ಅವುಗಳಲ್ಲಿ ಒಂದು ಕಾರಣ ಎಲ್ಲರಿಗೂ ಇರುವಂತೆ ಅವರಿಗೂ ದಿನಕ್ಕೆ ಇಪ್ಪತ್ತನಾಲ್ಕೇ ಗಂಟೆಗಳ ಸಮಯವಿರುವಾಗ ನಮಗೆ ಆಗದ್ದನ್ನು ಸಾಧಿಸಲು ಅವರಿಗೆ ಹೇಗೆ ಸಾಧ್ಯವಾಯಿತು ಎಂಬುದನ್ನು ತಿಳಿಯುವ ಕುತೂಹಲ. ಇಂತಹ ಸಾಮಾನ್ಯರ ಅಪೇಕ್ಷೆಯನ್ನು ಈಡೇರಿಸುವಂಥವು ಅಂತಹ ಮಹಾವ್ಯಕ್ತಿಗಳ ಆತ್ಮಕಥೆಗಳು ಅಥವಾ ಅವರನ್ನು ಕುರಿತ ಜೀವನಚರಿತ್ರೆಗಳು. ಆತ್ಮಕಥೆಗಳಿಗಿಂತ ಜೀವನಚರಿತ್ರೆಗಳಿಗೆ ಜನ ಒಂದಿಷ್ಟು ಹೆಚ್ಚು ಆದ್ಯತೆ ನೀಡುವುದುಂಟು. ಆತ್ಮಕಥೆಗಳಲ್ಲಿ ಒಬ್ಬ ವ್ಯಕ್ತಿ ಕೆಲವು ಸಂಗತಿಗಳನ್ನು ಬರೆಯುವ ಮೂಲಕ ತನ್ನನ್ನು ತೆರೆದುಕೊಳ್ಳಲು ಇಷ್ಟಪಡದೆ ಬಿಟ್ಟ ಸಂಗತಿಗಳನ್ನೂ ಜೀವನಚರಿತ್ರೆಗಳು ಒಳಗೊಂಡಿರಲು ಸಾಧ್ಯವೆಂದು ನಂಬುವುದು ಬಹುಶಃ ಇದಕ್ಕೆ ಕಾರಣವಿರಬಹುದು. ಹಾಗಾಗಿ ಮಹಾವ್ಯಕ್ತಿಗಳ ಜೀವನ ಚರಿತ್ರೆಗಳಿಗೆ ಅವರ ಬದುಕಿನ ವಿವರಗಳನ್ನು ಕುರಿತ ವ್ಯಕ್ತಿಚಿತ್ರಗಳು ಮತ್ತು ಬಿಡಿಲೇಖನಗಳಿಗೆ ತಮ್ಮದೇ ಆದ ಮಹತ್ವವಿದೆ.

ಭಾರತ ಮಾತ್ರವಲ್ಲ ವಿಶ್ವದ ಮಹಾವ್ಯಕ್ತಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ಹೆಸರು ಡಾ ಬಿ ಆರ್‌ ಅಂಬೇಡ್ಕರ್‌ ಅವರದ್ದು. ಅವರಷ್ಟು ಓದಿಕೊಂಡವರು ಈಗಿನ ಕಾಲದಲ್ಲಿಯೇ ಇಲ್ಲವೆನ್ನುವಷ್ಟು ವಿರಳವಾಗಿರುವಾಗ ಅವರ ಕಾಲಕ್ಕಂತೂ ಇರಲೇ ಇಲ್ಲವೆಂದು ಧೈರ್ಯದಿಂದ ಹೇಳಬಹುದು. ಭಾರತದಲ್ಲಿ ಈಗಲೂ ಅಂಬೇಡ್ಕರ್‌ ಅಂದರೆ ಬಹಳಷ್ಟು ಜನರಿಗೆ ತಕ್ಷಣಕ್ಕೆ ನೆನಪಿಗೆ ಬರುವುದು ಅವರ ಜಾತಿಯೇ ಹೊರತು ಅವರ ವಿದ್ವತ್ತು ಅಲ್ಲ. ಆದರೆ ಅಂಬೇಡ್ಕರ್‌ ಅಂದರೆ ಏನು? ಅವರ ವ್ಯಕ್ತಿತ್ವ ಎಷ್ಟು ದೊಡ್ಡಮಟ್ಟದ್ದು ಎಂಬುದನ್ನು ಇಡೀ ವಿಶ್ವ ಗುರುತಿಸಿದೆ. ಅನೇಕ ಕಡೆ ಅವರ ಜನ್ಮದಿನವನ್ನು ʼಜ್ಞಾನದ ದಿನʼವೆಂದು ಕೂಡ ಆಚರಿಸಲಾಗುತ್ತಿದೆ.

ಇಂತಹ ಒಬ್ಬ ಮಹಾವ್ಯಕ್ತಿಯ ಜೀವನದ ವಿವಿರಗಳನ್ನು ತಿಳಿಸುವ ಅನೇಕ ಕೃತಿಗಳು ಈಗಾಗಲೇ ಕನ್ನಡವೂ ಸೇರಿದಂತೆ ಭಾರತದ ಬೇರೆ ಬೇರೆ ಭಾಷೆಗಳಲ್ಲಿ ಬಂದಿವೆ. ಅಂತಹವುಗಳ ಸಾಲಿಗೆ ಇತ್ತೀಚೆಗೆ ಪ್ರಕಟವಾಗಿರುವ ʼಡಾ ಬಾಬಾ‌ ಸಾಹೇಬ್ಅಂಬೇಡ್ಕರ್‌ ದಿನಚರಿʼ ಹೊಸದಾಗಿ ಸೇರ್ಪಡೆ. ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಪ್ರಕಟಿಸಿರುವ ಸುಮಾರು ೧೬೦ ಪುಟಗಳ ಈ ಪುಸ್ತಕ ಅಂಬೇಡ್ಕರ್‌ ಅವರ ಖಾಸಗೀ ಬದುಕಿನ ಕೆಲವು ಮುಖ್ಯ ಸಂಗತಿಗಳನ್ನು ತಿಳಿಸುವ ಹನ್ನೊಂದು ಕಿರುಲೇಖನಗಳು ಮತ್ತು ಅನುಬಂಧದಲ್ಲಿ ಸೇರಿಸಲ್ಪಟ್ಟ ಮೂರು ದೊಡ್ಡ ಲೇಖನಗಳನ್ನು ಒಳಗೊಂಡಿದೆ. ಅಂಬೇಡ್ಕರ್‌ ಅವರ ಮನೆಯ ಗ್ರಂಥಾಲಯವನ್ನು ನೋಡಿಕೊಳ್ಳುವ ಜವಾಬ್ದಾರಿಯ ಮೇಲೆ ಬಹಳಷ್ಟು ಕಾಲ ಅವರೊಂದಿಗೆ ತೀರಾ ಹತ್ತಿರದ ಒಡನಾಟದಲ್ಲಿದ್ದ ಉತ್ತರ ಪ್ರದೇಶ ಮೂಲದ ದೇವಿದಯಾಳ್‌ ಅವರು ಅಂಬೇಡ್ಕರ್‌ ಅವರ ಬೃಹತ್‌ ಜೀವನ ಚರಿತ್ರೆಯನ್ನು ಹಲವು ಸಂಪುಟಗಳಲ್ಲಿ ಬರೆದಂಥವರು. ಹಿಂದಿಯಲ್ಲಿರುವ ಅವರ ಕೆಲವು ಆಯ್ದ ಲೇಖನಗಳು ಮತ್ತು ಅವುಗಳ ತೆಲುಗು ಅನುವಾದಗಳನ್ನು ಇಟ್ಟುಕೊಂಡು ಅವನ್ನು ಇಲ್ಲಿ ಕನ್ನಡಕ್ಕೆ ತಂದಿರುವವರು ಪ್ರಾಧ್ಯಾಪಕ ಪಿ ಆರಡಿ ಮಲ್ಲಯ್ಯ ಕಟ್ಟೇರ ಅವರು.

ಅಂಬೇಡ್ಕರ್‌ ಅಂತಹವರ ಜೀವನ ಚರಿತ್ರೆಯನ್ನು ಯಾರು ಬರೆದರೂ ಎಷ್ಟು ಬರೆದರೂ ಇನ್ನೂ ಏನಾದರೂ ಮಹತ್ವದ್ದು ಉಳಿದೇ ಇರುತ್ತದೆ ಎಂಬುದನ್ನು ಒಪ್ಪಿಕೊಳ್ಳವ ಅನುವಾದಕರು ʼಈ ಪುಸ್ತಕವನ್ನು ಅನುವಾದ ಮಾಡುವಾಗ ಮುಖ್ಯವಾಗಿ ನನ್ನ ಎದುರಿಗೆ ಇದ್ದದ್ದು ವಿದ್ಯಾರ್ಥಿ ಸಮೂಹ; ಅವರ ಜೀವನಕ್ಕೆ ಮಾರ್ಗದರ್ಶನ ನೀಡಬಲ್ಲ ಅಂಬೇಡ್ಕರ್‌ ಜೀವನದ ಕೆಲವು ಮುಖ್ಯ ಸಂಗತಿಗಳನ್ನು ಅತ್ಯಂತ ಸರಳವಾಗಿ ತಿಳಿಸಿಕೊಡುವುದನ್ನೇ ಇಲ್ಲಿ ನಾನು ಮುಖ್ಯ ಗುರಿಯಾಗಿ ಇಟ್ಟುಕೊಂಡಿದ್ದೇನೆʼ ಎಂದು ಹೇಳಿ ಈ ಕೆಲಸವನ್ನು ಮಾಡಿದ್ದಾರೆ. ಅವರು ಹೇಳಿದಂತೆ ಇದು ಇಂದು ಕೋಮುವಾದ, ಜಾತಿಯತೆ, ದೇವರು ಧರ್ಮಗಳ ಹೆಸರಿನಲ್ಲಿ ಜನಾಂಗಗಳ ಮಧ್ಯೆ ದ್ವೇಷ ಅಸೂಯೆಗಳನ್ನು ಹುಟ್ಟುಹಾಕಿ ಹೊಡೆದಾಟದ ಅಸ್ತ್ರಗಳಾಗಿ ಬಳಕೆಯಾಗುವ ಮೂಲಕ ತಮ್ಮ ಭವಿಷ್ಯವನ್ನೂ ಆ ಮೂಲಕ ದೇಶದ ಭವಿಷ್ಯವನ್ನೂ ಹಾಳುಮಾಡುತ್ತಿರುವ ನಮ್ಮ ವಿದ್ಯಾರ್ಥಿಗಳು ಮತ್ತು ಯುವಕರು ಅಂಬೇಡ್ಕರ್‌ ಅವರ ಜೀವನದಿಂದ ಕಲಿಯಬಹುದಾದ ಮತ್ತು ಕಲಿಯಲೇಬೇಕಾದ ಹತ್ತು ಹಲವು ಸಂಗತಿಗಳನ್ನು ಈ ಕೃತಿ ಒಳಗೊಂಡಿದೆ.

ʻನಾನು ಮಲಗುವ ಕೋಣೆಯೇ ನನ್ನ ಸಮಾಧಿʼ ʻಡಾ ಅಂಬೇಡ್ಕರ್‌ ಅವರ ರಜಾದಿನಗಳುʼ ʻಶಿಕ್ಷಣ ಪಡೆಯುವುದೆಂದರೆ ಶಕ್ತಿಯನ್ನು ಪಡೆಯುವುದೆಂದೆ ಅರ್ಥʼ ʼ ಅಂಬೇಡ್ಕರ್‌ ಅವರ ಅಧ್ಯಯನಶೀಲತೆʼ ಮುಂತಾದ ಲೇಖನಗಳು ಅಂಬೇಡ್ಕರ್‌ ಅವರ ಓದಿನ ತೀವ್ರವಾದ ಆಸಕ್ತಿ, ಅದನ್ನು ಪೂರೈಸಿಕೊಳ್ಳಲು ಅವರು ತಮಗಿರುವ  ಬಡತನದ ನಡುವೆಯೇ ಮಾಡುತ್ತಿದ್ದ ಪ್ರಯತ್ನಗಳು, ಬಿಡುವಿಲ್ಲದೆ ಕೆಲಸಗಳ ನಡುವೆಯೂ ಓದಲು ಹೊಂದಿಸಿಕೊಳ್ಳುತ್ತಿದ್ದ ಸಮಯ, ಮಿತವಾದ ಆದಾಯದಲ್ಲಿಯೇ ಅವರು ಪುಸ್ತಕ ಖರೀದಿಗೆ ಎಷ್ಟುಹಣವನ್ನು ಹೇಗೆ ಮೀಸಲಿಡುತ್ತಿದ್ದರು  ಇತ್ಯಾದಿಗಳ ಬಗ್ಗೆ ಅನೇಕ ಮಾರ್ಗದರ್ಶಿ ಅಂಶಗಳನ್ನು ನಮ್ಮ ವಿದ್ಯಾರ್ಥಿಗಳಿಗೆ ನೀಡುತ್ತವೆ.

ಅಂಬೇಡ್ಕರ್‌ ಅವರ ಆದಾಯ ೧೦೦ ರೂಪಾಯಿ ಇದ್ದಾಗ ಅದರಲ್ಲಿ ೫೦ ರೂಪಾಯಿಗಳನ್ನು ಪುಸ್ತಕ ಖರೀದಿಸಲು ಬಳಸುತ್ತಿದ್ದರಂತೆ! ಅಂಬೇಡ್ಕರ್‌ ಮನೆ ಎಂದರೆ ಅದು ಒಂದು ಗ್ರಂಥಾಲಯವಲ್ಲದೇ ಬೇರೆ ಏನೂ ಅಲ್ಲ. ನನಗೆ ತಿಳಿದ ಮಟ್ಟಿಗೆ ಭಾರತದಲ್ಲಿ ಅವರಷ್ಟು ಪುಸ್ತಕಗಳನ್ನು ವೈಯಕ್ತಿಕ ಗ್ರಂಥಾಲಯವಾಗಿ ಸಂಗ್ರಹಿಸಿದವರು, ಮತ್ತು ಅವನ್ನು ಓದಿದವರು ಇಲ್ಲ. ಆ ಕಾಲಕ್ಕೇ ಅವರ ಗ್ರಂಥಾಲಯದಲ್ಲಿ ಐವತ್ತು ಸಾವಿರ ಪುಸ್ತಕಗಳಿದ್ದವಂತೆ! ಭಾರತದಲ್ಲಿ ಪುಸ್ತಕಗಳನ್ನು ಇಡಲೆಂದೇ ಒಂದು ಭವ್ಯವಾದ ಮನೆಯನ್ನು ಕಟ್ಟಿಸಿದವರೆಂದರೆ ಅವರು ಅಂಬೇಡ್ಕರ್‌ ಮಾತ್ರ. ಮುಂಬೈನ ʼರಾಜಗೃಹʼ ಅವರ ಮನೆಯೆಂಬ ಒಂದು ಅಮೂಲ್ಯ ಗ್ರಂಥಾಲಯವೇ! ಅವರು ಕೇಂದ್ರದ ಮಂತ್ರಿಯಿದ್ದಾಗ ದೆಹಲಿಯ ಮನೆಗಳೂ ಕೂಡ ಒಂದರ್ಥದಲ್ಲಿ ಗ್ರಂಥಾಲಯಗಳೇ! ಅಂಬೇಡ್ಕರ್‌ ಅವರು ಕೇವಲ ಪುಸ್ತಕಗಳನ್ನು ಸಂಗ್ರಹಿಸುವ ಹವ್ಯಾಸಿ ಆಗಿರಲಿಲ್ಲ; ಬದಲಾಗಿ ಅವುಗಳನ್ನು ಅಮೂಲಾಗ್ರವಾಗಿ ಓದುವ ಶಿಸ್ತುಬದ್ಧ ಅಧ್ಯಯನಕಾರರೂ ಆಗಿದ್ದರು. ಅವರು ಎಲ್ಲಿಗೇ ಹೊರಡಲಿ ಅವರ ಜೊತೆಗೆ ಕೆಲವಾದರೂ ಪುಸ್ತಕಗಳು ಇದ್ದೇ ಇರುತ್ತಿದ್ದವಂತೆ.  ʻಪುಸ್ತಕ ಜೊತೆಗೆ ಇಲ್ಲದ ಅಂಬೇಡ್ಕರ್‌ ಅವರನ್ನು ನೀವು ನೋಡಲಾರಿರಿʼ ಎಂಬ ಲೇಖಕರ ಮಾತು ಅತಿಶಯೋಕ್ತಿಯೇನಲ್ಲ. ಅವರಿಗೆ ಹತ್ತು ನಿಮಿಶ ಸಮಯ ಸಿಕ್ಕರೂ ಅವರು ಯಾವುದಾದರೂ ಒಂದು ಪುಸ್ತಕ ಓದಲು ತೊಡಗುತ್ತಿದ್ದರು. ಕಛೇರಿಯಲ್ಲಿರುವಾಗ, ಮನೆಯಲ್ಲಿರುವಾಗ, ಯಾರದ್ದಾದರೂ ಜೊತೆ ಮಾತನಾಡಲು ಕೊಟ್ಟ ಸಮಯ ಮುಗಿದಾಗ, ಕೋರ್ಟಿನಲ್ಲಿ ಬೇರೆಯವರು ವಾದ ಮಾಡುವಾಗ ಅಷ್ಟೇ ಏಕೆ ಮನೆಯಿಂದ ಐದಾರು ನಿಮಿಷಗಳ ಪ್ರಯಾಣದ ಅವಧಿಯಲ್ಲಿ ಕಾರಿನಲ್ಲಿ ಕುಳಿತಾಗ ಕೂಡ ಅವರು ಮಾಡುತ್ತಿದ್ದ ಕೆಲಸ ಎಂದರೆ ಅದು ಓದುವುದು! ಹಾಳು ಹರಟೆ ಹೊಡೆಯುವುದು, ಕೆಲಸಕ್ಕೆ ಬಾರದ ಕೆಲಸಗಳಲ್ಲಿ, ಮಾತುಗಳಲ್ಲಿ ತೊಡಗುವುದು ಇತ್ಯಾದಿಗಳಲ್ಲಿಅವರೆಂದೂ ಸಮಯವನ್ನು ಪೋಲುಮಾಡುತ್ತಿರಲಿಲ್ಲ.

ʻಅವರು ಮಲಗುವ ಮೊದಲು ಹಾಸಿಗೆ ಹತ್ತಿರ ಕೆಲವು ಪುಸ್ತಕಗಳನ್ನು ಇಡಲು ಹೇಳುತ್ತಿದ್ದರು. ಅವರು ಮಲಗುವ ಸಂದರ್ಭವನ್ನು ಕೊನೆಗೂ ನನಗೆ ನೋಡಲು ಆಗಲೇ ಇಲ್ಲ. ಯಾವಾಗ ನೋಡಿದರೂ ಓದುತ್ತಲೇ ಇರುತ್ತಿದ್ದರು. ಕೆಲವು ದಿನ ಬೆಳಗಿನ ಜಾವದವರೆಗೂ ಓದಿ ಆಗ ಒಂದಿಷ್ಟು ಹೊತ್ತು ಮಲಗುತ್ತಿದ್ದರುʼ ಎಂದು ಲೇಖಕರು ಬರೆಯುತ್ತಾರೆ. ದಿನಪತ್ರಿಕೆಗಳನ್ನು ಕೂಡ ಸುಮ್ಮನೆ ತಿರುವಿ ಹಾಕದೇ ಅವನ್ನು ಅತ್ಯಂತ ಶಿಸ್ತುಬದ್ಧವಾಗಿಯೇ ಓದುತ್ತಿದ್ದರಂತೆ. ಪತ್ರಿಕೆಗಳನ್ನು ಓದುವಾಗ ಒಂದು ಕೆಂಪು ಮಸಿಯ ಪೆನ್ನು ಕೈಯಲ್ಲಿ ಇರಲೇಬೇಕಿತ್ತಂತೆ. ಪತ್ರಿಕೆಗಳಲ್ಲಿ ಓದಿದ ಮುಖ್ಯಾಂಶಗಳನ್ನು ಟಿಪ್ಪಣಿ ಮಾಡಿಕೊಳ್ಳುವುದು, ಪ್ರಮುಖ ಸುದ್ಧಿಗಳನ್ನು ಗೆರೆಎಳೆದು ಗುರ್ತುಮಾಡಿಕೊಳ್ಳುವುದು, ಅಂತಹ ಸುದ್ಧಿಗಳನ್ನು ಕಟ್‌ ಮಾಡಿ ನಿರ್ಧಿಷ್ಟವಾದ ಫೈಲ್‌ಗಳಲ್ಲಿ ಜೋಡಿಸುವುದು ಇತ್ಯಾದಿ ಮಾಡುತ್ತಿದ್ದರಂತೆ. ಇನ್ನೂ ಕುತೂಹಲದ ಸಂಗತಿ ಎಂದರೆ ಟಾಯ್ಲೆಟ್‌ ರೂಮಿಗೆ ಹೋಗುವಾಗ ಕೂಡ ಒಂದೆರಡು ಪತ್ರಿಕೆ ಎತ್ತಿಕೊಂಡು ಹೋಗಿ ಓದಿಕೊಂಡು ಬರುತ್ತಿದ್ದರಂತೆ! ಅಂಬೇಡ್ಕರ್‌ ಅವರನ್ನು ಇಂದು ವಿಶ್ವಮಟ್ಟದ ನಾಯಕನನ್ನಾಗಿ ಬೆಳಸಿದ್ದು ಅವರ ಈ ಬಗೆಯ ಓದೇ  ಹೊರತು ಬೇರೇನೂ ಅಲ್ಲ. ಅವರನ್ನು ನಾವೆಲ್ಲ ಇಂದು ಅಷ್ಟೊಂದು ಗೌರವಿಸುವಂತೆ ಮಾಡಿದ್ದು ಯಾವುದೇ ವ್ಯಕ್ತಿಯಲ್ಲ; ಬದಲಾಗಿ ಅವರ ಪುಸ್ತಕಗಳು ಎಂಬುದನ್ನು ಮೊಬೈಲ್‌ ರೀಲ್ಸ್‌ಗಳ ಹಿಂದೆ ಬಿದ್ದು ದಿನದಿನಕ್ಕೂ ಓದಿನಿಂದ ವಿಮುಖವಾಗುತ್ತಿರುವ ನಮ್ಮ ವಿದ್ಯಾರ್ಥಿಗಳು ಇಂದು ಅಗತ್ಯವಾಗಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ.

ಅಂಬೇಡ್ಕರ್‌ ಅವರ ಓದು ಅಧ್ಯಯನದ ವಿಧಾನ ಇತ್ಯಾದಿಗಳ ಜೊತೆಗೆ ಅವರು ತಮ್ಮ ಮೊದಲನೆಯ ಹೆಂಡತಿಯ ಮರಣದ ನಂತರದ ತಮ್ಮ ಏಕಾಂಗಿತನದ ಬದುಕನ್ನು ಬೇಸರದ ಬದುಕನ್ನಾಗಿಸಿಕೊಂಡು ನರಳದೆ ಹೇಗೆ ಅದನ್ನು ಸಂತೋಷದ ಬದುಕನ್ನಾಗಿಸಿಕೊಂಡರು, ಅವರ ಬಹುಮುಖ್ಯವೆನಿಸುವ ಕೃತಿಗಳನ್ನು ರಚಿಸುವಾಗ ಏನೆಲ್ಲ ಸಮಸ್ಯೆ ಸವಾಲುಗಳನ್ನು ಎದುರಿಸಿದರು ಎಂಬುದರ ಬಗ್ಗೆ ಕೆಲವು ಸೂಕ್ಷ್ಮ ಅಂಶಗಳನ್ನು ಈ ಕೃತಿ ನೀಡಿದೆ. ದೇಶದ ಕಾರ್ಮಿಕ ಮಂತ್ರಿಯಾಗಿದ್ದರೂ ಅತಿಥಿಗಳಿಗೇ ತಾವೇ ಖುದ್ಧಾಗಿ ಅಡುಗೆ ಮಾಡಿ ಬಡಿಸುತ್ತಿದ್ದ ಅವರ ಅತಿಥಿ ಸತ್ಕಾರದ ರೀತಿ ಗಮನ ಸೆಳೆಯುತ್ತದೆ. ಗಾಂಧೀಜಿಯೊಂದಿಗೆ ಇಡೀ ಬದುಕಿನ ತುಂಬಾ ಅವರು ಇಟ್ಟುಕೊಂಡಿದ್ದ ಸೈದ್ದಾಂತಿಕ ವೈರುಧ್ಯದ ಮಧ್ಯೆಯೂ ಅವರ ಹತ್ಯೆಯ ಸುದ್ಧಿ ಕೇಳಿ ದಿಗ್ಭ್ರಾಂತರಾಗುವುದು ಮತ್ತು ʼಆತನ ಯಾವ ಶತೃ ಕೂಡ ಆತನಿಗೆ ಇಂತಹ ಸಾವು ಬರಲಿ ಎಂದು ಬಯಸುವುದಿಲ್ಲʼ ಎಂದು ಉದ್ಗರಿಸುವುದು ಅವರು ಗಾಂಧಿಯ ಬಗ್ಗೆ ಹೊಂದಿದ್ದ ಗೌರವವನ್ನು ತೋರಿಸುತ್ತದೆ.

ಈ ದೇಶದ ಶೇಕಡಾ ತೊಂಬತ್ತರಷ್ಟು ಜನರ ಬದುಕು ಹಸನಾಗಲು ಜೀವನಪೂರ್ತಿ ಹೋರಾಡಿದ ಅಂಬೇಡ್ಕರ್‌ ನಮ್ಮ ದೇಶದ ತಳಸಮುದಾಯದ ಪಾಲಿಗಂತೂ ನಿಜಾರ್ಥದಲ್ಲಿ ಭಾಗ್ಯವಿಧಾನೇ ಸರಿ. ಈ ಪುಸ್ತಕದಲ್ಲಿನ ಒಂದು ಕುತೂಹಲಕಾರಿ ಸಂದರ್ಭವನ್ನು ಉಲ್ಲೇಖಿಸಬೇಕು: ಒಮ್ಮೆ ʼದಿ ಗಾರ್ಡಿಯನ್‌ʼ ಮತ್ತು ʼದಿ ನ್ಯೂಯಾರ್ಕ್‌ʼ ಪತ್ರಿಕೆಗಳ ಪ್ರತಿನಿಧಿಗಳು ಗಾಂಧೀಜಿ, ಜಿನ್ನಾ ಮತ್ತು ಅಂಬೇಡ್ಕರ್‌ ಅವರನ್ನು ಭೇಟಿ ಮಾಡಲು ಬಂದಿರುತ್ತಾರೆ. ಗಾಂಧೀಜಿ ಅವರಿಗೆ ರಾತ್ರಿ ೯.೦೦ ಗಂಟೆಗೆ ಸಮಯ ನೀಡಿದ್ದರಂತೆ. ಜಿನ್ನಾ ರಾತ್ರಿ ೯.೩೦ಕ್ಕೆ ನೀಡಿದ್ದರಂತೆ. ಅಂಬೇಡ್ಕರ್‌ ಅವರನ್ನು ಕೇಳಿದಾಗ ಯಾವಾಗಲಾದರೂ ಬನ್ನಿ ಎಂದು ಹೇಳಿದ್ದರಂತೆ. ಆದರೆ ನೀಡಲಾದ ಸಮಯದಂತೆ ಅವರು ಹೋದಾಗ ಗಾಂಧೀಜಿ ನಿದ್ರಿಸುತ್ತಿದ್ದಾರೆ ಎಂದು ಉತ್ತರ ದೊರೆಯಿತಂತೆ. ಜಿನ್ನಾ ಅವರ ಸಹಾಯಕರೂ ಇದೇ ಉತ್ತರವನ್ನು ನೀಡಿದರಂತೆ. ಆ ಪ್ರತಿನಿಧಿಗಳು ಅಂಬೇಡ್ಕರ್‌ ಅವರಲ್ಲಿಗೆ ಬರುವಾಗ ಸರಿಸುಮಾರು ಮಧ್ಯರಾತ್ರಿ ಆಗಿತ್ತಂತೆ. ಆಗಲೂ ಓದುತ್ತಾ ಕುಳಿತ ಅಂಬೇಡ್ಕರ್‌ ಅವರನ್ನು ನೋಡಿ ಬೆರಗಾದ ಅವರ ಬಾಯಿಂದ ʼಗಾಂಧೀಜಿ, ಜಿನ್ನಾ ಭೇಟಿಗೆ ಸಿಗಲಿಲ್ಲ. ಅವರು ನಿದ್ರಿಸುತ್ತಿದ್ದರು. ನೀವು ಇಷ್ಟುಹೊತ್ತಿನಲ್ಲೂ ಎಚ್ಚರವಾಗಿದ್ದೀರಲ್ಲ? ಎಂಬ ಪ್ರಶ್ನೆ ಸಹಜವೆಂಬಂತೆ ಬಂದಾಗ ಅಂಬೇಡ್ಕರ್‌ ಕೊಡುವ ಉತ್ತರ ಮಾರ್ಮಿಕವಾಗಿದೆ: “ಗಾಂಧೀಜಿ, ಜಿನ್ನಾ ಅವರು ನಿದ್ರಿಸುತ್ತಿದ್ದಾರೆಂದರೆ ಅವರವರ ಸಮಾಜ ಎಚ್ಚರಗೊಂಡಿವೆ. ಅದು ಅವರಿಗೂ ಗೊತ್ತು ಅವರ ಸಮಾಜಕ್ಕೂ ಗೊತ್ತು. ನಾನು ಎಚ್ಚರವಾಗಿದ್ದೇನೆಂದರೆ ನನ್ನ ಸಮಾಜ ಇನ್ನೂ ಗಾಢನಿದ್ದೆಯಿಂದ ಎದ್ದೇಳುವ ಮನಸ್ಸೂ ಮಾಡಿಲ್ಲ.”

ಹೀಗೆ ಹೆಚ್ಚಾಗಿ ಸಾರ್ವಜನಿಕವಾಗಿ ಗೊತ್ತಿಲ್ಲದ ಅಂಬೇಡ್ಕರ್‌ ಅವರ ಜೀವನದ ಕೆಲವು ಮಹತ್ವದ ಸಂಗತಿಗಳ ಬಗ್ಗೆ ಸೂಕ್ಷ್ಮ ಒಳನೋಟವನ್ನು ನೀಡಬಲ್ಲ ಈ ಕೃತಿಗೆ ಮಿತಿಗಳೇ ಇಲ್ಲ ಎಂದೇನೂ ಇಲ್ಲ. ಅನುವಾದಕರು ತಮ್ಮ ಸುಮಾರು ಹದಿನೆಂಟು ಪುಟಗಳ ಸುದೀರ್ಘವಾದ ಮಾತುಗಳನ್ನು ಬರೆದಿದ್ದಾರೆ. ಇದು ಸಹಜವಾಗಿ ಅನೇಕ ಅಂಶಗಳ ಪುನರಾವರ್ತನೆಗೆ ಕಾರಣವಾಗಿದೆ. ಅದನ್ನು ತುಸು ಸಂಕ್ಷಿಪ್ತಗೊಳಿಸಿ ದಿಕ್ಸೂಚಿಯನ್ನಾಗಿಸಬೇಕಿತ್ತು. ಹಾಗೆಯೇ ಕೃತಿಗೆ ತುಸು ʻಭಾರʼವೆನಿಸುವ ಯು ಆರ್‌ ರಾವ್‌ ಮತ್ತು ದಯಾ ಪವಾರ್‌ ಅವರ ದೀರ್ಘಲೇಖನಗಳನ್ನು ಬಿಟ್ಟು ಅದರ ಬದಲು ದೇವಿದಯಾಳ್‌ ಅವರು ಬರೆದ ಅಂಬೇಡ್ಕರ್‌ ಜೀವನ ಚರಿತ್ರೆಯ ಇನ್ನಷ್ಟು ಚಿಕ್ಕ ಚಿಕ್ಕ ಮತ್ತು ಸ್ವಾರಸ್ಯಕರ ಸಂಗತಿಗಳನ್ನೇ ಹೆಕ್ಕಿ ಹಾಕಿಕೊಂಡಿದ್ದರೆ ಕೃತಿ ಇನ್ನಷ್ಟು ʻವಿದ್ಯಾರ್ಥಿಸ್ನೇಹಿʼ ಆಗುವ ಮೂಲಕ ತಮ್ಮ ಉದ್ದೇಶವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಈಡೇರಿಸುವಲ್ಲಿ ಸಹಾಯವಾಗುತ್ತಿತ್ತು.

ಇಂತಹ ಒಂದೆರಡು ಮಿತಿಗಳ ನಡುವೆಯೂ ಈ ಕೃತಿಗೆ ಮೌಲಿಕ ಮುನ್ನುಡಿ ಬರೆದಿರುವ ಹಿರಿಯ ವಿದ್ವಾಂಸ, ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರು ಅಂಬೇಡ್ಕರ್‌ ಅವರ ಮೊದಲನೆಯ ಹೆಂಡತಿಯ ಮರಣದ ನಂತರ ಸುಮಾರು ಹದಿಮೂರು ವರ್ಷಗಳ ಅವರ ಏಕಾಂತ ಜೀವನವನ್ನು ಪ್ರಸ್ತಾಪಿಸುತ್ತಾ, ʼಜ್ಙಾನವನ್ನು ಸಂಪಾದಿಸುವುದು, ಶಿಸ್ತುಬದ್ಧ ಜೀವನವನ್ನು ನಡೆಸುವುದು, ಮತ್ತು ಸಮಾಜಕ್ಕಾಗಿ ಬದುಕನ್ನು ಮುಡುಪಾಗಿಡುವುದು ಈ ಮೂರು ತತ್ವಗಳನ್ನು ಅಳವಡಿಸಿಕೊಂಡವನಿಗೆ ದುಃಖವು ಹತ್ತಿರ ಸುಳಿಯುವುದಿಲ್ಲʼ ಎಂಬ ಅಂಬೇಡ್ಕರ್‌ ಅವರ ಬೆಲೆಯುಳ್ಳ ಮಾತನ್ನು ಉಲ್ಲೇಖ ಮಾಡುವಂತೆ ಏನೆಲ್ಲ ಮನರಂಜನೆಯ ಸೌಕರ್ಯ ಸೌಲಭ್ಯಗಳನ್ನು ಬಳಸಿಕೊಂಡೂ, ಖಿನ್ನತೆಯಿಂದ ಬಳಲುತ್ತಿರುವ ಮತ್ತು ಈ ಸೌಲಭ್ಯ ಸೌಕರ್ಯಗಳಲ್ಲಿ ತಮ್ಮನ್ನೇ ಕಳೆದುಕೊಳ್ಳುತ್ತಿರುವ ನಮ್ಮ ವಿದ್ಯಾರ್ಥಿ ಯುವಜನರು ಮಾತ್ರಲ್ಲ ತಮ್ಮ ಬದುಕನ್ನು ʼಸಾರ್ಥಕʼವಾಗಿ ಬದುಕಬೇಕು ಎಂಬ ಕನಸನ್ನು ಕಟ್ಟಿಕೊಂಡಿರುವ ಎಲ್ಲರೂ ಒಮ್ಮೆ ಓದಬೇಕಾದ ಕೃತಿಯಿದು. ಇಂತಹ ಮೌಲಿಕ ಕೃತಿಯನ್ನು ಕನ್ನಡಕ್ಕೆ ತಂದ ಲೇಖಕರು ಮತ್ತು ಅದನ್ನು ಆಸಕ್ತಿವಹಿಸಿ ಪ್ರಕಟಿಸಿದ ಅಹರ್ನಿಶಿಯ ಅಕ್ಷತಾ ಹುಂಚದಕಟ್ಟೆ ಅಭಿನಂದಾರ್ಹರು.

*****

Saturday, June 7, 2025

ʻಕಾವೇರಿ ಆರತಿʼ: ಯಾವುದರ ಆಹುತಿ?

 

ʻಕಾವೇರಿ ಆರತಿʼ: ಯಾವುದರ ಆಹುತಿ?

ಡಾ. ರಾಜೇಂದ್ರ ಬುರಡಿಕಟ್ಟಿ

`ದಕ್ಷಿಣ ಭಾರತದ ಮುಖ್ಯನದಿ’ ಎಂದು ಕರೆಯಲ್ಪಡುವ ಕಾವೇರಿ ನದಿಗೆ ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರದ ಬಳಿ ʼಕಾವೇರಿ ಆರತಿʼ ಎಂಬ ಕಾರ್ಯಕ್ರಮವನ್ನು ಆರಂಭಿಸುವ ಕುರಿತಂತೆ ಪರವಿರೋಧಗಳ ಚರ್ಚೆ ಈಗ ಮುನ್ನೆಲೆಗೆ ಬಂದಿದೆ. ರಾಜ್ಯ ರೈತ ಸಂಘದ ಅನೇಕ ಮುಖಂಡರು ಇದಕ್ಕೆ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದು ವರದಿಯಾಗಿದೆ. ಈ ಹಿನ್ನಲೆಯಲ್ಲಿ ಈ ಆರತಿ ಕಾರ್ಯಕ್ರಮದ ಸಾಧಕ ಬಾದಕಗಳೇನು? ಈ ಕಾರ್ಯಕ್ರಮ ಒಂದು ವೇಳೆ ಜಾರಿಯಾಗದಿದ್ದರೆ ಆಗಬಹುದಾದ ನಷ್ಟವೇನು ಮತ್ತು ಜಾರಿಯಾದರೆ ಆಗಬಹುದಾದ ಲಾಭ ನಷ್ಟಗಳೇನು ಎಂಬುದನ್ನು ಚರ್ಚಿಸುವುದು ಈ ಲೇಖನದ ಉದ್ದೇಶ.

ಈ ʼಆರತಿʼ ಕಾರ್ಯಕ್ರಮದ ಚರ್ಚೆಗೆ ತೊಡಗುವ ಮುನ್ನ ಕರ್ನಾಟಕದ ಸಾಂಸ್ಕೃತಿಕ ರಾಜಕಾರಣದಲ್ಲಿ ದಕ್ಷಿಣದ ʼಕಾವೇರಿ ವಲಯವುʼ ಉತ್ತರದ ʼಕೃಷ್ಣಾವಲಯʼದ ಮೇಲೆ ಹೇಗೆಲ್ಲ ತನ್ನ ಅಧಿಪತ್ಯವನ್ನು ಸಾಧಿಸಿದೆ ಎಂಬುದನ್ನು ತುಸು ವಿವರವಾಗಿ ನೋಡೋಣ. ಇದನ್ನು ಇದರ ಭಾಗವಾದ ಕಾವೇರಿ ನದಿಯಿಂದಲೇ ಆರಂಭಿಸಬಹುದು.  ರಾಜಕೀಯ ಪ್ರಭಾವದಿಂದ  ನದಿಗಳಲ್ಲಿ ಕಾವೇರಿಯು ಉಳಿದ ನದಿಗಳಿಗಿಂತ ತಕ್ಕ ಅರ್ಹತೆಯಿಲ್ಲದೆ ಹೇಗೆ ಮೇಲುಸ್ಥಾನವನ್ನು ಪಕ್ಷಪಾತವಾಗಿ ಪಡೆದುಕೊಂಡಿದೆ ಹಾಗನ್ನುವುದಕ್ಕಿಂತ ನಾವು ಅದಕ್ಕೆ ಪಕ್ಷಪಾತಮಾಡಿ ಹೇಗೆ ಅದಕ್ಕೆ ವಿಶಿಷ್ಟ ಸ್ಥಾನ ಕಲ್ಪಿಸಿದ್ದೇವೆ ಎಂಬುದನ್ನು ನೋಡಿ. ʻಕಾವೇರಿಗೆ ದಕ್ಷಿಣದ ಗಂಗೆʼ ಎಂದು ಕರೆಯಲಾಗಿದೆ. ಉತ್ತರ ಪ್ರದೇಶದ ಅಲಹಾಬಾದ್‌ (ಪ್ರಯಾಗ್‌ರಾಜ್‌ ಬಳಿ) ಗಂಗಾ ಯಮುನಾ ಮತ್ತು ಅದೃಶ್ಯ ಸರಸ್ವತಿಯರ ಸಂಗಮ ಸ್ಥಾನವೆಂದು ಕರೆಯುವ ʻತ್ರಿವೇಣಿಸಂಗಮʼವಿದೆ. ಇದು ಇಡೀ ಭಾರತದ ಧಾರ್ಮಿಕ ಕ್ಷೇತ್ರಗಳಲ್ಲಿ ಹೆಸರುವಾಸಿಯಾಗಿರುವ ಸ್ಥಳಗಳಲ್ಲಿ ಒಂದಾಗಿದೆ. ಇದನ್ನು ಅನುಸರಿಸಿ ನಮ್ಮ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರ ತಾಲ್ಲೂಕಿನನಲ್ಲಿ ಕೂಡ ಒಂದು ಈ ರೀತಿಯ ಒಂದು ʻಮೂರುನದಿ ಕೂಡುಸ್ಥಳʼವಿದೆ. ಕಾವೇರಿ, ಕಪಿಲಾ ಮತ್ತು ಸ್ಪಟಿಕಸರೋವರ ನದಿಗಳು ಕೂಡುವ ಈ ಸ್ಥಳವನ್ನು ಸಂಕ್ತಿಪ್ತವಾಗಿ ʻ

ಸಂಗಮʼ ಎಂದು ಕರೆಯಲಾಗುತ್ತಿದ್ದು ಇತ್ತೀಚೆಗೆ ಅದಕ್ಕೂ ʼತ್ರಿವೇಣಿ ಸಂಗಮʼ ಎಂಬ ಹೆಸರನ್ನೇ ಜನಪ್ರಿಯಗೊಳಿಸಲಾಗಿದೆ. ಇಲ್ಲಿಗೆ ಅಷ್ಟೇನೂ ದೂರದಲ್ಲಿ ಇಲ್ಲದ ಶ್ರೀರಂಗಪಟ್ಟಣದ ಬಳಿ ಕೂಡ ಒಂದು ತ್ರಿವೇಣಿ ಸಂಗಮ ಇರುವುದು ಬಹಳ ಜನಕ್ಕೆ ಗೊತ್ತಿರಲಿಕ್ಕಿಲ್ಲ. ಅದು ಕೂಡ ಕಾವೇರಿ, ಹೇಮಾವತಿ ಮತ್ತು ಲೋಕಪಾವನಿ ಎಂಬು ಮೂರು ನದಿಗಳ ಕೂಡು ಸ್ಥಳವಾಗಿದ್ದು ಅದು ಟಿ ನರಸೀಪುರದಷ್ಟು ಜನಪ್ರಿಯವಾಗಿಲ್ಲ. ಇದಕ್ಕೆ ಕಾರಣ ಪ್ರಯಾಗರಾಜ್‌ ನಲ್ಲಿ ಕೂಡುವ ಮೂರು ನದಿಗಳಲ್ಲಿ ಸರಸ್ವತಿ ಗುಪ್ತಗಾಮಿನಿಯಾಗಿದ್ದು ಅದರಂತೆ ಟಿ ನರಸೀಪುರದಲ್ಲಿ ಸ್ಪಟಿಕಸರೋವರನದಿ ಗುಪ್ತಗಾಮಿನಿ ಆಗಿರುವ ಸಾಮ್ಯತೆ ಕಾರಣವಿರಲೂಬಹುದು.

ಧಾರ್ಮಿಕವಾಗಿ ಕರ್ನಾಟಕದಲ್ಲಿ ಬೇರೆ ಯಾವ ನದಿಗೂ ಇಲ್ಲದ ವಿಶೇಷ ಸ್ಥಾನಮಾನ ಕಾವೇರಿಗೆ ಮಾತ್ರ ಇರುವಲ್ಲಿ ಇರುವ ವಾಸ್ತವ ಕಾರಣಗಳೆಷ್ಟು ಮತ್ತು ನಾವು ಆರೋಪಿಸಿರುವ ಕಾರಣಗಳೆಷ್ಟು ಎಂಬುದನ್ನು ಒರೆಗೆ ಹಚ್ಚುವುದು ತುಸು ಕಷ್ಟವಾಗಬಹುದು. ಇಲ್ಲಿ ಇತಿಹಾಸಕ್ಕಿಂತ ಪುರಾಣದ ಪ್ರಭಾವಳಿ ಹೆಚ್ಚಾಗಿರುವುದು ಇದಕ್ಕೆ ಕಾರಣ. ಪುರಾಣದ ಸಂಗತಿಗಳು ಇತಿಹಾಸದಂತೆ ಒಂದಿಷ್ಟಾದರೂ ಗಟ್ಟಿಯಾದ ಸಾಕ್ಷಗಳು ಮತ್ತು ಆಧಾರಗಳನ್ನು ಒಳಗೊಂಡಿರುವುದಿಲ್ಲ. ಅದಕ್ಕೆ ನಂಬಿಕೆ ಒಂದಿದ್ದರೆ ಸಾಕು. ಹಾಗಾಗಿ ಯಾರು ಬೇಕಾದರೂ ಹೇಗೆ ಬೇಕಾದರೂ ಅದನ್ನು ತಮ್ಮ ತಮ್ಮ ಕಡೆಗೆ ಎಳೆದುಕೊಂಡು ವಾದಿಸಬಹುದಾಗಿದೆ. ಕರ್ನಾಟಕದ ಉತ್ತರ ಭಾಗಕ್ಕಿಂತ ʻಪುರಾಣಪ್ರವೀಣʼರ ಸಂಖ್ಯೆ ದಕ್ಷಿಣ ಕರ್ನಾಟಕದಲ್ಲಿ ಅಂದರೆ ಕಾವೇರಿ ವಲಯದಲ್ಲಿ ದಟ್ಟವಾಗಿರುವುದರಿಂದ ಕಾವೇರಿಗೆ ಅವರು ಉಳಿದೆಲ್ಲ ನದಿಗಳಿಗಿಂತ ವಿಶೇಷ ಸ್ಥಾನವನ್ನು ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿರುವುದು ತೀರಾ ಸಹಜವಾದದ್ದು.

ಪುರಾಣದ ಸಂಗತಿಗಳ ಮಿತಿ ಇದಾದರೆ ಇತಿಹಾಸ ಮತ್ತು ವರ್ತಮಾನವಾದರೂ ಈ ಅನ್ಯಾಯವನ್ನು ಸರಿಪಡಿಸುವಲ್ಲಿ ತಕ್ಕುದಾದ ಏನಾದರೂ ಕೆಲಸ ಮಾಡಿದೆಯೇ ಎಂದು ಸೂಕ್ಷ್ಮವಾಗಿ ನೋಡಿದರೆ ಅಲ್ಲಿಯೂ ನಮಗೆ ನಿರಾಶೆಯೇ ಆಗುತ್ತದೆ. ಕರ್ನಾಟಕದ ಏಕೀಕರಣಕ್ಕಾಗಿ ನಡೆದ ಚಳವಳಿಯನ್ನೇ ಗಮನಿಸಿ. ಈ ಏಕೀಕರಣಕ್ಕಾಗಿ ಪಣತೊಟ್ಟು ಹೋರಾಡಿದವರು ಇಂದಿನ ʻಕಿತ್ತೂರು ಕರ್ನಾಟಕʼ ಮತ್ತು ʻಕಲ್ಯಾಣ ಕರ್ನಾಟಕʼ ಭಾಗದವರು. ಮೈಸೂರು ಭಾಗದವರು ಮುಂದೆ ನಿಂತು ಹೋರಾಡುವುದಿರಲಿ ಅವರ ಹೋರಾಟಕ್ಕೂ ಒಮ್ಮತದಿಂದ ಬೆಂಬಲ ಕೊಡಲಿಕ್ಕೇ ಮೀನಾಮೇಷ ಎಣಿಸಿದರು. ಅಂದಿನ ಮೈಸೂರು ರಾಜಕೀಯ ವಲಯವೇ ಈ ನಿಟ್ಟಿನಲ್ಲಿ ಇಬ್ಬಾಗವಾಯಿತು. ಉತ್ತರ ಭಾಗದಲ್ಲಿ ಏಕೀಕರಣ ಪರವಾದ ಸಮ್ಮೇಳನಗಳು ನಡೆಯುತ್ತಿರುವಾಗಲೇ ಇಲ್ಲಿ ಏಕೀಕರಣ ವಿರೋಧಿ ಸಮ್ಮೇಳನಗಳೂ ನಡೆದವು! ಬಹುಶಃ ಕುವೆಂಪು ಅಂಥ ಸಾಂಸ್ಕೃತಿಕ ನಾಯಕರು ಆ ಕಾಲದಲ್ಲಿ ಏಕೀಕರಣದ ಪರವಾಗಿ ಗಟ್ಟಿಯಾಗಿ ನಿಲ್ಲದಿದ್ದರೆ ಏಕೀಕರಣದ ಸಾಧ್ಯತೆಗಳು ಇನ್ನಷ್ಟು ಕ್ಷೀಣಿಸುತ್ತಿದ್ದವೇನೋ…

ʻಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಸಿಕ್ಕಿತುʼ ಎಂಬಂತೆ ಏಕೀಕರಣ ಸಾಧ್ಯವಾಗಿ ವಿಶಾಲ ಕರ್ನಾಟಕವೇನೋ ಉದಯವಾಯಿತು. ಆದರೆ ಆ ಹಂತದಲ್ಲಿಯೇ ಈಗಿನ ʻಕಾವೇರಿವಲಯʼ ತನ್ನ ರಾಜಕೀಯ ಪ್ರಭಾವನ್ನು ಬಳಸಿ ಸಿಂಹಪಾಲನ್ನು ಪಡೆದುಕೊಂಡು ಯಾರು ಏಕೀಕರಣಕ್ಕಾಗಿ ಹಗಲಿರುಳು ಚಳವಳಿ ಕಟ್ಟಿ ದುಡಿದು ದಣಿದಿದ್ದರೋ ಅಂತಹ ಕರ್ನಾಟಕದ ಉತ್ತರ ಭಾಗದ ರಾಜಕೀಯ ನಾಯಕರಲ್ಲಿ ಅಸಮಾಧಾನವನ್ನು ಉಂಟುಮಾಡಿಬಿಟ್ಟಿತು. ಹೊಸ ರಾಜ್ಯ ಉದಯವಾಗುವಾಗಲೇ ಉತ್ತರದವರ ಪ್ರಾತಿನಿಧ್ಯವನ್ನು ದಕ್ಷಿಣದವರ ಪ್ರಭಾವ ಕುಗ್ಗಿಸಿಬಿಟ್ಟಿತು!

ವಿಶಾಲ ರಾಜ್ಯಕ್ಕೆ ʼಮೈಸೂರುʼ ಎಂದು ಹೆಸರಿಡಲಾಯಿತು. ರಾಜಧಾನಿ ಬೆಂಗಳೂರೇ ಆಯಿತು. ರಾಜ್ಯಪಾಲರು ಮೈಸೂರಿನ ರಾಜರೇ ಆದರು. ನಾಡದೇವತೆಯಾಗಿ ʼಬನಶಂಕರಿʼ ಬದಲು ʼಚಾಮುಂಡಿʼಯನ್ನೇ ಆಯ್ಕೆಮಾಡಲಾಯಿತು. ಅಷ್ಟೇ ಏಕೆ ಕನ್ನಡದ ವಿವಿಧ ಪ್ರಾದೇಶಿಕ ನುಡಿಗಳಲ್ಲಿ ʼಮೈಸೂರು ಕನ್ನಡʼವನ್ನೇ ಹೊಸರಾಜ್ಯದ ʻಅಧಿಕೃತ ಆಡಳಿತ ಕನ್ನಡʼವನ್ನಾಗಿ ಸ್ವೀಕರಿಸಲಾಯಿತು. ಈ ನಾಲ್ಕು ಮಹತ್ವದ ಸ್ಥಾನಮಾನಗಳಲ್ಲಿ ಒಂದೂ ಉತ್ತರದವರಿಗೆ ದಕ್ಕಲಿಲ್ಲ! ಇದೇ ಕಾರಣಕ್ಕಾಗಿ ಏಕೀಕರಣದ ದಿನ ಕಾರ್ಯಕ್ರಮ ಮುಗಿಸಿಕೊಂಡು ತಮ್ಮ ಊರುಗಳಿಗೆ ತೆರಳುವಾಗ ಆ ನಾಯಕರಲ್ಲಿ ಅತ್ಯಂತ ಪ್ರಮುಖರಾದವರೊಬ್ಬರು, ʼಇಟ್‌ ಇಸ್‌ ನಾಟ್‌ ಯುನಿಫಿಕೇಷನ್‌ ಆಫ್‌ ಕರ್ನಾಟಕ ಬಟ್‌ ದ ಎಕ್ಸಟೆನ್ಷನ್‌ ಆಫ್‌ ಮೈಸೂರ್‌ʼ ಎಂಬ ಹೇಳಿಕೆ ನೀಡಿ ʼಮೈಸೂರಿನವರು ನಮ್ಮನ್ನು ಗೆದ್ದುಕೊಂಡುಬಿಟ್ಟರುʼ ಎಂಬ ತಮ್ಮ ಮನದಾಳದ ಅಸಮಾಧಾನವನ್ನು ಹೊರಹಾಕಿದರಂತೆ!

ಅಯೋಧ್ಯೆಯಲ್ಲಿ ನಡೆಯುವ ಸರಯೂ ಆರತಿ ದೃ‍ಶ್ಯ

ಹೀಗೆ ಹುಟ್ಟಿಕೊಂಡ ಉತ್ತರ ದಕ್ಷಿಣಗಳ ಏರುಪೇರಿನ ಸ್ಥಾನಮಾನ ಮುಂದೆಯೂ ಕೂಡ ಸರಿಯಾಗಲಿಲ್ಲ. ʻಕಾವೇರಿಯಿಂದ ಗೋದಾವರಿವರಮಿರ್ದʼ ಎಂಬ ಕವಿರಾಜಮಾರ್ಗಕಾರನ ಹೇಳಿಕೆಯಲ್ಲಿ ಈ ʻಕಾವೇರಿʼ ಕನ್ನಡ ನಾಡಿನ ಒಂದು ಗಡಿರೇಖೆಯಾಗಿ ಮಾನ್ಯತೆ ಪಡೆದದ್ದು ಪ್ರಾಚೀನ ಸಂಗತಿಯಾದರೆ ಕುವೆಂಪು ಅವರು ಸಾಂಸ್ಕೃತಿಕ ಕರ್ನಾಟಕ ತಾತ್ವಿಕತೆಯನ್ನು ಪ್ರತಿಪಾದಿಸಲು ಬರೆದ ʼಎಲ್ಲಾದರು ಇರು ಎಂತಾದರು ಇರುʼ ಎಂಬ ಪ್ರಸಿದ್ಧ ಗೀತೆಯಲ್ಲಿ ಕೂಡ ʼನೀ ಕುಡಿಯುವ ನೀರ್‌ ಕಾವೇರಿʼ ಎಂಬ ಮಾತು ಬಂದು ಅದೇ ಪ್ರವೃತ್ತಿ ಮುಂದುವರೆಯುತ್ತಾ ಬಂದಿತು. ಅದಕ್ಕೊಂದು ʻಬ್ರೆಕ್‌ʼ ಹಾಕುವ ಕೆಲಸ ಶುರುವಾಗಲು ಎಪ್ಪತ್ತರ ದಶಕದ ಬಂಡಾಯ ಬರೆಹಗಾರ ಕಾಲದವರೆಗೂ ಕಾಯಬೇಕಾಯಿತು. ಬರಗೂರು ಅಂಥವರು ಕುವೆಂಪು ಅವರ ಗೀತೆಯಲ್ಲಿ ಬರುವ ʻಶ್ರೀಗಂಧʼ ಮತ್ತು ʼಕಾವೇರಿʼ ಎರಡೂ ಕರ್ನಾಟಕದ ಪ್ರಾತಿನಿಧಿಕ ಅಂಶಗಳು ಅಲ್ಲ ಎಂಬುದನ್ನು ಸರಿಯಾಗಿಯೇ ಗುರುತಿಸಿದರು. ಈ ಸಾಂಸ್ಕೃತಿಕ ಯಜಮಾನಿಕೆಯನ್ನು ತಾತ್ವಿಕವಾಗಿ ಪ್ರಶ್ನಿಸಿ ಕರ್ನಾಟಕದ ಬಹುಭಾಗದಲ್ಲಿ ಬೆಳೆಯುವುದು ಜಾಲಿಯೇ ಹೊರತು ‍ಶ್ರೀಗಂಧವಲ್ಲ; ಹಾಗೆಯೇ ಕರ್ನಾಟಕದ ಬಹುಭಾಗದ ಜನ ಕುಡಿಯುವುದು ಕೃಷ್ಣಾನದಿಯ ನೀರನ್ನೇ ಹೊರತು ಕಾವೇರಿ ಅಲ್ಲ ಎಂಬುದು ಅವರ ವಾದಕ್ಕೆ ಮೂಲವಾಗಿತ್ತು.

ಹೀಗೆ ಆಡಳಿತಾತ್ಮಕ ರಾಜಕಾರಣ ಮತ್ತು ಸಾಂಸ್ಕೃತಿಕ ರಾಜಕಾರಣ ಇವುಗಳ ಬಲದಿಂದ ಕರ್ನಾಟಕದ ದಕ್ಷಿಣ ಭಾಗ ಉತ್ತರ ಭಾಗವನ್ನು ಅನೇಕ ಅಂಶಗಳಲ್ಲಿ ಸರಿಸಮಾನವಾಗಿ ಕಾಣದೆ ʻಸಾಮಂತʼ ಸ್ಥಾನದಲ್ಲಿಟ್ಟುಕೊಂಡೇ ಬಂದಿರುವುದು ವಾಸ್ತವ. ಈ ಅಂಶಗಳು ರಾಜಕಾರಣ, ಕಲೆ, ಸಾಹಿತ್ಯ, ಸಂಸ್ಕೃತಿ ಹೀಗೆ ಎಲ್ಲಕಡೆಗೂ ವಿಸ್ತರಿಸಿಕೊಂಡಿವೆ. ಇದಕ್ಕೆ ಪೂರಕವಾಗಿ ಇನ್ನೊಂದು ಸಂಗತಿಯನ್ನು ಉದಾಹರಿಸಬಹುದು. ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ಮಾತ್ರ ಅಸ್ತಿತ್ವದಲ್ಲಿ ಇರುವ ಜನಪದ ಕಲೆಯಾದ ಯಕ್ಷಗಾನಕ್ಕೆ ಬಹಳಷ್ಟು ದಿನಗಳ ಹಿಂದೆಯೇ ಒಂದು ಅಕಾಡಮಿಯನ್ನೇ ರಚಿಸಿ ವಿಶೇಷ ಸ್ಥಾನಮಾನ ಕಲ್ಪಿಸಲಾಗಿತ್ತು. ಆದರೆ ಕರ್ನಾಟಕದ ಉತ್ತರ ಭಾಗದ ಅನೇಕ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಪ್ರಚಲಿತವಿದ್ದ ಸಣ್ಣಾಟ, ದೊಡ್ಡಾಟ ಇವುಗಳಿಗೆ ಬಹುಕಾಲದವರೆಗೆ ಇಂತಹ ಯಾವುದೇ ಸ್ಥಾನಮಾನ ದೊರೆಯಲೇಯಿಲ್ಲ. ಶಿವರಾಮ ಕಾರಂತರಂಥ ಅತಿರಥರು ಆ ಕಲೆಯಲ್ಲಿ ತೊಡಗಿಕೊಂಡದ್ದು ಅದರ ಬಗ್ಗೆ ಪುಸ್ತಕ ಇತ್ಯಾದಿ ಬರೆಯುವುದು ಮಾಡಿದಂತೆ ಆ ಭಾಗದಂತೆ ಯಾರೂ ಮಾಡಲಾಗದ್ದು ಇದಕ್ಕೆ ಕಾರಣವಾಗಿಯೂ ಇದ್ದೀತು.

ಕಾಶಿಯ ಬಳಿ ಗಂಗಾನದಿಯಲ್ಲಿ ನಡೆಯುವ ಗಂಗಾ ಆರತಿಯ ಒಂದು ದೃಶ್ಯ:


ಈಗ  ಚರ್ಚೆಯ ಮೂಲ ವಿಷಯವಾದ  ʻಕಾವೇರಿ ಆರತಿʼಗೆ ಬರೋಣ. ಇದು ಕೂಡ ತಿಳಿದೋ ತಿಳಿಯದೆಯೋ ಕರ್ನಾಟಕದಲ್ಲಿ ಈಗ ಇರುವ ಈ ಅಸಮತೋಲನವನ್ನು ಹೋಗಲಾಡಿಸುವ ಬದಲಾಗಿ ಅದನ್ನು ಇನ್ನಷ್ಟು ವಿಸ್ತರಿಸುವ ಕಾರ್ಯಕ್ರಮವೇ ಆಗಬಹುದಾದ ಎಲ್ಲ ಲಕ್ಷಣಗಳನ್ನೂ ಹೊಂದಿರುವ ಒಂದು ಕಾರ್ಯಕ್ರಮ. ನೇರವಾಗಿ ಉತ್ತರ ಭಾರತದ ನೆರಳು ಇದರ ಮೇಲೆ ಇದೆ ಎಂದು ಬೇರೆ ಹೇಳಬೇಕಾಗಿಲ್ಲ.  ಏಕೆಂದರೆ ದಕ್ಷಿಣ ಭಾರತದಲ್ಲಿ ಇಂತಹ ಆಚರಣೆಗಳು ಸಾಂಪ್ರದಾಯಿಕವಾಗಿ ಇಲ್ಲ. ನನಗೆ ತಿಳಿದಿರುವಂತೆ ಉತ್ತರ ಭಾರತದ ಎರಡು ಮೂರು ಕಡೆ ಈ ʻಆರತಿʼ ಇದೆ. ಇವುಗಳಲ್ಲಿ ಕಾಶಿಯಲ್ಲಿ ನಡೆಯುವ ʻಗಂಗಾ ಆರತಿʼ ಮತ್ತು ಅಯೋಧ್ಯೆಯ ಸರಯೂ ನದಿಯ ದಂಡೆಯಲ್ಲಿ ನಡೆಯುವ ʻಸರಯೂ ಆರತಿʼ ಇವುಗಳಲ್ಲಿ ಮುಖ್ಯವಾದಂಥವು. ಇವುಗಳಲ್ಲಿ ಭಾಗವಹಿಸಿದ ನನ್ನ ಸ್ವಂತ ಅನುಭವದ ಮೇಲೆ ಹೇಳುವುದಾದರೆ ಕಾಶಿಯಲ್ಲಿ ನಿತ್ಯ ಸಂಜೆ ನಡೆಯುವ ಗಂಗಾ ಆರತಿ ಉಳಿದವಕ್ಕೆ ಹೋಲಿಸಿದರೆ ಜನಸಂದಣಿ ದೃಷ್ಟಿಯಿಂದ ಅತಿದೊಡ್ಡದು ಮತ್ತು ದಿನನಿತ್ಯ ಸಾವಿರಾರು ಜನ ಸೇರುವಂಥದ್ದು! ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮ ಜನಸಂಖ್ಯೆಯ ಸೇರುವಿಕೆಯ ದೃಷ್ಟಿಯಿಂದ ಗಂಗಾ ಆರತಿಗಿಂತ ಚಿಕ್ಕದಾದದ್ದು. ಅಲ್ಲಿ ನಿತ್ಯ ಸುಮಾರು ಒಂದರಿಂದ ಒಂದೂವರೆ ಸಾವಿರ ಜನ ಕೆಲವು ವೇಳೆ ಎರಡು ಸಾವಿರ ಜನ ಸೇರುತ್ತಾರೆ.

ಸ್ವಚ್ಚತೆ ಮತ್ತು ನೈರ್ಮಲ್ಯದ ಹಿನ್ನಲೆಯಲ್ಲಿ ಹೇಳುವುದಾದರೆ ಚಿಕ್ಕದಾದ ಅಯೋಧ್ಯೆಯ ಸರಯೂ ಆರತಿ ಸ್ಥಳ ಗಂಗಾ ಆರತಿ ಸ್ಥಳಕ್ಕಿಂತ ಸಹಜವಾಗಿಯೇ ಚೆನ್ನಾಗಿದೆ. ಗಂಗಾನದಿಯಷ್ಟು ಮಾಲಿನ್ಯ ಅಲ್ಲಿ ಉಂಟಾಗಿಲ್ಲ ಅನ್ನಬಹುದು. ಇದೇ ಕಾರಣಕ್ಕೆ ಸರಯೂ ನದಿಯಲ್ಲಿ ದೋಣಿವಿಹಾರ ಮಾಡಿದಾಗ ಆನಂದ ನಮಗೆ ಗಂಗಾನದಿಯಲ್ಲಿ ಮಾಡುವಾಗ ಆಗುವುದಿಲ್ಲ. ಇಲ್ಲಿ ನಡೆಯುವ ಆರತಿ ಕಾರ್ಯಕ್ರಮಗಳ ಬಗ್ಗೆ ಹೇಳುವುದಾದರೆ ಇವು ನಿತ್ಯ ಆರತಿ ಕಾರ್ಯಕ್ರಮಗಳು. ಎರಡೂ ಕಡೆ ಸಂಜೆ ಸುಮಾರು ಆರರಿಂದ ಎಂಟು ಗಂಟೆಯವರೆಗೂ ಈ ಕಾರ್ಯಕ್ರಮಗಳು ನಡೆಯುತ್ತವೆ. ನದಿಯನ್ನು ನದಿಯೆಂದು ಭಾವಿಸಿ ಗೌರವಿಸಲಾಗದವರು ಅದನ್ನು ತಾಯಿಯೆಂದೋ ದೇವಿಯೆಂದೋ ಭಾವಿಸಿಕೊಂಡು ಗೌರಿವಿಸುವ ರೀತಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತವೆ. ಸರಯೂ ನದಿಯಲ್ಲಿ ದಂಡೆಯ ಮೆಟ್ಟಿಲುಗಳ ಮೇಲೆಯೇ ಕುಳಿತು ಜನ ಈ ಕಾರ್ಯಕ್ರಮ ವೀಕ್ಷಣೆ ಮಾಡುತ್ತಾರೆ. ಆದರೆ ಕಾಶಿಯ ವಿಶ್ವನಾಥನ ಮಂದಿರದ ಹತ್ತಿರ ನಡೆಯುವ ಗಂಗಾ ಆರತಿ ದೊಡ್ಡ ಪ್ರಮಾಣದಲ್ಲಿ ಜನಸೇರುವ ಕಾರ್ಯಕ್ರಮವಾಗುವುದರಿಂದ ದಂಡೆಯಲ್ಲಿ ಕುಳಿತು ಎಲ್ಲ ಜನ ನೋಡಲು ಅಲ್ಲಿ ಸಾಧ್ಯವಿಲ್ಲ. ಅದರ ಬದಲು ನದಿಯ ಇನ್ನೊಂದು ದಂಡೆಯಿಂದ ದೋಣಿಗಳಲ್ಲಿ ಜನರನ್ನು ಕರೆದುಕೊಂಡು ಹೋಗಿ ಗಂಗಾನದಿಯ ಮಧ್ಯದಲ್ಲಿಯೇ ದೋಣಿಗಳನ್ನು ನಿಲ್ಲಿಸಿ ಅಲ್ಲಿಂದ ಈ ಕಾರ್ಯಕ್ರಮ ತೋರಿಸುವ ವ್ಯವಸ್ಥೆ ಇದೆ. ಇದಕ್ಕೆ ಖಾಸಗೀ ದೋಣಿಗಳ ಜೊತೆಗೆ ಕೇಂದ್ರ ಸರ್ಕಾರದ ಒಳನಾಡು ಜಲಸಾರಿಗೆಯ ಕ್ರೂಸರ್‌ ಗಳೂ ಇಲ್ಲಿವೆ.

ಈ ಕಾರ್ಯಕ್ರಮದಲ್ಲಿ ಹೇಳಿಕೊಳ್ಳುವ ವಿಶೇಷತೆ ಏನೂ ಇರುವುದಿಲ್ಲ. ಎಲ್ಲ ದೇವಸ್ಥಾನಗಳಗಳಂತೆ ಇಲ್ಲಿಯೂ ಪೂಜೆ ಪುನಸ್ಕಾರ ಇತ್ಯಾದಿ ನಡೆಯುತ್ತವೆ. ಇದಾದ ಮೇಲೆ ಇದಕ್ಕಾಗಿ ನಿಯೋಜಿತರಾದ ಐದರಿಂದ ಒಂಬತ್ತು ತರುಣ ಪುರೋಹಿತರು (ಅಯೋಧ್ಯೆಯಲ್ಲಿ ಐದು, ಕಾಶಿಯಲ್ಲಿ ಒಂಬತ್ತು) ನದಿಗಳಿಗೆ ಮುಖವಾಗಿ ʻಸರಯೂ ಮಾತಾʼ ʻಗಂಗಾ ಮಾತಾʼ ಎಂಬ ಭಕ್ತಿಗೀತೆಯನ್ನು ಹಾಕಿಕೊಂಡು ಕೆಲವು ಧಾರ್ಮಿಕ ವಿಧಿವಿಧಾನಗಳನ್ನು ನಡೆಸುತ್ತಾರೆ. (ಒಂದು ಸಾರೆ ಊದುಬತ್ತಿಯಿಂದ ಪ್ರದಕ್ಷಣೆ, ಇನ್ನೊಂದು ಬಾರಿ ಆರತಿ ತಟ್ಟೆಯಿಂದ ಪ್ರದಕ್ಷಣೆ ಇತ್ಯಾದಿ). ಜನರನ್ನು ಭಕ್ತಿಯಿಂದ ಭಾವಪರವಶರಾಗುವ ವಾತಾವರಣವನ್ನು ಸೃಷ್ಟಿಮಾಡಲಾಗುತ್ತದೆ. ಬರುವವರೆಲ್ಲರೂ ಇಲ್ಲಿ ಭಕ್ತರೇ ಆಗುವುದರಿಂದ ಅದನ್ನು ಆನಂದಿಸುತ್ತಾರೆ. 'ಕಾಯಕವೇ ಕೈಲಾಸ' ಎಂಬ ತತ್ವಕ್ಕೆ ವಿರುದ್ಧವಾಗಿ ಕೈಲಾಸವನ್ನೇ ಕಾಯಕವನ್ನಾಗಿ ಮಾಡಿಕೊಂಡ ಒಂದು ದೊಡ್ಡ ಪುರೋಹಿತ ವರ್ಗ ಇದನ್ನು ವ್ಯವಸ್ಥಿತವಾಗಿ ಮಾಡುತ್ತದೆ. ಯಾರೇ ಆಗಲಿ ಒಂದು ಸಲ ನೋಡಿ ಆನಂದಿಸಲು ಚೆನ್ನಾಗಿರುತ್ತದೆ ಎನ್ನುವುದರಲ್ಲಿ ಅನುಮಾನವೇನಿಲ್ಲ. ಆದರೆ ಇದು ಒಂದು ದೇಶದ ಅಥವಾ ರಾಜ್ಯದ ಅಭಿವೃದ್ಧಿಗಾಗಿ ನಡೆಯಲೇಬೇಕಾದ ಕಾರ್ಯವೇನೂ ಅಲ್ಲ. 

ಕರ್ನಾಟಕದಲ್ಲಿ ಚರ್ಚೆಗೆ ಬಂದಿರುವ ಈ ಕಾವೇರಿ ಆರತಿಗೆ ಈ ಮೇಲೆ ಉಲ್ಲೇಖಿಸಿದ ಆರತಿ ಕಾರ್ಯಕ್ರಮಗಳೇ ಉತ್ತೇಜನ. ಇತ್ತೀಚೆಗೆ ಪ್ರಯಾಗ್‌ ರಾಜ್‌ ನಲ್ಲಿ ಮಹಾಕುಂಭಮೇಳ ನಡೆದಾಗ ಅದರ ಪಡಿಯಚ್ಚಾಗಿ ಟಿ. ನರಸೀಪುರದ ಸಂಗಮದಲ್ಲಿ ಕೂಡ ಕುಂಭಮೇಳ ತುಸು ವಿಜೃಂಬಣೆಯಿಂದಲೇ ನಡೆದದ್ದನ್ನು ನೆನಪಿಸಿಕೊಳ್ಳಬಹುದು. ಅಲ್ಲಿ ನಡೆದದ್ದು ʻಮಹಾ ಕುಂಭಮೇಳʼ. ಇಲ್ಲಿ ನಡೆದದ್ದು ಸಾಮಾನ್ಯ ಕುಂಭಮೇಳ. ಆದರೆ ಅದುವರೆಗೂ ಎರಡು ಮೂರು ತಿಂಗಳು ಮಹಾಕುಂಭಮೇಳದ ಭಜನೆ ಮಾಡಿದ್ದ ಟಿವಿಯವರು ಇದಕ್ಕೂ ʼಮಹಾʼ ಹಚ್ಚಿಯೇ ಪ್ರಸಾರ ಮಾಡಿ ಇದನ್ನೂ ʻಮಹಾಕುಂಭಮೇಳʼವನ್ನಾಗಿಯೇ ಮಾಡಿದರು!

ಈಗ ಕರ್ನಾಟಕದಲ್ಲಿ ಕಾವೇರಿ ಆರತಿ ಕಾರ್ಯಕ್ರಮ ಆರಂಭಿಸುವ ಬಗ್ಗೆ ಮಾಡುತ್ತಿರುವ ವಿರೋಧಕ್ಕೆ ಬೇರೆ ಬೇರೆ ಕಾರಣಗಳಿವೆ. ರೈತಸಂಘವು ಮುಖ್ಯವಾದಿ ಕೃಷ್ಣರಾಜ ಸಾಗರ ಪ್ರದೇಶದಲ್ಲಿ ಉಂಟಾಗುವ ಜನಸಂದಣಿ, ಇದರಿಂದ ಅಲ್ಲಿನ ನೆಲಜಲಮಾಲಿನ್ಯ ಇದರಿಂದ ಜನಜೀವನದ ಮೇಲೆ ಉಂಟಾಗುವ ದುಷ್ಪರಿಣಾಮ, ಅನವಶ್ಯಕ ಆರ್ಥಿಕ ಹೊರೆ  ಇಂಥವುಗಳನ್ನು ಮುಂದೆಮಾಡಿ ತೋರಿಸಿದೆ. ಆದರೆ ಇದಕ್ಕೂ ಮಿಗಿಲಾದ ಕೆಲವು ಕಾರಣಗಳನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ಅಂಥಹ ಕಾರಣಗಳಲ್ಲಿ ಅತ್ಯಂತ ಮುಖ್ಯವಾದದ್ದು ಇದು ಜನರ ವಿಚಾರಶಕ್ತಿಯನ್ನು ಕುಂದಿಸಿ ಅವರಲ್ಲಿ ಮೌಢ್ಯವನ್ನು ಬಿತ್ತುವ ಕೆಲಸವನ್ನು ಮಾಡುತ್ತದೆ ಎಂಬುದು. ಈ ಮಾತು ಅನೇಕ ಶ್ರದ್ಧಾವಂಥ ಭಕ್ತರಿಗೆ ಸಿಟ್ಟು ತರಿಸಬಹುದಾದ ಮಾತೂ ಆಗಬಹುದು. ಇದು ನಮ್ಮ ಧಾರ್ಮಿಕ ಶ್ರದ್ಧೆಗೆ ಮಾಡುವ ಅವಮಾನ ಎಂದು ಅವರು ಗ್ರಹಿಸುವುದು ಅವರ ಸಿಟ್ಟಿಗೆ ಕಾರಣ. ಆದರೆ ಅವರಿಗೆ ಸಿಟ್ಟುಬರುತ್ತದೆ ಎಂದು ಇದನ್ನು ಹೇಳದೆ ಬಿಡಲು ಬರುವುದಿಲ್ಲ.

ಅಯೋಧ್ಯೆಯ ಸರಯೂ ನದಿಯ ಸುಂದರ ದೃಶ್ಯ


ಏಕೆಂದರೆ ಈ ಆರತಿ ಕಾರ್ಯಕ್ರಮ ಮುಖ್ಯವಾದಿ ಒಂದು ಧಾರ್ಮಿಕ ಕಾರ್ಯಕ್ರಮ. ಅಂತಹ ಕಾರ್ಯಕ್ರಮಗಳ ಸ್ಥಾನಮಾನ – ಅವು ಯಾವ ಧರ್ಮಕ್ಕೇ ಸೇರಿರಲಿ – ಹೇಗೆ ಇರಬೇಕು ಎಂಬುದರ ಬಗ್ಗೆ ನಮ್ಮ ಸಂವಿಧಾನ ಸ್ಪಷ್ಟವಾಗಿ ಹೇಳಿದ್ದರೂ ಅದನ್ನು ಪಾಲಿಸುವಲ್ಲಿ ನಾವೂ ನಮ್ಮನ್ನಾಳುವವರೂ ಸೋತಿದ್ದೇವೆ ಎಂಬುದು ಸತ್ಯ. ಅದಕ್ಕೆ ನಮ್ಮ ಅಜ್ಞಾನವೂ ಕಾರಣವಿರಬಹುದು;  ಜ್ಞಾನವಿದ್ದೂ ಬೇರೆಯದೇ ಆದ ಉದ್ದೇಶವೂ ಇರಬಹುದು. ನಮ್ಮ ದೇಶ ಮುಖ್ಯವಾಗಿ ಅನೇಕ ಧರ್ಮಗಳ ನಾಡು. ನಮ್ಮಲ್ಲಿ ಧರ್ಮ ಮತ್ತು ವಿಜ್ಞಾನಗಳ ತಿಕ್ಕಾಟ ಮೊದಲಿನಿಂದ ಇದ್ದರೂ ಸಂವಿಧಾನ ರಚನೆಯಾದ ಮೇಲಂತೂ ಇದು ತುಸು ಹೆಚ್ಚೇ ಆಗಿದೆ. ಈ ʼಧಾರ್ಮಿಕ ಮನೋಭಾವʼ ಮತ್ತು ವೈಜ್ಞಾನಿಕ ಮನೋಭಾವʼ ಇವುಗಳನ್ನು ಕುರಿತಂತೆ ನಮ್ಮ ಸಂವಿಧಾನ ಏನು ಹೇಳುತ್ತದೆ ಎಂದರೆ ಭಾರತ ಪ್ರಜೆಗಳು ತಮಗೆ ಇಷ್ಟಬಂದ ಧರ್ಮವನ್ನು ಆಚರಿಸಬಹುದು; ಸಮಾಜದ ಇತರ ಜನರಿಗೆ ಧಕ್ಕೆ ಆಗದಂತೆ ಕಾರ್ಯಕ್ರಮಗಳನ್ನು ಮಾಡಿಕೊಳ್ಳಬಹುದು. ಇದರಲ್ಲಿ ಸರ್ಕಾರದ ಪಾತ್ರ ಏನು? ಏನೂ ಇಲ್ಲ. ಅವರ ಧಾರ್ಮಿಕ ಹಕ್ಕುಗಳನ್ನು ರಕ್ಷಿಸಬೇಕು. ಅಂದರೆ ಸರ್ಕಾರ ಅವುಗಳನ್ನು ನಿರ್ಭಂದಿಸಬಾರದು ಅಷ್ಟೇ. ಆದರೆ ಸರ್ಕಾರವೇ ಮುಂದೆ ನಿಂತು ಈ ಕಾರ್ಯಗಳನ್ನು ಮಾಡುವುದನ್ನು ಅದು ಬೆಂಬಲಿಸುವುದು ಹಾಗಿರಲಿ ಸಹಿಸುವುದಿಲ್ಲ ಕೂಡ. ಸರ್ಕಾರ ಧಾರ್ಮಿಕವಾಗಿ ನಿರ್ಲಿಪ್ತವಾಗಿರಬೇಕು ಎಂಬುದು ಅದರ ಆಶಯ.

ಆದರೆ ವೈಜ್ಞಾನಿಕ ಮನೋಭಾವನೆಯ ಬಗ್ಗೆ ಅದು ನಿರ್ಲಿಪ್ತವಾಗಿರಲು ಹೇಳುವುದಿಲ್ಲ ಎಂಬುದು ಬಹಳ ಮುಖ್ಯವಾದ ಸಂಗತಿ.  ಇದಕ್ಕೆ ಸಂಬಂಧಿಸಿದಂತೆ ಅದು ಹೇಳುವುದೇನೆಂದರೆ ಈ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವುದು ಭಾರತದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದು. ಹಾಗಾಗಿ ಇದನ್ನು ವ್ಯಕ್ತಿಗಳು ಮತ್ತು ಸರ್ಕಾರಗಳು ಮುಂದೆ ನಿಂತು ಮಾಡಬೇಕಾಗುತ್ತದೆ! ʻಕಾವೇರಿ ಆರತಿʼ ಸ್ಪಷ್ಟವಾಗಿ ಒಂದು ಧಾರ್ಮಿಕ ಕಾರ್ಯಕ್ರಮ ಆಗುವುದರಿಂದ ಅದನ್ನು ಪ್ರಜೆಗಳಿಂದ ಆಯ್ಕೆಯಾದ ಭಾರತದ ಯಾವುದೇ ಸರ್ಕಾರಗಳು ಮುಂದೆನಿಂತು ಮಾಡುವ ಅಗತ್ಯವಿಲ್ಲವೆಂಬುದು ಇಲ್ಲಿ ಮುಖ್ಯವಾದ ಸಂಗತಿ. ಇಂತಹ ಧಾರ್ಮಿಕ ಕಾರ್ಯಕ್ರಮಗಳು ಅವು ಯಾವುದೇ ಧರ್ಮಕ್ಕೆ ಸೇರಿರಲಿ ವೈಯಕ್ತಿಕ ಮಟ್ಟದಲ್ಲಿ ಇದ್ದಾಗ ಅವಕ್ಕೊಂದು ಖಾಸಗೀತನದ ಬೆಲೆ ಇರುತ್ತದೆ. ನಾವು ನಂಬುವ ದೇವರನ್ನು ನಮ್ಮ ಹೃದಯದಲ್ಲಿ ಇಟ್ಟುಕೊಂಡು ಆರಾಧಿಸುವುದೇ ಬೇರೆ. ತಲೆಯ ಮೇಲೆ ಹೊತ್ತುಕೊಂಡು ಬೀದಿಯಲ್ಲಿ ಕುಣಿಯುವುದೇ ಬೇರೆ. ಭಕ್ತಿಯೆಂಬುದು ಬೀದಿಗೆ ಬಂದಾಗ ಅದು ತೋರುಂಬ ಲಾಭವಾಗುತ್ತದೆ. ಹೀಗಾಗಿಯೇ ಇರಬೇಕು ವಚನಕಾರರು ದೇವರು ಮತ್ತು ಭಕ್ತನ ಸಂಬಂಧವನ್ನು ಗಂಡ-ಹೆಂಡತಿಯ ಸಂಬಂಧಕ್ಕೆ ಸಮೀಕರಿಸಿದರು. ಗಂಡಹೆಂಡತಿಯ ಸಂಬಂಧ ಖಾಸಗೀ ಆಗಿದ್ದಷ್ಟೂ ಅದರ ಘನತೆ ಹಿಗ್ಗುತ್ತದೆ; ಬೀದಿಗೆ ಬಂದಷ್ಟೂ ಕುಗ್ಗುತ್ತದೆ!

ಇಂತಹ ಆಚರಣೆಗಳು ಮಾಡುವ ಇನ್ನೊಂದು ಅನಾಹುತವೆಂದರೆ ಅವಕ್ಕೊಂದು ಪೌರಾಣಿಕತೆಯನ್ನು ಕಟ್ಟಿಕೊಡುವುದು. ಮತ್ತು ಇತ್ತೀಚಿನ ಆಚರಣೆಗಳನ್ನೂ ತಲೆತಲಾಂತರದಿಂದ ಬಂದ ಆಚರಣೆಗಳೆಂದು ಬಿಂಬಿಸಹೋಗುವುದು. ಇದಕ್ಕೆ ಒಂದು ಉದಾಹರಣೆಯನ್ನು ಕೊಡುವುದಾದರೆ ಇವತ್ತು ಮಳೆಗಾಲದಲ್ಲಿ ಜಲಾಶಯಗಳು ತುಂಬಿದಾಗ ಅವುಗಳಿಗೆ ʼಬಾಗಿನʼ ಅರ್ಪಿಸುವ ಕಾರ್ಯಕ್ರಮ. ಇವತ್ತು ಮಳೆ ಜೋರಾಗಿ ಬಂದು ಜಲಾಶಯಗಳು ತುಂಬಿದೊಡನೆ ದೊಡ್ಡದೊಡ್ಡ ಜನನಾಯಕರು ದೊಡ್ಡ ದೊಡ್ಡ ಜಲಾಶಯಗಳಿಗೆ ಈ ʼಭಾಗಿನʼ ಅರ್ಪಿಸುವುದು ʼಪದ್ಧತಿʼಯಾಗಿಯೇ ಬಿಟ್ಟಿದೆ. ಅವರು ಹಾಗೆ ಮಾಡಿದರೆ ಸ್ಥಳೀಯ ರಾಜಕೀಯ ಮುಂದಾಳುಗಳು ಅವರ ಊರ ಹತ್ತಿರದ ಕೆರೆ ತುಂಬಿದಾಗಲೂ ಇದನ್ನು ಅರ್ಪಿಸುವ ಒಂದು ʻಪದ್ಧತಿʼ ಮಾಡಿಕೊಂಡಿದ್ದಾರೆ. ಇದನ್ನು ಏಕೆ ಮಾಡಬೇಕು? ಇದರ ಮಹತ್ವವೇನು ಎಂದು ನೀವು ಯಾರನ್ನಾದರೂ ಕೇಳಿದರೆ ಅವರು ಏನು ಹೇಳಬಹುದು. ಏನೋ ಹೇಳುತ್ತಾರೆ ಅದು ಬೇರೆ ಪ್ರಶ್ನೆ. ಆದರೆ ಇದು ನಮ್ಮ ಸಂಸ್ಕೃತಿಯ ಭಾಗವೇ? ಇದು ಯಾವಾಗಿನಿಂದ ಜಾರಿಗೆ ಬಂತು ಎಂಬುದನ್ನು ನೋಡಿದರೆ ನಮಗೆ ಕುತೂಹಲವಾದ ಕೆಲವು ಸಂಗತಿಗಳು ದೊರೆಯುತ್ತವೆ. ಕೇವಲ ಐವತ್ತು ವರ್ಷಗಳ ಹಿಂದೆ ಹೀಗೆ ಜನನಾಯಕರು ʼಭಾಗಿನʼ ಅರ್ಪಿಸುವ ಒಂದು ಪದ್ಧತಿ ನಮ್ಮಲ್ಲಿ ಇರಲೇ ಇಲ್ಲವಂತೆ. ನನಗೆ ಒಬ್ಬರು ಹಿರಿಯರು ಹೇಳಿದ ಪ್ರಕಾರ ಗುಂಡೂರಾವ್‌ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಇದೇ ಕಾವೇರಿಗೆ ಸಂಬಂಧಿಸಿದ ಕೃಷ್ಣರಾಜ ಸಾಗರ ಜಲಾಶಯ ತುಂಬಿದಾಗ ಮೊದಲಬಾರಿಗೆ ಹೀಗೆ ಒಮ್ಮೆ ಈ ರೀತಿ ʼಬಾಗಿನʼ ಅರ್ಪಿಸಿದರಂತೆ! ಆಮೇಲೆ ಅದು ಸಾಂಕ್ರಾಮಿಕವಾಗಿ ಹಬ್ಬಿತಂತೆ! 

ನಾಳೆ ಈ ಕಾವೇರಿ ಆರತಿ ಕೂಡ ಹೀಗೆ ಆಗುವುದರಲ್ಲಿ ಅನುಮಾನವಿಲ್ಲ. ಇದು ಮುಂದೆ ಕವಲೊಡೆದು ತುಂಗಾ ಆರತಿ, ಕೃಷ್ಣಾ ಆರತಿ, ಶರಾವತಿ ಆರತಿ, ಕುಂಟೆಹೊಳೆ ಆರತಿ, ಹೇಮಾವತಿ ಆರತಿ, ಮೇಲ್ದಂಡೆ ಆರತಿ, ಕೆಳದಂಡೆ ಆರತಿ, ಕೆರೆಆರತಿ, ಹೊಳೆಆರತಿ, ಹಳ್ಳಾರತಿ ಹೀಗೇ ಬೆಳೆಯುತ್ತಾ ಜನರನ್ನು ಮೌಢ್ಯದ ಕಡೆಗೆ ಒಯ್ಯುವಲ್ಲಿ ದೊಡ್ಡಪಾತ್ರವನ್ನೇ ವಹಿಸಬಹುದು. ಇದು ರಾಜ್ಯ ಮತ್ತು ದೇಶಗಳಿಗೆ ಆಗುವ ನಷ್ಟ. ಉತ್ತರ ಭಾರತದ ರಾಜ್ಯಗಳು ಇವತ್ತು ದಕ್ಷಿಣಭಾರತದ ರಾಜ್ಯಗಳಿಗಿಂತ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳಷ್ಟು ಹಿಂದೆ ಉಳಿದಿರುವುದಕ್ಕೆ ಅವುಗಳು ಜನರ ಧಾರ್ಮಿಕತೆಯನ್ನು ಅತಿಯಾಗಿ ಬೆಂಬಲಿಸುತ್ತಿರುವುದು ಕೂಡ ಕಾರಣವಾಗಿದೆ ಎಂಬ ಸತ್ಯವನ್ನು ನಾವು ಅರ್ಥಮಾಡಿಕೊಳ್ಳಬೇಕು. ಅವರು ಮುಂದೆ ಬರಲು ನಮ್ಮನ್ನು ಅನುಸರಿಸುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ನಾವು ಹಿಂದಕ್ಕೆ ಹೋಗಲು ಅವರನ್ನು ಅನುಸರಿಸುವುದು ಜಾಣನಡೆಯಾಗುವುದಿಲ್ಲ. ಹಾಗಾಗಿ ಇಂತಹ ಧಾರ್ಮಿಕ ಕಾರ್ಯಗಳಿಂದ ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿಯಾಗುತ್ತವೆ. ವ್ಯಾಪಾರ ವಹಿವಾಟುಗಳು ಹೆಚ್ಚಾಗುತ್ತವೆ ಇದರಿಂದ ಜನಜೀವನಕ್ಕೆ ನೆರವಾಗುತ್ತದೆ ಎಂದು ಹೇಳುವಾಗಲೆಲ್ಲ ನಾವು ಇಂತಹ ಕಾರ್ಯಗಳು ಉಂಟುಮಾಡುವ ಸಣ್ಣಪುಟ್ಟ ಲಾಭಗಳಿಗಿಂತ ಅವು ಉಂಟುಮಾಡುವ ದೊಡ್ಡಮಟ್ಟದ ಮತ್ತು ಶಾಶ್ವತ ನಷ್ಟದ ಕಡೆಗೆ ಹೆಚ್ಚು ಗಮನಹರಿಸಬೇಕು ಮತ್ತು ಯಾವುದೇ ಚುನಾಯಿತ ಸರ್ಕಾರಗಳು ಆದಷ್ಟೂ ಧಾರ್ಮಿ ಚಟುವಟಿಕಗಳಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಂಡು ಜನರ ವೈಚಾರಿಕತೆ ಮತ್ತು ಜನಜೀವನಮಟ್ಟವನ್ನು ಎತ್ತರಿಸುವತ್ತ ತಮ್ಮ ಶಕ್ತಿ ಮತ್ತು ಸಮಯವನ್ನು ವಿನಿಯೋಗಿಸಬೇಕಾದದ್ದು ಬಹಳ ಮುಖ್ಯವಾದ ಸಂಗತಿಯಾಗುತ್ತದೆ.

ಈ ಎಲ್ಲ ಕಾರಣಗಳಿಂದಾಗಿ ಲೇಖನದ ಶೀರ್ಷಿಕೆಯು ಕೇಳುವ ʼ ಕಾವೇರಿ ಆರತಿ ಯಾವುದರ ಆಹುತಿ ? ಎಂಬ ಪ್ರಶ್ನೆಗೆ ಅದು ಈ ದೇಶದ ಅಜ್ಞಾನ, ಅಂಧಕಾರ, ಬಡತನ ಮುಂತಾದವುಗಳ ಆಹುತಿಯಾಗದೇ ಅವುಗಳನ್ನು ಬಡಿದೋಡಿಸಬಲ್ಲ ಶಿಕ್ಷಣ ಅದರ ಮೂಲಕ ಲಭ್ಯವಾಗುವ ವೈಜ್ಞಾನಿಕ ಮನೋಭಾವದ ಆಹುತಿ ಎಂಬುದೇ ಉತ್ತರವಾಗುತ್ತದೆ.

*****

07-06-2025

Thursday, June 5, 2025

ಕಿಚ್ಚಿಲ್ಲದ ಬೆಂಕಿ ಮತ್ತು ಬಕ್ರಿದ್‌ ಅನುಮತಿ

ಕಿಚ್ಚಿಲ್ಲದ ಬೆಂಕಿ ಮತ್ತು ಬಕ್ರಿದ್‌ ಅನುಮತಿ


ಮಹಾದೇವಿ ಅಕ್ಕ ತನ್ನ ಒಂದು ವಚನದಲ್ಲಿ ʼಕಿಚ್ಚಿಲ್ಲದ ಬೆಂಕಿಯಲಿ ಬೆಂದೆನವ್ವಾʼ ಎಂದು ಹೇಳುತ್ತಾಳೆ. ಅವಳ ವಚನದ ಈ ಸಾಲನ್ನು ಕೇಳುತ್ತಿದ್ದಂತೆಯೇ ಮನುಷ್ಯತ್ವವನ್ನು ಉಳ್ಳ ಯಾರಿಗೇ ಆದರೂ ಒಂದು ಕ್ಷಣ ಅಯ್ಯೋ ಅನ್ನಿಸಿಬಿಡುತ್ತದೆ. ಏಕೆಂದರೆ ಆ ಮಾತಿನ ಹಿಂದಿರುವ ಅವಳ ಯಾತನೆ ಯಾವಬಗೆಯದ್ದು ಎಂಬುದನ್ನು ಈ ವಚನಸಾಲು ಧ್ವನಿಪೂರ್ಣವಾಗಿ ಕಟ್ಟಿಕೊಡುತ್ತದೆ. ಈ ವರ್ಷದ ಎಸ್. ಎಸ್.‌ ಎಸ್.ಸಿ. ಪರೀಕ್ಷೆ -೨ ರ ಮೌಲ್ಯಮಾಪನದ ಕಾರ್ಯಕ್ಕೆ ನಿಯೋಜಿತರಾದ ಶಿಕ್ಷಕರ ಪರಿಸ್ಥಿತಿಯನ್ನು ನೋಡಿ ಯಾಕೋ ಅಕ್ಕನ ಈ ಮಾತು ಒಂದು ಕ್ಷಣ ಮನಸ್ಸಿನಲ್ಲಿ ಮಿಂಚಿ ಮಾಯವಾಯಿತು.

ಬಹಳಷ್ಟು ಶಿಕ್ಷಕರಿಗೆ ತಿಳಿದಿರುವಂತೆ ಈ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆ- ೨ ರ ಮೌಲ್ಯಮಾಪನ ಕಾರ್ಯ ಜೂನ್‌ ಆರಕ್ಕೆ ಆರಂಭವಾಗುತ್ತಿದೆ. ರಾಜ್ಯದ ಬಹಳಷ್ಟು ಜನ ಶಿಕ್ಷಕರು ಈ ಕೆಲಸಕ್ಕೆ ನಿಯೋಜಿತರಾಗಿದ್ದಾರೆ. ಇದೆಲ್ಲ ಅವರು ಮಾಡಲೇಬೇಕಾದ ಕೆಲಸ ಬಿಡಿ. ಅದೇನೂ ಉಲ್ಲೇಖಿಸಬೇಕಾದ ಸಂಗತಿಯಲ್ಲ. ಆದರೆ ಈ ದಿನಾಂಕಗಳನ್ನು ಸೂಕ್ಷ್ಮವಾಗಿ ತುಸು ಗಮನಿಸಿ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜೂನ್‌ ಐದು-ಆರು ಈ ದಿನಗಳಲ್ಲಿ ಪೂರ್ವಪರೀಕ್ಷೆಯನ್ನು ಸಾಮೂಹಿಕವಾಗಿ ಮಾಡುತ್ತಿದ್ದಾರೆ. ಆ ದಿನಾಂಕಗಳೂ ಮೊದಲೇ ಘೋಷಣೆಯಾದಂಥವು. 

ಆರನೆಯ ತಾರೀಖೇ ಈ ಮೌಲ್ಯಮಾಪನಕ್ಕೆ ಶಿಕ್ಷಕರು ಹಾಜರಾಗಲು ತಿಳಿಸಲಾಗಿದೆ. ಆರನೆಯ ತಾರೀಖಿನ ಪರೀಕ್ಷೆ ಶಾಲೆಗಳಲ್ಲಿ ಯಾವ ರೀತಿ ನಡೆಯಬಹುದು ಯೋಚಿಸಿ. ಏಕೆಂದರೆ ಕೆಲವು ಶಾಲೆಗಳಲ್ಲಿ ಮೌಲ್ಯಮಾಪನಕ್ಕೆ ಶಿಕ್ಷಕರು ಹೋದರೆ ಅಲ್ಲಿ ಪರೀಕ್ಷೆ ಮಾಡುವವರೇ ಇಲ್ಲ. ಇರಲಿ ಅದನ್ನು ಇನ್ನೊಂದು ದಿನ ಮಾಡಿಕೊಂಡರಾಯಿತು ಅನ್ನಲಿಕ್ಕೆ ಅದು ಅನೇಕ ಕಡೆ ಸ್ಥಳೀಯವಾಗಿ ಶಾಲಾ ಹಂತದಲ್ಲಿ ನಡೆಯದೇ ತಾಲ್ಲೂಕು ಹಂತದಲ್ಲಿಯೋ ಜಿಲ್ಲಾ ಹಂತದಲ್ಲಿಯೋ ನಡೆಯುತ್ತಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನೂ ಯಾರೂ ಸೂಚಿಸಲಿಲ್ಲ. ಎಸ್.‌ ಎಸ್.‌ ಎಲ್.‌ ಸಿ. ಮೌಲ್ಯಮಾಪನಕ್ಕೆ ಹೋಗುವ ಶಿಕ್ಷಕರು ಹೋಗಲೇ ಬೇಕು ಹೊರಡುತ್ತಾರೆ. ಉಳಿದ ಶಿಕ್ಷಕರು ಇನ್ನೇನು ಮಾಡುತ್ತಾರೆ?  ʻಆದಂಗಾಯ್ತು ಹಾಟಗಳ್ಳನ ಮದ್ವೆʼ ಅನ್ನುವ ಗಾದೆಯಂತೆ ಒಟ್ಟಿನಲ್ಲಿ ಪರೀಕ್ಷೆ ಮಾಡುವ ಶಾಸ್ತ್ರವನ್ನು ಮಾಡಿ ಮುಗಿಸುತ್ತಾರೆ.

ಶಾಲೆಯ ಕಥೆ ಇದಾದರೆ ಶಿಕ್ಷಕರದ್ದು ವೈಯಕ್ತಿಕವಾಗಿ ಬೇರೊಂದು ಕಥೆ. ಆರು ಶುಕ್ರವಾರ. ಏಳು ಶನಿವಾರ ಬಕ್ರಿದ್‌ ರಜೆ. ಎಂಟು ಭಾನುವಾರ. ಉಳಿದ ಶಿಕ್ಷಕರು ಬಕ್ರಿದ್‌ ರಜೆ ಮತ್ತು ಭಾನುವಾರದ ರಜೆಯಲ್ಲಿ ಮನೆಯಲ್ಲಿ ಇರುವಾಗ ಈ ಶಿಕ್ಷಕರು ಮೌಲ್ಯಮಾಪನ ಮಾಡಬೇಕು. ಇವರು ಅದೆಷ್ಟು ಮನಸ್ಸುತುಂಬಿ ಈ ಕೆಲಸವನ್ನು ರಜಾ ದಿನದಲ್ಲಿ ಶ್ರದ್ಧಾಪೂರ್ವಕವಾಗಿ ಮಾಡುತ್ತಾರೋ ಭಗವಂತನೇ ಬಲ್ಲ. ರಾಜ್ಯಮಟ್ಟದಲ್ಲಿ ಶಿಕ್ಷಕರ ಸಂಘಗಳು ಬಲಾಢ್ಯವಾಗಿರುವುದು ಬೇಡ ಅರ್ಧಬರ್ಧ ಜೀವ ಇಟ್ಟುಕೊಂಡರೂ ಅಲ್ಲಿನ ಅಧಿಕಾರಿಗಳಿಗೆ ಮನವರಿಕೆ ಮಾಡಿ, “ಎರಡು ದಿನ ಮೌಲ್ಯಮಾಪನ ಮುಂದೆ ಹಾಕಿ. ಎರಡು ದಿನ ತಡವಾದರೆ ರಾಜ್ಯದ ಶಿಕ್ಷಣ ವ್ಯವಸ್ಥೆಯೇ ಕುಸಿದು ಬೀಳುವುದಿಲ್ಲ” ಎಂದು ಈ ಕಾರ್ಯವನ್ನು ಮುಂದೆ ಹಾಕಿಸಲು ಅವಕ್ಕೆ ಸಾಧ್ಯವಾಗುತ್ತಿತ್ತು. ಅವು ಆ ಪ್ರಯತ್ನವನ್ನು ಮಾಡಲೇ ಇಲ್ಲವೋ ಅಥವಾ ಮಾಡಲು ಹೋಗಿ ಯಶಸ್ವಿಯಾಗಲಿಲ್ಲವೋ ತಿಳಿಯದು.

ಈ ಮಧ್ಯೆ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಜಿಲ್ಲಾ ಉಪನಿರ್ದೇಶಕರುಗಳಿಗೆ ಪತ್ರವೊಂದನ್ನು ಬರೆದು ಬಕ್ರಿದ್‌ ರಜೆ ದಿನ ಮೌಲ್ಯಮಾಪನ ಕಾರ್ಯದಿಂದ ಹೊರಗುಳಿಯಲು ಮನವಿ ಸಲ್ಲಿಸುವ ಶಿಕ್ಷಕರಿಗೆ ಅನುಮತಿ ನೀಡಲು ಸೂಚಿಸಿದ್ದು ತುಸು ಸಮಾಧಾನ ತರುವ ಸಂಗತಿಯಾಗಿದೆ. ಬಕ್ರಿದ್‌ ಹಬ್ಬ ದಿಢೀರನೆ ಘೋಷಣೆ ಆದದ್ದೇನೂ ಅಲ್ಲ. ಅದು ಶನಿವಾರ ಇದೆ ಅನ್ನುವುದು ಸಾಕಷ್ಟು ಮುಂಚಿತವಾಗಿ ತಿಳಿದಿದ್ದರೂ ಅವತ್ತು ಮೌಲ್ಯಮಾಪನ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜಿಸಿ ನಂತರ ಶಿಕ್ಷಕರ ಸಂಘದ ಅಥವಾ ಯಾರದಾದರೂ ಒತ್ತಡ ಬಂತೋ ಅಥವಾ ಯಾರಿಗಾದರೂ ಬುದ್ಧನಿಗೆ ಒಮ್ಮೆಲೆ ಜ್ಞಾನೋದಯ ವಾದಂತೆ ಜ್ಞಾನೋದಯವಾಯಿತೋ ತಿಳಿಯದು. ಅಂತೂ ಒಂದು ಸಣ್ಣ ಪರಿಹಾರ ಬಂದು ಬಿಸಿಲಿನಲ್ಲಿ ಬಾಯಾರಿ ಸಾಯುವಂತಿದ್ದವರಿಗೆ ಎಲ್ಲೋ ಒಂದು ಲೋಟ ತಣ್ಣನೆಯ ನೀರು ಕುಡಿಯಲು ಸಿಕ್ಕ ಅನುಭವ ಆಗಿದೆ.

ಈ ಪತ್ರದ ವಿಶೇಷತೆ ಎಂದರೆ ಇದರಲ್ಲಿ ಬಕ್ರಿದ್‌ ಹಬ್ಬದ ನಿಮಿತ್ತ ಅನುಮತಿ ಕೇಳುವ ಶಿಕ್ಷಕರಿಗೆ ಅನುಮತಿ ನೀಡಲು ಸೂಚಿಸಲಾಗಿದೆ.  ಇದರ ಅನುಷ್ಠಾನದ ಸಂಕೀರ್ಣತೆಯ ಬಗ್ಗೆ ಅಲ್ಲಿ ಯಾವುದೇ ಉಲ್ಲೇಖವಿಲ್ಲ. ಒಂದು ಕಾಲ್ಪನಿಕ ಉದಾಹರಣೆ ಗಮನಿಸಿ. ಯಾವುದೋ ಒಂದು ಪರೀಕ್ಷಾ ಕೇಂದ್ರಕ್ಕೆ ಬಂದ ಎಲ್ಲ ಶಿಕ್ಷಕರೂ ಬಕ್ರಿದ್‌ ಹಬ್ಬದ ನಿಮಿತ್ತ ಮೌಲ್ಯಮಾಪನ ಕಾರ್ಯದಿಂದ ಹೊರಗುಳಿಯಲು ಅನುಮತಿ ಕೋರುತ್ತಾರೆ ಅಂತ ಇಟ್ಟುಕೊಳ್ಳಿ. ಆಗ ಅನುಮತಿ ಕೊಡುವವರು ಏನು ಮಾಡಬೇಕು? ಅದು ಅವರಿಗೆ ಬಿಟ್ಟದ್ದು. ಎಲ್ಲರಿಗೂ ಅನುಮತಿ ಕೊಟ್ಟು ಅವತ್ತಿನ ಮಟ್ಟಿಗೆ ಮೌಲ್ಯಮಾಪನ ಕಾರ್ಯವನ್ನು ಸ್ಥಗಿತಗೊಳಿಸುವದು ಒಂದು ಮಾರ್ಗ.

ಇನ್ನೊಂದು ಕೆಲವರಿಗೆ ಅನುಮತಿ ಕೊಟ್ಟು ಕೆಲವರಿಗೆ ನಿರಾಕರಿಸುವುದು. ಇದರಿಂದ ಮೌಲ್ಯಮಾಪನ ಕಾರ್ಯ ನಿಲ್ಲದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆಯಾದರೂ ಈ ಆಯ್ಕೆ ಅಷ್ಟು ಸುಲಭದ ದಾರಿಯಲ್ಲ. ಇಲ್ಲಿ ಅನುಮತಿ ನೀಡುವಿಕೆಯ ಪುರಸ್ಕಾರ ಮತ್ತು ತಿರಸ್ಕಾರಗಳನ್ನು ಯಾವ ಮಾನದಂಡ ಇಟ್ಟುಕೊಂಡು ಮಾಡಬೇಕು ಎಂಬ ಪ್ರಶ್ನೆ ಏಳುತ್ತದೆ.  ಹಾಗೆ ಮಾಡಲು ಬಹಳಷ್ಟು ಜನರಿಗೆ ತಕ್ಷಣಕ್ಕೆ ಹೊಳೆಯುವ ಮಾನದಂಡ ಎಂದರೆ ʻಬಕ್ರಿದ್‌ ಮಾಡುವವರಿಗೆ ಅನುಮತಿ ಕೊಟ್ಟು ಉಳಿದವರಿಗೆ ನಿರಾಕರಿಸಬಹುದುʼ ಎಂಬುದು. ಆದರೆ ಅದು ಸಮಸ್ಯಾತ್ಮಕವಾದದ್ದು. ಏಕೆಂದರೆ ಈ ಆಯ್ಕೆಯನ್ನು  ಯಾವ ಆಧಾರದ ಮೇಲೆ ನಿರ್ಧರಿಸಬೇಕು? ಆಗ ಅನುಮತಿ ಕೊಡುವ ವ್ಯಕ್ತಿ ಅನಿವಾರ್ಯವಾಗಿ ʻಜಾತಿ- ಜನಾಂಗʼಗಳ ಅಂಶವನ್ನು ಮಾನದಂಡವಾಗಿ ಇಟ್ಟುಕೊಳ್ಳಬೇಕಾಗುತ್ತದೆ ಇದನ್ನು ಇನ್ನೂ ಬಿಡಿಸಿ ಹೇಳುವುದಾದರೆ ಬಕ್ರಿದ್‌ ಹಬ್ಬ ಮಾಡುವ ಮುಸ್ಲಿಮರಿಗೆ ಅನುಮತಿ ಕೊಟ್ಟು ಉಳಿದವರಿಗೆ ನಿರಾಕರಿಸುವುದು. 

ಆದರೆ ಹೀಗೆ ಮಾಡುವುದು ಸರಿಯಾಗುತ್ತದೆಯೇ? ನನ್ನ ಪ್ರಕಾರ ಇಲ್ಲ. ಏಕೆಂದರೆ ನಮ್ಮಲ್ಲಿ ಹಿಂದೂ ಹಬ್ಬಗಳು, ಮುಸ್ಲಿಮ್‌ ಹಬ್ಬಗಳು, ಕ್ರಿಶ್ಚಿಯನ್‌ ಹಬ್ಬಗಳು ಎಂದು ಕೆಲವು ಹಬ್ಬಗಳನ್ನು ಕರೆಯುವ ವಾಡಿಕೆ ಇದೆಯಾದರೂ ಭಾರತದ ಸಾಂವಿಧಾನಿಕ ಭಾಷೆಯಲ್ಲಿ ಹಾಗೆ ವಿಭಜಿಸಿ ಹೇಳಲು ಬರುವುದಿಲ್ಲ. ಏಕೆಂದರೆ ಅವೆಲ್ಲವನ್ನೂ ಒಟ್ಟಾಗಿ ʻಭಾರತೀಯ ಧಾರ್ಮಿಕ ಹಬ್ಬಗಳುʼ ಎಂದೆ ಅವನ್ನು ಕರೆಯಲಾಗುತ್ತದೆ. ಅಂದರೆ ಭಾರತದ ಯಾವುದೇ ಪ್ರಜೆ ಈ ಯಾವುದೇ ಧಾರ್ಮಿಕ ಹಬ್ಬಕ್ಕೆ ತನ್ನ ಹಕ್ಕನ್ನು ಮಂಡಿಸಬಹುದು ಎಂದಾಗುತ್ತದೆ. ಹೀಗಿರುವಾಗ ʻದೀಪಾವಳಿ ಹಬ್ಬಕ್ಕೆ ಹಿಂದೂಗಳಿಗೆ ಅನುಮತಿ ಕೊಡುತ್ತೇನೆ; ಬಕ್ರಿದ್‌ ಗೆ ಮುಸ್ಲಿಮರಿಗೆ ಅನುಮತಿ ಕೊಡುತ್ತೇನೆ; ಕ್ರಿಸ್‌ಮಸ್‌ಗೆ ಕ್ರಿಶ್ಚಿಯನ್ನರಿಗೆ ಅನುಮತಿ ಕೊಡುತ್ತೇನೆ ಎಂದು ಯಾರಾದರೂ ಹೇಳಿದರೆ ಅದು ನನ್ನ ಪ್ರಕಾರ ಸಂವಿಧಾನದ ಆಶಯಕ್ಕೆ ವಿರೋಧಿಯಾದ ನಡೆಯಾಗುತ್ತದೆ ಮಾತ್ರವಲ್ಲ ಯಾರಾದರೂ ಪ್ರಶ್ನಿಸಿದರೆ ಅದು ದಂಡನಾರ್ಹ ಅಪರಾಧವೂ ಆಗಿಬಿಡಬಹುದು! ಹಾಗಾದರೆ ಅನುಮತಿ ಕೊಡುವವರು ಏನು ಮಾಡಬೇಕು? ನನ್ನ ಪ್ರಕಾರ ವಿವಾದವನ್ನು ಮೈಮೇಲೆ ಎಳೆದುಕೊಳ್ಳದೆ  ಕೇಳಿದವರಿಗೆಲ್ಲ ಅನುಮತಿ ಕೊಟ್ಟು ಕೈತೊಳೆದುಕೊಳ್ಳುವುದೇ ಸರಿ. 

ಇದೆಲ್ಲ ನಮಗೆ ಯಾತಕ್ಕೆ. ಆದೇಶ ಮಾಡುವವರು ಅನುಮತಿ ಕೊಡುವವರು ಏನಾದ್ರೂ ಮಾಡಿಕೊಳ್ಳಲಿ ನಾವು ನಮ್ಮ ಕಷ್ಟ ಮಾತ್ರ ಹೇಳಿಕೊಳ್ಳೋಣ ಎಂದು ಕೆಲವರಿಗೆ ಅನ್ನಿಸಬಹುದು. ಆದರೆ ಅವರೆಲ್ಲರಿಗೂ ರಜಾದಿನದಲ್ಲಿ ಮೌಲ್ಯಮಾಪನಕ್ಕೆ ಕರೆದಿರುವುದರಿಂದ ಒಳಗೊಳಗೆ ಯಾರದ್ಯಾರದೋ ಮೇಲೆ ಸಿಟ್ಟು ಇರುವುದಂತೂ ಸುಳ್ಳಲ್ಲ. ಕೆಲವರು ನನಗೆ ಫೋನ್‌ ಮಾಡಿ ಯಾರ್ಯಾರಿಗೋ ಬಾಯಿಗೆ ಬಂದಂತೆ ಬಯ್ದದ್ದೂ ಇದೆ. ಆದರೆ ಇವರಿಗೆಲ್ಲ ಹೊಟ್ಟೆಯಲ್ಲಿ ಇರುವ ಸಿಟ್ಟು ರಟ್ಟೆಗೆ ಬರಲ್ಲ. ಎಂತದು ಮಾಡುವುದು ಹೇಳಿ. ಅಂದಮಾತ್ರಕ್ಕೆ ಇವರೆಲ್ಲ ಮೈಗಳ್ಳರಲ್ಲ. ಬಹಳ ಶ್ರದ್ಧೆಯಿಂದಲೇ ಕೆಲಸ ಮಾಡುವಂಥವರು. ಆದರೆ ಮನಶ್ಶಾಸ್ತ್ರ ಓದಿರುವಂಥ ಯಾರಿಗಾದರೂ ತಿಳಿಯುವ ಸಣ್ಣ ಸಂಗತಿ ಎಂದರೆ ವಾರದ ರಜೆ, ಹಬ್ಬದ ರಜೆ ಇವೆಲ್ಲ ನೌಕರರಲ್ಲಿ ಹೊಸಚೈತನ್ಯವನ್ನು ತುಂಬಿ ಅವರ ಕೆಲಸದ ದಕ್ಷತೆಯನ್ನು ಹೆಚ್ಚಿಸುತ್ತವೆ ಎಂಬುದು. ಇದನ್ನು ನಮ್ಮ ಮೇಲಿನವರು ಅರ್ಥಮಾಡಿಕೊಳ್ಳುವುದಿಲ್ಲವಲ್ಲ ಎಂಬುದು ಇವರ ಸಕಾರಣಯುಕ್ತ ಕೋಪಕ್ಕೆ ಕಾರಣ ಅಷ್ಟೆ.; ದ್ವೇಷಕ್ಕಲ್ಲ. ಬಂಡಾಯಕ್ಕಂತೂ ಅಲ್ಲವೇ ಅಲ್ಲ. 

ಇತ್ತೀಚೆಗೆ ಭಾರತಕ್ಕೆ ಅಂತರರಾಷ್ಟ್ರೀಯ ಬುಕರ್‌ ಪ್ರಶಸ್ತಿ ತಂದುಕೊಟ್ಟ ಭಾನು ಮುಸ್ತಾಕ್‌ ಅವರ ʻಹಾರ್ಟ್‌ ಲ್ಯಾಂಪ್‌ʼ (ಎದೆಯ ಹಣತೆ) ಕೃತಿಯ ಕಥೆಯೊಂದರಲ್ಲಿ  ʻಮನೆಯ ಮಗಳು ಬೇಸರಪಟ್ಟುಕೊಂಡು ಶಪಿಸಬಾರದು. ಹಕ್‌ದಾರ್‌ ತರ್‌ಸೇ ತೋ ಅಂಗಾರ್‌ ಕಾ ನ್ಹೂ ಬರ್‌ಸೆʼ  ಎಂಬ ಮಾತು ಬರುತ್ತದೆ. ಅಂದರೆ ಯಾರಾದರೂ ತಮ್ಮ ನ್ಯಾಯಯುತ ಹಕ್ಕನ್ನು ಕೇಳಿದಾಗ ನಾವು ಅಧಿಕಾರದ ಬಲದಿಂದ ಅದನ್ನು ನಿರಾಕರಿಸಿದರೆ, ಆಗ ಆ ಹಕ್ಕುದಾರರು ದೇವರಲ್ಲಿ ಮನವಿ ಮಾಡಿಕೊಂಡರೆ ಬೆಂಕಿಯ ಮಳೆಯೇ ಸುರಿದೀತು ಎಂಬುದು ಇದರ ಅರ್ಥ. ಇಲ್ಲಿ ಶಿಕ್ಷಕರು ಶಿಕ್ಷಣ ಇಲಾಖೆಯ ಮಕ್ಕಳು. ಅವರು ಶಾಪ ಹಾಕಿದರೆ ಇಲಾಖೆಗೆ ಒಳ್ಳೆಯದಾಗುವುದಿಲ್ಲ. ಇದನ್ನು ಸಂಬಂಧಪಟ್ಟ ಎಲ್ಲರೂ ಅರ್ಥಮಾಡಿಕೊಳ್ಳುವುದು ಯಾರದೋ ಒಬ್ಬರ ಆರೋಗ್ಯಮಾತ್ರವಲ್ಲ ಇಡೀ ವ್ಯವಸ್ಥೆಯ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ನನ್ನ ಕತೆ ಕೇಳಿ. ವಾರಪೂರ್ತಿ ಶ್ರದ್ಧೆಯಿಂದ ಕೆಲಸ ಮಾಡುವ ನನಗೆ  ಭಾನುವಾರ ವಿ‍ಶ್ರಾಂತಿ ತೆಗೆದುಕೊಳ್ಳದಿದ್ದರೆ ಮುಂದಿನ ವಾರ ಪೂರ್ತಿ ತಲೆಯೇ ಸರಿ ಇರುವುದಿಲ್ಲ. ಹುಚ್ಚ ಮಾಡಿದಂಗೆ ಮಾಡುತ್ತಿರುತ್ತೇನೆ. ಈ ಸಲ ನನಗೂ ಮೌಲ್ಯಮಾಪನ ಇದೆ. ಶನಿವಾರ ಬಕ್ರಿದ್‌ ರಜೆಗೆ ಮನವಿ ಮಾಡಿಕೊಳ್ಳುವುದೋ ಬೇಡವೋ ಅಂಥ ವಿಚಾರ ಮಾಡುತ್ತಿರುವೆ. ಬೆಳಿಗ್ಗೆ ಮೂಡು ಬಂದ ರೋಡು ಹಿಡಿಯುವೆ. ನಾನು ಅನುಮತಿ ಕೇಳಿದರೆ ಅದಕ್ಕೆ ಅವರು  ಕೊಟ್ಟರೆ ಪಸಂದ ಆಯ್ತು. ಕೊಡದಿದ್ದರೆ ಮುಂದೆ ಏನು ಅಂಥ ನೋಡುವ. ಏಕೆಂದರೆ ಒಂದು ವೇಳೆ ಶನಿವಾರವೂ ಹೋಗಿ ಭಾನುವಾರವೂ ನಾನು ವ್ಯಾಲೂವೇಷನ್ನಿಗೆ ಹೋದರೆ ಭಾನುವಾರ ನನ್ನ ಕೈಗೆ ಬರುವ ಪೇಪರ್ರುಗಳ ಮಕ್ಕಳ ಗತಿ ಏನು ಎಂಬ ಚಿಂತೆಯಾಗಿದೆ. ಏಕೆಂದರೆ ಅವತ್ತಿನ ನನ್ನ ಕೆಲಸ ಅತ್ಯಂತ ಕಳಪೆಯಾಗಿರುತ್ತದೆ. ಈ ಕಳಪೆ ಕೆಲಸಕ್ಕೆ ನನಗೆ ಏನೂ ಆದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಮಕ್ಕಳ ಗತಿ? ಊಪರ್‌ ವಾಲಾನೇ ನೋಡಿಕೊಳ್ಳಬೇಕಾಗುತ್ತದೆ.

ನಾನು ಮೌಲ್ಯಮಾಪನ ಮಾಡಲಾರದೆ ಹೀಗೆ ಮಾಡುತ್ತಿದ್ದೇನೆ ಎಂದು ನೀವು ತಿಳಿದುಕೊಳ್ಳಲಾರಿರಿ; ಇದರೆ ಹಿಂದೇ ಏನೇನೋ ಕಾರಣಗಳು ಏನೇನೋ ಉದ್ದೇಶಗಳು ಇರುತ್ತವೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳುವಿರಿ ಅಂದುಕೊಂಡಿದ್ದೇನೆ. ನೀವು ಯಾರು ಯಾರು ಏನು ಮಾಡುವಿರೋ ಗೊತ್ತಿಲ್ಲ. ನೀವು ಕೂಡ ನಿಮ್ಮ ಮೂಡು ಬಂದ ರೋಡು ಹಿಡಿದು ನಡೆಯೋದೇ ಸರಿ. ಹೇಳಲಿಕ್ಕೂ ಆಗಲ್ಲ ತಾಳಲಿಕ್ಕೂ ಆಗಲ್ಲ ಅಂದರೆ ಅಕ್ಕ ಹೇಳಿದಂತೆ ಕಿಚ್ಚಿಲ್ಲದ ಬೆಂಕಿಯಲ್ಲಿ ಬೇಯುತ್ತಲೇ ಇರಬೇಕುತ್ತದೆ ಸತತ. ಅಷ್ಟೆ!

ಶಿವನೇ ಶಂಭುಲಿಂಗ!!

ರಾಬು (05-06-2025)


Monday, June 2, 2025

ಮನಸೂರೆಗೈದ ʻಮಹಾಬೆಳಗುʼ!

 

ಮನಸೂರೆಗೈದ ʻಮಹಾಬೆಳಗುʼ!

·        ಡಾ. ರಾಜೇಂದ್ರ ಬುರಡಿಕಟ್ಟಿ

ಟಿ.ವಿ, ಮೊಬೈಲುಗಳ ಹಿಂದೆ ಬಿದ್ದಿರುವ ಜನ ಪುಸ್ತಕ ಓದು ರಂಗಭೂಮಿ ಚಟುವಟಿಕೆಗಳಿಂದ ವಿಮುಖರಾಗಿದ್ದಾರೆ ಎಂಬುದು  ಈಗ ನಿತ್ಯ ಕೇಳಿಬರುತ್ತಿರುವ ಕ್ಲೀಷೆಯಾದ ಮಾತು. ಆದರೆ ಒಂದು ಒಳ್ಳೆಯ ಪುಸ್ತಕ ಪ್ರಕಟವಾದಾಗ ಅದರ ಪ್ರತಿಗಳು ಖರ್ಚಾಗುವ ರೀತಿ ಒಂದು ಒಳ್ಳೆಯ ನಾಟಕ ಪ್ರದರ್ಶನಗೊಂಡಾಗ ಅದನ್ನು ಮುಗಿಬಿದ್ದು ನೋಡುವ ಜನರ ಸಂಖ್ಯೆ ಒಂದೊಂದು ಸಲ ಈ ಹೇಳಿಕೆ ತಪ್ಪು ಎನ್ನುವಂತೆ ಮಾಡುತ್ತವೆ. ಇದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ ಇತ್ತೀಚೆಗೆ ಶಿವಮೊಗ್ಗದ ರಂಗಮಂದಿರದಲ್ಲಿ ನಡೆದ ʻಮಹಾಬೆಳಗುʼ ನಾಟಕ.

ಶಿವಮೊಗ್ಗದ ಸೃಷ್ಟಿ ಸಾಂಸ್ಕೃತಿಕ ವೇದಿಕೆಯ ಕಲಾವಿದರು ತಮ್ಮ ವೇದಿಕೆಯ ಬೆಳ್ಳಿಹಬ್ಬದ ಅಂಗವಾಗಿ ಅಭಿನಯಿಸಿದ ಈ ನಾಟಕ ಸಿರಿಗೆರೆ ತರಳಬಾಳು ಪೀಠದ ಹಿರಿಯ ಜಗದ್ಗುರು ಲಿಂಗೈಕ್ಯ ಶಿವಕುಮಾರ ಮಹಾಸ್ವಾಮಿಗಳ ಜೀವನ ಮತ್ತು ಸಾಧನೆಗಳನ್ನು ಆಧರಿಸಿ ಡಾ ರಾಜಶೇಖರ ಹನಮಲಿ ಅವರು ರಚಿಸಿರುವಂಥದ್ದು. ಈ ನಾಟಕವನ್ನು ರಂಗಕ್ಕೆ ವಿನ್ಯಾಸಗೊಳಿಸಿ ಅದರ ನಿರ್ದೇಶನವನ್ನು ಮಾಡಿದವರು ಖ್ಯಾತ ರಂಗಭೂಮಿ ಕಲಾವಿದರೂ ನಾಟಕ ನಿರ್ದೇಶಕ ದಂಪತಿಗಳೂ ಆದ ಶ್ರೀ ವೈ. ಡಿ ಬಾದಾಮಿ ಮತ್ತು ಮಂಜುಳಾ ಬಾದಾಮಿ. 

1940ರಲ್ಲಿ ಸಿರಿಗೆರೆ ತರಳಬಾಳು ಪೀಠದ ಇಪ್ಪತ್ತನೆಯ ಪೀಠಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಶಿವಕುಮಾರ ಸ್ವಾಮಿಗಳು ತಮ್ಮ ಪೀಠಾಧ್ಯಕ್ಷರ ಸ್ಥಾನವನ್ನು ʼಅಧಿಕಾರʼ ವಾಗಿ ಪರಿಗಣಿಸದೆ ʼಜವಾಬ್ದಾರಿʼಯಾಗಿ ಪರಿಗಣಿಸಿ ಆ ಪೀಠಕ್ಕೊಂದು ಘನತೆ ತಂದವರು. ಅವರು ತಮ್ಮ ಸುಮಾರು ಮೂವತ್ತಕ್ಕೂ ಹೆಚ್ಚು ವರ್ಷಗಳ ತಮ್ಮ ಈ ʼಜವಾಬ್ದಾರಿʼಯ ಅವಧಿಯಲ್ಲಿ ಮಾಡಿದ ಕಾರ್ಯವು ಕರ್ನಾಟಕದ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಮತ್ತು ಸಾಂಸ್ಕೃತಿಕ ಕ್ಷೇತ್ರದ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದು. ಬಡತನ, ಅನಕ್ಷರತೆ, ಅಜ್ಞಾನ ಮೂಢನಂಬಿಕೆ ಹೀಗೆ ಹತ್ತು ಹಲವು ಸಮಸ್ಯೆಗಳಿಂದ ನಮ್ಮ ಸಮಾಜದ ಜನ ನರಳುತ್ತಿರುವಾಗ ಈ ಎಲ್ಲ ಕ್ಷೇತ್ರಗಳಲ್ಲೂ ಪ್ರವೇಶಿಸಿ ಅವರು ಇವನ್ನು ತೊಡೆದುಹಾಕಲು ಅನೇಕ ಅಡೆತಡೆಗಳ ನಡುವೆಯೂ ಇಟ್ಟ ಆರಂಭಿಕ ಹೆಜ್ಜೆಗಳು ಈ ಕ್ಷೇತ್ರಗಳ ಅಭಿವೃದ್ಧಿಗೆ ಭದ್ರವಾದ ಅಡಿಗಲ್ಲುಗಳನ್ನೇ ಹಾಕಿದವು. ಅವರ ಈ ಬಗೆಯ ಕೆಲಸಗಳು ಆ ಪೀಠದ ಮುಂದಿನ ಗುರುಗಳಿಗೆ  ಮಾತ್ರವಲ್ಲ ಯಾವುದೇ ಪೀಠದ ಪೀಠಾಧಿಪತಿಗಳಿಗೆ ಮಾದರಿ ಆಗುವಂಥವು.

ಶಿವಕುಮಾರ ಸ್ವಾಮಿಗಳು ಶಾಲೆ-ಕಾಲೇಜುಗಳನ್ನು ಕಟ್ಟುವಾಗ ಸ್ವತಃ ತಮ್ಮ ಶಿಷ್ಯಬಳಗ ಮತ್ತು ವಿದ್ಯಾರ್ಥಿಗಳೊಂದಿಗೆ ಶ್ರಮದಾನ ಮಾಡುತ್ತಿದ್ದಂಥವರು. ಅವರು ನಿಜಾರ್ಥದಲ್ಲಿ ʻ

ವಿದ್ಯಾವರ್ಧಕʼ ರಾಗಿದ್ದರೇ ಹೊರತು ಇಂದಿನ ಕೆಲವು ಮಠಾಧಿಪತಿಗಳಂತೆ, ʼವಿದ್ಯಾವರ್ತಕʼರಾಗಿರಲಿಲ್ಲ. ಸ್ವಭಾವತಃ ಒಂದಿಷ್ಟು ಕೋಪಿಷ್ಠರೆಂದು ಹೆಸರಾಗಿದ್ದ ಅವರು ಅಷ್ಟೇ ಮೃದುಸ್ವಭಾವದವರು ತಾಯಿಯ ಅಂತಃಕರಣವನ್ನು ಹೊಂದಿದವರೂ ಆಗಿದ್ದರೆಂದು ಅವರ ಹತ್ತಿರದ ಒಡನಾಟ ಇದ್ದವರು ಹೇಳುವುದಿದೆ. ಯಾರು ಬಯಸದಿದ್ದರೂ ತಮ್ಮ ನಿವೃತ್ತಿಯನ್ನು ತಾವೇ ಘೋಷಿಸಿಕೊಂಡು ಅದರಂತೆ ಪೀಠತ್ಯಾಗ ಮಾಡಿದ ಅಪರೂಪರಲ್ಲಿ ಅಪರೂಪದ ಸಂತ ಅವರು!

ಇಂತಹ ಒಬ್ಬ ಮಹಾ ಸಂತನ ಜೀವನವನ್ನು ನಾಟಕರೂಪದಲ್ಲಿ ಆಡಿ ತೋರಿಸಿ ಅವರ ಜೀವನ ಮತ್ತು ಸಾಧನೆಯನ್ನು ಇಂದಿನ ಪೀಳಿಗೆಗೆ ಕಣ್ಣಿಗೆ ಕಟ್ಟುವಂತೆ ಮಾಡಿ ಅಪಾರ ಜನಮನ್ನಣೆಯನ್ನು ಈ ಈ ಸೃಷ್ಟಿ ಸಾಂಸ್ಕೃತಿಕ ವೇದಿಕೆಯ ಕಲಾವಿದರು ಪಡೆದರು. ಸುಮಾರು ಇಪ್ಪತ್ತೈದು ಮೂವತ್ತು ಜನ ಕಲಾವಿದರನ್ನು ಒಳಗೊಂಡ ಈ ಕಲಾತಂಡದ ಸದಸ್ಯರಲ್ಲಿ ಯಾರೊಬ್ಬರೂ ವೃತ್ತಿಕಲಾವಿದರಾಗಿರದೇ ಎಲ್ಲರೂ ಹವ್ಯಾಸಿ ಕಲಾವಿದರಾಗಿದ್ದದ್ದು ವಿಶೇಷ. ಅವರಲ್ಲಿ ಬಹಳಷ್ಟು ಜನ ಕಾಲೇಜು ಉಪನ್ಯಾಸಕರು, ವಕೀಲರು, ಮತ್ತು ವಿವಿಧ ಇಲಾಖೆಗಳ ನೌಕರರೂ ಇದ್ದು ಅವರೆಲ್ಲರೂ ತಮ್ಮ ಬಿಡುವಿಲ್ಲದ ವೃತ್ತಿಬದುಕಿನ ಒತ್ತಡಗಳ ನಡುವೆಯೂ ಅತ್ಯಂತ ಶ್ರದ್ಧೆಯಿಂದ ಈ ನಾಟಕದ ಪಾತ್ರಗಳಿಗೆ ಜೀವತುಂಬಿ ಅಭಿನಯಿಸಿದ್ದರಿಂದಲೇ ಈ ನಾಟಕ ಅಷ್ಟೊಂದು ಯಶಸ್ವಿಯಾಗಲು ಕಾರಣವಾಯಿತು.

ಶಿವಕುಮಾರ ಮಹಾಸ್ವಾಮಿಗಳ ಪಾತ್ರವಹಿಸಿದ್ದ ಉಪನ್ಯಾಸಕ ಚನ್ನಯ್ಯ ಬಿ. ಮಾರವಳ್ಳಿ ಅವರ ಅಭಿನಯವಂತೂ ಸ್ವತಃ ಶಿವಕುಮಾರ ಸ್ವಾಮಿಗಳೇ ನಮ್ಮೆದುರಿಗಿದ್ದಾರೆ ಎಂಬ ಭಾವನೆಯನ್ನು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತುವಂತೆ ಮಾಡಿತು! ಶಿವಕುಮಾರ ಸ್ವಾಮಿಗಳು ಜಾತಿಭೇದಕ್ಕೆ ತೋರುತ್ತಿದ್ದ ಸಾತ್ವಿಕ ಕೋಪ, ರಾಜಕೀಯ ವ್ಯಕ್ತಿಗಳನ್ನು ದಭಾಯಿಸುವಲ್ಲಿ ಅವರಿಗಿದ್ದ ತಾಕತ್ತು, ಅಜ್ಞಾನ ಮೂಢನಂಬಿಕೆಗಳನ್ನು ಕಂಡಾಗ ಉರಿದುಬೀಳುತ್ತಿದ್ದ ರೀತಿ, ಒಳ್ಳೆಯ ಕೆಲಸಗಳನ್ನು ಕಂಡು ಸಂತೋಷದಿಂದ ʼಭೇಷ್‌ʼ ಎಂದು ಹುರುದುಂಬಿಸುತ್ತಿದ್ದ ಪರಿ, ಕಲೆ ಸಾಹಿತ್ಯ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಅವರೇ ಮುಂದೆ ನಿಂತು ನಾಟಕಗಳನ್ನು ಬರೆದು ಪ್ರಯೋಗ ಮಾಡಿಸುತ್ತಿದ್ದ ಬಗೆ  ಹೀಗೆ ಅವರ ಸಂಕೀರ್ಣ ವ್ಯಕ್ತಿತ್ವವನ್ನು ತಮ್ಮ ಗಂಭೀರ ಮತ್ತು ಹಾಸ್ಯಗಳ ಸಮ್ಮಿಶ್ರ ಶೈಲಿಯಲ್ಲಿ ಪ್ರಸ್ತುತ ಪಡಿಸಿದ ಅವರ ಕಲಾನೈಪುಣ್ಯದ ಜೊತೆಗೆ ಅವರ ಅಜಾನುಬಾಹು ದೈಹಿಕ ವ್ಯಕ್ತಿತ್ವ ಕೂಡ ಈ ಪಾತ್ರ ಜನಮಾನಸದಲ್ಲಿ ಅಚ್ಚೊತ್ತಲು ವಿಶೇಷ ಕಾರಣವಾಯಿತು. ಶ್ರೀಗಳ ವಿವಿಧ ವಯಸ್ಸಿನ ದೈಹಿಕ ಚಲನೆಗಳನ್ನು ತೋರಲು ಅವರು ಮಾಡಿಕೊಂಡ ಸೂಕ್ಷ್ಮ ವ್ಯತ್ಯಾಸಗಳೂ ಅವರ ಅಭಿನಯಕ್ಕೆ ವಿಶೇಷ ಮೆರಗು ನೀಡಿದವು.  ಸಮಾಜ ಮುಖಂಡರ ಪಾತ್ರಗಳು, ತಮ್ಮ ಧರ್ಮದ ಜೊತೆಗೆ ʻಅನ್ಯʼ ಧರ್ಮಗಳನ್ನು ಗೌರವಿಸುವ ಶ್ರೀಗಳ ಮಹತ್ವದ ಆಲೋಚನೆಯನ್ನು ತೋರಿಸಲಿಕ್ಕೆಂದು ರೂಪಿಸಲ್ಪಟ್ಟ ಹಸನ್‌ ಮತ್ತು ರಜಿಯಾ ಪಾತ್ರಗಳು ಶ್ರೀಗಳ ಆಧ್ಯಾತ್ಮಿಕ ಜೀವನಕ್ಕಿಂತ ಸಾಮಾಜಿಕ ಜೀವನದ ಮಹತ್ವವನ್ನು ತೋರಿಸುವಲ್ಲಿ ಯಶಸ್ವಿಯಾದವು ಮಾತ್ರವಲ್ಲ ಧರ್ಮ ಮತ್ತು ಆಧ್ಯಾತ್ಮದಂತಹ ಗಂಭೀರ ವಿಷಯವಸ್ತುವಿಗೆ ಹಾಸ್ಯದ ಮೆರಗನು ನೀಡಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದವು. ಈ ಪಾತ್ರಗಳನ್ನು ನಿರ್ವಹಿಸಿದ ಎಫ್‌ ಕುಟ್ರಿ, ತಿಪ್ಪಣ್ಣ, ಸುಧೀಂದ್ರರಾವ್‌, ಶ್ರೀಮತಿ ಲಕ್ಷ್ಮಿ,  ಮುಂತಾದವರ ಅಭಿನಯಕೂಡ ಬಹಳಷ್ಟು ಅದ್ಭುತವಾಗಿ ಮೂಡಿಬಂದಿತು.

ಸಾಮಾಜಿಕ ಸಮಸ್ಯೆಗಳು, ಹಾಸ್ಯಕಥೆಗಳು ಇವುಗಳನ್ನು ಆಧರಿಸಿದ ನಾಟಕಗಳಿಗೆ ಹೋಲಿಸಿದರೆ ವ್ಯಕ್ತಿಕೇಂದ್ರಿತವಾದ ಸಂತರು ಅಥವಾ ಸಮಾಜ ಸೇವಕರ ಜೀವನಾಧಾರಿತ ನಾಟಕಗಳಿಗೆ ಜನ ತೋರಿಸುವ ಉತ್ಸಾಹ ಕಡಿಮೆಯೇ. ಆದರೆ ಈ ನಾಟಕಕ್ಕೆ ಜನತೋರಿದ ಉತ್ಸಾಹ ಭಿನ್ನವಾಗಿಯೇ ಇತ್ತು. ಈ ಜನವರ್ಗದಲ್ಲಿ ಯಾವುದೋ ಒಂದು ಸಮಾಜ ಅಥವಾ ಕೋಮಿಗೆ ಸೇರಿದ ಜನರಿರದೇ ಎಲ್ಲ ವರ್ಗಗಳ ಜನರೂ ಇದ್ದರು ಎಂಬುದು ಗಮನಿಸಬೇಕಾದ ಅಂಶ. ಸುಮಾರು ಎರಡು ಗಂಟೆಗಳ ಕಾಲ ತೆಗೆದುಕೊಂಡ ಈ ನಾಟಕ ತುಂಬಿದ ರಂಗಮಂದಿರದ ಜನರೆಲ್ಲರನ್ನೂ ತನ್ನಕಥಾಶಕ್ತಿ, ಕಲಾವಿದರ ಶ್ರದ್ಧೆಗಳಿಂದ ಹಿಡಿದಿಟ್ಟುಕೊಳ್ಳುವಲ್ಲಿ ಇದನ್ನು ವಿನ್ಯಾಸಗೊಳಿಸಿ ನಿರ್ದೇಶಿಸಿದ ಬಾದಾಮಿ ದಂಪತಿಗಳ ಪರಿಶ್ರಮವಂತೂ ಬೆನ್ನಿಗೆ ಇದ್ದೇ ಇದೆ. ಇದಕ್ಕೆ ಪೂರಕ ವಾತಾವರಣವನ್ನು ಸೃಷ್ಟಿಸುವಲ್ಲಿ ಶಿವಮೊಗ್ಗದ ಯಾವುದೇ ನಾಟಕಗಳಿಗೆ ಬೆಳಕು ತಜ್ಞರಾಗಿ ಕೆಲಸಮಾಡುವ ಹರಿಗೆ ಗೋಪಾಲಸ್ವಾಮಿ ಅವರ ಚಾತುರ್ಯ, ವಿವಿಧ ಸನ್ನಿವೇಶಗಳಿಗೆ ಮಾಡಿದ್ದ ವಚನಗಳ ಗಾಯನ ಸಂಯೋಜನೆ ಕೂಡ ತಮ್ಮದೇ ಆದ ಕೊಡುಗೆ ನೀಡಿದವು. 


ಶಿವಮೊಗ್ಗದ ರಂಗತಂಡಗಳಲ್ಲಯೇ ಕಡಿಮೆ ಸಂಖ್ಯೆಯ ನಾಟಕಗಳನ್ನು ಕೊಟ್ಟದ್ದು ಈ ಸೃಷ್ಟಿ ಸಾಂಸ್ಕೃತಿಕ ವೇದಿಕೆಯಾದರೂ ಅದು ಪ್ರಸ್ತುತ ಪಡಿಸಿದ ನಾಟಕಗಳಲ್ಲಿ ಬಹುಪಾಲು ನಾಟಕಗಳು ಕರ್ನಾಟಕ ಮಾತ್ರವಲ್ಲದೇ ಹೊರರಾಜ್ಯಗಳಲ್ಲಿಯೂ ಹೆಸರು ಮಾಡಿ ಅನೇಕ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದಿವೆ. ನಾಟಕಕ್ಕೆ ಶುಭ ಹಾರೈಸಲು ಬಂದಿದ್ದ ಶಿವಮೊಗ್ಗ ಬಸವಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಅಭಿಪ್ರಾಯಪಟ್ಟಂತೆ ಇದು ʻಹತ್ತು ಕಟ್ಟುವ ಬದಲು ಒಂದು ಮುತ್ತು ಕಟ್ಟುವ ಕೆಲಸʼವೇ ಸರಿ. ಅಂತಹ ಪ್ರತಿಭಾವಂತ ಮತ್ತು ಶ್ರದ್ಧಾವಂತ ಕಲಾವಿದರ ಕಾರಣಕ್ಕಾಗಿಯೇ ಈ ನಾಟಕಕೂಡ ಇಷ್ಟೊಂದು ದೊಡ್ಡಪ್ರಮಾಣದಲ್ಲಿ ಯಶಸ್ವಿಯಾಗಲು ಕಾರಣವಾಯಿತು. ಇದಕ್ಕಾಗಿ ಈ ತಂಡದ ಅ‍ಧ್ಯಕ್ಷರಾದ ಲೇಖಕ ಕಲೀಂ ಉಲ್ಲಾ ಅವರನ್ನು ನಾವು ಅಭಿನಂದಿಸಬೇಕು. ಇಂತಹ ನಾಟಕಗಳು ಹೆಚ್ಚು ಹೆಚ್ಚು ರಚನೆಯಾಗಿ ರಾಜ್ಯದ ಬೇರೆ ಬೇರೆ ಕಡೆ ಪ್ರದರ್ಶನಗೊಂಡು ದಿನದಿನಕ್ಕೂ ಕುಸಿಯುತ್ತಿರುವ ಸಮಾಜಸೇವಾಗುಣವನ್ನು ಮೇಲೆತ್ತುವಂತಹ ಕೆಲಸವನ್ನು ಮಾಡಲಿ ಎಂದು ಆಶಿಸೋಣ.

*****

02-06-2025

Saturday, May 31, 2025

ವೀರಣ್ಣನ ಅಮಾನತ್ತು ಪ್ರಕರಣ: ಸದುದ್ದೇಶಿತ ಸೀಮೋಲ್ಲಂಘನ ಮತ್ತು ಶಿಕ್ಷಕ ಸಂಘದ ಜವಾಬ್ದಾರಿ

 ವೀರಣ್ಣನ ಅಮಾನತ್ತು ಪ್ರಕರಣ: ಸದುದ್ದೇಶಿತ ಸೀಮೋಲ್ಲಂಘನ ಮತ್ತು ಶಿಕ್ಷಕ ಸಂಘದ ಜವಾಬ್ದಾರಿ


ಶಿಕ್ಷಕ ಸಾಹಿತಿಗಳಾದ ಮಿತ್ರ ವೀರಣ್ಣ ಮಡಿವಾಳರ ಅವರನ್ನು ಬೆಳಗಾವಿ ಜಿಲ್ಲಾಡಳಿತ ಸೇವೆಯಿಂದ ಅಮಾನತ್ತು ಮಾಡಿದೆ. ಅದಕ್ಕೆ ಕಾರಣಗಳೇನು ಎಂಬುವು ಈಗಾಗಲೇ ಮಾಧ್ಯಮದಲ್ಲಿ ಸಾಕಷ್ಟು ವರದಿಯಾಗಿವೆ. ವೀರಣ್ಣ ಕೂಡ ಪ್ರತಿಹಂತದ ಬೆಳವಣಿಗೆಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರ ಗಮನಕ್ಕೆ ತರುತ್ತಿದ್ದಾರೆ.

ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಅವರ ಅಮಾನತ್ತು ಆದದ್ದು ಅವರು ತಾವು ಪಾಠಮಾಡುವ ಮತ್ತು ಮುಖ್ಯಶಿಕ್ಷಕರಾಗಿರುವ ಸರ್ಕಾರಿ ಶಾಲೆಗೆ ಹೆಚ್ಚುವರಿ ಕೊಠಡಿಗಳು ಬೇಕು ಎಂದು ಕಾಲ್ನಡಿಗೆ ಜಾಥಾ ನಡೆಸಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿ ಎದುರು ಧರಣಿ ಕೂತರು ಎಂಬುದು.

ಅವರನ್ನು ಅಮಾನತ್ತು ಮಾಡಲು ಸರ್ಕಾರಿ ಅಧಿಕಾರಿಗಳಿಗೆ ಇಷ್ಟು ಸಾಕಾಗುತ್ತದೆ. ಮತ್ತು ನಾಳೆ ಕೋರ್ಟು ಕಛೇರಿ ಅಂತ ಪ್ರಕರಣ ಹೋದರೆ ಅವರ ಕ್ರಮವನ್ನು ಅವರು ಇಷ್ಟರಿಂದಲೇ ಸಮರ್ಥಿಸಿಕೊಳ್ಳಬಹುದಾಗಿದೆ. ಅಧಿಕಾರಿಗಳು ತಮ್ಮ ಕೆಳಗಿನ ನೌಕರರನ್ನು ಅಮಾನತ್ತು ಮಾಡಲು ಯಾವುದಾದರೂ ನಿಯಮ ಇಟ್ಟುಕೊಂಡೇ ಮಾಡುತ್ತಾರೆ. ಹಾಗಾಗಿ ಕಾನೂನು ಪ್ರಕಾರ ಅವರ ಕ್ರಮವನ್ನು ತಪ್ಪು ಎನ್ನಲು ಬರುವುದಿಲ್ಲ. ಮತ್ತು ಕಾನೂನಿನಿಂದಲೇ ವೀರಣ್ಣನವರಾಗಲೀ ಅವರ ಹಿತವನ್ನು ಬಯಸುವ ಯಾರೇ ಆಗಲಿ ಇಂತಹ ಪ್ರಕರಣಗಳನ್ನು ಎದುರಿಸಿ ಗೆಲ್ಲುವುದು ಕಷ್ಟ!

ಆದರೆ ಇಂತಹ ಪ್ರಕರಣಗಳನ್ನು ನೋಡುವಾಗ ಕಾನೂನಿನಾಚೆಯ ಒಂದು ದೃಷ್ಟಿಕೋನ ಅಧಿಕಾರಿಗಳಿಗೆ ಬೇಕಾಗುತ್ತದೆ. ಅದು ನಮ್ಮ ಎಷ್ಟು ಜನ ಅಧಿಕಾರಿಗಳಿಗೆ ಇದೆ ಎನ್ನುವುದು ಬಹಳ ಮುಖ್ಯವಾದ ಸಂಗತಿ. ಅವರು ರೂಲ್ಸಿಗೆ ಅಂಟಿಕೊಂಡಿರುತ್ತಾರೆ. ಎಷ್ಟರ ಮಟ್ಟಿಗೆ ಎಂದರೆ ಹೀಗೆ ಒಂದು ಪ್ರಕರಣವನ್ನು ಉದಾಹರಿಸುವುದಾದರೆ ಒಬ್ಬ ಅಧಿಕಾರಿಯನ್ನು ಮುಜರಾಯಿ ಇಲಾಖೆಯಲ್ಲಿ ಒಂದು ದೇವಸ್ಥಾನದ ಅಧಿಕಾರಿಯನ್ನಾಗಿ ನೇಮಕಮಾಡಲಾಯಿತಂತೆ. ಅವನಿಗೆ ರೂಲ್ಸು ಎಂದರೆ ರೂಲ್ಸು. ನಿಯಮದಲ್ಲಿ ಹೇಳಿದ್ದನ್ನು ಬಿಟ್ಟು ಒಂದಿಂಚೂ ಅತ್ತಿತ್ತ ಸರಿಯಲು ಅವನು ಒಪ್ಪುತ್ತಿರಲಿಲ್ಲವಂತೆ. ಮುಜರಾಯಿ ಇಲಾಖೆಯ ನಿಯಮಗಳಲ್ಲಿ ಒಂದು ನಿಯಮ, “ದೇವಸ್ಥಾನದ ಒಳಗೆ ಹೋಗುವ ಭಕ್ತರೆಲ್ಲರೂ ಪಾದರಕ್ಷೆಗಳನ್ನು ಹೊರಗೆ ಬಿಟ್ಟೇ ಹೋಗಬೇಕು” ಎಂದು ಇತ್ತಂತೆ. ಹೀಗೆ ಒಂದು ದಿನ ಆ ದೇವಸ್ಥಾನಕ್ಕೆ ಅಯ್ಯಪ್ಪಸ್ವಾಮಿ ಭಕ್ತರ ಒಂದು ದಂಡು ಬಂತಂತೆ. ಅಯ್ಯಪ್ಪಸ್ವಾಮಿ ಭಕ್ತರು ಸಾಮಾನ್ಯವಾಗಿ ಪಾದರಕ್ಷೆ ಹಾಕಿಕೊಂಡು ಬರುವುದಿಲ್ಲ. ಅವತ್ತೂ ಅವರು ಹಾಕಿಕೊಂಡು ಬಂದಿರಲಿಲ್ಲ. ಇವನು ನಿಯಮದ ಪ್ರಕಾರ ಪಾದರಕ್ಷೆ ಬಿಟ್ಟೇ ಹೋಗಬೇಕು ಎಂದು ತಗಾದೆ ತೆಗೆದನಂತೆ! ಅವರು, “ನಾವು ಪಾದರಕ್ಷೆ ಹಾಕಿಕೊಂಡು ಬಂದಿಲ್ಲ” ಎಂದರೂ ಇವನು ಕೇಳುತ್ತಿರಲಿಲ್ಲವಂತೆ. “ನನಗೆ ಅದನ್ನೆಲ್ಲ ಹೇಳಬೇಡಿ. ಪಾದರಕ್ಷೆ ಬಿಡಿ; ಮುಂದಕ್ಕೆ ಹೋಗಿ” ಎಂದು ಹಟಮಾಡತೊಡಗಿದನಂತೆ!! ಇದು ತಮಾಸೆಯೂ ಇರಬಹುದು. ಆದರೆ ಇಂತಹ ಅಧಿಕಾರಿಗಳು ಇಲ್ಲ ಎಂದು ಹೇಳಲು ಬರುವುದಿಲ್ಲ.

ವೀರಣ್ಣನವರನ್ನು ಅಮಾನತ್ತು ಮಾಡಲು ಇಂತಹ ಒಂದು ಸಣ್ಣನಿಯಮ ಸಾಕಾಗುತ್ತದೆ. “ಸರ್ಕಾರಿ ನೌಕರರು ತಾವು ಕೆಲಸ ಮಾಡುವ ಸರ್ಕಾರದ ವಿರುದ್ಧ ಮುಷ್ಕರ, ಧರಣಿ ಇತ್ಯಾದಿ ಮಾಡುವಂತಿಲ್ಲ” ಎಂಬ ನಿಯಮ ಇದ್ದೇ ಇದೆ. ಇದನ್ನೇ ಹಿಡಿದುಕೊಂಡು ಅವರು ಅವರ ಕೆಲಸವನ್ನು ಮಾಡಿದ್ದಾರೆ.

ಆದರೆ ಇಂತಹ ಪ್ರಕರಣಗಳಲ್ಲಿ ಒಬ್ಬ ಶಿಕ್ಷಕರಾಗಿ ವೀರಣ್ಣ ಮಾಡುವುದಕ್ಕಿಂತಲೂ ಹೆಚ್ಚಾಗಿ ಶಿಕ್ಷಕರ ಸಂಘಗಳು ಮಾಡುವುದು ಬಹಳ ಇರುತ್ತದೆ. ಸ್ವಭಾವತಃ ಸೇವಾ ಮನೋಭಾವದ ಮತ್ತು ಸಾಹಿತ್ಯ ಸಂಸ್ಕೃತಿಗಳ ಬಗ್ಗೆ ನಿಕಟ ಸಂಪರ್ಕ ಹೊಂದಿರುವ ವೀರಣ್ಣ ಕೆಟ್ಟ ಮನುಷ್ಯನಂತೂ ಅಲ್ಲವೇ ಅಲ್ಲ. ಆದರೆ ಅನ್ಯಾಯದ ವಿರುದ್ದ ಸೆಟೆದು ನಿಲ್ಲುವಾಗ ತುಸು ದುಡುಕುತ್ತಾರೆ. ಇಂತಹ ಸಣ್ಣಪುಟ್ಟ ನಿಯಮಗಳನ್ನು ಸದುದ್ಧೇಶದಿಂದ ಉಲ್ಲಂಘಿಸುತ್ತಾರೆ ಅಷ್ಟೆ! ವೀರಣ್ಣ ಮಾಡಿದ್ದು ನಿಯಮಗಳ ಪ್ರಕಾರ ತಪ್ಪೇ ಇದ್ದೀತು. ಆದರೆ ಅವರು ಮಾಡಿದ ಕೆಲಸದ ವೈಖರಿಯನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳದೆ ಅದರ ಹಿಂದಿನ ಉದ್ದೇಶವನ್ನೂ ಗಣನೆಗೆ ತೆಗೆದುಕೊಂಡು ಅದನ್ನು ಸಂಘದವರು ಅಧಿಕಾರಿಗಳಿಗೆ ತಿಳಿಹೇಳುವ ಪ್ರಯತ್ನಮಾಡಿ ಅವರ ಮೇಲೆ ಶಿಸ್ತುಕ್ರಮಗಳು ಆಗದಂತೆ ನೋಡಿಕೊಳ್ಳಬೇಕು. ನನಗೆ ತಿಳಿದಂತೆ ಅವರು ಇಲಾಖೆಗೆ ಬೇರೆ ಬೇರೆ ರೀತಿಯಲ್ಲಿ ಗೌರವ, ಕೀರ್ತಿ, ಶ್ರೇಯಸ್ಸು ತಂದಂಥವರು. ಈ ಒಂದು ಪ್ರಕರಣವನ್ನು ಮುಂದೆ ಮಾಡಿಕೊಂಡು ಅದೂ ಮಕ್ಕಳ, ಶಾಲೆಯ ಹಿತದೃಷ್ಟಿಯಿಂದ ಮಾಡಿದ ಈ ನಿಯಮೋಲ್ಲಂಘನೆಯ ಪ್ರಕರಣವನ್ನು ಇಟ್ಟುಕೊಂಡು ಅವರು ಇದುವರೆಗೂ ಶಾಲೆಗೆ ಆ ಮೂಲಕ ಇಲಾಖೆಗೆ ತಂದ ಗೌರವ, ಕೀರ್ತಿ ಇವುಗಳನ್ನು ಮರೆಮಾಚುವುದು ಅಥವಾ ಅವನ್ನು ಗೌಣವೆಂದು ಭಾವಿಸುವುದು ಸರಿಯಲ್ಲ. ಏಕೆಂದರೆ ಇಂತಹ ಪ್ರಕರಣಗಳು  ಶಿಕ್ಷಕರು ಪ್ರತಿಭಟನೆ ಮುಷ್ಕರ ಮುಂತಾದವುಗಳನ್ನು ಕಡಿಮೆ ಮಾಡುವಂತಹ ಸಕಾರಾತ್ಮಕ ಪರಿಣಾಮ ಉಂಟುಮಾಡುವುದಕ್ಕಿಂತ ಹೆಚ್ಚಾಗಿ ಅವರು ಶಾಲೆಯ ಕೆಲಸಗಳಲ್ಲಿ ಸಕ್ರಿಯವಾಗಿ ಮತ್ತು ಸಂಪೂರ್ಣವಾಗಿ  ತೊಡಗಿಕೊಂಡು ಕೆಲಸಮಾಡಲು ಹಿಂದೇಟು ಹಾಕುವಂತಹ ನಕಾರಾತ್ಮಕ ಪರಿಣಾಮವನ್ನು ಉಂಟುಮಾಡುವುದೇ ಹೆಚ್ಚು.


ಹೀಗಾಗಿ ಶಿಕ್ಷಕರ ಹಿತಕಾಯಲಿಕ್ಕೇ ಇರುವ ಶಿಕ್ಷಕರ ಸಂಘಗಳು, ಅದರಲ್ಲಿಯೂ ಸರ್ಕಾರಿ ನೌಕರರ ಸಂಘಗಳಲ್ಲಿಯೇ ಅತ್ಯಂತ ಬಲಾಢ್ಯ ಸಂಘ ಎಂದು ಹೆಸರಾಗಿರುವ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಈ ಪ್ರಕರಣದಲ್ಲಿ ಮ‍ಧ್ಯೆ ಪ್ರವೇಶಿಸಿ ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು . ಅದು ಆ ಸಂಘದ ಜವಾಬ್ದಾರಿ ಕೂಡ ಹೌದು. ಶಾಲೆಯ ಮಕ್ಕಳ ಅಕ್ಷರ ದಾಸೋಹದ ಅಕ್ಕಿ ಕದ್ದವರು, ಹಾಲಿನ ಪ್ಯಾಕೇಟ್‌ ಮನೆಗೆ ಒಯ್ದವರು, ಮಕ್ಕಳನ್ನು ಲೈಂಗಿಕ ಶೋಷಣೆ ಮಾಡಿದವರು, ಶಾಲೆಯ ಹಣ ದುರುಪಯೋಗ ಮಾಡಿಕೊಂಡವರು ಇಂಥವರು ಅಮಾನತ್ತಾದಾಗ ಅನೇಕ ಸಂದರ್ಭಗಳಲ್ಲಿ ನಮ್ಮ ಸಂಘಗಳು ಅಂಥವರ ಬೆಂಬಲಕ್ಕೆ ನಿಲ್ಲುವುದುಂಟು. ಅದು ಮಾಡಬಾರದ ಕೆಲಸ. ಇದು ಮಾಡಬೇಕಾದ ಕೆಲಸ. ಮಾಡಬಾರದ ಕೆಲಸವನ್ನು ಮಾಡಹೋಗುವುದು ಎಷ್ಟು ಕೆಟ್ಟದ್ದೋ ಮಾಡಬೇಕಾದ ಕೆಲಸವನ್ನು ಮಾಡದೇ ಬಿಡುವುದೂ ಅಷ್ಟೇ ಕೆಟ್ಟದ್ದು. ಈ ಹಿನ್ನಲೆಯಲ್ಲಿ ಆದಷ್ಟು ಬೇಗ ಶಿಕ್ಷಕರ ಸಂಘ ಈ ಪ್ರಕರಣದಲ್ಲಿ ಮಧ್ಯೆ ಪ್ರವೇಶಿಸಿ  ವೀರಣ್ಣಗೂ ಒಂದಿಷ್ಟು ದುಡುಕದಂತೆ ಬುದ್ಧಿಹೇಳಿ ಅಧಿಕಾರಿಗಳು ಅವರ ಮೇಲೆ ಶಿಸ್ತುಕ್ರಮ ಜರುಗಿಸದಂತೆ ನೋಡಿಕೊಳ್ಳಲಿ.

ಡಾ. ರಾಜೇಂದ್ರ ಬುರಡಿಕಟ್ಟಿ

31-05-2025

Wednesday, May 28, 2025

ಸಾವರ್ಕರ್:‌ ʻದೇಶಭಕ್ತʼ ʻದೇಶದ್ರೋಹಿʼ – ಯಾವುದು ಸರಿ?

ಸಾವರ್ಕರ್:‌ ʻದೇಶಭಕ್ತʼ ʻದೇಶದ್ರೋಹಿʼ – ಯಾವುದು ಸರಿ?

·       ಡಾ. ರಾಜೇಂದ್ರ ಬುರಡಿಕಟ್ಟಿ

ʻಸಾವರ್ಕರ್:‌ ʻದೇಶಭಕ್ತʼ ʻದೇಶದ್ರೋಹಿʼ ಯಾವುದು ಸರಿ?ʼ ಈ ಪ್ರಶ್ನೆಯನ್ನು ನಾವು ಇಂದು ಯಾರಿಗಾದರೂ ಕೇಳಿದರೆ ಉತ್ತರ ಏನು ಬರುತ್ತದೆ? ನಿಸ್ಸಂಶಯವಾಗಿ ಈ ಎರಡೂ ಉತ್ತರಗಳು ದೊರೆಯುತ್ತವೆ! ಬಹಳಷ್ಟು ಸಂದರ್ಭಗಳಲ್ಲಿ ಪ್ರಶ್ನೆ ಕೇಳುವವರು ಯಾರು ಮತ್ತು ಉತ್ತರ ಕೊಡುವವರು ಯಾರು ಎನ್ನುವುದರ ಆಧಾರದ ಮೇಲೆ ಈ ಉತ್ತರಗಳು ಅವಲಂಭಿಸಿರುತ್ತವೆಯೇ ಹೊರತು ಸಾವರ್ಕರ್‌ ಅವರ ವ್ಯಕ್ತಿತ್ವದ ಆಧಾರದ ಮೇಲೆ ಅಲ್ಲ. ಇದಕ್ಕೆ ಕಾರಣವೂ ಇದೆ. ಆಧುನಿಕ ಭಾರತದ ಅತ್ಯಂತ ವಿವಾದಾತ್ಮಕ ನಾಯಕರುಗಳಲ್ಲಿ ಮುಖ್ಯವಾದವರು ವಿನಾಯಕ ದಾಮೋದರ ಸಾವರ್ಕರ್.‌ ಅವರ ನಿಜವಾದ ವ್ಯಕ್ತಿತ್ವ ಏನು? ಅವರ ಸಾಮಾಜಿಕ ಜೀವನದಲ್ಲಿ ಆದ ಪಲ್ಲಟಗಳೇನು ಎಂಬುದನ್ನು ಆದಷ್ಟೂ ಮುಕ್ತವಾಗಿ ದಾಖಲಿಸುವುದು ಈ ಲೇಖನದ ಉದ್ದೇಶ. ಈಗಾಗಲೇ ಸಾವರ್ಕರ್‌ ಅವರ ಬಗ್ಗೆ ತಮ್ಮತಮ್ಮದೇ ಅದ ಪೂರ್ವಾಭಿಪ್ರಯಗಳನ್ನು ಹೊಂದಿರದ ಮತ್ತು ಹೊಂದಿದ್ದರೂ ಅವನ್ನು ಮಾರ್ಪಡಿಸಿಕೊಳ್ಳಲು ಸಾಧ್ಯವಿರುವವರನ್ನು ಈ ಲೇಖನ ಉದ್ದೇಶಿಸಿದೆ. ಬನ್ನಿ ಅವರ ಜನನ ಬಾಲ್ಯದಿಂದಲೇ ಆರಂಭಿಸೋಣ:

೧೮೮೩ರ ಮೇ ೨೮ ರಂದು ಮಹಾರಾಷ್ಟ್ರದ ನಾಸಿಕ್‌ ಬಳಿಯ ಭಾಗೂರು ಎಂಬ ಹಳ್ಳಿಯ ಚಿದ್ಭಾವನಾ ಬ್ರಾಹ್ಮಣ ಕುಟುಂಬದ ದಾಮೋದರ ಮತ್ತು ರಾಧಾಬಾಯಿ ಎಂಬ ದಂಪತಿಗಳಿಗೆ ಜನಿಸಿದ ವಿನಾಯಕನಿಗೆ ಮನೆಯಲ್ಲಿ ಇದ್ದದ್ದು ಗಣೇಶ ಮತ್ತು ನಾರಾಯಣ ಎಂಬ ಇಬ್ಬರು ಸಹೋದರರು ಮತ್ತು ಮೈನಾಬಾಯಿ ಎಂಬ ಒಬ್ಬ ಸಹೋದರಿ. ಬಾಲಕ ವಿನಾಯಕನ ಸಾಮಾಜಿಕ ಹೋರಾಟದ ಬದುಕು ತನ್ನ ಶಾಲಾದಿನದಿಂದಲೇ ಆರಂಭವಾಗುತ್ತದೆ. ಹನ್ನೆರಡು ವರ್ಷದವನಿದ್ದಾಗಲೇ ತನ್ನ ಸಂಗಾತಿಗಳನ್ನು ಕಟ್ಟಿಕೊಂಡು ತನ್ನ ಹಳ್ಳಿಯ ಮಸೀದಿಯೊಂದರ ಮೇಲೆ ದಾಳಿಗೆ ಮುಂದಾಗುವ ಈತ ಆಗಲೇ ಹೇಳುವುದು, “ನಮ್ಮ ಮನತೃಪ್ತಿಗಾಗಿ ನಾವು ಮಸೀದಿಯನ್ನು ಧ್ವಂಸಮಾಡುತ್ತೇವೆ” ಎಂದು. ೧೯೦೩ರಲ್ಲಿ ನಾಸಿಕ್‌ ನಲ್ಲಿ ತನ್ನ ಹಿರಿಯ ಸಹೋದರ ಗಣೇಶನ ಜೊತೆಗೂಡಿ ಸ್ಥಾಪಿಸುವ ಭೂಗತ ಕ್ರಾಂತಿಕಾರಿ ಸಂಘಟನೆ ʼಮಿತ್ರಮೇಳʼ ಮುಂದೆ ಮೂರು ವರ್ಷಗಳ ನಂತರ ೧೯೦೬ರಲ್ಲಿ ಬ್ರಿಟೀಷ್‌ ಅಧಿಪತ್ಯವನ್ನು ಕಿತ್ತುಹಾಕಿ ಹಿಂದೂ ಅಧಿಪತ್ಯವನ್ನು ಸ್ಥಾಪನೆ ಮಾಡುವ ಧ್ಯೇಯವನ್ನಿಟ್ಟುಕೊಂಡ ʼಅಭಿನವ ಭಾರತ ಸೊಸೈಟಿʼ ಆಗುತ್ತದೆ.

ಪುಣೆಯ ಫರ್ಗೂಸನ್‌ ಕಾಲೇಜಿನಲ್ಲಿ ಓದುವಾಗಲೂ ತಮ್ಮ ಕ್ರಾಂತಿಕಾರಿ ಚಟುವಟಿಕೆಗಳನ್ನು ಮುಂದುವರೆಸಿದ ಸಾವರ್ಕರ್‌ ಮೇಲೆ ಆ ಕಾಲದಲ್ಲಿ ಬಹಳಷ್ಟು ಪ್ರಭಾವ ಬೀರಿದವರು ಸ್ವಾತಂತ್ರ್ಯ ಹೋರಾಟದ ತೀವ್ರಗಾಮಿ ಗುಂಪಿನ ಪ್ರಮುಖರಾದ ಬಾಲಗಂಗಾಧರ ತಿಲಕ್‌ ಅವರು. ಅವರೇ ಶಿವಾಜಿ ಸ್ಕಾಲರ್‌ ಶಿಪ್‌ ದೊರೆಯುವಂತೆ ಮಾಡಿ ಕಾನೂನಿನಲ್ಲಿ ಉನ್ನತ ಪದವಿ ಪಡೆಯಲು ಲಂಡನ್ನಿಗೆ ಹೋಗಲು ಸಾವರ್ಕರ್‌ ಅವರಿಗೆ ಸಹಾಯ ಮಾಡಿದ್ದು. ೧೯೦೫ರ ಬಂಗಾಳ ವಿಭಜನೆ ವಿರುದ್ಧದ ಹೋರಾಟದಲ್ಲಿ ಬಾಲಗಂಗಾದರ ತಿಲಕರ ಸಮ್ಮುಖದಲ್ಲಿ ʼವಿದೇಶಿ ವಸ್ತ್ರದಹನʼ ಚಳವಳಿ ಮಾಡಿ ಯುವಕ ವಿನಾಯಕ ಆಗಲೇ ಅವರ ಮೆಚ್ಚುಗೆಯನ್ನು ಗಳಿಸಿದ್ದ.

ಲಂಡನ್ನಿನಲ್ಲಿ ಕ್ರಾಂತಿಕಾರಿ ಚಟುವಟಿಕೆಗಳು:

ಲಂಡನ್ನಿನಲ್ಲಿ ಕಾನೂನು ಓದಲು ಹೋದಾಗಲೂ ಬ್ರಿಟಿಷ್‌ ಅಧಿಪತ್ಯದ ವಿರುದ್ಧದ ಸಾವರ್ಕರ್‌ ಹೋರಾಟ ಮುಂದುವರೆಯುತ್ತದೆ. ಭಾರತದ ಸ್ವಾತಂತ್ರ್ಯವೆಂಬುದನ್ನು ಕ್ರಾಂತಿಕಾರಿ ಚಟುವಟಿಕೆಗಳ ಮೂಲಕವೇ ಪಡೆಯಲು ಸಾಧ್ಯವೆಂದು ಗಾಢವಾಗಿ ನಂಬಿದ್ದ ಸಾವರ್ಕರ್‌ ಆ ಬಗೆಯ ಆಲೋಚನೆಯನ್ನು ಬೆಂಬಲಿಸುವ ಕೆಲವು ಪುಸ್ತಕಗಳನ್ನು ಅಲ್ಲಿ ಬರೆಯುತ್ತಾರೆ. ಅವುಗಳಲ್ಲಿ ಮುಖ್ಯವಾದದ್ದು ʻಭಾರತದ ಸ್ವಾಂತಂತ್ರ್ಯ ಸಂಗ್ರಾಮʼ (ದಿ ಇಂಡಿಯನ್‌ ವಾರ್‌ ಆಫ್‌ ಇಂಡಿಪೆಂಡೆನ್ಸ್‌). ಇದು ೧೮೫೭ಲ್ಲಿ ಬ್ರಿಟಿಷ್‌ ಅಧಿಪತ್ಯದ ವಿರುದ್ದ ನಡೆದ ಐತಿಹಾಸಿಕ ಮಹತ್ವದ ;ಮಹಾದಂಗೆʼಯನ್ನು ಕುರಿತ ಪುಸ್ತಕ. ʼಸಿಪಾಯಿದಂಗೆʼ ಎಂದು ಕರೆಯಲ್ಪಡುತ್ತಿದ್ದ ಇದನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮʼ ಎಂದು ಮೊದಲು ಕರೆದದ್ದೇ ಸಾವರ್ಕರ್‌ ಎನ್ನಲಾಗುತ್ತದೆ. ಆದರೆ ಇತ್ತೀಚಿನ ಸಂಶೋಧನೆಗಳು ಇದನ್ನು ಅಲ್ಲಗಳೆಯುತ್ತವೆ; ಮತ್ತು ಹಾಗೆ ಮೊದಲು ಕರೆದವರು ಸಾವರ್ಕರ್‌ ಅವರಿಗಿಂತ ಮೊದಲು ಕಾರ್ಲ್‌ಮಾಕ್ಸ್‌ ಎಂಬುದನ್ನು ದಾಖಲಿಸುತ್ತವೆ. ಅದು ಏನೇ ಇರಲಿ ಈ ಪುಸ್ತಕವನ್ನು ಸಾವರ್ಕರ್‌ ಅವರಿಗೆ ಲಂಡನ್ನಿನಲ್ಲಿ ಪ್ರಕಟಿಸಲು ಸಾಧ್ಯವಾಗುವುದಿಲ್ಲ. ಕಾರಣ ಅದಕ್ಕೆ ಬ್ರಿಟಿಷ್‌ ಸರ್ಕಾರ ನಿಷೇಧ ಹೇರುತ್ತದೆ.  ಹಾಗಿದ್ದರೆ ಈ ಪುಸ್ತಕ ಪ್ರಕಟವಾದದ್ದು ಹೇಗೆ? ಅದಕ್ಕೆ ಸಹಾಯ ಮಾಡಿದವರು ಯಾರು ಎಂಬ ಪ್ರಶ್ನೆಗಳು ಏಳುತ್ತವೆ. ಈ ಪುಸ್ತಕವನ್ನು ಬ್ರಿಟಿಷ್‌ ಸರ್ಕಾರ ನಿಷೇಧಿಸಿದಾಗ ಅದನ್ನು ಹಾಲೆಂಡಿನಲ್ಲಿ ಗುಟ್ಟಾಗಿ ಮೊದಲು ಮುದ್ರಿಸಲಾಗುತ್ತದೆ. ಅದರ ಕೆಲವು ಪ್ರತಿಗಳನ್ನು ಭಾರತಕ್ಕೆ ಗುಟ್ಟಾಗಿ ತರುವ ಅಪಾಯಕಾರಿ ಸಾಹಸ ಮಾಡಿ ಜಯಗಳಿಸಿದ ವ್ಯಕ್ತಿ ಸಾವರ್ಕರ್‌ ಅವರ ʻಅಭಿನವ ಭಾರತʼ ಸಂಘಟನೆಯ ಸಕ್ರಿಯ ಸದಸ್ಯನಾಗಿದ್ದ ಸಿಕಂದರ್‌ ಹಯಾತ್‌ ಖಾನ್! (ಆ ಕಾಲದಲ್ಲಿ ಸಾವರ್ಕರ್‌ ಅವರು ಮುಸ್ಲಿಂ ದ್ವೇಷಿ ಆಗಿರಲಿಲ್ಲ. ಹಾಗಾಗಿ ಅವರ ಸಂಘಟನೆಯಲ್ಲಿ ಬಹಳಷ್ಟು ಜನ ಮುಸ್ಲಿಮರು ಇದ್ದರು).

ಇದೇ ಕಾಲಘಟ್ಟದಲ್ಲಿ ಇಟಲಿಯ ಕ್ರಾಂತಿಕಾರಿ ಚಳವಳಿಯ ನಾಯಕ ಮಝನಿಯಿಂದ ಪ್ರಭಾವಿತರಾಗುವ ಸಾವರ್ಕರ್‌ ಆತನ ಜೀವನಚರಿತ್ರೆಯನ್ನು ಮರಾಠಿಗೆ ಅನುವಾದಿಸುತ್ತಾರೆ. ೧೯೦೯ರಲ್ಲಿ ಬ್ರಿಟಿಷ್‌ ಅಧಿಕಾರಿ ಕರ್ಜನ್‌ ವ್ಯಾಲಿಯನ್ನು ಹತ್ಯೆ ಮಾಡಿದ ಮದನ್‌ ಲಾಲ್‌ ದಿಂಗ್ರಾ ಸಾವರ್ಕರ್‌ ಅವರ ಸಹಚರನಾಗಿದ್ದವನು ಮತ್ತು ಅವರಿಂದ ಪ್ರಭಾವಿತನಾದವನು. ಆತನು ಹತ್ಯೆ ಮಾಡಿದ ಗನ್‌ ಪೂರೈಸಿದ್ದು ಮತ್ತು ಆತ ನೇಣಿಗೆ ಕೊರಳು ಕೊಡುವ ಮೊದಲು ಕೋರ್ಟಿಗೆ ನೀಡಿದ ಹೇಳಿಕೆಯನ್ನು ಬರೆದುಕೊಟ್ಟವರು ಸಾವರ್ಕರ್‌ ಎಂಬಲ್ಲಿಂದ ಸಾವರ್ಕರ್‌ ಬ್ರಿಟೀಷ್‌ ಅಧಿಪತ್ಯಕ್ಕೆ ಕಣ್ಣಿಗೆ ಬೀಳುವಂತಾದರು. ಮುಂದೆ ಸುಮಾರು ನಲವತ್ತು ವರ್ಷಗಳ ನಂತರ ಯಾರ ಕೊಲೆಯ ಆರೋಪಿಯಾಗಿ ಗುರುತಿಸಲಾಯಿತೋ ಅಂತಹ ಮಹಾತ್ಮಾ ಗಾಂಧಿಯನ್ನು ಸಾವರ್ಕರ್‌ ಮೊದಲು ಭೇಟಿಯಾಗಿದ್ದು ಕೂಡ ಇಂಗ್ಲೆಂಡಿನಲ್ಲಿ ಅದೂ ಈ ಬ್ರಿಟೀಷ್‌ ಅಧಿಕಾರಿಯ ಕೊಲೆಯ ಸಂದರ್ಭದಲ್ಲಿ. ಆಗ ಅವರೊಡನೆ ನಡೆದ ಚರ್ಚೆಯಲ್ಲಿ ಭಾರತ ಸ್ವಾತಂತ್ರ್ಯಕ್ಕಾಗಿ ಅವರು ನಡೆಸುತ್ತಿರುವ ಹಿಂಸಾತ್ಮಕ ಕ್ರಾಂತಿಕಾರಿ ಚಟುವಟಿಕೆಗಳು ಮತ್ತು ಗೆರಿಲ್ಲಾ ಯುದ್ಧಗಳ ಪರಿಣಾಮಗಳ ಬಗ್ಗೆ ಕೂಡ ಸಾಕಷ್ಟು ಚರ್ಚೆಯಾಗುತ್ತದೆ.

ಇದೇ ವೇಳೆಗೆ ಸಾವರ್ಕರ್‌ ಅವರ ಸಹೋದರ ಗಣೇಶ್‌ ಸಾವರ್ಕರ್‌ ಮಹಾರಾಷ್ಟ್ರದಲ್ಲಿ ಮಾರ್ಲೆ-ಮಿಂಟೋ ಸುಧಾರಣೆ ವಿರುದ್ಧ ಸಶಸ್ತ್ರ ಬಂಡಾಯ ಸಂಘಟಿಸಿದ್ದಕ್ಕಾಗಿ ಅಂಡಮಾನಿನ ಜೀವಾವದಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಇತ್ತ ಭಾರತದಲ್ಲಿ ಈ ಘಟನೆ ನಡೆಯುವ ಸಂದರ್ಭದಲ್ಲಿಯೇ ಲಂಡನ್ನಿನಲ್ಲಿ ಸಾವರ್ಕರ್ ಬ್ರಿಟೀಷ್‌ ಅಧಿಕಾರಿಗಳ ಕಣ್ಣಿಗೆ ಬೀಳುವ ವ್ಯಕ್ತಿಯಾದರು. ಭಾರತದಲ್ಲಿ ಬ್ರಿಟೀಷ್‌ ಅಧಿಪತ್ಯವನ್ನು ಕಿತ್ತೊಗೆಯುವ ರಾಜದ್ರೋಹದ ಕೆಲಸಗಳಿಗೆ ಇವರ ಕುಮ್ಮಕ್ಕು ಇದೆ ಎಂಬುದು ಅವರು ಬ್ರಿಟೀಷ್‌ ಅಧಿಕಾರಿಗಳ ಕಣ್ಣಿಗೆ ಬೀಳಲು ಪ್ರಮುಖ ಕಾರಣವಾಯಿತು. ಬ್ರಿಟೀಷ್‌ ಅಧಿಪತ್ಯದಿಂದ ಬಂಧನವನ್ನು ತಪ್ಪಿಸಿಕೊಳ್ಳುವ ಸಲುವಾಗಿ ಅವರು ಪ್ಯಾರಿಸ್‌ ಗೆ ಹೋಗಿ ಮೇಡಂ ಕಾಮಾ ಅವರ ಮನೆಯಲ್ಲಿ ಆಶ್ರಯ ಪಡೆಯುತ್ತಾರಾದರೂ ಅಲ್ಲಿರಲು ಮನಸ್ಸಾಗದೇ ಸ್ನೇಹಿತರ ಮಾತನ್ನೂ ಅಲಕ್ಷಿಸಿ ಮತ್ತೆ ಲಂಡನ್ನಿಗೆ ವಾಪಸ್ಸಾಗುತ್ತಾರೆ. ಆಗ ೧೯೧೦ರ ಮಾರ್ಚ್‌ ೧೩ ರಂದು ಅವರನ್ನು ಮೊಟ್ಟಮೊದಲ ಬಾರಿ ಅನೇಕ ಆರೋಪಗಳನ್ನು ಹೊರಿಸಿ ಬ್ರಿಟೀಷ್‌ ಸರ್ಕಾರ ಬಂಧಿಸುತ್ತದೆ.

ಅವರನ್ನು ಬಂಧಿಸಲು ಕಾರಣವಾಗಿದ್ದ ಪ್ರಮುಖ ಆರೋಪಗಳೆಂದರೆ ಅವರು ಬ್ರಿಟೀಷ್‌ ಅಧಿಕಾರಿಗಳ ಕೊಲೆಗೆ ಸಂಚುರೂಪಿಸಿದ್ದು, ಭಾರತದಲ್ಲಿ ಬ್ರಿಟೀಷ್‌ ಆಡಳಿತ ಕಿತ್ತೊಗೆಯಲು ಪ್ರಯತ್ನಿಸುತ್ತಿರುವುದು, ದ್ವೇಷದ ಭಾಷಣ ಮಾಡುತ್ತಿರುವುದು, ಶಸ್ತ್ರಾಸ್ತ್ರಗಳ ಕಳ್ಳಸಾಗಾಣಿಕೆ ಇತ್ಯಾದಿಗಳು. ಅವರನ್ನು ಬಂಧಿಸುವ ಸಂದರ್ಭದಲ್ಲಿ ನಿಷೇದಕ್ಕೆ ಒಳಗಾದ ಅವರ ಪುಸ್ತಕಗಳೂ ಸೇರಿದಂತೆ ಅನೇಕ ʼಕ್ರಾಂತಿಕಾರಿ ಪುಸ್ತಕʼಗಳನ್ನು ಸರ್ಕಾರ ವಶಪಡಿಸಿಕೊಂಡಿತ್ತು. ಇದಲ್ಲದೆ ೨೦ ಹ್ಯಾಂಡ್‌ ಗನ್ನುಗಳನ್ನು ಭಾರತಕ್ಕೆ ಕಳ್ಳಸಾಗಾಣಿಕೆ ಮಾಡಿದ ಸಾಕ್ಷವನ್ನೂ ಅಧಿಕಾರಿಗಳು ಕಲೆಹಾಕಿದ್ದರು ಮತ್ತು ಈ ಗನ್ನುಗಳಲ್ಲಿಯೇ ಒಂದನ್ನು ಬಳಸಿ ೧೯೦೯ರಲ್ಲಿ ನಾಸಿಕ್‌ ಜಿಲ್ಲಾಧಿಕಾರಿ ಎ ಎಂ ಟಿ ಜಾಕ್ಸನ್‌ ಎಂಬುವನನ್ನು ಅನಂತ ಲಕ್ಷ್ಮಣ್‌ ಕನ್ಹೇರೆ ಎಂಬುವನು ಕೊಲೆಮಾಡಿದ್ದ. ಈ ಕೊಲೆಯ ಪಿತೂರಿಯಲ್ಲಿ ಸಾವರ್ಕರ್‌ ಭಾಗಿಯಾಗಿದ್ದರು ಎಂಬುದು ಆ ಅಧಿಕಾರಿಗಳ ವಾದವಾಗಿತ್ತು.

ಸಾವರ್ಕರ್‌ ಅವರ ಮೇಲೆ ಹೊರಿಸಲಾದ ಅಪರಾಧದ ಚಟುವಟಿಕೆಗಳು ಇಂಗ್ಲೆಂಡ್‌ ಮತ್ತು ಭಾರತ ಎರಡೂ ದೇಶಗಳಿಗೂ ಸಂಬಂಧಿಸಿದ್ದರೂ ಸರ್ಕಾರ ಅವರನ್ನು ವಿಚಾರಣೆಗೆ ಒಳಪಡಿಸಲು ಭಾರತವನ್ನೇ ಆಯ್ಕೆಮಾಡಿಕೊಂಡಿತು. ಸಾವರ್ಕರ್‌ ಅವರನ್ನು ವಿಚಾರಣೆಗಾಗಿ ಭಾರತಕ್ಕೆ ಪೋಲಿಸ್‌ ಬಂದೋಬಸ್ತಿನಲ್ಲಿ ಹಡಗಿನಲ್ಲಿ ಕಳಿಸುವ ಏರ್ಪಾಡಾಗುತ್ತದೆ. ಬರುವಾಗ ಒಂದು ಕುತೂಹಲದ ಘಟನೆಯೂ ನಡೆಯುತ್ತದೆ. ಬಂಧನದಿಂದ ತಪ್ಪಿಸಿಕೊಳ್ಳುವ ಪ್ರಯತ್ನವಾಗಿ ಅವರು ಹಡಗು ಫ್ರೆಂಚ್‌ ಬಂದರೊಂದರಲ್ಲಿ ನಿಂತಾಗ ಹಡಗಿನ ಕಿಡಕಿಯಿಂದ ಕಡಲಿಗೆ ಹಾರಿ ಈಜಿ ದಡಸೇರಿ ಅಲ್ಲಿನ ಬಂದರಿನ ಫ್ರೆಂಚ್‌ ಅಧಿಕಾರಿಗಳ ನೆರವು ಕೇಳುತ್ತಾರೆ. ಆದರೆ ಆ ಅಧಿಕಾರಿಗಳು ಸ್ಪಂದಿಸಿ ಅವರಿಗೆ ನೆರವು ನೀಡದೆ ಅವರನ್ನು ಹಿಡಿದು ಬ್ರಿಟೀಷ್‌ ಅಧಿಕಾರಿಗಳಿಗೆ ಮರಳಿ ಒಪ್ಪಿಸಿಬಿಡುತ್ತಾರೆ. ಹೀಗಾಗಿ ತಪ್ಪಿಸಿಕೊಳ್ಳುವ ಅವರ ಮೊದಲ ವೀರೋಚಿತ ಪ್ರಯತ್ನವೇ ವಿಫಲವಾಗಿಬಿಡುತ್ತದೆ!

ಅಂಡಮಾನಿನ ಜೈಲು ಮತ್ತು ಅಲ್ಲಿನೆ ಸೆರೆವಾಸಿಗಳು:

ಭಾರತದ ಬಾಂಬೆ (ಈಗಿನ ಮುಂಬೈ)ಯಲ್ಲಿ ಅವರ ವಿಚಾರಣೆ ನಡೆಯುತ್ತದೆ. ನಾಸಿಕ್‌ ಜಿಲ್ಲಾಧಿಕಾರಿ ಕೊಲೆಯ ವಿಚಾರಣೆ ನಡೆಸಿದ ನ್ಯಾಯಾಲಯ ಅವರನ್ನು ಅಪರಾಧಿ ಎಂದು ಪರಿಗಣಿಸಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು, ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಅಂಡಮಾನಿನ ಸೆಲ್ಯುಲರ್‌ ಜೈಲಿಗೆ ಕಳಿಸುತ್ತದೆ. ಇಲ್ಲಿಯವರೆಗೆ ಹೆಚ್ಚುಕಡಿಮೆ ಭಾರತದ ಇತರೆ ಸ್ವಾತಂತ್ರ್ಯ ಹೋರಾಟಗಾರರ ಬದುಕಿನಂತೆಯೇ ಇದ್ದ ಸಾವರ್ಕರ್‌ ಅವರ ಬದುಕು ಇಲ್ಲಿಂದ ಮುಂದೆ ಚಿತ್ರವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತ್ತದೆ ಮತ್ತು ಸಾರ್ವಜನಿಕ ಭಿನ್ನಾಭಿಪ್ರಾಯಗಳ ಮಿತಿಮೀರಿದ ಚರ್ಚೆಗೆ ಆಹಾರವಾಗುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ತುಸು ವಿವರವಾಗಿ ನೋಡೋಣ.


ಅಂಡಮಾನಿನ ಜೈಲಿನ ಬಗ್ಗೆ ಹೇಳುವುದಾದರೆ ಅದು ಒಟ್ಟು ಏಳು ವಿಭಾಗಗಳಲ್ಲಿ ಇದ್ದ ಒಟ್ಟು ಏಳುನೂರು ಗೂಡುಗಳು (ಸೆಲ್)‌ ಇದ್ದ ಜೈಲು. ಅಲ್ಲಿ ದೊಡ್ಡ ಹಜಾರ ಅಥವಾ ಕೋಣೆಗಳಿರಲಿಲ್ಲ. ಯಾವಾಗಲೂ ಖೈದಿಗಳು ಈ ಗೂಡುಗಳಲ್ಲಿಯೇ ನರಕ ಸದೃಶ್ಯವಾದ ಜೀವನವನ್ನು ಸಾಗಿಸಬೇಕಾಗಿತ್ತು. ಈ ಜೈಲಿನಲ್ಲಿ ಏಕಕಾಲಕ್ಕೆ ಒಟ್ಟು ೭೦೦ ಕೈದಿಗಳನ್ನು ಇರಿಸಬಹುದಾಗಿರುತ್ತದೆ.  ಇಲ್ಲಿಗೆ ಬ್ರಿಟೀಷರು ಕಳಿಸುತ್ತಿದ್ದ ಖೈದಿಗಳಲ್ಲಿ ರಾಜಕೀಯ ಕೈದಿಗಳ ಜೊತೆ ಇತರೆ ಅಪರಾಧ ಮಾಡಿದವರೂ ಇರುತ್ತಿದ್ದರು. ಇವರಲ್ಲಿ ಮಹಿಳೆಯರೂ ಇದ್ದರು. ಕೆಲವು ದಾಖಲೆಗಳ ಪ್ರಕಾರ ೧೮೫೭ರ ದಂಗೆಯಲ್ಲಿ ಪಾಲ್ಗೊಂಡ ಕೈದಿಗಳ ಒಂದು ತಂಡವನ್ನು ಬ್ರಿಟೀಷರು ಮೊದಲಸಲ ಇಲ್ಲಿಗೆ ತರುತ್ತಾರೆ. ಇಲ್ಲಿ ಗಮನಿಸಬೇಕಾದ ಮುಖ್ಯಸಂಗತಿ ಏನೆಂದರೆ ಬ್ರಿಟೀಷರು ಕೇವಲ ಸಾವರ್ಕರ್‌ ಅವರನ್ನು ಮಾತ್ರ ಇಲ್ಲಿಗೆ ತರಲಿಲ್ಲ. ಅದಕ್ಕೂ ಮೊದಲೇ ಅನೇಕರನ್ನು ಅಲ್ಲಿ ಇರಿಸಿದ್ದರು. ಇವರಲ್ಲಿ ಪ್ರಸಿದ್ಧ ನ್ಯಾಯಶಾಸ್ತ್ರ ಪಂಡಿತರೂ ಲೇಖಕರೂ ಆಗಿದ್ದ ಮತ್ತು ಬ್ರಿಟೀಷ್‌ ಆಳ್ವಿಕೆಯ ಕಾಲದಲ್ಲಿ ದೆಹಲಿಯಲ್ಲಿ ನ್ಯಾಯಾಧೀಶರಾಗಿದ್ದ ಮೌಲ್ವಿ ಫಜಲ್‌ ಎ ಹಕ್‌ ಖೈರಾಬಾದಿ, ಮೌಲ್ವಿ ಲಿಯಾಕತ್‌ ಅಲಹಾಬಾದಿ, ಮೊಹಮದ್‌ ಜಾಫರ್‌ ಥಾನೆಸ್ರಿ ಮುಂತಾದ ಮುಸ್ಲಿಂ ಸಮುದಾಯದ ಮಹಾನ್‌ ನಾಯಕರೂ ಇದ್ದರು. ಇದರಲ್ಲಿ ಮೊದಲಿಬ್ಬರು ಅಲ್ಲಿಯೇ ಮರಣಹೊಂದಿದರೆ ಕೊನೆಯವರು ೧೮೮೩ ರಲ್ಲಿ ಬಿಡುಗಡೆಯಾದರು. ಬಹುಭಾಷಾ ಪ್ರವೀಣರಾಗಿದ್ದ ಥಾನೆಸ್ರಿ ಅವರು ತಮ್ಮ ಅಲ್ಲಿನ ಅನುಭವವನ್ನು ʼತ್ವರೀಕ್-ಎ-ಅಜೀಬ್‌ ಯಾನಿ ಕಾಲಾ ಪಾನಿʼ (ಪರಕೀಯ ನಾಡಿನ ಚರಿತ್ರೆ: ಕರಿನೀರು) ಎಂಬ ಪ್ರಮುಖ ಕೃತಿ ಬರೆದು ವಿವರಿಸಿದರು.

ಆ ನಂತರ ಅಂಡಮಾನಿಗೆ ಕಳಿಸಲ್ಪಟ್ಟ ದೊಡ್ಡ ಸಂಖ್ಯೆಯ ಕೈದಿಗಳೆಂದರೆ ವಹಾಬಿ ದಂಗೆಯ ನೇತೃತ್ವ ವಹಿಸಿದ್ದ ಮುಸ್ಲಿಂ ಕ್ರಾಂತಿಕಾರಿಗಳು. ಇವರಲ್ಲಿ ಅನೇಕರು ೧೮೫೭ರ ದಂಗೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಈ ಕೈದಿಗಳ ಪೈಕಿ ಒಬ್ಬರಾಗಿದ್ದ ಶೇರ್‌ ಅಲಿ ಅಫ್ರಿದಿ ಎಂಬುವರು ಈ ಸೆಲ್ಯೂಲರ್‌ ಜೈಲಿಗೆ ಆಗ ಭೇಟಿ ನೀಡಿದ್ದ ಆಗಿನ ಭಾರತದ ವೈಸರಾಯ್‌ ಲಾರ್ಡ್‌ ಮೇಯೋರವರ ಹತ್ಯೆಯನ್ನೇ ಮಾಡಿಬಿಟ್ಟರು! ಅಂದರೆ ಸಾವರ್ಕರ್‌ ಅವರನ್ನು ಅಲ್ಲಿಗೆ ಕಳಿಸುವ ವೇಳೆಗಾಗಲೇ ಅನೇಕ ಕ್ರಾಂತಿಕಾರಿಗಳು ವಿದ್ವಾಂಸರು ಇಂಥವರನ್ನು ಅಲ್ಲಿ ಶಿಕ್ಷೆಗೆ ಒಳಪಡಿಸಿದ್ದರಿಂದ ಅಂಡಮಾನಿನ ಸೆಲ್ಯೂಲರ್‌ ಜೈಲು ಆಗಲೇ ಸಾಕಷ್ಟು ಹೆಸರು ಪಡೆದುಕೊಂಡಿತ್ತು.

ನರಕಸದೃಶ್ಯ ಹಿಂಸೆಯೂ ಸಾವರ್ಕರ್‌ ಕ್ಷಮಾಪಣಾ ಪತ್ರಗಳೂ…

ಸಾವರ್ಕರ್‌ ಅವರಿಗೆ ಎರಡು ವಿಶೇಷ ನ್ಯಾಯಾಲಯಗಳು ಅನುಕ್ರಮವಾಗಿ ೧೯೧೦ರ ಡಿಸೆಂಬರ್‌ ೩ ಮತ್ತು ೧೯೧೧ರ ಜನವರಿ ೩೦ ರ ದಿನಗಳಂದು ತೀರ್ಪುನೀಡಿ ಎರಡು ಜೀವಾವಧಿ ಶಿಕ್ಷೆಯನ್ನು ವಿಧಿಸಿದವು. ಈ ಎರಡೂ ಜೀವಾವಧಿ ಶಿಕ್ಷೆಗಳ ಒಟ್ಟು ಅವಧಿ ೫೦ ವರ್ಷವಾಗಿತ್ತು. ಅದನ್ನು ಕಳೆಯಲು ಅವರನ್ನು ಅಂಡಮಾನಿನ ಈ ಜೈಲಿಗೆ ೧೯೧೧ರ ಜುಲೈ ೪ ರಂದು ಕಳಿಸಲಾಗುತ್ತದೆ. ಆದರೆ ಅಲ್ಲಿಂದ ಕೇವಲ ೧೦ ವರ್ಷಗಳ ಒಳಗಾಗಿಯೇ ಅವರನ್ನು ಭಾರತದ ಮುಖ್ಯಭಾಗದಲ್ಲಿರುವ ಮಹಾರಾಷ್ಟ್ರದ ಯರವಾಡ ಜೈಲಿಗೆ ಸ್ಥಳಾಂತರಿಸಲಾಗುತ್ತದೆ. ಮತ್ತು ಅಂತಿಮವಾಗಿ ೧೯೨೪ ರ ಜನವರಿ ೬ ರಂದು ಅವರನ್ನು ಕೆಲವು ಷರತ್ತುಗಳೊಂದಿಗೆ ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ. ಮುಂದೆ ೧೯೩೪ ರಲ್ಲಿ ಹಿಂದೂ ಮಹಾಸಭಾದ ವಾಮನ್‌ ರಾವ್‌ ಚವ್ಹಾಣ್‌ ಎಂಬುವನು ಬ್ರಿಟೀಷ್‌ ಮಿಲಿಟರಿ ಅಧಿಕಾರಿ ಸ್ವೀಟ್‌ ಲ್ಯಾಂಡ್‌ ಎಂಬುವನ ಮೇಲೆ ಗುಂಡುಹಾರಿಸಿದ ಪ್ರಕರಣದಲ್ಲಿ ಇವರನ್ನು ಬಂಧಿಸಿ ಎರಡುವಾರ ಜೈಲಿನಲ್ಲಿ ಇಡಲಾಗಿತ್ತಾದರೂ ಆ ಪ್ರಕರಣಕ್ಕೂ ನನಗೂ ಏನೂ ಸಂಬಂಧವಿಲ್ಲ ಎಂಬ ಹೇಳಿಕೆ ನೀಡಿ ಇನ್ನುಮುಂದೆ ಯಾವುದೇ ರಾಜಕೀಯ ಚಳವಳಿಗಳಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಮಚ್ಚಳಿಕೆ ಬರೆದುಕೊಟ್ಟು ಇವರು ಹೊರಬರುತ್ತಾರೆ.

ಹೀಗೆ ತಮಗೆ ವಿಧಿಸಲಾಗಿದ್ದ ಒಟ್ಟು ಐವತ್ತು ವರ್ಷಗಳ ಜೈಲುಶಿಕ್ಷೆಯಲ್ಲಿ ಸಾವರ್ಕರ್‌ ಜೈಲಿನಲ್ಲಿ ಕಳೆದದ್ದು ಒಟ್ಟು ಹದಿಮೂರು ವರ್ಷ ಮಾತ್ರ! ಅದರಲ್ಲಿಯೂ ಅಂಡಮಾನಿನ ಕರಿನೀರಿನ ಶಿಕ್ಷೆ ಅನುಭವಿಸಿದ್ದು ಹತ್ತು ವರ್ಷಗಳು ಮಾತ್ರ! ಉಳಿದ ಮೂವತ್ತೇಳು ವರ್ಷಗಳ ರಿಯಾಯತಿಯನ್ನು ಅವರು ಬ್ರಿಟೀಷ್‌ ಸರ್ಕಾರದಿಂದ ಪಡೆದರು. ಅಂದರೆ ಒಟ್ಟು ಶಿಕ್ಷೆಯಲ್ಲಿ ಮುಕ್ಕಾಲು ಪಾಲು ರಿಯಾಯತಿ ಪಡೆದು ಕಾಲುಭಾಗ ಮಾತ್ರ ಶಿಕ್ಷೆ ಅನುಭವಿಸಿದರು. ಭಾರತದ ಯಾವ ಸ್ವಾತಂತ್ರ್ಯ ಹೋರಾಟಗಾರನಿಗೂ ಇಷ್ಟೊಂದು ದೊಡ್ಡ ಪ್ರಮಾಣದ ರಿಯಾಯತಿಯನ್ನು ಬ್ರಿಟೀಷ್‌ ಸರ್ಕಾರ ನೀಡಿರಲಿಲ್ಲ ಎಂಬುದನ್ನು ನಾವು ಗಮನಿಸಬೇಕು.

ಇದಕ್ಕೆ ಕಾರಣವೇನು ಎಂಬುದನ್ನು ನೋಡೋಣ. ಅಂಡಮಾನಿನ ಸೆಲ್ಯುಲರ್‌ ಜೈಲು ಶಿಕ್ಷೆ ಒಂದು ಉಗ್ರಶಿಕ್ಷೆಯಾಗಿದ್ದು ಅಲ್ಲಿನ ಶಿಕ್ಷೆ ಭಯಾನಕವಾಗಿತ್ತು ಎಂಬುದು ಸತ್ಯ. ಅದರ ವಿವರಗಳನ್ನು ಅಲ್ಲಿ ಶಿಕ್ಷೆ ಅನುಭವಿಸಿ ಬಂದವರಲ್ಲಿ ಕೆಲವರು ಅನುಭವ ಕಥನಗಳಾಗಿ ಬರೆದಿದ್ದಾರೆ. ಅನೇಕ ಸಂಶೋಧಕರೂ ಈ ಬಗ್ಗೆ ಸಂಶೋಧನೆ ಮಾಡಿ ಸತ್ಯಾಂಶಗಳನ್ನು ದಾಖಲಿಸಿದ್ದಾರೆ. ೧೮೫೭ ರ ಕ್ರಾಂತಿಯಲ್ಲಿ ಬ್ರಿಟೀಷ್‌ ಅಧಿಪತ್ಯಕ್ಕೆ ತಲೆಬಾಗದ ಅನೇಕ ಕ್ರಾಂತಿಕಾರಿಗಳು ಈ ಜೈಲಿನಲ್ಲಿಯೇ ಹುತಾತ್ಮರಾದರು. ಅಂಥವರನೇಕರ ಹೆಸರು ಇಂದು ಯಾರಿಗೂ ಗೊತ್ತಿಲ್ಲದಂತೆ ಚರಿತ್ರೆಯಲ್ಲಿ ಹುದುಗಿಹೋಗಿವೆ. ಇಲ್ಲಿನ ಕಠಿಣ ಶಿಕ್ಷೆಯನ್ನು ಅನುಭವಿಸಿ ಹೊರಬಂದು ೧೯೭೦ರ ದಶಕದಲ್ಲಿ ಮರಣಹೊಂದಿದ ತ್ರೈಲೋಕ್ಯನಾಥ್‌ ಚಕ್ರವರ್ತಿ (ಮಹಾರಾಜ್‌ ಎಂದು ಕರೆಯಲ್ಪಡುತ್ತಿದ್ದವರು) ʼ ಮೂವತ್ತು ವರ್ಷಗಳ ಜೈಲುವಾಸʼ ಎಂಬ ಪುಸ್ತಕವನ್ನು ಬಂಗಾಲಿಯಲ್ಲಿ ಬರೆದು ಅಲ್ಲಿನ ಜೀವನ ವಿವರವನ್ನು ನೀಡಿದ್ದಾರೆ. ಅವರ ಪ್ರಕಾರ ಪ್ರತಿತಿಂಗಳು ಸರಾಸರಿ ಮೂವರು ಕೈದಿಗಳು ಹಿಂಸೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು! ಅಸ್ತಮಾ ರೋಗಿಯಾಗಿದ್ದ ಇವರಿಗೆ ಸ್ವಲ್ಪವೂ ಕರುಣೆ ತೋರದೆ, ʻಇದು ಜೈಲು ನಿನಗೆ ಕುಡಿಯಲು ಹಾಲು ಕೊಡ್ಬೇಕಾʼ ಎಂದು ಜೈಲು ಅಧಿಕಾರಿಗಳು ಕ್ರೂರತೆ ಪ್ರದರ್ಶಿಸುತ್ತಿದ್ದರಂತೆ. ಊಟಮಾಡುವಾಗ ಒಬ್ಬ ಕೈದಿಯ ಹತ್ತಿರ ಇನ್ನೊಬ್ಬ ಕೈದಿ ಜೊತೆಗೂಡದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸುತ್ತಿದ್ದರಂತೆ. ಸಣ್ಣಪುಟ್ಟ ಕಾರಣಗಳಿಗೂ ಹೊಡೆಯುವುದು ಬೈಯುವುದು ತೀರಾ ಸಾಮಾನ್ಯ ಸಂಗತಿಯಾಗಿತ್ತಂತೆ. ʼಸೂಳೆಮಗʼ ʼಬೋಳಿಮಗʼ ಇಂತಹ ಬೈಗುಳಗಳಂತೂ ತೀರಾ ಸಹಜ ಮತ್ತು ಸಾಮಾನ್ಯವಾಗಿದ್ದವಂತೆ.

ಇಲ್ಲಿನ ಚಿತ್ರಹಿಂಸೆ, ಹೊಟ್ಟೆ ತುಂಬಾ ಆಹಾರ ನೀಡದೆ ಒಂದು ಗುಟುಕು ಗಂಜಿ ನೀಡುವುದು, ಮೈಮುರಿಯುವ ಕೆಲಸ, ಅನಾರೋಗ್ಯದ ನಿರ್ಲಕ್ಷ ಇತ್ಯಾದಿಗಳಿಂದ ಅನೇಕ ಕಟ್ಟುಮಸ್ತಾದ ದೇಹಧಾಡ್ಯ ಹೊಂದಿದವರು ಅಕಾಲವೃದ್ಧರಾಗುವುದು ಸಾವಿಗೀಡಾಗುವುದು ನಡೆಯುತ್ತದೆ. ಈ ಚಿತ್ರಹಿಂಸೆ ತಾಳಿಕೊಳ್ಳಲಾಗದೆ ಕೆಲವರು ಜೀವಕಳೆದುಕೊಂಡರೆ ಕೆಲವರು ಇಂತಹ ಚಿತ್ರಹಿಂಸೆಯ ಮಧ್ಯೆಯೂ ತಾವು ನಂಬಿದ ತತ್ವಗಳಿಗಾಗಿ ಜೀವಹಿಡಿದುಕೊಂಡು ನರಕಯಾತನೆಯನ್ನು ಅನುಭವಿಸುತ್ತಾರೆ. ಪಂಡಿತ್‌ ರಾಮರಕ್ಷ ಎಂಬ ಒಬ್ಬ ಕೈದಿ ಇಲ್ಲಿಗೆ ಬಂದಾಗ ಅವನ ಮೈಮೇಲೆ ಜನಿವಾರ ಇರುತ್ತದೆ. ಜೈಲು ನಿಯಮದ ಪ್ರಕಾರ ಅದನ್ನು ಅವನು ತೆಗೆಯಬೇಕಾಗುತ್ತದೆ. ಆದರೆ ಅದನ್ನು ತೆಗೆಯಲು ಅವನು ಒಪ್ಪುವುದಿಲ್ಲ. ಅಧಿಕಾರಿಗಳು ಬಲತ್ಕಾರದಿಂದ ಅದನ್ನು ಕಿತ್ತುಹಾಕಿದ್ದರಿಂದ ಅವನು ಊಟಬಿಟ್ಟು ಅದನ್ನು ಮರಳಿಕೊಡಲು ಸತ್ಯಾಗ್ರಹ ಮಾಡುತ್ತಾನೆ. ಕೊನೆಗೂ ಅಧಿಕಾರಿಗಳು ಅದನ್ನು ಮರಳಿಸಲಿಲ್ಲ. ರಾಮರಕ್ಷ ಸತತ ಮೂರು ತಿಂಗಳು ಕಾಲ ಹೀಗೆ ಹೋರಾಡಿ ಜನಿವಾರಕ್ಕಾಗಿ ತನ್ನ ಪ್ರಾಣವನ್ನೆ ಬಿಡುತ್ತಾರೆ!

ಇನ್ನೊಬ್ಬ ಕೈದಿ ಉಲ್ಲಾಸ್ಕರ್‌ ದತ್ತ ಎಂಬುವರನ್ನು ಇನ್ನಿಬ್ಬರು ಕೈದಿಗಳೊಂದಿಗೆ ಎಣ್ಣೆ ತೆಗೆಯುವ ಗಾಣಕ್ಕೆ ಎತ್ತನ್ನು ಕಟ್ಟುವಂತೆ ಕಟ್ಟಿ ದಿನಕ್ಕೆ ೮೦ ಪೌಂಡ್‌ ಎಣ್ಣೆ ತೆಗೆಯುವಂತೆ ಬಲಾತ್ಕಾರ ಮಾಡುತ್ತಾರೆ. (ದಿನಕ್ಕೆ ೧೫ ಪೌಂಡ್‌ ಎಣ್ಣೆ ತೆಗೆಯುವುದು ಎತ್ತುಗಳಿಗೂ ಕಷ್ಟ!) ಅಲ್ಲಿನ ಅನ್ಯಾಯವನ್ನು ಪ್ರತಿಭಟಿಸಿ ಉಪವಾಸ ಮಾಡುವುದು, ಅಂಥವರು ತಮ್ಮ ತತ್ವಸಿದ್ದಾಂತಕ್ಕಾಗಿ ಸಾಯುವುದು ಮತ್ತು ಸತ್ತವರನ್ನು ಸಮುದ್ರಕ್ಕೆ ಎಸೆಯುವುದು ಅಲ್ಲಿನ ತೀರಾ ಸಹಜ ನಡವಳಿಕೆಗಳಾಗಿರುತ್ತವೆ. ಇಂತಹ ಘೋರಶಿಕ್ಷೆಗಳು ಸಾವರ್ಕರ್‌ ಅವರು ತಮ್ಮ ಆಲೋಚನೆಯನ್ನು ಬದಲಿಸಿಕೊಳ್ಳುವಂತೆ ಮಾಡುತ್ತವೆ. ಅವರಿಗೆ ಅಂತಹ ಶಿಕ್ಷೆಗೆ ಎದುರಾಗಲು ಆಗಲಿಲ್ಲ; ಸಾಯಲೂ ಮನಸ್ಸು ಬರಲಿಲ್ಲ. ಹಾಗಾಗಿ ಅವರ ಹತ್ತಿರ ಉಳಿದದ್ದು ಒಂದೇ ಆಯ್ಕೆ; ಅದು ಬ್ರಿಟೀಷ್‌ ಸರ್ಕಾರಕ್ಕೆ ಕ್ಷಮಾಪಣಾ ಪತ್ರ ಬರೆದು ಕನಿಕರ ತೋರಿಸಲು ಕೋರುವುದು! ಸಾವರ್ಕರ್‌ ಇದನ್ನೇ ಆಯ್ದುಕೊಳ್ಳುತ್ತಾರೆ. ಒಟ್ಟು ಅವರು ಬ್ರಿಟೀಷ್‌ ಸರ್ಕಾರಕ್ಕೆ ಬರೆದದ್ದು ಒಂದಲ್ಲ ಎರಡಲ್ಲ ಐದು ಕ್ಷಮಾಪಣಾ ಪತ್ರಗಳು!

ಅವರು ಈ ಪತ್ರಗಳನ್ನು ಬರೆದದ್ದನ್ನು ಸಮರ್ಥಿಸಿಕೊಂಡ ಸಂಘ ಪರಿವಾರದ ಮುಖವಾಣಿ ʻಆರ್ಗನೈಸರ್‌ʼ ಅದನ್ನು ಸಮರ್ಥಿಸಿದ್ದು ಹೀಗೆ, “ಅವರು ಒಬ್ಬ ಸಮರ್ಥ ತಂತ್ರಗಾರ. ವಸಾಹತುಶಾಹಿಯನ್ನು ಹಿಮ್ಮೆಟ್ಟಿಸಲು ದೇಶವು ಅತ್ಯುತ್ರಗಾವಿ ಹೋರಾಡುತ್ತಿರುವ?ಾಗ ಜೈಲಿನಲ್ಲಿ ಟ್ರಿಟೀಷರಿಂದ ಚಿತ್ರಹಿಂಸೆಗೆ ಒಳಗಾಗಿ ತಾನು ತನ್ನ ಬದುಕಿನ ಬಹುಮುಖ್ಯ ಸಮಯವನ್ನು ವ್ಯರ್ಥಮಾಡಿಕೊಳ್ಳುತ್ತಿದ್ದೇನೆ ಎಂದು ಭಾವಿಸಿದರು.. ದರಿದ್ರ ಜೈಲಿನಿಂದ ಹೊರಬಂದು ಸಕ್ರಿಯ ರಾಜಕೀಯ ಮತ್ತು ಸ್ವಾತಂತ್ರ್ಯ ಚಳವಳಿಗೆ ಹಿಂದಿರುಗುವ ಸಲುವಾಗಿ ಅವರು ಈ ಪತ್ರಗಳನ್ನು ಬರೆದದ್ದು ಸಮರ್ಥನೀಯವೇ ಸರಿ.”  ಆದರೆ ಅವರ ಕ್ಷಮಾಪಣೆ ಪತ್ರಗಳನ್ನು ಇಲ್ಲಿ ಸಮರ್ಥನೆ ಮಾಡಿಕೊಂಡಂತೆ ಮುಂದೆ ಏನೂ ಆಗಲಿಲ್ಲ. ಶತ್ರುವಿನ ಮುಂದೆ ಸೋಲೊಪ್ಪಿದಂತೆ ಅಥವಾ ಶರಣಾದಂತೆ ನಟಿಸಿ ಮುಂದೆ ಸಮಯ ಸಿಕ್ಕಾಗ ಹೊಂಚುಹಾಕಿ ಮತ್ತೆ ಅವರ ಮೇಲೆ ಎರಗುವುದು ಒಂದು ಯುದ್ಧತಂತ್ರವೆಂಬುದು ಸತ್ಯ. ಆದರೆ ಅಂತಹ ಯಾವ ಕೆಲಸವನ್ನೂ ಮುಂದೆ  ಸಾವರ್ಕರ್ ಮಾಡಲಿಲ್ಲ. ತಾವು ಏನನ್ನು ಬರೆದುಕೊಟ್ಟಿದ್ದರೋ ಅದರಂತೆ ಬ್ರಿಟೀಷ್‌ ಸರ್ಕಾರಕ್ಕೆ ವಿಧೇಯರಾಗಿ ಸಾಧ್ಯವಿದ್ದಷ್ಟೂ ಅವರಿಗೆ ಸಹಾಯ ಮಾಡುತ್ತಾ ಬದುಕಿದರು!

ಹಾಗೆ ನೋಡಿದರೆ ಕ್ಷಮಾಪಣೆ ಪತ್ರವನ್ನು ಬರೆದವರು ಕೇವಲ ಸಾವರ್ಕರ್‌ ಮಾತ್ರವಲ್ಲ; ಇನ್ನೂ ಹಲವಾರು ಜನ ಬರೆದಿದ್ದರು. ಆದರೆ ಬ್ರಿಟೀಷ್‌ ಸರ್ಕಾರ ವಿಧಿಸಿದ ಷರತ್ತುಗಳು ಭಾರತ ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕುವ ಕ್ರಮವಾಗಿವೆ ಎಂದು ಅನ್ನಿಸಿ ಅವರು ಅವುಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದರು. ಆದರೆ ಸಾವರ್ಕರ್‌ ಅವರಿಗೆ ತಮ್ಮ ವೈಯಕ್ತಿಕ ಸ್ವಾತಂತ್ರ್ಯವು ದೇಶದ ಸ್ವಾತಂತ್ರ್ಯಕ್ಕಿಂತ ದೊಡ್ಡದು ಎನ್ನಿಸಿಯೋ ಏನೋ ಬ್ರಿಟೀಷ್‌ ಸರ್ಕಾರದ ಎಲ್ಲ ಷರತ್ತುಗಳಳನ್ನು ಸಂತೋಷದಿಂದಲೇ ಒಪ್ಪಿಕೊಂಡು ಅವರು ಬಿಡುಗಡೆಹೊಂದಿದರು.

ಬಿಡುಗಡೆಯ ನಂತರದ ಸಾವರ್ಕರ್‌ ಬದುಕು

ಸಾವರ್ಕರ್‌ ಅವರ ತಂದೆ ಅಂಚೆ ಇಲಾಖೆಯಲ್ಲಿ ಸಣ್ಣ ಕೆಲಸದಲ್ಲಿದ್ದು ನಿವೃತ್ತರಾಗಿ ಇಂದಿನ ಮಹಾರಾಷ್ಟ್ರದ ರತ್ನಗಿರಿಯಲ್ಲಿ ನೆಲೆಸಿದ್ದರು. ಬಿಡುಗಡೆಯ ನಂತರ ಸಾವರ್ಕರ್‌ ಕೂಡ ಇಲ್ಲಿಯೇ ನೆಲೆಯಾದರು. ಇಲ್ಲಿಗೆ ಅವರ ಸ್ವಾತಂತ್ರ್ಯ ಹೋರಾಟದ ಕತೆ ಮುಗಿಯುತ್ತದೆ. ಇದೇನೂ ತೀರಾ ಅವರನ್ನು ನಿಂದಿಸಬೇಕಾದ ಸಂಗತಿಯಲ್ಲ. ಸ್ವಾತಂತ್ರ್ಯ ಹೋರಾಟವವನ್ನು ಅವರು ಮಧ್ಯದಲ್ಲಿ ನಿಲ್ಲಿಸಿದ್ದು ಸರಿಯಲ್ಲ ಎಂದು ನಮಗೆ ಅನ್ನಿಸಿದರೂ ಅದು ದೊಡ್ಡ ಅಪರಾಧವೇನಲ್ಲ. ಅದಕ್ಕಾಗಿಯೇ ನಾವು ಅವರನ್ನು ಹಂಗಿಸಬೇಕಾಗಿಲ್ಲ. ಹಾಗೆ ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಚಳವಳಿಗೆ ವಿಮುಖರಾದವರು ಅವರೊಬ್ಬರೇ ಆಗಿರಲಿಲ್ಲ. ಅರವಿಂದ ಘೋಷ್‌ ಅವರೂ ಕೂಡ ಚಳವಳಿಗೆ ವಿಮುಖರಾಗಿ ಪಾಂಡಿಚೇರಿಯಲ್ಲಿ ಆಶ್ರಮ ಕಟ್ಟಿಕೊಂಡು ಆಧ್ಯಾತ್ಮಕ ಸಾಧನೆಗೆ ತೊಡಗಿದ್ದರು. ಆದರೆ ಅರವಿಂದ ಘೋಷ್‌ ಅವರಿಗೆ ಇಲ್ಲದ ಟೀಕೆ ವಿವಾದಗಳು ಸಾವರ್ಕರ್‌ ಅವರನ್ನು ಸುತ್ತಿಕೊಂಡವು. ಇದಕ್ಕೆ ಕಾರಣವೇನು?

ಸ್ವಾತಂತ್ರ್ಯ ಚಳವಳಿಯಿಂದ ವಿಮುಖರಾದರೂ ಅರವಿಂದರ ಹಾಗೆ ಸಾವರ್ಕರ್‌ ಅವರು ಕೂಡ ಅರವಿಂದ ಘೋಷ್‌ ಅವರಂತೆ ಆಧ್ಯಾತ್ತ್ಮಿಕ ಸಾಧನೆಯಲ್ಲಿಯೋ ಅಥವಾ ತಮ್ಮ ವೈಯಕ್ತಿಕ ಬದುಕಿನಲ್ಲಿಯೇ ಲೀನವಾಗಿದ್ದರೆ ಬಹುಶಃ ಅವರು ಇಷ್ಟೊಂದು ಟೀಕೆಗೆ ಒಳಗಾಗುತ್ತಿರಲಿಲ್ಲ. ಆದರೆ ಅವರು ಹಾಗೆ ಮಾಡಲಿಲ್ಲ. ಬದಲಾಗಿ ಯಾವ ಬ್ರಿಟೀಷರ ವಿರುದ್ಧ ಅವರು ತಮ್ಮ ಆರಂಭಿಕ ಜೀವನದಲ್ಲಿ ಪ್ರಾಮಾಣಿಕವಾಗಿ ಹೋರಾಡಿದ್ದರೋ ಅದೇ ಬ್ರಿಟೀಷರ ಜೊತೆಗೆ ತಮ್ಮ ಜೀವನದ ಉತ್ತರ ಕಾಲಘಟ್ಟದಲ್ಲಿ ಸೇರಿಕೊಂಡು ನಮ್ಮ ಸ್ವಾತಂತ್ರ್ಯ ಚಳವಳಿಗೆ ದ್ರೋಹ ಬಗೆದದ್ದು ಅಕ್ಷಮ್ಯ ಅಪರಾಧವಾಯಿತು. ಸ್ವಾತಂತ್ರ್ಯ ಚಳವಳಿಯು ಹಿಂದೂ ಮುಸ್ಲಿಮ್‌ ಐಕ್ಯತೆಯಿಂದಾಗಿ ಗಟ್ಟಿಗೊಳ್ಳುತ್ತಾ ಹೋದಂತೆ ಬ್ರಿಟೀಷರಿಗೆ ಅದನ್ನು ಬಗ್ಗುಬಡಿಯುವುದು ಕಷ್ಟವಾಗತೊಡಗಿತು. ಅದಕ್ಕೆ ಅವರು ಈ ಎರಡು ಬಲಾಢ್ಯ ಕೋಮುಗಳ ಐಕ್ಯತೆಯನ್ನು ಒಡೆಯಲು ಹವಣಿಸುತ್ತಿದ್ದರು. ಅದೇ ಹೊತ್ತಿಗೆ ಅಸ್ತ್ರವಾಗಿ ಅವರಿಗೆ ಸಾವರ್ಕರ್‌ ಸಿಕ್ಕರು. ಯಾವಾಗ ಇವರನ್ನು ಹಿಂದೂಗಳ ನಾಯಕರನ್ನಾಗಿ ರೂಪಿಸಿ ಮುಸ್ಲಿಮರ ವಿರುದ್ಧ ಹರಿಹಾಯಲು ಬಿಡಬಹುದು ಎನ್ನಿಸಿತೋ ಆ ಕ್ಷಣ ಬ್ರಿಟೀಷರು ಇವರನ್ನು ಜೈಲಿನಿಂದ ಬಿಡುಗಡೆಮಾಡಿಬಿಟ್ಟರು!

ಜೈಲಿನಿಂದ ಬಿಡುಗಡೆಯಾದ ಮೇಲೆ ಸಾವರ್ಕರ್‌ ಹಿಂದುತ್ವದ ಪ್ರತಿಪಾದಕರಾಗಿ ಬ್ರಿಟೀಷರಿಗೆ ಬರೆದುಕೊಟ್ಟ ಕ್ಷಮಾಪಣಾ ಪತ್ರದಲ್ಲಿ ತಿಳಿಸಿದಂತೆ ಅವರಿಗೆ ಅನುಕೂಲಕರವಾದ ಚಟುವಟಿಕೆಗಳನ್ನು ಮಾಡುವುದರಲ್ಲಿ ನಿರತರಾದರು. ೧೯೪೨ರ ಭಾರತಬಿಟ್ಟು ತೊಲಗಿ ಚಳವಳಿ ಕಾಲಘಟ್ಟದಲ್ಲಿ ಗಾಂಧೀಜಿಯವರ ನೇತೃತ್ವದಲ್ಲಿ ಇಡೀ ದೇಶ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಕುದಿಯುತ್ತಿದ್ದಾಗ, ಅತ್ತ ಸುಭಾಶ್ಚಂದ್ರದ ಭೋಸ್‌ ಯಾವುದ್ಯಾವುದೋ ದೇಶದಲ್ಲಿ ಸುತ್ತಾಡಿ ಬ್ರಿಟೀಷರ ವಿರುದ್ಧ ಸಮರ ಸಾರಲು ಸೈನ್ಯವನ್ನು ಕಟ್ಟುತ್ತಿದ್ದಾಗ ಇಲ್ಲಿ ಈ ಸಾವರ್ಕರ್‌ ತಮ್ಮ ಸಂಘಟನೆಯ ಮೂಲಕ ಅನೇಕ ಕಡೆ ಭಾಷಣಗಳನ್ನು ಮಾಡಿ ಬ್ರಿಟೀಷ್‌ ಸೈನ್ಯವನ್ನು ಸೇರಿಕೊಳ್ಳಲು ಭಾರತೀಯ ತರುಣರನ್ನು ಪ್ರಚೋದಿಸಿ ಅವರಲ್ಲಿ ಹುಮ್ಮಸ್ಸು ತುಂಬುತ್ತಿದ್ದರು! ಇದನ್ನು ದೇಶದ್ರೋಹ ಎನ್ನದೇ ಮತ್ತೇನನ್ನಬೇಕು?

ದೇಶದ ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಹೀಗೆ ನಮ್ಮ ಯುವಕರು ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕದೆ ಬ್ರಿಟೀಷ್‌ ಸೈನ್ಯವನ್ನು ಸೇರಲು ಪ್ರಚೋದಿಸುತ್ತಿದ್ದುದ್ದಲ್ಲದೇ ಅವರು ಮಾಡಿದ ಇನ್ನೊಂದು ಕೆಲಸವೆಂದರೆ ದ್ವಿರಾಷ್ಟ್ರ ಕಲ್ಪನೆಯನ್ನು ಮುನ್ನೆಲೆಗೆ ತಂದದ್ದು. ಸಾಮಾನ್ಯವಾಗಿ ಅನೇಕ ಚರಿತ್ರೆಕಾರರು ದ್ವಿರಾಷ್ಟ್ರ ಕಲ್ಪನೆಯನ್ನು ಮೊಹಮದ್‌ ಆಲಿ ಜಿನ್ನಾ ಅವರ ತಲೆಗೆ ಕಟ್ಟುತ್ತಾರೆ. ಆದರೆ ಆ ವಿಷಯದಲ್ಲಿ ಸಾವರ್ಕರ್‌ ಅವರ ಆಲೋಚನೆ ಏನಾಗಿತ್ತು ಎನ್ನುವುದನ್ನು ಹೇಳುವಲ್ಲಿ ಮೌನವಹಿಸುತ್ತಾರೆ. ಸಾವರ್ಕರ್‌ ಅವರು ಕೂಡ ಅದೇ ಆಲೋಚನೆಯವರಾಗಿದ್ದರು. ಇದನ್ನು ಅಂಬೇಡ್ಕರ್‌ ತಮ್ಮ ʼಪಾಕಿಸ್ತಾನ ಅಥವಾ ಭಾರತದ ವಿಭಜನೆʼ ಎಂಬ ಕೃತಿಯಲ್ಲಿ ಸ್ಪಷ್ಟಮಾತುಗಳಲ್ಲಿ ಹೇಳುವುದು ಹೀಗೆ: “ಸಾವರ್ಕರ್‌ ಮತ್ತು ಜಿನ್ನಾ ಇಬ್ಬರೂ ಒಂದು ರಾಷ್ಟ್ರ ಮತ್ತು ದ್ವಿರಾಷ್ಟ್ರದ ವಿಚಾರದಲ್ಲಿ ಪರಸ್ಪರ ವಿರೋಧಿಗಳಾಗುವ ಬದಲು ಅದರ ಬಗ್ಗೆ ಸಂಪೂರ್ಣ ಸಹಮತ ಹೊಂದಿದ್ದಾರೆ. ಇಬ್ಬರೂ -ಒಂದು ಹಿಂದೂರಾಷ್ಟ್ರ ಮತ್ತು ಇನ್ನೊಂದು ಮುಸ್ಲಿಂ ರಾಷ್ಟ್ರ, ಎಂದು ಸಮರ್ಥಿಸುತ್ತಾರೆ ಕೂಡ. ಆ ಎರಡು ರಾಷ್ಟ್ರಗಳು ಯಾವ ಕರಾರುಗಳು ಹಾಗು ಷರತ್ತುಗಳ ಆಧಾರದಲ್ಲಿ ಇರಬೇಕು ಎಂಬ ಬಗ್ಗೆ ಮಾತ್ರ ಅವರಿಬ್ಬರಲ್ಲಿ ವ್ಯತ್ಯಾಸ ಇದೆ ಅಷ್ಟೆ”

ಸಾವಿನವರೆಗೂ ಅಂಟಿಕೊಂಡ ಗಾಂಧಿ ಹತ್ಯೆಯ ಕಳಂಕ:

ಇಡೀ ಸ್ವಾತಂತ್ರ್ಯ ಭಾರತದ ಚರಿತ್ರೆಯಲ್ಲಿ ಒಂದು ಕಪ್ಪುಚುಕ್ಕೆ ಎಂದರೆ ಅದು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಹತ್ಯೆ. ಈ ಹತ್ಯೆಗೆ ಸಂಬಂಧಿಸಿದಂತೆ ಹತ್ಯೆ ನಡೆದು ನಾಲ್ಕು ತಿಂಗಳಿಗೆ ಪೋಲೀಸರು  ಒಟ್ಟು ಹದಿಮೂರು ಮಂದಿ ಆರೋಪಿಗಳ ಮೇಲೆ ದೋಷಾರೋಪ ಪಟ್ಟಿ ದಾಖಲಿಸಿದರು. ಅವರಲ್ಲಿ ಮೂರು ಜನ ತಲೆಮರೆಸಿಕೊಂಡಿದ್ದಾರೆ ಎಂದು ಷರಾ ಬರೆದು ಉಳಿದ ಒಂಬತ್ತು ಜನರ ʼದುಷ್ಟನವಗ್ರಹಕೂಟʼವನ್ನು ಕೋರ್ಟಿಗೆ ಹಾಜರ್‌ ಪಡಿಸಿದರು. ಅವರಲ್ಲಿ ವಿ ಡಿ ಸಾವರ್ಕರ್‌ ಕೂಡ ಇದ್ದರು. ಆರೋಪಿಗಳು ತಮ್ಮ ಪರವಾಗಿ ಸಮರ್ಥರೆನ್ನಿಸುವ ವಕೀಲರನ್ನು ನೇಮಕ ಮಾಡಿಕೊಳ್ಳುವ ಅವಕಾಶವನ್ನು ನ್ಯಾಯಾಲಯ ನೀಡಿತ್ತು. ಇದನ್ನು ಬಳಸಿಕೊಂಡ ಸಾವರ್ಕರ್‌ ಆ ಕಾಲದ ಮತ್ತು ಆ ಪ್ರದೇಶದ ಪ್ರಸಿದ್ಧ ವಕೀಲರಾಗಿದ್ದ ಶ್ರೀ ಎಲ್‌ ಬಿ ಬೋಪಟ್ಕರ್‌ ಅವರನ್ನು ನೇಮಿಸಿಕೊಂಡಿದ್ದರು. ವಿಚಾರಣೆಯ ವೇಳೆ ಸಾವರ್ಕರ್‌ ಅವರು ತಮಗೂ ಹತ್ಯೆ ಮಾಡಿದ ನಾಥೂರಾಮ್‌ ಗೋಡ್ಸೆಗೂ ಯಾವುದೇ ರೀತಿಯ ಸಂಬಂಧವಿಲ್ಲವೆಂದೇ ವಾದಿಸಿದರು.

ಆದರೆ ಅವರಿಗೂ ನಾಥೂರಾಮನಿಗೂ ಕಳೆದ ಎಷ್ಟೋ ವರ್ಷಗಳಿಂದ ನಿಕಟ ಸಂಪರ್ಕವಿರುವುದು ನಂತರದ ದಿನಗಳಲ್ಲಿಸಿಕ್ಕ ಸಾಕ್ಷಗಳು  ಸಾಬೀತುಪಡಿಸಿದವು. ಎಸ್‌ ಎಸ್‌ ಎಲ್‌ ಸಿ ಪಾಸುಮಾಡಲಾಗದೆ ಅಂಡಲೆಯುತ್ತಿದ್ದ ನಾಥೂರಾಮ ಎಂಬ ಹುಡುಗ ಸಾವರ್ಕರ್‌ ಅವರ ಶಿಷ್ಯನಾಗಿದ್ದವನು. ಅವನು ಅವರ ಹಿಂದುತ್ವದ ವಿಚಾರಗಳಿಂದ ಪ್ರಭಾವಿತನಾಗಿದ್ದವನು. ಗಾಂಧೀಜಿ ಔರಂಗಜೇಬನ ಅವತಾರ ಎಂಬ ಹಿಂದುತ್ವದ ಮಂಕುಬೂದಿಯನ್ನು ಊದಿಸಿಕೊಂಡವನು. ೧೯೪೨ರಲ್ಲಿ ಕರ್ನಾಟಕದ ಶಿವಮೊಗ್ಗದಲ್ಲಿ ನಡೆದ ಹಿಂದೂ ಮಹಾಸಭಾದ ಸಮಾವೇಶದಲ್ಲಿ ನಾಥೂರಾಮ್‌ ಗೋಡ್ಸೆ ತನ್ನ ಗುರು ಸಾವರ್ಕರ್‌ ಜೊತೆ ಪಾಲ್ಗೊಂಡ ಭಾವಚಿತ್ರ ನಂತರದ ದಿನಗಳಲ್ಲಿ ದೊರೆಯಿತು ಕೂಡ. ಅಷ್ಟೇ ಏಕೆ ನಾಥೂರಾಮ್‌ ತಾನು ಗಾಂಧೀಜಿಯನ್ನು ಏಕೆ ಕೊಂದೆ ಎಂದು ನ್ಯಾಯಾಲಯಕ್ಕೆ ನೀಡಿದ ಸುಧೀರ್ಘ ಲಿಖಿತ ಹೇಳಿಕೆ ಇದೆಯಲ್ಲ. ಅದನ್ನು ಓದಿದರೆ ಯಾರಿಗಾದರೂ ಅರ್ಥವಾಗುವ ಸಂಗತಿ ಎಂದರೆ ಅಷ್ಟೊಂದು ಪ್ರಬುದ್ಧವಾದ ಭಾಷೆಯಲ್ಲಿ ಎಸ್‌ ಎಸ್‌ ಎಲ್‌ ಸಿ ಪಾಸಾಗದ ಒಬ್ಬ ಯುವಕ ಬರೆಯಲು ಸಾಧ್ಯವಿಲ್ಲವೆಂಬುದು. ಅದನ್ನು ಬರೆದವರು ಅವನ ಗುರುಗಳಾದ ಸಾವರ್ಕರ್‌ ಅವರೇ ಎಂಬುದು ಬಹಳಷ್ಟು ಜನರ ಅಭಿಮತ!

ಕೊನೆಗೆ ʻಸಾಕ್ಷಾಧಾರಗಳ ಕೊರತೆʼಯ ಕಾರಣದಿಂದ ಸಾವರ್ಕರ್‌ ಈ ಕೇಸಿನಲ್ಲಿ ಬಿಡುಗಡೆಯಾದರು.  ನಂತರದ ದಿನಗಳಲ್ಲಿ ಸಿಕ್ಕಂತಹ ಸಾಕ್ಷಗಳು ಮೊದಲೇ ಸಿಕ್ಕಿದ್ದರೆ ಅವರು ಈ ಪ್ರಕರಣದಲ್ಲಿ ಬಿಡುಗಡೆ ಆಗಲು ಸಾಧ್ಯವೇ ಇರಲಿಲ್ಲ ಎಂಬುದು ಬಹಳಷ್ಟು ಜನ ನ್ಯಾಯಪರಿಣಿತರ ಅಭಿಪ್ರಾಯ. ಹೀಗೆ ನ್ಯಾಯಾಲಯದ ಕಣ್ಣಲ್ಲಿ ತಾಂತ್ರಿಕವಾಗಿ ʼನಿರಪರಾಧಿʼ ಅನ್ನಿಸಿ ಅವರು ಹೊರಬಂದರೂ ದೇಶದ ಜನರ ದೃಷ್ಟಿಯಲ್ಲಿ ಅವರು ತಮ್ಮ ಜೀವನದ ಕೊನೆಯವರೆಗೂ ಅಪರಾಧಿಯಾಗಿಯೇ ಉಳಿಯಬೇಕಾಯಿತು! ಗಾಂಧೀಜಿ ಕೊಲೆಯ ಕಳಂಕವನ್ನು ಅವರು ತಮ್ಮ ಜೀವಿತದ ಕೊನೆಯವರೆಗೂ ತೊಳೆದುಕೊಳ್ಳಲು ಆಗಲೇ ಇಲ್ಲ. ಎಷ್ಟರಮಟ್ಟಿಗೆ ಎಂದರೆ ಅವರು ೧೯೬೬ರಲ್ಲಿ ಅವರು ತಮ್ಮ ೮೩ನೆಯ ವಯಸ್ಸಿನಲ್ಲಿ ಮರಣ ಹೊಂದಿದಾಗ ಅವರ ಸಾವಿಗೆ ಯಾವುದೇ ಸಾರ್ವಜನಿಕ ಶೋಕ ವ್ಯಕ್ತವಾಗಲಿಲ್ಲ; ಅದು ಯಾವುದೇ ಸದ್ದುಗದ್ದಲವಿಲ್ಲದ ಒಬ್ಬ ಸಾಮಾನ್ಯ ವ್ಯಕ್ತಿಯ ಸಾವಾಗಿ ದೇಶದ ಬಹುಪಾಲು ಜನರ ಗಮನಕ್ಕೂ ಬರದೇ ಹೋಯಿತು!

ಮೊದಲಿನಿಂದಲೂ ಮುಸ್ಲಿಂ ದ್ವೇಷಿಯಾಗಿದ್ದರೇ?

ಸಾವರ್ಕರ್‌ ತಮ್ಮ ʻಹಿಂದುತ್ವʼ ಪ್ರತಿಪಾದನೆಯ ಕಾರಣಕ್ಕಾಗಿಯೇ ಕೆಲವರ ಪಾಲಿಗೆ ಆರಾಧ್ಯ ದೈವ ಆಗಿರುವುದು ಮತ್ತು ಇನ್ನು ಕೆಲವರ ಪಾಲಿಗೆ ʼದೇಶದ್ರೋಹಿʼ ಆಗಿರುವಂಥದ್ದು. ಆದರೆ ಸಾವರ್ಕರ್‌ ಅವರು ಮೊದಲಿನಿಂದಲೂ ಹೀಗೆ ಮುಸ್ಲಿಂ ದ್ವೇಷಿಯಾಗಿದ್ದರೇ ಎಂಬ ಪ್ರಶ್ನೆಗೆ ಉತ್ತರ ʻಇಲ್ಲʼ ಎನ್ನುವುದೇ ಅಗಿದೆ. ತಮ್ಮ ಶಾಲಾ ದಿನಗಳಲ್ಲಿ ಅವರು ಮಸೀದಿ ಮೇಲೆ ದಾಳಿಮಾಡುವ ಕೆಲವು ಸಣ್ಣಪುಟ್ಟ ಕೆಲಸಗಳನ್ನು ಮಾಡಿದ್ದು ಬಿಟ್ಟರೆ ವಯಸ್ಕರಾದ ಮೇಲೆ ಅವರು ಅದನ್ನು ಮಾಡಲಿಲ್ಲ. ಲಂಡನ್ನಿನಲ್ಲಿ ಓದುವಾಗ ಅವರು ಬರೆದ ʻಭಾರತ ಮೊದಲ ಸ್ವಾತಂತ್ರ್ಯ ಸಂಗ್ರಾಮʼ ಕೃತಿಯನ್ನು ಓದಿದರೆ ಈ ವಿಷಯ ಸ್ಪಷ್ಟವಾಗುತ್ತದೆ. ಅವರ ಆಲೋಚನೆ ವಿಚಾರಧಾರೆ ಭಾರತದ ಪುರಾಣ ಧಾರ್ಮಿಕ ಕೃತಿಗಳಲ್ಲಿ ಬೇರು ಬಿಟ್ಟಿದ್ದರೂ ಸಧ್ಯದ ಭಾರತದ ವಿಮೋಚನೆ ಇಲ್ಲಿನ ಹಿಂದೂ ಮತ್ತು ಮುಸ್ಲಿಮರಿಬ್ಬರೂ ಒಟ್ಟಾಗಿ ಒಗ್ಗಟ್ಟಿನಿಂದಲೇ ಸಾಧಿಸಬೇಕಾದ ಕೆಲಸವೆಂದು ಅವರು ಈ ಹಂತದಲ್ಲಿ ಅಚಲವಾಗಿ ನಂಬಿದ್ದರು.

ಈ ಪುಸ್ತಕದ ಮುನ್ನಡಿಯಲ್ಲಿ ಅವರು ಬರೆಯುವುದು ಹೀಗೆ: “ದೇಶವು ತನ್ನ ಇತಿಹಾಸದ ಒಡೆಯನಾಗಬೇಕೆ ಹೊರತು ಗುಲಾಮನಾಗಬಾರದು. ಮಹಮದೀಯರ ವಿರುದ್ಧದ ದ್ವೇಷ ಭಾವನೆಯು ಶಿವಾಜಿಯ ಕಾಲಕ್ಕಷ್ಟೇ ಅಗತ್ಯವಾಗಿತ್ತು... ಈಗ ಅಂತಹ ಭಾವನೆಯನ್ನು ಪೋಷಿಸುವುದು ಅನ್ಯಾಯ ಮತ್ತು ಮೂರ್ಖತನವಾಗುತ್ತದೆ.”  ಹೀಗೆ ಬರೆದ ಅವರು ತಮ್ಮ ಆ ಕೃತಿಯಲ್ಲಿ ತಾಯ್ನಾಡಿಗಾಗಿ ಪ್ರಾಣತೆತ್ತ ಮಹಾಚೇತನಗಳು ಎಂದು ಕೆಲವು ಹೆಸರುಗಳನ್ನು ಹೇಳಿದ್ದಾರೆ. ಅವರಲ್ಲಿ ಹಿಂದೂಗಳ ಜೊತೆಗೆ ಅನೇಕ ಮುಸ್ಲಿಂ ಹುತಾತ್ಮರ ಹೆಸರೂ ಇವೆ. ಬ್ರಿಟೀಷ್‌ ಈಸ್ಟ್‌ ಇಂಡಿಯ ಕಂಪನಿಯ ವಿರುದ್ಧ ಹೋರಾಟ ಮಾಡಲು ಒಂದು ನೀಲಿ ನಕ್ಷೆ ತಯಾರಿಸಿದ್ದ ಮಹಾನ್‌ ಮಿಲಿಟರಿ ತಂತ್ರಜ್ಞನಾದ ಅಜೀಮುಲ್ಲಾ ಖಾನ್‌ ಅವರನ್ನು ಬಾಯ್ತುಂಬ ಹೊಗಳುವ ಸಾವರ್ಕರ್‌ ಅವರ ಮಾತನ್ನು ಗಮನಿಸಿ, “ಇಬ್ಬರೂ (ಹಿಂದೂ ಮುಸ್ಲಿಮರು) ಹಿಂದೂಸ್ತಾನದ ಮಣ್ಣಿನ ಮಕ್ಕಳೇ ಆಗಿದ್ದಾರೆ. ಅವರ ಹೆಸರುಗಳು ಬೇರೆ ಬೇರೆ. ಆದರೆ ಅವರು ಒಂದೇ ತಾಯಿಯ ಮಕ್ಕಳು. ಭಾರತವು ಇವರಿಬ್ಬರಿಗೂ ಸಮಾನ ತಾಯಿ ಆಗಿರುವುದರಿಂದ ರಕ್ತಸಂಬಂಧದಲ್ಲದದಿ ಅವರು ಸಹೋದರರೇ ಆಗಿದ್ದಾರೆ.”

ಕೊನೆಗೂ ಸಾವರ್ಕರ್‌ ಅವರು ತಮ್ಮ ಈ ಮೇರು ಕೃತಿಯನ್ನು ಮುಗಿಸುವುದು ಬಹದ್ದೂರ್‌ ಷಾ ಜಾಫರ್‌ ಅವರ ಒಂದು ದ್ವಿಪದಿಯಿಂದ ಅದು ಹೀಗೆ ಇದೆ:

ಘಾಜಿಯೋ ಮೇ ಬೂ ರಹೇಗಿ ಜಬ್ತಲಕ್ಇಮಾಮ್ಕಿ

ತಖ್ತೇ ಲಂಡನ್ತಕ್ಚಲೇಗಿ ತೇಜ್ಹಿಂದೂಸ್ತಾನ್ಕಿ

(ಇದರ ಅರ್ಥ: ಎಲ್ಲಿಯ ತನಕ ನಂಬಿಕೆಯ ಪ್ರೀತಿಯ ನಮ್ಮ ವೀರಪುರುಷರ ಎದೆಯಲ್ಲಿ ಇರುತ್ತದೆಯೋ ಅಲ್ಲಿಯವರೆಗೂ ಹಿಂದೂಸ್ತಾನದ ಖಡ್ಗವು ಲಂಡನ್ನಿನ ಸಿಂಹಸನವನ್ನು ತಲುಪುವುದು). ಮುಂದೆ ೧೮೫೭ ರಲ್ಲಿ ದೆಹಲಿಯು ಬ್ರಿಟೀಷರಿಂದ ವಿಮೋಚನೆಯಾಗಿ ಬಾಹಾದ್ದೂರ್‌ ಷಾ ಜಾಫರ್‌ ದೊರೆ ಎಂದು ಘೋಷಣೆಯಾದ ಘಟನೆಯನ್ನು ಕೂಡ ಅವರು ಅತ್ಯಂತ ಸಂಭ್ರಮದಿಂದ ತಮ್ಮ ಕೃತಿಯಲ್ಲಿ ದಾಖಲಿಸುತ್ತಾರೆ. ಒಟ್ಟಾರೆ ಹೇಳುವುದಾದರೆ ತಮ್ಮ ಆರಂಭಿಕ ಕಾಲಘಟ್ಟದಲ್ಲಿ ಅವರಿಗೆ ಮುಸ್ಲಿಮರ ಬಗ್ಗೆ ಯಾವುದೇ ದ್ವೇಷಭಾವನೆ ಇರಲಿಲ್ಲ. ಅವರ ಸ್ವಾತಂತ್ರ್ಯ ಹೋರಾಟದ ಬಗ್ಗೆ ಅನುಮಾನಗಳೂ ಇರಲಿಲ್ಲ. ಸ್ವತಃ ಸಾವರ್ಕರ್‌ ಕೂಡ ಆಗ ಒಬ್ಬ ಪ್ರಾಮಾಣಿಕ ಸ್ವಾತಂತ್ರ್ಯ ಹೋರಾಟಗಾರರೇ ಆಗಿದ್ದರು. ಅದರಲ್ಲಿ ಸಂಶಯ ಪಡುವಂಥದ್ದು ಏನೂ ಇರಲಿಲ್ಲ.

ಆದರೆ ಇಂತಹ ಒಬ್ಬ ಅಪ್ಪಟ ಸ್ವಾತಂತ್ರ್ಯ ಪ್ರೇಮಿ ಮುಂದೆ ತಾವು ಅದುವರೆಗೂ ನಡೆದು ಬಂದ ದಾರಿಗೆ ವಿರುದ್ಧವಾಗಿ ತಿರುಗಿ ಮುಸ್ಲಿಂ ವಿರೋಧಿಯಾದದ್ದು, ಸ್ವಾತಂತ್ರ್ಯ ಹೋರಾಟಕ್ಕೆ ವಿಮುಖವಾದುದಲ್ಲದೇ ಅದಕ್ಕೆ ಅನೇಕ ಬಗೆಯಲ್ಲಿ ಕೇಡು ಬಗೆದುದು ಒಟ್ಟಾರೆ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಆದ ಒಂದು ದೊಡ್ಡ ಹಿನ್ನಡೆಯೂ ಹೌದು. ನಮ್ಮ ದೌರ್ಭಾಗ್ಯವೂ ಹೌದು. ಇದಕ್ಕೆ ಅನೇಕರು ಅನೇಕ ರೀತಿಯ ಕಾರಣಗಳನ್ನು ನೀಡುತ್ತಾರೆ. ಅಂಡಮಾನಿನ ಜೈಲಿನಲ್ಲಿ ಮುಸ್ಲಿಂ ಅಧಿಕಾರಿಗಳು ನೀಡಿದ ಚಿತ್ರಹಿಂಸೆ ಮತ್ತು ಕಿರುಕುಳದಿಂದ ಅವರು ಬದಲಾದರು ಎಂಬುದು ಅವುಗಳಲ್ಲಿ ಒಂದು. ಆದರೆ ಈ ವಾದದಲ್ಲಿ ಹುರುಳಿಲ್ಲ ಅನ್ನಿಸುತ್ತದೆ. ಏಕೆಂದರೆ ಅಲ್ಲಿ ಚಿತ್ರಹಿಂಸೆ ಇದ್ದದ್ದು ನಿಜ. ಅಧಿಕಾರಿಗಳಲ್ಲಿ ಮುಸ್ಲಿಮರು ಇದ್ದದ್ದೂ ನಿಜ. ಆದರೆ ಅಲ್ಲಿನ ಚಿತ್ರಹಿಂಸೆ ಧರ್ಮ ಜನಾಂಗವನ್ನು ಅವಲಂಬಿಸಿರಲಿಲ್ಲ. ಅವರು ಮುಸ್ಲಿಮೇತರರಿಗೆ ನೀಡುವಷ್ಟೇ ಚಿತ್ರಹಿಂಸೆಯನ್ನು ಮುಸ್ಲಿಂ ಕೈದಿಗಳಿಗೂ ನೀಡುತ್ತಿದ್ದರು. ಅಷ್ಟಕ್ಕೂ ಅಧಿಕಾರಿಗಳು ಎಲ್ಲರೂ ಮುಸ್ಲಿಮರೂ ಇರಲಿಲ್ಲ. ಅಧಿಕಾರಿಗಳು ಯಾರೇ ಇದ್ದರೂ ಕೈದಿಗಳು ಯಾವ ಜನಾಂಗದವರೇ ಅಗಿದ್ದರೂ ಈ ಹಿಂಸೆ ಹೆಚ್ಚೂ ಕಡಿಮೆ ಸಮಾನವಾಗಿಯೇ ನಡೆಯುತ್ತಿತ್ತು.

ಇಲ್ಲಿ ಅಪ್ರಸ್ತುತವಲ್ಲ ಎಂದು ಒಂದು ಹೋಲಿಕೆ ಕೊಡುತ್ತಿದ್ದೇನೆ. ಬ್ರಿಟೀಷ್‌ ಸಾಮ್ರಾಜ್ಯದ ಬಗ್ಗೆ ಗಾಂಧಿಯವರ ನಿಲುವು ಕೂಡ ಹೀಗೆ ಎರಡು ರೀತಿಯಲ್ಲಿ ಇತ್ತು. ಆರಂಭದಲ್ಲಿ ಅವರು ಬ್ರಿಟೀಷ್‌ ಸೈನ್ಯದಲ್ಲಿ ಗಾಯಾಳುಗಳ ಆರೈಕೆ ಮಾಡುವ ಕೆಲಸವನ್ನು ಮಾಡಿದರು. ನಂತರ ಅದೇ ಬ್ರಿಟೀಷ್‌ ಸಾಮ್ರಾಜ್ಯವನ್ನು ಕಿತ್ತೊಗೆಯಲು ಪಣತೊಟ್ಟು ಹೋರಾಡಿದರು. ಸಾವರ್ಕರ್‌ ಕೂಡ ಅದನ್ನೇ ಮಾಡಿದರೂ ಅವರಿಬ್ಬರ ನಡುವಿನ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಗಮನಿಸುವುದಾದರೆ ಗಾಂಧೀಜಿ ಆರಂಭದಲ್ಲಿ ಬ್ರಿಟೀಷರಿಗೆ ನೆರವಾಗಿ ನಂತರ ಅವರ ವಿರುದ್ಧವಾದರು. ಅದರೆ ಸಾವರ್ಕರ್‌ ಆರಂಭದಲ್ಲಿ ಬ್ರಿಟೀಷರ ವಿರುದ್ಧವಿದ್ದು ನಂತರ ಅವರ ಆಪ್ತರಾದರು. ಜನ ನಮ್ಮ ಜೀವನದ ಮೊದಲ ಘಟ್ಟಕ್ಕಿಂತ ನಂತರ ಕಾಲಘಟ್ಟದ ಆಲೋಚನೆಯನ್ನು ʻಪ್ರಬುದ್ಧʼ ಎಂದು ಪರಿಗಣಿಸುತ್ತಾರೆ. ಬಹುಶಃ ಇದೇ ಕಾರಣದಿಂದಲೇ ಇರಬೇಕು ಗಾಂಧೀಜಿ ʻರಾಷ್ಟ್ರಪಿತʼ ಆಗಿ ದೇಶ ಮಾತ್ರವಲ್ಲ ಜಗತ್ತಿನ ಜನಮಾನಸದ ಎದೆಒಳಗೆ ಹೋದರು. ಸಾವರ್ಕರ್‌ ಸತ್ತಮೇಲೂ ಕಳಂಕಿತರಾಗಿಯೇ ಉಳಿದರು.

ಹಾಗಾಗಿ ಈ ಲೇಖನದ ಆರಂಭದಲ್ಲಿ ಎತ್ತಿದ ಪ್ರಶ್ನೆಗೆ ಕೊನೆಯಲ್ಲಿ ಹೇಳಬಹುದಾದ ಉತ್ತರವೆಂದರೆ ʻಆ ಎರಡೂ ಉತ್ತರಗಳು ಸರಿ; ಎರಡೂ ಉತ್ತರಗಳೂ ತಪ್ಪುʼ ಎಂಬುದೇ ಆಗಿದೆ. ಸಾವರ್ಕರ್‌ ಅವರ ಮೊದಲರ್ಧ ಜೀವನವನ್ನಷ್ಟೇ ಲೆಕ್ಕಕ್ಕೆ ತೆಗೆದುಕೊಳ್ಳುವುದಾದರೆ ಅವರು ʼದೇಶಪ್ರೇಮಿʼ ಸರಿ. ಕೊನೆಯ ಅರ್ಧವನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳುವುದಾದರೆ ಅವರುʼ ದೇಶದ್ರೋಹಿʼ ಎನ್ನುವುದು ಸರಿ. ಇಡೀ ಜೀವನವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಾದರೆ? ಪ್ರಶ್ನೆ ಪ್ರಶ್ನೆಯೇ! ಇಂತಹ ಸಾವರ್ಕರ್‌ ಅವರನ್ನು ರಾಷ್ಟ್ರೀಯ ನಾಯಕರನ್ನಾಗಿ ಮಾಡುವ ಕೆಲಸಗಳು ರಾಜಕೀಯ ಪ್ರೇರಿತವಾದವುಗಳು ಮತ್ತು ಅವುದ ತೀರಾ ಇತ್ತೀಚಿನವು. ಮೊದಲೇ ಹೇಳಿದಂತೆ ಅವರ ಸಾವಿನವರೆಗೂ ಅಂತಹ ಆಲೋಚನೆ ಯಾರಿಗೂ ಇರಲಿಲ್ಲ. ಮಹಾರಾಷ್ಟ್ರದಲ್ಲಿ ಅವರದ್ದೇ ಸರ್ಕಾರವಿದ್ಧಾಗ್ಯೂ ಅವರ ಭಾವಚಿತ್ರವನ್ನು ಅಲ್ಲಿನ ವಿಧಾನಸೌಧದಲ್ಲಿ ಹಾಕುವ ವಿಷಯ ಪ್ರಸ್ತಾಪವಾಗಲಿಲ್ಲ. ಈಗ ಅವರನ್ನು ಬೇರೆಯದೇ ಅದ ಕಾರಣಕ್ಕಾಗಿ ಮುನ್ನೆಲೆಗೆ ತರಲಾಗುತ್ತಿದೆ.

ಅದರೆ ನಮಗೆಲ್ಲ ಸ್ಪಷ್ಟವಾಗಿ ತಿಳಿದಿರಬೇಕಾದ ಸಂಗತಿಯೆಂದರೆ ಸಾವರ್ಕರ್‌ ಅವರು ಪ್ರತಿಪಾದಿಸಿದ ʻಹಿಂದೂರಾಷ್ಟ್ರʼ ಅದರಲ್ಲಿಯೂ ಅಖಂಡ ಭಾರತʼ ನಿರ್ಮಾಣ ಕನಸಿನಲ್ಲಿಯೂ ಸಾಧ್ಯವಿಲ್ಲದ ಸಂಗತಿ. ಅಖಂಡ ಭಾರತ ನಿರ್ಮಾಣವೆಂದರೆ ಈಗಿನ ಪಾಕಿಸ್ತಾನ, ಅಫಘಾನಿಸ್ತಾನ, ನೇಪಾಳ, ಭರ್ಮಾ, ಬಾಂಗ್ಲಾದೇಶ ಇವೆಲ್ಲ ಕೂಡಿಕೊಳ್ಳುವುದು. ಇದು ಆಗುಹೋಗುವ ಸಂಗತಿಯಲ್ಲ. ವಾಸ್ತವ ಸಂಗತಿ ಎಷ್ಟು ಕಠಿಣವಾಗಿದೆ ಎಂದರೆ ಇಡೀ ಭಾರತವನ್ನು ಹಿಂದೂರಾಷ್ಟ್ರ ಮಾಡುವುದು ಒತ್ತಟ್ಟಿಗಿರಲಿ; ಒಂದು ಸಣ್ಣ ಊರನ್ನು ʻಹಿಂದೂಹಳ್ಳಿʼಯನ್ನಾಗಿ ಮಾಡುವುದೂ ಸುಲಭವಾಗಿಲ್ಲ. ಎಲ್ಲ ಊರಿನಲ್ಲಿಯೂ ಮುಸ್ಲಿಮರಿದ್ದಾರೆ. ಅವರಿಲ್ಲದಿದ್ದರೆ ನಾವು ಹಿಂದುಗಳಲ್ಲ ಎಂದು ಹೇಳುವ, ಜೈನರು, ಬೌದ್ಧರು, ಲಿಂಗಾಯತರಾದರೂ ಇದ್ದಾರೆ. ಇವರ್ಯಾರೂ ಇಲ್ಲದಿದ್ದರೆ ʼಧಾರ್ಮಿಕ ನಂಬಿಕೆಯಿಲ್ಲದ ಜನವಂತೂ ಇದ್ದೇ ಇದ್ದಾರೆ. ಹೀಗಾಗಿ ಇದೊಂದು ಹುಚ್ಚು ಆಲೋಚನೆಯಲ್ಲದೇ ಮತ್ತೇನೂ ಅಲ್ಲ. ಹಾಗಾಗಿ ನಮ್ಮ ಜನತೆ ಇಡೀ ಪ್ರಪಂಚವನ್ನೇ ಇಸ್ಲಾಮಿಕ್‌ ಸ್ಟೇಟ್‌ ಮಾಡುತ್ತೇವೆ ಎನ್ನುವ ಹುಚ್ಚರನ್ನು ತಿರಸ್ಕರಿಸಿದಂತೆ ಇಡೀ ದೇಶವನ್ನು ಹಿಂದೂರಾಷ್ಟ್ರಮಾಡುತ್ತೇವೆ ಎನ್ನುವ ಈ ವೀರಾವೇಶಿಗಳನ್ನೂ ತಿರಸ್ಕರಿಸಬೇಕು. ಮತ್ತು ನಮ್ಮ ಮುಂದೆ ಇರುವ ಆಯ್ಕೆಗಳು ಎರಡೇ ಎರಡು ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಅವೆಂದರೆ, ಒಂದು ಪರಸ್ಪರ ಹೊಂದಿಕೊಂಡು ಬದುಕುವುದು; ಇನ್ನೊಂದು ಹೊಡದಾಡಿಕೊಂಡು ಸಾಯುವುದು. ಇವುಗಳಲ್ಲಿ ನಮ್ಮ ಆಯ್ಕೆ ಯಾವಾಗಲೂ ಮೊದಲನೆಯದೇ ಆಗಿರಲಿ.

*****

೨೮-೦೫-೨೦೨೫